
ಆಸ್ಪರ್ಜರ್ ಸಿಂಡ್ರೋಮ್ ಎಂಬುದು ಆಟಿಸಂ ರೋಗಕ್ಕೆ ಸಂಬಂಧಿಸಿದ ಬೆಳವಣಿಗೆಯ ಸಮಸ್ಯೆಯಾಗಿದೆ. ಆಟಿಸಂ (ಸ್ವಲೀನತೆ) ಒಂದು ನರವೈಜ್ಞಾನಿಕ ರೋಗ. ಇದರಿಂದಾಗಿ ನರಮಂಡಲ ದುರ್ಬಲಗೊಂಡು ಸಾಮಾನ್ಯ ಸಾಮಾಜಿಕ ಕೌಶಲ್ಯಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ.
ಆಸ್ಪರ್ಜರ್ ಸಿಂಡ್ರೋಮ್ ಬಂದರೆ ಸಾಮಾಜಿಕ ಮತ್ತು ಮೌಖಿಕ ಸಂವಹನ ನಡೆಸಲು ಗಮನಾರ್ಹ ರೀತಿಯಲಿ ತೊಂದರೆಗಳಾಗುತ್ತವೆ. ಜೊತೆಗೆ ಸೀಮಿತ, ಪುನರಾವರ್ತಿತ ನಡವಳಿಕೆ ಮತ್ತು ಯಾವುದಾದರೂ ಒಂದು ವಿಷಯದಲ್ಲಿ ಇರುವ ಅತೀವ ಆಸಕ್ತಿಯಿಂದ ಕೂಡಿದೆ. ಮೊದಲು ಈ ರೋಗವನ್ನು ವಿಶಿಷ್ಟ ರೋಗವೆಂದು ಗುರುತಿಸಲಾಗಿತ್ತು. ಆದರೆ ಈಗ ಇದನ್ನು ಆಟಿಸಂ ರೋಗದ ಒಂದು ಭಾಗವೆಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ "ಹೈ-ಫಂಕ್ಷನಿಂಗ್ ಆಟಿಸಂ" ಎಂದು ಕರೆಯಲಾಗುತ್ತದೆ.
ಆಸ್ಪರ್ಜರ್ ಸಿಂಡ್ರೋಮ್ ಎಲ್ಲಾ ಜನಾಂಗಗಳು ಮತ್ತು ಸಾಮಾಜಿಕ ಆರ್ಥಿಕ ಹಿನ್ನೆಲೆಯ ಜನರ ಮೇಲೆ ಪರಿಣಾಮ ಬೀರುತ್ತದೆ. ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಬಾಲ್ಯದಲ್ಲಿಯೇ ಸ್ಪಷ್ಟವಾಗಿ ಕಂಡುಬರುತ್ತವೆ, ಸಾಮಾನ್ಯವಾಗಿ ಎರಡು ಅಥವಾ ಮೂರು ವರ್ಷ ವಯಸ್ಸಿನಲ್ಲೇ. ಹುಡುಗಿಯರಿಗಿಂತ ಹುಡುಗರಲ್ಲಿ ಇದು ಕಂಡುಬರುತ್ತದೆ. ಈ ರೋಗಕ್ಕೆ ನಿಖರವಾದ ಕಾರಣ ತಿಳಿದಿಲ್ಲ, ಆದರೆ ಇದು ಆನುವಂಶಿಕ ಮತ್ತು ಪರಿಸರ ಅಂಶಗಳ ಕಾರಣದಗಳಿಂದ ಬರುತ್ತದೆ ಎಂದು ನಂಬಲಾಗಿದೆ. ಮೊದಲೇ ಆಟಿಸಂ ಸಮಸ್ಯೆಗಳ ಇತಿಹಾಸ ಹೊಂದಿರುವ ಕುಟುಂಬಗಳಲ್ಲಿ ಹುಟ್ಟುವ ಮಕ್ಕಳಿಗೆ ಈ ಸಮಸ್ಯೆಗೆ ಸಾಮಾನ್ಯವಾಗಿ ಬರುವ ಸಾಧ್ಯತೆ ಇರುತ್ತದೆ.
ಆಸ್ಪರ್ಜರ್ ಸಿಂಡ್ರೋಮ್ ಇರುವವರು ಸಾಮಾನ್ಯವಾಗಿ ಇತರರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅವರಿಗೆ ಮಾತನಾಡಲು ತೊಂದರೆ ಇರುವುದಿಲ್ಲ. ಆದರೂ ಬೇರೆ ರೀತಿಯಲ್ಲಿ ಸಂವಹನ ನಡೆಸಲು ತೊಂದರೆ ಅನುಭವಿಸಬಹುದು. ಅಂತಹ ತೊಂದರೆಗಳು ಹೀಗಿವೆ:
ಸಾಮಾಜಿಕ ಸಂವಹನದಲ್ಲಿ ತೊಂದರೆ: ಈ ಸಮಸ್ಯೆ ಇರುವ ಜನರು ಧ್ವನಿಯ ಸ್ವರ, ಮುಖಭಾವಗಳು ಅಥವಾ ದೇಹ ಭಾಷೆಯಂತಹ ಸಾಮಾಜಿಕ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬಹುದು. ಹೀಗಾಗಿ ಅವರು ಸಾಮಾಜಿಕವಾಗಿ ವಿಚಿತ್ರವಾಗಿ ಅಥವಾ ಸೂಕ್ಷ್ಮತೆ ಇಲ್ಲದವರಾಗಿ ಕಾಣಿಸಬಹುದು.
ಸೀಮಿತ ಆಸಕ್ತಿಗಳು: ಅವರು ಕಂಪ್ಯೂಟರ್ಗಳು ಅಥವಾ ಇತಿಹಾಸದಂತಹ ನಿರ್ದಿಷ್ಟ ವಿಷಯಗಳಲ್ಲಿ ತೀವ್ರವಾದ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಅವರು ಆಸಕ್ತಿ ಪಟ್ಟ ವಿಷಯದಲ್ಲಿ ಪರಿಣತರಾಗುತ್ತಾರೆ.
ಪುನರಾವರ್ತಿತ ನಡವಳಿಕೆಗಳು: ಕ್ರಮಾಗತ ದಿನಚರಿ ಮತ್ತು ಹಿತ ಎನಿಸುವ ನಡವಳಿಕೆಗಳನ್ನು ಅವರು ಆಗಾಗ ತೋರ್ಪಡಿಸುತ್ತಾರೆ.
ಸಂವಹನ ಸವಾಲುಗಳು: ಭಾಷಾ ಬೆಳವಣಿಗೆ ಸಾಮಾನ್ಯವಾಗಿ ವಿಳಂಬವಾಗದಿದ್ದರೂ, ರೋಗಿಗಳಲ್ಲಿ ಭಾಷೆಯನ್ನು ಬಳಸುವ ವಿಧಾನವು ಅಸಾಮಾನ್ಯವಾಗಿರಬಹುದು. ಅವರು ಒಂದೇ ರೀತಿ ಸದಾ ಕಾಲ ಮಾತನಾಡಬಹುದು, ಅರ್ಥಪೂರ್ಣ ಸಂಭಾಷಣೆ ಮಾಡಲು ವಿಫಲರಾಗಬಹುದು. ವ್ಯಂಗ್ಯ ಮತ್ತು ಹಾಸ್ಯದ ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು.
ಸಂವೇದನಾ ಸೂಕ್ಷ್ಮತೆಗಳು: ಆಸ್ಪರ್ಜರ್ ಸಿಂಡ್ರೋಮ್ ಇರುವ ಜನರು ಹೆಚ್ಚಾಗಿ ಬೆಳಕು, ಶಬ್ದಗಳು, ಅಥವಾ ವಾಸನೆಗೆ ಹೆಚ್ಚಿನ ಸಂವೇದನೆಯನ್ನು ತೋರುತ್ತಾರೆ.
ವಿಕಾರತೆ: ವಿಚಿತ್ರವಾದ ನಡಿಗೆ ಅಥವಾ ಸೂಕ್ಷ್ಮ ಚಲನಾ ಕೌಶಲ್ಯಗಳ ತೊಂದರೆಯಂತಹ ಚಲನೆಯ ಸಮನ್ವಯ ಸಮಸ್ಯೆಗಳು ಅವರಲ್ಲಿ ಸಾಮಾನ್ಯವಾಗಿರುತ್ತವೆ. ಇಂತಹ ಸಮಸ್ಯೆಗಳೇನಾದರೂ ಕಂಡುಬಂದರೆ ವೈದ್ಯರ ಬಳಿಗೆ ಮಕ್ಕಳನ್ನು ಕೊಂಡೊಯ್ದು ಪರೀಕ್ಷೆ ಮಾಡಿಸಬೇಕು.
ಆಸ್ಪರ್ಜರ್ ಸಿಂಡ್ರೋಮ್ಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಅನೇಕ ಚಿಕಿತ್ಸೆಗಳು ಮತ್ತು ತಂತ್ರಗಳು ರೋಗಿಗಳು ಯಶಸ್ವಿ, ತೃಪ್ತಿಕರ ಜೀವನವನ್ನು ನಡೆಸಲು ಸಹಾಯ ಮಾಡಬಹುದು. ಚಿಕಿತ್ಸೆಯು ಸಾಮಾನ್ಯವಾಗಿ ವ್ಯಕ್ತಿಯ ಅಗತ್ಯಗಳಿಗೆ ಅನುಗುಣವಾಗಿ ಬಹುಶಿಸ್ತೀಯ ವಿಧಾನಗಳನ್ನು ಒಳಗೊಂಡಿರುತ್ತದೆ:
ವರ್ತನೆಯ ಚಿಕಿತ್ಸೆ: ಅನ್ವಯಿಕ ನಡವಳಿಕೆ ವಿಶ್ಲೇಷಣೆ ಮತ್ತು ಇತರ ನಡವಳಿಕೆಯ ಮಧ್ಯಸ್ಥಿಕೆಗಳು ಸಾಮಾಜಿಕ ಕೌಶಲ್ಯಗಳನ್ನು ಸುಧಾರಿಸಲು, ಅನಪೇಕ್ಷಿತ ನಡವಳಿಕೆಗಳನ್ನು ಕಡಿಮೆ ಮಾಡಲು ಮತ್ತು ದೈನಂದಿನ ಸುಗಮ ಜೀವನ ಕೌಶಲ್ಯಗಳನ್ನು ಕಲಿಸಲು ಸಹಾಯ ಮಾಡುತ್ತದೆ.
ಮಾತು ಮತ್ತು ಭಾಷಾ ಚಿಕಿತ್ಸೆ: ಇದು ಪ್ರಾಯೋಗಿಕ ಭಾಷಾ ಕೌಶಲ್ಯಗಳಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ ಸಂಭಾಷಣೆಯನ್ನು ಹೇಗೆ ನಡೆಸುವುದು ಅಥವಾ ಸಂವಹನದಲ್ಲಿ ಸಾಮಾಜಿಕ ಸಂದರ್ಭವನ್ನು ಅರ್ಥಮಾಡಿಕೊಳ್ಳುವುದು.
ಕೌಶಲ್ಯ ಸುಧಾರಣೆ: ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಸೂಕ್ಷ್ಮ ಚಲನಾ ಕೌಶಲ್ಯಗಳು, ಸಂವೇದನಾ ಮತ್ತು ಹೊಂದಾಣಿಕೆಯ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಾಮಾಜಿಕ ಕೌಶಲ್ಯ ತರಬೇತಿ: ರೋಗಿಗಳು ಸಾಮಾಜಿಕ ರೂಢಿಗಳನ್ನು ಅರ್ಥಮಾಡಿಕೊಳ್ಳಲು, ಸ್ನೇಹಿತರನ್ನು ಮಾಡಿಕೊಳ್ಳಲು ಮತ್ತು ಗುಂಪು ಸಂವಹನಗಳಲ್ಲಿ ಹೆಚ್ಚು ಯಶಸ್ವಿಯಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.
ಈ ರೋಗಕ್ಕೆ ನಿರ್ದಿಷ್ಟವಾಗಿ ಯಾವುದೇ ಔಷಧಿ ಇಲ್ಲದಿದ್ದರೂ, ಆತಂಕ, ಖಿನ್ನತೆ, ಅತಿ ಚಟುವಟಿಕೆಗಳು ಅಥವಾ ಕಿರಿಕಿರಿಯಂತಹ ಲಕ್ಷಣಗಳನ್ನು ನಿರ್ವಹಿಸಲು ವೈದ್ಯರು ಔಷಧಿಗಳನ್ನು ಶಿಫಾರಸು ಮಾಡಬಹುದು. ಮಗುವಿನ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಕಷ್ಟಕರ ಎನಿಸುವ ನಡವಳಿಕೆಗಳನ್ನು ನಿರ್ವಹಿಸಲು ಪೋಷಕರಿಗೆ ಮಾರ್ಗಗಳನ್ನು ಒದಗಿಸುತ್ತದೆ.
ಆಸ್ಪರ್ಜರ್ ಸಿಂಡ್ರೋಮ್ ರೋಗವನ್ನು ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೂ ಆರಂಭಿಕ ಹಸ್ತಕ್ಷೇಪ ಮತ್ತು ಬೆಂಬಲವು ಈ ಸಮಸ್ಯೆ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ತಾಯಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು, ಹಾನಿಕಾರಕ ವಸ್ತುಗಳ ಸೇವನೆ ಮಾಡದಿರುವುದು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಸೂಕ್ತವಾಗಿ ನಿರ್ವಹಿಸುವುದು ಮಗುವಿಗೆ ಈ ರೋಗ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಮಕ್ಕಳಲ್ಲಿ ಆಟಿಸಂನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಮತ್ತು ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ. ಇದರಿಂದ ಮಕ್ಕಳು ಅಗತ್ಯ ಕೌಶಲ್ಯಗಳನ್ನು ಬೇಗನೇ ಕಲಿಯಬಹುದು. ಆಟಿಸಂ ಇತಿಹಾಸ ಹೊಂದಿರುವ ಜನರು ಜೆನೆಟಿಕ್ ಕೌನ್ಸೆಲಿಂಗಿಗೆ ಹೋದರೆ ಉತ್ತಮ. ಇದರಿಂದ ಮಕ್ಕಳಿಗೆ ಈ ರೋಗ ಬರುವ ಸಾಧ್ಯತೆಯ ಬಗ್ಗೆ ತಿಳಿಯಬಹುದು.
ಕೊನೆಮಾತು: ಒಟ್ಟಾರೆಯಾಗಿ ಹೇಳವುದಾದರೆ ಆಸ್ಪರ್ಜರ್ ಸಿಂಡ್ರೋಮ್ ಜೀವಿತಾವಧಿಯ ಸಮಸ್ಯೆ. ಆದರೆ ಸರಿಯಾದ ಬೆಂಬಲದೊಂದಿಗೆ ಈ ರೋಗ ಇರುವವರು ಶೈಕ್ಷಣಿಕವಾಗಿ, ವೃತ್ತಿಪರವಾಗಿ ಮತ್ತು ಸಾಮಾಜಿಕವಾಗಿ ಚೆನ್ನಾಗಿ ಮುಂದುವರೆದು ಎಲ್ಲರಂತೆ ಇರಬಹುದು. ಅರ್ಥಪೂರ್ಣ ಮತ್ತು ಸ್ವತಂತ್ರ ಜೀವನವನ್ನು ನಡೆಸಬಹುದು.
Advertisement