
ಹಲವಾರು ದಶಕಗಳ ಕಾಲ ಪಾಕಿಸ್ತಾನ ನಿರಂತರವಾಗಿ ತಾಲಿಬಾನ್ ಅನ್ನು ಬೆಂಬಲಿಸಿ, ಅದು ಎರಡು ಸೂಪರ್ ಪವರ್‌ಗಳಾದ ಸೋವಿಯತ್ ಒಕ್ಕೂಟ ಮತ್ತು ಅಮೆರಿಕಾಗಳನ್ನು ಮಣಿಸಲು ನೆರವಾಗಿತ್ತು. ಪಾಕಿಸ್ತಾನ ತಾಲಿಬಾನ್‌ಗೆ ಆಶ್ರಯ, ಆಯುಧಗಳು ಮತ್ತು ತರಬೇತಿ ನೀಡಿದ್ದು, ತನ್ನ ಮಿತ್ರನಾದ ತಾಲಿಬಾನ್ ಅಧಿಕಾರಕ್ಕೆ ಬಂದಾಗ ತಾನೇ ಅಫ್ಘಾನಿಸ್ತಾನವನ್ನು ನಿಯಂತ್ರಿಸುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ತಾಲಿಬಾನ್ ಗೆಲುವು ಪಾಕಿಸ್ತಾನಕ್ಕೆ ಅತಿದೊಡ್ಡ ಹಿನ್ನಡೆ ಉಂಟುಮಾಡಿದ್ದು, ಪಾಕ್ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಒಂದು ಕಾಲದಲ್ಲಿ ಘನಿಷ್ಠವಾಗಿದ್ದ ಸ್ನೇಹ ಇಂದು ಬಹಿರಂಗ ಶತ್ರುತ್ವದ ರೂಪ ತಳೆದಿದೆ.
ಆಗಸ್ಟ್ 2021ರಲ್ಲಿ, ತಾಲಿಬಾನ್ ಕಾಬೂಲ್‌ನಲ್ಲಿ ಮತ್ತೆ ಅಧಿಕಾರ ಹಿಡಿದಾಗ ಬಹಳಷ್ಟು ಪಾಕಿಸ್ತಾನಿಯರು ಸಂಭ್ರಮಿಸಿ, ಉಭಯ ದೇಶಗಳ ಸಂಬಂಧ ಸುಧಾರಿಸಬಹುದು ಎಂದು ಭಾವಿಸಿದ್ದರು. ಅಮೆರಿಕದ ಒತ್ತಡ ಮತ್ತು ಟೀಕೆಗಳ ನಡುವೆಯೂ ಇಸ್ಲಾಮಾಬಾದ್ ತಾಲಿಬಾನ್ ಉಗ್ರರಿಗೆ ಬೆಂಬಲ ನೀಡಿತ್ತು. ಆದರೆ, ಅಮೆರಿಕಾ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಕಾಲ್ತೆಗೆದ ಬಳಿಕ, ಉಭಯ ದೇಶಗಳ ನಡುವಿನ ಸ್ನೇಹ ಕುಸಿಯಲು ಆರಂಭವಾಯಿತು.
ಮೊದಲು ಅಮೆರಿಕಾ ಮತ್ತು ನ್ಯಾಟೋದ ಪಡೆಗಳು ಅಫ್ಘಾನಿಸ್ತಾನದಲ್ಲಿದ್ದಾಗ ಪಾಕಿಸ್ತಾನ ಸಂಬಂಧಗಳಲ್ಲಿ ಸಮತೋಲನ ಸಾಧಿಸಲು ಸಫಲವಾಗಿತ್ತು. ಆದರೆ ಇಂದು, ತಾಲಿಬಾನ್ ಅಧಿಕಾರದಲ್ಲಿರುವಾಗ, ಇಸ್ಲಾಮಾಬಾದ್‌ಗೆ ತಾಲಿಬಾನ್ ಜೊತೆ ವ್ಯವಹರಿಸುವುದು ಕಷ್ಟಕರವಾಗುತ್ತಿದೆ. ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ವಾಯು ದಾಳಿ ನಡೆಸಿತು. ತಕ್ಷಣವೇ ಅಫ್ಘಾನಿಸ್ತಾನವೂ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸಿತು. ಅಲ್ಲಿಗೆ ಸ್ನೇಹದ ಜಾಗದಲ್ಲಿ ವೈರತ್ವ ಮನೆಮಾಡಿತ್ತು.
ಅಫ್ಘಾನಿಸ್ತಾನ ಭಯೋತ್ಪಾದಕರಿಗೆ, ಅದರಲ್ಲೂ ಅಫ್ಘಾನಿಸ್ತಾನದ ನೆಲದಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರರಿಗೆ ಆಶ್ರಯ ನೀಡುತ್ತಿದೆ ಎನ್ನುವುದು ಪಾಕಿಸ್ತಾನದ ಪ್ರಮುಖ ಕಳವಳ. 2024ರಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ದಾಳಿಗಳು 40% ಹೆಚ್ಚಳ ಕಂಡವು. ನೂರಾರು ಪಾಕಿಸ್ತಾನಿ ನಾಗರಿಕರು ಮತ್ತು ಸೈನಿಕರು ಈ ದಾಳಿಗಳಲ್ಲಿ ಸಾವಿಗೀಡಾದರು. ಪಾಕಿಸ್ತಾನ ಸೇನಾ ಮುಖ್ಯಸ್ಥ, ಜನರಲ್ ಆಸಿಮ್ ಮುನೀರ್ ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಮೂಲ ಕಾರಣ ಅಫ್ಘಾನಿಸ್ತಾನದಲ್ಲಿ ಟಿಟಿಪಿ ಉಪಸ್ಥಿತಿ ಇರುವುದು ಎಂದಿದ್ದಾರೆ. ತಾಲಿಬಾನ್ ಸೂಕ್ತ ಕ್ರಮ ಕೈಗೊಳ್ಳುವ ತನಕ ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿಯುವ ಅಪಾಯವಿದೆ ಎಂದು ಮುನೀರ್ ಎಚ್ಚರಿಸಿದ್ದಾರೆ.
ಆದರೆ ತಾಲಿಬಾನ್ ಇದನ್ನು ಪಾಕಿಸ್ತಾನದ ಆಂತರಿಕ ವಿಚಾರ ಎಂದಿದ್ದು, ಟಿಟಿಪಿ ಬಹುತೇಕ ಪಾಕಿಸ್ತಾನಿ ಪಶ್ತೂನ್‌ಗಳನ್ನೇ ಹೊಂದಿರುವುದರಿಂದ, ಪಾಕಿಸ್ತಾನ ಅವರ ಜೊತೆ ಮಾತುಕತೆ ನಡೆಸಬೇಕು ಎಂದಿದೆ. ಇದು ಉಭಯ ಬದಿಗಳಲ್ಲಿನ ಆಳವಾದ ಬುಡಕಟ್ಟು ಮತ್ತು ಜನಾಂಗೀಯ ಸಂಬಂಧವನ್ನು, ಅಂದರೆ, ಅವರ ವಿಧಿಯನ್ನು ನಿರ್ಧರಿಸುವ ಪಶ್ತೂನ್ ಬಾಂಧವ್ಯವನ್ನು ತೋರಿಸುತ್ತದೆ.
ಪಾಕಿಸ್ತಾನದಲ್ಲಿರುವ ಬಹುತೇಕ ಪಶ್ತೂನ್‌ಗಳು ಅಫ್ಘಾನಿಸ್ತಾನದ ಗಡಿಯ ಸನಿಹದಲ್ಲಿರುವ ಖೈಬರ್ ಪಖ್ತೂನ್‌ಖ್ವಾ ಮತ್ತು ಬಲೂಚಿಸ್ತಾನಗಳಲ್ಲಿ ವಾಸಿಸುತ್ತಾರೆ. ಅವರು ಅಫ್ಘನ್ ಪಶ್ತೂನ್‌ಗಳೊಡನೆ ಒಂದೇ ಭಾಷೆ, ಸಂಪ್ರದಾಯಗಳು ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಿದ್ದಾರೆ. ಹಲವಾರು ವರ್ಷಗಳ ಕಾಲ ಪಾಕಿಸ್ತಾನ ಬುಡಕಟ್ಟು ಹೋರಾಟಗಾರರೊಡನೆ ಶಾಂತಿ ಒಪ್ಪಂದ ನಡೆಸಲು ಪ್ರಯತ್ನ ನಡೆಸಿತಾದರೂ, ಈಗ ಟಿಟಿಪಿ ಜೊತೆ ಮಾತುಕತೆ ನಡೆಸಲು ನಿರಾಕರಿಸಿದೆ. ತಾಲಿಬಾನ್ ಶೈಲಿಯ ಆಡಳಿತ ಜಾರಿಗೆ ತರಬೇಕು ಎನ್ನುವ ಟಿಟಿಪಿ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಈ ಸಮಸ್ಯೆ ರಾಜಕೀಯವನ್ನೂ ಮೀರಿ ಬೆಳೆದಿದೆ. ಇದಕ್ಕೆ ಹಲವಾರು ದಶಕಗಳ ಯುದ್ಧದ ಹಿನ್ನೆಲೆಯಿದೆ. 1980ರ ದಶಕದ ಸೋವಿಯತ್ ಆಕ್ರಮಣದ ಸಂದರ್ಭದಲ್ಲಿ, ಪಾಕಿಸ್ತಾನದ ಗಡಿ ಪ್ರದೇಶಗಳು ಯುಎಸ್ ಬೆಂಬಲಿತ ಮುಜಾಹಿದೀನ್‌ಗಳ ಪ್ರಮುಖ ನೆಲೆಯಾಯಿತು. ಸಾವಿರಾರು ಹೋರಾಟಗಾರರಿಗೆ ತರಬೇತಿ, ಆಯುಧ ಮತ್ತು ಹಣ ನೀಡಿ, ಅವರನ್ನು ಸೋವಿಯತ್ ವಿರುದ್ಧ ಹೋರಾಟಕ್ಕೆ ಕಳುಹಿಸಲಾಯಿತು. ಈ ಜಾಲಗಳೇ ಬಳಿಕ ತಾಲಿಬಾನ್ ಮತ್ತು ಟಿಟಿಪಿ ಉಗಮಕ್ಕೆ ನಾಂದಿಯಾದವು.
ಬಹುತೇಕ 45 ವರ್ಷಗಳ ಕಾಲ, ಈ ಗಡಿ ಪ್ರದೇಶ ನಿರಂತರವಾಗಿ ಸಂಘರ್ಷವನ್ನೇ ನೋಡುತ್ತಾ ಬಂದಿದೆ. ಮೊದಲಿಗೆ ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧವಾದರೆ, ಬಳಿಕ ಅಮೆರಿಕನ್ನರ ವಿರುದ್ಧದ ಯುದ್ಧ. ಕ
ಇವೆರಡೂ ಯುದ್ಧಗಳಲ್ಲಿ ಸೆಣಸಿದ ಬುಡಕಟ್ಟುಗಳು ಇಂದಿಗೂ ತಮ್ಮ ಸಂಸ್ಕೃತಿ ಮತ್ತು ನಂಬಿಕೆಗಳ ಕಾರಣದಿಂದ ತಾಲಿಬಾನ್‌ಗೆ ಆತ್ಮೀಯವಾಗಿವೆ.
1893ರಲ್ಲಿ, ಬ್ರಿಟಿಷರು ರಚಿಸಿದ ಡ್ಯುರಾಂಡ್ ಲೈನ್ ಎಂಬ 2,640 ಕಿಲೋಮೀಟರ್ ಗಡಿ ಪಶ್ತೂನ್ ಬುಡಕಟ್ಟುಗಳನ್ನು ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತ ಎಂದು ವಿಭಜಿಸಿತು. 1947ರ ಬಳಿಕ, ಈ ಗಡಿ ಪಾಕಿಸ್ತಾನವನ್ನು ರಚಿಸಿತು. ಆದರೆ ಅಫ್ಘನ್ನರು ಎಂದಿಗೂ ಈ ಗಡಿಯನ್ನು ಒಪ್ಪಲಿಲ್ಲ. ತಾಲಿಬಾನ್ ಡ್ಯುರಾಂಡ್ ಗಡಿಯನ್ನು 'ಕಾಲ್ಪನಿಕ ರೇಖೆ' ಎಂದಿದ್ದು, ಇದನ್ನು ನೈಜ ಗಡಿ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ.
2017ರಲ್ಲಿ, ಪಾಕಿಸ್ತಾನ ಗಡಿಗೆ ಬೇಲಿ ಹಾಕುವುದನ್ನು ಆರಂಭಿಸಿ, ಬಂಡುಕೋರರ ವಲಸೆ ತಡೆಯಲು ಕಟ್ಟುನಿಟ್ಟಿನ ವಲಸೆ ನೀತಿಗಳನ್ನು ಜಾರಿಗೆ ತಂದಿತು. ಮೊದಲು ಪಶ್ತೂನ್‌ಗಳು ಸ್ಥಳೀಯ ಪರವಾನಗಿ ಪಡೆದುಕೊಂಡು, ಅಥವಾ ದಾಖಲೆಗಳ ಅವಶ್ಯಕತೆಯೇ ಇಲ್ಲದೆ ಮುಕ್ತವಾಗಿ ಗಡಿ ದಾಟಿ ಸಂಚರಿಸಬಹುದಾಗಿತ್ತು. ಆದರೆ ಈಗ ವೀಸಾ ವ್ಯವಸ್ಥೆ ಜಾರಿಗೆ ಬಂದಿದ್ದು, ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹಕ್ಕೆ ಇದು ಅನಿವಾರ್ಯ ಕ್ರಮ ಎನ್ನುವುದು ಪಾಕಿಸ್ತಾನದ ವಾದ.
ಪಾಕಿಸ್ತಾನದ ಈ ಕ್ರಮಗಳು ತಾಲಿಬಾನ್ ಮತ್ತು ಗಡಿಯಾಚೆಗಿನ ವ್ಯಾಪಾರವನ್ನೇ ಅವಲಂಬಿಸಿರುವ ಸ್ಥಳೀಯರ ಕೋಪಕ್ಕೆ ಕಾರಣವಾದವು. ಬಹಳಷ್ಟು ಪಶ್ತೂನ್ ಕುಟುಂಬಗಳು ಗಡಿಯ ಎರಡೂ ಬದಿಗಳಲ್ಲಿ ವಾಸಿಸುತ್ತಿದ್ದು, ವಿವಾಹ ಮತ್ತು ಸ್ನೇಹದ ಮೂಲಕ ಪರಸ್ಪರ ಸಂಪರ್ಕಿತವಾಗಿವೆ. ಈಗಿನ ನೂತನ ಅಡ್ಡಿಗಳು ಅವರ ಸಂಪರ್ಕವನ್ನೇ ಕಡಿತಗೊಳಿಸುತ್ತಿವೆ.
ಭಯೋತ್ಪಾದಕ ದಾಳಿಗಳು ಹೆಚ್ಚಾದಂತೆ, ಪಾಕಿಸ್ತಾನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಯಿತು. ದಾಖಲಾತಿಗಳಿಲ್ಲದೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಸಾವಿರಾರು ಅಫ್ಘನ್ ನಿರಾಶ್ರಿತರನ್ನು ದೇಶದಿಂದ ಹೊರಹಾಕಿತು. ಅವರಲ್ಲಿ ಬಹಳಷ್ಟು ಜನರು ಮತ್ತೆ ಪಾಕಿಸ್ತಾನಕ್ಕೇ ಮರಳಿ, ಪಾಕಿಸ್ತಾನದ ಈ ನಡೆ ವಿಫಲವಾಗುವಂತೆ ಮಾಡಿದರು. ಕಳ್ಳ ಸಾಗಾಣಿಕೆ ತಡೆಗೆ ನಡೆಸಿದ ಕ್ರಮಗಳು ಗಡಿಯಾಚೆಗಿನ ಅನೌಪಚಾರಿಕ ವ್ಯಾಪಾರವನ್ನು ಅವಲಂಬಿಸಿರುವ ಜನರ ಜೀವನೋಪಾಯಕ್ಕೆ ತೊಂದರೆ ಉಂಟುಮಾಡಿವೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ, ಇಸ್ಲಾಮಾಬಾದ್ ಈ ಕ್ರಮಗಳನ್ನು ತನ್ನ ಇಚ್ಛೆಯಂತೆ ಜಾರಿಗೊಳಿಸಿದ್ದು, ಇದು ತಾಲಿಬಾನ್ ಜೊತೆಗಿನ ಸಂಬಂಧವನ್ನು ಹಾಳುಗೆಡವಿ, ಗಡಿ ಪ್ರದೇಶಗಳ ಸಮುದಾಯಗಳನ್ನು ಮುಖ್ಯ ವಾಹಿನಿಯಿಂದ ದೂರಗೊಳಿಸಿದೆ. ಈ ರೀತಿ ಮಾಡುವುದರಿಂದ, ಪಾಕಿಸ್ತಾನ ಗಡಿಯಾಚೆಗಿನ ಪಶ್ತೂನ್ ಬಾಂಧವ್ಯ ರಾಜಕೀಯಕ್ಕಿಂತಲೂ ಬಲವಾದುದು ಎನ್ನುವುದನ್ನು ಕಡೆಗಣಿಸಿತು. ಎರಡೂ ಬದಿಗಳಲ್ಲಿ ತಲೆಮಾರುಗಳ ಕಾಲ ಜನರು ಒಂದೇ ಸಂಸ್ಕೃತಿ, ನಂಬಿಕೆ ಮತ್ತು ಜೀವನ ವಿಧಾನವನ್ನು ಅನುಸರಿಸುತ್ತಾ ಬಂದಿದ್ದಾರೆ.
ಹಲವಾರು ವರ್ಷಗಳ ಕಾಲ, ಅಫ್ಘನ್ ಪ್ರತಿರೋಧ ನಾಯಕರು ಮತ್ತು ತಾಲಿಬಾನ್ ಕಮಾಂಡರ್‌ಗಳು ಪಾಕಿಸ್ತಾನದ ನಗರಗಳು ಮತ್ತು ಗ್ರಾಮಗಳಲ್ಲಿ ಸುರಕ್ಷಿತವಾಗಿ ಜೀವನ ನಡೆಸಿದ್ದು, ಪಾಕಿಸ್ತಾನವನ್ನು ತಮ್ಮ ಎರಡನೇ ಮನೆ ಎಂದೇ ಕರೆದಿದ್ದರು. ಇದರಿಂದ ಸಂತುಷ್ಟಗೊಂಡಿದ್ದ ಪಾಕಿಸ್ತಾನ, ತಾಲಿಬಾನ್ ಎಂದೆಂದಿಗೂ ತನಗೆ ನಿಷ್ಠವಾಗಿರುತ್ತದೆ ಎಂದೇ ಭಾವಿಸಿತ್ತು. ಆದರೆ, ಇಂದು ಬದಲಾದ ಸನ್ನಿವೇಶದಲ್ಲಿ ತಾಲಿಬಾನ್ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದು, ಪಾಕಿಸ್ತಾನದ ನಿಯಂತ್ರಣಕ್ಕೆ ಒಳಪಡಲು ನಿರಾಕರಿಸಿದೆ.
ತಾಲಿಬಾನ್ ಅನ್ನು ಪಶ್ಚಿಮದಲ್ಲಿ ತನ್ನ ಹಿತ್ತಲಿನಂತೆ ಬಳಸಿಕೊಂಡು, ಗಡಿಯನ್ನು ಬಲಪಡಿಸುವ 'ಸ್ಟ್ರಾಟಜಿಕ್ ಡೆಪ್ತ್' ಎನ್ನುವ ಪಾಕಿಸ್ತಾನದ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ತಾಲಿಬಾನ್ ಈಗ ಬಲವಾದ, ರಾಷ್ಟ್ರೀಯವಾದಿ ಮತ್ತು ಸ್ವಾವಲಂಬಿಯಾಗಿ ಬೆಳೆದಿದೆ.
ಈ ಬಿಕ್ಕಟ್ಟು ಏಕಾಏಕಿ ಆರಂಭಗೊಂಡಿಲ್ಲ. ಇದು ದುರ್ಬಲ ನೀತಿಗಳು, ಅಪನಂಬಿಕೆಗಳು ಮತ್ತು ಐತಿಹಾಸಿಕ ತಪ್ಪುಗಳ ಮೇಲೇ ನಿರ್ಮಾಣಗೊಂಡಿದೆ. ಒಂದು ಕಾಲದಲ್ಲಿ ಪಾಕಿಸ್ತಾನ ತನ್ನ ವಿದೇಶೀ ನೀತಿಯ ಯಶಸ್ಸು ಎಂದು ಭಾವಿಸಿದ್ದು ಇಂದು ಅದರ ಅತ್ಯಂತ ಕೆಟ್ಟ ವೈಫಲ್ಯವಾಗಿ ಬದಲಾಗಿದೆ.
ಒಂದು ಕಾಲದ ಸಹಯೋಗಿಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಇಂದು ಯುದ್ಧಕ್ಕಿಳಿದಿವೆ. ಅನುಮಾನಗಳ ಕಾರಣದಿಂದ ಅವುಗಳ ಮನಸ್ಸು ವಿಭಜನೆಗೊಂಡಿದೆ. ಒಂದು ಕಾಲದಲ್ಲಿ ತಾಲಿಬಾನ್ ಉತ್ಕರ್ಷಕ್ಕೆ ನೆರವಾಗಿದ್ದ ಪಾಕಿಸ್ತಾನವೇ ಇಂದು ಅದರ ವಿರುದ್ಧ ತಿರುಗಿಬಿದ್ದಿದೆ. 45 ವರ್ಷಗಳ ನಿರಂತರ ಉದ್ವಿಗ್ನತೆಗಳ ಬಳಿಕ, ಸಹೋದರತ್ವ ಕೊನೆಗೊಂಡಿದೆ.
ಪಾಕಿಸ್ತಾನ ಮತ್ತು ತಾಲಿಬಾನ್ ಕಥೆ ಇತಿಹಾಸದ ಒಂದು ಪಾಠವಾಗಿದ್ದು, ಮೋಸ ಮತ್ತು ನಿರಾಕರಣೆಯ ಆಧಾರದಲ್ಲಿ ನಿರ್ಮಿಸಿದ ಸ್ನೇಹ ಉಳಿಯುವುದು ಅಸಾಧ್ಯ ಎನ್ನುವ ಸತ್ಯವನ್ನು ಬೋಧಿಸಿದೆ. ಉಳಿವಿನ ಕಾರಣಕ್ಕಾಗಿ ಆರಂಭಗೊಂಡ ಸ್ನೇಹ ಇಂದು ನೆನಪಿನಿಂದ ಮರೆಯಾಗಲು ಸಿದ್ಧವಿಲ್ಲದ ಗಡಿಯಾಚೆಗಿನ ನಿಯಂತ್ರಣದ ಪ್ರಯತ್ನಗಳ ಕಾರಣದಿಂದ ಕೊನೆಯಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement