ಬಿಹಾರ ಕಣದಲ್ಲಿ ಪ್ರಶಾಂತ ಕಿಶೋರ್‌ ಕಿಂಗ್‌ ಮೇಕರ್ ಆಗುವರೇ? (ನೇರ ನೋಟ)

ಪ್ರಶಾಂತ ಕಿಶೋರ್ ಗುರಿ ಸಾಧನೆಗಾಗಿ ಮೈದಾನದ ರಾಜಕಾರಣದಲ್ಲಿ ಬೆವರು ಸುರಿಸುತ್ತಿದ್ದಾರೆ. ತೆರೆಯ ಹಿಂದೆ ನಿಂತು ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದವರು ಈಗ ತೆರೆಯ ಮೇಲೆ ಚದುರಂಗ ಆಡುತ್ತಿದ್ದಾರೆ
Prashanth Kishor and CM Nitish Kumar
ಪ್ರಶಾಂತ್ ಕಿಶೋರ್, ಸಿಎಂ ನಿತೀಶ್ ಕುಮಾರ್ (ಸಾಂದರ್ಭಿಕ ಚಿತ್ರ) Casual Image
Updated on

ಬಿಹಾರ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ರಾಜಕೀಯ ಪಕ್ಷಗಳ ನೇತಾರರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಆ ರಾಜ್ಯವು ಎನ್‌ ಡಿಎ ಹಾಗೂ ಮಹಾಘಟಬಂಧನ್‌ ನಡುವೆಯೇ ಜಿದ್ದಾಜಿದ್ದಿ ಕಣ. ಈಗ ಮೂರನೇ ಶಕ್ತಿಯ ಪ್ರವೇಶ. ಈ ತೃತೀಯ ಶಕ್ತಿ ಯಾರ ಮತಗಳನ್ನು ಸೆಳೆದು ಅವರ ಗೆಲುವಿಗೆ ಅಡ್ಡಿಯಾಗುತ್ತಾರೆಂಬುದೇ ಕುತೂಹಲದ ಪ್ರಶ್ನೆ. ಈ ಮೂರನೇ ಶಕ್ತಿ ಜನ್‌ ಸುರಾಜ್‌ ಪಕ್ಷ. ಇದರ ಸಂಸ್ಥಾಪಕ ಪ್ರಶಾಂತ ಕಿಶೋರ್‌.

ಪ್ರಶಾಂತ ಕಿಶೋರ್‌ ಚುನಾವಣಾ ತಂತ್ರಗಳ ನಿಪುಣನಾಗಿಯೇ ದೇಶದಲ್ಲಿ ಹೆಸರುವಾಸಿ. ಸುಮಾರು ಹತ್ತು ವರ್ಷಗಳ ಕಾಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಚುನಾವಣಾ ತಂತ್ರಗಳನ್ನು ಹೆಣೆದು ಕೊಟ್ಟ, ಪ್ರಚಾರದ ತಂತ್ರಗಳನ್ನು ರೂಪಿಸಿದ ಅವರೇ ಈಗ ಚುನಾವಣಾ ಅಖಾಡದಲ್ಲಿ ಸತ್ವ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ. ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದು ತೃತೀಯಶಕ್ತಿಯಾಗಿ ಉದಯಿಸಲು ಹೊರಟಿದ್ದಾರೆ. ಆದರೆ, ಜಾತಿ ಸಮೀಕರಣದ ಬಿಹಾರದ ರಾಜಕಾರಣದಲ್ಲಿ ಇದು ಅಷ್ಟು ಸುಲಭದ ಮಾತಲ್ಲ.

ಪ್ರಶಾಂತ ಕಿಶೋರ್ ಗುರಿ ಸಾಧನೆಗಾಗಿ ಮೈದಾನದ ರಾಜಕಾರಣದಲ್ಲಿ ಬೆವರು ಸುರಿಸುತ್ತಿದ್ದಾರೆ. ತೆರೆಯ ಹಿಂದೆ ನಿಂತು ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದ ಪ್ರಶಾಂತ ಕಿಶೋರ್‌ ಈಗ ತೆರೆಯ ಮೇಲೆ ಚದುರಂಗ ಆಡುತ್ತಿದ್ದಾರೆ. ಪೂರ್ಣಪ್ರಮಾಣದ ರಾಜಕಾರಣಿಯಾಗಿ ಪರಿವರ್ತನೆಯಾಗಿದ್ದಾರೆ.

ಪ್ರಶಾಂತ ಕಿಶೋರ್ ಪಕ್ಷ ಚುನಾವಣಾ ಕಣಕ್ಕೆ ಇಳಿದಿರುವುದು ಇದೇನೂ ಹೊಸದಲ್ಲ. ಹಾಗೇ ನೋಡಿದರೆ ಕಳೆದ ವರ್ಷ ಬಿಹಾರದ ನಾಲ್ಕು ಅಸೆಂಬ್ಲಿ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿತು. ಆದರೆ, ಉಪ ಚುನಾವಣೆಯೇ ಬೇರೆ, ಸಾರ್ವತ್ರಿಕ ಚುನಾವಣೆಯೇ ಬೇರೆ. ಪ್ರಶಾಂತ ಕಿಶೋರ್‌ ಸಾರ್ವತ್ರಿಕ ಚುನಾವಣೆಗೂ ಮುನ್ನ ತಮ್ಮ ಪಕ್ಷವನ್ನು ಸಂಘಟಿಸುವ ಪ್ರಯತ್ನ ನಡೆಸಿದ್ದಾರೆ.

ಎನ್‌ಡಿಎ ಹಾಗೂ ಮಹಾಘಟಬಂಧನ್‌ ನಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಬಿಹಾರದ ರಾಜಕಾರಣ ಕಳೆದ 30 ವರ್ಷಗಳಿಂದ ನಿತೀಶ್‌ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ ಯಾದವ್‌ ಅವರ ನಡುವಿನ ಆಡುಂಬೊಲವಾಗಿದೆ. ಈ ಇಬ್ಬರು ಹೊರತಾಗಿ ಮೂರನೇ ಶಕ್ತಿ ಬೇಕಿದೆ. ಇದು ತನಗೆ ಅನುಕೂಲ ಆಗಲಿದೆ ಎಂಬುದು ಪ್ರಶಾಂತ ಕಿಶೋರ್‌ ನಿರೀಕ್ಷೆ.

ಪ್ರಶಾಂತ ಕಿಶೋರ್‌ ಗೆಲುವಿನ ಆತ್ಮವಿಶ್ವಾಸದಿಂದ ಅಖಾಡಕ್ಕೆ ಧುಮುಕಿದ್ದಾರೆ. ಆದರೆ, ಪ್ರಾರಂಭದಲ್ಲೇ ಅವರ ಪಕ್ಷಕ್ಕೆ ವಿಘ್ನ ಎದುರಾಗಿದೆ. ಮೂರು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜನ್‌ ಸುರಾಜ್‌ ಪಕ್ಷದ ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್‌ ಪಡೆದು ಬಿಜೆಪಿಗೆ ಬೆಂಬಲ ಘೋಷಿಸಿ ಪ್ರಶಾಂತ್‌ ಕಿಶೋರ್ ಅವರಿಗೆ ಶಾಕ್‌ ನೀಡಿದ್ದಾರೆ. ತಮ್ಮ ಮೂವರು ಅಭ್ಯರ್ಥಿಗಳು ಬಿಜೆಪಿಯ ಚಿತಾವಣೆಯಿಂದಲೇ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಇತರ ಬಿಜೆಪಿ ನಾಯಕರ ಮೇಲೆ ಅವರು ಆರೋಪ ಮಾಡಿದ್ದಾರೆ. ಚುನಾವಣಾ ಕಣದಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳುವುದೇ ಪ್ರಶಾಂತ ಕಿಶೋರ್ ಅವರಿಗೆ ಈಗ ಸವಾಲು ಆಗಿದೆ.

ಬಿಹಾರದಲ್ಲಿ ಅತಿ ಹಿಂದುಳಿದ ವರ್ಗಗಳು ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಶಾಂತ ಕಿಶೋರ್‌ ಈ ವರ್ಗದವರಿಗೆ ಹೆಚ್ಚಿನ ಸೀಟುಗಳನ್ನು ನೀಡಿದ್ದಾರೆ. ಟಿಕೆಟ್‌ ನೀಡುವಾಗ ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಲಾಗಿದೆ. ಅತಿ ಹಿಂದುಳಿದ ವರ್ಗದವರಿಗೆ ನಾವು ನೀಡಿರುವಷ್ಟು ಟಿಕೆಟ್‌ ಯಾವ ಪಕ್ಷವೂ ನೀಡಿಲ್ಲ ಎಂಬುದನ್ನು ಪ್ರಚಾರದ ವೇಳೆ ಪ್ರಶಾಂತ ಕಿಶೋರ್ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಜನ್‌ ಸುರಾಜ್‌ ಪಕ್ಷದಿಂದ ವೈದ್ಯರು, ವಕೀಲರು, ಶಿಕ್ಷಣ ತಜ್ಞರು, ನಿವೃತ್ತ ಅಧಿಕಾರಿಗಳು ಕಣಕ್ಕೆ ಇಳಿದಿದ್ದಾರೆ. ಬ್ರಾಹ್ಮಣ ಸಮಾಜದ ಪ್ರಶಾಂತ ಕಿಶೋರ್‌ ಸ್ವತಃ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿಲ್ಲ. ಅತಿ ಹಿಂದುಳಿದವರು ಹಾಗೂ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಹಾರದಲ್ಲಿ ಇದು ಅವರ ಚುನಾವಣಾ ತಂತ್ರದ ಒಂದು ಭಾಗವೂ ಆಗಿರಬಹುದು. ಪ್ರಶಾಂತ ಕಿಶೋರ್ ಈ ಹಿಂದೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ರಘೋಪುರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಿದ್ದ ಎಂದಿದ್ದರು. ನಂತರ ತಂತ್ರ ಬದಲಿಸಿದರು.

ಪ್ರಶಾಂತ ಕಿಶೋರ್‌ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸದಿರುವ ಬಗ್ಗೆ ಬಿಹಾರದ ಕೆಲವು ರಾಜಕೀಯ ವಿಶ್ಲೇಷಕರು ಹೀಗೆ ಅಭಿಪ್ರಾಯ ಪಡುತ್ತಾರೆ- ಇದು ಬಿಹಾರ. ಮಹಾರಾಷ್ಟ್ರವಲ್ಲ. ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ತಾವು ಸ್ಪರ್ಧಿಸದೇ ತಮ್ಮ ಪಕ್ಷವನ್ನು ಗೆಲ್ಲಿಸಿಕೊಂಡು ಬಂದು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುತ್ತಿದ್ದರು. ಪ್ರಶಾಂತ ಕಿಶೋರ್ ಅವರು ಬಾಳಾ ಠಾಕ್ರೆ ಅಲ್ಲ. ಪ್ರಶಾಂತ ಕಿಶೋರ್ ಇದನ್ನು ನೆನಪಿಡಬೇಕು.

Prashanth Kishor and CM Nitish Kumar
ಬಿಹಾರ ಚುನಾವಣೆ: ಬಿಜೆಪಿ ಎದುರು ಚೌಕಾಶಿ; ಶಕ್ತಿ ಕಳೆದುಕೊಂಡ ನಿತೀಶ್‌ (ನೇರ ನೋಟ)
ಬಿಹಾರದ ಜನರು ಈವರೆಗೂ ಎರಡು ಮೈತ್ರಿಕೂಟಗಳ ನಡುವೆ ಪರ್ಯಾಯ ರಾಜಕೀಯ ಪಕ್ಷ ಇಲ್ಲ ಅಂತಿದ್ದರು. ಈಗ ಜನ್‌ ಸುರಾಜ್‌ ಪರ್ಯಾಯವಿದೆ. ಮತದಾರರು ಈ ಬಾರಿ ತಪ್ಪು ಮಾಡಿದರೆ ಬಿಹಾರದ ಜನರು ಕೆಲಸಕ್ಕಾಗಿ ವಲಸೆ ಹೋಗುವುದು ತಪ್ಪುವುದಿಲ್ಲ. ಈಗ ಚೆಂಡು ಮತದಾರರ ಅಂಗಳದಲ್ಲಿದೆ. ಮತದಾರರು ನಿರ್ಧರಿಸಬೇಕು ಎನ್ನುತ್ತಾರೆ ಪ್ರಶಾಂತ ಕಿಶೋರ್.

ಬಿಹಾರದಲ್ಲಿ ಕಳೆದ 2020ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ನಡುವೆಯೇ ನೇರ ಸ್ಪರ್ಧೆ ಇತ್ತು. ಎರಡೂ ಮೈತ್ರಿಕೂಟಗಳು ಶೇ.37ರಷ್ಟು ಮತಗಳನ್ನು ಹಂಚಿಕೊಂಡಿತ್ತು. ಈ ಎರಡು ಮೈತ್ರಿಕೂಟಗಳ ಮಧ್ಯೆ ಕೇವಲ ಶೇ.0.03 ಮತಗಳು ವ್ಯತ್ಯಾಸವಿದ್ದವು. ಆದರೆ, ಸೀಟುಗಳ ವಿಚಾರಕ್ಕೆ ಬಂದರೆ ಎನ್‌ಡಿಎ 125, ಮಹಾಘಟಬಂಧನ್‌ 110 ಸ್ಥಾನಗಳನ್ನು ಪಡೆದಿತ್ತು. ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಚಿರಾಗ್‌ ಪಾಸ್ವಾನ್‌ ಅವರ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್‌) ಪಕ್ಷವು 2020ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಇದು ಸುಮಾರು 35 ಕ್ಷೇತ್ರಗಳಲ್ಲಿ ಆರ್‌ಜೆಡಿಯ ಗೆಲುವಿಗೆ ಪರೋಕ್ಷವಾಗಿ ನೆರವಾಗಿತ್ತು. ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿ ಆಗ ಎನ್ ಡಿಎ ಅಂಗಪಕ್ಷವಾಗಿರಲಿಲ್ಲ. ಆದರೆ, ಚಿರಾಗ್‌ ಪಾಸ್ವಾನ್ ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹನುಮಾನ್‌ ಎಂದು ಘೋಷಿಸಿಕೊಂಡಿದ್ದರು. 137 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಹುರಿಯಾಳುಗಳನ್ನು ಹೂಡಿದ್ದರು. ಇದರಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳ ವಿರುದ್ಧವೇ ಕಣಕ್ಕೆ ಇಳಿಸಿದ್ದರು. ಆದರೆ, ಚಿರಾಗ್‌ ಪಾಸ್ವಾನ್‌ ಪಕ್ಷ ಗೆದ್ದದ್ದು ಕೇವಲ ಒಂದೇ ಸೀಟು. ಆದರೆ, ಇದು ಅನೇಕ ಕ್ಷೇತ್ರಗಳಲ್ಲಿ ಜೆಡಿಯು ಸೋಲಿಗೆ ಕಾರಣವಾಯಿತು. ಆರ್‌ಜೆಡಿಗೆ ನೆರವಾಯಿತು. ಆ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಗಳ ಗೆಲುವಿಗೆ ಸೀಮಿತವಾಯಿತು. ಕಳೆದ ಎರಡು ದಶಕಗಳಲ್ಲಿ ನಿತೀಶ್‌ ಕುಮಾರ್‌ ಅವರ ಅತ್ಯಂತ ಕಳಪೆ ಸಾಧನೆ ಇದು. ಚಿರಾಗ್‌ ಪಾಸ್ವಾನ್ ಅವರ ಎಲ್‌ಜೆಪಿ (ರಾಮ್‌ ವಿಲಾಸ್‌) ಈಗ ಎನ್ ಡಿ ಎ ಅಂಗಪಕ್ಷವಾಗಿದೆ.

ಪ್ರಶಾಂತ ಕಿಶೋರ್ ಈ ಬಾರಿ 2020ರ ಚಿರಾಗ್‌ ಪಾಸ್ವಾನ್‌ ಅವರ ಪಾತ್ರವನ್ನು ನಿರ್ವಹಿಸುವರೇ? ಹೀಗಾದರೆ ಇದು ಎನ್ ಡಿ ಎ ಅಥವಾ ಮಹಾಘಟಬಂಧನ್‌ ಯಾರ ಗೆಲುವಿಗೆ ಅಡ್ಡಿ ಎಂಬ ಕುತೂಹಲವಿದೆ. ನಗರ ಪ್ರದೇಶಗಳಲ್ಲಿ ಅದರಲ್ಲೂ ಯುವ ಸಮುದಾಯದವರಲ್ಲಿ ಪ್ರಶಾಂತ ಕಿಶೋರ್‌ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ, ಎನ್‌ಡಿಎ ಮತಗಳನ್ನು ಪ್ರಶಾಂತ ಕಿಶೋರ್‌ ಸೆಳೆಯಬಹುದು ಎಂಬ ಲೆಕ್ಕಾಚಾರವಿದೆ.

Prashanth Kishor and CM Nitish Kumar
ಆಡಳಿತ ವೈಫಲ್ಯದ ಲಾಭ ಪಡೆಯಲೂ ಪ್ರತಿಪಕ್ಷ ಬಿಜೆಪಿ ವಿಫಲ (ನೇರ ನೋಟ)

ಬಿಹಾರದ ಜನರು ಈವರೆಗೂ ಎರಡು ಮೈತ್ರಿಕೂಟಗಳ ನಡುವೆ ಪರ್ಯಾಯ ರಾಜಕೀಯ ಪಕ್ಷ ಇಲ್ಲ ಅಂತಿದ್ದರು. ಈಗ ಜನ್‌ ಸುರಾಜ್‌ ಪರ್ಯಾಯವಿದೆ. ಮತದಾರರು ಈ ಬಾರಿ ತಪ್ಪು ಮಾಡಿದರೆ ಬಿಹಾರದ ಜನರು ಕೆಲಸಕ್ಕಾಗಿ ವಲಸೆ ಹೋಗುವುದು ತಪ್ಪುವುದಿಲ್ಲ.

ಈಗ ಚೆಂಡು ಮತದಾರರ ಅಂಗಳದಲ್ಲಿದೆ. ಮತದಾರರು ನಿರ್ಧರಿಸಬೇಕು ಎನ್ನುತ್ತಾರೆ ಪ್ರಶಾಂತ ಕಿಶೋರ್.

ಪ್ರಶಾಂತ ಕಿಶೋರ್‌ ಪ್ರಚಾರದ ವೇಳೆ ಜನರ ಜವಾಬ್ದಾರಿಯನ್ನು ನೆನಪು ಮಾಡಿಕೊಡುತ್ತಿದ್ದಾರೆ. ನಾನು ಏನು ಹೇಳಬೇಕೋ ಅದನ್ನು ಈಗಾಗಲೇ ಹೇಳಿದ್ದೇನೆ. ಭ್ರಷ್ಟರು ಬೇಕೇ? ಪ್ರಾಮಾಣಿಕರು ಬೇಕೇ? ಆಯ್ಕೆ ಜನರದ್ದು. ಯಾವ ರೀತಿಯ ಸರಕಾರ ಹಾಗೂ ನಾಯಕರು ಬೇಕು ಎಂಬುದನ್ನು ಜನತೆ ನಿರ್ಧರಿಸಲಿ. ಈಗಿರುವ ದುಸ್ಥಿತಿಯಲ್ಲೇ ಮುಂದುವರಿಯಬೇಕು ಎನ್ನುವುದಾದರೆ ಅವರಿಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡಿಕೊಳ್ಳಲಿ. ಜನರಿಗೆ ಉತ್ತಮ ಸರಕಾರ ಬೇಕು, ಅವರ ಮಕ್ಕಳಿಗೆ ಉಜ್ವಲ ಭವಿಷ್ಯ ಬೇಕು ಎನ್ನುವುದಾರೆ ಜನ್‌ ಸುರಾಜ್‌ ಪಕ್ಷ ಪರ್ಯಾಯವಾದ ಆಯ್ಕೆಯಾಗಿದೆ ಎಂದು ಪ್ರಶಾಂತ ಕಿಶೋರ್‌ ಪ್ರಚಾರ ಮಾಡುತ್ತಿದ್ದಾರೆ.

ಈ ಮಧ್ಯೆ ಮಹಾಘಟಬಂಧನ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಗುರುವಾರ ಘೋಷಿಸಿದೆ. ಮಹಾಘಟಬಂಧನ್‌ ಒಳಗೆ ಎಲ್ಲವೂ ಸರಿಯಿಲ್ಲ. ಆದರೂ, ತೇಜಸ್ವಿ ಯಾದವ್‌ ಸಿಎಂ ಅಭ್ಯರ್ಥಿ ಎಂದು ಮತದಾನಕ್ಕೆ ಮುನ್ನ ಪ್ರಕಟಿಸದೇ ಮಹಾಘಟಬಂಧನ್‌ ಗೆ ಬೇರೆ ದಾರಿ ಇರಲಿಲ್ಲ. ಏಕೆಂದರೆ, ಬಿಹಾರದಲ್ಲಿ ತೇಜಸ್ವಿ ಯಾದವ್ ಅವರೇ ಮಹಾಘಟಬಂಧನ್‌ ನಲ್ಲಿರುವ ಮಾಸ್‌ ಲೀಡರ್‌.

ಯಾದವ ಸಮಾಜದ ತೇಜಸ್ವಿ ಯಾದವ್‌ ಮಹಾಘಟಬಂಧನ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ ಎದುರಾಳಿಗಳು ತಮ್ಮ ತಂತ್ರ ಬದಲಿಸಿಕೊಳ್ಳಬೇಕಾಗಬಹುದು. ಪ್ರಶಾಂತ ಕಿಶೋರ್‌ ಪ್ರಕಾರ ಬಿಹಾರದಲ್ಲಿ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಶಕ್ತಿಯೇ ಅಲ್ಲ. ಆದರೆ, ಮುಖ್ಯಮಂತ್ರಿ ಉಮೇದುವಾರರಾಗಿ ತೇಜಸ್ವಿ ಯಾದವ್‌ ಅವರನ್ನು ಘೋಷಿಸಿರುವ ಮಹಾಘಟಬಂಧನ್‌ ನಡೆಯನ್ನು ಹೇಗೆ ಎದುರಿಸುವರು?

ಬೇರೆಯವರಿಗೆ ತಂತ್ರಗಳನ್ನು ಹೆಣೆದು ಸೈ ಎನಿಸಿಕೊಂಡವರು ತಮಗಾಗಿಯೇ ರೂಪಿಸಿಕೊಂಡ ತಂತ್ರಗಳಲ್ಲಿ ಯಶಸ್ವಿಯಾಗುವರೇ? ಎನ್‌ಡಿಎ- ಮಹಾಘಟಬಂಧನ್‌ ಮಧ್ಯೆ ಪ್ರಶಾಂತ ಕಿಶೋರ್‌ ಕಿಂಗ್‌ ಮೇಕರ್ ಆಗುವರೇ? ನವೆಂಬರ್ 14 ರಂದು ಉತ್ತರ ಸಿಗಲಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com