
ಅಲಾಸ್ಕಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ಸಭೆ ಮುಕ್ತಾಯಗೊಂಡಿದೆ. ಆದರೆ, ಉಕ್ರೇನಿನಲ್ಲಿ ಶಾಂತಿ ಸ್ಥಾಪನೆ ಮಾತ್ರ ಇನ್ನೂ ದೂರದ ಮಾತಾಗಿದೆ. ಇಷ್ಟಾದರೂ, ಯುದ್ಧ ಮುಕ್ತಾಯಗೊಂಡು, ಪರಿಸ್ಥಿತಿ ತಿಳಿಯಾಗಲು ಎರಡು ಸಂಭಾವ್ಯ ಮಾರ್ಗಗಳಿವೆ.
ಉಕ್ರೇನ್ ಕೆಲವು ಭೂ ಪ್ರದೇಶಗಳನ್ನು ಕಳೆದುಕೊಂಡು, ಕೊಂಚ ಸಣ್ಣ ದೇಶವಾದರೂ ಸ್ವತಂತ್ರ ರಾಷ್ಟ್ರವಾಗಿ ಉಳಿಯಲು ಸಾಧ್ಯ. ಇಲ್ಲವಾದರೆ, ಉಕ್ರೇನ್ ತನ್ನ ಭೂ ಪ್ರದೇಶಗಳು ಮತ್ತು ಸಾರ್ವಭೌಮತ್ವ ಎರಡನ್ನೂ ಕಳೆದುಕೊಂಡು, ರಷ್ಯಾದ ನಿಯಂತ್ರಣಕ್ಕೆ ಬೀಳಬಹುದು.
ಇವೆರಡರಲ್ಲಿ ಯಾವ ಫಲಿತಾಂಶ ಬರಬಹುದು ಮತ್ತು ಯಾವಾಗ ಬರಬಹುದು ಎನ್ನುವುದು ಅಲಾಸ್ಕಾದ ಸಭೆಯ ಬಳಿಕವೂ ಅಸ್ಪಷ್ಟವಾಗಿ ಉಳಿದಿದೆ. ಈ ಭೇಟಿಯಿಂದ ಒಂದಷ್ಟು ರಾಜತಾಂತ್ರಿಕ ಬೆಳವಣಿಗೆ ನಡೆಯಬಹುದು ಎಂದು ಗರಿಗೆದರಿದ್ದ ನಿರೀಕ್ಷೆಗಳು ಹುಸಿಯಾಗಿವೆ.
ಈಗಿನ ಗಡಿರೇಖೆಗಳನ್ನು ಉಳಿಸಿಕೊಂಡು, ಕದನ ವಿರಾಮ ಘೋಷಿಸಬೇಕು ಮತ್ತು ಉಕ್ರೇನಿನ ಪ್ರದೇಶಗಳು ಮತ್ತು ಭದ್ರತೆಯ ಕುರಿತು ಮಾತುಕತೆ ಆರಂಭಿಸಬೇಕು ಎನ್ನುವ ಅಮೆರಿಕಾ ಮತ್ತು ಯುರೋಪಿನ ಆಗ್ರಹವನ್ನು ಪುಟಿನ್ ತಿರಸ್ಕರಿಸಿದ್ದಾರೆ. ಅದರ ಬದಲಿಗೆ, ಉಕ್ರೇನ್ ಮತ್ತು ಪಾಶ್ಚಾತ್ಯ ಜಗತ್ತು ರಷ್ಯಾದ ದೊಡ್ಡ ಗುರಿಗಳನ್ನು ಒಪ್ಪುವ ತನಕ ಯುದ್ಧ ಮುಂದುವರಿಸುವ ಸಂಕೇತ ರವಾನಿಸಿದ್ದಾರೆ.
ಉಕ್ರೇನಿನಲ್ಲಿ ದೀರ್ಘಕಾಲೀನ ಶಾಂತಿ ಸ್ಥಾಪನೆಯಾಗಬೇಕಾದರೆ, ಯುದ್ಧಕ್ಕೆ ಮೂಲ ಕಾರಣಗಳನ್ನು ಪರಿಹರಿಸಬೇಕು ಮತ್ತು ರಷ್ಯಾದ ಕಳವಳಗಳನ್ನು ಸರಿಪಡಿಸಬೇಕು ಎಂದು ಪುಟಿನ್ ಹೇಳಿದ್ದಾರೆ. ಅದರೊಡನೆ, ಯುರೋಪ್ ಮತ್ತು ಜಗತ್ತಿನ ನಡುವಿನ ಸಮತೋಲನ ಮರಳಿ ಜಾರಿಯಾಗಬೇಕು (ಅಂದರೆ, ಮಿಲಿಟರಿ ಸಾಮರ್ಥ್ಯದ ವಿಚಾರದಲ್ಲಿ ಉಭಯ ಪಕ್ಷಗಳೂ ದುರ್ಬಲ ಅಥವಾ ಹೆದರಿಸುವ ರೀತಿಯಲ್ಲಿ ಇರಬಾರದು) ಎಂದು ಪುಟಿನ್ ಆಗ್ರಹಿಸಿದ್ದಾರೆ.
ಉಕ್ರೇನಿನ ಭದ್ರತೆ ಖಾತ್ರಿಪಡಿಸಬೇಕು ಎಂದು ಪುಟಿನ್ ಹೇಳಿದ್ದರೂ, ನೈಜ ಸಮಸ್ಯೆಗಳು ಸಣ್ಣಪುಟ್ಟ ವಿವರಗಳಲ್ಲಿವೆ ಎಂದು ಹಿಂದಿನ ಮಾತುಕತೆಗಳು ಪ್ರದರ್ಶಿಸಿದ್ದವು. (ಅಂದರೆ, ಅಸ್ಪಷ್ಟ ಅಥವಾ ವಿವಾದಿತ ವಿಚಾರಗಳ ಕಾರಣದಿಂದ ಒಪ್ಪಂದಗಳು ವಿಫಲವಾಗಿದ್ದವು).
ಪುಟಿನ್ 'ಮೂಲ ಸಮಸ್ಯೆಗಳ' ಕುರಿತು ಗಮನ ಹರಿಸಿದ್ದು, ಅವರು ಉಕ್ರೇನ್ ಪಾಶ್ಚಾತ್ಯ ದೇಶಗಳಿಗೆ ಹೆಚ್ಚು ಹತ್ತಿರಾಗುವುದು ಮತ್ತು ನ್ಯಾಟೋ ಒಕ್ಕೂಟ ಪೂರ್ವ ಯುರೋಪಿನೆಡೆಗೆ (ಪೋಲೆಂಡ್, ಹಂಗರಿ, ರೊಮಾನಿಯ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಬಲ್ಗೇರಿಯಾದಂತಹ ದೇಶಗಳತ್ತ) ವಿಸ್ತರಿಸುತ್ತಿರುವುದೇ ಆ ಮೂಲ ಕಾರಣಗಳು ಎಂದಿದ್ದಾರೆ. ಅಂದರೆ, ಪುಟಿನ್ ಇಂದಿಗೂ ಉಕ್ರೇನನ್ನು ನಿಯಂತ್ರಿಸಿ, ಪೂರ್ವ ಯುರೋಪಿನಲ್ಲಿ ರಷ್ಯಾದ ಪ್ರಭಾವ ಹೆಚ್ಚಿಸಿ, ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದೆನ್ನುವ ರಷ್ಯಾದ ಸ್ಥಾನವನ್ನು ಮರಳಿ ಸಂಪಾದಿಸುವ ಗುರಿ ಹೊಂದಿದ್ದಾರೆ. ಈ ಕಾರಣದಿಂದಲೇ ಪುಟಿನ್ 2022ರಲ್ಲಿ ಉಕ್ರೇನ್ ಯುದ್ಧವನ್ನು ಆರಂಭಿಸಿದ್ದರು.
ಉಕ್ರೇನಿನ ರಾಜಧಾನಿ ಕೀವ್ ಅನ್ನು ವಶಪಡಿಸುವ ರಷ್ಯಾದ ಪ್ರಯತ್ನ ವಿಫಲವಾಗಿದ್ದು, ಅದು ಇನ್ನು ಈಡೇರುವ ಸಾಧ್ಯತೆಗಳಿಲ್ಲ. ಉಕ್ರೇನಿನ ಪ್ರಬಲ ಮಿಲಿಟರಿ ರಷ್ಯಾಗೆ ಸಣ್ಣ ಪ್ರಮಾಣದ ಮೇಲುಗೈ ಮಾತ್ರ ಸಾಧಿಸಲು ಅನುವು ಮಾಡಿದ್ದು, ಇದಕ್ಕಾಗಿ ರಷ್ಯಾ ಅಪಾರ ನಷ್ಟ ಅನುಭವಿಸುವಂತಾಗಿದೆ. ಆದರೆ, ನಿರಂತರ ಕಾರ್ಯಾಚರಣೆಗಳಿಂದ ಉಕ್ರೇನಿನ ಸೇನೆಯೂ ಹೈರಾಣಾಗಿದ್ದು, ಅದು ರಷ್ಯನ್ ಪಡೆಗಳನ್ನು ಸಂಪೂರ್ಣವಾಗಿ ದೇಶದಿಂದ ಹೊರಹಾಕುವ ಸಾಧ್ಯತೆಗಳೂ ಬಹಳ ಕಡಿಮೆಯಾಗಿವೆ.
ಎರಡನೇ ಮಹಾಯುದ್ಧದ ಬಳಿಕ ಯುರೋಪಿನಲ್ಲಿ ನಡೆದಿರುವ ಅತೀದೊಡ್ಡ ಯುದ್ಧವಾದ ಉಕ್ರೇನ್ ಯುದ್ಧಕ್ಕೆ ಎರಡು ರೀತಿಯ ಅಂತ್ಯಗಳಷ್ಟೇ ಸಾಧ್ಯವಿದೆ. ಆ ಸಾಧ್ಯತೆಗಳೇನು ಮತ್ತು ಅವುಗಳು ಯಾವುದರ ಮೇಲೆ ಅವಲಂಬಿತವಾಗಿವೆ ಎಂಬುದನ್ನು ಇಲ್ಲಿ ಗಮನಿಸೋಣ.
ತಮ್ಮ ಗಡಿಗಳನ್ನು ಸಂಪೂರ್ಣವಾಗಿ ಮರಳಿ ಪಡೆಯಲು ತಮ್ಮಲ್ಲಿ ಬೇಕಾದಷ್ಟು ಮಿಲಿಟರಿ ಶಕ್ತಿ ಉಳಿದಿಲ್ಲ ಎನ್ನುವುದನ್ನು ಉಕ್ರೇನ್ ನಾಯಕರು ಅರ್ಥ ಮಾಡಿಕೊಂಡಿದ್ದಾರೆ. ಕಳೆದ ವಾರ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ತಾನು ಟ್ರಂಪ್ ಮತ್ತು ಯುರೋಪಿಯನ್ ನಾಯಕರ ಜೊತೆಗಿನ ಮಾತುಕತೆಯಲ್ಲಿ ಭೂ ಪ್ರದೇಶಗಳ ಕುರಿತು ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಸಂಕೇತ ನೀಡಿದ್ದಾರೆ. ಆದರೆ ಕದನ ವಿರಾಮದ ಜಾರಿಯ ಬಳಿಕವಷ್ಟೇ ಗಡಿಗಳನ್ನು ಸರಿಯಾಗಿ ಗುರುತಿಸಲು ಸಾಧ್ಯ ಎಂದಿದ್ದಾರೆ.
ಕೀವ್ ಮತ್ತು ಯುರೋಪಿಯನ್ ದೇಶಗಳು ತಾವು ರಷ್ಯಾದ ಭೂ ಕಬಳಿಕೆಯನ್ನು ಅಧಿಕೃತವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅದನ್ನು ಒಪ್ಪಿಕೊಂಡರೆ, ರಷ್ಯಾದ ಇನ್ನಷ್ಟು ಆಕ್ರಮಣಗಳಿಗೆ ನಾವು ಅನುಮೋದನೆ ನೀಡಿದಂತಾಗುತ್ತದೆ ಎನ್ನುವುದು ಅವರ ವಾದವಾಗಿದೆ. ಆದರೆ, ಅವರು ವಾಸ್ತವವಾಗಿ ರಷ್ಯನ್ ನಿಯಂತ್ರಣವನ್ನು ಸಹಿಸಿಕೊಳ್ಳುವ ಸಂಕೇತ ರವಾನಿಸಿದ್ದಾರೆ. ಅಂದರೆ, ರಷ್ಯಾದ ಭೂ ವಿಸ್ತರಣೆಯನ್ನು ನಾವು ಅಧಿಕೃತವಾಗಿ ಒಪ್ಪಿಕೊಳ್ಳದಿದ್ದರೂ, ಇನ್ನಷ್ಟು ಯುದ್ಧ ಮಾಡುವ ಬದಲು ಸದ್ಯದ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದೇ ಉತ್ತಮ ಎನ್ನುವುದು ಅವರ ಮನಸ್ಥಿತಿಯಾಗಿದೆ.
ಉಕ್ರೇನ್ ಮತ್ತು ಅದರ ಯುರೋಪಿಯನ್ ಸಹಯೋಗಿಗಳ ಪಾಲಿನ ಅತ್ಯುತ್ತಮ ಫಲಿತಾಂಶ ಎಂದರೆ, ರಷ್ಯಾವನ್ನು ಅದು ಈಗಾಗಲೇ ಆಕ್ರಮಿಸಿಕೊಂಡಿರುವ ಉಕ್ರೇನಿನ 20% ಭೂಭಾಗಕ್ಕೆ ಮಾತ್ರವೇ ರಷ್ಯಾವನ್ನು ನಿಯಂತ್ರಿಸುವುದು. ಆದರೆ, ರಷ್ಯಾ ತಾನು ನಿಯಂತ್ರಿಸದಿರುವ ಉಕ್ರೇನಿಯನ್ ಪ್ರದೇಶಗಳನ್ನೂ ತನಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತಿದೆ. ಅದರಲ್ಲೂ ಉಕ್ರೇನ್ ನಿಯಂತ್ರಣದಲ್ಲಿರುವ ಡಾನೆಸ್ಕ್‌ನ ಭಾಗವನ್ನೂ ರಷ್ಯಾ ತನ್ನದು ಎನ್ನುತ್ತಿದೆ. ಆದರೆ ಈ ಪ್ರಾಂತ್ಯದ ಪ್ರಬಲ ನಗರಗಳು ರಷ್ಯಾದ ಮುಂದೊತ್ತುವಿಕೆಯನ್ನು ತಡೆಗಟ್ಟಿವೆ. ಈಗಿರುವ ಅತಿದೊಡ್ಡ ಪ್ರಶ್ನೆ ಎಂದರೆ, ಉಕ್ರೇನಿನ ಬಾಕಿ ಉಳಿದ 80% ಭೂಮಿಗೆ ಏನಾಗಲಿದೆ ಎನ್ನುವುದಾಗಿದೆ.
ಕೀವ್ ಮತ್ತು ಅದರ ಯುರೋಪಿಯನ್ ಸಹಯೋಗಿಗಳು, ಪಾಶ್ಚಾತ್ಯ ದೇಶಗಳ ಸಹಾಯದಿಂದ ಪ್ರಬಲ ಮಿಲಿಟರಿ ಶಕ್ತಿ ಹೊಂದಿ, ಉಕ್ರೇನಿನ ಉಳಿದ ಭೂ ಪ್ರದೇಶಗಳನ್ನು ಸುರಕ್ಷಿತವಾಗಿ, ಸ್ವತಂತ್ರವಾಗಿ ಉಳಿಸಿಕೊಳ್ಳುವ ಗುರಿ ಹೊಂದಿವೆ. ಯುಕೆ ಮತ್ತು ಫ್ರಾನ್ಸ್ ನೇತೃತ್ವದ ಗುಂಪು ಭವಿಷ್ಯದಲ್ಲಿ ರಷ್ಯಾದ ಸಂಭಾವ್ಯ ದಾಳಿಗಳನ್ನು ತಡೆಗಟ್ಟುವ ಸಲುವಾಗಿ ಉಕ್ರೇನಿಗೆ ತಮ್ಮ ಪಡೆಗಳನ್ನು ಕಳುಹಿಸಬಹುದು ಎಂದು ವರದಿಗಳು ಹೇಳಿವೆ.
ಉಕ್ರೇನಿಗೆ ಭದ್ರತಾ ಭರವಸೆಗಳನ್ನು ನೀಡಲು ಅಮೆರಿಕಾ ಸಹ ಕೈಜೋಡಿಸಬಹುದು ಎನ್ನುವುದು ಯುರೋಪಿನ ನಿರೀಕ್ಷೆಯಾಗಿದ್ದು, ಟ್ರಂಪ್ ಸಹ ಆ ಕುರಿತು ಮನಸ್ಸು ಹೊಂದಿದ್ದಾರೆ. ಆದರೆ, ಇದರಲ್ಲಿ ಅಮೆರಿಕಾದ ಪಾತ್ರವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಯುದ್ಧದ ಫಲಿತಾಂಶವೂ ಸಹ 1953ರ ಕೊರಿಯನ್ ಯುದ್ಧದ ಫಲಿತಾಂಶದ ರೀತಿಯಲ್ಲೇ ಇರಬಹುದು. ಆ ವೇಳೆ ಕೊರಿಯಾ ವಿಭಜನೆ ಹೊಂದಿದ್ದರೂ, ದಕ್ಷಿಣ ಕೊರಿಯಾಗೆ ಅಮೆರಿಕನ್ ಪಡೆಗಳಿಂದ ರಕ್ಷಣೆ ಲಭಿಸಿತ್ತು.
ಒಂದು ವೇಳೆ ಕೊರಿಯಾ ಮಾದರಿಯ ಫಲಿತಾಂಶ ಬಂದರೆ, ಅದು ಪುಟಿನ್ ಪಾಲಿಗೆ ಐತಿಹಾಸಿಕ ವೈಫಲ್ಯದ ರೀತಿ ತೋರಲಿದೆ. ಪುಟಿನ್ ಕೈಗೆ ಉಕ್ರೇನಿನ ಭೂಮಿಯ 20% ಬರಬಹುದಾದರೂ, ಅದರಲ್ಲಿ ಬಹುತೇಕ ಪ್ರದೇಶಗಳು ಹಾಳಾಗಿವೆ. ಇಷ್ಟಾದರೂ ಇನ್ನುಳಿದ ಉಕ್ರೇನ್ ಶಾಶ್ವತವಾಗಿ ರಷ್ಯಾದ ಕೈ ತಪ್ಪಿ ಹೋಗಲಿದೆ. ರಷ್ಯಾದ ಸಹೋದರ ಎಂದು ಪುಟಿನ್ ಕರೆಯುವ ಉಕ್ರೇನನ್ನು ಪಾಶ್ಚಾತ್ಯ ಪಡೆಗಳು ರಕ್ಷಿಸಲಿವೆ.
ಈ ಯುದ್ಧದ ಪರಿಣಾಮವಾಗಿ ರಷ್ಯಾದೊಳಗೆ ಅಪಾರ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ತಲೆದೋರಬಹುದು ಎಂದು ಪುಟಿನ್‌ಗೆ ಆತಂಕ ಉಂಟಾದರೆ, ಅಥವಾ ಅಮೆರಿಕಾ ನೇತೃತ್ವದ ನಿರ್ಬಂಧಗಳು ಸಹಿಸಲಸಾಧ್ಯವಾದರೆ, ಆಗ ಪುಟಿನ್ ಹೆಜ್ಜೆ ಹಿಂದಿಡುವ ಸಾಧ್ಯತೆಗಳಿವೆ. ಆದರೆ, ಇಲ್ಲಿಯತನಕ ಇಂತಹ ಯಾವುದೇ ಸಾಧ್ಯತೆಗಳಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕನ್ ಮಾಧ್ಯಮಗಳ ಪ್ರಕಾರ, ಯುದ್ಧವನ್ನು ಮುಂದುವರಿಸುವುದು ಕಷ್ಟಕರ ಎನ್ನುವುದು ರಷ್ಯಾಗೂ ಅರಿವಿದೆ. ಆದರೆ, ಉಕ್ರೇನ್ ದುರ್ಬಲ ದೇಶವಾಗಿದ್ದು, ಆರ್ಥಿಕ ಸಮಸ್ಯೆಗಳ ಕಾರಣದಿಂದ ರಷ್ಯಾ ಯುದ್ಧ ನಿಲ್ಲಿಸುವ ವೇಳೆಗೆ ಉಕ್ರೇನ್ ಈಗಾಗಲೇ ಸೋಲು ಕಂಡಿರುತ್ತದೆ ಎನ್ನುವುದು ರಷ್ಯಾದ ಲೆಕ್ಕಾಚಾರವಾಗಿದೆ ಎಂದು ಬರ್ಲಿನ್‌ನಲ್ಲಿ ರಷ್ಯನ್ ಆರ್ಥಿಕತೆಯ ತಜ್ಞರಾದ ಜಾನಿಸ್ ಕ್ಲೂಗ್ ಹೇಳಿದ್ದಾರೆ.
ಟ್ರಂಪ್ ಮತ್ತು ಅಮೆರಿಕನ್ ಅಧಿಕಾರಿಗಳು ರಷ್ಯಾದ ತೈಲ ಆದಾಯವನ್ನು ಗುರಿಯಾಗಿಸಿಕೊಂಡು, ರಷ್ಯಾದ ಆರ್ಥಿಕತೆಗೆ ತೊಂದರೆ ಉಂಟುಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕಾಗಿ ರಷ್ಯನ್ ತೈಲ ಖರೀದಿದಾರರ ಮೇಲೆ ಹೆಚ್ಚುವರಿ ಸುಂಕ, ಬ್ಯಾಂಕುಗಳ ಮೇಲೆ ನಿರ್ಬಂಧಗಳು ಮತ್ತು ರಷ್ಯನ್ ತೈಲ ಟ್ಯಾಂಕರ್‌ಗಳ ಮೇಲೆ ನಿಷೇಧ ಹೇರಬೇಕು ಎನ್ನುವುದು ಅವರ ಆಲೋಚನೆಯಾಗಿದೆ. ಯಾವುದೇ ನಿರ್ಬಂಧಗಳನ್ನಾದರೂ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬಹುದು. ಆದರೆ, ಅದರ ಬಲವಾದ ಪರಿಣಾಮ ಕಾಣಿಸಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ.
ಪುಟಿನ್ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗುವ ಹೊರತು, ಅವರು ಆರ್ಥಿಕ ಸಮಸ್ಯೆಗಳಿಗೆ ಉಕ್ರೇನನ್ನು ನಿಯಂತ್ರಿಸುವ ಹೆಬ್ಬಯಕೆಗಿಂತ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳು ಕಡಿಮೆ. ರಷ್ಯಾವನ್ನು ಮತ್ತೊಮ್ಮೆ ಅತ್ಯಂತ ಬಲಿಷ್ಠ ರಾಷ್ಟ್ರವನ್ನಾಗಿಸಬೇಕು ಎನ್ನುವುದು ಪುಟಿನ್ ಗುರಿಯಾಗಿದೆ.
2022ರ ಆಕ್ರಮಣದ ನಂತರ, ಉಕ್ರೇನ್ ತನ್ನ ಸೇನೆಯನ್ನು ಸಣ್ಣದಾಗಿಸಬೇಕು, ಆಯುಧಗಳು ಮತ್ತು ಪಾಶ್ಚಾತ್ಯ ಆಮದನ್ನು ತಗ್ಗಿಸಬೇಕು, ಉಕ್ರೇನಿನ ಸಂವಿಧಾನ, ನಾಯಕರು, ಭಾಷೆಣ ಇತಿಹಾಸ ಮತ್ತು ರಾಷ್ಟ್ರೀಯ ಗುರುತು ಸೇರಿದಂತೆ ಸಮಸ್ತ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು ಎನ್ನುವುದು ರಷ್ಯಾದ ಆಗ್ರಹವಾಗಿದೆ.
ಉಕ್ರೇನಿನ ಮುಂದಿರುವ ಅತಿದೊಡ್ಡ ಅಪಾಯವೆಂದರೆ ಪೂರ್ವ ಮತ್ತು ದಕ್ಷಿಣದ ಪ್ರಾಂತ್ಯಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲ. ಬದಲಿಗೆ, 2014 ಮತ್ತು 2022ರ ರೀತಿಯಲ್ಲಿ ಇನ್ನೊಂದು ರಷ್ಯನ್ ಆಕ್ರಮಣವನ್ನು ಉಕ್ರೇನ್ ಎದುರಿಸಲು ಸಾಧ್ಯವಿಲ್ಲ. ಇಂತಹ ಅಪಾಯಗಳ ಕಾರಣದಿಂದ, ಉಕ್ರೇನ್ ದೇಶದೊಳಗೆ ಮತ್ತು ಹೊರಗೆ ತನ್ನ ನಾಯಕರು ಮತ್ತು ನೀತಿಗಳ ಕುರಿತು ಮಾಸ್ಕೋದ ಆಗ್ರಹಗಳನ್ನು ಪೂರೈಸಬೇಕಾದೀತು.
ಇಂತಹ ಸನ್ನಿವೇಶ ಉಂಟಾದರೆ, ಉಕ್ರೇನಿನ ಉಳಿದ ಪ್ರಾಂತ್ಯಗಳು ರಷ್ಯಾದ ರಕ್ಷಿತ ಪ್ರದೇಶವಾಗಲಿದೆ. ಇದು ತನ್ನ ಪ್ರಜಾಪ್ರಭುತ್ವವನ್ನು ಬಲಪಡಿಸಿಕೊಳ್ಳುವ, ಯುರೋಪ್ ಮತ್ತು ಪಾಶ್ಚಾತ್ಯ ದೇಶಗಳೊಡನೆ ಸೇರುವ ಬಯಕೆ ಹೊಂದಿರುವ ಉಕ್ರೇನ್ ಪಾಲಿಗೆ ಬಹುದೊಡ್ಡ ಸೋಲಾಗಲಿದೆ. ಇದು ಉಕ್ರೇನ್ ಪಾಲಿಗೆ ಭೂಮಿಯ ನಷ್ಟಕ್ಕಿಂತ ಬಹುದೊಡ್ಡ ಸೋಲಾಗಲಿದ್ದು, ಅದನ್ನು ತಡೆಯಲು ಉಕ್ರೇನಿಯನ್ನರು ಹೋರಾಡುತ್ತಿದ್ದಾರೆ.
ಉಕ್ರೇನ್ ಈ ಮಟ್ಟಿಗೆ ಶರಣಾಗುವಂತೆ ಮಾಡಬೇಕಾದರೆ, ಪುಟಿನ್‌ಗೆ ಯುದ್ಧ ಭೂಮಿಯೇ ಅನಿವಾರ್ಯ ಆಯ್ಕೆಯಾಗಿದೆ. ಅಂದರೆ, ಈ ಫಲಿತಾಂಶವನ್ನು ರಷ್ಯಾ ಶಾಂತಿ ಮಾತುಕತೆ ಅಥವಾ ರಾಜತಾಂತ್ರಿಕತೆಯ ಮೂಲಕ ಸಾಧಿಸಲು ಸಾಧ್ಯವಿಲ್ಲ. ರಷ್ಯಾ ಸಣ್ಣ ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ಆದರೆ ರಷ್ಯಾದ ಪ್ರಮುಖ ಗುರಿಯೆಂದರೆ, ಉಕ್ರೇನ್ ಸೇನೆಯನ್ನು ದುರ್ಬಲಗೊಳಿಸಿ, ಹೋರಾಡುವ ಅದರ ಛಾತಿಯನ್ನೇ ಇಲ್ಲವಾಗಿಸುವುದಾಗಿದೆ.
3½ ವರ್ಷಗಳ ಯುದ್ಧದ ಬಳಿಕ ಉಕ್ರೇನಿನ ಪಡೆಗಳು ಸುಸ್ತಾಗಿದ್ದು, ಸೇನಾ ಸಂಖ್ಯೆಯೂ ಸಣ್ಣದಾಗುತ್ತಿದೆ. ಉಕ್ರೇನ್ ಯೋಧರು ತನ್ನ ಜನರಲ್‌ಗಳ ಕುರಿತು ಅಸಮಾಧಾನ ಹೊಂದಿದ್ದಾರೆ. ಇಷ್ಟಾದರೂ ಅವರು ಹೋರಾಟ ಮುಂದುವರಿಸಿದ್ದಾರೆ. ಈಗ ಡ್ರೋನ್‌ಗಳು ದೊಡ್ಡ ಪಾತ್ರ ನಿರ್ವಹಿಸುತ್ತಿದ್ದು, ಯುದ್ಧ ದಾಳಿಗಿಂತಲೂ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
"ಉಕ್ರೇನಿನ ಸೇನೆ ಕುಸಿದು ಹೋಗಬಹುದು ಎನ್ನಲು ಸಾಧ್ಯವಿಲ್ಲ. ಆದರೆ, ಕಾಲ ಕಳೆದಂತೆ ಅದು ತನ್ನ ನೇಮಕಾತಿ ಮತ್ತು ನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಅವಶ್ಯಕವಾಗಿದೆ. ಇಲ್ಲವಾದರೆ ಅದು ಯುದ್ಧದಲ್ಲಿ ಸೋಲನುಭವಿಸದಿದ್ದರೂ, ಸೇನೆ ಬಹಳಷ್ಟು ಸುಸ್ತಾಗಬಹುದು" ಎಂದು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಮಿಲಿಟರಿ ತಜ್ಞರಾದ ಮೈಕೆಲ್ ಕಾಫ್‌ಮನ್ ಹೇಳಿದ್ದಾರೆ.
ಬಹಳಷ್ಟು ವಿಶ್ಲೇಷಕರು ರಷ್ಯಾದ ಭಾರೀ ಜನಸಂಖ್ಯೆ, ಬೃಹತ್ ಸೇನೆ ಮತ್ತು ರಷ್ಯಾ ಹೊಂದಿರುವ ಅಪಾರ ಹಣದ ಕಾರಣದಿಂದಾಗಿ ಉಕ್ರೇನಿಗೆ ಹೋಲಿಸಿದರೆ ಯುದ್ಧ ಮುಂದುವರಿಸುವುದು ರಷ್ಯಾಗೆ ಸುಲಭವಾಗಿದೆ. ಆದರೆ, ಉಕ್ರೇನ್ ಕಷ್ಟವನ್ನು ಸಹಿಸುವ ಸಾಮರ್ಥ್ಯ ಮತ್ತು ಯುದ್ಧಾದ್ಯಂತ ಹೊಂದಿಕೊಳ್ಳುವ ಗುಣವನ್ನು ಪ್ರದರ್ಶಿಸಿದೆ ಎಂದು ಕಾಫ್‌ಮನ್ ಹೇಳಿದ್ದಾರೆ.
ಇಷ್ಟೆಲ್ಲ ಕಷ್ಟ ಕಾರ್ಪಣ್ಯಗಳ ಹೊರತಾಗಿಯೂ ಉಕ್ರೇನ್ ರಷ್ಯಾ ಸೇನೆಗ ಪ್ರತಿರೋಧ ಒಡ್ಡುತ್ತಿದ್ದು, ಯುದ್ಧದ ಅಂತಿಮ ಫಲಿತಾಂಶವನ್ನು ಇನ್ನೂ ಅನಿಶ್ಚಿತವಾಗಿಸಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement