
ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ಸಭೆಗೂ ಮುನ್ನ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 31ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಮಾಲೋಚನೆಯ ವೇಳೆ ಉಭಯ ನಾಯಕರು ಗಡಿ ವಿವಾದಗಳನ್ನು ಮೀರಿದ ದೃಷ್ಟಿಕೋನವನ್ನು ಹೊಂದುವ ಅವಶ್ಯಕತೆಗೆ ಒತ್ತು ನೀಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುತ್ತಾ ಕಾರ್ಯ ನಿರ್ವಹಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಟೋಬರ್ 2024ರಲ್ಲಿ ಉಭಯ ನಾಯಕರು ಕಜಾನ್‌ನಲ್ಲಿ ಭೇಟಿಯಾಗಿದ್ದರು. ಆ ಭೇಟಿಯ ಬಳಿಕ ಪರಸ್ಪರ ದೇಶಗಳ ಸಂಬಂಧದಲ್ಲಿ ನಡೆದಿರುವ ಧನಾತ್ಮಕ ಪ್ರಗತಿಯನ್ನು ಇಬ್ಬರೂ ಸ್ವಾಗತಿಸಿದರು.
ಭಾರತ ಮತ್ತು ಚೀನಾಗಳು ಪರಸ್ಪರ ಸಹಯೋಗಿಗಳೇ ಹೊರತು ಶತ್ರುಗಳಲ್ಲ ಎಂದು ಉಭಯ ನಾಯಕರೂ ಅಭಿಪ್ರಾಯ ಪಟ್ಟಿದ್ದು, ಪರಸ್ಪರರ ನಡುವೆ ಇರುವ ಭಿನ್ನಾಭಿಪ್ರಾಯಗಳು ಎಂದಿಗೂ ವಿವಾದದ ರೂಪ ತಳೆಯಬಾರದು ಎಂದು ಅಭಿಪ್ರಾಯ ಪಟ್ಟರು.
ಚೀನಾದ ಹೇಳಿಕೆಗಳು ಶಾಂತಿಯುತ ಸಹಬಾಳ್ವೆಗೆ ಐದು ತತ್ವಗಳನ್ನು (ಪಂಚಶೀಲ) ಉಲ್ಲೇಖಿಸಿದ್ದವು. 70 ವರ್ಷಗಳ ಹಿಂದೆ ಭಾರತ ಮತ್ತು ಚೀನಾದ ನಾಯಕರು ರೂಪಿಸಿದ್ದ ಪಂಚಶೀಲ ತತ್ವಗಳನ್ನು ಇಂದಿಗೂ ಗೌರವಿಸಿ, ಅವುಗಳನ್ನು ಸಮರ್ಥವಾಗಿ ಜಾರಿಗೊಳಿಸಬೇಕೆಂದು ಚೀನಾ ಹೇಳಿಕೆ ನೀಡಿದೆ.
1947ರಲ್ಲಿ ಭಾರತ ಸ್ವತಂತ್ರಗೊಂಡು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರೂಪುಗೊಂಡ ಬಳಿಕ, ಉಭಯ ದೇಶಗಳು ಪರಸ್ಪರ ವ್ಯವಹಾರಕ್ಕೆ ಕೆಲವು ನಿಯಮಗಳನ್ನು ರೂಪಿಸುವ ಕುರಿತು ಕಾರ್ಯಾಚರಿಸಲಾರಂಭಿಸಿದವು.
ಎರಡೂ ದೇಶಗಳ ನಡುವೆ ಆಗ ಇದ್ದ ಪ್ರಮುಖ ವಿಚಾರವೆಂದರೆ, ಟಿಬೆಟ್‌ನ ಭವಿಷ್ಯವಾಗಿತ್ತು. ಎಪ್ರಿಲ್ 29, 1954ರಂದು, ಭಾರತ ಮತ್ತು ಚೀನಾಗಳು ಟಿಬೆಟ್ ಜೊತೆಗಿನ ವ್ಯಾಪಾರ ಮತ್ತು ಸಂಬಂಧದ ಕುರಿತು ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಇದು ಪಂಚಶೀಲ – ಅಂದರೆ, ಶಾಂತಿಯುತ ಸಹಬಾಳ್ವೆಗಾಗಿ ಐದು ನೀತಿಗಳಿಗೆ ಹಾದಿ ಮಾಡಿಕೊಟ್ಟಿತು.
ಪರಸ್ಪರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ
ಉಭಯ ದೇಶಗಳು ಪರಸ್ಪರರ ಭೂ ಪ್ರದೇಶ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕು. ಪರಸ್ಪರ ಭೂ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು, ಅಥವಾ ಗಡಿಗಳನ್ನು ಬದಲಾಯಿಸಲು ಪ್ರಯತ್ನ ನಡೆಸಬಾರದು.
ಪರಸ್ಪರರ ಮೇಲೆ ಆಕ್ರಮಣಕಾರಿ ಮನೋಭಾವ ಸಲ್ಲದು
ಎರಡು ದೇಶಗಳ ಪೈಕಿ, ಯಾವುದೂ ಇನ್ನೊಂದರ ಮೇಲೆ ದಾಳಿ ಮಾಡುವುದಾಗಲಿ, ಬೆದರಿಸುವುದಾಗಲಿ ಮಾಡಬಾರದು. ಶಾಂತಿಯನ್ನು ಕಾಪಾಡಿ, ಸಾರ್ವಜನಿಕರು ಮತ್ತು ಸ್ಥಿರತೆಗೆ ತೊಂದರೆ ಉಂಟುಮಾಡುವಂತಹ ಯುದ್ಧಗಳನ್ನು ತಪ್ಪಿಸಬೇಕು.
ಆಂತರಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬಾರದು
ಭಾರತ ಮತ್ತು ಚೀನಾಗಳು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು. ಒಂದು ದೇಶದ ರಾಜಕೀಯ, ಸಂಸ್ಕೃತಿ ಅಥವಾ ಆಂತರಿಕ ನಿರ್ಧಾರಗಳಲ್ಲಿ ಇನ್ನೊಂದು ದೇಶ ಮಧ್ಯ ಪ್ರವೇಶ ಮಾಡಬಾರದು.
ಸಮಾನತೆ ಮತ್ತು ಪರಸ್ಪರರಿಗೆ ಪ್ರಯೋಜನ
ಭಾರತ ಮತ್ತು ಚೀನಾಗಳು ಸಮಾನ ಸಹಯೋಗಿಗಳು. ಎರಡೂ ದೇಶಗಳು ವ್ಯಾಪಾರ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿ, ಪರಸ್ಪರ ಪ್ರಯೋಜನಗಳನ್ನು ಹಂಚಿಕೊಂಡು, ಅಭಿವೃದ್ಧಿಗೆ ನೆರವಾಗಬೇಕು.
ಶಾಂತಿಯುತ ಸಹಬಾಳ್ವೆ
ಪರಸ್ಪರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಭಾರತ ಮತ್ತು ಚೀನಾಗಳು ಶಾಂತಿಯುತವಾಗಿ ಬಾಳಬೇಕು. ಪರಸ್ಪರರ ಕುರಿತು ಗೌರವದ ಭಾವನೆ ಹೊಂದಿ, ಎದುರಾಗುವ ಯಾವುದೇ ಸಮಸ್ಯೆಯನ್ನು ಮಾತುಕತೆಗಳ ಮೂಲಕವೇ ಪರಿಹರಿಸಬೇಕೇ ಹೊರತು, ಕದನದ ಹಾದಿ ಹಿಡಿಯಬಾರದು.
ಬಹಳಷ್ಟು ಜನರು ಪಂಚಶೀಲದ ಪರಿಕಲ್ಪನೆ ನೀಡಿದ್ದು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಎಂದು ಅಭಿಪ್ರಾಯ ಪಟ್ಟರೆ, ಒಂದಷ್ಟು ಜನ ನೆಹರೂ ಸಹ ಇಂತಹ ಆಲೋಚನೆ ಹೊಂದಿದ್ದರೂ, ಪಂಚಶೀಲ ಮೂಲತಃ ಚೀನಾದ ಪ್ರೀಯಿಯರ್ ಆಗಿದ್ದ ಜೌ ಎನ್ ಲಾಯ್ ಅವರ ಪರಿಕಲ್ಪನೆ ಎಂದು ವಾದಿಸುತ್ತಾರೆ.
ಸೆಪ್ಟೆಂಬರ್ 1955ರಲ್ಲಿ, ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಜವಾಹರಲಾಲ್ ನೆಹರೂ ಭಾರತದ ನೀತಿ ಸ್ವತಂತ್ರವಾಗಿದ್ದು, ಯಾವುದೇ ಹೆಮ್ಮೆಯ ಆಧಾರದಲ್ಲಿ ರೂಪಿತವಾದುದಲ್ಲ ಎಂದು ವಿವರಿಸಿದ್ದರು. ಭಾರತ ಸದಾ ಎಲ್ಲ ದೇಶಗಳೊಡನೆ ಸ್ನೇಹ ಮತ್ತುಸದ್ಭಾವನೆಗಳನ್ನು ಬಯಸುವ ದೇಶವಾಗಿದ್ದರೂ, ತನ್ನದೇ ಆದ ಸ್ವತಂತ್ರ ಪಥವನ್ನು ಸದಾ ಆರಿಸುತ್ತದೆ. ಇತರ ಆಯ್ಕೆಗಳಿಗೆ ಮುಕ್ತವಾಗಿದ್ದರೂ, ತನ್ನ ಆಯ್ಕೆಯನ್ನು ಆರಿಸುವ ಸ್ವಾತಂತ್ರ್ಯ ಪಂಚಶೀಲದ ನೈಜ ಆಶಯವಾಗಿದೆ.
ಚೀನಾ ಈ ಐದು ನೀತಿಗಳನ್ನು ಜಗತ್ತಿನೊಡನೆ ವ್ಯವಹರಿಸುವಾಗ ತನ್ನ ಮಾರ್ಗದರ್ಶಕವಾಗಬೇಕು ಎಂದು ಬಯಸಿತ್ತು. ಆರಂಭದಲ್ಲಿ ಭಾರತ ಪಂಚಶೀಲವನ್ನು ಭಾರತ – ಚೀನಾಗಳ ಸಂಬಂಧದ ಮಾರ್ಗದರ್ಶಿ ಎಂದು ಭಾವಿಸಿತ್ತು. ಆದರೆ, ಶೀತಲ ಸಮರ ಹೆಚ್ಚು ಹೆಚ್ಚು ತೀವ್ರಗೊಳ್ಳುತ್ತಾ ಸಾಗಿದಂತೆ, ಭಾರತ ಪಂಚಶೀಲ ಒಪ್ಪಂದವನ್ನು ಶಾಂತಿಯುತ ಸಹಬಾಳ್ವೆಗೆ ಇರುವ ನೂತನ ಮಾದರಿ ಎಂದು ಪರಿಚಯಿಸಲು ಆರಂಭಿಸಿತು. ಈ ವಿಧಾನ ದೊಡ್ಡ ದೇಶಗಳ ಪಾರಮ್ಯದ ಹೋರಾಟಕ್ಕಿಂತ ( ಸೂಪರ್ ಪವರ್ ದೇಶಗಳ ನಡುವೆ ಪರಸ್ಪರರ ಮೇಲೆ ನಿಯಂತ್ರಣ, ಪಾರಮ್ಯ ಮತ್ತು ಪ್ರಭಾವದ ಸ್ಥಾಪನೆಯ ಪ್ರಯತ್ನ) ಭಿನ್ನವಾದ ವಿಧಾನವಾಗಿತ್ತು.
ನೆರೆಯ ಶತ್ರು ದೇಶವಾದ ಪಾಕಿಸ್ತಾನ ಅಮೆರಿಕಾದ ಮಿತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಬಳಿಕ, ಶೀತಲ ಸಮರ ಭಾರತದ ಮನೆ ಬಾಗಿಲನ್ನು ತಲುಪಿತು ಎಂದು ಮಾಜಿ ರಾಜತಂತ್ರಜ್ಞ ಚಂದ್ರಶೇಖರ್ ದಾಸ್ ಗುಪ್ತಾ ಅಭಿಪ್ರಾಯ ಪಟ್ಟಿದ್ದರು. ನೆಹರೂ ಆ ಸಂದರ್ಭದಲ್ಲಿ ಅಲಿಪ್ತ ನೀತಿಯನ್ನು ಬೆಂಬಲಿಸಿ, ಶಾಂತಿಯುತ ನೆರೆಹೊರೆಯನ್ನು ಸ್ಥಾಪಿಸುವ ಸಲುವಾಗಿ ಪಂಚಶೀಲವನ್ನು ಬಳಸಿಕೊಂಡರು.
ಟಿಬೆಟ್ ಒಪ್ಪಂದದ ಬಳಿಕ ಭಾರತ ಮತ್ತು ಚೀನಾಗಳ ಸಂಬಂಧ ದಿನೇ ದಿನೇ ಹದಗೆಡುತ್ತಾ ಹೋದರೂ, ಆ ಅವಧಿಯಲ್ಲಿ ಜಾರಿಗೆ ಬಂದ ಹಲವಾರು ಒಪ್ಪಂದಗಳಲ್ಲಿ ಪಂಚಶೀಲ ನೀತಿಗಳು ಕಾಣಿಸಿಕೊಳ್ಳುತ್ತಿದ್ದವು.
1954ರ ಟಿಬೆಟ್ ಒಪ್ಪಂದ ಭಾರತ ಮತ್ತು ಚೀನಾಗಳ ನಡುವೆ ಶಾಂತಿ ಮತ್ತು ಸ್ನೇಹದ ಸಾಧನೆಗೆ ಪಂಚಶೀಲ ನೀತಿಗಳನ್ನು ಒಳಗೊಂಡಿತ್ತು.
ರಕ್ಷಣಾ ಸಚಿವಾಲಯ 50 ವರ್ಷಗಳ ಬಳಿಕ ಪ್ರಕಟಿಸಿದ ಒಂದು ದಾಖಲೆಯ ಪ್ರಕಾರ, 29 ಆಫ್ರೋ ಏಷ್ಯನ್ ದೇಶಗಳ ನಡುವೆ ನಡೆದ 1955ರ ಬಾಂಡುಂಗ್ ಸಮಾವೇಶದಲ್ಲಿ (ವಸಾಹತುಶಾಹಿ ಆಡಳಿತದ ಬಳಿಕ ಏಷ್ಯಾ ಮತ್ತು ಆಫ್ರಿಕಾದ ದೇಶಗಳ ನಡುವೆ ಶಾಂತಿ, ಒಗ್ಗಟ್ಟು, ಸಹಕಾರಗಳನ್ನು ವೃದ್ಧಿಸುವ ಸಲುವಾಗಿ ನಡೆಸಿದ ಸಭೆ) ಘೋಷಿಸಲಾದ ಹತ್ತು ನೀತಿಗಳಲ್ಲಿ ಪಂಚಶೀಲ ನೀತಿಗಳೂ ಸೇರಿದ್ದವು.
ಬಳಿಕ 1957ರಲ್ಲಿ ಪಂಚಶೀಲ ತತ್ವಗಳನ್ನು ಶಾಂತಿಯುತ ಸಹಬಾಳ್ವೆಯ ಕುರಿತ ವಿಶ್ವಸಂಸ್ಥೆಯ ಘೋಷಣೆಯಲ್ಲೂ ಒಳಗೊಳ್ಳಲಾಯಿತು. ಬಳಿಕ 1961ರಲ್ಲಿ ಪಂಚಶೀಲ ನೀತಿಗಳು ಅಲಿಪ್ತ ಚಳುವಳಿಯ ಮೂಲ ತತ್ವಗಳಾದವು.
ನಿರಂತರವಾಗಿ ಏರಿಳಿತಗಳನ್ನು ಕಾಣುತ್ತಾ ಬಂದಿರುವ ಭಾರತ ಮತ್ತು ಚೀನಾದ ಸಂಬಂಧದಲ್ಲಿ, ಸುಧಾರಣೆಗಳು ಕಂಡು ಬರುವಾಗ ಪಂಚಶೀಲ ತತ್ವಗಳನ್ನು ಆಗಾಗ ಸ್ಮರಿಸಲಾಗುತ್ತದೆ. ಉದಾಹರಣೆಗೆ, 2003ರಲ್ಲಿ ಆಗಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ನೆರೆಹೊರೆಯ ದೇಶಗಳು ಏನಾದರೂ ನಿಜವಾದ ಸ್ನೇಹಿತರಾಗಬೇಕೆಂದು ಬಯಸಿದರೆ, ಅವುಗಳು ಮೊದಲು ತಮ್ಮ ನಡುವೆ ಇರುವ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು. ಆ ಬಳಿಕವೇ ಅವುಗಳು ಮಿತ್ರತ್ವದ ಹೆಜ್ಜೆ ಇಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಸುದೀರ್ಘ ಅಂತರದ ಬಳಿಕ ಈಗ ಭಾರತ ಮತ್ತು ಚೀನಾಗಳು ಮತ್ತೆ ಪರಸ್ಪರ1 ಮಾತುಕತೆಗಳನ್ನು ಆರಂಭಿಸಿದ್ದು, ಉತ್ತಮ ಪ್ರಗತಿ ಸಾಧಿಸಿವೆ. ಪಂಚಶೀಲ ತತ್ವಗಳು, ಪರಸ್ಪರರ ಕುರಿತು ಸಂವೇದನೆ, ಸಮಾನತೆಗಳ ಆಧಾರದಲ್ಲಿ ಉಭಯ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಹಿಂದಕ್ಕೆ ತಳ್ಳಿ, ವೇಗವಾಗಿ ಪ್ರಗತಿಯ ಹಾದಿಯಲ್ಲಿ ಮುಂದೆ ಸಾಗಬಹುದು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement