
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ಇಂದು ಹಿಂದಿನ ಯಾವುದೇ ತಂತ್ರಜ್ಞಾನಕ್ಕಿಂತಲೂ ಅತ್ಯಂತ ಹೆಚ್ಚಿನ ವೇಗದಲ್ಲಿ ಬಿಲಿಯನೇರ್‌ಗಳನ್ನು ಸೃಷ್ಟಿಸುತ್ತಿದೆ. ಆದರೆ, ಭಾರತ ಜಗತ್ತಿನಲ್ಲೇ ಅತ್ಯುತ್ತಮರಾದ ಹಲವಾರು ಇಂಜಿನಿಯರ್‌ಗಳನ್ನು ಹೊಂದಿದ್ದರೂ, ಯಾವುದೇ ಎಐ ಬಿಲಿಯನೇರ್‌ಗಳನ್ನು ಹೊಂದಿಲ್ಲ. ಇಲ್ಲಿ ಏನಾಗುತ್ತಿದೆ? ಭಾರತ ಯಾಕೆ ಎಐ ಕ್ಷೇತ್ರದಲ್ಲಿ ಹಿಂದುಳಿದಿದೆ ಎನ್ನುವುದನ್ನು ಗಮನಿಸೋಣ.
ಆರು ವರ್ಷಗಳ ಹಿಂದೆ, ಎಐ ಆಗಿನ್ನೂ ಸಂಶೋಧನಾ ಪ್ರಯೋಗಾಲಯಗಳ ಗೋಡೆಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಎಐ ನಂಬಲಸಾಧ್ಯವಾದ ವೇಗದಲ್ಲಿ ಸಂಪತ್ತು ಸೃಷ್ಟಿಸುತ್ತಿದೆ. ಸಿಬಿ ಇನ್‌ಸೈಟ್ಸ್ ಪ್ರಕಾರ, ಇಂದು 523 ಎಐ 'ಯುನಿಕಾರ್ನ್'ಗಳಿದ್ದು (ಯುನಿಕಾರ್ನ್ ಎಂದರೆ 8,750 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯ ಹೊಂದಿರುವ ಕಂಪನಿ), ಅವುಗಳಲ್ಲಿ 127 ಕಂಪನಿಗಳು ಕೇವಲ ಎರಡು ವರ್ಷಗಳ ಒಳಗೆ ಯುನಿಕಾರ್ನ್ ಸ್ಥಾನಮಾನವನ್ನು ಸಂಪಾದಿಸಿವೆ.
ಇದನ್ನು ಹಿಂದಿನ ತಂತ್ರಜ್ಞಾನ ಪ್ರಗತಿಗೆ ಹೋಲಿಸಿ ನೋಡಿ. ಗೂಗಲ್ ಒಂದು ಬೃಹತ್ ಸಂಸ್ಥೆಯಾಗಿ ಬೆಳೆಯಲು ಐದು ವರ್ಷ ತೆಗೆದುಕೊಂಡಿತು. ಇಂದಿನ ಎಐ ಸ್ಟಾರ್ಟಪ್‌ಗಳು ಕೇವಲ 18-24 ತಿಂಗಳ ಒಳಗಾಗಿ ಈ ಮೌಲ್ಯವನ್ನು ತಲುಪುತ್ತಿವೆ. ಓಪನ್ ಎಐ ಇಂದು 13.74 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಇದು ಭಾರತದ ಬಹಳಷ್ಟು ಕಂಪನಿಗಳ ಒಟ್ಟು ಮೌಲ್ಯವನ್ನು ಕೂಡಿಸುವುದಕ್ಕಿಂತಲೂ ಹೆಚ್ಚಾಗಿದೆ.
ಅಲೆಕ್ಸಾಂಡರ್ ವಾಂಗ್ ಎಂಬಾತ ಈ ಅವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡ. ಕೇವಲ 19ರ ಹರೆಯದಲ್ಲೇ ಆತ ಎಂಐಟಿಯಲ್ಲಿ ವ್ಯಾಸಂಗ ತೊರೆದು, ಸ್ಕೇಲ್ ಎಐ ಆರಂಭಿಸಲು ನಿರ್ಧರಿಸಿದ.
ಆತನ ಒಳನೋಟ ಬಹಳ ಸರಳವಾಗಿತ್ತು: ಎಐ ಮಾಡೆಲ್‌ಗಳಿಗೆ ಅತ್ಯಂತ ಉನ್ನತ ಗುಣಮಟ್ಟದ, ಅಪಾರ ಪ್ರಮಾಣದ ತರಬೇತಿ ಮಾಹಿತಿಗಳು ಬೇಕು. ಪ್ರತಿಯೊಂದು ತಂತ್ರಜ್ಞಾನ ದೈತ್ಯ ಸಂಸ್ಥೆಗೂ ಸ್ಕೇಲ್ ಎಐ ಕೊಡುತ್ತಿರುವ ಸೇವೆಗಳೇ ಅತ್ಯವಶ್ಯಕವಾಗಿದ್ದವು.
25ರ ಹರೆಯದಲ್ಲಾಗಲೇ ವಾಂಗ್ ಓರ್ವ ಬಿಲಿಯನೇರ್ ಆಗಿದ್ದ. 28 ವರ್ಷ ವಯಸ್ಸಾದಾಗ ಆತನ ಮೌಲ್ಯ 1.31 ಲಕ್ಷ ಕೋಟಿ ರೂಪಾಯಿ ತಲುಪಿತ್ತು. ಜೂನ್ 2025ರಲ್ಲಿ ಮೆಟಾ ಸ್ಕೇಲ್ ಎಐನಲ್ಲಿ 1.25 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡಿತ್ತು. ಎಂಐಟಿಯಲ್ಲಿ ವ್ಯಾಸಂಗವನ್ನು ಅರ್ಧಕ್ಕೇ ತ್ಯಜಿಸಿದ್ದ ವಾಂಗ್, ಇಂಜಿನಿಯರಿಂಗ್ ಪದವಿ ಪೂರೈಸಲು ಬೇಕಾಗುವುದಕ್ಕಿಂತಲೂ ಕಡಿಮೆ ಸಮಯದಲ್ಲಿ ಶತ ಕೋಟ್ಯಾಧೀಶನಾಗಿದ್ದ.
ಅಮೆರಿಕನ್ ಕಂಪನಿಗಳು ಎಐ ಅಭಿವೃದ್ಧಿ ಪಡಿಸಲು ಬಿಲಿಯನ್‌ಗಟ್ಟಲೆ ಹಣ ಸುರಿಯುತ್ತಿದ್ದರೆ, ಚೀನಾದ ಹೆಡ್ಜ್ ಫಂಡ್ ಮ್ಯಾನೇಜರ್ ಲಿಯಾಂಗ್ ವೆನ್‌ಫೆಂಗ್ 2023ರಲ್ಲಿ ಮೌನವಾಗಿ ಡೀಪ್ ಸೀಕ್ ಅನ್ನು ತನ್ನ ಸಂಸ್ಥೆಯ ಸಣ್ಣ ಅಂಗವಾಗಿ ಆರಂಭಿಸಿದ.
ಜನವರಿ 2025ರಲ್ಲಿ, ಡೀಪ್ ಸೀಕ್ ಚಾಟ್ ಜಿಪಿಟಿಗೆ ಸ್ಪರ್ಧೆ ಒಡ್ಡುವಂತಹ, ಆದರೆ ಕೇವಲ 52.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಎಐ ಮಾಡೆಲ್ ಒಂದನ್ನು ಬಿಡುಗಡೆಗೊಳಿಸಿತು. ಈ ಮೊತ್ತವನ್ನು ಡೀಪ್ ಸೀಕ್‌ನಂತಹದೇ ಎಐ ಮಾದರಿಗಳಿಗಾಗಿ ಮೆಟಾ ಖರ್ಚು ಮಾಡಿದ 43,750 ಕೋಟಿ ರೂಪಾಯಿಗಳೊಡನೆ ಹೋಲಿಸಿ ನೋಡಿ! ಡೀಪ್ ಸೀಕ್ ಕೇವಲ 1/100 ಮೊತ್ತದಲ್ಲಿ ಈ ಸಾಧನೆ ನಿರ್ಮಿಸಿತು.
ಡೀಪ್ ಸೀಕ್ ಸಾಧನೆಯನ್ನು ನೋಡಿ ಅಮೆರಿಕಾದ ಷೇರು ಮಾರುಕಟ್ಟೆ ಕಂಪಿಸಿತು. ಎನ್‌ವೀಡಿಯಾ ಸಂಸ್ಥೆಯ ಷೇರುಗಳು ಒಂದೇ ದಿನದಲ್ಲಿ 17% ಕುಸಿತ ಕಂಡು, 52.5 ಲಕ್ಷ ಕೋಟಿ ರೂಪಾಯಿಗಳನ್ನು ಮಾರುಟ್ಟೆಯಿಂದ ಅಳಿಸಿ ಹಾಕಿತು. ಇಂದು ಡೀಪ್ ಸೀಕ್ 1.31 - 1.75 ಲಕ್ಷ ಕೋಟಿ ಮೌಲ್ಯ ಹೊಂದಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಎಐನಿಂದ ತಮ್ಮ ಮೌಲ್ಯ ಸಂಪಾದಿಸಿರುವ 73 ವ್ಯಕ್ತಿಗಳನ್ನು ಅಧ್ಯಯನ ನಡೆಸಿದ್ದು, ಅವರೆಲ್ಲರ ಒಟ್ಟು ಮೌಲ್ಯ 36.75 ಲಕ್ಷ ಕೋಟಿ ರೂಪಾಯಿ ಮೀರುತ್ತದೆ.
ಕ್ಲಾಡ್ ಎಐ ನಿರ್ಮಾತೃ ಆಂಥ್ರೊಪಿಕ್ ಇಂದು 5.38 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಇದರ ಏಳು ಜನ ಸಂಸ್ಥಾಪಕರು ತಲಾ 1.58 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿದ್ದು, ಇವೆಲ್ಲ ಸಂಪತ್ತು ಕೇವಲ ಕಳೆದ ನಾಲ್ಕು ವರ್ಷಗಳಲ್ಲಿ ನಿರ್ಮಾಣಗೊಂಡಿವೆ.
ಇನ್ನೂ ಆಶ್ಚರ್ಯಕರ ವಲಯಗಳು ಬಿಲಿಯನೇರ್‌ಗಳನ್ನು ಸೃಷ್ಟಿಸುತ್ತಿವೆ. ಯಾವೋ ರುನ್‌ಹಾವೊ ಎಂಬಾತ ಎಐ ಆಧಾರಿತ ಪ್ರಣಯದ ಆಟವೊಂದನ್ನು ನಿರ್ಮಿಸಿದ್ದು, ಇದು ವಾರ್ಷಿಕವಾಗಿ 7,438 ಕೋಟಿ ರೂಪಾಯಿ ಸಂಪಾದಿಸುತ್ತಿದೆ. ಇದರಿಂದಾಗಿ ರುನ್‌ಹಾವೊ ಮೌಲ್ಯ 28,000 ಕೋಟಿ ರೂಪಾಯಿ ಆಗಿದೆ.
ಭಾರತ ಸಾಕಷ್ಟು ಜಾಗತಿಕ ಗುಣಮಟ್ಟದ ಇಂಜಿನಿಯರ್‌ಗಳು ಮತ್ತು ಗಣಿತಶಾಸ್ತ್ರಜ್ಞರನ್ನು ಹೊಂದಿದ್ದರೂ, ಇಲ್ಲಿಯತನಕ ಯಾವುದೇ ಎಐ ಬಿಲಿಯನೇರ್‌ಗಳನ್ನು ಸೃಷ್ಟಿಸಿಲ್ಲ.
ಸೇವೆಗೆ ಸೀಮಿತವಾದ ಜ್ಞಾನ
ಭಾರತದ ತಂತ್ರಜ್ಞಾನ ಎಲ್ಲವೂ ಸೇವೆಗೆ, ಅಂದರೆ ಇತರರಿಗೆ ಕೋಡಿಂಗ್ ಮಾಡಲು, ಐಟಿ ಬೆಂಬಲ ನೀಡಲು, ಮೂಲಭೂತ ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ಅಸಾಧಾರಣ ಹೆಸರು ಮಾಡಿದೆ. ಇಂತಹ ಸೇವೆ ಅಪಾರ ಆದಾಯ ಸಂಪಾದಿಸಿದರೂ, ಬೃಹತ್ ಸಂಪತ್ತು ಗಳಿಸಲು ಸಾಧ್ಯವಿಲ್ಲ.
1,000 ಉದ್ಯೋಗಿಗಳನ್ನು ಹೊಂದಿರುವ ಸ್ಕೇಲ್ ಎಐ 2.54 ಲಕ್ಷ ಕೋಟಿ ಮೌಲ್ಯ ಹೊಂದಿದೆ. ಆದರೆ, 1,00,000 ಉದ್ಯೋಗಿಗಳನ್ನು ಹೊಂದಿರುವ ಇಂದುಒಂದು ಭಾರತೀಯ ಐಟಿ ಕಂಪನಿಯ ಮೌಲ್ಯ ಅಂದಾಜು 1.31 ಲಕ್ಷ ಕೋಟಿ ರೂಪಾಯಿ ಆಗಿರಬಹುದು. ಅಂದರೆ, ಸ್ಕೇಲ್ ಎಐ ಪ್ರತಿ ಉದ್ಯೋಗಿಗೆ 193 ಪಟ್ಟು ಹೆಚ್ಚಿನ ಮೌಲ್ಯ ಹೊಂದಿದೆ.
ವಾಂಗ್ ತನ್ನ 19ರ ಹರೆಯದಲ್ಲೇ ಎಂಐಟಿ ವ್ಯಾಸಂಗ ತ್ಯಜಿಸಿದ. ಆದರೆ, ತಮ್ಮ ಮಕ್ಕಳು ಇಂತಹ ನಿರ್ಧಾರಕ್ಕೆ ಮುಂದಾದರೆ, ಎಷ್ಟು ಜನ ಭಾರತೀಯ ಪೋಷಕರು ಅವರನ್ನು ಬೆಂಬಲಿಸಲು ಸಾಧ್ಯ? ಎಐ ತಳಹದಿ ನಿರ್ಮಿಸಲು ಅಪಾರ ಪ್ರಮಾಣದಲ್ಲಿ ಅಪಾಯವನ್ನು ಕೈಗೆತ್ತಿಕೊಳ್ಳುವ ಅಗತ್ಯವಿದ್ದು, ಬಹುತೇಕ ಭಾರತೀಯ ಉದ್ಯಮಿಗಳು ಮತ್ತು ಹೂಡಿಕೆದಾರರು ಇಂತಹ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ.
ಸ್ಕೇಲ್ ಎಐ, ಡೀಪ್ ಸೀಕ್, ಮತ್ತು ಆಂಥ್ರೋಪಿಕ್‌ಗಳನ್ನು ಮೊದಲ ದಿನದಿಂದಲೂ ಜಾಗತಿಕ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ. ಬಹಳಷ್ಟು ಭಾರತೀಯ ಎಐ ಸ್ಟಾರ್ಟಪ್‌ಗಳು ಮೊದಲಿಗೆ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನಷ್ಟೇ ಹೊಂದಿರುತ್ತವೆ. ಸ್ಥಳೀಯವಾಗಿ ಸೇವೆ ಸಲ್ಲಿಸುವುದರಿಂದ ಇಂತಹ ಸ್ಟಾರ್ಟಪ್‌ಗಳು ಬಿಲಿಯನ್ ಡಾಲರ್ ಮೌಲ್ಯ ಸಂಪಾದಿಸುವುದು ಬಹಳ ಕಷ್ಟಕರ.
ಸತ್ಯ ನಾಡೆಲ್ಲ ಮೈಕ್ರೋಸಾಫ್ಟ್ ಅನ್ನು ಮುನ್ನಡೆಸುತ್ತಿದ್ದಾರೆ. ಸುಂದರ್ ಪಿಚೈ ಗೂಗಲ್ ನೇತೃತ್ವ ವಹಿಸಿದ್ದಾರೆ. ಬಹಳಷ್ಟು ಉನ್ನತ ಎಐ ಕಂಪನಿಗಳಲ್ಲಿರುವ ಹಿರಿಯ ಇಂಜಿನಿಯರ್‌ಗಳು ಭಾರತೀಯರೇ ಆಗಿದ್ದಾರೆ. ಆದರೆ, ಅವರೆಲ್ಲರೂ ಈಗ ಅಮೆರಿಕಾದ ಸಂಪತ್ತನ್ನು ವೃದ್ಧಿಸುತ್ತಿದ್ದಾರೆಯೇ ಹೊರತು, ಭಾರತವನ್ನು ಶ್ರೀಮಂತವಾಗಿಸುತ್ತಿಲ್ಲ.
ಕೃತಕ ಬುದ್ಧಿಮತ್ತೆಯ ತಳಪಾಯ ನಿರ್ಮಿಸುವ ಎಲ್ಲ ಕಂಪನಿಗಳೂ ಈಗ, ಅಂದರೆ 2025 - 2026ರಲ್ಲಿ ಸ್ಥಾಪನೆಯಾಗುತ್ತಿವೆ. ಒಂದು ವೇಳೆ ಭಾರತ ಮುಂದಿನ 24 ತಿಂಗಳಲ್ಲಿ ಯಾವುದೇ ಮಹತ್ವದ ಎಐ ಸಂಸ್ಥೆಯನ್ನು ಆರಂಭಿಸದಿದ್ದರೆ, ಭಾರತ ಎಐ ಮೌಲ್ಯ ಸೃಷ್ಟಿಯ ಮಹತ್ವದ ಅವಕಾಶವನ್ನು ಕಳೆದುಕೊಳ್ಳಲಿದೆ.
ಭಾರತಕ್ಕೆ ಏನು ಬೇಕು?
ಭಾರತದಲ್ಲಿ ಪ್ರತಿಭೆಗಳು ಸಾಕಷ್ಟಿವೆ. ಮಾರುಕಟ್ಟೆಯೂ ಭಾರತದಲ್ಲೇ ಇದೆ. ನಮಗೆ ಈಗ ಕೊರತೆ ಆಗಿರುವುದೆಂದರೆ, ಹೆಚ್ಚಿನ ಮಹತ್ವಾಕಾಂಕ್ಷೆ ಮತ್ತು ಅಪಾಯ ತೆಗೆದುಕೊಳ್ಳುವ ಗುಣ. ಇದಕ್ಕೆ ಭಾರತ ಏನು ಮಾಡಬಹುದು?
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಐ ಕಂಪನಿಗಳಿಗೆ ಉದ್ಯೋಗಿಗಳಾಗಿ ಸೇರುವ ಬದಲು, ಕಂಪನಿ ಆರಂಭಿಸುವಂತೆ ಉತ್ತೇಜಿಸುವುದು.
ಮೂಲಭೂತ ಎಐ ಸಂಶೋಧನೆಗೆ ಸರ್ಕಾರದಿಂದ ಹಣದ ಹೂಡಿಕೆ.
ಜಾಗತಿಕ ಗುಣಮಟ್ಟದ ಎಐ ಮೂಲಭೂತ ವ್ಯವಸ್ಥೆ.
ಯುವ ಉದ್ಯಮಿಗಳು ದೊಡ್ಡ ಔದ್ಯಮಿಕ ಅಪಾಯವನ್ನು ಎದುರಿಸುವುದನ್ನು ಪ್ರೋತ್ಸಾಹಿಸುವುದು ಮತ್ತು ಸಂಭ್ರಮಿಸುವುದು.
ಮೊದಲ ದಿನದಿಂದಲೂ ಜಾಗತಿಕವಾಗಿ ಆಲೋಚಿಸುವುದು.
ಎಐ ಮಾನವ ಇತಿಹಾಸದಲ್ಲಿ ಯಾವುದೇ ತಂತ್ರಜ್ಞಾನಕ್ಕಿಂತಲೂ ಹೆಚ್ಚು ವೇಗವಾಗಿ ಸಂಪತ್ತನ್ನು ಸೃಷ್ಟಿಸುತ್ತಿದೆ. ಇದರ ಫಲ ಇಂದೇ ಲಭಿಸುತ್ತದೆಯೇ ಹೊರತು, ಮುಂದೆ ಭವಿಷ್ಯದಲ್ಲಿ ಇನ್ನಾವುದೋ ಸಮಯದಲ್ಲಿ ಅಲ್ಲ.
ಕ್ಷಿಪ್ರವಾಗಿ ಹೆಜ್ಜೆ ಇಡುವ, ಜಾಗತಿಕವಾಗಿ ಆಲೋಚಿಸುವ, ಮತ್ತು ಸ್ಪರ್ಧಿಸುವ ಧೈರ್ಯ ಹೊಂದಿರುವ ಭಾರತೀಯ ಉದ್ಯಮಿಗಳು ಇನ್ನೂ ಬಹಳಷ್ಟು ಮೌಲ್ಯ ಸಂಪಾದಿಸಲು ಸಾಧ್ಯವಿದೆ.
ಎಐ ಗೋಲ್ಡ್ ರಷ್ ಈಗ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ಆದರೆ, ಯುವ ಭಾರತೀಯರು ತಮ್ಮ ಅವಕಾಶವನ್ನು ಪಡೆದುಕೊಳ್ಳುತ್ತಾರೆಯೇ? ಅಥವಾ ಇತರರು ಬಿಲಿಯನೇರ್‌ಗಳಾಗುವುದಕ್ಕೆ ಭಾರತೀಯರು ಬೆಂಬಲ ನೀಡುತ್ತಾ ಕುಳಿತು ಬಿಡುತ್ತಾರೆಯೇ?
ಭಾರತದ ಮಹತ್ವಾಕಾಂಕ್ಷಿ ಯುವಕರಿಗೆ ಇದು ಸರಿಯಾದ ಸಮಯ. ಆದರೆ, ಅವರು ಇದನ್ನು ಕೈವಶ ಮಾಡಿಕೊಳ್ಳುತ್ತಾರೋ ಎನ್ನುವುದು ಈಗಿನ ಪ್ರಶ್ನೆ!
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
Advertisement