ಭಾರತಕ್ಕೆ ಅಮೆರಿಕಾದ ನೂತನ ರಾಯಭಾರಿ ಆರಿಸಿದ ಟ್ರಂಪ್: ಯಾರೀ ಸೆರ್ಗಿಯೊ ಗೋರ್?‌ (ಜಾಗತಿಕ ಜಗಲಿ)

ಸದ್ಯದ ಮಟ್ಟಿಗೆ ಈಗಾಗಲೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ವ್ಯಕ್ತಿಗಳು ನಿಜಕ್ಕೂ ಟ್ರಂಪ್‌ ಅವರಿಗೆ ನಿಷ್ಠರಾಗಿದ್ದಾರೆಯೇ ಎಂದು ಪರಿಶೀಲಿಸುವುದು ಗೋರ್‌ ಕಾರ್ಯವಾಗಿದೆ.
Sergio Gor
ಸೆರ್ಗಿಯೋ ಗೋರ್‌
Updated on

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತ ಭವನದಲ್ಲಿ ಅಧ್ಯಕ್ಷರ ಸಲಹೆಗಾರರಾಗಿರುವ ಸೆರ್ಗಿಯೊ ಗೋರ್‌ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕಾ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ.‌

38 ವರ್ಷ ವಯಸ್ಸಿನ ಸೆರ್ಗಿಯೊ ಗೋರ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಅತ್ಯಂತ ಆಪ್ತ ಸಹಾಯಕರೂ ಹೌದು. ಭಾರತ ಮತ್ತು ಅಮೆರಿಕಾಗಳ ನಡುವಿನ ಸಂಬಂಧ ಈಗ ಹಳಸುತ್ತಾ ಸಾಗಿರುವ ಗಂಭೀರ ಸಂದರ್ಭದಲ್ಲಿ ಸೆರ್ಗಿಯೊ ಗೋರ್‌ ಭಾರತಕ್ಕೆ ಮುಂದಿನ ಅಮೆರಿಕಾದ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.

ಜೋ ಬೈಡನ್‌ ಅಧ್ಯಕ್ಷೀಯ ಅವಧಿಯಲ್ಲಿ, ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿದ್ದ ಎರಿಕ್‌ ಗಾರ್ಸೆಟ್ಟಿ ಜನವರಿ ತಿಂಗಳಲ್ಲಿ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದರು. ಆ ಬಳಿಕ, ಬಹುತೇಕ ಎಂಟು ತಿಂಗಳ ಕಾಲ ರಾಯಭಾರಿ ಹುದ್ದೆ ಖಾಲಿಯಾಗಿಯೇ ಉಳಿದಿತ್ತು.

ಆದರೆ ಈ ಸೆರ್ಗಿಯೊ ಗೋರ್‌ ಯಾರು? ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿ ಅವರ ಆಯ್ಕೆಯ ಪರಿಣಾಮಗಳೇನು? ಅವರು ಭಾರತಕ್ಕೆ ಯಾವಾಗ ಆಗಮಿಸಲಿದ್ದಾರೆ? ಇವೆಲ್ಲವನ್ನೂ ನಾಲ್ಕು ಸರಳ ಅಂಶಗಳಲ್ಲಿ ಗಮನಿಸೋಣ.

ಸೆರ್ಗಿಯೋ ಗೋರ್:‌ ಭಾರತಕ್ಕೆಂದು ಆರಿಸಲಾದ ವ್ಯಕ್ತಿ

ಗೋರ್‌ ವಿವಿಧ ಹುದ್ದೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಡೊನಾಲ್ಡ್‌ ಟ್ರಂಪ್‌ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸದ್ಯದ ಮಟ್ಟಿಗೆ ಈಗಾಗಲೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ವ್ಯಕ್ತಿಗಳು ನಿಜಕ್ಕೂ ಟ್ರಂಪ್‌ ಅವರಿಗೆ ನಿಷ್ಠರಾಗಿದ್ದಾರೆಯೇ ಎಂದು ಪರಿಶೀಲಿಸುವುದು ಗೋರ್‌ ಕಾರ್ಯವಾಗಿದೆ. ಇನ್ನು ಜಾರೆದ್‌ ಇಸಾಕ್‌ ಮ್ಯಾನ್‌ ಅವರನ್ನು ನಾಸಾದ ಮುಖ್ಯಸ್ಥರನ್ನಾಗಿ ಆರಿಸಲಾಗಿತ್ತು. ಆದರೆ, ಗೋರ್‌ ಬಳಿ ಇದ್ದ ದಾಖಲೆಗಳು ಜಾರೆದ್‌ ಡೆಮಾಕ್ರಟಿಕ್‌ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂದು ವರದಿ ಮಾಡಿದ್ದವು. ಇದರ ಪರಿಣಾಮವಾಗಿ ಅವರನ್ನು ನಾಸಾ ಮುಖ್ಯಸ್ಥ ಹುದ್ದೆಗೆ ತಿರಸ್ಕರಿಸಲಾಯಿತು. ಈ ಬೆಳವಣಿಗೆಯಿಂದ ಎಲಾನ್‌ ಮಸ್ಕ್‌ ಗೋರ್‌ ರನ್ನು ʼಹಾವುʼ ಎಂದು ಜರೆದಿದ್ದರು.

ಈ ಹಿಂದೆ, ಗೋರ್‌ 2024ರ ಚುನಾವಣೆಯಲ್ಲಿ ಟ್ರಂಪ್‌ರನ್ನು ಬೆಂಬಲಿಸಿದ್ದ ಗುಂಪೊಂದರ ನೇತೃತ್ವ ವಹಿಸಿದ್ದರು. ಗೋರ್‌ ಆ ವೇಳೆ ಟ್ರಂಪ್‌ ಪುತ್ರ ಡೊನಾಲ್ಡ್‌ ಟ್ರಂಪ್‌ ಜ್ಯೂನಿಯರ್‌ ಜೊತೆಗೂಡಿ ಕಾರ್ಯಾಚರಿಸಿದ್ದರು. 2021ರಲ್ಲಿ, ಇಬ್ಬರೂ ಸೇರಿ ʼವಿನ್ನಿಂಗ್‌ ಟೀಮ್‌ ಪಬ್ಲಿಷಿಂಗ್‌ʼ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಇದು ಡೊನಾಲ್ಡ್‌ ಟ್ರಂಪ್‌ ಕುರಿತು ಪುಸ್ತಕಗಳನ್ನು ಪ್ರಕಟಿಸಿತ್ತು.

ಗೋರ್‌ 1986ರಲ್ಲಿ ಉಜ್ಬೆಕಿಸ್ತಾನದಲ್ಲಿ ಜನಿಸಿದ್ದರು ಎಂದು ಅಮೆರಿಕನ್‌ ಮಾಧ್ಯಮಗಳು ವರದಿ ಮಾಡಿದ್ದು, ಆ ವೇಳೆ ಉಜ್ಬೆಕಿಸ್ತಾನ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತು. ಮೂಲತಃ ಅವರ ಸರ್‌ ನೇಮ್‌ ಗೋರೊಖೊವ್ಸ್‌ಕಿ ಎಂದಾಗಿದ್ದು, ನಂತರ ಅದನ್ನು ಗೋರ್‌ ಎಂದು ಹೃಸ್ವಗೊಳಿಸಿದರು.

Sergio Gor
ಟ್ರಂಪ್ ಹುಚ್ಚಾಟಕ್ಕೆ ಕಡಿವಾಣ ಹಾಕೀತೆ ಫೆಡರಲ್ ಕೋರ್ಟ್? (ಹಣಕ್ಲಾಸು)

ಸೆರ್ಗಿಯೊ ಗೋರ್‌ ಭಾರತಕ್ಕೆ ಯಾವಾಗ ಬರಲಿದ್ದಾರೆ?

ಗೋರ್‌ ಆಗಮನ ಪ್ರಕ್ರಿಯೆಗೆ ಒಂದಷ್ಟು ಸಮಯ ಹಿಡಿಯುತ್ತದೆ. ಅಮೆರಿಕಾ ಅಧ್ಯಕ್ಷರು ರಾಯಭಾರಿ ಹುದ್ದೆಗೆ ಒಂದು ಹೆಸರನ್ನು ಸಲಹೆ ನೀಡಿದಾಗ, ಸೆನೇಟಿನ ವಿದೇಶಾಂಗ ಸಂಬಂಧಗಳ ಸಮಿತಿ ಆ ಹೆಸರನ್ನು ಪರಿಶೀಲಿಸುತ್ತದೆ. ಕೆಲವು ಬಾರಿ ಅವರೊಡನೆ ಸಮಾಲೋಚನೆಯನ್ನೂ ನಡೆಸುತ್ತದೆ. ಒಂದು ಬಾರಿ ಸಮಿತಿ ಅಧ್ಯಕ್ಷರು ಸೂಚಿಸಿದ ಹೆಸರಿಗೆ ಒಪ್ಪಿಗೆ ನೀಡಿದ ಬಳಿಕ, ಸಂಪೂರ್ಣ ಸೆನೇಟ್‌ ಈ ನೇಮಕದ ಕುರಿತು ಮತ ಚಲಾಯಿಸುತ್ತದೆ. ಈ ಮತದಾನ ಪ್ರಕ್ರಿಯೆಯ ಬಳಿಕವಷ್ಟೇ ನೇಮಕಾತಿ ಅಂತಿಮಗೊಳ್ಳುತ್ತದೆ.

ಗಾರ್ಸೆಟ್ಟಿ ವಿಚಾರದಲ್ಲಿ, ಅವರ ಸಹಾಯಕ ರಿಕ್‌ ಜೇಕಬ್ಸ್‌ ವಿರುದ್ಧ ಎದುರಾಗಿದ್ದ ಲೈಂಗಿಕ ಕಿರುಕುಳ ಆರೋಪದ ಕಾರಣದಿಂದ ಈ ಪ್ರಕ್ರಿಯೆಗೆ ಬಹುತೇಕ ಎರಡು ವರ್ಷ ಹಿಡಿದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆರ್ಗಿಯೊ ಗೋರ್‌ ನೇಮಕಾತಿಯಿಂದ ಭಾರತದ ಮೇಲಾಗುವ ಪರಿಣಾಮಗಳೇನು?

ಟ್ರಂಪ್‌ ಮಾತುಗಳೇ ಈ ಕುರಿತು ಮಿಶ್ರ ಸಂಕೇತಗಳನ್ನು ನೀಡಿವೆ. ಸಾಮಾಜಿಕ ಜಾಲತಾಣ ಟ್ರುತ್‌ ಸೋಷಿಯಲ್‌ ನಲ್ಲಿ ಟ್ರಂಪ್‌ ಈ ಆಯ್ಕೆಯ ಕುರಿತು ಬರೆದುಕೊಂಡಿದ್ದಾರೆ. “ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ನನ್ನ ಉದ್ದೇಶಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುತ್ತಾರೆ ಎಂಬ ನಂಬಿಕೆಗೆ ಅರ್ಹರಾಗಿರುವ ಮತ್ತು ʼಮೇಕ್‌ ಅಮೆರಿಕಾ ಗ್ರೇಟ್‌ ಅಗೇನ್ʼ‌ ಯೋಜನೆಗೆ ಪೂರಕವಾಗಿರುವವರೇ ಬೇಕು” ಎಂದು ಟ್ರಂಪ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ರಷ್ಯಾದ ಜೊತೆ ಭಾರತ ವ್ಯಾಪಾರ ನಡೆಸುತ್ತಿರುವ ಕುರಿತು, ಕೃಷಿ ವಲಯದಲ್ಲಿ ಅಮೆರಿಕಾದಿಂದ ಆಮದು ನಡೆಸಲು ಮುಕ್ತ ಅನುಮತಿ ನೀಡದಿರುವ ಕುರಿತು ಟ್ರಂಪ್‌ ಅಸಮಾಧಾನ ಹೊಂದಿದ್ದು, ಅವರ ʼನೈಜ ಉದ್ದೇಶʼ ಏನು ಎನ್ನುವುದು ಅಸ್ಪಷ್ಟವಾಗಿದೆ.

Sergio Gor
ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)

ಭಾರತ ಪರ ಧೋರಣೆ ಹೊಂದಿದ್ದಾರೆ ಎಂದು ಭಾವಿಸಲಾಗಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಸಹ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತನ್ನ ಅಭಿಪ್ರಾಯ ದಾಖಲಿಸಿದ್ದಾರೆ. “ಸೆರ್ಗಿಯೋ ಗೋರ್‌ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕಾದ ರಾಯಭಾರಿಯಾಗಿ ಆರಿಸಿರುವ ಅಧ್ಯಕ್ಷ ಟ್ರಂಪ್‌ ಅವರ ನಿರ್ಧಾರ ನನಗೆ ಸಂತಸ ತಂದಿದೆ. ಅತ್ಯಂತ ಮುಖ್ಯವಾಗಿರುವ ಭಾರತ – ಅಮೆರಿಕಾ ಸಂಬಂಧದಲ್ಲಿ ಅಮೆರಿಕಾವನ್ನು ಗೋರ್‌ ಉತ್ತಮವಾಗಿ ಪ್ರತಿನಿಧಿಸಲಿದ್ದಾರೆ” ಎಂದು ರುಬಿಯೋ ಹೇಳಿಕೆ ನೀಡಿದ್ದಾರೆ.

ಗೋರ್‌ ಅಧ್ಯಕ್ಷ ಟ್ರಂಪ್‌ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿರುವುದರಿಂದ, ಭಾರತದ ಜೊತೆಗಿನ ಮಾತುಕತೆಗಳು ಇನ್ನಷ್ಟು ತೂಕ ಹೊಂದಿರಲಿವೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕನ್‌ ಜಾಲತಾಣವಾದ ʼಪೊಲಿಟಿಕೊʼ ಈ ಕುರಿತು ವರದಿ ಮಾಡಿದ್ದು, “ತನಗೆ ಅತ್ಯಂತ ಆತ್ಮೀಯರಾಗಿರುವವರನ್ನು ರಾಯಭಾರಿಯಾಗಿ ಆರಿಸುವ ಮೂಲಕ ಡೊನಾಲ್ಡ್‌ ಟ್ರಂಪ್‌ ಮೋದಿ ಆಡಳಿತಕ್ಕೆ ಒಂದು ಬಲವಾದ ಸಂದೇಶ ನೀಡುತ್ತಿದ್ದಾರೆ. ಸೆರ್ಗಿಯೊ ಗೋರ್‌ ಮಾತುಕತೆಗಳು ಹೆಚ್ಚು ಗಂಭೀರವಾಗಿರಲಿದ್ದು, ಸಂದೇಶಗಳು ನೇರವಾಗಿ ಅಧ್ಯಕ್ಷರಿಂದಲೇ ಬರಲಿವೆ” ಎಂದಿದೆ.

ಟ್ರಂಪ್‌ ಮಾಜಿ ಸಲಹೆಗಾರರಾದ ಸ್ಟೀವ್‌ ಬಾನ್ನನ್‌ ಅವರು ಈ ಕುರಿತು ಅಭಿಪ್ರಾಯ ತಿಳಿಸಿದ್ದು, “ಗೋರ್‌ ಅಧ್ಯಕ್ಷರೊಡನೆ ನೇರವಾಗಿ ಸಮಾಲೋಚಿಸುವ ಅವಕಾಶ ಹೊಂದಿದ್ದಾರೆ. ಗೋರ್‌ ಅವರಿಗೆ ಸದ್ಯದ ಮಟ್ಟಿಗೆ ಭಾರತದ ಕುರಿತ ನೀತಿಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಆದರೆ, ಅವರು ಶೀಘ್ರವಾಗಿ ಎಲ್ಲವನ್ನೂ ತಿಳಿದುಕೊಳ್ಳಬಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ, ಅಧ್ಯಕ್ಷ ಟ್ರಂಪ್‌ ಗೋರ್‌ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ” ಎಂದು ಬಾನ್ನನ್‌ ಹೇಳಿದ್ದಾರೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com