ಕರುಳಿನ ಆರೋಗ್ಯಕ್ಕೆ ಮನೆಮದ್ದು (ಕುಶಲವೇ ಕ್ಷೇಮವೇ)

ಮೊದಲಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸೋಂಪು ಕಾಳುಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ.
Gut health
ಕರುಳಿನ ಆರೋಗ್ಯ (ಸಂಗ್ರಹ ಚಿತ್ರ)online desk
Updated on

ನಾವು ಸೇವಿಸುವ ಆಹಾರಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯ ಭಾಗವಾಗಿರುವ ಕರುಳಿನ ಆರೋಗ್ಯವು ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ನಾವು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸದಿದ್ದರೆ ಹೊಟ್ಟೆ ಉಬ್ಬರ, ಅಜೀರ್ಣ, ಆಮ್ಲೀಯತೆ (ಅಸಿಡಿಟಿ) ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗಬಹುದು. ಅಗ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಳಲುತ್ತಿರುವವರಿಗೆ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಇರುವ ಕೆಲವು ಬೀಜಗಳು ಪರಿಹಾರವಾಗಿವೆ. ಇವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವ ಮೂಲಕ ಜೀರ್ಣಕ್ರಿಯೆ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ಸೋಂಪು ಕಾಳುಗಳು

ಮೊದಲಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸೋಂಪು ಕಾಳುಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ. ಸೋಂಪು ಬೀಜಗಳಲ್ಲಿ ಅನೆಥೋಲ್ ಎಂಬ ಪ್ರಮುಖ ಅಂಶವಿರುವ ಅಗತ್ಯ ತೈಲವಿದೆ, ಇದು ಕರುಳಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಪ್ರಪಂಚದ ಅನೇಕ ಕಡೆಗಳಲ್ಲಿ ಊಟದ ನಂತರ ಸೋಂಪು ಕಾಳುಗಳನ್ನು ಸೇವಿಸುತ್ತಾರೆ ಮತ್ತು ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಅನೆಥೋಲ್ ಕರುಳಿನ ಸ್ನಾಯುಗಳನ್ನು ಸಡಿಲಗೊಳಿಸಿ ಹೊಟ್ಟೆ ಉಬ್ಬರ ಮತ್ತು ಸೆಳೆತವನ್ನು ಕಡಿಮೆ ಮಾಡುತ್ತದೆ. ಊಟದ ನಂತರ ಇವುಗಳನ್ನು ಹಾಗೆಯೇ ತಿನ್ನಬಹುದು ಅಥವಾ ಟೀ ಮಾಡಿ ಕುಡಿಯಬಹುದು.

ಎಳ್ಳು

ಎಳ್ಳು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಳ್ಳು ನಾರಿನಂಶದ ಉತ್ತಮ ಮೂಲವಾಗಿದ್ದು ಜೀರ್ಣಕ್ರಿಯೆಗೆ ಸಹಕರಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಇದರ ನಾರಿನಂಶವು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸುವ ಮೂಲಕ ಸೂಕ್ಷ್ಮಾಣುಜೀವಿಗಳನ್ನು ಸಮತೋಲನದಲ್ಲಿಡುತ್ತದೆ. ಇದಲ್ಲದೇ ಎಳ್ಳಿನಲ್ಲಿರುವ ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್‌ಗಳು ಜೀರ್ಣಾಂಗ ವ್ಯವಸ್ಥೆಗೆ ಮತ್ತಷ್ಟು ಪೋಷಣೆಯನ್ನು ನೀಡುತ್ತವೆ. ಜೊತೆಗೆ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಸತು ಮೂಳೆಗಳ ಆರೋಗ್ಯ ಮತ್ತು ಸಾಂದ್ರತೆಯನ್ನು ಸುಧಾರಿಸುತ್ತದೆ. ಎಳ್ಳನ್ನು ಸಲಾಡ್, ಸೂಪ್, ಚಟ್ನಿ ಅಥವಾ ಇತರೆ ಖಾದ್ಯಗಳಿಗೆ ಸುಲಭವಾಗಿ ಸೇರಿಸಬಹುದು. ಬೆಲ್ಲದೊಂದಿಗೆ ಬೆರೆಸಿ ಸಿಹಿ ಉಂಡೆಗಳನ್ನು ಮಾಡಿ ತಿನ್ನಬಹುದು.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರವಾಗಿದೆ. ಈ ಬೀಜಗಳು ಹೆಚ್ಚಿನ ಪ್ರಮಾಣದ ನಾರಿನಂಶವನ್ನು ಒಳಗೊಂಡಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿರುವ ಸತು ಮತ್ತು ಉತ್ಕರ್ಷಣ ನಿರೋಧಕಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಬೆಂಬಲಿಸುತ್ತವೆ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದಲ್ಲದೆ, ಕುಂಬಳಕಾಯಿ ಬೀಜಗಳಲ್ಲಿರುವ ಟ್ರಿಪ್ಟೋಫಾನ್ ಮತ್ತು ಮೆಗ್ನೀಷಿಯಂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.

Gut health
ನಡೆಯುವ ವಿಧಾನ ಬದಲಿಸಿ, ಸಂಧಿವಾತ ನೋವಿನಿಂದ ದೂರವಿರಿ (ಕುಶಲವೇ ಕ್ಷೇಮವೇ)

ಅಗಸೆ ಬೀಜ

ಅಗಸೆ ಬೀಜ ಹೊಟ್ಟೆ ಮತ್ತು ಕರುಳಿಗೆ ತುಂಬಾ ಒಳ್ಳೆಯದು. ಇವುಗಳಲ್ಲಿ ಇರುವ ನಾರುಪದಾರ್ಥ ಮಲವನ್ನು ಸರಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ, ಹಾಗೇ ಮಲಬದ್ಧತೆ ಕಡಿಮೆ ಮಾಡುತ್ತದೆ. ಅಗಸೆ ಬೀಜಗಳಲ್ಲಿ ಇರುವ ವಿಶೇಷ ದ್ರವ್ಯಗಳು ಕರುಳಿನ ಉರಿಯೂತವನ್ನು ತಗ್ಗಿಸುತ್ತವೆ ಮತ್ತು ಜೀರ್ಣಕ್ರಿಯೆ ಸುಲಭವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಅಗಸೆ ಬೀಜಗಳನ್ನು ಸೇರಿಸಿಕೊಂಡರೆ ಹೊಟ್ಟೆ ಹಗುರವಾಗಿರುತ್ತದೆ. ಇವುಗಳನ್ನು ಚಟ್ನಿಯಲ್ಲಿ, ರೊಟ್ಟಿಯಲ್ಲಿ, ಸ್ಮೂದಿಯಲ್ಲಿ ಅಥವಾ ಮೊಸರಿನಲ್ಲಿ ಬೆರೆಸಿ ತಿನ್ನಬಹುದು. ಹೀಗೆ ತಿಂದರೆ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ.

ಚಿಯಾ ಬೀಜ

ಚಿಯಾ ಬೀಜ ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಇವುಗಳಲ್ಲಿರುವ ಕರಗಬಲ್ಲ ನಾರಿನಂಶ. ಈ ನಾರಿನಂಶವು ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಜೆಲ್‌ನಂತೆ ಆಗುತ್ತದೆ. ಈ ಜೆಲ್ ಕರುಳಿನಲ್ಲಿರುವ ಆಹಾರವನ್ನು ಮೃದುಗೊಳಿಸಿ ಅದು ಸುಲಭವಾಗಿ ಮುಂದೆ ಹೋಗಲು ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಅಷ್ಟೇ ಅಲ್ಲ, ಚಿಯಾ ಬೀಜಗಳು ಕರುಳಿನಲ್ಲಿ ವಾಸಿಸುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರ ಒದಗಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಚೆನ್ನಾಗಿದ್ದರೆ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ಚಿಯಾ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಕೂಡ ಇರುತ್ತವೆ. ಇವು ಕರುಳಿನಲ್ಲಿ ಉಂಟಾಗುವ ಸಣ್ಣಪುಟ್ಟ ಊತ ಅಥವಾ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹೀಗಾಗಿ ಪ್ರತಿದಿನ ನೆನೆಸಿದ ಚಿಯಾ ಬೀಜಗಳನ್ನು ನಿಮ್ಮ ಆಹಾರದಲ್ಲಿ --- ಉದಾಹರಣೆಗೆ ಸ್ಮೂದಿ, ಮೊಸರು ಅಥವಾ ಓಟ್ಸ್ ಜೊತೆಗೆ ಸೇರಿಸಿಕೊಂಡು ತಿನ್ನುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Gut health
ಆರೋಗ್ಯಕ್ಕಾಗಿ ಎಳನೀರು; ಪ್ರಯೋಜನಗಳು... (ಕುಶಲವೇ ಕ್ಷೇಮವೇ)

ಕೊನೆ ಮಾತು: ಒಟ್ಟಾರೆಯಾಗಿ ಹೇಳುವುದಾದರೆ ಕರುಳಿನ ಆರೋಗ್ಯಕ್ಕಾಗಿ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ಸೋಂಪು ಕಾಳುಗಳು, ಎಳ್ಳು, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಲಬದ್ಧತೆಯಂತಹ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಈ ಬೀಜಗಳು ತಮ್ಮಲ್ಲಿರುವ ನಾರಿನಂಶ, ವಿಟಮಿನ್‌ಗಳು ಮತ್ತು ಖನಿಜಗಳಿಂದ ಕರುಳಿನ ಸೂಕ್ಷ್ಮಾಣುಜೀವಿಗಳನ್ನು ಸಮತೋಲನದಲ್ಲಿಟ್ಟು, ನಮ್ಮ ಒಟ್ಟಾರೆ ಆರೋಗ್ಯಕ್ಕೆ ನೆರವಾಗುತ್ತವೆ. ಈ ಬೀಜಗಳನ್ನು ಆಹಾರಕ್ರಮದಲ್ಲಿ ನಿಯಮಿತವಾಗಿ ಬಳಸುವುದರಿಂದ ಕರುಳನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com