
ಕರ್ನಾಟಕದ ಕಾಂಗ್ರೆಸ್ ಸರಕಾರ ತನ್ನ ಸರ್ವೋಚ್ಛ ನಾಯಕ ರಾಹುಲ್ ಗಾಂಧಿ ಅವರನ್ನು ಓಲೈಸಲು ಮತ್ತೊಂದು ನಿರ್ಧಾರ ಕೈಗೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನಕ್ಕೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಬದಲು ಮತಪತ್ರಗಳನ್ನೇ ಬಳಸುವ ತೀರ್ಮಾನವದು. ಇದು ಈಗ ಪರ-ವಿರೋಧದ ಚರ್ಚೆಗೆ ವಸ್ತು. ಟೀಕೆ-ಟಿಪ್ಪಣಿಗಳಿಗೆ ದಾರಿ. ಸುಧಾರಣೆಯ ಚಕ್ರವನ್ನು ಹಿಂದಕ್ಕೆ ತಿರುಗಿಸಿದ ಕಾರ್ಯ.
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎನ್‌ಡಿಎ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪ ಹೊರಿಸಿ ಬೀದಿಗೆ ಇಳಿದಿದ್ದಾರೆ. ಬಿಹಾರದಲ್ಲಿ ಅವರು ವೋಟ್ ಚೋರಿ ಸಮಾವೇಶಗಳನ್ನೂ ನಡೆಸಿ ಪ್ರತಿಭಟಿಸಿದ್ದಾರೆ. ಅವರ ಹೋರಾಟಕ್ಕೆ ಬಲತುಂಬುವ ಪ್ರಯತ್ನ ರಾಜ್ಯ ಸರಕಾರದ ಈ ನಿರ್ಧಾರ. ಇಲ್ಲಿ ತಮ್ಮ ಪಕ್ಷದ ನಾಯಕನ ಓಲೈಕೆಗೆ ಹೆಚ್ಚು ಒತ್ತು.
ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನೇ ತಿದ್ದಿ ವಂಚಿಸಲಾಗುತ್ತಿದೆ ಎಂಬುದು ರಾಹುಲ್ ಗಾಂಧಿ ಹಾಗೂ ಐಎನ್ ಡಿಐಎ ನಾಯಕರ ಆರೋಪ. ಇವಿಎಂ ಬಗ್ಗೆ ಶಂಕೆ ವ್ಯಕ್ತಪಡಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದೂ ಆಯಿತು. ಸುಪ್ರೀಂಕೋರ್ಟ್ ಈ ಅರ್ಜಿಗಳನ್ನು ವಜಾಗೊಳಿಸಿದೆ. ಇವಿಎಂ ಬಳಕೆಯನ್ನು ಎತ್ತಿ ಹಿಡಿದಿದೆ. ಆದರೂ ಇವಿಎಂಗಳ ವಿಚಾರದಲ್ಲಿ ಆರೋಪ ನಿಂತಿಲ್ಲ. ಇವಿಎಂ ಬಳಕೆ ವಿಚಾರದಲ್ಲೂ ರಾಜಕಾರಣದಲ್ಲೇ ಮೇಲಾಟ.
ಕರ್ನಾಟಕದಲ್ಲಿ ಪೇಟೆ-ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಸುವ ಸಿದ್ದರಾಮಯ್ಯ ಸರಕಾರದ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ತಾನು ಗೆದ್ದಾಗ ಮೌನವಹಿಸಿ, ಸೋತಾಗ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವ ಧೋರಣೆ ಸರಿಯಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆಗ ಈ ಫಲಿತಾಂಶವನ್ನು ಸಂಭ್ರಮಿಸುವ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸೋತಾಗ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಂಚನೆ ನಡೆದಿದೆ ಎಂದು ಆರೋಪಿಸುತ್ತದೆ. ಇವಿಎಂ ಹ್ಯಾಕ್ ಆಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತದೆ. ಇದು ಹೇಗೆ? ಕರ್ನಾಟಕ, ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇತ್ತೇ? ಕಾಂಗ್ರೆಸ್ಸಿಗರು ಉತ್ತರಿಸಬೇಕು.
ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಒಂದು ರೀತಿ ಹಿಂದಕ್ಕೆ ಹೆಜ್ಜೆ ಇಟ್ಟಂತೆ ಆಗಿದೆ. ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂಬ ಹೆಸರು. ಇಲ್ಲಿನ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತ್ಯಜಿಸಿ ವಾಪಸ್ ಮತಪತ್ರಗಳಿಗೆ ತೆರಳುವ ಸರಕಾರದ ನಿರ್ಧಾರ ದಶಕಗಳ ಕಾಲ ಹಿಂದಕ್ಕೆ ಹೋದಂತೆ ಆಗಿದೆ. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಆಧುನಿಕ ತಂತ್ರಜ್ಞಾನಕ್ಕೆ ಒತ್ತು ಕೊಟ್ಟವರು. ಆದರೆ, ಅವರ ಪುತ್ರ ರಾಹುಲ್ ಗಾಂಧಿ ಅವರಿಗೆ ವಾಪಸ್ ಹಳೇ ಕಾಲದ ಬ್ಯಾಲೆಟ್ ಪೇಪರ್‌ಗೆ ಹೊರಡುವ ಚಿಂತನೆ. ಕಾಂಗ್ರೆಸ್ಸಿಗೆ 2014ರ ವರೆಗೆ ಇವಿಎಂ ಬಗ್ಗೆ ಯಾವುದೇ ಸಮಸ್ಯೆ ಇರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಇವಿಎಂ ಬಗ್ಗೆ ಸಂದೇಹಗಳು ಕಾಂಗ್ರೆಸ್ಸಿಗರನ್ನು ಕಾಡಿದೆ.
ಬ್ಯಾಲೆಟ್ ಪೇಪರ್‌ಗಳ ಮೂಲಕ ಮತದಾನ ನಡೆಯುತ್ತಿದ್ದಾಗ ಬೂತ್ ವಶಪಡಿಸಿಕೊಳ್ಳುವುದು, ಮತಪತ್ರಗಳನ್ನು ದೋಚಿ ತಮಗೆ ಬೇಕಾದವರಿಗೆ ವೋಟುಗಳನ್ನುಒತ್ತುತ್ತಿದ್ದ ಅಕ್ರಮಗಳು ನಡೆಯುತ್ತಿದ್ದವು. ಇವಿಎಂಗಳು ಬಂದ ನಂತರ ಇದಕ್ಕೆ ಕಡಿವಾಣ ಬಿದ್ದಿದೆ. ಮತಪತ್ರಗಳನ್ನು ಓದುವಾಗ ತಪ್ಪಾಗಿ ಓದುವ ಸಾಧ್ಯತೆ ಇರುತ್ತಿತ್ತು. ಅಸಿಂಧು, ತಿರಸ್ಕೃತ ಮತಗಳು ಆಗ ಹೆಚ್ಚಿರುತ್ತಿದ್ದವು. ಇವಿಎಂಗಳು ಬಂದ ನಂತರ ತಿರಸ್ಕೃತ ಮತಗಳ ಸಂಖ್ಯೆ ಕಡಿಮೆಯಾಗಿದೆ. ಫಲಿತಾಂಶವೂ ಶೀಘ್ರವಾಗಿ ಪ್ರಕಟವಾಗುತ್ತದೆ. ಆದರೆ, ಮತಪತ್ರಗಳನ್ನು ಎಣಿಸಬೇಕಿರುವುದರಿಂದ ಫಲಿತಾಂಶ ಪ್ರಕಟ ತಡವಾಗುತ್ತದೆ. ಫಲಿತಾಂಶ ತಡವಾದರೂ ಪರವಾಗಿಲ್ಲ, ಮತಪತ್ರಗಳೇ ಇರಲಿ ಎಂಬ ವಾದವೂ ಇದೆ. ಆದರೆ, ಇವಿಎಂ ಮೆಷಿನ್ ಗಳು ದೋಷಪೂರಿತವಾಗಿವೆ ಎಂದು ಈವರೆಗೂ ಸಾಬೀತುಪಡಿಸದೇ ಇರುವಾಗ ವಾಪಸ್ ಬ್ಯಾಲೆಟ್ ಪೇಪರ್‌ಗೆ ಹೋಗುವುದು ಎಷ್ಟು ಸರಿ?
ಇವಿಎಂಗಳು ಮತಗಳನ್ನು ಡಿಜಿಟಲ್ ರೀತಿಯಲ್ಲಿ ದಾಖಲಿಸುತ್ತವೆ. ಮತದಾರರಿಗೆ ತಾವು ಯಾರಿಗೆ ಮತ ನೀಡಿದ್ದೇವೆ ಎಂಬುದನ್ನು ಕೆಲವೇ ಕೆಲವು ಸೆಕೆಂಡುಗಳ ಕಾಲ ವಿವಿ ಪ್ಯಾಟ್ ತೋರಿಸುತ್ತದೆ. ಇವಿಎಂ ಮೆಷಿನ್ ಗಳಲ್ಲಿ ಕಾಲಕಾಲಕ್ಕೆ ಸುಧಾರಣೆಗಳು ಆಗಿವೆ. ಹಾಗೇ ನೋಡಿದರೆ ಇವಿಎಂ ಅಳವಡಿಸಿದಾಗ ವಿವಿ ಪ್ಯಾಟ್ ಇರಲಿಲ್ಲ. ವಿವಿ ಪ್ಯಾಟ್ ಅನ್ನು ಮೊದಲು ಪರಿಚಯಿಸಿದ್ದು ನಾಗಾಲ್ಯಾಂಡ್ ನಲ್ಲಿ. ಅಲ್ಲಿನ ನೋಕ್ ಸೆನ್ ಎಂಬ ಅಸೆಂಬ್ಲಿ ಕ್ಷೇತ್ರದಲ್ಲಿ. ಅದು 2013ನೇ ಇಸವಿ. ನಂತರ ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ವಿವಿ ಪ್ಯಾಟ್ ಅನ್ನು ಎಲ್ಲ ಕ್ಷೇತ್ರಗಳಲ್ಲೂ ಅಳವಡಿಸಲಾಯಿತು.
ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ಆರಂಭವೇ ಒಂದು ಕುತೂಹಲ. ಅದು 19 ಮೇ 1982. ಕೇರಳದ ಪರೂರು ಅಸೆಂಬ್ಲಿ ಕ್ಷೇತ್ರದ 50 ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಇವಿಎಂ ಜಾರಿಗೆ ಬಂತು. ಇವಿಎಂ ಬಳಕೆಯನ್ನು ಪ್ರಶ್ನಿಸಿ ಸಿಪಿಐ ಅಭ್ಯರ್ಥಿ ಶಿವನ್ ಪಿಳ್ಳೈ ಮತದಾನಕ್ಕೆ ಮುನ್ನವೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಶಿವನ್ ಪಿಳ್ಳೈ ಅವರ ಅರ್ಜಿಯನ್ನು ತಿರಸ್ಕರಿಸಿತು. ಚುನಾವಣೆಯಲ್ಲಿ ಶಿವನ್ ಪಿಳ್ಳೈ ಜಯಗಳಿಸಿದರು. ಆದರೆ, ಸೋತ ಅಭ್ಯರ್ಥಿ ಇವಿಎಂ ಬಳಕೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಸುಪ್ರೀಂಕೋರ್ಟ್ 1984ರಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ಮರು ಚುನಾವಣೆ ನಡೆಸುವಂತೆ ತೀರ್ಪು ನೀಡಿತು.
ಸುಪ್ರೀಂಕೋರ್ಟ್ ತೀರ್ಪು ಇವಿಎಂ ಬಳಕೆಯ ಕಾನೂನಿನ ತಾಂತ್ರಿಕ ಅಂಶಗಳ ಬಗ್ಗೆ ಇತ್ತು. ಮೂಲಭೂತವಾಗಿ ಇವಿಎಂ ಬಳಕೆಯ ಸೂಕ್ತತೆಯ ಬಗ್ಗೆ ಆಗಿರಲಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇವಿಎಂ ಬಳಕೆಗೆ ಕಾನೂನಿನ ಸಮ್ಮತಿ ಪಡೆಯಲು ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತು. ಅದರಂತೆ ಕಾಯ್ದೆಗೆ ತಿದ್ದುಪಡಿ ತರಲಾಯಿತು. ದೇಶದ ಚುನಾವಣೆಗಳಲ್ಲಿ ಇವಿಎಂಗಳನ್ನು ಅಳವಡಿಸುವ ಕುರಿತು ಸಂಸತ್ತಿನಲ್ಲಿ ಡಿಸೆಂಬರ್ 1988ರಲ್ಲಿ ಜನತಾ ಪ್ರಾತಿನಿಧಿಕ ಕಾಯ್ದೆ 1951ಕ್ಕೆ ತಿದ್ದುಪಡಿ ತರಲಾಯಿತು. ಆಗ ರಾಜೀವಗಾಂಧಿ ಪ್ರಧಾನಮಂತ್ರಿಯಾಗಿದ್ದರು.
ಮಧ್ಯಪ್ರದೇಶ, ರಾಜಸ್ತಾನ, ದೆಹಲಿಯ 16 ಅಸೆಂಬ್ಲಿ ಕ್ಷೇತ್ರಗಳಲ್ಲಿ 1998ರಲ್ಲಿ ಇವಿಎಂ ಬಳಸಲಾಯಿತು. ಲೋಕಸಭೆಗೆ 1999ರಲ್ಲಿ ನಡೆದ ಚುನಾವಣೆಯಲ್ಲಿ 46 ಕ್ಷೇತ್ರಗಳಲ್ಲಿ ಇವಿಎಂ ಉಪಯೋಗಿಸಲಾಯಿತು. 2001ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಇವಿಎಂ ಮೂಲಕ ಮತದಾನ ನಡೆಯಿತು. ನಂತರ ಎಲ್ಲ ಅಸೆಂಬ್ಲಿ ಚುನಾವಣೆಗಳಿಗೂ ಇದು ಕಾರ್ಯರೂಪಕ್ಕೆ ಬಂದಿತು. ಲೋಕಸಭೆಗೆ 2004ರಲ್ಲಿ ನಡೆದ ಚುನಾವಣೆಗೆ ಎಲ್ಲ 543 ಕ್ಷೇತ್ರಗಳಲ್ಲೂ ಇವಿಎಂ ಬಳಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ಕೈಗೊಂಡಿತು.
ಮತದಾನಕ್ಕೆ ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಯಾವುದರ ಬಳಕೆ ಮುಖ್ಯ ಎಂಬುದಕ್ಕಿಂತ ಇಡೀ ಚುನಾವಣಾ ಪ್ರಕ್ರಿಯೆ ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿರಬೇಕು. ಅದು ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸುವುದೇ ಇರಬಹುದು, ಚುನಾವಣೆಯಲ್ಲಿ ಹಣ, ಹೆಂಡದ ಹಂಚಿಕೆಯನ್ನು ತಡೆಯುವುದೇ ಆಗಿರಬಹುದು, ಚುನಾವಣಾ ಸಿಬ್ಬಂದಿ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದೇ ಇರಬಹುದು ಇಂತಹ ನಡೆಗಳ ಮೂಲಕ ಚುನಾವಣೆಯ ಬಗ್ಗೆ ವಿಶ್ವಾಸಾರ್ಹತೆ ಮೂಡಿಸಬೇಕೇ ವಿನಾ ಬ್ಯಾಲೆಟ್ ಪೇಪರ್ ಬಳಸಿದ ಕೂಡಲೇ ಚುನಾವಣಾ ವ್ಯವಸ್ಥೆ ಬಗ್ಗೆ ನಂಬಿಕೆ ಕುದುರುತ್ತದೆ ಎಂಬುದಲ್ಲ.
ಮತದಾರರ ಪಟ್ಟಿಯಲ್ಲೇ ದೋಷ ಇಟ್ಟುಕೊಂಡು ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಇವುಗಳಲ್ಲಿ ಯಾವುದು ಬಳಸಿದರೂ ಏನು ಪ್ರಯೋಜನ? ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಆದರೆ, ಇದಕ್ಕೆ ಸರಕಾರಗಳು, ರಾಜಕೀಯ ಪಕ್ಷಗಳು, ಜನಸಾಮಾನ್ಯರ ಸಹಕಾರ ಬೇಕೇ ಬೇಕು. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಚುನಾವಣಾ ಆಯೋಗ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಹೊರಟಾಗ ಸಹಕರಿಸಬೇಕು.
Advertisement