
ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಈಗ ಫಿಫ್ಟಿ-ಫಿಫ್ಟಿ.
ಬಿಹಾರದಲ್ಲಿ ಜೆಡಿಯು ಮೊದಲು ಬಿಜೆಪಿಗೆ ಹಿರಿಯ ದೋಸ್ತಿ ಆಗಿತ್ತು. ಈಗ ಬಿಜೆಪಿ-ಜೆಡಿಯು ಸರಿಸಮಾನರು. ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಜೆಡಿಯು ತಲಾ 101 ಸ್ಥಾನಗಳನ್ನು ಹಂಚಿಕೊಂಡಿವೆ. ಅಲ್ಲಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಚ್ಚಿನ ಸ್ಥಾನ ದಕ್ಕಿಸಿಕೊಳ್ಳುವ ಚೌಕಾಶಿಯ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
ಎನ್‌ಡಿಎ ಸೀಟು ಹಂಚಿಕೆ ಒಪ್ಪಂದದಲ್ಲಿ ಈ ಅಂಶ ಈ ಬಾರಿ ಸ್ಪಟಿಕ ಸ್ಪಷ್ಟ. ಬಿಹಾರದ ಎನ್‌ಡಿಎನಲ್ಲಿ ಜೆಡಿಯು ಇಷ್ಟು ವರ್ಷಗಳ ಕಾಲ ಡ್ರೈವಿಂಗ್ ಸೀಟಿನಲ್ಲಿತ್ತು. ಈಗ ಎನ್‌ಡಿಎ ಎಂಬ ವಾಹನಕ್ಕೆ ಇಬ್ಬರು ಚಾಲಕರು. ಎನ್‌ಡಿಎ ಅಂಗಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಏರ್ಪಟ್ಟಿದ್ದರೂ ಯಾರಿಗೂ ಸಮಾಧಾನವಿಲ್ಲ.
ಎನ್‌ಡಿಎ ಸ್ಥಾನ ಹೊಂದಾಣಿಕೆಯಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ (ರಾಮ್ ವಿಲಾಸ್ ) 29, ಉಪೇಂದ್ರ ಕುಶ್ವಾಹ ನಾಯಕತ್ವದ ರಾಷ್ಟ್ರೀಯ ಲೋಕ ಮೋರ್ಚಾ ಹಾಗೂ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದುಸ್ತಾನಿ ಅವಾಮ್ ಮೋರ್ಚಾಗೆ (ಜಾತ್ಯತೀತ) ತಲಾ ಆರು ಸ್ಥಾನಗಳು ದಕ್ಕಿವೆ. ಆದರೆ, ಗೊಂದಲ ಮುಂದುವರಿದಿದೆ.
ದೇಶದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಲಾಗಾಯ್ತಿನಿಂದಲೂ ವಿಶೇಷವಾಗಿ ಗಮನ ಸೆಳೆಯುತ್ತಾ ಬಂದಿದೆ. ಒಂದು ಉತ್ತರಪ್ರದೇಶ. ಮತ್ತೊಂದು ಬಿಹಾರ. ಉತ್ತರ ಪ್ರದೇಶ ಗೆದ್ದವರು ದೇಶ ಗೆಲ್ಲುತ್ತಾರೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾರಣಕ್ಕೆ ಉತ್ತರ ಪ್ರದೇಶ ಎಲೆಕ್ಷನ್ ದೇಶದಲ್ಲೇ ಕುತೂಹಲಕಾರಿ.
ಬಿಹಾರ ಗಮನ ಸೆಳೆಯಲು ಆ ರಾಜ್ಯದ ಹಿಂದುಳಿದಿರುವಿಕೆ ಒಂದು ಪ್ರಮುಖ ಕಾರಣ. ಅಲ್ಲದೇ, ಬಿಹಾರ ಹಿಂದುಳಿದ ವರ್ಗಗಳ ರಾಜಕಾರಣದ ಎಪಿಕ್ ಸೆಂಟರ್. ದೇಶದಲ್ಲಿ ಮಂಡಲ್ ಚಳವಳಿ ನಂತರ ಬಿಹಾರದ ರಾಜಕೀಯ ಚಿತ್ರಣವೇ ಬದಲು. ಬಿಹಾರದಲ್ಲಿ ಅಸೆಂಬ್ಲಿ ಚುನಾವಣೆಗೆ ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತಗಳ ಎಣಿಕೆ ನಡೆಯಲಿದೆ. ಆ ರಾಜ್ಯದ 243 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮತಸಮರಕ್ಕೆ ಅಖಾಡ ಸಜ್ಜಾಗಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ 121 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನ. ಎರಡನೇ ಹಂತದಲ್ಲಿ 122 ಕ್ಷೇತ್ರಗಳಲ್ಲಿ ಮತದಾನ ಇದೆ. ಎನ್‌ಡಿಎ ಹಾಗೂ ಮಹಾಘಟಬಂಧನ ಮಧ್ಯೆ ಜಿದ್ದಾಜಿದ್ದಿ ಕದನಕ್ಕೆ ಹುರಿಯಾಳುಗಳು ಅಖಾಡಕ್ಕೆ ಇಳಿಯುತ್ತಿದ್ದಾರೆ.
ಬಿಹಾರದ ಚುನಾವಣೆಗೆ ತನ್ನ 83 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ವಿಧಾನಸಭೆಯ ಸ್ಪೀಕರ್ ನಂದಕಿಶೋರ್ ಯಾದವ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹತ್ತು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ದೊರೆತಿಲ್ಲ. ಜಾತಿ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗಿದೆ. ಶೇ.50ಕ್ಕೂ ಹೆಚ್ಚು ಟಿಕೆಟ್ ಗಳನ್ನು ತಳಸಮುದಾಯದವರಿಗೆ ನೀಡಲಾಗಿದೆ ಎಂಬುದು ಬಿಜೆಪಿ ಹೇಳಿಕೆ.
ಎನ್‌ಡಿಎ ನಲ್ಲಿ ಈ ಬಾರಿ ಎಲ್ಲವೂ ಸರಿಯಿಲ್ಲ. ಎನ್‌ಡಿಎ ಅಂಗಪಕ್ಷಗಳು ಕೆಲವು ಸೀಟುಗಳನ್ನು ತನಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿವೆ. ನಮ್ಮ ನಿರೀಕ್ಷೆಯಂತೆ ಸ್ಥಾನಗಳು ನಮಗೆ ಸಿಕ್ಕಿಲ್ಲ ಎಂಬ ಅಸಮಾಧಾನ ರಾಷ್ಟ್ರೀಯ ಲೋಕ ಮೋರ್ಚಾ ವರಿಷ್ಠ ಉಪೇಂದ್ರ ಕುಶ್ವಾಹ ಅವರದು. ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಯು ಕೂಡ ತನ್ನ ಹುರಿಯಾಳನ್ನು ಘೋಷಿಸಿರುವುದು ಎನ್‌ಡಿಎನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ.
ಇನ್ನು ಆರ್ ಜೆಡಿ ನೇತೃತ್ವದ ಮಹಾಘಟಬಂಧನದಲ್ಲಿ ಅಂಗಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಸೂತ್ರವನ್ನು ಅಂತಿಮಗೊಳಿಸುವ ಕಸರತ್ತು ನಡೆಯುತ್ತಿದೆ. ಕಾಂಗ್ರೆಸ್ ಕಳೆದ 2020ರಲ್ಲಿ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈಗಲೂ ಅಷ್ಟೇ ಕ್ಷೇತ್ರಗಳನ್ನು ಕೇಳುತ್ತಿದೆ. ಆದರೆ, ಇದಕ್ಕೆ ಆರ್ ಜೆಡಿ ಸಿದ್ದವಿಲ್ಲ. ಅದು 58 ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಿದ್ದವಾಗಿದೆ. ಕಗ್ಗಂಟು ಮುಂದುವರಿದಿದೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ 116 ಕ್ಷೇತ್ರಗಳಲ್ಲಿ ತನ್ನ ಹುರಿಯಾಳುಗಳ ಹೆಸರನ್ನು ಪ್ರಕಟಿಸಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನುನೀಡಿದ್ದೇವೆ. ಅತಿ ಹಿಂದುಳಿದ ವರ್ಗಗಳ ಸಮುದಾಯದವರಿಗೆ ನಾವೇ ಹೆಚ್ಚು ಸೀಟು ನೀಡಿದ್ದೇವೆ ಎಂಬುದು ಪ್ರಶಾಂತ್ ಕಿಶೋರ್ ಅವರ ವಾದ. ಪ್ರಶಾಂತ್ ಕಿಶೋರ್ ತಾವು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇದು ಅವರ ಕಾರ್ಯತಂತ್ರಗಳಲ್ಲಿ ಒಂದು.
ಮಂಡಲ್ ಚಳವಳಿ ನಂತರ ಬಿಹಾರದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣದ್ದೇ ಮೇಲುಗೈ. ಆ ರಾಜ್ಯದ ಜನಸಂಖ್ಯೆಯಲ್ಲಿ ಅತಿ ಹಿಂದುಳಿದ ವರ್ಗದವರು (ಇಬಿಸಿ) ಶೇ.36ರಷ್ಟು ಇದ್ದಾರೆ. ಇಬಿಸಿ ಗುಂಪಿನಲ್ಲಿ 112 ಜಾತಿಗಳಿವೆ. ಇತರ ಹಿಂದುಳಿದ ವರ್ಗಗಳು ಶೇ.26, ಪರಿಶಿಷ್ಟ ಜಾತಿ ಶೇ.19.65, ಪರಿಶಿಷ್ಟ ಪಂಗಡ ಶೇ.1.68, ಮೇಲ್ವರ್ಗದವರು ಶೇ.15.5, ಮುಸ್ಲಿಂಮರು ಶೇ.18ರಷ್ಟು ಇದ್ದಾರೆ.
ಇತ್ತೀಚಿನ ದಶಕಗಳಲ್ಲಿ ಬಿಹಾರ ರಾಜಕಾರಣ ಎಂದರೆ ಇಬ್ಬರ ಸುತ್ತಲೇ ಗಿರಕಿ ಹೊಡೆಯುತ್ತದೆ. ಒಂದು ನಿತೀಶ್ ಕುಮಾರ್. ಮತ್ತೊಂದು ರಾಷ್ಟ್ರೀಯ ಜನತಾದಳದ ಲಾಲೂಪ್ರಸಾದ್ ಯಾದವ್.
ನಿತೀಶ್ ಕುಮಾರ್ ಕುರ್ಮಿ ಸಮುದಾಯಕ್ಕೆ ಸೇರಿದವರು. ಅವರು ತಮ್ಮದೇ ಕುರ್ಮಿ ಸಮುದಾಯ, ಪಸ್ಮಂದ ಮುಸ್ಲಿಮರ ಬೆಂಬಲದ ಲೆಕ್ಕಾಚಾರದ ಮೇಲೆಯೇ ಹೆಜ್ಜೆ ಇಡುತ್ತಾರೆ. ಮೇಲ್ವರ್ಗದ ಭೂಮಿಹಾರ್, ಕಾಯಸ್ಥ, ರಜಪೂತರು ನಿತೀಶ್ ಅವರ ರಾಜಕೀಯ ಏಳಿಗೆಗೆ ಬೆಂಬಲಿಸಿದ್ದಾರೆ. ನಿತೀಶ್ ಅವರ ಗೆಲುವಿನಲ್ಲಿ ಮಹಿಳಾ ಮತದಾರರದ್ದೇ ಪ್ರಮುಖ ಪಾತ್ರ. ಲಾಲೂಪ್ರಸಾದ್ ಯಾದವ್ ಅವರದು ಯಾದವ -ಮುಸ್ಲಿಂ ಸಮುದಾಯಗಳ ಸಮೀಕರಣದ ಲೆಕ್ಕಾಚಾರ.
ನಿತೀಶ್ ಕುಮಾರ್ 20 ವರ್ಷಗಳಲ್ಲಿ ಒಂಬತ್ತು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಮೈತ್ರಿಕೂಟವನ್ನು ಆಗಾಗ್ಗೆ ಬದಲಿಸುವುದೇ ಇದಕ್ಕೆ ಕಾರಣ. ಅದಕ್ಕೆ ಅವರನ್ನು ಪಲ್ಟು ರಾಮ್ ಎಂದು ಹೀಯಾಳಿಸುತ್ತಾರೆ.
ನಿತೀಶ್ ಕುಮಾರ್ ದಣಿದಿದ್ದಾರೆ. ಅವರ ಆರೋಗ್ಯದ ಬಗ್ಗೆಯೂ ಪ್ರತಿಪಕ್ಷಗಳ ನಾಯಕರು ಮಾತಾಡುತ್ತಿದ್ದಾರೆ. ನಿತೀಶ್ ಬಿಹಾರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂಬುದು ನಿಜ. ಆದರೆ, ಬಿಮಾರು ರಾಜ್ಯ ಬಿಹಾರದಲ್ಲಿ ಆಗಬೇಕಿರುವ ಕಾರ್ಯ ಬಹಳಷ್ಟಿವೆ.
ದೇಶದಲ್ಲಿ ಅತಿ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವು ಒಂದು. ಇಡೀ ದೇಶದಲ್ಲಿ 25 ವರ್ಷ ವಯಸ್ಸಿನ ಕೆಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಬಿಹಾರದಲ್ಲೇ. ಯುವ ಸಮುದಾಯ ಇಷ್ಟು ಬೃಹತ್ ಸಂಖ್ಯೆಯಲ್ಲಿದ್ದರೂ ಕೇಂದ್ರ ಸರಕಾರದ ಕೌಶಲ ವಿಕಾಸ ಯೋಜನೆಯಲ್ಲಿ ಬಿಹಾರ ಪಡೆದಿರುವ ಅನುದಾನ ಅತ್ಯಲ್ಪ.
ಕೇಂದ್ರ ಸರಕಾರ ಜುಲೈ 2024ರಲ್ಲಿ ಸಂಸತ್ತಿನಲ್ಲಿ ನೀಡಿರುವ ಉತ್ತರದಲ್ಲಿ ಈ ಯೋಜನೆಯಲ್ಲಿ ಬಿಹಾರಕ್ಕೆ ಹಂಚಿಕೆಯಾಗಿರುವ ಹಣ 128.66 ಕೋಟಿ ರೂಪಾಯಿ. ಇದರಲ್ಲಿ 36.82 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಕೇವಲ 5.96 ಕೋಟಿ ರೂಪಾಯಿ ಮಾತ್ರ ಬಳಕೆಯಾಗಿದೆ. 7.59 ಲಕ್ಷ ಜನರು ತರಬೇತಿ ಪಡೆದಿದ್ದಾರೆ. ಇವರಲ್ಲಿ 1.27 ಲಕ್ಷ ಜನರಿಗೆ ಮಾತ್ರ ಉದ್ಯೋಗ ದೊರೆತಿದೆ. ಇದು ಬಿಹಾರದ ಪರಿಸ್ಥಿತಿ.
ದೇಶದ ಜನಸಂಖ್ಯೆಯ ಸುಮಾರು ಶೇ.10ರಷ್ಟು ಜನರು ಬಿಹಾರದಲ್ಲೇ ನೆಲೆಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಗೆ ಬಿಹಾರದ ಕೊಡುಗೆ ಕಡಿಮೆ ಇದೆ. ಬಿಹಾರದ ತಲಾದಾಯ ಕೂಡ ಬಹಳ ಕಡಿಮೆ. ನೀತಿ ಆಯೋಗದ ಪ್ರಕಾರ ಅಭಿವೃದ್ಧಿಯಲ್ಲಿ ದೇಶದಲ್ಲಿ ಬಿಹಾರಕ್ಕೆ 28ನೇ ಸ್ಥಾನ. ಐದು ವರ್ಷಗಳಲ್ಲಿ ಈ ರಾಜ್ಯ ವಿದೇಶಿ ನೇರ ಬಂಡವಾಳ ಹೂಡಿಕೆ ಕಂಡಿದ್ದು 255 ಕೋಟಿ ರೂಪಾಯಿಗಳು ಮಾತ್ರ. ಇನ್ನು ಉದ್ಯೋಗ ಸೃಷ್ಟಿಯ ಮಾತು ದೂರವೇ ಉಳಿಯಿತು.
ಇಂತಹ ಬಿಹಾರದಲ್ಲಿ ಈಗ ಚುನಾವಣಾ ಭರವಸೆಗಳ ಮಹಾಪೂರ. ಸಿಎಂ ನಿತೀಶ್ ಕುಮಾರ್ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಆಶ್ವಾಸನೆ ನೀಡಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಭತ್ಯೆ, ರಾಜ್ಯದ 1.6 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 125 ಯೂನಿಟ್ ವಿದ್ಯುತ್ ಉಚಿತವಾಗಿ ವಿತರಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಸುಮ್ಮನೇ ಕುಳಿತಿಲ್ಲ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಭತ್ಯೆ, 200 ಯೂನಿಟ್ ವಿದ್ಯುತ್ ಉಚಿತ, ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆಯ ವಚನವನ್ನು ನೀಡಿದ್ದಾರೆ.
ಪ್ರತಿಯೊಬ್ಬರ ಮನೆಯಿಂದಲೂ ಒಬ್ಬರಿಗೆ ಸರಕಾರಿ ನೌಕರಿ ಕೊಡುತ್ತೇವೆ. ಇದಕ್ಕಾಗಿ ಶಾಸನ ರೂಪಿಸುತ್ತೇವೆ ಎಂದು ಆಶ್ವಾಸನೆ ಇತ್ತಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ 20 ದಿನಗಳಲ್ಲೇ ಶಾಸನ ರೂಪಿಸುತ್ತೇವೆ. 20 ತಿಂಗಳಲ್ಲಿ ಸರಕಾರಿ ಉದ್ಯೋಗ ಕೊಡುತ್ತೇವೆ ಎಂಬುದು ತೇಜಸ್ವಿ ಯಾದವ್ ಅವರ ಭರವಸೆ. ಇದು ಸಾಧ್ಯವೇ? ಕನಸಿನ ಮಾರಾಟವೇ?
ಬಿಹಾರ ಅಸೆಂಬ್ಲಿಯಲ್ಲಿ ಈಗ ಎನ್ ಡಿ ಎ 131 ಸೀಟುಗಳು. ಆರ್‌ಜೆಡಿ -ಕಾಂಗ್ರೆಸ್ 111. ಪಕ್ಷೇತರ ಒಬ್ಬರು. ಬಿಹಾರದಲ್ಲಿ 2020ರಲ್ಲಿ ನಡೆದ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡಪಕ್ಷವಾಗಿತ್ತು. ಬಿಜೆಪಿ 74, ಜೆಡಿಯು 43, ಕಾಂಗ್ರೆಸ್ ಪಡೆದಿದ್ದು 19 ಸೀಟುಗಳು. ಆರ್ ಜೆಡಿ ಶೇ. 23.1, ಬಿಜೆಪಿ ಶೇ. 19.5, ಜೆಡಿಯು ಶೇ.15.4, ಕಾಂಗ್ರೆಸ್ ಶೇ.9.5 ಮತಗಳನ್ನು ಪಡೆದಿತ್ತು.
ಬಿಹಾರ ‘ನವೆಂಬರ್ ಕ್ರಾಂತಿ’ಗೆ ಸಜ್ಜಾಗಿದೆ!
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement