
ಅಮೆರಿಕಾದ ಜೊತೆಗೆ ಚೀನಾ ನಡೆಸುವ ವ್ಯಾಪಾರಕ್ಕೆ ಹೋಲಿಸಿದರೆ, ಭಾರತ ನಡೆಸುವ ವ್ಯಾಪಾರ ಸಾಕಷ್ಟು ಸಣ್ಣ ಪ್ರಮಾಣದಲ್ಲಿದೆ. ಆದ್ದರಿಂದ ಭಾರತದ ಮೇಲೆ ಒತ್ತಡ ಹೇರುವುದು ಬಹಳ ಸುಲಭವಾಗಬಹುದು ಎನ್ನುವುದು ಅಮೆರಿಕಾದ ಲೆಕ್ಕಾಚಾರವಾಗಿತ್ತು. ಆದರೆ, ವಾಸ್ತವವಾಗಿ ಅಮೆರಿಕಾದ ನಿಲುವು ಆರ್ಥಿಕ ಪರಿಣಾಮಕ್ಕಿಂತಲೂ ಹೆಚ್ಚಾಗಿ, ರಾಜಕೀಯ ಪರಿಣಾಮಗಳನ್ನು ಉಂಟು ಮಾಡಿದೆ.
ಆಗಸ್ಟ್ 27ರಿಂದ ಭಾರತೀಯ ಉತ್ಪನ್ನಗಳ ಮೇಲೆ ಡೊನಾಲ್ಡ್ ಟ್ರಂಪ್ 50% ಸುಂಕ ಘೋಷಿಸಿದ್ದಾರೆ. ಈ ತಪ್ಪು ನಿರ್ಧಾರದ ಪರಿಣಾಮವಾಗಿ ಜಗತ್ತಿನ ಅತ್ಯಂತ ಪ್ರಮುಖ ಸಹಯೋಗವಾದ ಭಾರತ – ಅಮೆರಿಕಾ ಸ್ನೇಹಕ್ಕೆ ಧಕ್ಕೆ ಉಂಟಾಗಿದೆ. ಈ ಸುಂಕದ ಜಾರಿಗೆ ಮುನ್ನವೇ ಅಮೆರಿಕಾದ ಕುರಿತು ಭಾರತದ ಮನೋಭಾವ ಋಣಾತ್ಮಕವಾಗತೊಡಗಿತ್ತು. ಅಮೆರಿಕಾದ ʼಲಿಬರೇಷನ್ ದಿನʼದಂದು ಅಮೆರಿಕಾ ಭಾರತದ ಮೇಲೆ ಹೆಚ್ಚುವರಿ 25% ಸುಂಕ ವಿಧಿಸಿ, ಭಾರತೀಯ ರಫ್ತುಗಳ ಮೇಲೆ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ವ್ಯಾಪಾರದ ಹೊರೆ ಹೊರಿಸಿತು.
ಅಮೆರಿಕಾ ಸೇರಿದಂತೆ ಹಲವಾರು ದೇಶಗಳು ವಿದೇಶೀ ಆಡಳಿತದಿಂದ ಅಥವಾ ಆಕ್ರಮಣದಿಂದ ಸ್ವಾತಂತ್ರ್ಯ ಪಡೆದ ದಿನವನ್ನು ʼಲಿಬರೇಷನ್ ದಿನʼ ಎಂಬ ಹೆಸರಿನಲ್ಲಿ ಆಚರಿಸುತ್ತವೆ.
ಅಮೆರಿಕಾ ವಿಧಿಸಿದ ಈ ಸುಂಕಗಳನ್ನು ಭಾರತ ಶಿಕ್ಷೆ ಎಂದು ಪರಿಗಣಿಸಿತು. ಇದನ್ನು ನ್ಯಾಯಯುತವಾದ ಕ್ರಮ ಎನ್ನಲು ಸಾಧ್ಯವಿಲ್ಲ ಎನ್ನುವುದು ಭಾರತದ ವಾದವಾಗಿತ್ತು. ಭಾರತ ರಷ್ಯಾದಿಂದ ತೈಲ ಖರೀದಿ ನಡೆಸುತ್ತಿರುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಅಮೆರಿಕಾ ನೀಡಿರುವ ಸಮಜಾಯಿಷಿ ಆಗಿದೆ.
ಅಮೆರಿಕಾದ ಈ ನಿಲುವನ್ನು ಬಹಳಷ್ಟು ಭಾರತೀಯರು ದ್ವಿಮುಖ ನೀತಿ ಎಂದು ಪರಿಗಣಿಸಿದೆ. ಯಾಕೆಂದರೆ, ಚೀನಾ ಭಾರತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದ್ದರೂ, ಅದರ ವಿರುದ್ಧ ಅಮೆರಿಕಾ ಯಾವುದೇ ಹೆಚ್ಚುವರಿ ಸುಂಕವನ್ನು ಇನ್ನೂ ವಿಧಿಸಿಲ್ಲ. ಒಂದು ವೇಳೆ ರಷ್ಯಾದ ಆದಾಯವನ್ನು ತಡೆಗಟ್ಟಿ, ಆ ಮೂಲಕ ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಅಮೆರಿಕಾದ ಗುರಿಯಾಗಿದ್ದರೆ, ಕೇವಲ ಭಾರತದ ವಿರುದ್ಧ ಸುಂಕ ವಿಧಿಸುವುದರಿಂದ ಅದನ್ನು ಸಾಧಿಸಲು ಸಾಧ್ಯವಿಲ್ಲ.
ರಷ್ಯಾ – ಉಕ್ರೇನ್ ಯುದ್ಧದ ಹಿಂದೆ ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿಚಾರಗಳಿದ್ದು, ಇದು ಕೇವಲ ಆರ್ಥಿಕ ಕಾರಣಗಳಿಗಾಗಿ ನಡೆಯುತ್ತಿರುವ ಯುದ್ಧವಲ್ಲ. ಆದರೆ ಟ್ರಂಪ್ ಆಡಳಿತ ಈ ಅಂಶವನ್ನು ಸ್ಪಷ್ಟವಾಗಿ ಕಡೆಗಣಿಸಿದಂತೆ ತೋರುತ್ತಿದೆ.
ತನ್ನನ್ನು ತಾನು ʼಡೀಲ್ ಮೇಕರ್ʼ ಎಂದು ಕರೆದುಕೊಂಡಿರುವ ಸ್ವಘೋಷಿತ ಮಧ್ಯಸ್ಥಿಕೆದಾರ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರಿಂದ ಯುದ್ಧದ ಕುರಿತು ಯಾವುದೇ ರಿಯಾಯಿತಿ ಸಾಧಿಸಲು ವಿಫಲರಾಗಿದ್ದಾರೆ. ನಿರಂತರ ಸಭೆಗಳು, ಮಾತುಕತೆಗಳು ಮತ್ತು ಯುದ್ಧ ನಿಲ್ಲಿಸುವ ಆಗ್ರಹಗಳ ಹೊರತಾಗಿಯೂ, ಟ್ರಂಪ್ ಆಡಳಿತದ ಅಮೆರಿಕಾ ಯುದ್ಧವನ್ನು ಕೊನೆಗೊಳಿಸುವಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ.
ಟ್ರಂಪ್ ಆಡಳಿತ ಭಾರತದ ಮೇಲೆ ಒತ್ತಡ ಹೇರುವುದು ಚೀನಾದ ಮೇಲೆ ಒತ್ತಡ ಹೇರುವುದಕ್ಕಿಂತ ಸುಲಭ ಎಂದು ತಪ್ಪು ಲೆಕ್ಕಾಚಾರ ಹಾಕಿಕೊಂಡು, ಅದರ ಅನುಸಾರವಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದೆ. ಚೀನಾಗೆ ಹೋಲಿಸಿದರೆ, ಅಮೆರಿಕಾದ ಜೊತೆ ಭಾರತದ ವ್ಯಾಪಾರ ಸಣ್ಣ ಪ್ರಮಾಣದ್ದಾಗಿದ್ದು, ಭಾರತವನ್ನು ತನಗೆ ಬೇಕಾದಂತೆ ತಳ್ಳಾಡಬಹುದು ಎನ್ನುವುದು ಅಮೆರಿಕಾದ ಹಂಚಿಕೆಯಾಗಿತ್ತು.
ಆದರೆ, ಅಮೆರಿಕಾ ಕೈಗೊಂಡ ಕ್ರಮಗಳು ಆರ್ಥಿಕ ಪರಿಣಾಮಗಳನ್ನು ಬೀರುವ ಬದಲು, ರಾಜಕೀಯ ಪರಿಣಾಮಗಳನ್ನು ಬೀರತೊಡಗಿವೆ! ಟ್ರಂಪ್ ವ್ಯಾಪಾರದ ವಿಚಾರ ಎಂದು ಆರಂಭಿಸಿದ ಸುಂಕ ಹೇರಿಕೆ ಕ್ರಮೇಣ ಭಾರತದ ಹೆಮ್ಮೆ ಮತ್ತು ಸಾರ್ವಭೌಮತ್ವದ ವಿಚಾರವಾಗಿ ಬದಲಾಯಿತು. ಅಮೆರಿಕಾ ವಿಧಿಸಿದ ಸುಂಕಗಳನ್ನು ಭಾರತ ಕೇವಲ ವ್ಯಾಪಾರದ ಅಡಚಣೆಗಳೆಂದು ಪರಿಗಣಿಸದೆ, ಭಾರತದ ಸ್ವಾತಂತ್ರ್ಯ, ಸ್ವಾವಲಂಬನೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದೇ ಭಾವಿಸತೊಡಗಿತು.
ಈ ಭಾವನೆ ಭಾರತದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲೂ ಮೂಡಿದ್ದು, ಇದು ಭಾರತದ ಆಂತರಿಕ ವಾದವನ್ನು ರೂಪಿಸಲು ಆರಂಭಿಸಿದೆ.
ಅಮೆರಿಕಾ ಈಗ ಹಿಂದೆ ಚೀನಾದ ಉದಾಹರಣೆಯನ್ನು ಒಮ್ಮೆ ಗಮನಿಸುವ ಅವಶ್ಯಕತೆ ಇದೆ. 2020ರಲ್ಲಿ, ಲಡಾಖ್‌ನಲ್ಲಿ ಭಾರತ ಮತ್ತು ಚೀನಾಗಳ ನಡುವೆ ನಡೆದ ಗಡಿ ಚಕಮಕಿ ಬಹಳಷ್ಟು ಗಂಭೀರ ಗಾಯವನ್ನೇ ಉಂಟುಮಾಡಿತ್ತು. ಅಕ್ಟೋಬರ್ 2024ರ ಬಳಿಕ ಹಲವಾರು ಸುತ್ತುಗಳ ಶಾಂತಿ ಮಾತುಕತೆಗಳು ನಡೆದರೂ, ಎರಡೂ ದೇಶಗಳ ನಡುವಿನ ನಂಬಿಕೆಯ ಕೊರತೆ ಇನ್ನೂ ಹಾಗೆಯೇ ಉಳಿದು ಹೋಗಿದೆ.
ಹಲವಾರು ಸಮೀಕ್ಷೆಗಳ ಪ್ರಕಾರ, ಭಾರತೀಯ ಯುವ ಜನತೆ ಚೀನಾದ ಕುರಿತು ಅಪನಂಬಿಕೆ ಹೊಂದಿದ್ದು, ಬೀಜಿಂಗ್ ಈಗಾಗಲೇ ಭಾರತದಲ್ಲಿ ತನ್ನ ಸದ್ಭಾವನೆಯನ್ನು ಕಳೆದುಕೊಂಡಿದೆ. ಈ ರೀತಿ ಕಳೆದುಹೋದ ನಂಬಿಕೆಯನ್ನು ಮರಳಿ ಗಳಿಸಲು ಚೀನಾಗೆ ಹಲವು ದಶಕಗಳೇ ಬೇಕಾಗಬಹುದು.
ಕಳೆದ 20 ವರ್ಷಗಳ ಅವಧಿಯಲ್ಲಿ, ಭಾರತ ಮತ್ತು ಅಮೆರಿಕಾಗಳು ಶೀತಲ ಸಮರದ ಅವಧಿಯಿಂದ ಹೊಂದಿದ್ದ ಪರಸ್ಪರ ಅಪನಂಬಿಕೆಗಳನ್ನು ನಿವಾರಿಸುತ್ತಾ ಬಂದು, ರಕ್ಷಣಾ ಒಪ್ಪಂದಗಳು, ತಂತ್ರಜ್ಞಾನ ಹಂಚಿಕೊಳ್ಳುವಿಕೆ ಮತ್ತು ಇಂಡೋ – ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರಗಳಂತಹ ಕ್ರಮಗಳ ಮೂಲಕ ಉತ್ತಮ ಕಾರ್ಯತಂತ್ರದ ಸಹಭಾಗಿತ್ವ ಸ್ಥಾಪಿಸಿಕೊಂಡಿದ್ದವು.
ಚೀನಾದ ರೀತಿಯಲ್ಲದೆ, ಭಾರತೀಯ ಯುವ ಸಮುದಾಯ ಅಮೆರಿಕಾವನ್ನು ಒಂದು ನಂಬಿಕಾರ್ಹ ಜಾಗತಿಕ ಸಹಯೋಗಿ ಎಂದು ಪರಿಗಣಿಸಿದ್ದರು.
ಆದರೆ, ಈಗ ಅಮೆರಿಕಾ ವಿಧಿಸಿರುವ ಅಸಹಜ ಮತ್ತು ಅನಗತ್ಯವಾದ ಅಪಾರ ಪ್ರಮಾಣದ ಸುಂಕಗಳು ಹಲವಾರು ವರ್ಷಗಳಿಂದ ಭಾರತ ಮತ್ತು ಅಮೆರಿಕಾಗಳ ಸಂಬಂಧದಲ್ಲಿ ಆಗಿರುವ ಪ್ರಗತಿಯನ್ನು ಇಲ್ಲವಾಗಿಸುವ ಅಪಾಯಗಳಿವೆ. ಈಗ ಭಾರತದ ಬಹಳಷ್ಟು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳೂ ಸಹ ಭಾರತ ಅಮೆರಿಕಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಬೇರೆ ಹೊಸದಾದ ಪೂರೈಕೆ ಸರಪಳಿಯನ್ನು ಸಾಧಿಸಬೇಕು ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಅಮೆರಿಕಾ ಮಾತ್ರವಲ್ಲದೆ, ಯಾವುದೇ ದೊಡ್ಡ ಶಕ್ತಿಯ ಒತ್ತಡವನ್ನು ಎದುರಿಸಲು ಭಾರತ ದೃಢವಾಗಿ ನಿಲ್ಲಬೇಕು ಎನ್ನುವುದು ಭಾರತೀಯರ ನಿಲುವು.
ವಾಷಿಂಗ್ಟನ್‌ನಲ್ಲಿ, ಭಾರತದ ಆಕ್ರೋಶ ಈಗ ಬಹುತೇಕ ಡೊನಾಲ್ಡ್ ಟ್ರಂಪ್ ಸಲಹೆಗಾರರಾದ ಸ್ಕಾಟ್ ಬೆಸೆಂಟ್, ಪೀಟರ್ ನವಾರೊ, ಮತ್ತು ಹೊವಾರ್ಡ್ ಲುಟ್ನಿಕ್ ಮೇಲೆ ಕೇಂದ್ರಿತವಾಗಿದೆ. ಭಾರತೀಯ ಮಾಧ್ಯಮಗಳೂ ಈ ಮೂವರನ್ನು ಹೊಸ ಸುಂಕ ನೀತಿಯ ನಿರ್ಮಾತೃಗಳು ಎಂದು ಪರಿಗಣಿಸಿ ವರದಿ ಮಾಡಿವೆ.
ಈ ಮೂವರು ಆಡುವ ಮಾತುಗಳೂ ಬಹುಮಟ್ಟಿಗೆ ಆಕ್ರಮಣಕಾರಿಯಾಗಿರುತ್ತವೆ. ಭಾರತ ತನ್ನ ಮಾರುಕಟ್ಟೆಗಳನ್ನು ಇನ್ನಷ್ಟು ಮುಕ್ತ ಮಾರುಕಟ್ಟೆಗಳನ್ನಾಗಿಸಿ, ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅವರ ಇಂತಹ ನಿಲುವುಗಳಿಂದ, ಭಾರತ ಅವರ ಮಾತುಗಳನ್ನು ಆಕ್ರಮಣಕಾರಿ ಒತ್ತಡ ತಂತ್ರ ಎಂದು ಪರಿಗಣಿಸಿದೆ. ಅಂದರೆ, ಒಬ್ಬರ ಇಚ್ಛೆಗೆ ವಿರುದ್ಧವಾಗಿ, ಅವರಿಂದ ಏನನ್ನಾದರೂ ಮಾಡಿಸುವ ಪ್ರಯತ್ನ ಎಂದು ಪರಿಗಣಿಸಲಾಗಿದೆ. ಇದನ್ನು ಭಾರತ ಸ್ನೇಹಪರ ಅಥವಾ ನೆರವಾಗುವಂತಹ ರಾಜತಾಂತ್ರಿಕತೆ ಎಂದು ನೋಡಲು ಸಾಧ್ಯವಿಲ್ಲ.
ಟ್ರಂಪ್ ಮತ್ತು ಅವರ ಮೂವರು ಸುಂಕ ಸಲಹೆಗಾರರ ಸಾರ್ವಜನಿಕ ನಡವಳಿಕೆಗಳು ನವದೆಹಲಿಯನ್ನು ದುರ್ಬಲವಾಗಿಸುವುದರ ಬದಲಿಗೆ, ನವದೆಹಲಿಯ ನಿಲುವನ್ನು ಇನ್ನಷ್ಟು ಗಟ್ಟಿಯಾಗಿಸಿವೆ. ಭಾರತ ಸರ್ಕಾರ ಮತ್ತು ಭಾರತೀಯರು ಈಗ ಒಗ್ಗಟ್ಟು ಪ್ರದರ್ಶಿಸಿದ್ದು, ಭಾರತ ತಾನು ರಷ್ಯನ್ ತೈಲ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದ, ಹೊಸದಾದ ಅಂತಾರಾಷ್ಟ್ರೀಯ ಸಹಯೋಗಗಳನ್ನು ಸಾಧಿಸಲು ನಿರ್ಧರಿಸಿದೆ.
ಭಾರತದ ಪಾಲಿಗೆ ಇದು ಕೇವಲ ಆರ್ಥಿಕ ವಿಚಾರಕ್ಕೆ ಸೀಮಿತ ನಡೆಯಲ್ಲ. ಒಂದು ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿರುವ ಭಾರತ ತನ್ನನ್ನು ಯಾರಾದರೂ ಕೆಳಮಟ್ಟದ ಸಹಯೋಗಿ ಎಂದು ಪರಿಗಣಿಸುವುದನ್ನು ಸಹಿಸಿಕೊಳ್ಳಲು ಸಿದ್ಧವಿಲ್ಲ.
ಟ್ರಂಪ್ ಆಡಳಿತ ಸುಂಕ ವಿಧಿಸುವುದನ್ನು ತನ್ನ ವಿದೇಶಾಂಗ ನೀತಿಯ ಆಯುಧವನ್ನಾಗಿ ಬಳಸುತ್ತಿದೆ. ಆದರೆ, ಟ್ರಂಪ್ ಅನುಸರಿಸುತ್ತಿರುವ ವಿಧಾನ ಹಳೆಯದಾದ, 20ನೇ ಶತಮಾನದ ತಂತ್ರವಾಗಿದೆ. ಇಂದು ಬಹಳಷ್ಟು ದೇಶಗಳು ಜಾಗತಿಕವಾಗಿ ಶಕ್ತಿ ಹೊಂದಿರುವ ಇಂದಿನ ಕಾಲಘಟ್ಟದಲ್ಲಿ ಈ ಹಳೆಯ ತಂತ್ರ ಟ್ರಂಪ್ ಅಂದುಕೊಂಡ ಫಲಿತಾಂಶ ನೀಡಲು ಸಾಧ್ಯವಿಲ್ಲ.
ಅಮೆರಿಕಾ ಇತರ ದೇಶಗಳ ಮೇಲೆ ಒತ್ತಡ ಹೇರುವ ವಿಧಾನ ಕಳೆದ ಶತಮಾನಕ್ಕೇ ಸೀಮಿತವಾದ ಕಥೆ. ಸುಂಕ ವಿಧಿಸುವುದು ಟ್ರಂಪ್ ಪಾಲಿಗೆ ಪ್ರಮುಖ ಕ್ರಮವೇ ಆಗಿರಬಹುದು. ಆದರೆ ಅದು ದೊಡ್ಡ ಆರ್ಥಿಕತೆಗಳ ಮೇಲೆ, ಅದರಲ್ಲೂ ಭಾರತದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ಭಾರತವೂ ಈಗ ಹಿಂದಿನಂತಿಲ್ಲದೆ, ಜಗತ್ತಿನ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದು, ಸುಭದ್ರ, ಭವ್ಯ ಭವಿಷ್ಯವನ್ನು ಹೊಂದಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement