

ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವ ಮಾತುಗಳು ಆಗಲೇ ಶುರುವಾಗಿದೆ. ಈ ರೀತಿ ಮಾತಾಡುವವರು ಯಾರು? ಇದು ಹೇಳಿಕೇಳಿ ಸೋಶಿಯಲ್ ಮೀಡಿಯಾ ಯುಗ. ಅದರಲ್ಲೂ ರೀಲ್ಸ್ ಹುಚ್ಚಿಗೆ, ಮೋಹಕ್ಕೆ ಸಿಗದವರು ಕಡಿಮೆ ಎನ್ನಬಹುದು. ಇಲ್ಲಿ ಆಹಾರ, ವಿಹಾರ, ಹೂಡಿಕೆ, ತತ್ವ್ವಜ್ಞಾನ ಹೀಗೆ ಎಲ್ಲವೂ ಎಲ್ಲರೂ ಹೇಳುತ್ತಾರೆ. ಒಬ್ಬರು ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದರೆ ಇನ್ನೊಂದು ರೀಲ್ಸ್ ನಲ್ಲಿ ಇನ್ನೊಬ್ಬ ಮಹಾಶಯ ಇದಕ್ಕೆ ಪೂರ್ಣ ತದ್ವಿರುದ್ದ ಹೇಳುತ್ತಾರೆ. ಆಹಾರದ ವಿಷಯದಲ್ಲಿ ಜನರನ್ನು ಅದೆಷ್ಟುಮಟ್ಟಿಗೆ ಸಂಶಯಕ್ಕೆ ದೂಡಿದ್ದಾರೆ ಎಂದರೆ ಆಹಾರ ಸೇವಿಸುವುದು ಬಿಟ್ಟು ಬಿಡೋಣ ಎನ್ನುವಷ್ಟು! ಇದೆ ಮಾತನ್ನು ಹಣಕಾಸಿನ ವಿಷಯಕ್ಕೂ ಅನ್ವಯಿಸಬಹುದು.
ಇವತ್ತಿಗೆ ಚಾಲ್ತಿಯಲ್ಲಿರುವ ಒಂದು ವಿಷಯ ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವುದು. ಇದರ ಜೊತೆಗೆ ಮೋದಿ ರಷ್ಯಾದ ತೈಲವನ್ನು ಕೊಳ್ಳುವುದು ಕಡಿಮೆ ಮಾಡುತ್ತಾರೆ. ಅವರು ಟ್ರಂಪ್ ಮಹಾಶಯನಿಗೆ ಶರಣಾಗಿದ್ದಾರೆ ಎನ್ನುವುದು. ಮೊದಲ ಸಾಲಿನಲ್ಲಿ ರೀಲ್ಸ್ ಶೂರರ ಬಗ್ಗೆ ಬರೆದಿದ್ದೇನೆ ಅಲ್ಲವೇ, ಥೇಟ್ ಹಾಗೆ ಇಲ್ಲಿಯೂ ಅವರವರ ಮೂಗಿನ ನೇರಕ್ಕೆ ಎಲ್ಲರೂ ವಿಶ್ಲೇಷಣೆ ಮಾಡುತ್ತಿದ್ದಾರೆ. ನಿಜಕ್ಕೂ ವಿತ್ತ ಜಗತ್ತಿನಲ್ಲಿ ಏನಾಗುತ್ತಿದೆ? ಷೇರು ಮಾರುಕಟ್ಟೆ ಮಹಾಕುಸಿತವನ್ನು ಕಾಣಲಿದೆಯೇ? ರಷ್ಯಾದ ತೈಲವನ್ನು ಮೋದಿ ಕೊಳ್ಳುವುದು ಕಡಿಮೆ ಮಾಡುತ್ತಾರೆಯೇ? ಎನ್ನುವುದರ ಬಗ್ಗೆ ಒಂದಷ್ಟು ವಸ್ತು ನಿಷ್ಠವಾಗಿ ವಿಚಾರ ಮಾಡಿ ನೋಡೋಣ.
ಅಮೆರಿಕಾದ ಸಾಲ ತೀರಿಸಲಾಗದಷ್ಟು ಅಂದರೆ 37 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿ ಕೂತಿದೆ. ಇದನ್ನು ತೀರಿಸಬೇಕು ಎಂದರೆ ಅಮೇರಿಕಾ ಮನಸೋಇಚ್ಛೆ ಡಾಲರ್ ಮುದ್ರಿಸಬೇಕು. ಹೀಗೆ ಹೆಚ್ಚು ಡಾಲರ್ ಮುದ್ರಿಸಿದರೆ ಹಣದುಬ್ಬರ ಹೆಚ್ಚಾಗುತ್ತದೆ. ಡಾಲರಿನ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಸಾಲ ಕೊಟ್ಟ ದೇಶಗಳ ಬಳಿ ಡಾಲರ್ ಮೂಲಕ ಸಾಲದ ಹಣವೇನೋ ವಾಪಸ್ಸು ಬರುತ್ತದೆ. ಆದರೆ ಅದರ ಮೌಲ್ಯ ಕುಸಿದಿರುತ್ತದೆ. ಉದಾಹರಣೆ ನೋಡೋಣ. ಅಮೇರಿಕಾ ಹೆಚ್ಚು ಡಾಲರ್ ಮುದ್ರಿಸಿದರೆ ಆಗ ಒಂದು ಕಾಫಿಯ ಬೆಲೆ ಒಂದು ಡಾಲರ್ ಇದ್ದದ್ದು ಎರಡು ಅಥವಾ ಮೂರು ಡಾಲರ್ ಆಗುತ್ತದೆ. ಅಂದರೆ ಕೈಯಲ್ಲಿ ಹಣವೇನೂ ಇದೆ, ಆದರೆ ಅದರಿಂದ ಹಿಂದೆ ಕೊಳ್ಳುತ್ತಿದ್ದ ಪದಾರ್ಥಕ್ಕೆ ಈಗ ಹೆಚ್ಚು ಹಣವನ್ನು ನೀಡಬೇಕಾಗುತ್ತದೆ.
ಇದು ಹೇಗೆ ಎಂದರೆ ಹಣ ಕೊಟ್ಟಂತೆ ಆಯ್ತು ಆದರೆ ಅದರಿಂದ ಏನೂ ಪ್ರಯೋಜನವಿಲ್ಲದಂತೆ ಕೂಡ ಆಯ್ತು. ಹೀಗಾಗಿ ಸಾಲ ಕೊಟ್ಟ ದೇಶಗಳ ಸ್ಥಿತಿ ದಯನೀಯವಾಗುತ್ತದೆ. ಇದು ಎರಡು ರೀತಿಯ ಪರಿಣಾಮವನ್ನು ಬೀರುತ್ತದೆ. ಒಂದು ಬರಬೇಕಿದ್ದ ಹಣ ಬಂದರೂ ಮೌಲ್ಯ ಕುಸಿತವಾಗಿರುತ್ತದೆ. ಎರಡು ಬಹಳಷ್ಟು ದೇಶಗಳು ಈಗಾಗಲೇ ಡಾಲರಿನ ತಮ್ಮ ರಿಸೆರ್ವ್ ಹಣವನ್ನು ಇಟ್ಟು ಕೊಂಡಿವೆ. ಹೀಗಾಗಿ ಅದರ ಮೌಲ್ಯ ಕೂಡ ಕುಸಿಯುತ್ತದೆ. ಇದೊಂದು ತೀರಾ ವಿಚಿತ್ರ ಸನ್ನಿವೇಶ. ಸಿನಿಮಾದಲ್ಲಿ ವಿಲನ್ ಸೋಲುವುದು ಖಚಿತ ಎಂದು ಗೊತ್ತಾದ ಮೇಲೆ ಕೈಗೆ ಸಿಕ್ಕ ಯಾರಾದರೂ ನಾಗರೀಕರನ್ನು ಹಿಡಿದು ಅವರ ತಲೆಗೆ ಪಿಸ್ತೂಲು ಹಿಡಿದಂತೆ , ಇಲ್ಲಿ ಯಾವ ನಾಗರಿಕರೂ ಇಲ್ಲದ ಕಾರಣ ಕೈಯಲ್ಲಿ ಗ್ರಾಯ್ನಾಡ್ ಹಿಡಿದು ಅದನ್ನು ಸ್ಪೋಟಿಸಿತ್ತೇನೆ ಎಂದಂತೆ, ಆಗ ಎಲ್ಲರೂ ಸಾಯುತ್ತಾರೆ.
ಅಮೇರಿಕಾ ತನ್ನ ಡೆಟ್ ಮರುಪಾವತಿಸುವ ನಾಟಕ ಆಡಲು ತನ್ನ ಹಣವನ್ನು ಅಪಮೌಲ್ಯ ಮಾಡಿಕೊಳ್ಳಲು ಸಿದ್ಧವಿದೆ. ಈ ನಾಟಕವನ್ನು ಅದು ಈಗಾಗಲೇ ಒಂದು ಬಾರಿ ಮಾಡಿ ಅದರಲ್ಲಿ ಯಶಸ್ವಿಯಾಗಿದೆ. 1971 ರಲ್ಲಿ ನಿಕ್ಸನ್ ಡಾಲರ್ ಮುದ್ರಣಕ್ಕೆ ಇದ್ದ ಗೋಲ್ಡ್ ಬ್ಯಾಕ್ ಅಪ್ ತೆಗೆದು ಬೇಕಾದ ಹಾಗೆ ಡಾಲರ್ ಮುದ್ರಿಸಿದ್ದರು. ಆಗ ಜಗತ್ತಿನ ಇತರ ದೇಶಗಳು ಅದರಲ್ಲೂ ಹೆಚ್ಚಿನ ಬಂಗಾರದ ರಿಸೆರ್ವ್ ಹೊಂದಿದ್ದ ದೇಶಗಳು ಬೇಸ್ತು ಬಿದ್ದಿದ್ದವು. ಚಿನ್ನದ ಬೆಲೆ ಕುಸಿತ ಕಂಡಿತ್ತು. ಮೌಲ್ಯವಿಲ್ಲದ ಡಾಲರ್ ಎನ್ನುವ ಕಾಗದದ ತುಂಡಿಗೆ ದೇಶಗಳು ಚಿನ್ನವನ್ನು ಮಾರಿಕೊಂಡಿದ್ದವು. ಆ ನಂತರ ಅಮೇರಿಕಾ ಇಲ್ಲಿಯ ತನಕ ರಾಜ್ಯಭಾರ ಮಾಡಿಕೊಂಡು ಬಂದಿತು. ಕೋವಿಡ್ ಸಮಯದಲ್ಲಿ ಕೂಡ ಅಮೇರಿಕಾ ಮನಸೋಇಚ್ಛೆ ಡಾಲರ್ ಮುದ್ರಿಸಿದ್ದು ಜಗತ್ತಿಗೆ ಗೊತ್ತಿರುವ ವಿಷಯ.
ಇವತ್ತಿನ ಪರಿಸ್ಥಿತಿ ಏನಾಗಿದೆ ಗೊತ್ತಾ ?
ಅಮೇರಿಕಾ 1971 ರಲ್ಲಿ ಆಡಿದ ಆಟವನ್ನು ಮತ್ತೆ ಆಡಲು ಹೊರಟಿದೆ. ಈ ಬಾರಿ ಅದು ಡಾಲರ್ ಮುದ್ರಿಸುವುದಿಲ್ಲ. ಜಗತ್ತಿಗೆ ಅದರ ಈ ಆಟ ಗೊತ್ತಾಗಿದೆ. ಹೀಗಾಗಿ ಅಮೇರಿಕಾ ಸ್ಟೇಬಲ್ ಕಾಯಿನ್ ಎನ್ನುವ ಡಿಜಿಟಲ್ ಡಾಲರ್ ತರಲಿದೆ. ಅದಕ್ಕೆ ಪ್ರೈಮರಿ ಬ್ಯಾಕ್ ಅಪ್ ಆಗಿ ಡಾಲರ್ ಎರಡನೇ ಲೇಯರ್ ಬ್ಯಾಕ್ ಅಪ್ ಆಗಿ ಬಿಟ್ ಕಾಯಿನ್ ಬಳಸಲಿದ್ದಾರೆ. ಹೀಗಾಗಿ ಅಮೇರಿಕಾ ತನ್ನಲ್ಲಿರುವ ಚಿನ್ನವನ್ನು ಮಾರಿ ಅದನ್ನು ಬಿಟ್ ಕಾಯಿನ್ ಕೊಳ್ಳಲು ಬಳಸುತ್ತಿದೆ. ಇದರಲ್ಲಿ ಅದು ಯಶಸ್ವಿಯಾದರೆ ಜಗತ್ತಿನ ಎಲ್ಲಾ ದೇಶಗಳು ಸ್ಟೇಬಲ್ ಕಾಯಿನ್ ಬಳಸಬೇಕಾಗುತ್ತದೆ. ಇಲ್ಲವೇ ತಮ್ಮ ದೇಶದ ಸ್ಟೇಬಲ್ ಕಾಯಿನ್ ಲಾಂಚ್ ಮಾಡಬೇಕಾಗುತ್ತದೆ. ಆಗ ಅಮೆರಿಕನ್ ಸ್ಟೇಬಲ್ ಕಾಯಿನ್ ಜೊತೆಗೆ ಬೆಲೆಯನ್ನು ನಿರ್ಧಾರ ಮಾಡಿಕೊಳ್ಳಬೇಕಾಗುತ್ತದೆ. ಅರ್ಥ ಸರಳ ಹೊಸದಾಗಿ ರೀ ಸೆಟ್ ಬಟನ್ ಒತ್ತಲು ಈ ಎಲ್ಲಾ ಕಸರತ್ತು. ಇದರಿಂದ ಹೆಚ್ಚಿನ ಕಷ್ಟ ಪಡದೆ ತನ್ನ ಸಾಲವನ್ನು ಅಮೇರಿಕಾ ತೀರಿಸಿಕೊಳ್ಳುತ್ತದೆ. ತಾನು ಸೋತ ಆಟವನ್ನು ಮುಗಿಸಿ, ಬೇರೆ ಹೊಸ ಆಟ ಆಡೋಣ ಎನ್ನುವ ರೀತಿಯಿದು.
1971 ರ ಸಮಯದಲ್ಲಿ ಅಮೇರಿಕಾ ಜಗತ್ತನ್ನು ಸುಲಭವಾಗಿ ಮೋಸ ಮಾಡಿತು. ಏಕೆಂದರೆ ಎರಡನೇ ಮಹಾಯುದ್ದದಿಂದ ಚೇತರಿಸಿ ಕೊಳ್ಳುತ್ತಿದ್ದ ಜಗತ್ತಿಗೆ ನೆಮ್ಮದಿ ಬೇಕಿತ್ತು. ಇನ್ನೊಂದು ಸಂಘರ್ಷಕ್ಕೆ ಯಾವ ದೇಶಗಳೂ ಸಿದ್ಧವಿರಲಿಲ್ಲ. ಹೀಗಾಗಿ ಅಮೇರಿಕಾ ಅಂದು ತನ್ನ ಮೋಸದಾಟದಲ್ಲಿ ಗೆದ್ದಿತು. ಇವತ್ತು ಅಮೇರಿಕಾ ಮತ್ತೆ ಚಿನ್ನವನ್ನು ಮುಂದಿಟ್ಟು ಕೊಂಡು ಚಿನ್ನದಿಂದ ಯಾವ ಪ್ರಯೋಜನವಿಲ್ಲ ಬಿಟ್ ಕಾಯಿನ್ ಅತಿ ಮುಖ್ಯ ಎಂದು ಚಿನ್ನವನ್ನು ಮಾರಿ ಬಿಟ್ ಕಾಯಿನ್ ಸಂಗ್ರಹಿಸುತ್ತಿದೆ. ಆದರೆ, ಚೀನಾ, ರಷ್ಯಾ, ಜಪಾನ್, ಭಾರತ ದೇಶಗಳು ಅಮೇರಿಕಾ ಮತ್ತೊಮ್ಮೆ ಮೋಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಂಡಿವೆ.
ಹೀಗಾಗಿ ಅವು ತಮ್ಮ ರಿಸೆರ್ವ್ ನಲ್ಲಿರುವ ಡಾಲರ್ ಹಣವನ್ನು ಮಾರಿ ಚಿನ್ನವನ್ನು ಖರೀದಿ ಮಾಡುತ್ತಿವೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಗೆ ಇದು ಕಾರಣ. ಯಾವ ಚಿನ್ನಕ್ಕೆ ಬೆಲೆಯಿಲ್ಲ ಎಂದು ಅಮೇರಿಕಾ ಹೇಳುತ್ತಿದೆ ಅದನ್ನು ಜಗತ್ತಿನ ಬೇರೆ ಶಕ್ತಿಶಾಲಿ ದೇಶಗಳು ಕೊಂಡು ಸಂಗ್ರಹಿಸಲು ಶುರು ಮಾಡಿವೆ. ಹಣಕಾಸಿನ ಆಟಕ್ಕೆ ಒಂದು ಬೇಸ್ ಬೇಕು. 1971 ರಲ್ಲಿ ಚಿನ್ನ ಬೇಸ್ ಅಲ್ಲ ಎಂದು ಅಮೇರಿಕಾ ಹೇಳಿದಾಗ ಎಲ್ಲಾ ದೇಶಗಳೂ ಅದನ್ನು ನಂಬಿ ಡಾಲರಿನಲ್ಲಿ ಹೆಚ್ಚು ರಿಸೆರ್ವ್ಸ್ ಇಟ್ಟು ಕೊಂಡವು. ಈ ಬಾರಿ ಮತ್ತೆ ಅಮೇರಿಕಾ ಚಿನ್ನವಲ್ಲ, ಬಿಟ್ ಕಾಯಿನ್ ಎನ್ನುವ ಹಾಡು ಹಾಡುತ್ತಿದೆ. ಒಪ್ಪಲು ಇಂದಿನ ಸಮಯದಲ್ಲಿ ಪ್ರಮುಖ ಐದಾರು ದೇಶಗಳು ಸಿದ್ದವಿಲ್ಲ. ಹೀಗಾಗಿ ಸಂಘರ್ಷ ಶುರುವಾಗಿದೆ.
ಬ್ರಿಕ್ಸ್ ಒಕ್ಕೊಟ ಡಿ ಡಾಲರೈಸೇಷನ್ ಮಾತನ್ನು ಮುನ್ನೆಲೆಗೆ ತಂದಿತು. ಅಮೇರಿಕಾ ಒಂದೆಜ್ಜೆ ಮುಂದೆ ಹೋಗಿ ಡಾಲರ್ ಹಣವನ್ನು ಪೂರ್ಣವಾಗಿ ನಾಶ ಮಾಡಲು ಸಿದ್ಧವಿದೆ. ಮೊದಲಿಗೆ ಅಪಮೌಲ್ಯ ನಂತರ ಡಾಲರ್ ವಿನಿಮಯವಾಗಿ ತೆರೆ ಮರೆಗೆ ಸೇರುತ್ತದೆ. ಸ್ಟೇಬಲ್ ಕಾಯಿನ್, ಬಿಟ್ ಕಾಯಿನ್ ಹುಯಿಲುಗಳ ನಡುವೆ ತನ್ನ ಸಾಲವನ್ನು ವಾಪಸ್ಸು ಕೊಡುತ್ತದೆ. ಕೈಯಲ್ಲಿ ಕೊಟ್ಟ ಹಣ ವಾಪಸ್ಸು ಪಡೆದೆವು ಎಂದು ಅನ್ನಿಸುತ್ತದೆ. ಆದರೆ ಕೊಳ್ಳುವ ಶಕ್ತಿ ಇಲ್ಲವಾಗುತ್ತದೆ.
ಈ ಆಟದಿಂದ ಅಮೇರಿಕಾ ೩೦ ರಿಂದ ೪೦ ಪ್ರತಿಶತ ಕೊಡಬೇಕಾದ ಹಣದಲ್ಲಿ ಉಳಿಸಿಕೊಂಡಂತೆ ಆಗುತ್ತದೆ. ದಾಖಲಾತಿ ಪ್ರಕಾರ 37 ಟ್ರಿಲಿಯನ್ ವಾಪಸ್ಸು ಕೊಟ್ಟಂತೆ ಆದರೆ ನಿಜಾರ್ಥದಲ್ಲಿ ಅದು 25 ರಿಂದ 26 ಟ್ರಿಲಿಯನ್ ಹಣವನ್ನು ವಾಪಸ್ಸು ಕೊಟ್ಟಿರುತ್ತದೆ. ಸ್ಟೇಬಲ್ ಕಾಯಿನ್ ಬೆಲೆ ನಿಗದಿಯಲ್ಲಿ ಅದು ಅಷ್ಟು ಲಾಭ ಮಾಡಿಕೊಳ್ಳುತ್ತದೆ.
ಮಹತ್ತರ ಬದಲಾವಣೆಯ ಕಾಲದಲ್ಲಿ ಏರುಪೇರು ಸಹಜ. ಈ ಪ್ರಕ್ರಿಯೆಯಲ್ಲಿ ಅಮೆರಿಕಾದ ಷೇರು ಮಾರುಕಟ್ಟೆ ಕುಸಿತ ಕಾಣಲಿದೆ. ಇದು ನಿಜ. ಮುಂದಿನ 10/12 ತಿಂಗಳಲ್ಲಿ ನಾವು ಇದನ್ನು ಕಾಣಬಹುದು. ಭಾರತದ ಷೇರು ಮಾರುಕಟ್ಟೆಯ ಮೇಲೂ ಇದರ ಪರಿಣಾಮವಾಗಲಿದೆ. ಆದರೆ ಅದು ಹೆಚ್ಚಿರುವುದಿಲ್ಲ. ಇವತ್ತಿನ ದಿನದಲ್ಲಿ ಭಾರತಕ್ಕಿಂತ ಉತ್ತಮ ದೇಶ ಹೂಡಿಕೆಗೆ ಬೇರೊಂದಿಲ್ಲ ಎನ್ನುವುದನ್ನು ಮರೆಯುವುದು ಬೇಡ.
ಮೋದಿಯವರು ರಷ್ಯಾದ ತೈಲ ಕೊಳ್ಳುವುದರಲ್ಲಿ ಸ್ವಲ್ಪ ಕಡಿಮೆ ಮಾಡಲು ಮನಸ್ಸು ಮಾಡಿದ್ದಾರೆ. ಟ್ರಂಪ್ ತೆರಿಗೆ ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಇದು ಮೋದಿಯ ಶರಣಾಗತಿಯಲ್ಲ, ಹಾಗೆ ಟ್ರಂಪ್ ಜಯವೂ ಅಲ್ಲ. ಮೋದಿಯವರು ದೇಶಕ್ಕೆ ಯಾವುದು ಹೆಚ್ಚು ಹಿತ. ಯಾವುದು ಲಾಭ, ಅದನ್ನು ಮಾಡಲು ಮಧ್ಯದಲ್ಲಿ ನಿಂತಿದ್ದಾರೆ. ಅಮೇರಿಕಾ ಗೆಲ್ಲುವ ಸಂಭಾವ್ಯತೆ ೩೫ ಪ್ರತಿಶತ ಏಕೆಂದರೆ ಇಂದಿಗೂ ವರ್ಲ್ಡ್ ಟ್ರೇಡ್ ಡಾಲರಿನಲ್ಲಿ ಆಗುತ್ತಿದೆ. 35 ಪ್ರತಿಶತ ಚೀನಾ ಮತ್ತು ರಷ್ಯಾ ಗೆಲ್ಲುವ ಸಾಧ್ಯತೆಯಿದೆ. ಏಕೆಂದರೆ ಅವು ಸ್ಟೇಬಲ್ ಕಾಯಿನ್ ಒಪ್ಪದೇ ಚಿನ್ನವನ್ನು ಖರೀದಿಸುತ್ತಿವೆ. ಉಳಿದ 30 ಪ್ರತಿಶತ ಯಾವ ನಿರ್ಧಾರವೂ ಒಮ್ಮುಖವಾಗಿ ಆಗದೆ ಅಮೇರಿಕಾ ಒಂದಷ್ಟು ಆಳ್ವಿಕೆಯನ್ನು, ಚೀನಾ ಮತ್ತು ರಷ್ಯಾ ಇನ್ನೊಂದಷ್ಟು ಆಳ್ವಿಕೆಯನ್ನು ಮಾಡಲಿವೆ.
ಕೊನೆಮಾತು: ಭಾರತ ಇವತ್ತಿನ ಪರಿಸ್ಥಿತಿಯಲ್ಲಿ ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎನ್ನುವ ಸ್ಟಾಂಡ್ ತೆಗೆದುಕೊಂಡಿದೆ. ಎಲ್ಲಿ ಹೆಚ್ಚು ಲಾಭ ಅಲ್ಲಿಗೆ ಜಿಗಿಯಲಿದೆ. ಸೋಶಿಯಲ್ ಮೀಡಿಯಾ ಪಂಡಿತರು ಮೋದಿಯವರ ಸೋಲು ಇತ್ಯಾದಿಗಳಿಗೆ ಬೆಲೆ ಕೊಡುವುದು ಬೇಡ. ಇಲ್ಲಿನ ರಾಜಕೀಯ ಬಹು ದೊಡ್ಡದು. ಇವತ್ತಿನ ಭಾರತ ಸಶಕ್ತ ಭಾರತ. ಅದು ಡಬಲ್ ಸ್ಟ್ಯಾಂಡರ್ಡ್ ಹೊಂದಿದೆ. ಯಾವುದು ತನ್ನ ದೇಶಕ್ಕೆ ಹೆಚ್ಚು ಲಾಭ ಅದನ್ನು ಮಾಡುವ ಕುಟಿಲತೆ, ಬುದ್ದಿವಂತಿಕೆ ಹೊಂದಿದೆ. ದೇಶವಾಗಿ ನಮಗೆ ಬೇಕಿರುವುದು ಇದೆ. ಏಕೆಂದರೆ ಅಮೇರಿಕಾ ಮಾಡುತ್ತಿರುವುದು ಕೂಡ ಅದೇ, ತನ್ನ ದೇಶದ ಜನರ ಹಿತ ಕಾಯುವುದು.
Advertisement