
ಇರಿಟಬಲ್ ಬೋವೆಲ್ ಸಿಂಡ್ರೋಮ್ (ಐ.ಬಿ.ಎಸ್.) ಆಹಾರ ಜೀರ್ಣಕ್ರಿಯೆಯ ಒಂದು ಸಾಮಾನ್ಯ ಸಮಸ್ಯೆ. ಇದು ಮುಖ್ಯವಾಗಿ ದೊಡ್ಡ ಕರುಳನ್ನು ಬಾಧಿಸುತ್ತದೆ. ಈ ಸಮಸ್ಯೆ ಕರುಳಿಗೆ ಶಾಶ್ವತ ಹಾನಿ ಉಂಟುಮಾಡುವುದಿಲ್ಲ. ಆದರೆ ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಈ ಸಮಸ್ಯೆಯ ಪ್ರಮುಖ ಲಕ್ಷಣಗಳೆಂದರೆ ಹೊಟ್ಟೆ ನೋವು, ಉಬ್ಬರ, ಅತಿಯಾದ ವಾಯು ಮತ್ತು ಕರುಳಿನ ಅನಿಯಮಿತ ಚಲನೆ. ಇದು ಅತಿಸಾರ, ಮಲಬದ್ಧತೆ ಅಥವಾ ಎರಡೂ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗಲಕ್ಷಣಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರಿಗೆ ಇದರಿಂದ ಸಾಂದರ್ಭಿಕವಾಗಿ ಸೌಮ್ಯ ಸಮಸ್ಯೆ ಉಂಟಾದರೆ ಇತರರಿಗೆ ಜೀರ್ಣಕ್ರಿಯೆಯ ನಿರಂತರ ಸಮಸ್ಯೆಗಳಿಂದ ದೈನಂದಿನ ಜೀವನ ಅಸ್ತವ್ಯಸ್ತವಾಗುತ್ತದೆ.
ಐ.ಬಿ.ಎಸ್. ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಕಾರಣಗಳು ಸಂಪೂರ್ಣವಾಗಿ ತಿಳಿದಿಲ್ಲ. ಆದರೆ ಕರುಳಿನಲ್ಲಿ ಅಸಹಜ ಸ್ನಾಯು ಸಂಕೋಚನಗಳು, ಕರುಳಿನಲ್ಲಿ ಹೆಚ್ಚಿದ ಸಂವೇದನೆ, ಒತ್ತಡ, ಹಾರ್ಮೋನುಗಳ ಬದಲಾವಣೆಗಳು, ಸೋಂಕುಗಳು ಮತ್ತು ಕರುಳಿನ ಬ್ಯಾಕ್ಟೀರಿಯಾದ ಅಸಮತೋಲನಗಳು ಪ್ರಮುಖ ಕಾರಣಗಳಾಗಿವೆ.
ಈ ಸಮಸ್ಯೆ ಬಂದಾಗ ಸಾಮಾನ್ಯ ಪ್ರಕ್ರಿಯೆಗಳಾದ ಆಹಾರದ ಚಲನೆ ಅಥವಾ ಒತ್ತಡಕ್ಕೆ ಜೀರ್ಣಾಂಗವು ಹೆಚ್ಚು ಸಂವೇದನಾಶೀಲವಾಗುತ್ತದೆ. ಕರುಳಿನ ಸ್ನಾಯುಗಳು ಅತಿಯಾಗಿ ಸಂಕುಚಿತಗೊಂಡರೆ ಆಹಾರವು ವ್ಯವಸ್ಥೆಯ ಮೂಲಕ ಬೇಗನೆ ಚಲಿಸಿ ವಾಯು ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಈ ಸಂಕೋಚನಗಳು ತುಂಬಾ ದುರ್ಬಲವಾಗಿದ್ದರೆ ಅದು ಮಲಬದ್ಧತೆಗೆ ಕಾರಣವಾಗುತ್ತವೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾದ ಅಸ್ತವ್ಯಸ್ತ ಸಮತೋಲನವು ಉಬ್ಬರ ಮತ್ತು ಅನಿಯಮಿತ ಮಲ ವಿಸರ್ಜನೆಗೆ ಕಾರಣವಾಗಬಹುದು. ಕೆಲವರಲ್ಲಿ ತೀವ್ರವಾದ ಹೊಟ್ಟೆ ಅಥವಾ ಕರುಳಿನ ಸೋಂಕಿನ ನಂತರ ಐ.ಬಿ.ಎಸ್. ಕಾಣಿಸಿಕೊಳ್ಳುತ್ತದೆ. ಇದು ಚೇತರಿಕೆಯ ನಂತರವೂ ಕರುಳಿನ ಕಾರ್ಯವನ್ನು ಬದಲಾಯಿಸುತ್ತದೆ. ಒತ್ತಡ ಮತ್ತು ಭಾವನಾತ್ಮಕ ಆರೋಗ್ಯವು ಐ.ಬಿ.ಎಸ್. ತೀವ್ರತೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ, ಉದ್ವೇಗ ಅಥವಾ ಆತಂಕದ ಹೆಚ್ಚಾಗಿ ಈ ರೋಗದ ಉಲ್ಬಣಕ್ಕೆ ಕಾರಣವಾಗುತ್ತದೆ.
ಐ.ಬಿ.ಎಸ್ ಯಾರಿಗೆ ಬೇಕಾದರೂ ಬರಬಹುದು. ಆದರೆ ಇದು ಸಾಮಾನ್ಯವಾಗಿ ಐವತ್ತಕ್ಕಿಂತ ಕಡಿಮೆ ವಯಸ್ಸಿನವರು, ಮಹಿಳೆಯರು ಮತ್ತು ಕುಟುಂಬದಲ್ಲಿ ಈ ರೋಗದ ಇತಿಹಾಸ ಇರುವವರಲ್ಲಿ ಹೆಚ್ಚು ಕಂಡುಬರುತ್ತದೆ. ಆತಂಕ ಅಥವಾ ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸ ಇರುವವರು ಐ.ಬಿ.ಎಸ್. ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ಮನಸ್ಸು ಮತ್ತು ಜೀರ್ಣಾಂಗ ವ್ಯವಸ್ಥೆಯ ನಡುವೆ ನಿಕಟ ಸಂಬಂಧ ಇದೆ ಎಂಬುದು ನಮಗೆ ತಿಳಿಯುತ್ತದೆ.
ಐ.ಬಿ.ಎಸ್.ಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜನರು ಉತ್ತಮವಾಗಿ ಬದುಕಲು ಸಹಾಯ ಮಾಡಲು ಹಲವಾರು ಪರಿಹಾರಗಳಿವೆ. ಮೊದಲು ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ವಾಯು ಉಂಟುಮಾಡುವ ತರಕಾರಿಗಳು, ಹೆಚ್ಚು ಎಣ್ಣೆ, ಮಸಾಲೆ, ಕೆಫೀನ್ ಮತ್ತು ಮದ್ಯಪಾನ ತ್ಯಜಿಸುವುದು ಮುಖ್ಯ. ಹೆಚ್ಚು ನಾರು ಇರುವ ಆಹಾರ, ಸಾಕಷ್ಟು ನೀರು, ಸಮಯಕ್ಕೆ ತಕ್ಕ ಊಟ ಇವು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ಒತ್ತಡವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮ, ಧ್ಯಾನ ಮತ್ತು ಯೋಗ ಸಹ ಉಪಯುಕ್ತವಾಗುತ್ತವೆ.
ಈ ಸಮಸ್ಯೆಯ ನಿಯಂತ್ರಣಕ್ಕಾಗಿ ಆಯುರ್ವೇದವು ಆಹಾರ, ಜೀವನಶೈಲಿ ಮತ್ತು ಮನಶ್ಶಾಂತಿಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಅನ್ನ, ಗಂಜಿ, ಸಾರು, ಹಾಲು ಮತ್ತು ಬಿಲ್ವದ ಹಣ್ನಿನ ರಸ ಸೇವನೆ ಉತ್ತಮ. ಅತಿಯಾದ ಮಸಾಲೆ, ಎಣ್ಣೆ, ಕರಿದ ತಿಂಡಿಗಳು, ಹುಳಿ-ಖಾರ ಆಹಾರಗಳು ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸುವುದು ಅಗತ್ಯ.
ಬಿಸಿಬಿಸಿ, ತಾಜಾ ಆಹಾರ ಸೇವನೆ ದೇಹಕ್ಕೆ ಅನುಕೂಲಕರ. ದಿನಕ್ಕೆ ಒಂದು ವೇಳೆ ಮಜ್ಜಿಗೆ ಕುಡಿಯುವುದರಿಂದಲೂ ಲಾಭವಾಗುತ್ತದೆ. ಸೀತಾಫಲ, ದಾಳಿಂಬೆ, ಬಾಳೆಹಣ್ಣು ಮುಂತಾದ ಹಣ್ಣುಗಳು ಜೀರ್ಣಕ್ರಿಯೆಗೆ ಉತ್ತಮ. ಹಸಿಮೆಣಸು, ಶುಂಠಿ, ಜೀರಿಗೆ, ಧನಿಯಾ ಹೀಗೆ ಲಘು ಮಸಾಲೆಗಳು ಸಹಾಯಕ. ಮಜ್ಜಿಗೆ, ತುಪ್ಪ ಮಿತ ಪ್ರಮಾಣದಲ್ಲಿ ಸೇವನೆ ಲಾಭಕಾರಿ. ಹಸಿರು ತರಕಾರಿಗಳಲ್ಲಿ ಸೊಪ್ಪುಗಳು, ಸೌತೆಕಾಯಿ ಮುಂತಾದವು ಸೂಕ್ತ. ದಿನವಿಡೀ ಸ್ವಲ್ಪ ಸ್ವಲ್ಪವಾಗಿ ಬಿಸಿನೀರು ಕುಡಿಯುವುದು ಸಹ ಉತ್ತಮ.
ನಿಯಮಿತ ಹೊತ್ತಿಗೆ ಊಟ ಮತ್ತು ನಿದ್ರೆ ಪಾಲಿಸುವುದು ಆರೋಗ್ಯ ಕಾಪಾಡಲು ಮುಖ್ಯ. ಪವನಮುಕ್ತಾಸನ, ವಜ್ರಾಸನ ಮತ್ತು ಶವಾಸನದಂತಹ ಯೋಗಾಸನಗಳು ಸಹಾಯಕವಾಗಿದ್ದು ಅನುಲೋಮ-ವಿಲೋಮ ಮತ್ತು ನಾಡಿ ಶುದ್ಧಿ ಪ್ರಾಣಾಯಾಮಗಳು ಒತ್ತಡವನ್ನು ಕಡಿಮೆ ಮಾಡುತ್ತವೆ. ಧ್ಯಾನ, ಮೌನ ಮತ್ತು ಪ್ರಕೃತಿಯಲ್ಲಿ ಸಮಯ ಕಳೆಯುವುದರಿಂದ ಮನಶ್ಶಾಂತಿ ಲಭಿಸುತ್ತದೆ.
ಆಯುರ್ವೇದದಲ್ಲಿ ಬಲಾಹರಿತಕಿ ಚೂರ್ಣ, ಬಿಲ್ವ ಚೂರ್ಣ, ಮುಸ್ತಾ, ಕುಟಜ ಮುಂತಾದ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಬಳಸಬಹುದು. ಸಮತೋಲನ ಆಹಾರ, ನಿಯಮಿತ ಜೀವನಶೈಲಿ, ಯೋಗ-ಧ್ಯಾನ ಮತ್ತು ಸೂಕ್ತ ಔಷಧಿಗಳ ಸಂಯೋಜನೆ ಐ.ಬಿ.ಎಸ್. ನಿಯಂತ್ರಣಕ್ಕೆ ಸಹಾಯಕ.
ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಐ.ಬಿ.ಎಸ್. ಒಂದು ದೀರ್ಘಕಾಲದ ಸಮಸ್ಯೆ. ಇದನ್ನು ನಿಯಮಿತ ಜೀವನಶೈಲಿ ಮತ್ತು ಸರಿಯಾದ ಆಹಾರ ಕ್ರಮದಿಂದ ನಿಯಂತ್ರಿಸಬಹುದಾಗಿದೆ. ಅಲೋಪಥಿಯಲ್ಲಿ ಇದರ ಲಕ್ಷಣಗಳಿಗೆ ತಾತ್ಕಾಲಿಕ ಪರಿಹಾರ ದೊರೆಯುತ್ತವೆ. ಆದರೆ ಆಯುರ್ವೇದದಲ್ಲಿ ದೇಹ-ಮನಸ್ಸಿನ ಸಮತೋಲನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಹಗುರ, ಸುಲಭವಾಗಿ ಜೀರ್ಣವಾಗುವ ಆಹಾರ, ಸಮಯಕ್ಕೆ ತಕ್ಕ ಊಟ-ನಿದ್ರೆ, ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಮನಶ್ಶಾಂತಿ ಕಾಪಾಡುವುದು ಮುಖ್ಯ. ವೈದ್ಯರ ಸಲಹೆಯಂತೆ ಆಯುರ್ವೇದ ಔಷಧಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ರೋಗಲಕ್ಷಣಗಳು ಕಡಿಮೆಯಾಗುತ್ತವೆ. ಒಟ್ಟಿನಲ್ಲಿ ಸಮತೋಲನ ಆಹಾರ, ನಿಯಮಿತ ದಿನಚರ್ಯೆ ಮತ್ತು ಒತ್ತಡ ನಿವಾರಣೆಯು ಐ.ಬಿ.ಎಸ್. ಸಮಸ್ಯೆಯ ನಿಯಂತ್ರಣಕ್ಕೆ ಬಹುಮುಖ್ಯ.
Advertisement