ಢಾಕಾ ರಹಸ್ಯ: ಪ್ರಧಾನಿ ಮೋದಿ ವಿರುದ್ಧದ ಸಂಚನ್ನು ಸೋಲಿಸಿತೇ ಭಾರತ-ರಷ್ಯಾ ಜಂಟಿ ಕಾರ್ಯಾಚರಣೆ? (ಜಾಗತಿಕ ಜಗಲಿ)

ಒಂದಷ್ಟು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಭಾರತದ ಪ್ರಧಾನಿಯವರಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವನ್ನು ನಿವಾರಿಸಿರುವ ಸಾಧ್ಯತೆಗಳಿವೆ ಎಂಬ ನಂಬಿಕೆ ಮೂಡಿಸುತ್ತಿವೆ.
Narendra Modi- Russia president Vladimir Putin
ನರೇಂದ್ರ ಮೋದಿ- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ online desk
Updated on

ಆಗಸ್ಟ್ 31ರಂದು, ಅಮೆರಿಕದ ಸ್ಪೆಷಲ್ ಫೋರ್ಸಸ್ ಅಧಿಕಾರಿಯಾದ ಟೆರೆನ್ಸ್ ಆರ್ವೆಲ್ ಜ್ಯಾಕ್ಸನ್ ಎಂಬಾತ ಢಾಕಾದ ಒಂದು ಹೊಟೆಲ್ ಕೋಣೆಯಲ್ಲಿ ರಹಸ್ಯಮಯವಾಗಿ ಹತ್ಯೆಯಾಗಿದ್ದ. ಈ ಘಟನೆ ದಕ್ಷಿಣ ಏಷ್ಯಾದಲ್ಲಿ ಅಮೆರಿಕದ ಗುಪ್ತಚರ ಚಟುವಟಿಕೆಗಳ ಕುರಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹತ್ಯಾ ಯೋಜನೆ ರೂಪಿಸಿರುವ ಕುರಿತು ತೀವ್ರ ಅನುಮಾನಗಳನ್ನು ಮೂಡಿಸಿದೆ. ಜ್ಯಾಕ್ಸನ್ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆಯುತ್ತಿದ್ದ ಎಂದಿನ ಮಿಲಿಟರಿ ಅಭ್ಯಾಸದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸಾವಿಗೀಡಾಗಿದ್ದ ಎನ್ನಲಾಗಿದ್ದರೂ, ಭಾರತದ ನೆರೆ ರಾಷ್ಟ್ರಗಳಲ್ಲಿ ಸಿಐಎ ಉಪಸ್ಥಿತಿ ಹೆಚ್ಚುತ್ತಿರುವ ಕುರಿತು ಈ ಘಟನೆ ಗಂಭೀರ ಸವಾಲುಗಳನ್ನು ಕೇಳುತ್ತಿದೆ.

ಈ ಘಟನೆಗಳು ನಡೆದಿರುವ ಸಮಯವೂ ಭೌಗೋಳಿಕ ರಾಜಕಾರಣದ ವಿಶ್ಲೇಷಕರ ಗಮನವನ್ನು ಸೆಳೆದಿವೆ. ಜ್ಯಾಕ್ಸನ್ ಬಾಂಗ್ಲಾದೇಶದಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕಿದ ಅದೇ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಟಿಯಾಂಜಿನ್‌ನಲ್ಲಿ ಆಯೋಜಿಸಲಾಗಿದ್ದ ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದರು. ಅದಾದ ನಂತರ ನಡೆದ ಘಟನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾದವು. ಔಪಚಾರಿಕ ಸಭೆಗಳ ಬಳಿಕ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಾಮಾನ್ಯವಾದ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ, ಒಂದು ಕಾರಿನ ಒಳಗೆ 45 ನಿಮಿಷಗಳ ಕಾಲ ಖಾಸಗಿಯಾಗಿ ಮಾತುಕತೆ ನಡೆಸಿದರು. ಈ ಮಾತುಕತೆ ನಡೆದ ರಹಸ್ಯಮಯ ರೀತಿ ಮತ್ತು ಅಲ್ಲಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಢಾಕಾದಲ್ಲಿ ಅಮೆರಿಕನ್ ಅಧಿಕಾರಿಯೊಬ್ಬ ಸಾವಿಗೀಡಾದ ಘಟನೆಗಳು ಪರಸ್ಪರ ಸಂಬಂಧವಿಲ್ಲದಂತೆ ತೋರಿದರೂ, ಅವೆರಡರ ನಡುವೆ ಖಂಡಿತವಾಗಿಯೂ ಏನೋ ಸಂಬಂಧವಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದರು.

ಒಂದಷ್ಟು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಭಾರತದ ಪ್ರಧಾನಿಯವರಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವನ್ನು ನಿವಾರಿಸಿರುವ ಸಾಧ್ಯತೆಗಳಿವೆ ಎಂಬ ನಂಬಿಕೆ ಮೂಡಿಸುತ್ತಿವೆ. ಈ ಕೋನದಿಂದ ಗಮನಿಸಿದಾಗ, ಜ್ಯಾಕ್ಸನ್ ಕೇವಲ ಮಿಲಿಟರಿ ತರಬೇತಿಯ ಕಾರಣಕ್ಕಾಗಿ ಬಾಂಗ್ಲಾದೇಶದಲ್ಲಿ ಇರಲಿಲ್ಲ. ಬದಲಿಗೆ, ಆತ ಭಾರತದ ನಾಯಕತ್ವವನ್ನು ಗುರಿಪಡಿಸುವ ಯಾವುದೋ ತೀವ್ರವಾದ ದುಷ್ಕೃತ್ಯದ ಯೋಜನೆಯಲ್ಲಿ ತೊಡಗಿಕೊಂಡಿದ್ದ ಎಂಬ ಅನುಮಾನಗಳು ದಟ್ಟವಾಗಿವೆ. ಒಂದು ವೇಳೆ ಈ ಅನುಮಾನ ನಿಜವೇ ಆಗಿದ್ದರೆ, ಮೋದಿ ಮತ್ತು ಪುಟಿನ್ ಅವರ ಮಾರ್ಗದರ್ಶನದಲ್ಲಿ ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ನಡೆಸಿರುವ ಜಂಟಿ ಕಾರ್ಯಾಚರಣೆ ಅಸಾಧಾರಣ ಗುಪ್ತಚರ ಕಾರ್ಯಾಚರಣೆಗೆ ಉದಾಹರಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಆಡಿದ ಮಾತುಗಳೂ ಸಹ ಈ ಅನುಮಾನಗಳಿಗೆ ಪುಷ್ಟಿ ನೀಡುವಂತಿದ್ದವು. ಚೀನಾದಿಂದ ಆಗಮಿಸಿದ ಕೇವಲ ಒಂದು ದಿನದ ಬಳಿಕ, ಸೆಪ್ಟೆಂಬರ್ 2ರಂದು ಮೋದಿಯವರು ನವದೆಹಲಿಯಲ್ಲಿ ನಡೆದ ಸೆಮಿಕಾನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಆಡಿದ ಒಂದು ಮಾತು ಎಲ್ಲರ ಗಮನ ಸೆಳೆದಿತ್ತು. "ನೀವು ನಾನು ಚೀನಾಗೆ ತೆರಳಿದ್ದಕ್ಕೆ ಚಪ್ಪಾಳೆ ತಟ್ಟುತ್ತಿದ್ದೀರೋ? ಅಥವಾ ನಾನು ಮರಳಿ ಬಂದೆ ಎಂದು ಚಪ್ಪಾಳೆ ತಟ್ಟುತ್ತಿದ್ದೀರೋ?" ಎಂದು ಮೋದಿ ಅರ್ಥಗರ್ಭಿತವಾಗಿ ನಗುತ್ತಾ ಸೇರಿದ್ದ ಜನರನ್ನು ಪ್ರಶ್ನಿಸಿದ್ದರು. ಅನುಭವಿ ರಾಜಕೀಯ ವಿಶ್ಲೇಷಕರಿಗೆ ಮೋದಿಯವರ ಮಾತುಗಳು ಬಾಯಿ ಮಾತಿಗೆ ಆಡಿದ ತಮಾಷೆಯಂತೆ ಕಾಣದೆ, ಅದರ ಹಿಂದೆ ಏನೋ ಆಳವಾದ ಅರ್ಥವಿದ್ದಂತೆ, ಮತ್ತು ಇಂದಿನ ಸಂಕೀರ್ಣ ಭೌಗೋಳಿಕ ರಾಜಕಾರಣದ ವಾತಾವರಣದಲ್ಲಿ ದೇಶದ ನಾಯಕತ್ವವನ್ನು ಅಪಾಯಗಳು ಸುತ್ತುವರಿದಿರುವುದರ ಸಂಕೇತದಂತೆ ತೋರಿದ್ದವು.

ಸಾರ್ವಭೌಮ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿ ತನ್ನ ಹಸ್ತಕ್ಷೇಪ ನಡೆಸುವ ಇತಿಹಾಸವನ್ನೇ ಸಿಐಎ ಹೊಂದಿದೆ. ಪ್ರಜಾಪ್ರಭುತ್ವ ವಿಧಾನದಲ್ಲಿ ಆಯ್ಕೆಯಾದ ಸರ್ಕಾರಗಳ ವಿರುದ್ಧ ದಂಗೆಗಳನ್ನು ಆಯೋಜಿಸುವುದರಿಂದ, ಅಮೆರಿಕದ ಹಿತಾಸಕ್ತಿಗಳಿಗೆ ಪೂರಕವಾಗಿರದ ಪ್ರದೇಶಗಳಲ್ಲಿ ಅಸ್ಥಿರತೆ ಮೂಡಿಸುವ ತನಕ, ಸಿಐಎ ಹಲವಾರು ದಶಕಗಳ ಕಾಲ ಎಲ್ಲ ಭೂಖಂಡಗಳಲ್ಲೂ ವಿವಾದಿತ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಬಂದಿದೆ. ವಿಶೇಷವಾಗಿ 1979ರ ಸೋವಿಯತ್ - ಅಫ್ಘಾನ್ ಯುದ್ಧದಿಂದ, ಇತ್ತೀಚಿನ ಬಾಂಗ್ಲಾದೇಶ ಮತ್ತು ನೇಪಾಳದ ರಾಜಕೀಯ ಕ್ರಾಂತಿಗಳ ತನಕ ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ನಡೆದ ವಿವಿಧ ಘಟನೆಗಳ ಹಿಂದೆ ಸಿಐಎ ಪಾತ್ರ ಇರುವ ಕುರಿತು ಅನುಮಾನಗಳು ಮೂಡಿವೆ. ಭಾರತದೊಡನೆ ಗಡಿ ಹಂಚಿಕೊಳ್ಳುವ ದೇಶಗಳಲ್ಲಿ ಸಿಐಎ ತನ್ನ ಹೆಜ್ಜೆ ಗುರುತು ಹೆಚ್ಚಿಸುತ್ತಿರುವುದನ್ನು ಭಾರತದ ಭದ್ರತಾ ವ್ಯವಸ್ಥೆಗಳೂ ಗಂಭೀರವಾಗಿ ಗಮನಿಸಿವೆ.

Narendra Modi- Russia president Vladimir Putin
ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿರುವುದೆಂದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಿರುವ ವಿಧಾನ. ಭಾರತ - ಪಾಕಿಸ್ತಾನಗಳ ನಡುವೆ ಮಧ್ಯಸ್ಥಿಕೆ ವಹಿಸುವುದಾಗಿ ಡೊನಾಲ್ಡ್ ಟ್ರಂಪ್ ತನ್ನ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲಿ ಹೇಳಿದ್ದು, ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಲು ಭಾರತ ರಷ್ಯನ್ ತೈಲ ಖರೀದಿಸುವುದನ್ನು ಅಮೆರಿಕ ಟೀಕಿಸಿರುವುದು, ಅಥವಾ ಭಾರತದ ವ್ಯಾಪಾರ ನೀತಿಯ ಮೇಲೆ ಪ್ರಭಾವ ಬೀರಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸಿರುವುದು, ಮತ್ತು ವಾಷಿಂಗ್ಟನ್ ಇಚ್ಛೆಗೆ ತಕ್ಕಂತೆ ಭಾರತವನ್ನು ಕುಣಿಸಲು ಸ್ಪಷ್ಟವಾಗಿ ಪ್ರಯತ್ನ ನಡೆಸಿರುವುದು ಇದಕ್ಕೆ ಕೆಲ ಉದಾಹರಣೆಗಳಷ್ಟೇ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ವಿದೇಶಗಳನ್ನು ಮೆಚ್ಚಿಸುವ ಸಲುವಾಗಿ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳಲು ಭಾರತ ನಿರಂತರವಾಗಿ ನಿರಾಕರಿಸಿದೆ.

ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮತ್ತು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾದ ಭಾರತ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಜಾಗತಿಕ ಹಂತದಲ್ಲೂ ಅಸಾಧಾರಣ ಆತ್ಮವಿಶ್ವಾಸ ಮತ್ತು ದೃಢನಿಶ್ಚಯತೆಗಳನ್ನು ಪ್ರದರ್ಶಿಸಿದೆ. ಈ ಹೊಸ ಭಾರತ ಬೆದರಿಕೆಗಳಿಗೆ ಅಥವಾ ನ್ಯಾಯಯುತವಲ್ಲದ ಬೇಡಿಕೆಗಳಿಗೆ ಮಣಿಯಲು ಸಿದ್ಧವಿಲ್ಲ. ಭಾರತ ತನ್ನ ನಿರ್ಧಾರಗಳನ್ನು ಸ್ವತಂತ್ರವಾಗಿ, ತನ್ನ ಪ್ರಜೆಗಳಿಗೆ ಮತ್ತು ತನ್ನ ಸಾರ್ವಭೌಮತ್ವದ ರಕ್ಷಣೆಗೆ ಏನು ಸೂಕ್ತ ಎಂದು ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತದೆ. ಇಂತಹ ಸ್ವತಂತ್ರ ವಿದೇಶಾಂಗ ನೀತಿಯನ್ನು ಭಾರತೀಯರೂ ಶ್ಲಾಘಿಸಿದ್ದು, ಸಣ್ಣ ದೇಶಗಳನ್ನು ತಾವು ಹೇಳಿದಂತೆ ನಡೆಸಿಕೊಂಡು ಅಭ್ಯಾಸವಾಗಿರುವ ಕೆಲವು ದೇಶಗಳ ಕಣ್ಣು ಕೆಂಪಾಗಿಸಿರಬಹುದು.

Narendra Modi- Russia president Vladimir Putin
AI: ಸುವರ್ಣಾವಕಾಶ ಕಳೆದುಕೊಳ್ಳುತ್ತಿದ್ದಾರೆಯೇ ಭಾರತೀಯ ಇಂಜಿನಿಯರ್‌ಗಳು? (ಜಾಗತಿಕ ಜಗಲಿ)

ಆರ್ಗನೈಸರ್ ಮತ್ತು ಇತರ ಮಾಧ್ಯಮ ವರದಿಗಳ ಪ್ರಕಾರ, ಕೆಲವು ವಿದೇಶೀ ಶಕ್ತಿಗಳು ಒಂದು ಪ್ರಬಲ, ಸ್ವತಂತ್ರ ಭಾರತವನ್ನು ತಮ್ಮ ಪ್ರಾದೇಶಿಕ ಹಿತಾಸಕ್ತಿಗಳಿಗೆ ಅಡ್ಡಿ ಎಂಬಂತೆ ಕಾಣುವ ಸಾಧ್ಯತೆಗಳಿವೆ. ವಿಶ್ಲೇಷಕರ ಪ್ರಕಾರ, ಭಾರತವನ್ನು ಅಸ್ಥಿರಗೊಳಿಸುವುದು ಅಥವಾ ಭಾರತದ ಪ್ರಸ್ತುತ ನಾಯಕತ್ವವನ್ನು ತೆಗೆದುಹಾಕುವುದರಿಂದ ಭಾರತದ ಗಮನಾರ್ಹ ಪ್ರಗತಿಯನ್ನು ನಿಧಾನಗೊಳಿಸಿ, ನವದೆಹಲಿಯಲ್ಲಿ ತಮ್ಮ ಮಾತು ಕೇಳುವಂತಹ ಸರ್ಕಾರವನ್ನು ಸ್ಥಾಪಿಸಬಹುದು ಎನ್ನುವುದು ವಿದೇಶೀ ಶಕ್ತಿಗಳ ಲೆಕ್ಕಾಚಾರ. ಗುಪ್ತಚರ ವಲಯಗಳಲ್ಲಿ ಇಂತಹ ಆಲೋಚನೆಗಳು ಇವೆ ಎಂದಾದರೆ, ಇದು ಆಗಸ್ಟ್ ತಿಂಗಳಲ್ಲಿ ಯೋಜಿಸಲಾಗಿದ್ದ ದುಷ್ಟ ಹಂಚಿಕೆಯನ್ನು ತಪ್ಪಿಸಲಾಗಿತ್ತು ಎನ್ನುವುದನ್ನು ವಿವರಿಸುತ್ತದೆ.

ಭಾರತ ಮತ್ತು ರಷ್ಯಾಗಳ ಸ್ನೇಹ ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದ್ದು, ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ವೈಯಕ್ತಿಕ ಆತ್ಮೀಯ ಸ್ನೇಹವೂ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಮೋದಿಯವರ ರಷ್ಯಾ ಭೇಟಿಯಿಂದ, ಪುಟಿನ್ ಭಾರತ ಭೇಟಿಯ ತನಕ ಉಭಯ ನಾಯಕರು ಪರಸ್ಪರ ಸ್ನೇಹ ಮತ್ತು ಅರ್ಥೈಸುವಿಕೆಗಳನ್ನು ಪ್ರದರ್ಶಿಸಿದ್ದಾರೆ. ಪಾಶ್ಚಾತ್ಯ ಒತ್ತಡಗಳ ನಡುವೆಯೂ, ರಕ್ಷಣೆ, ಇಂಧನ, ಮತ್ತು ಕಾರ್ಯತಂತ್ರದ ವಿಚಾರಗಳಲ್ಲಿ ಉಭಯ ದೇಶಗಳ ಸ್ನೇಹ ಇನ್ನಷ್ಟು ಬಲವಾಗಿ ಬೆಳೆದಿದೆ. ಢಾಕಾದಲ್ಲಿ ನಡೆದಿದೆ ಎನ್ನಲಾದ ಜಂಟಿ ಗುಪ್ತಚರ ಕಾರ್ಯಾಚರಣೆ ನಿಜಕ್ಕೂ ನಡೆದಿದ್ದರೆ, ಇದು ಉಭಯ ದೇಶಗಳ ನಡುವಿರುವ ನಂಬಿಕಾರ್ಹ ಸ್ನೇಹ, ಸಹಯೋಗ ಮತ್ತು ಪರಸ್ಪರರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುವುದಕ್ಕೆ ಸಾಕ್ಷಿಯಾಗಿದೆ.

ಟೆರೆನ್ಸ್ ಆರ್ವೆಲ್ ಜ್ಯಾಕ್ಸನ್ ಸಾವಿನ ಕುರಿತು ಇಂದಿಗೂ ವಿವರಣೆಗಳು ಲಭಿಸಿಲ್ಲ. ಅಮೆರಿಕನ್ ಅಧಿಕಾರಿಗಳು ಈ ವಿಚಾರವನ್ನು ಕೇವಲ ಮಿಲಿಟರಿ ತರಬೇತುದಾರನ ಬಾಂಗ್ಲಾದೇಶ ಭೇಟಿ ಎಂದಷ್ಟೇ ಹೇಳುತ್ತಿವೆ. ಆದರೆ, ಕಾಕತಾಳೀಯ ಎನ್ನುವಂತಹ ಬೆಳವಣಿಗೆಗಳನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಮೋದಿ ಮತ್ತು ಪುಟಿನ್ ತುರ್ತು ಖಾಸಗಿ ಮಾತುಕತೆ ನಡೆಸಿದ ದಿನವೇ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಅಸಹಜವಾಗಿ ಸಾವಿಗೀಡಾಗುತ್ತಾನೆ. ಕೆಲವು ದಿನಗಳ ಬಳಿಕ, ಭಾರತದ ಪ್ರಧಾನಿ ಚೀನಾ ಭೇಟಿಯ ಸಂದರ್ಭದ ಅಪಾಯದ ಕುರಿತು ರಹಸ್ಯಾತ್ಮಕ ಮಾತುಗಳನ್ನು ಆಡುತ್ತಾರೆ. ಈ ಒಗಟಿನ ಭಾಗಗಳನ್ನು ಜೊತೆಯಾಗಿ ಜೋಡಿಸಿದರೆ, ಭಾರತದ ನಾಯಕತ್ವಕ್ಕೆ ಅಪಾಯಗಳನ್ನು ತಂದೊಡ್ಡುವಂತಹ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಅನುಮಾನಕ್ಕೆ ಎಡೆಯಿಲ್ಲದ ವಿಚಾರವೆಂದರೆ, ಜಗತ್ತಿಗೆ ನರೇಂದ್ರ ಮೋದಿಯವರ ಸಂದೇಶ ಸ್ಪಷ್ಟ ಮತ್ತು ನೇರವಾಗಿದೆ. ಭಾರತ ಯಾವ ಕಾರಣಕ್ಕೂ ತನ್ನ ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಸಮಗ್ರತೆ ಅಥವಾ ತನ್ನ ನಿರ್ಧಾರ ಕೈಗೊಳ್ಳುವುದರಲ್ಲಿನ ಸಾರ್ವಭೌಮತ್ವವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ನಾಯಕತ್ವಕ್ಕೆ ಎಷ್ಟೇ ಮಟ್ಟಿನ ವಿದೇಶೀ ಒತ್ತಡ, ಮನ ಒಲಿಕೆ ಅಥವಾ ಬೆದರಿಕೆಗಳೇ ಎದುರಾದರೂ, ಭಾರತ ತನ್ನ ಹಾದಿಯಿಂದ ವಿಚಲಿತವಾಗುವುದಿಲ್ಲ. ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳು ನೆರೆಯ ಶತ್ರು ರಾಷ್ಟ್ರಗಳಿಂದ ಅಥವಾ ಪ್ರಾದೇಶಿಕ ಪ್ರಾಕ್ಸಿಗಳನ್ನು ಬಳಸಿಕೊಂಡು ತೊಂದರೆ ಉಂಟುಮಾಡುವಂತಹ ಎಲ್ಲ ರೀತಿಯ ಅಪಾಯಗಳ ವಿರುದ್ಧ ಜಾಗರೂಕವಾಗಿವೆ.

ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಹೆಜ್ಜೆ ಇಡುತ್ತಿದ್ದು, ಇಂತಹ ಸವಾಲುಗಳು ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಭಾರತದ ಬೆಳವಣಿಗೆಯಿಂದ ಅಸಮಾಧಾನ ಹೊಂದಿರುವ ವಿದೇಶೀ ಶಕ್ತಿಗಳು ಭಾರತದ ಪ್ರಗತಿಯನ್ನು ಕುಂಠಿತಗೊಳಿಸಲು ವಿವಿಧ ವಿಧಾನಗಳನ್ನು ಅನುಸರಿಸಲಿವೆ. ಆದರೆ, ಆಗಸ್ಟ್ 31ರ‌ ಬೆಳವಣಿಗೆಗಳು ಈ ಹೋರಾಟದಲ್ಲಿ ಭಾರತ ಏಕಾಂಗಿಯಲ್ಲ ಎಂದು ಸ್ಪಷ್ಟಪಡಿಸಿವೆ. ಭಾರತ ನಂಬಿಕಾರ್ಹ ಸ್ನೇಹಿತರನ್ನು ಹೊಂದಿದ್ದು, ರಾಷ್ಟ್ರೀಯ ಹಿತಾಸಕ್ತಿ ಮತ್ತು ನಾಯಕತ್ವವನ್ನು ಅಪಾಯಗಳಿಂದ ರಕ್ಷಿಸಲು ಸಮರ್ಥವಾದ ರಕ್ಷಣಾ ಸಂಸ್ಥೆಗಳನ್ನು ಹೊಂದಿದೆ. ಢಾಕಾದಲ್ಲಿ ವಾಸ್ತವವಾಗಿ ಏನು ನಡೆಯಿತು ಎನ್ನುವ ವಿಚಾರ ಬಹುಶಃ ಎಂದಿಗೂ ಸಾರ್ವಜನಿಕವಾಗಿ ಬಹಿರಂಗವಾಗದೆ, ರಹಸ್ಯವಾಗಿಯೇ ಉಳಿಯುವ ಸಾಧ್ಯತೆಗಳಿವೆ. ಆದರೆ, ಒಂದು ವಿಚಾರ ಸ್ಪಷ್ಟವಾಗಿದೆ. ಭಾರತ ತನ್ನ ಭದ್ರತೆ ಮತ್ತು ಸಾರ್ವಭೌಮತ್ವದ ವಿಚಾರದಲ್ಲಿ ಎಂತಹ ಶತ್ರುಗಳನ್ನಾದರೂ, ಸಂಕೀರ್ಣ ಸಮಸ್ಯೆಗಳನ್ನಾದರೂ ಲೆಕ್ಕಿಸದೆ ಮುಂದುವರಿಯಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com