

ಭಾರತ ತನ್ನ ಅತ್ಯಧಿಕ ತೂಕದ ಸಂವಹನ ಉಪಗ್ರಹವಾದ ಸಿಎಂಎಸ್-03 ಅನ್ನು ನವೆಂಬರ್ 2, ಭಾನುವಾರದಂದು ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇದು ಭಾರತದ ಮಿಲಿಟರಿ ವಲಯದ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಲಿದೆ. ಈ ಉಪಗ್ರಹ ಅಂದಾಜು 4,400 ಕೆಜಿ ತೂಕ ಹೊಂದಿದ್ದು, ಸಮಸ್ತ ಭಾರತದ ಪ್ರದೇಶ ಸೇರಿದಂತೆ, ವಿಶಾಲ ಸಮುದ್ರ ಪ್ರದೇಶದ ವ್ಯಾಪ್ತಿ ಹೊಂದಿದೆ.
ಈ ಉಪಗ್ರಹವನ್ನು ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದ್ದು, ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿದೆ. ಇದು ಯುದ್ಧ ನೌಕೆಗಳು, ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಭೂಮಿಯಲ್ಲಿರುವ ಕಮಾಂಡ್ ಕೇಂದ್ರಗಳ ನಡುವಿನ ಸಂವಹನವನ್ನು ಸುಧಾರಿಸಲಿದೆ.
ಪ್ರಸ್ತುತ ಯೋಜನೆಗೆ 1,589 ಕೋಟಿ ರೂಪಾಯಿ ವೆಚ್ಚ ತಗಲಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ ಮತ್ತು ಭಾರತೀಯ ನೌಕಾಪಡೆಯ ನಡುವೆ 2019ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಸಿಎಂಎಸ್-03 ಉಪಗ್ರಹ 2013ರಲ್ಲಿ ಉಡಾವಣೆಗೊಂಡ ಹಳೆಯದಾದ ಜಿಸ್ಯಾಟ್-7 ರುಕ್ಮಿಣಿ ಉಪಗ್ರಹದ ಬದಲಿಗೆ ಕಾರ್ಯಾಚರಿಸಲಿದೆ. ಜಿಸ್ಯಾಟ್-7 ರುಕ್ಮಿಣಿ ಇಲ್ಲಿಯತನಕ ನೌಕಾಪಡೆಯ ಪ್ರಮುಖ ಸಂವಹನದ ಸಾಧನವಾಗಿತ್ತು.
ಸಿಎಂಎಸ್-03 ಉಪಗ್ರಹ ಯುಎಚ್ಎಫ್, ಎಸ್, ಸಿ, ಮತ್ತು ಕು ಬ್ಯಾಂಡ್ ಸೇರಿದಂತೆ ವಿವಿಧ ಫ್ರೀಕ್ವೆನ್ಸಿ ಬ್ಯಾಂಡ್‌ಗಳನ್ನು ಬಳಸಲಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಾದ್ಯಂತ, 2,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ನೌಕಾಪಡೆಗೆ ಪ್ರಬಲ ಧ್ವನಿ, ವೀಡಿಯೋ ಮತ್ತು ಮಾಹಿತಿ ಸಂವಹನ ಸೇವೆ ಒದಗಿಸಲಿದೆ. ಈ ಬಹು ಬ್ಯಾಂಡ್‌ಗಳ ವ್ಯವಸ್ಥೆ ಶತ್ರು ಪಡೆಗಳ ಜಾಮಿಂಗ್ ಪ್ರಯತ್ನಗಳನ್ನು ತಡೆಗಟ್ಟಿ, ಸಂವಹನವನ್ನು ಸುರಕ್ಷಿತಗೊಳಿಸುತ್ತದೆ.
ನೂತನ ಉಪಗ್ರಹ ನೌಕಾಪಡೆಗೆ ತನ್ನ ಎಲ್ಲಾ ವ್ಯವಸ್ಥೆಗಳಲ್ಲಿ, ಅಂದರೆ ನೌಕೆಗಳು, ಸಬ್‌ಮರೀನ್‌ಗಳು, ಗಸ್ತು ವಿಮಾನಗಳು ಅಥವಾ ಸಾಗರ ಕಮಾಂಡ್ ಕೇಂದ್ರಗಳಲ್ಲಿ ನಿರಂತರ, ಸುರಕ್ಷಿತ ಸಂವಹನ ಸಾಧಿಸಲು ಅವಕಾಶ ಮಾಡಿಕೊಡಲಿದೆ. ಇದು ಶಾಂತಿ ಮತ್ತು ಯುದ್ಧ ಎರಡೂ ಸಂದರ್ಭಗಳಲ್ಲಿ ನೈಜ ಸಮಯದ ಮಾಹಿತಿ ಹಂಚಿಕೆ ಮತ್ತು ಕ್ಷಿಪ್ರ ನಿರ್ಧಾರ ಕೈಗೊಳ್ಳಲು ನೆರವಾಗಲಿದೆ.
ಸಬ್‌ಮರೀನ್‌ಗಳಿಗೆ ಈ ಉಪಗ್ರಹ ಭಾರೀ ಮೇಲುಗೈ ಒದಗಿಸುತ್ತದೆ. ಇದರ ನೆರವಿನಿಂದ ಸಬ್‌ಮರೀನ್‌ಗಳು ಸಮುದ್ರದ ಆಳದಲ್ಲಿ ಬಚ್ಚಿಟ್ಟುಕೊಂಡಾಗಲೂ ಸುರಕ್ಷಿತ ಸಂವಹನ ಹೊಂದಬಹುದು. ಸಮುದ್ರದ ಮೇಲ್ಭಾಗದಲ್ಲಿ ಚಲಿಸುವ ಯುದ್ಧ ವಿಮಾನಗಳಿಗೆ, ಈ ಉಪಗ್ರಹ ಸುಧಾರಿತ ಸಮನ್ವಯ ಮತ್ತು ಸಾಮಾನ್ಯ ಸಂವಹನ ಸಾಧ್ಯವಿಲ್ಲದ ದೂರದ ಸಮುದ್ರ ಪ್ರದೇಶಗಳಲ್ಲೂ ಪರಿಸ್ಥಿತಿಯ ಅರಿವು ಮೂಡಿಸುತ್ತದೆ.
ಸಮುದ್ರ ಗಸ್ತು ವಿಮಾನಗಳು ಈಗ ಅತ್ಯುತ್ತಮ ಗುಣಮಟ್ಟದ ವೀಡಿಯೋಗಳು, ರೇಡಾರ್ ಚಿತ್ರಗಳು ಮತ್ತು ಗುಪ್ತಚರ ಮಾಹಿತಿಗಳನ್ನು ನೇರವಾಗಿ ನೌಕಾಪಡೆಯ ಮುಖ್ಯ ಕಚೇರಿ ಅಥವಾ ಯುದ್ಧ ವಿಮಾನಗಳಿಗೆ ತಕ್ಷಣವೇ ರವಾನಿಸಬಹುದು. ಇದು ಶತ್ರುಗಳ ಚಲನವಲನಗಳನ್ನು ಗುರುತಿಸಲು, ಸಬ್‌ಮರೀನ್‌ಗಳನ್ನು ಹಿಂಬಾಲಿಸಲು ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸುಧಾರಿಸುತ್ತದೆ.
ಸಿಎಂಎಸ್-03 ಉಪಗ್ರಹದ ಮೂಲಕ, ಭಾರತ ವಿದೇಶಿ ಅಥವಾ ವಾಣಿಜ್ಯಿಕ ಸಂವಹನ ಉಪಗ್ರಹಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿದೆ. ಇದು ಭಾರತದ ಭದ್ರತೆಯನ್ನು ಹೆಚ್ಚಿಸಿ, ಸಮುದ್ರದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಹೆಚ್ಚಿನ ಸ್ವಾಯತ್ತತೆ ಒದಗಿಸುತ್ತದೆ.
ಈ ಉಪಗ್ರಹ ಕರಾವಳಿ ರಕ್ಷಣೆಗೂ ನೆರವಾಗಲಿದ್ದು, ಕಡಲ್ಗಳ್ಳತನ ನಿರೋಧಕ ಕಾರ್ಯಾಚರಣೆಗಳಿಗೆ, ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೆ ಪೂರಕವಾಗಿ, ಭಾರತದ ವಿಶೇಷ ಆರ್ಥಿಕ ವಲಯವನ್ನು ರಕ್ಷಿಸಲಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚಾಗುತ್ತಿದ್ದು, ಸುರಕ್ಷಿತ ಮಿಲಿಟರಿ ಸಂವಹನ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಸಿಎಂಎಸ್-03 ಭಾರತದ ಸ್ಥಾನವನ್ನು ಬಲಪಡಿಸಿ, ನೌಕಾಪಡೆಗೆ ಭವಿಷ್ಯದ ಕಾರ್ಯಾಚರಣೆಗಳಿಗೆ ನಂಬಿಕಾರ್ಹ ಬಾಹ್ಯಾಕಾಶ ಆಧಾರಿತ ನೆಟ್‌ವರ್ಕ್ ಒದಗಿಸುತ್ತದೆ.
ಸಿಎಂಎಸ್-03 ಭಾರತದ ಹೆಚ್ಚುತ್ತಿರುವ ಬಾಹ್ಯಾಕಾಶ ಆಧಾರಿತ ರಕ್ಷಣಾ ಮೂಲಭೂತ ವ್ಯವಸ್ಥೆಯ ಕೇವಲ ಒಂದು ಭಾಗವಾಗಿದೆ. ಭಾರತ ಈಗಾಗಲೇ ಸಂವಹನಕ್ಕೆ, ಕಣ್ಗಾವಲು ಮತ್ತು ಕಾರ್ಯತಂತ್ರದ ಬಳಕೆಗೆ ಹಲವಾರು ಉಪಗ್ರಹಗಳನ್ನು ಬಳಸುತ್ತಿದೆ. ಸದ್ಯದಲ್ಲೇ ಇವೆಲ್ಲ ಪ್ರತ್ಯೇಕ ಬಾಹ್ಯಾಕಾಶ ವ್ಯವಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಒಂದು ಸಂಪೂರ್ಣ ಬಾಹ್ಯಾಕಾಶ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲಿವೆ.
ಸಿಎಂಎಸ್-03 ಉಪಗ್ರಹದೊಡನೆ, ಭಾರತ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಸಾಗರ ಶಕ್ತಿಯಾಗುವತ್ತ ಸಾಗುತ್ತಿದೆ. ಈ ಉಪಗ್ರಹ ನೌಕಾಪಡೆಗೆ ಹೆಚ್ಚಿನ ವ್ಯಾಪ್ತಿ, ಹೆಚ್ಚು ಗುಪ್ತಚರ ಸಾಮರ್ಥ್ಯ, ಮತ್ತು ಹೆಚ್ಚಿನ ನಿಯಂತ್ರಣ ಒದಗಿಸಿ, ಭಾರತ ಸಮುದ್ರದಲ್ಲಿ ಹೇಗೆ ತನ್ನ ಕಾರ್ಯಾಚರಣೆಗಳನ್ನು ನಡೆಸುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.
ಇಂಡೋ - ಪೆಸಿಫಿಕ್ ಪ್ರದೇಶದ ಕಾರ್ಯತಂತ್ರದ ಚದುರಂಗದ ಮಣೆಯಲ್ಲಿ ಸಿಎಂಎಸ್-03 ಭಾರತಕ್ಕೆ ಶಕ್ತಿಶಾಲಿಯಾದ ಹೊಸ ನಡೆಯನ್ನು ಒದಗಿಸಿ, ವಿಶಾಲ ಸಮುದ್ರ ಪ್ರದೇಶದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement