
ಅಕ್ಟೋಬರ್ ತಿಂಗಳ ಒಂದು ಬೆಳಗ್ಗೆ, ಭಾರತದ ಭೂಮಿಯಿಂದ ಬಹಳಷ್ಟು ಎತ್ತರದಲ್ಲಿ, ಓರ್ವ ಪ್ಯಾರಾಟ್ರೂಪರ್ ಸಾಮಾನ್ಯವಾಗಿ ವಾಣಿಜ್ಯಿಕ ವಿಮಾನಗಳು ಹಾರುವುದಕ್ಕಿಂತಲೂ ಎತ್ತರದಲ್ಲಿ, 32,000 ಅಡಿಗಳ ಎತ್ತರದ ಶೂನ್ಯದಲ್ಲಿ ಹೊರಸಾಗಿದರು. ಇದು ಯಾವುದೋ ಒಂದು ಮಾಮೂಲಿ ತರಬೇತಿ ಆಗಿರಲಿಲ್ಲ. ಬದಲಿಗೆ, ಭಾರತದ ಒಂದು ಸ್ಪಷ್ಟ ಸಂದೇಶವಾಗಿತ್ತು.
ಭಾರತ ತನ್ನ ಮಿಲಿಟರಿ ಕಾಂಬ್ಯಾಟ್ ಪ್ಯಾರಾಶೂಟ್ ಸಿಸ್ಟಮ್ (ಎಂಸಿಪಿಎಸ್) ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎನ್ನುವುದು ರಕ್ಷಣಾ ಇಲಾಖೆಗೆ ಸಂಬಂಧಿಸಿದ, ಯಾವುದೋ ಒಳಪುಟಗಳಲ್ಲಿ ಸುದ್ದಿಯಾಗುವಂತಹ ವಿಚಾರವಷ್ಟೇ ಎಂಬಂತೆ ಭಾಸವಾಗಬಹುದು. ಆದರೆ, ಈ ಸಾಧನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ಮಹತ್ವದ ಸಾಧನೆ ತೋರಿರುವುದು ಕಂಡುಬರುತ್ತದೆ. ಭಾರತ ತನ್ನ ಭದ್ರತೆಯ ಕುರಿತು, ತನ್ನ ತಂತ್ರಜ್ಞಾನದ ಕುರಿತು ಮತ್ತು ದಿನೇ ದಿನೇ ಅನಿಶ್ಚಿತವಾಗುತ್ತಿರುವ ಜಗತ್ತಿನಲ್ಲಿ ತನ್ನ ಸ್ಥಾನದ ಕುರಿತು ಹೇಗೆ ಚಿಂತಿಸುತ್ತಿದೆ ಎನ್ನುವುದರಲ್ಲಿ ಮೌನವಾಗಿಯೇ ಒಂದು ಕ್ರಾಂತಿ ಉಂಟಾಗಿರುವುದು ತಿಳಿಯುತ್ತದೆ.
ಎಂಸಿಪಿಎಸ್ ಮೇಲ್ನೋಟಕ್ಕೆ ಒಂದು ಗಮನಾರ್ಹ ಸಾಧನೆಯಂತೆ ಕಾಣುತ್ತದೆ. ಎತ್ತರದಿಂದ ನಿಧಾನವಾಗಿ ಕೆಳಗಿಳಿಯುವಿಕೆ, ಚಲನೆಯನ್ನು ಇನ್ನಷ್ಟು ಸುಧಾರಿತವಾಗಿ ನಿಯಂತ್ರಿಸುವಿಕೆ, ಮತ್ತು ನಿಖರವಾದ ಸ್ಥಳದಲ್ಲಿ ಇಳಿಯುವಿಕೆ ಸೇರಿದಂತೆ, ಎಲ್ಲ ತಾಂತ್ರಿಕ ಸುಧಾರಣೆಗಳನ್ನೂ ಇದು ಹೊಂದಿದೆ. ಆದರೆ, ನೈಜ ಕಥೆ ಈ ಪ್ಯಾರಾಶೂಟ್ ವ್ಯವಸ್ಥೆ ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರಲ್ಲಿದೆ.
ಹಲವಾರು ದಶಕಗಳ ಕಾಲ, ಭಾರತೀಯ ಸೇನಾ ಪಡೆಗಳು ಪ್ಯಾರಾಶೂಟ್ ವ್ಯವಸ್ಥೆಗಳ ವಿಚಾರದಲ್ಲಿ ವಿದೇಶೀ ಆಮದು ವೇಳಾಪಟ್ಟಿ, ವಿದೇಶೀ ನಿರ್ವಹಣಾ ವ್ಯವಸ್ಥೆ, ಮತ್ತು ಪೂರೈಕೆದಾರ ರಾಷ್ಟ್ರಗಳ ಕರುಣೆಯ ಮೇಲೆ ಅವಲಂಬಿತವಾಗಿದ್ದವು. ಉದ್ವಿಗ್ನತೆಗಳು ತಲೆದೋರಿ, ಭಾರತೀಯ ಸೇನಾ ಪಡೆಗಳ ಎಲ್ಲ ಉಪಕರಣಗಳೂ ಸಿದ್ಧವಾಗಿರಬೇಕಾದ ಅನಿವಾರ್ಯ ವೇಳೆಯಲ್ಲಿ 'ಬಿಡಿಭಾಗಗಳು ಕಸ್ಟಮ್ಸ್‌ನಲ್ಲಿ ಸಿಕ್ಕಿಕೊಂಡಿವೆ' ಎನ್ನುವ ಉತ್ತರವನ್ನು ದೇಶ ಖಂಡಿತಾ ಕೇಳಬಯಸುವುದಿಲ್ಲ. ಆದರೆ, ಈಗ ಎಂಸಿಪಿಎಸ್ ಈ ಲೆಕ್ಕಾಚಾರದಲ್ಲಿ ಮೂಲಭೂತ ಬದಲಾವಣೆಯನ್ನೇ ತಂದಿದೆ.
ಆಗ್ರಾ ಮತ್ತು ಬೆಂಗಳೂರಿನ ಡಿಆರ್‌ಡಿಒ ಪ್ರಯೋಗಾಲಯಗಳಲ್ಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ನೂತನ ಪ್ಯಾರಾಶೂಟ್ ವ್ಯವಸ್ಥೆ ಕೇವಲ ಕೆಲಸ ಮಾಡುವುದು ಮಾತ್ರವಲ್ಲ. ಅದು ಭಾರತಕ್ಕೆ ಬೇಕಾದ ರೀತಿಯಲ್ಲೇ ಕೆಲಸ ಮಾಡುತ್ತದೆ! ಆಮದು ಮಾಡಿಕೊಂಡ ಪ್ಯಾರಾಶೂಟ್ ವ್ಯವಸ್ಥೆಗಳಿಗೆ ಹೋಲಿಸಿದರೆ, ಇದರ ನಿರ್ವಹಣೆಗೆ ಕಡಿಮೆ ಸಮಯ ಸಾಕಾಗುತ್ತದೆ. ಅಂದರೆ, ನಮ್ಮ ಸೇನೆಯ ಸಿದ್ಧತೆಗೆ ಹೆಚ್ಚು ಸಮಯ ದೊರೆತು, ಕಾಯುವಿಕೆಯ ಅವಧಿ ಕಡಿಮೆಯಾಗುತ್ತದೆ. ಮಿಲಿಟರಿ ಯೋಜನೆಗಳಲ್ಲಿ ಕಾರ್ಯಾಚರಣಾ ಸಿದ್ಧತೆ ಒಂದೇ ಮುಖ್ಯವಾಗುತ್ತದೆ.
ಹೊಸ ಪ್ಯಾರಾಶೂಟ್ ವ್ಯವಸ್ಥೆ ಆಸಕ್ತಿಕರವಾಗುವುದೇ ಇಲ್ಲಿ. ಎಂಸಿಪಿಎಸ್ ಭಾರತದ ಸ್ವಂತ ಸಂಚರಣಾ ಉಪಗ್ರಹ ವ್ಯವಸ್ಥೆಯಾದ ನಾವಿಕ್ ಅನ್ನು ಒಳಗೊಂಡಿದೆ. ಇದು ದೇಶೀಯ ವ್ಯವಸ್ಥೆಯನ್ನು ಒಳಗೊಂಡಿದೆ ಎಂಬ ದೇಶಪ್ರೇಮದ ತೋರ್ಪಡಿಕೆಯಲ್ಲ. ಇದು ಕಾರ್ಯತಂತ್ರದ ದೃಷ್ಟಿಯಿಂದ ಭಾರತದ ಅದ್ಭುತವಾದ ಹೆಜ್ಜೆ.
ಆಧುನಿಕ ಯುದ್ಧಗಳ ಸಂದರ್ಭದಲ್ಲಿ, ಜಿಪಿಎಸ್ ಸಂಕೇತಗಳನ್ನು ಜಾಮ್ ಮಾಡಬಹುದು. ಅಷ್ಟೇ ಯಾಕೆ, ತಮಗೆ ಸ್ನೇಹಿತನಲ್ಲದ ಪಡೆಗಳಿಗೆ ಜಿಪಿಎಸ್ ಸೇವೆಯನ್ನು ಸ್ಥಗಿತಗೊಳಿಸಬಹುದು. ಉದ್ವಿಗ್ನ ಗಡಿ ಪ್ರದೇಶಗಳ ಬಳಿ ಸಂಕೀರ್ಣ ಸೇನಾ ಕಾರ್ಯಾಚರಣೆಗಳನ್ನು ನಡೆಸುವಾಗ, ವಿದೇಶೀ ಉಪಗ್ರಹ ಸಂಚರಣಾ (ನ್ಯಾವಿಗೇಶನ್) ಸೇವೆಗಳ ಮೇಲೆ ಅವಲಂಬಿತವಾಗುವುದು ಎಂದರೆ ನಮ್ಮ ಉಪಕರಣಗಳ ಸ್ವಿಚ್ ಅನ್ನು ಶತ್ರುಗಳ ಕೈಯಲ್ಲಿ ಇಟ್ಟಂತಾಗುತ್ತದೆ. ಈಗ ನಾವಿಕ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿದರೆ, ಭಾರತೀಯ ಪ್ಯಾರಾಟ್ರೂಪರ್‌ಗಳು ಶತ್ರುಗಳು ಇಲೆಕ್ಟ್ರಾನಿಕ್ ವಿಧಾನದಿಂದ ನಮ್ಮವರ ಹಾದಿಯನ್ನು ಕುರುಡಾಗಿಸಲು ಪ್ರಯತ್ನಿಸಿದರೂ, ನಮ್ಮ ಪ್ಯಾರಾಟ್ರೂಪರ್‌ಗಳು ಶತ್ರುಗಳ ಪ್ರಯತ್ನಗಳನ್ನು ಮೀರಿ, ನಂಬಿಕಾರ್ಹ ನ್ಯಾವಿಗೇಶನ್ ಹೊಂದಲು ಸಾಧ್ಯವಾಗುತ್ತದೆ.
ಸುಮ್ಮನೆ ಆಲೋಚಿಸಿ: ಓರ್ವ ಪ್ಯಾರಾಟ್ರೂಪರ್ ಶತ್ರುವಿನ ಭೂ ಪ್ರದೇಶದೊಳಗೆ ಇಳಿಯುತ್ತಿದ್ದಾನೆ. ಜಿಪಿಎಸ್ ಜಾಮಿಂಗ್ ತೊಂದರೆಗೆ ಸಿಲುಕದೆ, ಆತ ನಿರ್ದಿಷ್ಟವಾಗಿ ತಾನು ಎಲ್ಲಿ ಇಳಿಯಬೇಕೋ ಅಲ್ಲೇ ಇಳಿದು, ತನ್ನ ಉದ್ದೇಶಿತ ಕಾರ್ಯಾಚರಣೆ ನಡೆಸುತ್ತಾನೆ. ಅಂದರೆ, ಇದು ಕೇವಲ ಒಂದು ತಂತ್ರಜ್ಞಾನ ಮಾತ್ರವಲ್ಲ. ಇದು ಯೋಧರನ್ನು ಜೀವಂತವಾಗಿ ಉಳಿಯಲು ನೆರವಾಗಿ, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗುವ ಕಾರ್ಯತಂತ್ರದ ಅನುಕೂಲತೆಯೂ ಹೌದು.
ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಈ ಪರೀಕ್ಷೆಯನ್ನು 'ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಹೊಂದುವಲ್ಲಿ ಒಂದು ಮಹತ್ವದ ಸಾಧನೆ' ಎಂದು ಬಣ್ಣಿಸಿದ್ದಾರೆ. ಹಾಗೆಂದು ರಾಜನಾಥ್ ಸಿಂಗ್ ಅವರ ಮಾತೇನು ಅತಿರಂಜಿತವಲ್ಲ.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಸಾಧನೆ ಎಂದರೆ, ಎಲ್ಲವನ್ನೂ ದೇಶೀಯವಾಗಿ ನಿರ್ಮಿಸಿದ್ದೇವೆ ಎಂದು ಹೆಮ್ಮೆ ಪಡುವುದಕ್ಕೆ ಸೀಮಿತವಲ್ಲ. ಸ್ವಾವಲಂಬನೆ ಎನ್ನುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ಪೂರೈಕೆಯ ಕೊರತೆ ಎದುರಿಸಿ, ಕೈ ಕಟ್ಟಿಹಾಕಿದಂತಾಗದೆ ಕಾರ್ಯಾಚರಿಸುವಂತೆ ಮಾಡುತ್ತದೆ. ನಮ್ಮ ದೇಶಕ್ಕೆ ಯುದ್ಧೋಪಕರಣಗಳ ತುರ್ತು ಪೂರೈಕೆಯ ಅವಶ್ಯಕತೆ ಎದುರಾದಾಗ, ಆ ಮುಖ್ಯ ವಸ್ತುಗಳ ಪೂರೈಕೆದಾರ ಇದ್ದಕ್ಕಿದ್ದಂತೆ ತಟಸ್ಥವಾಗುವ ಅಪಾಯವನ್ನು ತಡೆಯಲು ರಕ್ಷಣಾ ಸ್ವಾವಲಂಬನೆ ಅನಿವಾರ್ಯವಾಗಿದೆ. ರಕ್ಷಣಾ ಸ್ವಾವಲಂಬನೆ ಎಂದರೆ, ಇನ್ನಷ್ಟು ನಾವೀನ್ಯತೆ ಸಾಧಿಸಬಲ್ಲ, ಉತ್ಪಾದನೆ ನಡೆಸಬಲ್ಲ, ಸಂಕೀರ್ಣ ಮಿಲಿಟರಿ ವ್ಯವಸ್ಥೆಗಳಿಗೆ ಬೆಂಬಲ ಒದಗಿಸಬಲ್ಲ ಔದ್ಯಮಿಕ ವ್ಯವಸ್ಥೆಯನ್ನು ನಿರ್ಮಿಸುವುದು.
ಭಾರತೀಯ ರಕ್ಷಣಾ ಪ್ರಯೋಗಾಲಯಗಳು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮನಾಗುವುದು ಮಾತ್ರವಲ್ಲದೆ, ಕೆಲವು ವಿಚಾರಗಳಲ್ಲಿ ಅವನ್ನೂ ಮೀರಬಲ್ಲವು ಎನ್ನುವುದನ್ನು ಎಂಸಿಪಿಎಸ್ ಸಾಬೀತುಪಡಿಸಿದೆ. 25,000 ಅಡಿಗಳಿಗಿಂತಲೂ ಹೆಚ್ಚಿನ ಎತ್ತರದಿಂದ ಸುರಕ್ಷಿತವಾಗಿ ಕಾರ್ಯಾಚರಿಸಬಲ್ಲ ಭಾರತದ ಏಕೈಕ ಪ್ಯಾರಾಶೂಟ್ ವ್ಯವಸ್ಥೆ ಎಂಸಿಪಿಎಸ್ ಆಗಿದ್ದು, ಇದು ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲದೆ, ನಮ್ಮಲ್ಲಿದ್ದ ಒಂದು ಸಾಮರ್ಥ್ಯದ ಕೊರತೆಯನ್ನು ನಾವೇ ಸಂಪಾದಿಸಬಲ್ಲೆವು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಎಂಸಿಪಿಎಸ್ ಯಶಸ್ವಿ ಪರೀಕ್ಷೆ ಭಾರತಕ್ಕೆ ಹಲವು ಬಾಗಿಲುಗಳನ್ನು ತೆರೆದಿದೆ. ವಿಶೇಷ ಪಡೆಗಳು ಈಗ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಇದು ನೆರವಾಗಲಿದೆ. ಲಡಾಖ್‌ನಂತಹ ಗಡಿ ಪ್ರದೇಶಗಳಲ್ಲಿ ಪರ್ವತ ಯುದ್ಧ ಸಾಮರ್ಥ್ಯ ಮುಖ್ಯವಾಗಿದ್ದು, ಈ ಸಾಮರ್ಥ್ಯಕ್ಕೆ ಎಂಸಿಪಿಎಸ್ ಉತ್ತೇಜನ ನೀಡಿದೆ. ಇನ್ನಷ್ಟು ವೈಮಾನಿಕ ರಕ್ಷಣಾ ವ್ಯವಸ್ಥೆಗಳನ್ನು ದೇಶೀಯವಾಗಿ ನಿರ್ಮಿಸಲು ಇದು ಹೆಚ್ಚಿನ ಆತ್ಮವಿಶ್ವಾಸ ನೀಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಇದು ನಮ್ಮ ಸೇನಾ ಪಡೆಗಳಿಗೆ ಮತ್ತು ಶತ್ರುಗಳಿಗೆ ಒಂದು ಸಂದೇಶ ರವಾನಿಸಿದೆ. ಅದೇನೆಂದರೆ, ಭಾರತ ತನಗೆ ಬೇಕಾದ ಉಪಕರಣಗಳನ್ನು ತನಗೆ ಬೇಕಾದ ರೀತಿಯಲ್ಲಿ ತಾನೇ ನಿರ್ಮಿಸಬಲ್ಲದು.
ಪ್ರತಿಯೊಂದು ದೇಶಕ್ಕೂ ತನ್ನ ಮಿಲಿಟರಿಯ ಮುಖ್ಯ ಅವಶ್ಯಕತೆಗಳನ್ನು ತಾನೇ ಪೂರೈಸುವ ಗುರಿ ಇರುತ್ತದೆ. ಆಮದು ಮಾಡಿಕೊಳ್ಳುವುದು ತಪ್ಪು ಎಂದಾಗಲಿ, ವಿದೇಶೀ ಉಪಕರಣಗಳು ಕೆಟ್ಟದಾಗಿವೆ ಎಂದಾಗಲಿ ಇದರರ್ಥವಲ್ಲ. ಆದರೆ, ವಿದೇಶೀ ಅವಲಂಬನೆ ಎಂದಿಗೂ ಅಪಾಯಕಾರಿ. ಭಾರತದ ಎಂಸಿಪಿಎಸ್ ಅತ್ಯಂತ ತಾಂತ್ರಿಕ ಮತ್ತು ಅವಶ್ಯಕವಾಗಿದ್ದು, ಸ್ವಾವಲಂಬನೆಯ ದೃಷ್ಟಿಯಿಂದ ಭಾರತದ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ.
ಭಾರತೀಯ ಪ್ಯಾರಾಟ್ರೂಪರ್ ಅಕ್ಟೋಬರ್ 15ರಂದು, 32,000 ಅಡಿಗಳ ಎತ್ತರದಿಂದ ಜಿಗಿದಾಗ ಆತ ಕೇವಲ ಒಂದು ಪ್ಯಾರಾಶೂಟ್ ಅನ್ನು ಪರೀಕ್ಷಿಸುತ್ತಿರಲಿಲ್ಲ. ಆತ ಭಾರತ ಜಾಗತಿಕ ಗುಣಮಟ್ಟದ ಮಿಲಿಟರಿ ತಂತ್ರಜ್ಞಾನಗಳ ಇಂಜಿನಿಯರಿಂಗ್ ನಡೆಸಿ, ಉತ್ಪಾದಿಸಿ, ಕಾರ್ಯಾಚರಿಸಬಲ್ಲದು ಎನ್ನುವುದನ್ನು ಸಾಬೀತುಪಡಿಸಿದ್ದ. ನಮ್ಮ ರಕ್ಷಣಾ ವ್ಯವಸ್ಥೆ ಈಗ ಖರೀದಿದಾರನಿಂದ ಉತ್ಪಾದಕನಾಗುತ್ತಿದೆ ಎನ್ನುವುದನ್ನು ಆತ ಪ್ರದರ್ಶಿಸಿದ್ದ.
ಇಂದಿನ ಕಾಲಘಟ್ಟದಲ್ಲಿ ಪೂರೈಕೆ ಸರಪಳಿಗಳೇ ಆಯುಧಗಳಾಗಿದ್ದು, ವಿದೇಶೀ ಅವಲಂಬನೆ ದೌರ್ಬಲ್ಯಗಳಾಗಿವೆ. ಹೀಗಿರುವಾಗ ಎಂಸಿಪಿಎಸ್ ಭಾರತದ ಕಾರ್ಯತಂತ್ರದ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಿದೆ. ಹಾಗೆಂದು ಎಂಸಿಪಿಎಸ್ ಪರೀಕ್ಷೆ ತನ್ನ ತಾಂತ್ರಿಕ ಅಂಕಿಅಂಶಗಳಿಗೆ ಅಥವಾ ತಾನು ಕಾರ್ಯಾಚರಿಸಬಲ್ಲ ಎತ್ತರಕ್ಕೆ ಮಾತ್ರವೇ ಮುಖ್ಯವಾಗಿಲ್ಲ. ಇದು ಸುರಕ್ಷಿತವಾಗಿ ಆಗಸದಿಂದ ಇಳಿಯುವುದಕ್ಕೆ ಸೀಮಿತವಾಗದೆ, ಭಾರತ ಸ್ವತಂತ್ರವಾಗಿ ಮೇಲೇರುವುದರ ಸಂಕೇತವಾಗಿದೆ.
ನಮ್ಮ ಸೇನಾ ಪಡೆಗಳಿಗೆ ಬೇಕಾದ ರಕ್ಷಣಾ ಉಪಕರಣಗಳನ್ನು ನಾವೇ ಒದಗಿಸಿ, ನಮ್ಮ ಪಡೆಗಳನ್ನು ನಮಗೆ ಬೇಕಾದಂತೆ ನಿರ್ವಹಿಸಲು ಸಾಧ್ಯವಾದಾಗ ನಿಜವಾದ ರಾಷ್ಟ್ರೀಯ ಭದ್ರತೆ ಆರಂಭವಾಗುತ್ತದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement