Agni Prime missile ಸಾಮರ್ಥ್ಯ ವೃದ್ಧಿಸಿದ ರೈಲ್ವೇ ಆಧಾರಿತ ಉಡಾವಣೆ (ಜಾಗತಿಕ ಜಗಲಿ)

ಈ ಯಶಸ್ವಿ ಪ್ರಯೋಗ ರೈಲ್ವೇ ಜಾಲದ ಮೂಲಕ ಚಲನೆಯಲ್ಲೇ ಪರಮಾಣು ಶಸ್ತ್ರಾಸ್ತ್ರ ಉಡಾವಣೆಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಿದೆ.
Agni Prime missile launched (image for representation purpose only)
ಅಗ್ನಿ ಪ್ರೈಮ್ ಕ್ಷಿಪಣಿ online desk
Updated on

ಸೆಪ್ಟೆಂಬರ್ 24, 2025ರಂದು, ಭಾರತ ರೈಲ್ವೇ ಆಧಾರಿತ ಲಾಂಚರ್ ಮೂಲಕ ತನ್ನ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಆ ಮೂಲಕ ತನ್ನ ಕಾರ್ಯತಂತ್ರದ ಸಾಮರ್ಥ್ಯದಲ್ಲಿ ಭಾರತ ಅಪಾರ ಪ್ರಗತಿಯನ್ನು ಸಾಧಿಸಿತು. ಇಂತಹ ಯಶಸ್ವಿ ಪ್ರಯೋಗ ರೈಲ್ವೇ ಜಾಲದ ಮೂಲಕ ಚಲನೆಯಲ್ಲೇ ಪರಮಾಣು ಶಸ್ತ್ರಾಸ್ತ್ರ ಉಡಾವಣೆಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಿದೆ. ಆ ಮೂಲಕ ಸಂಕೀರ್ಣವಾಗುತ್ತಿರುವ ಜಗತ್ತಿನಲ್ಲಿ ಭಾರತ ತನ್ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಾರ್ಯತಂತ್ರವನ್ನು ಪ್ರದರ್ಶಿಸಿದೆ.

ಆಧುನಿಕ ರಕ್ಷಣಾ ಕಾರ್ಯತಂತ್ರದಲ್ಲಿ ರೈಲ್ವೇ ಆಧಾರಿತ ಕ್ಷಿಪಣಿ ಉಡಾವಣಾ ವ್ಯವಸ್ಥೆ ಬಹಳ ಮುಖ್ಯವಾಗಿದೆ. ಶಾಶ್ವತ ಸಿಲೋಸ್ (ನೆಲದಾಳದಲ್ಲಿರುವ, ಶಾಶ್ವತ ಕ್ಷಿಪಣಿ ಉಡಾವಣಾ ವೇದಿಕೆಗಳು) ಅಥವಾ ರಸ್ತೆ ಆಧಾರಿತ ವ್ಯವಸ್ಥೆಗಳ ರೀತಿ ಅಲ್ಲದೆ, ರೈಲ್ವೇ ಆಧಾರಿತ ಉಡಾವಣಾ ವ್ಯವಸ್ಥೆಗಳು ಅಸಾಧಾರಣ ಚಲನೆ ಮತ್ತು ಸುರಕ್ಷತೆ ಒದಗಿಸುತ್ತವೆ. ಇದಕ್ಕಾಗಿ ಭಾರತ ತನ್ನ ಅತ್ಯಂತ ದೀರ್ಘವಾದ ರೈಲ್ವೇ ಜಾಲವನ್ನು ಬಳಸಿಕೊಳ್ಳುತ್ತದೆ. ಭಾರತ 68,000 ಕಿಲೋಮೀಟರ್ ರೈಲ್ವೇ ಜಾಲವನ್ನು ಬಳಸಿಕೊಂಡು, 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕ್ಷಿಪಣಿಗಳನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. ಇದರಿಂದಾಗಿ ಶತ್ರುಗಳಿಗೆ ಕ್ಷಿಪಣಿಯ ಸ್ಥಾನವನ್ನು ಪತ್ತೆಹಚ್ಚುವುದು ಬಹುತೇಕ ಅಸಾಧ್ಯವಾಗುತ್ತದೆ. ಇಂತಹ ಅನಿಶ್ಚಿತತೆಗಳಿಂದ ಶತ್ರುಗಳು ಕ್ಷಿಪಣಿ ಎಲ್ಲಿರಬಹುದು ಎಂದು ಊಹಿಸುತ್ತಾ ಇರಬೇಕಾಗುತ್ತದೆ. ಒಂದು ವೇಳೆ ಭಾರತದ ಮೇಲೆ ಮೊದಲ ದಾಳಿ ನಡೆದರೂ, ನೂತನ ರೈಲ್ವೇ ಆಧಾರಿತ ಉಡಾವಣೆ ಭಾರತಕ್ಕೆ ಶತ್ರುಗಳ ವಿರುದ್ಧ ಅತ್ಯಂತ ಬಲವಾದ ದಾಳಿ ನಡೆಸಲು ಅನುಕೂಲ ಕಲ್ಪಿಸುತ್ತದೆ. ಆ ಮೂಲಕ ನಂಬಿಕಾರ್ಹ ಎರಡನೇ ದಾಳಿ ಸಾಮರ್ಥ್ಯ ಭಾರತಕ್ಕೆ ಲಭಿಸುತ್ತದೆ.

ರೈಲ್ವೇ ಆಧಾರಿತ ಅಗ್ನಿ ಪ್ರೈಮ್ ಕ್ಷಿಪಣಿ ಕೇವಲ ಎಲ್ಲಿ ಬೇಕಾದರೂ ಚಲಿಸಬಲ್ಲದು ಮಾತ್ರವಲ್ಲ, ಅದು ಅತ್ಯಂತ ಸಮರ್ಥ ಕ್ಷಿಪಣಿಯೂ ಹೌದು. ಈಗಾಗಲೇ ಇರುವ ರೈಲ್ವೇ ಜಾಲದೊಂದಿಗೆ ಅಂತರ್ಗತವಾಗಿರುವ ಈ ವ್ಯವಸ್ಥೆ ಅತ್ಯಂತ ಕನಿಷ್ಠ ಹೆಚ್ಚುವರಿ ಸಾಗಾಣಿಕಾ ಸೇವೆಗಳೊಡನೆ ಕಾರ್ಯಾಚರಿಸಬಲ್ಲದಾಗಿದ್ದು, ಶತ್ರುಗಳಿಗೆ ಆಶ್ಚರ್ಯಕರ ರೀತಿಯಲ್ಲಿ ದಾಳಿ ನಡೆಸಬಲ್ಲದು. ಇಂದಿನ ಉಪಗ್ರಹ ಗುಪ್ತಚರ ದಿನಗಳಲ್ಲಿ ಸ್ಥಿರ ಉಡಾವಣಾ ವ್ಯವಸ್ಥೆಗಳು ಶತ್ರುವಿನ ದಾಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಆದರೆ, ರೈಲ್ವೇ ಆಧಾರಿತ ವ್ಯವಸ್ಥೆ ಸಾಂಪ್ರದಾಯಿಕ ಉಡಾವಣಾ ವ್ಯವಸ್ಥೆಗಳಿಂದ ಹೆಚ್ಚಿನ ರಕ್ಷಣೆ ಮತ್ತು ಗೌಪ್ಯತೆ ಹೊಂದಿರುತ್ತವೆ.

ಪ್ರಾದೇಶಿಕ ಶಕ್ತಿ ಸಮತೋಲನ

ಪ್ರಾದೇಶಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ನೂತನ ಅಭಿವೃದ್ಧಿಯ ಪರಿಣಾಮ ಸ್ಪಷ್ಟವಾಗಿ ತಿಳಿಯುತ್ತದೆ. ಪಾಕಿಸ್ತಾನದ ಬಳಿ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹ ಇದ್ದರೂ, ಇಂತಹ ಆಯುಧ ವ್ಯವಸ್ಥೆಯನ್ನು ಬೆಂಬಲಿಸುವ ಆಧುನಿಕ ಅಥವಾ ವಿಶಾಲವಾದ ರೈಲ್ವೇ ಜಾಲ ಪಾಕಿಸ್ತಾನದ ಬಳಿ ಇಲ್ಲ. ಅದು ಪ್ರಾಥಮಿಕವಾಗಿ ರಸ್ತೆ ಆಧಾರಿತ ಕ್ಷಿಪಣಿ ಉಡಾವಣೆ ಮತ್ತು ವಿಮಾನಗಳ ಮೇಲೆ ಅವಲಂಬಿತವಾಗಿದೆ. ಈ ವ್ಯವಸ್ಥೆಗಳು ಭೌಗೋಳಿಕತೆ ಮತ್ತು ಸೀಮಿತ ಕಾರ್ಯತಂತ್ರದ ಆಳಕ್ಕೆ ಸಂಬಂಧಿಸಿದಂತೆ ಅವುಗಳದೇ ಆದ ದೌರ್ಬಲ್ಯಗಳನ್ನು ಹೊಂದಿವೆ.

Agni Prime missile launched (image for representation purpose only)
ರೇಡಾರ್ ಅಭಿವೃದ್ಧಿಯತ್ತ ಭಾರತದ ಹೆಜ್ಜೆ (ಜಾಗತಿಕ ಜಗಲಿ)

ಇನ್ನೊಂದೆಡೆ ಚೀನಾದ ಬಳಿ ರೈಲ್ವೇ ಆಧರಿತ ಕ್ಷಿಪಣಿ ಉಡಾವಣೆಗಾಗಿ ತಂತ್ರಜ್ಞಾನ ಮತ್ತು ಆಧುನಿಕ ರೈಲ್ವೇ ಜಾಲಗಳು ಎರಡೂ ಇವೆ. ಆದರೆ, ಚೀನಾದ ಕಾರ್ಯತಂತ್ರದ ಸಿದ್ಧಾಂತಗಳು ಬಹಳ ಹಿಂದಿನಿಂದಲೂ ತನ್ನ ಡಿಎಫ್ ಸರಣಿಯ ಕ್ಷಿಪಣಿಗಳಿಗಾಗಿ ನೆಲದಾಳದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಸಿಲೋಸ್ ಮತ್ತು ರಸ್ತೆ ಆಧಾರಿತ ಲಾಂಚರ್‌ಗಳ ಮೇಲೆ ಅವಲಂಬಿತವಾಗಿದೆ. ಚೀನಾ ರೈಲ್ವೇ ಆಧಾರಿತ ಉಡಾವಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬಹುದಾದರೂ, ಅದರ ಈಗಿನ ಕಾರ್ಯತಂತ್ರ ಮತ್ತು ವಿಶಾಲ ಭೂ ಪ್ರದೇಶಗಳ ಕಾರಣದಿಂದ ಅದಕ್ಕೆ ಭಾರತದಷ್ಟು ತುರ್ತಾಗಿ ಈ ಕ್ರಮ ಕೈಗೊಳ್ಳುವ ಅವಶ್ಯಕತೆ ಇಲ್ಲ.

ರೈಲ್ವೇ ಜಾಲದಿಂದ ಉಡಾವಣೆಗೊಳಿಸಬಲ್ಲ ಅಗ್ನಿ ಪ್ರೈಮ್ ಕ್ಷಿಪಣಿ ಭಾರತದ ವಿಶಿಷ್ಟ ಭದ್ರತಾ ಅವಶ್ಯಕತೆಗಳನ್ನು ನೇರವಾಗಿ ಪೂರೈಸುತ್ತದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವೆ ಇರುವ, ಅವೆರಡೂ ದೇಶಗಳ ಜೊತೆಗೆ ವಿವಾದಿತ ಗಡಿ ಹಂಚಿಕೊಂಡಿರುವ ಭಾರತಕ್ಕೆ ನಂಬಿಕಾರ್ಹವಾದ ಮತ್ತು ಅಪಾಯದಿಂದ ಬಚಾವಾಗಬಲ್ಲ ಪರಮಾಣು ಶಸ್ತ್ರಾಸ್ತ್ರಗಳ ಶಕ್ತಿಯ ಅಗತ್ಯವಿದೆ. ಈ ವ್ಯವಸ್ಥೆ ಶತ್ರುಗಳಿಗೆ ಗುರುತಿಸಲು ಕಷ್ಟವಾಗುವಂತಹ, ಮತ್ತು ಪ್ರತಿದಾಳಿಯಿಂದ ನಾಗರಿಕ ಮೂಲಭೂತ ವ್ಯವಸ್ಥೆಗಳಿಗೆ ಹೆಚ್ಚಿನ ಹಾನಿ ಉಂಟಾಗದಂತಹ ಚಲನಶೀಲ ಉಡಾವಣೆಯನ್ನು ಭಾರತಕ್ಕೆ ಕಲ್ಪಿಸಿದೆ.

ಬಹುಪದರಗಳ ಮತ್ತು ಸಮಗ್ರ ನಿರೋಧಕ ವ್ಯವಸ್ಥೆ

ಭಾರತ ಕೈಗೊಂಡಿರುವ ಯಶಸ್ವಿ ಪರೀಕ್ಷೆ ಒಂದು ಮಹತ್ವದ ತಂತ್ರಜ್ಞಾನ ಸಾಧನೆಯಾಗಿದೆ. ಒಂದು ಕ್ಯಾನಿಸ್ಟರ್ ಆಧರಿತ ಕ್ಷಿಪಣಿಯನ್ನು (ಮುಚ್ಚಿರುವ ಕೊಳವೆಯಂತಹ ಸಂಗ್ರಾಹಕದಲ್ಲಿ ಇಟ್ಟು, ಸಾಗಿಸಲು, ಸಂಗ್ರಹಿಸಲು ಮತ್ತು ಉಡಾವಣೆಗೊಳಿಸುವುದನ್ನು ಕ್ಷಿಪ್ರ ಮತ್ತು ಸುರಕ್ಷಿತವಾಗಿಸುವ ಕ್ಷಿಪಣಿ) ಸಿದ್ಧಪಡಿಸಿ, ಅದು ಯಾವುದೋ ಚಲನಶೀಲ ವೇದಿಕೆಯಿಂದ ಉಡಾವಣೆಗೊಳ್ಳುವಂತೆ ಮಾಡಲು ಹಲವು ಸಂಕೀರ್ಣ ಇಂಜಿನಿಯರಿಂಗ್ ಸವಾಲುಗಳನ್ನು ಪರಿಹರಿಸಬೇಕಾಗುತ್ತದೆ. ಇದಕ್ಕೆ ಲಾಂಚರ್ ಸ್ಥಿರತೆ ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆ ಬೇಕಾಗುತ್ತದೆ. ಡಿಆರ್‌ಡಿಒ ಮತ್ತು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ಗಳು (ಎಸ್ಎಫ್‌ಸಿ) ಸಾಧಿಸಿರುವ ಯಶಸ್ಸು ಪ್ರಮುಖ ರಕ್ಷಣಾ ತಂತ್ರಜ್ಞಾನಗಳಲ್ಲಿ ಹೆಚ್ಚುತ್ತಿರುವ ಭಾರತದ ಸ್ವಾವಲಂಬನೆಯನ್ನು ಪ್ರದರ್ಶಿಸಿವೆ.

ರೈಲ್ವೇ ಆಧಾರಿತ ಅಗ್ನಿ ಪ್ರೈಮ್ ಈಗಾಗಲೇ ಇರುವ ರಸ್ತೆ ಆಧಾರಿತ ಉಡಾವಣಾ ಆವೃತ್ತಿಗೆ ಪೂರಕವಾಗಿದ್ದು, ಇನ್ನೊಂದು ಪದರದ ದಾಳಿ ನಿರೋಧಕವನ್ನು ನಿರ್ಮಿಸಿದೆ. ರಸ್ತೆ ಆಧಾರಿತ ವ್ಯವಸ್ಥೆ ಕಾರ್ಯತಂತ್ರದ ಕುಶಲತೆ ಒದಗಿಸಿ, ಕ್ಷಿಪ್ರ ಉಡಾವಣೆಗೆ ಪೂರಕವಾದರೆ, ರೈಲ್ವೇ ಆಧಾರಿತ ಆವೃತ್ತಿ ಸಂಪೂರ್ಣ ದೇಶಾದ್ಯಂತ ಸಾಗಿಸಲು ನೆರವಾಗುತ್ತದೆ. ಇವೆರಡೂ ಆವೃತ್ತಿಗಳು ಜೊತೆಯಾಗಿ ಶತ್ರುಗಳಿಗೆ ಪರಿಣಾಮಕಾರಿ ಮೊದಲ ದಾಳಿ ನಡೆಸುವುದನ್ನು ಕಷ್ಟಕರವಾಗಿಸುತ್ತವೆ.

Agni Prime missile launched (image for representation purpose only)
ಕೊನೆಯಾದ ಆತಂಕ, ಅಪ್ಪಳಿಸಿದ ವಾಸ್ತವ,: ಹೊಸಬರ ಅಮೆರಿಕಾ ಕನಸು ಕಮರಿಸಿದ ಟ್ರಂಪ್ ಎಚ್-1ಬಿ ಶುಲ್ಕ (ಜಾಗತಿಕ ಜಗಲಿ)

ಈ ಸಾಮರ್ಥ್ಯಕ್ಕೆ ಭಾರತದ ದೀರ್ಘ ವ್ಯಾಪ್ತಿಯ ಕ್ಷಿಪಣಿಯಾದ ಅಗ್ನಿ-5 ಇನ್ನೊಂದು ಪದರದ ಭದ್ರತೆ ಕಲ್ಪಿಸಿದೆ. ಅಗ್ನಿ-5 ಕ್ಷಿಪಣಿ 5,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಸಾಬೀತಾಗಿರುವ ಎಂಐಆರ್‌ವಿ (ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿಎಂಟ್ರಿ ವೆಹಿಕಲ್) ಸಾಮರ್ಥ್ಯ ಹೊಂದಿದೆ. ಅಂದರೆ, ಅಗ್ನಿ-5 ಕ್ಷಿಪಣಿ ವಿಶಾಲ ಪ್ರದೇಶದಲ್ಲಿ ಹಲವಾರು ಗುರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಬಲ್ಲದು. ಇದು 3-4 ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಭಾರತದ ದಾಳಿ ಮಾಡುವ ಶಕ್ತಿಯನ್ನು ಹೆಚ್ಚಿಸಿ, ಶತ್ರುಗಳ ಕ್ಷಿಪಣಿ ರಕ್ಷಣಾ ಲೆಕ್ಕಾಚಾರಗಳನ್ನು ಗೊಂದಲಮಯವಾಗಿಸುತ್ತದೆ.

ಅಗ್ನಿ ಪ್ರೈಮ್ vs ಅಗ್ನಿ-5: ಮುಖ್ಯ ವ್ಯತ್ಯಾಸಗಳು

ಎರಡೂ ಕ್ಷಿಪಣಿಗಳು ಪ್ರಮುಖ ಕ್ಷಿಪಣಿಗಳಾದರೂ, ಎರಡೂ ಪ್ರತ್ಯೇಕ ಪಾತ್ರಗಳನ್ನು ನಿರ್ವಹಿಸುತ್ತವೆ.

ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಪ್ರಾದೇಶಿಕ ಉದ್ದೇಶದಿಂದ ವಿನ್ಯಾಸಗೊಳಿಸಿದ್ದು, ಇದು ಗರಿಷ್ಠ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಒಂದು ಸಿಡಿತಲೆಯನ್ನು ಒಯ್ಯುವ ಕ್ಷಿಪಣಿಯಾಗಿದ್ದು, ರಸ್ತೆ ಮತ್ತು ರೈಲ್ವೇ ಜಾಲಗಳೆರಡರಲ್ಲೂ ಅತ್ಯಂತ ಸೂಕ್ತವಾಗಿ ಉಡಾವಣೆಗೊಳ್ಳುತ್ತದೆ.

ಅಗ್ನಿ-5 ನಿಜಕ್ಕೂ ದೀರ್ಘ ವ್ಯಾಪ್ತಿಯ ಕಾರ್ಯತಂತ್ರದ ಕ್ಷಿಪಣಿಯಾಗಿದ್ದು, 5,000 ಕಿಲೋಮೀಟರ್‌ಗೂ ಹೆಚ್ಚು ವ್ಯಾಪ್ತಿ ಹೊಂದಿದೆ. ಇದು ರಸ್ತೆಯಲ್ಲಿನ ವಾಹನದ ವೇದಿಕೆಯಿಂದ ಉಡಾವಣೆಗೊಳಿಸಬಲ್ಲದಾಗಿದ್ದು, ಎಂಐಆರ್‌ವಿ ತಂತ್ರಜ್ಞಾನವನ್ನು ಹೊಂದಿದೆ. ಆ ಮೂಲಕ ಹಲವಾರು ಸಿಡಿತಲೆಗಳನ್ನು ವಿವಿಧ ಗುರಿಗಳ ಮೇಲೆ ಪ್ರಯೋಗಿಸಬಲ್ಲದು.

ಸರಳವಾಗಿ ವಿವರಿಸುವುದಾದರೆ, ಅಗ್ನಿ ಪ್ರೈಮ್ ಕ್ಷಿಪಣಿ ಪ್ರಾದೇಶಿಕ ಉದ್ದೇಶ ಮತ್ತು ಕ್ಷಿಪ್ರ ಚಲನೆಯನ್ನು ಪೂರೈಸಿದರೆ, ಅಗ್ನಿ-5 ಖಂಡಾಂತರ ವ್ಯಾಪ್ತಿ ಮತ್ತು ಹಲವು ಗುರಿಗಳ ಮೇಲೆ ದಾಳಿ ನಡೆಸುವ ಕ್ಷಿಪಣಿ. ಇವೆರಡು ಕ್ಷಿಪಣಿಗಳು ಜೊತೆಯಾಗಿ ಒಂದು ಅತ್ಯಾಧುನಿಕ ಮತ್ತು ನಂಬಿಕಾರ್ಹವಾದ ರಕ್ಷಣಾ ಜಾಲವನ್ನು ಪೂರೈಸುತ್ತವೆ. ಆ ಮೂಲಕ ಒಂದು ಜವಾಬ್ದಾರಿಯುತ ಅಣ್ವಸ್ತ್ರ ಶಕ್ತಿ ಎಂಬ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಿ, ಎಲ್ಲ ರೀತಿಯ ಅಪಾಯಗಳನ್ನು ಎದುರಿಸಲು ಸಮರ್ಥವಾಗಿವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com