

ಶುಕ್ರವಾರ ಅಪರಾಹ್ನ ದುಬೈನ ಅಲ್ ಮಕ್ತೌಮ್ ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನ ಬೆಂಕಿಯ ಉಂಡೆಯಂತೆ ಸ್ಫೋಟಗೊಂಡಿತು. ಈ ಸಂದರ್ಭದಲ್ಲಿ ಯಾರೂ ಎಂದಿಗೂ ನೋಡಬಾರದ, ನಡೆಯಬಾರದ, ಸ್ವಚ್ಛ ಆಗಸದ ಹಿನ್ನಲೆಯಲ್ಲಿ ಪೈಲಟ್ ಒಬ್ಬನ ಅಂತಿಮ ಕ್ಷಣಗಳನ್ನು ಅಲ್ಲಿ ಸೇರಿದ್ದ ಕುಟುಂಬಗಳು ನೋಡುವಂತಾಯಿತು. ವಿಮಾನ ಪತನದ ದೃಶ್ಯಗಳನ್ನು ಗಮನಿಸಿದ ತಜ್ಞರ ಪ್ರಕಾರ, ಪತನಗೊಂಡ ಯುದ್ಧ ವಿಮಾನ ದುರಂತದ ಸಂದರ್ಭದಲ್ಲಿ ಒಂದು ನೆಗೆಟಿವ್ ಜಿ ಚಲನೆಯನ್ನು ನಡೆಸುತ್ತಿತ್ತು. ಈ ಸಂದರ್ಭದಲ್ಲಿ ನಾವು ಚರ್ಚಿಸಲೇಬೇಕಾದ ಒಂದು ಅಪ್ರಿಯ, ಅಹಿತಕರ ಸತ್ಯವೂ ಇದೆ: ಈ ದುರಂತ ಯುದ್ಧ ವಿಮಾನದಲ್ಲಿ ಏನು ತಪ್ಪಾಯಿತು ಎನ್ನುವುದಕ್ಕೆ ಮಾತ್ರ ಸೀಮಿತವಲ್ಲ. ಅದರೊಡನೆ, ಯಾವುದೇ ತಪ್ಪಾಗಲು ಒಂದು ಸ್ವಲ್ಪವೂ ಅವಕಾಶವಿಲ್ಲದ ಎತ್ತರದಲ್ಲಿ ಭೌತಶಾಸ್ತ್ರದ ನಿಯಮಗಳನ್ನು ಅವುಗಳ ತೀವ್ರ ಮಿತಿಗೆ ತಳ್ಳಲು ಪ್ರಯತ್ನಿಸುವ ಅಪಾಯವನ್ನೂ ಈ ದುರಂತ ಒಳಗೊಂಡಿದೆ.
ದುರಂತದ ವೀಡಿಯೋ ಭೀತಿದಾಯಕ ಕತೆಯೊಂದನ್ನು ಹೇಳಿದೆ. ಪತನದ ಸಂದರ್ಭದಲ್ಲಿ ಪೈಲಟ್ ವಿಮಾನದಿಂದ ಹೊರಜಿಗಿದಿರಲಿಲ್ಲ. ಹಾಗೆಂದು ಪೈಲಟ್ ಹೊರ ಜಿಗಿಯಲು ಪ್ರಯತ್ನ ನಡೆಸಿರಲಿಲ್ಲ ಎಂದರ್ಥವಲ್ಲ, ಜೀರೋ- ಜೀರೋ ಮಾರ್ಟಿನ್ ಬೇಕರ್ ಇಜೆಕ್ಷನ್ ಸೀಟ್ ವಿಫಲವಾಯಿತು ಎಂದೂ ಅಲ್ಲ. ಆದರೆ ಆಕ್ರಮಣಕಾರಿ ಚಲನೆಯ ಸಂದರ್ಭದಲ್ಲಿ, ಕಡಿಮೆ ಎತ್ತರದಲ್ಲಿ, ಭೌತಶಾಸ್ತ್ರವೂ ನಿಮ್ಮ ಶತ್ರುವಿನಂತೆ ಕಾರ್ಯಾಚರಿಸುತ್ತದೆ. 'ಜೀರೋ- ಜೀರೋ' ಎಂದರೆ, ಈ ಆಸನ ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲಿರುವಾಗ, ಅಂದರೆ, ವಿಮಾನ ಇನ್ನೂ ರನ್‌ವೇನಲ್ಲೇ ಇರುವಾಗಲೂ ಸಹ ಪೈಲಟ್ ಪ್ರಾಣವನ್ನು ಉಳಿಸಬಲ್ಲದು. ಇದೊಂದು ಅಸಾಧಾರಣ ಇಂಜಿನಿಯರಿಂಗ್ ಉತ್ಪನ್ನವಾಗಿದ್ದು, ಶಕ್ತಿಶಾಲಿ ರಾಕೆಟ್‌ಗಳನ್ನು ಬಳಸಿಕೊಂಡು ಪೈಲಟ್ ಅನ್ನು ವಿಮಾನದಿಂದ ಹೊರ ಸಾಗಿಸಿ, ಸೆಕೆಂಡುಗಳ ಒಳಗೆ ಪ್ಯಾರಾಶೂಟ್ ತೆರೆಯುತ್ತದೆ. ಆದರೆ, ಇಲ್ಲಿ ಒಂದು ಗಮನಾರ್ಹ ವಿಚಾರವಿದೆ. ಈ ಅಸಾಧಾರಣ ತಂತ್ರಜ್ಞಾನ ಕಾರ್ಯಾಚರಿಸಿ, ಪೈಲಟ್ ಪ್ರಾಣ ಉಳಿಸಲು ಪ್ಯಾರಾಶೂಟ್ ಪೂರ್ಣವಾಗಿ ತೆರೆದು, ಪೈಲಟ್ ಇಳಿಯುವುದನ್ನು ನಿಧಾನಗೊಳಿಸಲು ಕನಿಷ್ಠ ಪ್ರಮಾಣದ ಸಮಯ ಮತ್ತು ಎತ್ತರದ ಅಗತ್ಯವಿದೆ. ಆದರೆ ಪೈಲಟ್ ಭೂಮಿಯಿಂದ ಕೆಲವು ನೂರು ಅಡಿಗಳ ಎತ್ತರದಲ್ಲಿ ಏರೋಬಾಟಿಕ್ಸ್ ಸಾಹಸ ಪ್ರದರ್ಶನ ನಡೆಸುವಾಗ ವಿಮಾನ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡರೆ, ಆಗ ವಾಸ್ತವವಾಗಿ ಪೈಲಟ್‌ಗೆ ಸಮಯವೇ ಉಳಿದಿರುವುದಿಲ್ಲ.
ಪ್ರಾಯೋಗಿಕವಾಗಿ ನೆಗೆಟಿವ್ ಜಿ ಎಂದರೇನು? ಒಂದು ಯುದ್ಧ ವಿಮಾನ ಲೂಪ್ ಒಂದನ್ನು ಪೂರ್ಣಗೊಳಿಸಿದಾಗ, ಆಗಸದಲ್ಲಿ ಪೈಲಟ್ ತಲೆಕೆಳಗಾಗಿರುತ್ತಾನೆ. ಈ ಸಂದರ್ಭದಲ್ಲಿ, ರಕ್ತ ತಲೆಯತ್ತ ಚಲಿಸಿ, ದೃಷ್ಟಿ ಮಂಜಾಗುವ ಸಾಧ್ಯತೆಗಳಿದ್ದು, ತಾನಿರುವ ಪ್ರದೇಶದ ಅರಿವು ಹೊಂದುವುದೂ ಸವಾಲಾಗುತ್ತದೆ. ಈಗ ಲೂಪ್‌ನಿಂದ ಹೊರಬಂದು, ವಿಮಾನವನ್ನು ಸಮತೋಲನಗೊಳಿಸಲು ಪ್ರಯತ್ನ ನಡೆಸುವಾಗ ಇದ್ದಕ್ಕಿದ್ದಂತೆ ಏನಾದರೂ ಸಮಸ್ಯೆ ಎದುರಾಗುವುದನ್ನು ಊಹಿಸಿಕೊಳ್ಳಿ. ತೇಜಸ್ ಒಂದು ಆಧುನಿಕ ಯುದ್ಧ ವಿಮಾನವಾಗಿದ್ದು, ಫ್ಲೈ ಬೈ ವೈರ್ ತಂತ್ರಜ್ಞಾನವನ್ನು ಬಳಸುತ್ತದೆ. ಅಂದರೆ, ಪೈಲಟ್‌ಗಳ ನಿಯಂತ್ರಣ ಮತ್ತು ವಿಮಾನದ ಚಲಿಸುವ ಮೇಲ್ಮೈಗಳ ನಡುವೆ ಯಾವುದೇ ನೇರ ಯಾಂತ್ರಿಕ ಸಂಪರ್ಕ ಇರುವುದಿಲ್ಲ. ಇದರ ಬದಲಿಗೆ, ಕಂಪ್ಯೂಟರ್‌ಗಳು ಪೈಲಟ್ ನೀಡುವ ಮಾಹಿತಿಗಳನ್ನು ಅರ್ಥಮಾಡಿಕೊಂಡು, ಮೇಲ್ಮೈಗಳನ್ನು ಅದಕ್ಕೆ ಅನುಗುಣವಾಗಿ ನಿಯಂತ್ರಿಸಿ, ವಿಮಾನವನ್ನು ಹೆಚ್ಚು ಸ್ಥಿರ ಮತ್ತು ನಿರ್ವಹಿಸಲು ಸುಲಭವಾಗಿಸುತ್ತದೆ. ಆದರೆ, ಒಂದು ವೇಳೆ ಭೂಮಿಗೆ ಸನಿಹದಲ್ಲಿ ನೆಗೆಟಿವ್ ಜಿ ಚಲನೆ ನಿರ್ವಹಿಸುವಾಗ ವಿಮಾನದ ಇಂಜಿನ್ ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗಿ, ನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡದಿದ್ದರೆ ಏನಾಗಬಹುದು? ಗಾಳಿಯ ಚಲನೆಗೆ ಕೇವಲ ಮಿಲಿ ಸೆಕೆಂಡುಗಳ ಕಾಲ ಅಡಚಣೆ ಉಂಟಾಗಿರಬಹುದು. 10,000 ಅಡಿಗಳ ಎತ್ತರದಲ್ಲಿ ಪೈಲಟ್‌ಗೆ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸಮಯ ಸಿಗುತ್ತದೆ. ಫ್ಲೈ ಬೈ ವೈರ್ ವ್ಯವಸ್ಥೆ ಇದಕ್ಕೆ ಸಮಯ ಒದಗಿಸುತ್ತದೆ ಅಥವಾ, ಪೈಲಟ್ ಸುರಕ್ಷಿತವಾಗಿ ಹೊರಚಿಮ್ಮಬಹುದು. ಆದರೆ, ಆಕ್ರಮಣಕಾರಿ ಚಲನೆಗಳ ಸಂದರ್ಭದಲ್ಲಿ ಹಾಗೇನಾದರೂ ಆದರೆ? ಪೈಲಟ್ ಬಳಿ ಕೆಲವು ಸೆಕೆಂಡುಗಳ ಸಮಯ ಇರುತ್ತದೆ. ಕೆಲವು ಬಾರಿ ಅದಕ್ಕಿಂತಲೂ ಕಡಿಮೆ ಇರುತ್ತದೆ.
ಆದ್ದರಿಂದಲೇ ವೈಮಾನಿಕ ಪ್ರದರ್ಶನಗಳ ಸಂದರ್ಭದಲ್ಲಿ ಅಪಘಾತಗಳು ಅಪರೂಪವಾದರೂ, ಅವು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಮಾರ್ಚ್ 2024ರಲ್ಲಿ ರಾಜಸ್ಥಾನದಲ್ಲಿ ನಡೆದ ತೇಜಸ್ ವಿಮಾನದ ಪತನದ ಫಲಿತಾಂಶ ಬೇರೆಯಾಗಿತ್ತು. ವಿಮಾನ ಹೆಚ್ಚಿನ ಎತ್ತರದಲ್ಲಿದ್ದುದರಿಂದ, ಪೈಲಟ್ ಪಾರಾಗಲು ಸಾಧ್ಯವಾಯಿತು. ವಿಮಾನ ಸಮಸ್ಯೆಗೆ ಸಿಲುಕಿದಾಗ, ಇಜೆಕ್ಷನ್ ಪ್ರಕ್ರಿಯೆ ಸಮರ್ಪಕವಾಗಿ ಕಾರ್ಯಾಚರಿಸಲು ಸಾಕಷ್ಟು ಎತ್ತರ ಲಭ್ಯವಿತ್ತು. ಜೀರೋ- ಜೀರೋ ಸೀಟುಗಳು ಚಾಲನೆಗೊಂಡು, ರಾಕೆಟ್‌ಗಳು ಪೈಲಟ್ ಅನ್ನು ಹೊರಗೆ ಚಿಮ್ಮಿಸಿದವು. ಬಳಿಕ ಪ್ಯಾರಾಶೂಟ್ ತೆರೆದುಕೊಂಡು, ಪೈಲಟ್ ಅಪಾಯವಿಲ್ಲದೆ ಪಾರಾಗಿದ್ದ. ಆದರೆ, ದುಬೈನಲ್ಲಿ ಪ್ರೇಕ್ಷಕರಿಗಾಗಿ ಕಡಿಮೆ ಎತ್ತರದಲ್ಲಿ ಪ್ರದರ್ಶನ ನೀಡುವಾಗ ವಿಮಾನ ಮತ್ತು ಭೂಮಿಯ ನಡುವೆ ಅಗತ್ಯವಿರುವಷ್ಟು ಅಂತರ ಇರಲಿಲ್ಲ. ಪರಿಸ್ಥಿತಿ ಕೈಮೀರಿದಂತಾಗಿ, ಪೈಲಟ್ ವಿಮಾನದಿಂದ ಹೊರಚಿಮ್ಮಲು ಪ್ರಯತ್ನ ನಡೆಸಿದಾಗ, ವಿಮಾನ ಪ್ಯಾರಾಶೂಟ್ ಪರಿಣಾಮಕಾರಿಯಾಗಿ ತೆರೆಯಲು ಅವಕಾಶವಿಲ್ಲದಷ್ಟು ಭೂಮಿಗೆ ಸನಿಹಕ್ಕೆ ಬಂದಿರುವ ಸಾಧ್ಯತೆಗಳಿವೆ.
ದುಬೈನ 35 ಡಿಗ್ರಿ ಸೆಲ್ಸಿಯಸ್ ತಾಪಮಾನವೂ ಇಂಜಿನ್ ಪ್ರದರ್ಶನಕ್ಕೆ ಅಡಚಣೆ ಉಂಟುಮಾಡಿರಬಹುದು ಎಂದು ಹಲವರು ವಾದಿಸಬಹುದು. ಆದರೆ, ಬೇಸಿಗೆಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿ ಹೋಗುವ ರಾಜಸ್ಥಾನದಲ್ಲೂ ತೇಜಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಬಳಸುವ ಅಂಶವನ್ನು ಪರಿಗಣಿಸಿದರೆ, ಈ ವಾದವೂ ಸೂಕ್ತವಾಗುವುದಿಲ್ಲ. ಹಲವಾರು ವರ್ಷಗಳ ಕಾಲ ರಾಜಸ್ಥಾನದ ವಾತಾವರಣದಲ್ಲಿ ತೇಜಸ್ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಾಚರಿಸಿತ್ತು. ಸೂಲೂರ್ ಸ್ಕ್ವಾಡ್ರನ್‌ಗೆ ಸೇರಿದ ಈ ಯುದ್ಧ ವಿಮಾನ 2016ರಿಂದಲೂ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಾಚರಿಸುತ್ತಿತ್ತು. ಹಾಗಿರುವಾಗ ದುಬೈನಲ್ಲಿ ಈಗ ಯಾಕೆ ಅವಘಡ ಸಂಭವಿಸಿತು? ಇದಕ್ಕೆ ಉತ್ತರ ದುಬೈನ ಉಷ್ಣತೆಯಲ್ಲ. ಬದಲಿಗೆ, ಕನಿಷ್ಠ ಎತ್ತರ ಮತ್ತು ಸಂಕೀರ್ಣ ಏರೋನಾಟಿಕ್ಸ್ ಚಲನೆಯ ಅಪಾಯಕಾರಿ ಸಂಯೋಜನೆ ಇದಕ್ಕೆ ಕಾರಣವಾಗಿರಬಹುದು.
ವೈಮಾನಿಕ ಪ್ರದರ್ಶನಗಳ ಕುರಿತು ಬಹಳಷ್ಟು ಜನರಿಗೆ ತಿಳಿದಿರದ ಒಂದು ವಿಚಾರವಿದೆ. ಅದೇನೆಂದರೆ, ಇಲ್ಲಿ ವಿಮಾನಗಳ ಹಾರಾಟ ಸಹಜವಾದುದಲ್ಲ. ಯುದ್ಧ ಕಾರ್ಯಾಚರಣೆಗಳು, ಗಸ್ತು ಕಾರ್ಯಾಚರಣೆಗಳು, ಮತ್ತು ಹಾರಾಟ ತರಬೇತಿಗಳೂ ಸಹ ಸುರಕ್ಷಿತ ಎತ್ತರದಲ್ಲಿ ಸುರಕ್ಷಿತ ಕ್ರಮಗಳ ಅನುಗುಣವಾಗಿ ನಡೆಯುತ್ತವೆ. ಫ್ಲೈ ಬೈ ವೈರ್ ವ್ಯವಸ್ಥೆಯನ್ನು ಮಾಮೂಲಿ ಕಾರ್ಯಾಚರಣೆಗಳಲ್ಲಿ ಪೈಲಟ್‌ಗಳು ವಿಮಾನಗಳಿಗೆ ಆಕಸ್ಮಿಕವಾಗಿಯೂ ಹೆಚ್ಚಿನ ಒತ್ತಡ ಹೇರದಂತೆ ತಡೆಯಲು ವಿನ್ಯಾಸಗೊಳಿಸಲಾಗಿದೆ. ಆದರೆ, ವೈಮಾನಿಕ ಪ್ರದರ್ಶನಗಳಲ್ಲಿ ಪ್ರೇಕ್ಷಕರಿಗೆ ವಿಮಾನದ ಸಾಮರ್ಥ್ಯಗಳನ್ನು ಕಾಣುವಂತೆ ಮಾಡಲು ಸಾಕಷ್ಟು ಕೆಳಭಾಗದಲ್ಲೇ ಹಾರಾಟ ನಡೆಸಬೇಕಾಗುತ್ತದೆ. ಪ್ರೇಕ್ಷಕರು ವಿಮಾನ ಕ್ಷಿಪ್ರವಾಗಿ ತಿರುಗುವುದು, ಲಂಬವಾಗಿ ಏರುವುದು, ಮತ್ತು ರೋಮಾಂಚಕ ಎನಿಸುವ ಲೂಪ್‌ಗಳನ್ನು ನಡೆಸುವುದನ್ನು ನೋಡಲು ಬಯಸುತ್ತಾರೆ. ಸ್ವತಃ ಧೈರ್ಯಶಾಲಿ ವೃತ್ತಿಪರರಾಗಿರುವ ಪೈಲಟ್‌ಗಳು ಪ್ರೇಕ್ಷಕರು ಬಯಸುವುದನ್ನೇ ನೀಡುತ್ತಾರೆ. ಆದರೆ, ಪ್ರತಿಬಾರಿ ಅವರು ಇಂತಹ ಕಾರ್ಯ ನಡೆಸುವಾಗಲೂ, ಅವರು ಭೌತಶಾಸ್ತ್ರದ ನಿಯಮಗಳೊಡನೆ ಜೂಜಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ, ಯಾಂತ್ರಿಕ ವೈಫಲ್ಯಕ್ಕಾಗಲಿ ಅಥವಾ ವಿಮಾನದ ಅನಿರೀಕ್ಷಿತ ವರ್ತನೆಗಾಗಲಿ ಯಾವುದೇ ಅವಕಾಶವಿರುವುದಿಲ್ಲ.
ಎಲ್‌ಸಿಎ ತೇಜಸ್ ಅಸಾಧಾರಣ ಸುರಕ್ಷತಾ ದಾಖಲೆ ಹೊಂದಿದ್ದು, ಕಳೆದ 24 ವರ್ಷಗಳಲ್ಲಿ ಕೇವಲ ಎರಡು ಅಪಘಾತಗಳಿಗೆ ಒಳಗಾಗಿದೆ. ಇದನ್ನು ಅಸಂಖ್ಯಾತ ಅಪಘಾತಗಳಿಗೆ ಒಳಗಾಗಿ, 'ಹಾರಾಡುವ ಶವಪೆಟ್ಟಿಗೆ' ಎಂದು ಅಡ್ಡಹೆಸರು ಸಂಪಾದಿಸಿರುವ ಮಿಗ್-21ರೊಡನೆ ಹೋಲಿಸಿ ನೋಡಿ! ತೇಜಸ್ ಈ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುವ ಗುರಿ ಹೊಂದಿತ್ತು. ಈ ಉದ್ದೇಶದಲ್ಲಿ ತೇಜಸ್ ತಾಂತ್ರಿಕವಾಗಿ ಯಶಸ್ವಿಯೂ ಆಗಿದೆ. ಇದು ಹೊಂದಿರುವ ಫ್ಲೈ ಬೈ ವೈರ್ ನಿಯಂತ್ರಣ ಹಳೆಯ ತಲೆಮಾರಿನ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಇದನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ. ಇದರ ಜೀರೋ- ಜೀರೋ ಇಜೆಕ್ಷನ್ ಸೀಟ್ ಜಗತ್ತಿನ ಅತ್ಯುತ್ತಮ ಇಜೆಕ್ಷನ್ ಸೀಟುಗಳಲ್ಲಿ ಒಂದಾಗಿದೆ. ಆದರೆ, ಕನಿಷ್ಠ ಎತ್ತರದಲ್ಲಿ ಅಪಾಯಕಾರಿ ಚಲನೆಗಳನ್ನು ನಡೆಸುವಾಗ, ಸಮಸ್ಯೆ ಏನು ಎಂದು ಗುರುತಿಸಲು ಒಂದು ಸೆಕೆಂಡಿನ ವಿಳಂಬವೂ ಸಹ ಅತ್ಯಂತ ಅಪಾಯಕಾರಿಯಾಗುತ್ತದೆ. ಇದು ತೇಜಸ್ ಯುದ್ಧ ವಿಮಾನದ ಸಮಸ್ಯೆಯಲ್ಲ. ಬದಲಿಗೆ, ವೈಮಾನಿಕ ಪ್ರದರ್ಶನಗಳ ಸಮಸ್ಯೆ. ಜಗತ್ ಪ್ರಸಿದ್ಧ ಬ್ಲೂ ಏಂಜೆಲ್ಸ್ ಮತ್ತು ಥಂಡರ್‌ಬರ್ಡ್ ಯುದ್ಧ ವಿಮಾನಗಳೂ ಸಹ ವೈಮಾನಿಕ ಪ್ರದರ್ಶನದಲ್ಲಿ ತಮ್ಮ ಪೈಲಟ್‌ಗಳನ್ನು ಕಳೆದುಕೊಂಡಿವೆ. ಕನಿಷ್ಠ ಎತ್ತರದಲ್ಲಿ ಸಾಹಸ ಪ್ರದರ್ಶಿಸುವಾಗ ವಿಮಾನ ಯಾವುದು ಎನ್ನುವುದು ಮುಖ್ಯವಾಗುವುದಿಲ್ಲ.
ಈಗ ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ, ಇಂತಹ ವೈಮಾನಿಕ ಪ್ರದರ್ಶನಗಳು ನಿಜಕ್ಕೂ ಅಷ್ಟು ಮೌಲ್ಯಯುತವೇ? ನೆಲದಿಂದ ಕೇವಲ ಕೆಲವು ನೂರು ಅಡಿಗಳ ಎತ್ತರದಲ್ಲಿ ಯುದ್ಧ ವಿಮಾನವನ್ನು ಹಾರಿಸುತ್ತಾ, ದೇಶದ ಆಸ್ತಿಯಾದ ನುರಿತ ಪೈಲಟ್‌ಗಳು ಅಪಾಯಕ್ಕೆ ತುತ್ತಾಗುವಂತಹ ಇಂತಹ ಪ್ರದರ್ಶನಗಳು ನಿಜಕ್ಕೂ ಬೇಕೇ? ಈ ಪೈಲಟ್‌ಗಳು ಯಾರೋ ಸಾಹಸ ಪ್ರದರ್ಶಕರಲ್ಲ. ಅವರು ಹಲವಾರು ವರ್ಷಗಳ ಕಾಲ ತಮ್ಮ ಕೌಶಲವನ್ನು ವೃದ್ಧಿಸುತ್ತಾ ಬಂದಿರುವ, ಸದಾ ಯುದ್ಧ ಸನ್ನದ್ಧರಾಗಿರುವ ಅಧಿಕಾರಿಗಳು. ವೈಮಾನಿಕ ಪ್ರದರ್ಶನದಲ್ಲಿ ಪ್ರಾಣ ಕಳೆದುಕೊಳ್ಳುವ ಪ್ರತಿಯೊಬ್ಬ ಪೈಲಟ್ ಸಹ ದೇಶ ರಕ್ಷಣೆಗೆ ಅವರ ನಿಜವಾದ ಅವಶ್ಯಕತೆ ಎದುರಾಗುವಾಗ ಲಭ್ಯರಿರುವುದಿಲ್ಲ. ಕೆಲವು ಸಾವಿರ ಪ್ರೇಕ್ಷಕರನ್ನು ಖುಷಿ ಪಡಿಸುವ ಪ್ರದರ್ಶನಗಳು ಕೆಲವು ನಿಮಿಷಗಳ ಕಾಲ ಮಾತ್ರ ನಡೆಯುತ್ತವೆ. ಆದರೆ, ಪೈಲಟ್‌ಗಳ ನಷ್ಟ ಶಾಶ್ವತವಾಗಿರುತ್ತದೆ.
ದುರ್ಘಟನೆ ನಡೆದ ಸಂದರ್ಭದಲ್ಲಿ ಯಾಂತ್ರಿಕ ವೈಫಲ್ಯ ಕಾಣಿಸಿಕೊಂಡಿತ್ತೇ, ಅಥವಾ ಯಾವುದಾದರೂ ಪ್ರಕ್ರಿಯೆಗಳು ಅಪಘಾತಕ್ಕೆ ಹಾದಿ ಮಾಡಿಕೊಟ್ಟಿತೇ ಎನ್ನುವುದನ್ನು ತನಿಖೆಯಿಂದಲೇ ತಿಳಿಯಬೇಕಿದೆ. ಆದರೆ, ನಮಗೆ ಒಂದು ವಾಸ್ತವ ಸತ್ಯ ಈಗಾಗಲೇ ತಿಳಿದಿದೆ: ವಿಮಾನಗಳು ಹೊಂದಿರುವ ಫ್ಲೈ ಬೈ ವೈರ್ ಎಷ್ಟೇ ಆಧುನಿಕವಾಗಿರಲಿ, ಜೀರೋ- ಜೀರೋ ಜೀರೋ ಇಜೆಕ್ಷನ್ ಆಸನಗಳು ಎಷ್ಟೇ ನಂಬಿಕಾರ್ಹವಾಗಿರಲಿ, ಆದರೆ ಕಡಿಮೆ ಎತ್ತರದಲ್ಲಿ ನಡೆಸುವ ವೈಮಾನಿಕ ಪ್ರದರ್ಶನಗಳು ಸದಾ ಅಪಾಯಕಾರಿಯಾಗಿರುತ್ತವೆ. ಅತ್ಯಂತ ಕನಿಷ್ಠ ಪ್ರಮಾಣದ ಎತ್ತರದ ಲಭ್ಯತೆಯಲ್ಲಿ, ಅಪಾಯದ ಅತ್ಯಂತ ಅಂಚಿನಲ್ಲಿ ನಡೆಸುವ ಇಂತಹ ಪ್ರದರ್ಶನಗಳು ಯಾವುದೇ ಕ್ಷಣದಲ್ಲಿ ಬೇಕಾದರೂ ಅನಾಹುತಕಾರಿಯಾಗಿ ಪರಿಣಮಿಸಬಹುದು.
ಬಹುಶಃ ನಾವು ನಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೇಗೆ ಪ್ರದರ್ಶಿಸುತ್ತೇವೆ ಎನ್ನುವುದರ ಕುರಿತು ಮರು ಆಲೋಚಿಸುವ ಸಮಯ ಬಂದಿದೆ. ವರ್ಚುವಲ್ ರಿಯಾಲಿಟಿ ಡಿಸ್‌ಪ್ಲೇಗಳು, ಸಿಮ್ಯುಲೇಟರ್ ಪ್ರದರ್ಶನಗಳು, ಅಥವಾ ಹೆಚ್ಚು ಎತ್ತರದ ಪ್ರದರ್ಶನಗಳು ಸಹ ಅತ್ಯಂತ ಮೌಲ್ಯಯುತವಾದ ಮಾನವ ಜೀವಗಳನ್ನು ಅಪಾಯಕ್ಕೆ ತಳ್ಳದೆ ಉದ್ದೇಶಿತ ಫಲಿತಾಂಶ ನೀಡಬಲ್ಲವು. ದುಬೈನಲ್ಲಿ ಪ್ರಾಣ ಕಳೆದುಕೊಂಡ ಪೈಲಟ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ ಪ್ರಾಣ ಕಳೆದುಕೊಂಡಿದ್ದಾರೆ. ನೈಜ ಸವಾಲೆಂದರೆ, ನಾವು ಆ ಪೈಲಟ್ ಬಳಿ ಈ ಅಪಾಯ ಕೈಗೆತ್ತಿಕೊಳ್ಳಲು ಕೇಳಬೇಕಿತ್ತೇ?
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement