ಬಿಹಾರ ಪ್ರಚಾರದ ಕಣದಲ್ಲಿ ಜಂಗಲ್‌ ರಾಜ್‌, ವಲಸೆಯದ್ದೇ ಚರ್ಚೆ (ನೇರ ನೋಟ)

ಬಿಹಾರದಲ್ಲಿ ಜಂಗಲ್‌ ರಾಜ್‌ ನಿಂದ ಅತಿ ಹಿಂದುಳಿದವರು, ದಲಿತರು ಹೆಚ್ಚು ಸಂಕಷ್ಟಕ್ಕೆ ಒಳಗಾದವರು. ಎನ್‌ಡಿಎ ಇದರ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಹಿಂದೆ ಅತಿ ಹಿಂದುಳಿದವರು, ದಲಿತರ ಮತಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.
Bihar Elections 2025
ಬಿಹಾರ ವಿಧಾನಸಭಾ ಚುನಾವಣೆ 2025online desk
Updated on

ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಗುರುವಾರ ಮುಗಿದಿದೆ. ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರದ ಕಾವು ಏರಿದೆ. ಜಂಗಲ್‌ ರಾಜ್‌, ಭ್ರಷ್ಟಾಚಾರ, ನಿರುದ್ಯೋಗ, ಉದ್ಯೋಗಕ್ಕಾಗಿ ವಲಸೆ, ಬಿಹಾರದ ಅಭಿವೃದ್ಧಿ ನಿರ್ಲಕ್ಷ್ಯಈ ಸಂಗತಿಗಳ ಸುತ್ತಲೂ ಪ್ರಚಾರ ಆರ್ಭಟಿಸಿದೆ. ರಾಜಕೀಯ ಪಕ್ಷಗಳು ಮತಬೇಟೆ ನಡೆಸಿವೆ.

ಬಿಹಾರವಷ್ಟೇ ಏಕೆ, ದೇಶದ ಯಾವುದೇ ಭಾಗದ ಜನರಿಗೂ ಬಿಹಾರವೆಂದರೆ ಜಂಗಲ್‌ ರಾಜ್‌ ನೆನಪಿನ ಸುರುಳಿ ಬಿಚ್ಚುತ್ತದೆ. ಅಷ್ಟರಮಟ್ಟಿಗೆ ರಾಷ್ಟ್ರೀಯ ಜನತಾದಳದ ಸರ್ವೋಚ್ಛ ನಾಯಕ ಲಾಲೂಪ್ರಸಾದ್‌ ಯಾದವ್‌ ಅವರ 15 ವರ್ಷಗಳ ಆಳ್ವಿಕೆ ಕುಖ್ಯಾತಿ. ಬಿಹಾರ ಇನ್ನೂ ಈ ನೆರಳಿನಿಂದ ಹೊರಬಂದಿಲ್ಲ.

ಬಿಹಾರದಲ್ಲಿ ಕಳೆದ 20 ವರ್ಷಗಳಿಂದ ನಡುವೆ ಒಂಬತ್ತು ತಿಂಗಳು ಹೊರತುಪಡಿಸಿದರೆ ಜೆಡಿಯುನ ನಿತೀಶ್‌ ಕುಮಾರ್ ಅವರೇ ಮುಖ್ಯಮಂತ್ರಿ. ಆದರೂ ಜಂಗಲ್‌ರಾಜ್‌ ನೆನಪಿಸುವ ಘಟನೆಗಳು ನಡೆಯುತ್ತಲೇ ಇವೆ. ಆರ್‌ಜೆಡಿ ಆಳ್ವಿಕೆಯ ಜಂಗಲ್‌ ರಾಜ್‌ ಪ್ರಸ್ತಾಪಿಸುವ ಎನ್‌ಡಿಎ ಬಿಹಾರದಲ್ಲಿ ಈಗ ತನ್ನದೇ ಆಡಳಿತದಲ್ಲೂ ನಡೆಯುತ್ತಿರುವ ಕೊಲೆ, ಅತ್ಯಾಚಾರದ ಬಗ್ಗೆ ಮೌನ ವಹಿಸುತ್ತದೆ.

ಬಿಹಾರದ ರಾಜಕಾರಣದಲ್ಲಿ ಬಾಹುಬಲಿಗಳ ಪ್ರಭಾವವಿದೆ. ಬಾಹುಬಲಿಗಳು ತೋಳ್ಬಲದಿಂದ ಗ್ಯಾಂಗ್‌ ಕಟ್ಟಿಕೊಳ್ಳುತ್ತಾರೆ. ಬಂದೂಕದ ನಳಿಕೆಯಿಂದ ಮಾತಾಡುತ್ತಾರೆ. ಹೆಣಗಳನ್ನು ಉರುಳಿಸುತ್ತಾರೆ. ಕೊಲೆ, ಅಪಹರಣ, ಅತ್ಯಾಚಾರ, ದರೋಡೆ ಹೀಗೆ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಮಗ್ನ. ರಾಜಕೀಯ ಪಕ್ಷಗಳಿಗೂ ನಿಕಟ. ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ. ಸಾಧ್ಯವಾಗದಿದ್ದರೆ ತಮ್ಮ ಪತ್ನಿ, ಮಕ್ಕಳು, ಸಂಬಂಧಿಕರನ್ನು ಕಣಕ್ಕೆ ಇಳಿಸುತ್ತಾರೆ. ಇಂಥವರಿಗೆ ರಾಜಕೀಯ ಪಕ್ಷಗಳು ಮಣೆ ಹಾಕಿವೆ. ಜಂಗಲ್‌ರಾಜ್‌ ಗೆ ಕೊಡುಗೆ ನೀಡಿವೆ. ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಅಷ್ಟೇ. ಆದರೂ ಗೂಂಡಾ ರಾಜ್‌ ಬಗ್ಗೆ ಮಾತಾಡುತ್ತಾರೆ. ಅದು ಬಿಹಾರದ ಪಾಲಿಟಿಕ್ಸ್‌.

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 90 ಕಿ.ಮೀ. ದೂರದ ವಿಧಾನಸಭಾ ಕ್ಷೇತ್ರ. ಹೆಸರು ಮೊಕಾಮಾ. ಮೊನ್ನೆ ಚುನಾವಣಾ ಪ್ರಚಾರದ ವೇಳೆ ಹಿಂಸಾಚಾರ. ಬಾಹುಬಲಿ ದುಲ್ಹಾರಚಂದ್‌ ಯಾದವ್ ಹತ್ಯೆ. ಈ ಕೊಲೆ ಪ್ರಕರಣದಲ್ಲಿ ಮೊಕಾಮಾ ಜೆಡಿಯು ಅಭ್ಯರ್ಥಿ, ಮಾಜಿ ಶಾಸಕ ಅನಂತ ಸಿಂಗ್ ಆರೋಪಿ. ಬಂಧನ. ಅನಂತ ಸಿಂಗ್‌ನ ಮತ್ತೊಂದು ಹೆಸರು ಛೋಟೆ ಸರ್ಕಾರ್‌. ಪಾತಕ ಲೋಕದ ಬಗ್ಗೆ ಮಾತಾಡುತ್ತೀರಿ. ಹಾಗಿದ್ದರೆ ಇದೇನು ಎಂಬುದು ಎನ್‌ಡಿಎ ನಾಯಕರಿಗೆ ಮಹಾಘಟಬಂಧನ್‌ ಪ್ರಶ್ನೆ. ಈ ಘಟನೆ ನಂತರ ಪಾತಕಲೋಕ ಮತ್ತಷ್ಟು ಸದ್ದು. ಆ ಪ್ರದೇಶದಲ್ಲಿ ಭೀತಿಯ ನೆರಳು. ನಿತೀಶ್‌ಕುಮಾರ್ ಆಳ್ವಿಕೆಯಲ್ಲಿ ಬಿಹಾರ ಅಭಿವೃದ್ಧಿ ಕಂಡಿದೆ. ಆದರೆ, ಕ್ರಿಮಿನಲ್‌ ದಂಧೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಆರ್‌ಜೆಡಿ ಆಡಳಿತದಲ್ಲಿ ಬಿಹಾರ ಕಂಡ ಜಂಗಲ್ ರಾಜ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತದಾರರನ್ನು ಎಚ್ಚರಿಸುವುದನ್ನು ಮರೆಯುವುದಿಲ್ಲ. ಇನ್ನು ನೂರು ವರ್ಷಗಳಾದರೂ ಜನರು ಜಂಗಲ್‌ ರಾಜ್ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇದು ಲಾಲೂಪ್ರಸಾದ್ ಯಾದವ್ ಅವರ ಆಡಳಿತದ ವೈಖರಿ. ಜಂಗಲ್ ರಾಜ್‌ ಜೊತೆಗಿದ್ದವರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿ ಅವರು.

ಬಿಹಾರದಲ್ಲಿ ಜಂಗಲ್‌ ರಾಜ್‌ ನಿಂದ ಅತಿ ಹಿಂದುಳಿದವರು, ದಲಿತರು ಹೆಚ್ಚು ಸಂಕಷ್ಟಕ್ಕೆ ಒಳಗಾದವರು. ಎನ್‌ಡಿಎ ಇದರ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಹಿಂದೆ ಅತಿ ಹಿಂದುಳಿದವರು, ದಲಿತರ ಮತಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.

ಚುನಾವಣಾ ಕಣದಲ್ಲಿ ಜಂಗಲ್‌ ರಾಜ್‌ ಹೊರತುಪಡಿಸಿದರೆ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಮತ್ತೊಂದು ವಿಷಯ ವಲಸೆ. ಬಿಹಾರದಲ್ಲಿ 25 ವರ್ಷದೊಳಗಿನ ಯುವ ಸಮುದಾಯ ದೇಶದಲ್ಲೇ ಹೆಚ್ಚು. ಆದರೆ, ಉದ್ಯೋಗದ ಅವಕಾಶವಿಲ್ಲ. ಬಂಡವಾಳ ಹೂಡಿಕೆಯು ಇಡೀ ದೇಶದಲ್ಲಿ ಇಲ್ಲಿಯೇ ಕಡಿಮೆ. ಹೀಗಾಗಿ, ಉದ್ಯೋಗ ಅರಸಿ ಬಿಹಾರದಿಂದ ವಲಸೆ ಅಧಿಕ.

Bihar Elections 2025
ಬಿಹಾರದಲ್ಲಿ ನರೇಂದ್ರ ಮೋದಿಯ ಹನುಮಾನ್‌ ಚಿರಾಗ್‌ ಪಾಸ್ವಾನ್‌ (ನೇರ ನೋಟ)

ಉದ್ಯೋಗ ಸೃಷ್ಟಿಸಿ, ವಲಸೆ ತಪ್ಪಿಸಿ ಎಂದು ಮಹಾಘಟಬಂಧನ್‌ ಈ ಬಾರಿ ಪ್ರಚಾರೋಂದೋಲನವನ್ನೇ ನಡೆಸಿತು. ಬಿಹಾರದಲ್ಲಿ 2011ರಲ್ಲಿ ನಡೆದ ಜನಗಣತಿ ಪ್ರಕಾರ ಬಿಹಾರದಿಂದ 74.54 ಲಕ್ಷ ಜನರು ದೇಶದ ನಾನಾ ಭಾಗಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಬಿಹಾರ ಸರಕಾರವು ದೇಶದ ಇತರ ಪ್ರದೇಶಗಳಿಗೆ ಕಾರ್ಮಿಕರನ್ನು ಪೂರೈಸುವ ರಾಜ್ಯವನ್ನಾಗಿ ಬಿಹಾರವನ್ನು ರೂಪಿಸಿದೆ. ವಲಸೆಯ ಹಬ್‌ ಮಾಡಿದೆ. ಬಿಹಾರ ಒಂದು ಕಾಲದಲ್ಲಿ ಕಬ್ಬು, ಸೆಣಬು, ರೇಷ್ಮೆ, ಡೈರಿ ಉದ್ಯಮಗಳಿಗೆ ಪ್ರಸಿದ್ದ. ಇವತ್ತು ನಿರುದ್ಯೋಗ ಮತ್ತು ವಲಸೆಗೆ ಇನ್ನೊಂದು ಹೆಸರಾಗಿದೆ ಎಂಬುದು ಕಾಂಗ್ರೆಸ್‌ ಆರೋಪ.

ಬಿಹಾರದ ಮತ್ತೊಂದು ಪೀಳಿಗೆಯ ಯುವ ಸಮುದಾಯ ವಲಸೆ ಹೋಗುವುದನ್ನು ತಪ್ಪಿಸುವುದು ಹೇಗೆ? ಯಾರೇ ಸರಕಾರ ರಚಿಸಿದರೂ ವಲಸೆ ತಪ್ಪಿಸುತ್ತಾರೆಯೇ? ಉದ್ಯೋಗ ಸೃಷ್ಟಿಸುತ್ತಾರೆಯೇ? ಇದು ಬಿಹಾರಿಗರ ಪ್ರಶ್ನೆ.

ಬಿಹಾರದ ಚುನಾವಣಾ ಪ್ರಚಾರ ಕಣದಲ್ಲಿ ಜನನಾಯಕ ಭಾರತರತ್ನ ಕರ್ಪೂರಿ ಠಾಕೂರ್ ಅವರ ಹೆಸರು ಪ್ರಸ್ತಾಪವಾಗಿದೆ. ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದಾಗ ಅವರ ಸರಕಾರಕ್ಕೆ ಜನಸಂಘ ನೀಡಿದ್ದ ಬೆಂಬಲವನ್ನು ಏಪ್ರಿಲ್‌ 1979 ರಲ್ಲಿ ಹಿಂತೆಗೆದುಕೊಂಡಿತು. ಕರ್ಪೂರಿ ಠಾಕೂರ್‌ ಸರಕಾರ ಉರುಳಿತು. ಕರ್ಪೂರಿ ಠಾಕೂರ್‌ ಅವರ ಸರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಮುಂದಾದಾಗ ಜನಸಂಘ ಹೀಗೆ ಮಾಡಿತು ಎಂಬುದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ಆರೋಪ.

ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಎಂದು ಎನ್‌ಡಿಎ ನೆನಪು ಮಾಡಿದೆ. ನರೇಂದ್ರ ಮೋದಿ ಅವರು ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳ ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಿ ಜನನಾಯಕ ಕರ್ಪೂರಿ ಠಾಕೂರ್‌ ಅವರಿಗೆ ಗೌರವ ಸಲ್ಲಿಸಿ ಅಲ್ಲಿಂದಲೇ ತಮ್ಮ ಬಿಹಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಸಮಷ್ಟಿಪುರ ಜಿಲ್ಲೆಯ ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು. ಕರ್ಪೂರಿ ಠಾಕೂರ್ ಅವರ ಪುತ್ರ, ಜೆಡಿಯು ರಾಜ್ಯಸಭಾ ಸದಸ್ಯ ರಾಮನಾಥ ಠಾಕೂರ್ ಅವರು ಕೇಂದ್ರದಲ್ಲಿ ಸಚಿವರು.

ಕರ್ಪೂರಿ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ ಅವರ ಈ ನಡೆ ಅತಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗಿದೆ. ಬಿಹಾರದ ಜನಸಂಖ್ಯೆಯಲ್ಲಿ ಶೇ. 36.01ರಷ್ಟು ಅತಿ ಹಿಂದುಳಿದ ವರ್ಗದವರಿದ್ದಾರೆ. ಕರ್ಪೂರಿ ಠಾಕೂರ್ ಅತಿ ಹಿಂದುಳಿದ ಸವಿತಾ ಸಮಾಜದವರು. ಜನನಾಯಕ ಎಂದೇ ಹೆಸರಾದವರು.

Bihar Elections 2025
ಬಿಹಾರ ಕಣದಲ್ಲಿ ಪ್ರಶಾಂತ ಕಿಶೋರ್‌ ಕಿಂಗ್‌ ಮೇಕರ್ ಆಗುವರೇ? (ನೇರ ನೋಟ)

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ್‌ ಜಿದ್ದಿಗೆ ಬಿದ್ದಂತೆ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಇವುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಆರ್ಥಿಕವಾಗಿ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಇದು ಗೊತ್ತಿದ್ದರೂ ಮತದಾರರಲ್ಲಿ ಭ್ರಮೆ ಬಿತ್ತುವ ಕಸರತ್ತು ನಡೆಸಿವೆ.

ಎನ್‌ಡಿಎ ತನ್ನ 69 ಪುಟಗಳ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ, ನಾಲ್ಕು ಮೆಟ್ರೋರೈಲು ಯೋಜನೆಗಳು, ನಾಲ್ಕು ಹೊಸ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ, ಏಳು ಎಕ್ಸಪ್ರೆಸ್‌ ಹೆದ್ದಾರಿಗಳ ನಿರ್ಮಾಣ, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಭರವಸೆಗಳನ್ನು ನೀಡಿವೆ.

ಮಹಾಘಟಬಂಧನ್‌ ತನ್ನ 32 ಪುಟಗಳ ಪ್ರಣಾಳಿಕೆಯಲ್ಲಿ ಬಿಹಾರದಲ್ಲಿ ಪ್ರತಿ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡುತ್ತೇವೆ. ಅಧಿಕಾರಕ್ಕೆ ಬಂದ 20 ದಿನಗಳಲ್ಲೇ ಈ ಕುರಿತು ಶಾಸನ ರೂಪಿಸುತ್ತೇವೆ. ವಿದ್ಯುತ್ 200 ಯೂನಿಟ್‌ ವರೆಗೂ ಉಚಿತ ಎಂದು ವಚನ ನೀಡಿದೆ.

ಎನ್‌ಡಿಎ ಇರಲಿ, ಮಹಾಘಟಬಂಧನವೇ ಆಗಲಿ ಪ್ರಣಾಳಿಕೆಯ ಅನುಷ್ಠಾನಕ್ಕೆ ಸಂಪನ್ಮೂಲವನ್ನು ಒದಗಿಸಬಲ್ಲರೇ? ಜಂಗಲ್‌ ರಾಜ್‌ ನಿಂದ ಬಿಹಾರವನ್ನು ಮುಕ್ತಗೊಳಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವರೇ? ವಲಸೆ ತಪ್ಪಿಸಲು ಉದ್ಯೋಗ ಸೃಷ್ಟಿಸುವರೇ? ಇದು ಬಿಹಾರಿಗರ ಪ್ರಶ್ನೆ.ೇ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com