ಅಸ್ಥಿರಂಧ್ರತೆ (Osteoporosis) ಚಿಕಿತ್ಸೆಯಲ್ಲಿ ಹೊಸ ಬೆಳಕು: ಮೂಳೆ ಬಲದ ಮೂಲ ರಹಸ್ಯ ಪತ್ತೆ!

ಈ ಕಾರ್ಯವಿಧಾನವನ್ನು ಗುರಿಯಾಗಿಟ್ಟುಕೊಂಡು, ಮೂಳೆಗಳನ್ನು ದುರ್ಬಲಗೊಳಿಸುವ ಅಸ್ಥಿರಂಧ್ರತೆ (Osteoporosis) ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಬಹುದು.
Bone Switch that could stop Osteoporosis
ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ಚಿಕಿತ್ಸೆ
Updated on

ಹೊಸ ವೈಜ್ಞಾನಿಕ ಅಧ್ಯಯನವೊಂದು ನಮ್ಮ ದೇಹದಲ್ಲಿ ಮೂಳೆಗಳನ್ನು ಬಲಪಡಿಸುವ ಪ್ರಮುಖ ಕಾರ್ಯವಿಧಾನವನ್ನು ಗುರುತಿಸಿದೆ.

ಈ ಕಾರ್ಯವಿಧಾನವನ್ನು ಗುರಿಯಾಗಿಟ್ಟುಕೊಂಡು, ಮೂಳೆಗಳನ್ನು ದುರ್ಬಲಗೊಳಿಸುವ ಅಸ್ಥಿರಂಧ್ರತೆ (Osteoporosis) ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಬಹುದು.

ಅಸ್ಥಿರಂಧ್ರತೆ ಎಂದರೇನು?

ಅಸ್ಥಿರಂಧ್ರತೆ ಎಂದರೆ ಎಲುಬುಗಳು ನಿಧಾನವಾಗಿ ದುರ್ಬಲವಾಗಿ, ಒಳಗೆ ರಂಧ್ರಗಳು ಉಂಟಾಗಿ ಸುಲಭವಾಗಿ ಮುರಿಯುವ ಸ್ಥಿತಿ. ಸಾಮಾನ್ಯವಾಗಿ ವಯೋವೃದ್ಧರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚು ಕಾಣಿಸುತ್ತದೆ.

ದೇಹದಲ್ಲಿ ಕ್ಯಾಲ್ಸಿಯಂ, ವಿಟಮಿನ್-ಡಿ ಕೊರತೆ, ವ್ಯಾಯಾಮದ ಅಭಾವ, ಹಾರ್ಮೋನ್ ಬದಲಾವಣೆ ಮತ್ತು ಅನಾರೋಗ್ಯಕರ ಜೀವನಶೈಲಿ ಇದರ ಪ್ರಮುಖ ಕಾರಣಗಳು. ಎಲುಬುಗಳಲ್ಲಿ ನೋವು, ಬೆನ್ನು ಬಾಗುವುದು, ಎತ್ತರ ಕಡಿಮೆಯಾಗುವುದು ಮತ್ತು ಸ್ವಲ್ಪ ಬಿದ್ದರೂ ಮುರಿತ ಉಂಟಾಗುವುದು ಇದರ ಲಕ್ಷಣಗಳಾಗಿವೆ.

Bone Switch that could stop Osteoporosis
ಮೆದುಳಿನ ಆರೋಗ್ಯ ಹೆಚ್ಚಿಸುವ ಐದು ಪೂರಕಗಳು (ಕುಶಲವೇ ಕ್ಷೇಮವೇ)

ಆಸ್ಟಿಯೊಪೊರೋಸಿಸ್ ಚಿಕಿತ್ಸೆಯಲ್ಲಿ ಅಧ್ಯಯನ

ಜರ್ಮನಿಯ ಲೀಪ್ಜಿಗ್ ವಿಶ್ವವಿದ್ಯಾನಿಲಯ ಮತ್ತು ಚೀನಾದ ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನವನ್ನು ಮುನ್ನಡೆಸಿದ್ದಾರೆ. ಅವರು ಮೂಳೆಗಳನ್ನು ನಿರ್ಮಿಸುವ ಆಸ್ಟಿಯೊಬ್ಲಾಸ್ಟ್ಗಳು ಎಂಬ ಕೋಶಗಳ ಮೂಲಕ ಕಾರ್ಯನಿರ್ವಹಿಸುವ ಜಿಪಿಆರ್133 (ಇದನ್ನು ಎಡಿಜಿಆರ್‌ಡಿ1 ಎಂದೂ ಕರೆಯುತ್ತಾರೆ) ಎಂಬ ಕೋಶ ಗ್ರಾಹಕವು ಮೂಳೆಯ ಸಾಂದ್ರತೆಗೆ ನಿರ್ಣಾಯಕವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ.

ಜಿಪಿಆರ್133 ಜೀನ್‌ನಲ್ಲಿನ ವ್ಯತ್ಯಾಸಗಳು ಈಗಾಗಲೇ ಮೂಳೆ ಸಾಂದ್ರತೆಗೆ ಸಂಬಂಧಿಸಿವೆ ಎಂದು ಹಿಂದೆ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಶೋಧಕರು, ಆ ಜೀನ್ ತಯಾರಿಸುವ ಪ್ರೋಟೀನ್‌ನತ್ತ ತಮ್ಮ ಗಮನ ಹರಿಸಿದರು.

ಸಂಶೋಧಕರ ತಂಡವು ಇಲಿಗಳ ಮೇಲೆ ಪ್ರಯೋಗಗಳನ್ನು ನಡೆಸಿತು. ಈ ಪ್ರಯೋಗಗಳಲ್ಲಿ ಜಿಪಿಆರ್133 ಜೀನ್ ಇಲ್ಲದ ಇಲಿಗಳು ಆಸ್ಟಿಯೊಪೊರೋಸಿಸ್‌ನ ಲಕ್ಷಣಗಳಂತೆಯೇ ದುರ್ಬಲವಾದ ಮೂಳೆಗಳೊಂದಿಗೆ ಬೆಳೆದವು. ಆದರೆ ಈ ಗ್ರಾಹಕವು ಇದ್ದು ಅದನ್ನು ಎಪಿ503 ಎಂಬ ರಾಸಾಯನಿಕ ಬಳಸಿ ಸಕ್ರಿಯಗೊಳಿಸಿದಾಗ ಮೂಳೆಗಳ ಉತ್ಪಾದನೆ ಮತ್ತು ಬಲವು ಸುಧಾರಿಸಿತು.

ಲೀಪ್ಜಿಗ್ ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರಜ್ಞೆ ಇನೆಸ್ ಲೀಬ್ಷರ್ ಹೇಳುವಂತೆ "ಎಪಿ503 ವಸ್ತುವನ್ನು ಬಳಸಿಕೊಂಡು ನಾವು ಆರೋಗ್ಯವಂತ ಮತ್ತು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿದ್ದ ಇಲಿಗಳಲ್ಲಿ ಮೂಳೆಯ ಬಲವನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಯಿತು. ಈ ಎಪಿ503ಅನ್ನು ಕಂಪ್ಯೂಟರ್ ಸಹಾಯದಿಂದ ಇತ್ತೀಚೆಗೆ ಜಿಪಿಆರ್133ಅನ್ನು ಉತ್ತೇಜಿಸುವ ವಸ್ತುವೆಂದು ಗುರುತಿಸಲಾಗಿತ್ತು."

ಈ ಪ್ರಯೋಗಗಳಲ್ಲಿ ಎಪಿ503 ಒಂದು ಸ್ವಿಚ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಆಸ್ಟಿಯೊಬ್ಲಾಸ್ಟ್ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಜೊತೆಗೆ, ಮೂಳೆಗಳನ್ನು ಮತ್ತಷ್ಟು ಬಲಪಡಿಸಲು ಈ ಪ್ರಚೋದಕವು ವ್ಯಾಯಾಮದೊಂದಿಗೆ ಸೇರಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನೂ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

Bone Switch that could stop Osteoporosis
ಪೆರೆಸಿಸ್ ಅಥವಾ ಸ್ನಾಯುಗಳ ಭಾಗಶಃ ದುರ್ಬಲತೆ (ಕುಶಲವೇ ಕ್ಷೇಮವೇ)

ಇಲಿಗಳ ಮೇಲೆ ಪ್ರಯೋಗ

ಜಿಪಿಆರ್133 ಕೋಶ ಗ್ರಾಹಕವು ಇಲಿಗಳಲ್ಲಿ ಮೂಳೆಯನ್ನು ಬಲವಾಗಿಡಲು ಅತಿ ಮುಖ್ಯವಾಗಿದೆ ಎಂಬುದು ಮಹತ್ವದ ಸಂಶೋಧನೆ. ಈ ಫಲಿತಾಂಶಗಳು ಪ್ರಾಣಿ ಮಾದರಿಯನ್ನು ಆಧರಿಸಿದ್ದರೂ, ಮಾನವರಲ್ಲಿನ ಪ್ರಕ್ರಿಯೆಗಳು ಬಹುತೇಕ ಒಂದೇ ರೀತಿಯಲ್ಲಿ ಇರಬಹುದು. ಲೀಬ್ಷರ್ ಅವರು, "ಈ ಗ್ರಾಹಕವು ಆನುವಂಶಿಕ ಬದಲಾವಣೆಗಳಿಂದ ತೊಂದರೆಗೊಳಗಾದರೆ, ಇಲಿಗಳು ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ಸಾಂದ್ರತೆಯ ನಷ್ಟವನ್ನು ತೋರಿಸುತ್ತವೆ – ಇದು ಮಾನವರಲ್ಲಿನ ಆಸ್ಟಿಯೊಪೊರೋಸಿಸ್ ಅನ್ನು ಹೋಲುತ್ತದೆ," ಎಂದು ವಿವರಿಸುತ್ತಾರೆ.

ಈ ಸಂಶೋಧಕರು, ಭವಿಷ್ಯದಲ್ಲಿ ಈ ಚಿಕಿತ್ಸೆಗಳು ಈಗಾಗಲೇ ಸದೃಢವಾಗಿರುವ ಮೂಳೆಗಳನ್ನು ಇನ್ನಷ್ಟು ಬಲಪಡಿಸಲು ಮತ್ತು ಮುಟ್ಟು ನಿಲ್ಲುವಿಕೆ ನಂತರದ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್‌ನಂತಹ ಸಂದರ್ಭಗಳಲ್ಲಿ ದುರ್ಬಲಗೊಂಡ ಮೂಳೆಗಳನ್ನು ಮತ್ತೆ ಪೂರ್ಣ ಬಲಕ್ಕೆ ತರಲು ನೆರವಾಗಬಹುದು ಎಂದು ಹೇಳುತ್ತಾರೆ.

ಆಸ್ಟಿಯೊಪೊರೋಸಿಸ್ ಗುಣಪಡಿಸಲು ಸಾಧ್ಯವೇ?

ಆಸ್ಟಿಯೊಪೊರೋಸಿಸ್ ಪ್ರಪಂಚದಾದ್ಯಂತ ಮಿಲಿಯನ್ ಗಟ್ಟಲೆ ಜನರ ಮೇಲೆ ಪರಿಣಾಮ ಬೀರುವ ಒಂದು ಗಂಭೀರ ಸ್ಥಿತಿ. ಈಗಿರುವ ಚಿಕಿತ್ಸೆಗಳು ರೋಗದ ಪ್ರಗತಿಯನ್ನು ನಿಧಾನಗೊಳಿಸಬಹುದಾದರೂ, ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಜೊತೆಗೆ ಈಗಿನ ಚಿಕಿತ್ಸೆಗಳು ಕೆಲವು ಅಪಾಯಕಾರಿ ಅಡ್ಡ ಪರಿಣಾಮಗಳನ್ನು ಹೊಂದಿವೆ ಅಥವಾ ಕಾಲಾನಂತರದಲ್ಲಿ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ. ನಿಯಮಿತ ವ್ಯಾಯಾಮ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರ, ಸೂರ್ಯನ ಬೆಳಕು, ಧೂಮಪಾನ-ಮದ್ಯಪಾನದ ತ್ಯಾಗದಿಂದ ತಡೆಯಬಹುದು.

ಸರಿಯಾದ ವೈದ್ಯಕೀಯ ತಪಾಸಣೆ, ಎಕ್ಸ್-ರೇ ಅಥವಾ ಸಾಂದ್ರತೆ ಪರೀಕ್ಷೆ ಮತ್ತು ಔಷಧಿ ಚಿಕಿತ್ಸೆ ಮೂಲಕ ಅಸ್ಥಿರಂಧ್ರತೆಯನ್ನು ನಿಯಂತ್ರಿಸಿ ಆರೋಗ್ಯಕರ ಜೀವನ ನಡೆಸಬಹುದು. ತೂಕ ನಿಯಂತ್ರಣ, ಹಾಲು-ಹಾಲು ಉತ್ಪನ್ನಗಳು ಹಾಗೂ ಹಸಿರು ತರಕಾರಿಗಳ ಸೇವನೆ ಸಹ ಎಲುಬುಗಳನ್ನು ಗಟ್ಟಿಗೊಳಿಸಲು ಸಹಕಾರಿ. ಯೋಗಾಸನ, ಬಿರುಸು ನಡಿಗೆ, ಬೇಳೆಕಾಳುಗಳು, ಬಾದಾಮಿ, ಅಂಜೂರ, ಶೇಂಗಾ, ಎಳ್ಳು, ಮೆಂತ್ಯದ ಸೇವನೆ ಒಳ್ಳೆಯದು.

ಲೀಪ್ಜಿಗ್ ವಿಶ್ವವಿದ್ಯಾನಿಲಯದ ಅಣು ಜೀವಶಾಸ್ತ್ರಜ್ಞೆ ಜೂಲಿಯನ್ ಲೆಹ್ಮನ್ ಹೇಳುವಂತೆ "ಮೂಳೆಯ ಈ ಹೊಸ ಬಲವರ್ಧನೆಯ ವಿಧಾನವು ವಯಸ್ಸಾಗುತ್ತಿರುವ ಜನಸಂಖ್ಯೆಗೆ ವೈದ್ಯಕೀಯ ಪ್ರಯೋಜನಗಳನ್ನು ಒದಗಿಸುವಲ್ಲಿ ಈ ಗ್ರಾಹಕವು ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ."

ಈ ಮಹತ್ವದ ಸಂಶೋಧನೆಯು ಸಿಗ್ನಲ್ ಟ್ರಾನ್ಸ್ಡಕ್ಷನ್‌ ಅಂಡ್ ಟಾರ್ಗೆಟೆಡ್ ಥೆರಪಿ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com