
ನಾವು ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೋ ಮೆದುಳಿನ ಆರೋಗ್ಯಕ್ಕೂ ಅಷ್ಟೇ ಆದ್ಯತೆ ನೀಡುವುದು ಅವಶ್ಯಕ. ನಮಗೆ ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದು ಜ್ಞಾಪಕ ಶಕ್ತಿ ಕಡಿಮೆಯಾಗಲು ಮತ್ತು ಮಾನಸಿಕ ಸ್ಪಷ್ಟತೆಯ ಕೊರತೆಗೆ ಕಾರಣವಾಗುತ್ತದೆ. ಇದನ್ನು ತಡೆಯಲು, ಕೆಲವು ಆಹಾರ ಪೂರಕಗಳು ಮೆದುಳಿನ ಕಾರ್ಯವನ್ನು ಸುಧಾರಿಸಿ ರಕ್ಷಿಸಲು ಸಹಾಯ ಮಾಡುತ್ತವೆ. ಇಂತಹ ಐದು ಪೂರಕಗಳು
ಹೀಗಿವೆ:
1. ಒಮೆಗಾ-3 ಕೊಬ್ಬಿನಾಮ್ಲಗಳು (ಇಪಿಎ ಮತ್ತು ಡಿಎಚ್‌ಎ)
ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಒಮೆಗಾ-3 ಕೊಬ್ಬಿನಾಮ್ಲಗಳು ಅತಿ ಅಗತ್ಯ. ಇವುಗಳಲ್ಲಿ ಮುಖ್ಯವಾಗಿ ಇಕೋಸಾಪೆಂಟೆನೊಯಿಕ್ ಆಮ್ಲ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ) ಸೇರಿವೆ, ಇವುಗಳನ್ನು ನಮ್ಮ ದೇಹ ಸ್ವತಃ ಉತ್ಪಾದಿಸಲು ಸಾಧ್ಯವಿಲ್ಲ. ಚಿಯಾ ಬೀಜಗಳು, ಸೋಯಾಬೀನ್ಸ್, ಸೋಯಾಹಾಲು, ಟೋಫು, ಸಾಸಿವೆ ಎಣ್ಣೆ, ಅಗಸೆ ಬೀಜ, ವಾಲ್ ನಟ್ ಮತ್ತು ಪಾಲಕ್, ಮೆಂತ್ಯ ಮುಂತಾದ ಹಸಿರೆಲೆ ತರಕಾರಿಗಳ ಸೇವನೆಯ ಮೂಲಕ ಈ ಅತ್ಯಗತ್ಯ ಕೊಬ್ಬಿನಾಮ್ಲಗಳು ದೇಹಕ್ಕೆ ಲಭಿಸುತ್ತವೆ. ಹಾಗೆಯೇ ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಎಣ್ಣೆಯುಕ್ತ ಮೀನುಗಳನ್ನು ಸೇವಿಸುವುದರಿಂದ ಅಥವಾ ಮೀನಿನ ಎಣ್ಣೆ ಪೂರಕಗಳ ಮೂಲಕ ಈ ಕೊಬ್ಬಿನಾಮ್ಲಗಳನ್ನು ಪಡೆಯಬಹುದು.
ಮೆದುಳಿನ ಜೀವಕೋಶಗಳ ರಕ್ಷಣೆಯಲ್ಲಿ ಡಿಎಚ್‌ಎ ಪ್ರಮುಖ ಪಾತ್ರ ವಹಿಸುತ್ತದೆ, ಇದು ಮೆದುಳಿನ ಜೀವಕೋಶಗಳ ನಡುವೆ ಉತ್ತಮ ಸಂವಹನಕ್ಕೆ ಸಹಾಯ ಮಾಡುತ್ತದೆ. ಒಮೆಗಾ-3 ಪೂರಕಗಳು ಜ್ಞಾಪಕ ಶಕ್ತಿ, ಕಲಿಕಾ ಸಾಮರ್ಥ್ಯ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೆ, ಇವು ಮೆದುಳಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ, ಇದು ವಯಸ್ಸಾದಾಗ ಮೆದುಳಿನ ಕಾಯಿಲೆಗಳನ್ನು ತಡೆಯಲು ಸಹಕಾರಿ.
2. ಫಾಸ್ಫಾಟಿಡಿಲ್ಸೆರಿನ್
ಫಾಸ್ಫಾಟಿಡಿಲ್ಸೆರಿನ್ ಒಂದು ನೈಸರ್ಗಿಕ ಕೊಬ್ಬಿನ ಅಂಶ. ಇದು ಮೆದುಳಿನಲ್ಲಿ ವಿಶೇಷವಾಗಿ ಜ್ಞಾಪಕ ಶಕ್ತಿ ಮತ್ತು ಅರಿವಿನ ಕಾರ್ಯಗಳಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಮೆದುಳಿನ ಜೀವಕೋಶಗಳ ದ್ರವತೆಯನ್ನು ಕಾಪಾಡಿಕೊಳ್ಳಲು ಮತ್ತು ನರಗಳ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಸೋಯಾ, ಬೇಳೆ, ಟೋಫು, ಬಿಳಿ ಬೀನ್ಸ್, ಎಲೆಕೋಸು, ಸೂರ್ಯಕಾಂತಿ ಬೀಜಗಳು, ಕೋಳಿ ಮತ್ತು ಮೀನುಗಳಲ್ಲಿ ಇದು ಕಂಡುಬರುತ್ತದೆ.
ಸಂಶೋಧನೆಯ ಪ್ರಕಾರ ಸೌಮ್ಯ ಅರಿವಿನ ದೌರ್ಬಲ್ಯ ಹೊಂದಿರುವ ಹಿರಿಯರಲ್ಲಿ ಫಾಸ್ಫಾಟಿಡಿಲ್ಸೆರಿನ್ ಪೂರಕಗಳು ಜ್ಞಾಪಕ ಶಕ್ತಿಯನ್ನು ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತವೆ. ದಿನಕ್ಕೆ 100-300 ಮಿಲಿಗ್ರಾಂ ಪಿಎಸ್ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗಿದೆ.
3. ಬಿ ವಿಟಮಿನ್‌ಗಳು
ಬಿ ವಿಟಮಿನ್‌ಗಳು ಮೆದುಳಿನ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿವೆ. ಫೋಲೇಟ್ (ಬಿ9), ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಿ ವಿಟಮಿನ್‌ಗಳ ಕೊರತೆ ಇರುವವರಲ್ಲಿ ಮತ್ತು ಸೌಮ್ಯ ಅರಿವಿನ ದೌರ್ಬಲ್ಯ ಇರುವವರಲ್ಲಿ ಈ ಪೂರಕಗಳು ಜ್ಞಾಪಕ ಶಕ್ತಿ ಮತ್ತು ಮಾನಸಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ. ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಕೋಳಿ, ಮೇಕೆಯಂತಹ ಪ್ರಾಣಿಗಳ ಉತ್ಪನ್ನಗಳನ್ನು ಸೇವಿಸುವ ಮೂಲಕ ಬಿ ವಿಟಮಿನ್‌ಗಳನ್ನು ಪಡೆಯಬಹುದು.
4. ಕರ್ಕ್ಯುಮಿನ್ (ಅರಿಶಿನದ ಮೂಲ)
ನಾವು ಪ್ರತಿದಿನ ಅಡುಗೆಗೆ ಬಳಸುವ ಅರಿಶಿನದಲ್ಲಿರುವ ಪ್ರಮುಖ ಅಂಶವಾದ ಕರ್ಕ್ಯುಮಿನ್ ಉರಿಯೂತ ಮತ್ತು ಆಕ್ಸಿಡೇಟಿವ್ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮೆದುಳಿನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ವಯಸ್ಸಾದವರಲ್ಲಿ ಮಾನಸಿಕ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕರ್ಕ್ಯುಮಿನ್ ಸಹಕಾರಿ ಎಂದು ಅಧ್ಯಯನಗಳು ತೋರಿಸಿವೆ.
ಕರ್ಕ್ಯುಮಿನ್ ಮೆದುಳಿನ ಅಗತ್ಯವಾದ ಬಿಟಿಎನ್‌ಎಫ್ (ಬ್ರೇನ್-ಡಿರೈವ್ಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಹೀರಿಕೊಳ್ಳುವಿಕೆ ಕಡಿಮೆ ಇರುವುದರಿಂದ ಕರಿಮೆಣಸಿನ ಸಾರ (ಪೈಪರೀನ್) ಜೊತೆಗೆ ಇದನ್ನು ಸೇವಿಸುವುದು ಉತ್ತಮ.
5. ಬೆರಿ ಪಾಲಿಫಿನಾಲ್‌ಗಳು
ಬ್ಲೂಬೆರಿ, ಸ್ಟ್ರಾಬೆರಿ ಮತ್ತು ಬ್ಲ್ಯಾಕ್‌ಬೆರಿಗಳಂತಹ ಹಣ್ಣುಗಳಲ್ಲಿ ಪಾಲಿಫಿನಾಲ್‌ಗಳು ಹೇರಳವಾಗಿವೆ. ಇವು ಮೆದುಳಿನ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತವೆ. ಮೆದುಳಿನ ರಕ್ತದ ಹರಿವನ್ನು ಮತ್ತು ಬಿಡಿಎನ್‌ಎಫ್ ಉತ್ಪಾದನೆಯನ್ನು ಹೆಚ್ಚಿಸಲು ಪಾಲಿಫಿನಾಲ್‌ಗಳು ಸಹಾಯ ಮಾಡುತ್ತವೆ. ನಿಯಮಿತವಾಗಿ ಬೆರ್ರಿಗಳನ್ನು ಅಥವಾ ಅವುಗಳ ಸಾರವನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ, ಮಾನಸಿಕ ಕಾರ್ಯಗಳು ಮತ್ತು ಏಕಾಗ್ರತೆ ಸುಧಾರಿಸುತ್ತದೆ. ಬೆರ್ರಿ ಪಾಲಿಫಿನಾಲ್‌ಗಳ ಸೇವನೆಯು ಮೆದುಳಿನ ಆರೋಗ್ಯವನ್ನು ರಕ್ಷಿಸಿ, ಎಲ್ಲ ವಯಸ್ಸಿನವರಲ್ಲಿ ಅರಿವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಕೊನೆಮಾತು: ನಿಯಮಿತ ಆಹಾರಕ್ರಮ, ವ್ಯಾಯಾಮ ಮತ್ತು ಸರಿಯಾದ ನಿದ್ರೆಯ ಜೊತೆಗೆ ಈ ಪೂರಕಗಳನ್ನು ಸೇವಿಸುವುದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯಾವುದೇ ಪೂರಕವನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ, ವಿಶೇಷವಾಗಿ ನೀವು ಈಗಾಗಲೇ ಬೇರೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ. ನಿಮ್ಮ ಮೆದುಳಿನ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
Advertisement