
ಅಕ್ಟೋಬರ್ 15, 1931ರಂದು, ತಮಿಳುನಾಡಿನ ರಾಮೇಶ್ವರಂ ಎಂಬ ಸಣ್ಣ ಸಮುದ್ರ ತೀರದ ಪಟ್ಟಣದಲ್ಲಿ ಜನಿಸಿದ ಬಾಲಕ, ಮುಂದೊಂದು ದಿನ ಭಾರತವನ್ನು ಮಿಲಿಟರಿ ಮತ್ತು ಬಾಹ್ಯಾಕಾಶ ಶಕ್ತಿಯಾಗಿಸಿದ. ಜುಲೈ 27, 2025ರಂದು ಮೃತರಾದ ಡಾ. ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ಕೇವಲ ಭಾರತದ 11ನೇ ರಾಷ್ಟ್ರಪತಿ ಮಾತ್ರವಲ್ಲ. ಅವರು ಭಾರತದ ರಕ್ಷಣಾ ಸಾಮರ್ಥ್ಯದ ನಿರ್ಮಾತೃ ಮತ್ತು ದೇಶದ ಕಾರ್ಯತಂತ್ರದ ಸ್ವಾಯತ್ತತೆಯ ರಕ್ಷಕರೂ ಆಗಿದ್ದರು.
ಇಂದು ಅಬ್ದುಲ್ ಕಲಾಂ ಅವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಿಸುವಾಗ, ಆಧುನಿಕ ಭಾರತದ ರಕ್ಷಣಾ ಸಾಮರ್ಥ್ಯವನ್ನು ಮಹಾನ್ ವಿಜ್ಞಾನಿಯಾದ ಕಲಾಂ ಅವರ ದೂರದೃಷ್ಟಿ ಮತ್ತು ದಣಿವಿಲ್ಲದ ಕಾರ್ಯಗಳಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಅಬ್ದುಲ್ ಕಲಾಂ ಅವರು ರಾಕೆಟ್ ಇಂಜಿನಿಯರ್, ರಕ್ಷಣಾ ವಿಜ್ಞಾನಿ, ಶಿಕ್ಷಕ, ಮತ್ತು ಜನಸಾಮಾನ್ಯರ ರಾಷ್ಟ್ರಪತಿ ಎಂಬಂತ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಅಬ್ದುಲ್ ಕಲಾಂ ಅವರು 1958ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸೇರ್ಪಡೆಗೊಂಡಾಗ, ಭಾರತ ಆಗಿನ್ನೂ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಕಷ್ಟಪಡುತ್ತಿದ್ದ, ನಿಧಾನವಾಗಿ ಬೆಳೆಯುತ್ತಿದ್ದ ಒಂದು ದೇಶವಾಗಿತ್ತು. ತನ್ನ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲು ಭಾರತ ವಿದೇಶೀ ಶಕ್ತಿಗಳ ಮೇಲೆ ಅಪಾರ ಅವಲಂಬನೆ ಹೊಂದಿತ್ತು. ಇದು ಭಾರತವನ್ನು ದುರ್ಬಲವಾಗಿಸಿ, ತನ್ನ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡಿತ್ತು. ಭಾರತದ ನಿಜವಾದ ಸ್ವಾತಂತ್ರ್ಯ ರಕ್ಷಣಾ ಸ್ವಾವಲಂಬನೆ ಸಾಧಿಸುವಲ್ಲಿದೆ ಎನ್ನುವುದನ್ನು ಕಲಾಂ ಬೇಗನೆ ಅರ್ಥ ಮಾಡಿಕೊಂಡರು. ಆ ನಂತರ ಭಾರತ ಸಾಗಿದ ಹಾದಿ ದೇಶದ ವಿಧಿಯನ್ನೇ ಬದಲಾಯಿಸುವಂತಿತ್ತು.
ಭಾರತಕ್ಕೆ ಕಲಾಂ ಅವರ ಅತಿದೊಡ್ಡ ಕೊಡುಗೆ ಭಾರತದ ಕ್ಷಿಪಣಿ ಯೋಜನೆಯ ರೂಪದಲ್ಲಿ ಲಭಿಸಿತ್ತು. 1980ರ ದಶಕದಲ್ಲಿ, ಭಾರತ ಹಲವಾರು ಕಡೆಗಳಿಂದ ಅಪಾಯ ಎದುರಿಸಿತ್ತು. ಆಗ ಅಂತಾರಾಷ್ಟ್ರೀಯ ಸಮುದಾಯದಿಂದ ರಕ್ಷಣಾ ತಂತ್ರಜ್ಞಾನ ಹಂಚಿಕೆಗೂ ನಿರಾಕರಣೆ ಎದುರಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಲಾಂ ಅವರು ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಾಮ್‌ಗೆ (ಐಜಿಎಂಡಿಪಿ) ಚಾಲನೆ ನೀಡಿದರು. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಾಯಕತ್ವದಲ್ಲಿ, ಭಾರತ ತನ್ನ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗುವಂತಹ ಐದು ಕ್ಷಿಪಣಿ ವ್ಯವಸ್ಥೆಗಳಾದ ಪೃಥ್ವಿ, ಅಗ್ನಿ, ಆಕಾಶ್, ತ್ರಿಶೂಲ್, ಮತ್ತು ನಾಗ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿತು. ಪ್ರತಿಯೊಂದು ಕ್ಷಿಪಣಿಯೂ ತನ್ನದೇ ಆದ ಕಾರ್ಯತಂತ್ರದ ಉದ್ದೇಶವನ್ನು ಉದ್ದೇಶವನ್ನು ಹೊಂದಿತ್ತು. ಇವುಗಳು ಕಡಿಮೆ ವ್ಯಾಪ್ತಿಯ ಯುದ್ಧರಂಗದ ಕ್ಷಿಪಣಿಗಳಿಂದ, ಖಂಡಾಂತರ ಖಂಡಾಂತರ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಬಲ್ಲ ಕ್ಷಿಪಣಿಯ ತನಕ ವ್ಯಾಪಿಸಿದ್ದವು.
ಈ ಕ್ಷಿಪಣಿಗಳ ಪೈಕಿ, ವಿಶೇಷವಾಗಿ ಅಗ್ನಿ ಸರಣಿಯ ಕ್ಷಿಪಣಿಗಳು ಅಬ್ದುಲ್ ಕಲಾಂ ಅವರ ಸಾಧನೆಯ ಮುಕುಟ ಮಣಿಯಂತಿವೆ. ಈ ಕ್ಷಿಪಣಿಗಳು ಭಾರತಕ್ಕೆ ಸಮೀಪದ ಮತ್ತು ದೂರದ ಎರಡೂ ವ್ಯಾಪ್ತಿಯ ಶತ್ರುಗಳ ಆಕ್ರಮಣವನ್ನು ಹತ್ತಿಕ್ಕುವ ಸಾಮರ್ಥ್ಯ ಕಲ್ಪಿಸಿತು. ಇಂದು ಭಾರತ ಜಾಗತಿಕ ವೇದಿಕೆಗಳಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದು, ಈ ಆತ್ಮವಿಶ್ವಾಸವನ್ನು ಭಾರತಕ್ಕೆ ತುಂಬಿದ್ದು ಕಲಾಂ ನೇತೃತ್ವದಲ್ಲಿ ನಿರ್ಮಿಸಿದ ಕ್ಷಿಪಣಿಗಳೇ ಆಗಿವೆ. ಇತ್ತೀಚಿನ ಅಗ್ನಿ 5 ಕ್ಷಿಪಣಿ 5,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಇದು ಅಬ್ದುಲ್ ಕಲಾಂ ಅವರ ದೃಷ್ಟಿಕೋನದ ನೇರ ಕೊಡುಗೆಯಾಗಿದೆ.
ಆದರೆ, ಕಲಾಂ ಅವರ ಕೊಡುಗೆ ಮತ್ತು ಸಾಮರ್ಥ್ಯಗಳು ಕೇವಲ ಕ್ಷಿಪಣಿಗಳ ನಿರ್ಮಾಣಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಅವರು ಭಾರತದ ಪರಮಾಣು ಯೋಜನೆಯಲ್ಲಿ, ಅದರಲ್ಲೂ 1998ರ ಪೋಖ್ರಾನ್-2 ಪರಮಾಣು ಪರೀಕ್ಷೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದರು. ಪ್ರಧಾನ ಮಂತ್ರಿಯವರ ಮುಖ್ಯ ವೈಜ್ಞಾನಿಕ ಸಲಹೆಗಾರ ಮತ್ತು ಡಿಆರ್‌ಡಿಒದ ಮುಖ್ಯಸ್ಥರಾಗಿದ್ದ ಡಾ. ಕಲಾಂ, ಈ ಪರೀಕ್ಷೆಗಳು ಯಶಸ್ವಿಯಾಗುವಂತೆ ಮಾಡುವಲ್ಲಿ ಬಹಳ ಪ್ರಮುಖರಾಗಿದ್ದರು. ಆ ಮೂಲಕ ಭಾರತ ಒಂದು ಪರಮಾಣು ಶಕ್ತಯಾಗಿ ಅಧಿಕೃತವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಇದು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿದ್ದು, ಭಾರತದ ಕಾರ್ಯತಂತ್ರದ ಪರಿಸ್ಥಿತಿಯನ್ನು ಬದಲಿಸಿ, ಜಾಗತಿಕ ಹಂತದಲ್ಲಿ ಒಪ್ಪಿಗೆ ಇರದಿದ್ದರೂ, ಭಾರತಕ್ಕೆ ಗೌರವವನ್ನು ಸಂಪಾದಿಸಿತು.
ಅಬ್ದುಲ್ ಕಲಾಂ ಅವರನ್ನು ವಿಶೇಷವಾಗಿಸಿದ್ದು ದೊಡ್ಡ ಚಿತ್ರವನ್ನು ಕಾಣಬಲ್ಲ ಅವರ ಸಾಮರ್ಥ್ಯ. ರಕ್ಷಣಾ ತಂತ್ರಜ್ಞಾನ ಎನ್ನುವುದು ಕೇವಲ ಆಯುಧಗಳ ನಿರ್ಮಾಣಕ್ಕೆ ಮಾತ್ರವೇ ಸೀಮಿತವಾಗದೆ, ವೈಜ್ಞಾನಿಕ ಶ್ರೇಷ್ಠತೆಯ ವ್ಯವಸ್ಥೆಯನ್ನು ನಿರ್ಮಿಸುವುದು ಎನ್ನುವುದನ್ನು ಕಲಾಂ ಅರಿತಿದ್ದರು. ಆದ್ದರಿಂದಲೇ ರಕ್ಷಣಾ ತಂತ್ರಜ್ಞಾನಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳುವುದು ಸುಲಭವಾಗಿದ್ದ ಕಾಲಘಟ್ಟದಲ್ಲಿ ಅವುಗಳನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ನಿಲುವನ್ನ ಕಲಾಂ ತಳೆದಿದ್ದರು. ಡಾ. ಕಲಾಂ ಹಲವು ತಲೆಮಾರಿನ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಮಾರ್ಗದರ್ಶನ ನೀಡಿದ್ದರು. ಭಾರತ ಜಗತ್ತಿನ ಯಾವುದೇ ತಾಂತ್ರಿಕ ಸಾಧನೆಯನ್ನು ಸರಿಗಟ್ಟಬಹುದು ಮತ್ತು ಅದನ್ನು ಮೀರಿ ಬೆಳೆಯಬಲ್ಲದು ಎಂಬ ಭರವಸೆಯನ್ನು ಕಲಾಂ ಅವರಲ್ಲಿ ತುಂಬಿದ್ದರು.
ಇಂದು ನಾವು ನೋಡುತ್ತಿರುವ ಭಾರತ ಬೇರೆ ದೇಶಗಳ ಉಪಗ್ರಹಗಳನ್ನು ಉಡಾಯಿಸುತ್ತಿದೆ, ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ನಿರ್ಮಿಸುತ್ತಿದೆ, ದೇಶೀಯವಾಗಿ ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುತ್ತಿದೆ, ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳನ್ನೂ ತಯಾರಿಸುತ್ತಿದೆ. ಇವೆಲ್ಲವೂ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ನಿರ್ಮಿಸಿದ ತಳಹದಿಯ ಮೇಲೇ ನಿರ್ಮಾಣವಾಗುತ್ತಿವೆ. ಅಗ್ನಿ ಕ್ಷಿಪಣಿಗಳು ನಮ್ಮ ಗಡಿಗಳನ್ನು ರಕ್ಷಿಸುತ್ತಿವೆ. ಕಲಾಂ ಅವರ ಬೆಂಬಲದಿಂದ, ಭಾರತ - ರಷ್ಯಾ ಸಹಯೋಗದಲ್ಲಿ ನಿರ್ಮಿಸಿದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಇಂದು ಜಗತ್ತಿನ ಅತ್ಯಂತ ವೇಗವಾದ ಕ್ರೂಸ್ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ. ಏರೋಸ್ಪೇಸ್ ಮತ್ತು ರಕ್ಷಣೆಗಳು ಒಂದನ್ನೊಂದು ಒಳಗೊಳ್ಳಬೇಕು ಎನ್ನುವುದು ಕಲಾಂ ಕನಸಾಗಿತ್ತು. 2019ರಲ್ಲಿ ಭಾರತ ಉಪಗ್ರಹ ನಿರೋಧಕ ಆಯುಧವನ್ನು ಪರೀಕ್ಷಿಸಿದ್ದು, ಈ ಮೂಲಕ ಭಾರತ ಕಲಾಂ ಕನಸಿನ ಬಾಹ್ಯಾಕಾಶ ಯುದ್ಧ ಸಾಮರ್ಥ್ಯವನ್ನೂ ಗಳಿಸಿತು.
ಹಾರ್ಡ್‌ವೇರ್ ಮತ್ತು ಕ್ಷಿಪಣಿಗಳನ್ನೂ ಮೀರಿ, ಭಾರತಕ್ಕೆ ಕಲಾಂ ಅವರ ಅತಿದೊಡ್ಡ ಕೊಡುಗೆ ಬಹುಶಃ ಮನಶ್ಶಾಸ್ತ್ರೀಯವಾದುದು. ಅವರು ಭಾರತಕ್ಕೆ ತನ್ನ ಮೇಲೆ ತಾನು ನಂಬಿಕೆ ಇಡಲು ಸಾಧ್ಯವಾಗುವಂತೆ ಮಾಡಿದರು. ತನ್ನ ಕೃತಿ 'ಇಂಡಿಯಾ 2020'ಯಲ್ಲಿ ಕಲಾಂ ಭಾರತವನ್ನು ಒಂದು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾರ್ಪಡಿಸಲು ಬೇಕಾದ ದೃಷ್ಟಿಕೋನವನ್ನು ವಿವರಿಸಿದರು. ಇದಕ್ಕಾಗಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದುವುದು ಅತ್ಯವಶ್ಯಕ ಎಂದು ಕಲಾಂ ಪ್ರತಿಪಾದಿಸಿದ್ದರು. ಬಹುತೇಕ ಎರಡು ಶತಮಾನಗಳ ಕಾಲ ವಿದೇಶೀ ಶಕ್ತಿಗಳ ವಸಾಹತಾಗಿದ್ದ ಭಾರತಕ್ಕೂ ಕಠಿಣ ಪರಿಶ್ರಮ, ಬದ್ಧತೆ, ಮತ್ತು ದೇಶೀಯ ನಾವೀನ್ಯತೆಗಳ ಮೂಲಕ ಜಗತ್ತಿನ ತಾಂತ್ರಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆಯಲು ಸಾಧ್ಯ ಎನ್ನುವುದನ್ನು ಕಲಾಂ ವಿವರಿಸಿದ್ದರು.
ಕಲಾಂ ಅವರು ಜೀವನದಲ್ಲಿ ತಾನು ಬೋಧಿಸಿದ ಮೌಲ್ಯಗಳನ್ನು ಸ್ವತಃ ಅಳವಡಿಸಿಕೊಂಡಿದ್ದರು. ಮೂಲತಃ ಒಂದು ಬಡ ಕುಟುಂಬದಿಂದ ಬಂದು, ಸಾಕಷ್ಟು ವೈಫಲ್ಯಗಳು ಮತ್ತು ಹಿನ್ನಡೆಗಳನ್ನು ಎದುರಿಸಿದ್ದ ಕಲಾಂ, ತನ್ನ ಕನಸುಗಳಿಂದಾಗಲಿ, ದೇಶದ ಕುರಿತ ತನ್ನ ಬದ್ಧತೆಯಿಂದಾಗಲಿ ಒಂದಿನಿತೂ ಹಿಂದೆ ಸರಿಯಲಿಲ್ಲ. ಅವರು ತನ್ನ ಕೊನೆಯ ಉಸಿರಿನ ತನಕವೂ ಭಾರತೀಯ ಯುವ ಜನತೆಗೆ ಲಭ್ಯರಾಗಿದ್ದು, ಆಳವಾದ ಸಂಪರ್ಕ ಸಾಧಿಸಿದ್ದರು. ಐಐಎಂ ಶಿಲ್ಲಾಂಗ್ ವಿದ್ಯಾರ್ಥಿಗಳೊಡನೆ ತನ್ನ ಅತ್ಯಂತ ನೆಚ್ಚಿನ ವೃತ್ತಿಯಾದ ಪಾಠ ಮಾಡುವ ಸಂದರ್ಭದಲ್ಲೇ ಡಾ. ಅಬ್ದುಲ್ ಕಲಾಂ ಅವರು ಕೊನೆಯುಸಿರೆಳೆದರು.
ಇಂದಿನ ಭಾರತದ ರಕ್ಷಣಾ ರಫ್ತು ಹೆಚ್ಚುತ್ತಿದ್ದು, ವಿಮಾನವಾಹಕ ನೌಕೆಗಳನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸುತ್ತಿದೆ. ಅದರೊಡನೆ, ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳು ಮತ್ತು ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಭಾರತ ಹೊಂದಿದ್ದು, ಇದು ಕಲಾಂ ಅವರು ಅವಿಶ್ರಾಂತವಾಗಿ ದುಡಿದು, ಕಂಡ ಕನಸುಗಳ ಸಾಕಾರವಾಗಿದೆ. ಭಾರತದ ಉಪಗ್ರಹಗಳು ಮಂಗಳ ಗ್ರಹವನ್ನು ತಲುಪಿದಾಗ, ಭಾರತೀಯ ಕ್ಷಿಪಣಿಗಳು ದೇಶವನ್ನು ರಕ್ಷಿಸಲು ಸಜ್ಜಾಗಿ ನಿಂತಾಗ, ಇಸ್ರೋ ಮತ್ತು ಡಿಆರ್‌ಡಿಒಗಳ ಯುವ ವಿಜ್ಞಾನಿಗಳು ಸಾಧ್ಯತೆಯ ಮಿತಿಗಳನ್ನು ಇನ್ನಷ್ಟು ವಿಸ್ತರಿಸಿದಾಗ, ಅವೆಲ್ಲವೂ ರಾಮೇಶ್ವರಂನ ಮಿಸೈಲ್ ಮ್ಯಾನ್ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ನಿರ್ಮಿಸುವ ಸಾಧನೆಗಳಾಗಿವೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ನಾವು ಕೇವಲ ಓರ್ವ ವಿಜ್ಞಾನಿ ಅಥವಾ ರಾಷ್ಟ್ರಪತಿಯನ್ನು ಮಾತ್ರವೇ ಸ್ಮರಿಸುವುದಲ್ಲ. ಬದಲಿಗೆ, ಜಾಗತಿಕ ಶಕ್ತಿಯಾಗುವತ್ತ ಭಾರತದ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಿರುವ ದೂರದೃಷ್ಟಿಯನ್ನು ಹಾಕಿಕೊಟ್ಟ ದೇಶ ನಿರ್ಮಾತೃವನ್ನೂ ಸ್ಮರಿಸುತ್ತೇವೆ. ಕಲಾಂ ಅವರ ಹಿರಿಮೆ ಯಾವುದೋ ಸ್ಮಾರಕಗಳಿಗೆ ಸೀಮಿತವಾಗಿಲ್ಲ. ಬದಲಿಗೆ, ನಮ್ಮ ಆಕಾಶಗಳನ್ನು ರಕ್ಷಿಸುವ ಪ್ರತಿಯೊಂದು ಕ್ಷಿಪಣಿ ಮತ್ತು ಆತ್ಮನಿರ್ಭರ ಭಾರತದ ಕನಸು ಕಾಣುವ ಪ್ರತಿಯೊಬ್ಬ ವಿಜ್ಞಾನಿಯಲ್ಲೂ ಕಲಾಂ ನೆನಪುಗಳು ಶಾಶ್ವತವಾಗಿರಲಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement