

ಕಳೆದ ಮೂರು ತಿಂಗಳಲ್ಲಿ ಜಗತ್ತು ಪೂರ್ಣವಾಗಿ ಬದಲಾಗಿ ಹೋಗಿದೆ. ಜಗತ್ತಿನಾದ್ಯಂತ ಭಾರತೀಯರಿಗೆ ಸಿಗುತ್ತಿದ್ದ ಗೌರವ ಕಡಿಮೆಯಾಗಿದೆ. ಅದರಲ್ಲೂ ಅಮೇರಿಕಾ , ಐರ್ರ್ಲ್ಯಾಂಡ್ , ಇಂಗ್ಲೆಂಡ್ , ಅಮೇರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ರೇಸಿಸಂ ಇನ್ನೊಂದು ಮಟ್ಟಕ್ಕೆ ಏರಿದೆ. ಐರ್ಲೆಂಡಿನಲ್ಲಿ ಆರು ವರ್ಷದ ಬಾಲಕಿಯೊಬ್ಬಳ ಮುಖಕ್ಕೆ ಗುದ್ದಿದ್ದಾರೆ. ಇಂಗ್ಲೆಂಡಿನಲ್ಲಿ ಇಪ್ಪತ್ತು ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ದೇಶ ಬಿಡದಿದ್ದರೆ ಮತ್ತೆ ಇದೆ ರೀತಿ ಮಾಡುತ್ತೇನೆ ಎನ್ನುವ ಧಮಕಿಯನ್ನು ಅತ್ಯಾಚಾರಿ ಹಾಕಿದ್ದಾನೆ.
ಕೆನಡಾ ಮತ್ತು ಅಮೇರಿಕಾದಲ್ಲಿ ಭಾರತೀಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಮೇರಿಕಾದಲ್ಲಿ ಖುದ್ದು ಆ ದೇಶದ ಪ್ರೆಸಿಡೆಂಟ್ ಭಾರತೀಯರ ವಿರುದ್ಧ ನಿಂತಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ಇಮಿಗ್ರೇಷನ್ ಬೇಕಿಲ್ಲ , ಗೋ ಬ್ಯಾಕ್ ಟು ಇಂಡಿಯಾ ಎನ್ನುವುದು ಚಳುವಳಿ ರೂಪ ಪಡೆದುಕೊಂಡಿದೆ. ಅಕ್ಟೋಬರ್ ತಿಂಗಳಲ್ಲಿ ಎರಡು ಬಾರಿ ಇಂತಹ ಮರೆವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಅವರೆಲ್ಲರ ಆಕ್ರೋಶ ಭಾರತೀಯರ ಮೇಲಿದೆ.
ಎಲ್ಲಕ್ಕೂ ಮೊದಲಿಗೆ ಈ ದೇಶಗಳಿಗೆ ಭಾರತೀಯರು ಏಕೆ ಹೋದರು? ಎನ್ನುವುದನ್ನು ನಾವು ನೋಡಿದರೆ ತಿಳಿಯುವುದು ಅಂದಿಗೂ , ಇಂದಿಗೂ ಈ ದೇಶಗಳಲ್ಲಿ ನುರಿತ ತಜ್ಞರ , ನಿಪುಣ ಕೌಶಲ ಹೊಂದಿರುವ ಕೆಲಸಗಾರರ ಕೊರತೆಯಿದೆ ಎನ್ನುವುದು. ಅವರು ತಮ್ಮ ವಲಸೆ ನಿಯಮವನ್ನು ಅಂದಿಗೆ ಸರಿಯಾಗಿ ಭದ್ರ ಮಾಡಿದ್ದರೆ ಇಂದಿಗೆ ಒಬ್ಬ ಭಾರತೀಯ ಕೂಡ ಅಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಅಂದಿಗೆ ಅವರಿಗೆ ಅವಶ್ಯಕೆತೆಯಿತ್ತು ಹೀಗಾಗಿ ವಲಸೆಗೆ ಸರಿಯೆಂದರು. ಅದಕ್ಕೆ ತಕ್ಕಂತೆ ಕಾನೂನು ಸಹ ರೂಪ ಗೊಂಡಿತು. ಇವತ್ತು ಇದ್ದಕ್ಕಿದ್ದ ಹಾಗೆ ಅವರಿಗೆ ಭಾರತೀಯರ ಮೇಲೆ ಅಸಹನೆ ಉಂಟಾಗಿದೆ. ಅವರನ್ನು ಹೊರಹೋಗಿ ಎನ್ನುತ್ತಿದ್ದಾರೆ. ಅಲ್ಲಿರುವ ಪ್ರತಿಯೊಬ್ಬ ಭಾರತೀಯನೂ ಇವರ ದೇಶದ ಸಹವಾಸ ಬೇಡ ಎಂದು ಅಲ್ಲಿಂದ ಕಾಲ್ಕಿತ್ತರೆ ಆ ದೇಶಗಳು ಕೂಡ ಕುಸಿತವನ್ನು ಕಾಣುತ್ತದೆ. ಇದರ ಅರಿವು ಅವರಿಗೆ ಇಲ್ಲದಿಲ್ಲ. ಹೀಗಿದ್ದೂ ಈ ರೀತಿಯ ಹುಯಿಲು ಏಕೆ ? ಅದಕ್ಕೆ ಕಾರಗಳೇನು ಎನ್ನುವುದನ್ನು ನೋಡೋಣ
ಎಲ್ಲಕ್ಕೂ ಮೊದಲಿಗೆ ಭಾರತೀಯರ ವೇತನ ಅಲ್ಲಿನ ದೇಶದ ಅವೆರೆಜ್ ವೇತನಕ್ಕಿಂತ ಬಹಳಷ್ಟು ಹೆಚ್ಚಿದೆ. ಅಲ್ಲಿಯ ಸ್ಥಳೀಯರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ. ಅವರಿಗಿಂತ ಉತ್ತಮ ಗುಣಮಟ್ಟದ ಜೀವನ ಇವರದಾಗಿದೆ. ಅವರು ಯೋಚಿಸಲಾಗದಷ್ಟು ಬೆಲೆ ಬಾಳುವ ಮನೆ , ಕಾರುಗಳನ್ನು ಕೊಂಡಿದ್ದಾರೆ. ಒಂದು ವರ್ಗದ ವಲಸಿಗರು ಟೆಕ್ನಾಲಜಿ , ಮೆಡಿಕಲ್ ಇನ್ನಿತರ ವಲಯದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೆ , ಅಷ್ಟೊಂದು ವಿದ್ಯಾವಂತರಲ್ಲದ ಭಾರತೀಯ ವಲಸಿಗರು ಸಣ್ಣ ಪುಟ್ಟ ವ್ಯಾಪಾರದಲ್ಲಿ ಹಿಡಿತವನ್ನು ಸಾಧಿಸಿದ್ದಾರೆ. ಒಟ್ಟಾರೆ ಸ್ಥಳೀಯರಿಗಿಂತ ಉತ್ತಮ ಬದುಕನ್ನು ಕಟ್ಟುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದು ಸಹಜವಾಗೇ ಸ್ಥಳೀಯರ ಭಾವನೆಯನ್ನು ಕೆರಳಿಸುತ್ತದೆ.
ಆರ್ಥಿಕವಾಗಿ ಸ್ಥಳೀಯರಿಗಿಂತ ಸಬಲರಾಗಿರುವುದು ಮಾತ್ರವಲ್ಲದೆ ಕೆಲವು ದೇಶಗಳಲ್ಲಿ ರಾಜಕೀಯದಲ್ಲೂ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಲಾಬಿ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈ ಅಂಶ ಕೂಡ ಸ್ಥಳೀಯರನ್ನು ಕೆರಳಿಸುತ್ತದೆ. ಎಲ್ಲಿಂದಲೋ ಬಂದವರು ಬದುಕು ಭದ್ರವಾಗಿ ಕಟ್ಟಿಕೊಂಡಿದ್ದ ನೋಡಿ ಸಹಜವಾಗೇ ದ್ವೇಷ ಉಂಟಾಗುತ್ತದೆ.
ನಮ್ಮ ಕೆಲಸವನ್ನು ಇವರು ಕಸಿದು ಕೊಳ್ಳುತ್ತಿದ್ದಾರೆ ಎನ್ನುವ ಭಾವನೆಗೆ ಮದ್ದಿಲ್ಲ. ಮೊದಲಿಗೆ ಅವರ ದೇಶದಲ್ಲಿ ಅವರು ಕಾಂಪಿಟೇನ್ಟ್ ಆಗಿದ್ದಿದ್ದರೆ ವಲಸಿಗರು ಪ್ರಬಲರಾಗಲು ಸಾಧ್ಯವಿರಲಿಲ್ಲ. ತಂತ್ರಜ್ಞಾನ , ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಈ ದೇಶಗಳಲ್ಲಿ ಬಹಳಷ್ಟು ನುರಿತ ಕೆಲಸಗಾರರ ಕೊರತೆಯಿದೆ. ಆದರೆ ಅಲ್ಲಿನ ಯುವ ಜನತೆಗೆ ಓದಲು ಆಸಕ್ತಿಯಿಲ್ಲ. ಆದರೆ ಭಾರತೀಯರು ಕೆಲಸ ಕಸಿಯುತ್ತಿದ್ದಾರೆ ಎನ್ನುವ ಇವರ ಕೂಗು ಮಾತ್ರ ನಿಲ್ಲುವುದಿಲ್ಲ.
ಜಗತ್ತಿನಾದ್ಯಂತ ರಾಷ್ಟ್ರೀಯತೆ ಕೂಗು ಹೆಚ್ಚಾಗುತ್ತಿದೆ. ನೇಷನ್ ಫಸ್ಟ್ ಅಡಿಯಲ್ಲಿ ಹಲವಾರು ವರ್ಷಗಳಿಂದ ಅದುಮಿಟ್ಟಿದ್ದ ಆಕ್ರೋಶ ಇವತ್ತಿಗೆ ಭುಗಿಲೆದ್ದಿದೆ. ಇವಿಷ್ಟು ನಾವು ಅವರ ತಪ್ಪುಗಳು , ಸುಮ್ಮನೆ ದ್ವೇಷ ಮಾಡುತ್ತಾರೆ ಎಂದು ಹೇಳಲು ಕೊಟ್ಟ ಕಾರಣಗಳು. ಅವು ಕೇವಲ ಕಾರಣವಲ್ಲದೆ ನಿಜವೂ ಆಗಿದೆ. ಆದರೆ ನಾವು ? ಭಾರತೀಯರು ತಪ್ಪು ಮಾಡುತ್ತಿಲ್ಲವೇ ?
ಹತ್ತಾರು ವರ್ಷ ಆ ದೇಶಗಳಲ್ಲಿ ಇದ್ದು ಕೂಡ ಅಲ್ಲಿನ ಸಮಾಜಕ್ಕೆ ಹೊಂದಿಕೊಳ್ಳದೇ ಇರುವ ಭಾರತೀಯರ ಸಂಖ್ಯೆ ಬಹಳ ಹೆಚ್ಚು. ಅಲ್ಲಿದ್ದು ಅಲ್ಲಿನ ನೆಲ , ಜಲವನ್ನು ಬಳಸಿಕೊಂಡು ,ಅಲ್ಲಿ ದುಡಿಮೆ ಮಾಡಿ ಕೂಡ ಅವರನ್ನು ಬಿಳಿಯರು , ಇವರಿಗೆ ಸಂಸ್ಕಾರವಿಲ್ಲ ಎನ್ನುವುದು, ಅವರು ಬದುಕುವ ರೀತಿನೀತಿಯನ್ನು ಅಣಕಿಸುವುದು. ಸರಿಯಿಲ್ಲವೆಂದು ದೂಷಿಸುವುದು ಅತಿ ಸಾಮಾನ್ಯವಾಗಿದೆ. ಅಮೇರಿಕಾ ನೆಲದಲ್ಲಿ ದೀಪಾವಳಿ ದಿನದಂದು ಪಟಾಕಿ ಹೊಡೆದು ಬಹಳಷ್ಟು ಗಲಾಟೆಯಾಗಿದೆ. ಅಲ್ಲಿನ ಸರಕಾರ ಪಟಾಕಿ ಹೊಡೆದ ಮನೆಯವರನ್ನು ಗುರುತಿಸಿ 3 ಲಕ್ಷ ಡಾಲರ್ ದಂಡವನ್ನು ವಿಧಿಸಿದೆ. ಮೊನ್ನೆಯಷ್ಟೇ ತೆಲುಗು ಚಿತ್ರವೊಂದರ ಬಿಡುಗಡೆ ಸಮಯದಲ್ಲಿ ಅಲ್ಲಿನ ಅನಿವಾಸಿ ಭಾರತೀಯರು ಆಡಿದ ಹುಚ್ಚಾಟ ಕಂಡು ಎಂತವರಿಗೂ ಬೇಸರ ಬಂದೆ ಬರುತ್ತದೆ. ಹುಚ್ಚುಚ್ಚಾಗಿ ಕಿರುಚುವುದು , ಕಟೌಟ್ ಮೇಲೆ ಹಾಲು ಸುರಿಯುವುದು, ಲಜ್ಜೆಗೆಟ್ಟು ಮೈಮರೆತು ಹೇಗೆಂದರೆ ಹಾಗೆ ನರ್ತಿಸುವುದು ಒಂದೇ ಎರಡೇ , ಅಲ್ಲಿನ ಸ್ಥಳೀಯರು ಈ ರೀತಿಯ ಹುಚ್ಚಾಟವನ್ನು ಏಕೆ ಸಹಿಸಿಕೊಳ್ಳಬೇಕು?
ಇತ್ತೀಚೆಗಂತೂ ಎಲ್ಲಾ ಭಾರತೀಯರಲ್ಲಿ ಭಾರತೀಯ ಎನ್ನುವ ಮತ್ತು ಭಾರತೀಯ ಸಂಸ್ಕಾರದ ಹೆಚ್ಚುವರಿಕೆ ಬಗ್ಗೆ ಇನ್ನಿಲ್ಲದ ಅಹಮಿಕೆ ಬಂದು ಬಿಟ್ಟಿದೆ. ನಮ್ಮದೆಲ್ಲವೂ ಸರಿ, ಅವರದೆಲ್ಲಾ ತಪ್ಪು ಎನ್ನುವ ಧೋರಣೆ ಹೆಚ್ಚಾಗುತ್ತಿದೆ. ಮನೆಯ ಗೃಹಪ್ರವೇಶದ ಸಮಯದಲ್ಲಿ ಹೋಮ ಮಾಡಲು ಹಾಕಿದ ಅಗ್ನಿಯನ್ನು ನೋಡಿ ಪಕ್ಕದ ಮನೆಯವರು ಅಗ್ನಿಶಾಮಕ ದಳದವರನ್ನು ಕರೆಸಿದ ಘಟನೆ ಕೂಡ ಇತ್ತೀಚಿಗೆ ನೆಡೆದಿದೆ. ಇನ್ನು ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಲ್ಲಿ ಪಂಜಾಬಿಗಳ ಕೆಟ್ಟ ನಡೆತೆಯಿಂದ ಇಡೀ ಭಾರತೀಯ ವಲಸಿಗರು ಎಂದರೆ ಅಸಹ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆ ದೇಶಗಳಲ್ಲಿ ಕ್ರಿಕೆಟ್ ಇರಬಹುದು ಅಥವಾ ಬೇರೆ ಕ್ರೀಡೆಯಲ್ಲಿ ಭಾರತ ಗೆದ್ದಾಗ ಇನ್ನಿಲದ ಸಂಭ್ರಮಾಚರಣೆಯಲ್ಲಿ ತೊಡಗುವುದು ಕೂಡ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗಮನಿಸಿ ನೋಡಿ ನಾವು ಮಾತ್ರ ಇಲ್ಲಿನ ಒಂದು ವರ್ಗದ ಜನ ಪಾಕಿಸ್ತಾನ ಗೆದ್ದರೆ ಸಂಭ್ರಮಿಸಿದರೆ ಅವರನ್ನು ಇನ್ನಿಲ್ಲದೆ ದ್ವೇಷಿಸುತ್ತೇವೆ. ಆದರೆ ನಾವು ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ನೆಲದಲ್ಲಿ ಭಾರತದ ಗೆಲುವನ್ನು ಸಂಭ್ರಮಿಸವುದು ಮಾತ್ರ ಸರಿ ಎನ್ನುತ್ತೇವೆ. ಅಲ್ಲಿನ ಪೌರತ್ವ ಬೇಕು , ಅಲ್ಲಿನ ಸವಲತ್ತುಗಳು ಬೇಕು , ಅಲ್ಲಿನ ವೇತನ ಬೇಕು. ಆಟದಲ್ಲಿ ಮಾತ್ರ ಭಾರತ ಗೆಲ್ಲಬೇಕು , ಜೈಕಾರ ಹಾಕಬೇಕು ಇದ್ಯಾವ ಸೀಮೆ ನ್ಯಾಯ ?
ಇನ್ನು ಭಾರತೀಯರ ಸ್ವಚ್ಛತೆಯ ಬಗ್ಗೆ ಹೆಚ್ಚು ಹೇಳಲು ಹೋಗುವುದಿಲ್ಲ. ಭಾರತ ಎಂದಲ್ಲ ಎಲ್ಲಿಂದ ಎಲ್ಲಿಗೆ ಹೋದರೂ ಅವರು ಸ್ವಚ್ಛತೆಯನ್ನು ಮಾತ್ರ ಕಲಿಯುವುದಿಲ್ಲ. ಮೊನ್ನೆ ಆಸ್ಟ್ರೇಲಿಯಾದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಭಾರತೀಯ ದಂಪತಿಗಳು ತಮ್ಮ ಮನೆಯ ಹೆಚ್ಚುವರಿ ಕಸವನ್ನು ಮನೆಯ ಪಕ್ಕದಲ್ಲಿರುವ ನದಿಗೆ ಎಸೆಯುತ್ತಿರುವ ದ್ರಶ್ಯವದು. ಇನ್ನು ಅಲ್ಲಿನ ಉಡುಗೆಯನ್ನು ಗೌರವಿಸುವುದು ದೂರದ ಮಾತು. ಇತ್ತೀಚಿಗೆ ಜರ್ಮನಿಯಲ್ಲಿ ಕಚ್ಚೆ ಪಂಚೆ ಉಡುವುದು , ಸೀರೆ ಉಟ್ಟು ಓಡಾಡುತ್ತ ವಿಡಿಯೋ ಮಾಡಿ ನಾವು ಕನ್ನಡಿಗರು ಎನ್ನುವ ಒಂದಿಬ್ಬರು ಜೆನ್ ಜಿ ಕಂಟೆಟ್ ಕ್ರಿಯೇಟರ್ ಗಳನ್ನು ನೋಡಿದೆ. ನೀವು ಹೆಮ್ಮೆಯ ಕನ್ನಡಿಗರಾದರೆ ಇಲ್ಲೇ ಉಳಿದುಕೊಂಡು ನಾಡು ಕಟ್ಟುವ ಕೆಲಸ ಮಾಡಬಹುದಲ್ಲ ? ಜರ್ಮನಿಯಲ್ಲಿ ಹೋಗಿ ನೀವೇನೂ ವಿಶಿಷ್ಟ ಎಂದು ಪ್ರೋವ್ ಮಾಡುವುದೇನಿದೆ ? ಅದು ನೀವು ಅಲ್ಲಿನ ಜನರಿಗೆ ಮಾಡುತ್ತಿರುವ ಅವಮಾನ. ಇದರ ಪರಿಜ್ಞಾನ ಕೂಡ ಇವರಿಗಿಲ್ಲ.
ಇವೆಲ್ಲಾ ಒಂದು ಕಡೆ ಇರಲಿ. ಏಕೆಂದರೆ ಇದು ಕಳೆದ 30/40 ವರ್ಷದಿಂದ ನಡೆಯುತ್ತಾ ಬಂದಿದೆ. ಹೊಸ ಸಮಾಜಕ್ಕೆ ನಾವು ಪೂರ್ಣವಾಗಿ ಹೊಂದಿಕೊಳ್ಳಲು ಆಗುವುದಿಲ್ಲ. ಅವರಿಗೂ ನಮ್ಮ ಹಾವಭಾವ ಪೂರ್ಣವಾಗಿ ಇಷ್ಟವಾಗುವುದಿಲ್ಲ. ಆದರೂ ಹೇಗೂ ಬದುಕು ತಳ್ಳಿಕೊಂಡು ಬಂದಿದೆ. ಆದರೆ ಇವತ್ತಿನ ಮಟ್ಟದ ದ್ವೇಷಕ್ಕೆ ಕಾರಣವೇನು ?
ಏಪ್ರಿಲ್ 22, 2025 ರಂದು ಪಹಾಲ್ಗಮ್ ದಾಳಿಯಾಗುತ್ತದೆ. ಪ್ರತಿ ಬಾರಿಯಂತೆ ನಾಮಕಾವಸ್ಥೆಗೆ ದಾಳಿ ಮಾಡಿ ಭಾರತ ಸುಮ್ಮನಾಗಿದ್ದಾರೆ ಇಂದು ಜಗತ್ತಿನಾದ್ಯಂತ ಭಾರತೀಯರ ಬಗ್ಗೆ ಈ ಮಟ್ಟದ ದ್ವೇಷ ಉತ್ಪನ್ನವಾಗುತ್ತಿರಲಿಲ್ಲ. ಆದರೆ ದೇಶದ ಪ್ರಧಾನಿ ಸೈನ್ಯಕ್ಕೆ ಪೂರ್ಣ ಅಧಿಕಾರ ನೀಡಿದರು. ಸರಿಯಾಗಿ ಬುದ್ದಿ ಕಲಿಸಿ ಎಂದರು. ನಮ್ಮ ಸೈನ್ಯ ಕಿರಾನಾ ಹಿಲ್ಸ್ ಮೇಲೆ ದಾಳಿ ಮಾಡುತ್ತದೆ. ಅದು ಪಾಕಿಸ್ತಾನದ ನ್ಯೂಕ್ಲಿಯರ್ ಬೇಸ್. ಅಲ್ಲಿಗೆ ಹೊಡೆದರೆ ಅಮೇರಿಕಾ ದೇಶಕ್ಕೆ ಏಕೆ ಸಿಟ್ಟು ? ಪಾಕಿಸ್ತಾನಿಯರು ಕೂಡ ಪ್ರವೇಶ ಮಾಡಲು ಅನುಮತಿ ಇಲ್ಲದ ಅಮೆರಿಕಾದ ಬೇಸ್ ಕ್ಯಾಂಪ್ ಮೇಲೆ ಕೂಡ ಭಾರತ ದಾಳಿ ಮಾಡಿದೆ. ನೂರಾರು ಜನ ಅಮೆರಿಕನ್ ಸೈನಿಕರು ಸತ್ತಿರುವ ಸಾಧ್ಯತೆಯಿದೆ. ಪಾಕಿಸ್ತಾನ ಅಣು ಬಾಂಬ್ ಹೊಂದಿರಬಹುದು ಆದರೆ ಅದರ ನಿಯಂತ್ರಣ ಅಮೆರಿಕಾದ ಕೈಲಿದೆ. ಹೀಗಾಗಿ ಯಾವಾಗ ಭಾರತ ನೇರವಾಗಿ ಇಲ್ಲಿ ದಾಳಿ ಮಾಡಿ ಅದನ್ನು ನಾಶಪಡಿಸಿತು ಅದು ಅಮೆರಿಕಕ್ಕೆ ನಷ್ಟವನ್ನು ಉಂಟು ಮಾಡಿತು. ಲಾಭ ನಷ್ಟವಿಲ್ಲದೆ ಅಮೇರಿಕಾ ಪುಟ್ಟ ಹೆಜ್ಜೆಯನ್ನು ಸಹ ಇಡುವುದಿಲ್ಲ.
ಕೊನೆಮಾತು: ಭಾರತ ತಾನು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬೆಳೆದಿರುವುದು, ಬೆಳೆಯುತ್ತಿರುವುದು , ಬೇಡವೆಂದರೂ ದಾಳಿ ಮಾಡಿ ಪಾಕಿಸ್ತಾನದ ಮೇಲೆ ನೇರವಾಗಿ ಮತ್ತು ಅಮೇರಿಕಾ ಮೇಲೆ ಅಪರೋಕ್ಷವಾಗಿ ದಾಳಿ ಮಾಡಿರುವುದು , ಅದರಲ್ಲಿ ಗೆದ್ದಿರುವುದು ಅದಕ್ಕೆ ನುಂಗಲಾಗದ ತುತ್ತಾಗಿದೆ. ಭಾರತವನ್ನು ನೇರವಾಗಿ ನಿಯಂತ್ರಿಸಲಾಗದೆ ಇದೀಗ ಅದು ಬೇರೆ ಬೇರೆ ರೀತಿಯ ದಾಳಿಯನ್ನು ನಡೆಸುತ್ತಿದೆ. ಅಮೇರಿಕಾ ,ಕೆನಡಾ , ಐರ್ಲಾಂಡ್ , ಆಸ್ಟ್ರೇಲಿಯಾ , ಇಂಗ್ಲೆಂಡ್ ನಲ್ಲಿ ಆಗುತ್ತಿರುವ ಭಾರತೀಯರ ಮೇಲಿನ ದಾಳಿಗಳು ಭಾರತವನ್ನು ಕುಗ್ಗಿಸುವ ಹುನ್ನಾರದಿಂದ ನಡೆಯುತ್ತಿದೆ ಎನ್ನವುದು ವೇದ್ಯ. ಹಣ , ಅಧಿಕಾರದ ಆಟದಲ್ಲಿ ನೂರಾರು ಕುಟುಂಬಗಳು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ಕೂಡ ಪರಮ ಸತ್ಯ.
Advertisement