ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)

ಭಾರತ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳದಿದ್ದರೂ, ತಾಲಿಬಾನ್ ಈಗ ಹೆಚ್ಚು ಪ್ರಾಯೋಗಿಕವಾದ ಮಾರ್ಗವನ್ನು ಅನುಸರಿಸುತ್ತಿದೆ.
ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)
Updated on

ಬಹಳಷ್ಟು ಜನರು ಊಹಿಸಲು ಸಾಧ್ಯವೇ ಇಲ್ಲದ ಒಂದು ನಡೆಯಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ಎಂಟು ದಿನಗಳ ಭಾರತ ಭೇಟಿಗಾಗಿ ಅಕ್ಟೋಬರ್ 9ರಂದು ನವದೆಹಲಿಗೆ ಆಗಮಿಸಿದ್ದಾರೆ. ಈ ಭೇಟಿಯ ವೇಳೆ, ಮುತ್ತಾಕಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿ, ಬಳಿಕ ಆಗ್ರಾ ಮತ್ತು ದಿಯೋಬಂದ್‌ಗಳಲ್ಲಿ ಇಸ್ಲಾಮಿಕ್ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.

ಈ ಭೇಟಿ ತಾಲಿಬಾನ್ ಜೊತೆಗೂ ಭಾರತದ ಆಳವಾದ ಸಹಯೋಗಕ್ಕೆ ಸಾಕ್ಷಿಯಾಗಿದೆ. ಭಾರತ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳದಿದ್ದರೂ, ತಾಲಿಬಾನ್ ಈಗ ಹೆಚ್ಚು ಪ್ರಾಯೋಗಿಕವಾದ ಮಾರ್ಗವನ್ನು ಅನುಸರಿಸುತ್ತಿದೆ. ತಾಲಿಬಾನ್ ಈಗ ಅನುಸರಿಸುತ್ತಿರುವ ವಿಧಾನ ಪ್ರಾದೇಶಿಕ ಬದಲಾವಣೆಗಳು ಮತ್ತು ರಾಷ್ಟ್ರೀಯ ಭದ್ರತೆಯ ಅವಶ್ಯಕತೆಗಳಿಂದ ರೂಪಿತವಾಗಿವೆ. ಇಷ್ಟಾದರೂ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಕುರಿತ ತಾಲಿಬಾನ್ ಕಟುವಾದ ನಿಯಮಗಳ ಕುರಿತು ಕಳವಳಗಳು ಹಾಗೇ ಇವೆ.

ಅಮೀರ್ ಖಾನ್ ಮುತ್ತಾಕಿ: ಯೋಧನಿಂದ ವಿದೇಶಾಂಗ ಸಚಿವನ ತನಕ

1970ರಲ್ಲಿ ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್‌ನಲ್ಲಿ ಜನಿಸಿದ ಮುತ್ತಾಕಿ ಜೀವನವೂ ಸಹ ಅವರ ದೇಶದ ರೀತಿಯಲ್ಲೇ ಪ್ರಕ್ಷುಬ್ಧತೆಗಳಿಂದ ತುಂಬಿತ್ತು. ಮುತ್ತಾಕಿ ಕುಟುಂಬ ಮೂಲತಃ ಪಕೀತ ಪ್ರದೇಶಕ್ಕೆ ಸೇರಿದ್ದು, ಯುದ್ಧದ ಕಾರಣದಿಂದ ಅವರು ಬೇರೆಡೆಗೆ ಸಾಗುವಂತಾಯಿತು. ತನ್ನ ಒಂಬತ್ತನೇ ವಯಸ್ಸಿಗೆ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಆಕ್ರಮಣ ನಡೆಸಿದ ಬಳಿಕ, ಮುತ್ತಾಕಿ ಪಾಕಿಸ್ತಾನಕ್ಕೆ ಪಲಾಯನ ನಡೆಸಿದರು. ಪಾಕಿಸ್ತಾನದಲ್ಲಿ ಮುತ್ತಾಕಿ ನಿರಾಶ್ರಿತರ ಶಾಲೆಗಳಲ್ಲಿ ವ್ಯಾಸಂಗ ನಡೆಸಿ, ಬಳಿಕ ಕಮ್ಯುನಿಸ್ಟ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಭಾಗಿಯಾದರು.

1994ರಲ್ಲಿ ತಾಲಿಬಾನ್ ಬೆಳವಣಿಗೆ ಸಾಧಿಸಿ, ಯುದ್ಧಕೋರರಿಂದ ಕಂದಹಾರ್ ಅನ್ನು ವಶಪಡಿಸಿಕೊಂಡ ಬಳಿಕ, ಮುತ್ತಾಕಿ ತಾಲಿಬಾನ್ ಜೊತೆ ಸೇರಿಕೊಂಡರು. ಬಳಿಕ ಮುತ್ತಾಕಿ ಕಂದಹಾರ್ ರೇಡಿಯೋದ ಡೈರೆಕ್ಟರ್ ಜನರಲ್ ಮತ್ತು ಹೈ ಕೌನ್ಸಿಲ್ ಸದಸ್ಯರಾದರು. ಬಳಿಕ 2001ರಲ್ಲಿ ಅಮೆರಿಕಾ ಆಕ್ರಮಣವಾಗುವ ತನಕ ಶಿಕ್ಷಣ ಸಚಿವರಾಗಿ ಕಾರ್ಯಾಚರಿಸಿದರು. 2019ರಲ್ಲಿ ಮುತ್ತಾಕಿ ಅಮೆರಿಕಾದ ಜೊತೆಗಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದು, ಈಗ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರಾಗಿ ಕಾರ್ಯಾಚರಿಸುತ್ತಾ, ಹೆಚ್ಚಿನ ಪ್ರಭಾವ ಹೊಂದಿದ್ದಾರೆ.

ಅಫ್ಘಾನಿಸ್ತಾನದ ಜೊತೆಗೆ ಭಾರತದ ಆರಂಭಿಕ ಗೊಂದಲಗಳು

1999ರಲ್ಲಿ ಭಾರತದ ಐಸಿ-814 ವಿಮಾನ ಅಪಹರಣವಾಗಿ, ಅದನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ಒಯ್ದಾಗ, ಭಾರತದ ಸಚಿವರಾದ ಜಸ್ವಂತ್ ಸಿಂಗ್ ಅವರು ಅನಿವಾರ್ಯವಾಗಿ ತಾಲಿಬಾನ್ ಜೊತೆ ನೇರವಾಗಿ ಮಾತುಕತೆ ನಡೆಸುವ ಪರಿಸ್ಥಿತಿ ನಿರ್ಮಾಣವಾಯಿತು. ಅದಾದ ಒಂದು ವರ್ಷದ ಬಳಿಕ, ತಾಲಿಬಾನ್ ರಾಯಭಾರಿ ಮುಲ್ಲಾ ಅಬ್ದುಲ್ ಸಲೀಂ ಜ಼ಯೀಫ್ ಅವರು ಇಸ್ಲಾಮಾಬಾದಿನಲ್ಲಿ ಭಾರತದ ರಾಯಭಾರಿ ವಿಜಯ್ ಕೆ ನಂಬಿಯಾರ್ ಅವರನ್ನು ಭೇಟಿಯಾದರು. ಇದೊಂದು ಸೌಹಾರ್ದ ಭೇಟಿಯಾದರೂ, ಬಳಿಕ ಈ ಕುರಿತು ವಿವರಣೆ ನೀಡಿದ ನಂಬಿಯಾರ್, ತಾಲಿಬಾನ್ ಪಾಕಿಸ್ತಾನದ ಜೊತೆಗೆ ಗಾಢವಾದ ಸಂಬಂಧ ಹೊಂದಿರುವುದರಿಂದ ಭಾರತ - ತಾಲಿಬಾನ್ ನೈಜ ಸ್ನೇಹ, ಅರ್ಥೈಸಿಕೊಳ್ಳುವಿಕೆ ಸಾಧ್ಯವಿಲ್ಲ ಎಂದಿದ್ದರು.

ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)
ಮಾದಕ ದ್ರವ್ಯ ವ್ಯಾಪಾರಕ್ಕೆ ಮಣಿಪುರ ಸ್ವರ್ಗ? ಕಳ್ಳಸಾಗಣೆದಾರರನ್ನು ಸೆಳೆಯುತ್ತಿರುವುದಾದರು ಏನು? (ಜಾಗತಿಕ ಜಗಲಿ)

2021ರ‌ ಬಳಿಕ ಎಚ್ಚರಿಕೆಯ ಹೆಜ್ಜೆಗಳು

ತಾಲಿಬಾನ್ 2021ರಲ್ಲಿ ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ, ಭಾರತ ತಾಲಿಬಾನ್ ಜೊತೆಗೆ ತಾನು 'ಜಾಗರೂಕ ವ್ಯವಹಾರ' ಎನ್ನುವ ಸಂಬಂಧವನ್ನು, ಮಾತುಕತೆಗಳನ್ನು ಆರಂಭಿಸಿತು. ಅಮೆರಿಕಾ ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಕೆಲವೇ ಗಂಟೆಗಳ ಬಳಿಕ, ಕತಾರ್‌ನಲ್ಲಿ ಭಾರತದ ರಾಯಭಾರಿಯಾದ ದೀಪಕ್ ಮಿತ್ತಲ್ 1980ರ ರಕ್ಷಣಾ ಒಪ್ಪಂದದಡಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜ಼ಾಯ್ ಅವರನ್ನು ಭೇಟಿಯಾದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರು ಮತ್ತು ಅಲ್ಪಸಂಖ್ಯಾತ ಪ್ರತಿನಿಧಿಗಳೂ ಸೇರಿದಂತೆ, ಎಲ್ಲರನ್ನು ಒಳಗೊಂಡ ಸರ್ಕಾರವನ್ನು ಸ್ಥಾಪಿಸಬೇಕು ಎಂದು ಭಾರತ ಆಗ್ರಹಿಸಿತ್ತು. ಸೆಪ್ಟೆಂಬರ್ 2021ರಲ್ಲಿ, ಭಾರತ ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಅನುಮೋದಿಸದಿದ್ದರೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಗುರುತಿಸಿತು. 2021ರ ಡಿಸೆಂಬರ್ ವೇಳೆಗಾಗಲೇ ಭಾರತ ಅಫ್ಘಾನಿಸ್ತಾನಕ್ಕೆ 1.6 ಟನ್‌ಗಳಷ್ಟು ಔಷಧಗಳನ್ನು ನೆರವಿನ ರೂಪದಲ್ಲಿ ರವಾನಿಸಿತ್ತು. ಬಳಿಕ ಭಾರತದ ಮಾನವೀಯ ನೆರವಿನ ಯೋಜನೆಗಳನ್ನು ನಿರ್ವಹಿಸಲು ಒಂದು ಭಾರತೀಯ ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿ ನಿಯೋಜಿಸಲಾಯಿತು.

2022ರಲ್ಲಿ ತಾಲಿಬಾನ್ ವಿಶ್ವವಿದ್ಯಾಲಯಗಳಿಂದ ಮಹಿಳೆಯರನ್ನು ನಿಷೇಧಿಸಿದಾಗ ಭಾರತ ಅದಕ್ಕೆ ಅಧಿಕೃತವಾಗಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿತು. 2023ರಲ್ಲಿ ಅಫ್ಘಾನ್ ದೂತಾವಾಸ ಕಚೇರಿ ಮುಚ್ಚಲ್ಪಟ್ಟರೂ, ಅಫ್ಘಾನಿಸ್ತಾನದ ಜೊತೆಗಿನ ಭಾರತದ ಸಂಪರ್ಕ ಮುಂದುವರಿಯಿತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು 2025ರಲ್ಲಿ ಮುತ್ತಾಕಿ ಅವರನ್ನು ಭೇಟಿಯಾದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಮುತ್ತಾಕಿ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದರು. ತಾಲಿಬಾನ್ ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿತ್ತು.

ಈಗ ಯಾಕೆ ಭೇಟಿ?

ಪ್ರಾದೇಶಿಕ ಚಿತ್ರಣ ಈಗ ಸಾಕಷ್ಟು ಬದಲಾಗಿದೆ.

ಒಂದು ಕಾಲದಲ್ಲಿ ತಾಲಿಬಾನಿನ ಪ್ರಮುಖ ಮಿತ್ರನಾಗಿದ್ದ ಪಾಕಿಸ್ತಾನ ಈಗ ಅದರ ಶತ್ರುವಾಗಿ ಬದಲಾಗಿದೆ. ಇರಾನ್ ದುರ್ಬಲಗೊಂಡಿದ್ದು, ರಷ್ಯಾ ಉಕ್ರೇನ್ ಯುದ್ಧದಲ್ಲಿ ನಿರತವಾಗಿದೆ. ಇನ್ನು ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧ್ಯಕ್ಷೀಯ ಅವಧಿಯಲ್ಲಿ ಅಮೆರಿಕಾ ಬೇರೆಯದೇ ಹಾದಿ ಹಿಡಿದಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಚೀನಾ ತಾಲಿಬಾನ್ ಜೊತೆ ಅಧಿಕೃತವಾಗಿ ರಾಯಭಾರಿಗಳ ನಿಯೋಜನೆ ನಡೆಸಿದ್ದು, ಹೆಚ್ಚುತ್ತಿರುವ ಬಾಂಧವ್ಯ ಮತ್ತು ಪ್ರಭಾವದ ಕುರಿತ ಸಂಕೇತ ರವಾನಿಸಿದೆ. ಇದೆಲ್ಲದರ ನಡುವೆ, ಮೌನವಾಗಿ ದೂರ ಉಳಿಯುವುದು ಭಾರತದ ಮುಂದಿರುವ ಆಯ್ಕೆ ಖಂಡಿತಾ ಅಲ್ಲ. ಈಗ ಭಾರತ ಏನಾದರೂ ಅಫ್ಘಾನಿಸ್ತಾನದಿಂದ ದೂರ ಸರಿದರೆ, ದಶಕಗಳ ಕಾಲ ಭಾರತ ನಡೆಸಿದ ಹೂಡಿಕೆಗಳು ವ್ಯರ್ಥವಾಗಿ, ಭದ್ರತಾ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಈ ಪ್ರದೇಶದಲ್ಲಿ ಭಾರತದ ಪ್ರಭಾವ ಕಡಿಮೆಯಾಗುವ ಅಪಾಯವಿದೆ.

ಭಾರತ ಏನು ಮಾಡುತ್ತಿದೆ?

ಭಾರತ ಅಫ್ಘಾನಿಸ್ತಾನಕ್ಕೆ ಅಪಾರ ಪ್ರಮಾಣದ ಮಾನವೀಯ ನೆರವು ರವಾನಿಸಿದೆ. ಇದರಲ್ಲಿ 50,000 ಟನ್‌ಗಳಷ್ಟು ಗೋಧಿ, 300 ಟನ್ ಔಷಧಗಳು, ಭೂಕಂಪ ಪರಿಹಾರ ವಸ್ತುಗಳು, ಲಸಿಕೆಗಳು, ಮತ್ತು ಸ್ವಚ್ಛತಾ ಕಿಟ್‌ಗಳು ಸೇರಿವೆ. ಅದರೊಡನೆ, ಅಫ್ಘಾನಿಸ್ತಾನದ ಯುವ ಜನರು ಬಹಳ ಇಷ್ಟಪಡುವ ಕ್ರೀಡೆಯಾದ ಕ್ರಿಕೆಟ್ ಅನ್ನು ಉತ್ತೇಜಿಸಲೂ ಭಾರತ ನೆರವಾಗಿದೆ. ಅದರೊಡನೆ, ನೆರವು ಪೂರೈಕೆಗೆ ಮತ್ತು ವ್ಯಾಪಾರಕ್ಕೆ ಬೆಂಬಲ ನೀಡುವ ಸಲುವಾಗಿ ಇರಾನಿನ ಚಬಹಾರ್ ಬಂದರು ನಿರ್ಮಿಸಲೂ ಭಾರತ ಅನುಮತಿ ನೀಡಿದೆ. ಅದರೊಡನೆ, ಅಫ್ಘಾನಿಸ್ತಾನದ ಎಲ್ಲ 34 ಪ್ರದೇಶಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಲು ಭಾರತ ತನ್ನ ಬದ್ಧತೆ ವ್ಯಕ್ತಪಡಿಸಿದೆ.

ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)
ಗಾಜಾದ ಅಂತಿಮ ಭರವಸೆ: ಈಜಿಪ್ಟ್‌ನಲ್ಲಿ ನಡೆಯುವ ಮಾತುಕತೆಗಳು ಯುದ್ಧ ನಿಲ್ಲಿಸಬಹುದೇ? (ಜಾಗತಿಕ ಜಗಲಿ)

ತಾಲಿಬಾನ್ ಏನನ್ನು ನಿರೀಕ್ಷಿಸುತ್ತಿದೆ?

ತಾಲಿಬಾನ್ ವ್ಯಾಪಾರಿಗಳಿಗೆ, ರೋಗಿಗಳಿಗೆ, ಮತ್ತು ವಿದ್ಯಾರ್ಥಿಗಳಿಗೆ ವೀಸಾ ನೀಡುವಂತೆ ಭಾರತದ ಬಳಿ ಮನವಿ ಮಾಡಿದೆ. ಆದರೆ, ಭಾರತ ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸದ ಕಾರಣದಿಂದ, ಭದ್ರತಾ ಕಳವಳ ಹೊಂದಿರುವುದರಿಂದ ಮತ್ತು ಕಾಬೂಲ್‌ನಲ್ಲಿ ಕಾರ್ಯನಿರತ ವೀಸಾ ಕಚೇರಿ ಇಲ್ಲದಿರುವುದರಿಂದ, ಭಾರತ ವೀಸಾ ನೀಡುವುದು ಕಷ್ಟಕರವಾಗಿದೆ. ಇಷ್ಟಾದರೂ ವೀಸಾದಂತಹ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿರುವುದು ಉಭಯ ದೇಶಗಳ ಸಂಬಂಧ ಸುಧಾರಿಸಿರುವುದಕ್ಕೆ ಸಾಕ್ಷಿಯಾಗಿದೆ.

ಒಂದು ಉತ್ತಮ ಸಮತೋಲನದ ನಡೆ

ಭಾರತದ ಹೊಸ ಕಾರ್ಯತಂತ್ರ ವಾಸ್ತವಿಕತೆ ಮತ್ತು ನಿರ್ಬಂಧಗಳ ನಡೆಯನ್ನು ಸರಿಯಾಗಿ ಮಿಶ್ರಗೊಳಿಸುತ್ತದೆ. ಭಾರತ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಾ, ಪಾಕಿಸ್ತಾನ ಮತ್ತು ಚೀನಾಗಳ ಪ್ರಭಾವವನ್ನು ತಗ್ಗಿಸುತ್ತಾ, ಅಫ್ಘಾನಿಸ್ತಾನವನ್ನು ಸ್ಥಿರವಾಗಿಸಲು ಪ್ರಯತ್ನ ನಡೆಸುತ್ತಿದೆ. ಇದೆಲ್ಲದರ ನಡುವೆ, ಅಫ್ಘಾನಿಸ್ತಾನದ ಮಾನವ ಹಕ್ಕುಗಳ ಕುರಿತೂ ಭಾರತ ಧ್ವನಿ ಎತ್ತಿದೆ.

ನೆರವಿನ ಪೂರೈಕೆಯಿಂದ ಕ್ರಿಕೆಟ್ ರಾಜತಾಂತ್ರಿಕತೆಯ ತನಕ ಭಾರತದ ಪ್ರತಿಯೊಂದು ಹೆಜ್ಜೆಯೂ ಈ ಸಮತೋಲನವನ್ನು ಪ್ರದರ್ಶಿಸುತ್ತಿದೆ. ಭಾರತ ಎಲ್ಲಿಯ ತನಕ ವಾಸ್ತವಿಕತೆ ಮತ್ತು ತತ್ವಗಳ ನಡುವಿನ ಹಗ್ಗದ ಹಾದಿಯಲ್ಲಿ ಸಾಗಬಲ್ಲದು ಎನ್ನುವುದರ ಮೇಲೆ ಅಫ್ಘಾನಿಸ್ತಾನದಲ್ಲಿ ಮತ್ತು ಒಟ್ಟಾರೆ ಈ ಭೂ ಪ್ರದೇಶದಲ್ಲಿ ಭಾರತದ ಭವಿಷ್ಯದ ಪಾತ್ರ ನಿರ್ಧಾರವಾಗಲಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com