

ಭಾರತದ ಅತಿದೊಡ್ಡ ರಾಕೆಟ್ ಎನಿಸಿರುವ ಎಲ್‌ವಿಎಂ3 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ವೇದಿಕೆಗೆ ಒಯ್ಯಲಾಗಿದ್ದು, ಅದರ ಮುಂಬರುವ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸಂಪೂರ್ಣವಾಗಿ ಜೋಡಿಸಲ್ಪಟ್ಟಿರುವ ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ3) ಸಿಎಂಎಸ್-3 (ಜಿಸ್ಯಾಟ್-7ಆರ್ ಎಂದೂ ಪರಿಚಿತ) ಸಂವಹನ ಉಪಗ್ರಹವನ್ನು ಅಳವಡಿಸಿಕೊಂಡು, ಅಕ್ಟೋಬರ್ 26, 2025ರಂದು ಸಜ್ಜಾಗಿದೆ. ಪ್ರಸ್ತುತ ರಾಕೆಟ್ ನವೆಂಬರ್ 2ರಂದು ಉಡಾವಣೆಗೊಳ್ಳಲಿದೆ.
ರಕ್ಷಣಾ ಸಚಿವಾಲಯದ 1,589 ಕೋಟಿ ರೂಪಾಯಿಗಳ (225.5 ಮಿಲಿಯನ್ ಡಾಲರ್) ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ. ಇದು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ, 2013ರಲ್ಲಿ ಉಡಾವಣೆಗೊಳಿಸಲಾದ ಜಿಸ್ಯಾಟ್-7 (ರುಕ್ಮಿಣಿ) ಉಪಗ್ರಹದ ಬದಲಿಗೆ ಕಾರ್ಯಾಚರಿಸಲಿದೆ. ಇಸ್ರೋ ಮುಖ್ಯಸ್ಥರಾದ ವಿ ನಾರಾಯಣನ್ ಅವರು ಉಪಗ್ರಹದ ಉಡಾವಣೆಯನ್ನು ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಾಗುತ್ತದೆ ಎಂದಿದ್ದು, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎ ರಾಜರಾಜನ್ ಅವರು ನವೆಂಬರ್ 2ರಂದು ಉಡಾವಣೆಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ಇದು ಎಲ್‌ವಿಎಂ3-ಎಂ5 ಎನ್ನುವ ಹೆಸರಿನ ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್‌ನ ಐದನೇ ಹಾರಾಟವಾಗಿರಲಿದೆ. ಪ್ರಸ್ತುತ ಯೋಜನೆ ಸಿಎಂಎಸ್-3 ಉಪಗ್ರಹವನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಕಕ್ಷೆಯಲ್ಲಿ ಅಳವಡಿಸಲಿದೆ. ಈ ಕಕ್ಷೆ ಸಂವಹನ ಉಪಗ್ರಹಗಳ ಕಾರ್ಯಾಚರಣೆಗೆ ಸೂಕ್ತವಾಗಿದೆ.
ಈ ಮೊದಲು ಜಿಎಸ್ಎಲ್‌ವಿ ಎಂಕೆ 3 ಎಂದು ಕರೆಯಲ್ಪಡುತ್ತಿದ್ದ ಎಲ್‌ವಿಎಂ3 ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. 43.5 ಮೀಟರ್ ಎತ್ತರ ಮತ್ತು 640 ಟನ್‌ಗಳ ಉಡಾವಣಾ ತೂಕವನ್ನು ಹೊಂದಿರುವ ರಾಕೆಟ್ ಮೂರು ಹಂತಗಳ ವಿನ್ಯಾಸವನ್ನು ಹೊಂದಿದೆ. ಇದು ಎರಡು ದೊಡ್ಡದಾದ ಎಸ್200 ಸಾಲಿಡ್ ಬೂಸ್ಟರ್‌ಗಳು, ಅವಳಿ ವಿಕಾಸ್ ಇಂಜಿನ್ ಚಾಲಿತ ಒಂದು ದ್ರವ ಎಲ್110 ಕೋರ್ ಹಂತ, ಮತ್ತು ಸಿಇ20 ಇಂಜಿನ್ ಬಳಸುವ ಒಂದು ಕ್ರಯೋಜೆನಿಕ್ ಸಿ25 ಅಪ್ಪರ್ ಸ್ಟೇಜ್ ಹೊಂದಿದೆ. ಏಳು ಯೋಜನೆಗಳಲ್ಲೂ ಅಸಾಧಾರಣ ಯಶಸ್ಸು ಸಾಧಿಸಿರುವ ಈ ರಾಕೆಟ್, 4,000 ಕೆಜಿ ತೂಕವನ್ನು ಜಿಟಿಒಗೆ ಮತ್ತು 10,000 ಕೆಜಿ ತೂಕವನ್ನು ಭೂಮಿಯ ಕೆಳ ಕಕ್ಷೆಗೆ (ಎಲ್ಇಒ) ಅಳವಡಿಸುವ ಸಾಮರ್ಥ್ಯ ಹೊಂದಿದೆ. ಚಂದ್ರಯಾನ-2 ಮತ್ತು ಚಂದ್ರಯಾನ-3 ಯೋಜನೆಗಳಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಎಲ್‌ವಿಎಂ3 ರಾಕೆಟ್ ಅನ್ನು ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೂ ಬಾಹ್ಯಾಕಾಶ ವಾಹನವಾಗಿ ಆರಿಸಲಾಗಿದೆ.
4,400 ಕೆಜಿ ತೂಕ ಹೊಂದಿರುವ ಸಿಎಂಎಸ್-03 ಉಪಗ್ರಹ ಭಾರತದ ನೆಲದಿಂದ ಉಡಾವಣೆಗೊಂಡ ಅತ್ಯಂತ ಭಾರದ ಸಂವಹನ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಸ್ರೋ ನಿರ್ಮಿಸಿರುವ ಉಪಗ್ರಹ ಭಾರತದಾದ್ಯಂತ, ಸುತ್ತಲಿನ ಸಮುದ್ರ ಪ್ರದೇಶಗಳಲ್ಲಿ ಸಂವಹನ ವ್ಯಾಪ್ತಿಯನ್ನು ವಿಸ್ತರಿಸಿ, ನಾಗರಿಕ, ಸೇನೆ ಮತ್ತು ಸಾಗರ ಬಳಕೆಗೆ ಕ್ಷಿಪ್ರ ಸಂವಹನ ಮತ್ತು ಹೆಚ್ಚಿನ ಬ್ಯಾಂಡ್‌ವಿಡ್ತ್ ಒದಗಿಸಲಿದೆ.
ಆಧುನಿಕ ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿರುವ ಈ ಉಪಗ್ರಹ ಧ್ವನಿ ಕರೆ, ಅಂತರ್ಜಾಲ ಡೇಟಾ, ಮತ್ತು ವೀಡಿಯೋ ಪ್ರಸಾರದ ಸಂಕೇತಗಳನ್ನು ರವಾನಿಸಬಲ್ಲದು ಮತ್ತು ಸ್ವೀಕರಿಸಬಲ್ಲದು. ಈ ಸಂಕೇತಗಳು ಸಿ, ಎಕ್ಸ್‌ಟೆಂಡೆಡ್ ಸಿ, ಯುಎಚ್ಎಫ್, ಎಸ್ ಮತ್ತು ಕು ಬ್ಯಾಂಡ್‌ನಂತಹ ಹಲವು ಫ್ರೀಕ್ವೆನ್ಸಿ ವ್ಯಾಪ್ತಿಗಳಲ್ಲಿ ಕಾರ್ಯಾಚರಿಸಬಲ್ಲವು. ಇವು ಬಾಹ್ಯಾಕಾಶದಲ್ಲಿನ ಪ್ರತ್ಯೇಕ ಹೆದ್ದಾರಿಗಳಂತೆ ಕಾರ್ಯಾಚರಿಸಲಿದ್ದು, ಸುಗಮವಾದ, ತಡೆರಹಿತವಾದ, ಅಪಾರ ಪ್ರಮಾಣದ ಮಾಹಿತಿ ಪ್ರಸಾರಕ್ಕೆ ನೆರವಾಗುತ್ತವೆ. ಇದು ದೂರದ ಪ್ರದೇಶಗಳಲ್ಲೂ ಸಂಪರ್ಕವನ್ನು ಸುಧಾರಿಸಿ, ನಾಗರಿಕ ಸಂವಹನ ಜಾಲ ಮತ್ತು ಮಿಲಿಟರಿ ಕಾರ್ಯಾಚರಣೆಗೆ, ಅದರಲ್ಲೂ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗಳಿಗೆ ನೆರವಾಗಲಿದೆ.
ಏಳು ವರ್ಷಗಳ ಉದ್ದೇಶಿತ ಕಾರ್ಯಾಚರಣಾ ಅವಧಿಯನ್ನು ಹೊಂದಿರುವ ಸಿಎಂಎಸ್-3 ಭಾರತದ ಸಾಗರ ಸಂಪರ್ಕ ಜಾಲವನ್ನು ಬಲಪಡಿಸಲು ನೆರವಾಗಲಿದೆ. ಇದು ಕಣ್ಗಾವಲು, ನ್ಯಾವಿಗೇಶನ್ (ಸಂಚರಣೆ), ಹವಾಮಾನ ಮುನ್ಸೂಚನೆ, ಮತ್ತು ಹಿಂದೂ ಮಹಾಸಾಗರ ಪ್ರಾಂತ್ಯದಾದ್ಯಂತ, 2,000 ಕಿಲೋಮೀಟರ್ ವ್ಯಾಪ್ತಿಯ ತನಕ ಕಾರ್ಯಾಚರಿಸುವ ನೌಕಾಪಡೆಯ ಹಡಗುಗಳು, ಸಬ್‌ಮರೀನ್‌ಗಳು, ಮತ್ತು ಯುದ್ಧ ವಿಮಾನಗಳ ನಡುವೆ ಸುರಕ್ಷಿತವಾಗಿ ಮಾಹಿತಿ ಪ್ರಸರಣ ನಡೆಸಲು ಮತ್ತು ಧ್ವನಿ, ವೀಡಿಯೋ ಮತ್ತು ಮಾಹಿತಿ ಪ್ರಸಾರ ನಡೆಸಲು ನೆರವಾಗಲಿವೆ. ಒಂದು ಬಾರಿ ಉಪಗ್ರಹ ಕಾರ್ಯಾಚರಿಸಲು ಆರಂಭಿಸಿದ ಬಳಿಕ, ಅದು ಭಾರತದ ದುರ್ಗಮ ಪ್ರದೇಶಗಳಲ್ಲೂ ಡಿಜಿಟಲ್ ಸಂವಹನ ಸಾಮರ್ಥ್ಯವನ್ನು ವೃದ್ಧಿಸಲಿದೆ.
ಈ ಯೋಜನೆ ಎಲ್‌ವಿಎಂ3 ರಾಕೆಟ್‌ನ ಹೆಚ್ಚುತ್ತಿರುವ ನಂಬಿಕಾರ್ಹತೆ ಮತ್ತು ಬಹುಮುಖಿ ಸಾಮರ್ಥ್ಯ ಮತ್ತು ಅತ್ಯಂತ ಹೆಚ್ಚಿನ ಭಾರವನ್ನೂ ಹೊತ್ತು ಸಾಗುವ ಶಕ್ತಿಗೆ ಸಾಕ್ಷಿಯಾಗಿದೆ. ಜುಲೈ 2023ರಲ್ಲಿ ಚಂದ್ರಯಾನ-3 ಯೋಜನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಸಾಧನೆ ನಿರ್ಮಿಸಿದ್ದು, ಇದನ್ನು ಉಡಾವಣೆಗೊಳಿಸಿದ ಕೀರ್ತಿ ಎಲ್‌ವಿಎಂ3 ರಾಕೆಟ್‌ಗೆ ಸಲ್ಲುತ್ತದೆ. ಈ ಮಹತ್ವದ ಮೈಲಿಗಲ್ಲು ಸಾಧಿಸಿದ ಬಳಿಕ, ಎಲ್‌ವಿಎಂ3 ರಾಷ್ಟ್ರೀಯ ಮತ್ತು ವಾಣಿಜ್ಯಿಕ ಉಪಗ್ರಹ ಉಡಾವಣೆಗೆ ಆದ್ಯತೆಯ ರಾಕೆಟ್ ಆಗಿ ಹೊರಹೊಮ್ಮಿತು.
ಮುಂದಿನ ದಿನಗಳಲ್ಲಿ ಇಸ್ರೋ ಅಂತಿಮ ಕೌಂಟ್‌ಡೌನ್‌ಗೂ ಮುನ್ನ ಸಿಸ್ಟಮ್ ಪರಿಶೀಲನೆಗಳು, ಇಂಧನ ಪೂರಣ, ಮತ್ತು ಸಿದ್ಧತಾ ಅಭ್ಯಾಸಗಳನ್ನು ನಡೆಸಲಿದೆ. ಸಿಎಂಎಸ್-3 ಉಡಾವಣೆ ಜಿಟಿಒಗೆ ಹೆಚ್ಚು ಭಾರದ ಪೇಲೋಡ್‌ಗಳನ್ನು ಅಳವಡಿಸುವ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲಿದ್ದು, ಇದು ಸಂವಹನ ಮತ್ತು ನ್ಯಾವಿಗೇಶನ್ ಉಪಗ್ರಹಗಳ ಉಡಾವಣೆಗೆ ಅತ್ಯವಶ್ಯಕವಾಗಿದೆ.
ಈ ಯೋಜನೆಯ ಮೂಲಕ ಇಸ್ರೋ ಭಾರತದ ಬಾಹ್ಯಾಕಾಶ ಆಧಾರಿತ ಸಂವಹನ ಜಾಲವನ್ನು ಬಲಪಡಿಸಿ, ಭವಿಷ್ಯದ ಆಳ ಬಾಹ್ಯಾಕಾಶ ಅನ್ವೇಷಣಾ ಯೋಜನೆಗಳು ಮತ್ತು ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಎಲ್‌ವಿಎಂ3 ರಾಕೆಟ್ ನಿರ್ವಹಿಸಲಿರುವ ಪಾತ್ರವನ್ನು ಖಾತ್ರಿಪಡಿಸಲಿದೆ.
ಒಟ್ಟಾರೆಯಾಗಿ, ಎಲ್‌ವಿಎಂ3-ಎಂ5 ಯೋಜನೆ ಭಾರತದ ಬಾಹ್ಯಾಕಾಶ ಸಂವಹನಾ ಮಹತ್ವಾಕಾಂಕ್ಷೆಗಳಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಷ್ಟ್ರೀಯ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement