ಬೆಂಗಳೂರಿನ 11 ಪೊಲೀಸರು ಡ್ರಗ್ ಡೀಲರ್‌ಗಳಾದ ಕಥೆ: ವ್ಯವಸ್ಥೆಯ ಒಳಗೆ ಬೇರೂರಿರುವ ಸಮಸ್ಯೆಯ ಕೈಗನ್ನಡಿ!

ಮೊಳಗಿದೆ ಎಚ್ಚರಿಕೆ ಗಂಟೆ ಮತ್ತು ತುರ್ತಾಗಿ ಎದುರಾಗಿದೆ ಸುಧಾರಣೆಯ ಅವಶ್ಯಕತೆ
ಬೆಂಗಳೂರಿನ 11 ಪೊಲೀಸರು ಡ್ರಗ್ ಡೀಲರ್‌ಗಳಾದ ಕಥೆ: ವ್ಯವಸ್ಥೆಯ ಒಳಗೆ ಬೇರೂರಿರುವ ಸಮಸ್ಯೆಯ ಕೈಗನ್ನಡಿ!
Updated on

ಮಾದಕದ್ರವ್ಯ ಮಾರಾಟಗಾರರೊಡನೆ ಶಾಮೀಲಾದ ಆರೋಪದಲ್ಲಿ ಬೆಂಗಳೂರಿನಲ್ಲಿ 11 ಪೊಲೀಸ್ ಅಧಿಕಾರಿಗಳು ಅಮಾನತಾಗಿದ್ದಾರೆ. ಇದು ಕೇವಲ ಭ್ರಷ್ಟಾಚಾರದ ಇನ್ನೊಂದು ಪ್ರಕರಣ ಮಾತ್ರವಲ್ಲ. ಬದಲಿಗೆ, ಸಾರ್ವಜನಿಕರ ನಂಬಿಕೆಗೆ ಬಗೆದ ದ್ರೋಹವಾಗಿದ್ದು, ಇದರ ಕುರಿತು ತಕ್ಷಣವೇ ಸಮಗ್ರ ಕ್ರಮ ಕೈಗೊಳ್ಳುವ ಅವಶ್ಯಕತೆ ಎದುರಾಗಿದೆ. ಈ ಹಗರಣ ಸಮಾಜವನ್ನು ರಕ್ಷಿಸುವ ಪ್ರಮಾಣ ಕೈಗೊಂಡು ಉದ್ಯೋಗಕ್ಕೆ ಸೇರಿದವರೇ ಹೇಗೆ ಸಮಾಜ ಭಕ್ಷಕರೊಡನೆ ಕೈ ಜೋಡಿಸಿದ್ದಾರೆ ಎನ್ನುವುದನ್ನು ಜಾಹೀರುಗೊಳಿಸಿದೆ.

ಆಘಾತಕಾರಿ ವಾಸ್ತವ ಚಿತ್ರಣ

ಸೆಪ್ಟೆಂಬರ್ 13, 2025ರಂದು, ಇತ್ತೀಚಿನ ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ಸಂಗತಿ ತಲೆದೋರಿತು. ಓರ್ವ ಪೊಲೀಸ್ ಇನ್ಸ್ಪೆಕ್ಟರ್, ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್, ಓರ್ವ ಮುಖ್ಯ ಪೇದೆ ಸೇರಿದಂತೆ, ಚಾಮರಾಜಪೇಟೆ ಮತ್ತು ಜೆಜೆ ನಗರ ಪೊಲೀಸ್ ಠಾಣೆಗಳ 11 ಅಧಿಕಾರಿಗಳು ಮಾದಕದ್ರವ್ಯ ಪೂರೈಕೆ ಜಾಲದ ಜೊತೆಗಿನ ಸಂಪರ್ಕದಿಂದಾಗಿ ಅಮಾನತುಗೊಂಡಿದ್ದಾರೆ. ಇದು ಯಾವುದೋ ಸಾಮಾನ್ಯ ನಿರ್ಲಕ್ಷ್ಯ ಖಂಡಿತವಾಗಿಯೂ ಅಲ್ಲ. ಇದು ಸಮವಸ್ತ್ರ ಧರಿಸಿದವರೇ ಯೋಜಿತ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಕರಣ.

ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳೂ ಡ್ರಗ್ ಪೆಡ್ಲರ್‌ಗಳಿಂದ ತಲಾ 1.5ರಿಂದ 2 ಲಕ್ಷದ ತನಕ ಹಫ್ತಾ ವಸೂಲಿ ಮಾಡುತ್ತಿದ್ದರು. ಈ ಹಣಕ್ಕೆ ಬದಲಾಗಿ, ಅವರಿಗೆ ಅಪಾಯಕಾರಿ ಮಾದಕ ವಸ್ತುಗಳ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚು ಆಘಾತಕರ ವಿಚಾರವೆಂದರೆ, ಅಮಾನತುಗೊಂಡಿರುವ ಅಧಿಕಾರಿಗಳು ಆರೋಪಿತ ಮಾದಕ ವಸ್ತುಗಳ ಮಾರಾಟಗಾರರೊಡನೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.

ಆರ್ ಆರ್ ನಗರ ಪೊಲೀಸರು ಸಲ್ಮಾನ್, ನಯಾಜ್ ಉಲ್ಲಾ, ನಯಾಜ್ ಖಾನ್, ಮತ್ತು ತುಷಾರ್ ಪಟೇಲ್ ಸೇರಿದಂತೆ ಆರು ಜನ ಡ್ರಗ್ ಪೆಡ್ಲರ್‌ಗಳನ್ನು ಆಗಸ್ಟ್ 22ರಂದು ಬಂಧಿಸಿದಾಗ ಈ ಹಗರಣ ಬೆಳಕಿಗೆ ಬಂತು. ಅವರ ಮೊಬೈಲ್ ಫೋನ್‌ಗಳ ಪರಿಶೀಲನೆ ನಡೆಸಿದಾಗ, ಈ ಡ್ರಗ್ ಪೆಡ್ಲರ್‌ಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ನೇರ ಸಂಪರ್ಕ ಇದ್ದದ್ದು, ಧ್ವನಿ ಸಂದೇಶಗಳು ರವಾನೆಯಾಗುತ್ತಿದ್ದುದು, ಮತ್ತು ಹಣಕಾಸಿನ ವ್ಯವಹಾರಗಳು ನಡೆಯುತ್ತಿದ್ದುದು ಬೆಳಕಿಗೆ ಬಂತು. ಇದು ಪೊಲೀಸರು ಮತ್ತು ಅಪರಾಧಿಗಳ ನಡುವೆ ಇದ್ದ ಸಹಭಾಗಿತ್ವವನ್ನು ಸಾಬೀತುಪಡಿಸಿತು.

ಮಾನವ ಜೀವದ ಬೆಲೆ

ಈ ಪ್ರಕರಣ ಕೇವಲ ವ್ಯಕ್ತಿಗಳ ನಡುವೆ ಹಣದ ವರ್ಗಾವಣೆ ಮಾತ್ರವೇ ಆಗಿರಲಿಲ್ಲ. ಈ ಪೆಡ್ಲರ್‌ಗಳು ನಾರ್ಕೋಟಿಕ್ ಡ್ರಗ್‌ಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಅವರು ಬೆಂಗಳೂರಿನ ಯುವ ಜನರನ್ನು, ಆ ಮೂಲಕ ನಾಡಿನ ಭವಿಷ್ಯವನ್ನು ಗುರಿಯಾಗಿಸುತ್ತಿದ್ದರು. ಈ ಅಧಿಕಾರಿಗಳು ತಮ್ಮ ತಿಂಗಳ ಹಫ್ತಾಗಾಗಿ ಯುವ ಜೀವಗಳನ್ನು ಸಕ್ರಿಯವಾಗಿ ನಾಶಪಡಿಸುತ್ತಿದ್ದರು.

ಈ ರೀತಿ ಮಾರಾಟವಾಗುತ್ತಿದ್ದ ಡ್ರಗ್ ಯಾವುದೇ ವೈದ್ಯರ ಶಿಫಾರಸಿಲ್ಲದೆ ಮಾರಾಟವಾಗಿ, ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರ ಯುವ ಜನರಲ್ಲಿ ಮಾದಕ ವ್ಯಸನಕ್ಕೆ ಕಾರಣವಾಗುತ್ತಿತ್ತು. ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದರೆ, ಅವರು ಪೊಲೀಸರಿಂದ ತಮ್ಮ ಮಕ್ಕಳ ರಕ್ಷಣೆ ಎದುರು ನೋಡುತ್ತಾರೆಯೇ ಹೊರತು, ಪೊಲೀಸರೇ ಮಾದಕ ದ್ರವ್ಯ ವ್ಯಾಪಾರದಲ್ಲಿ ತೊಡಗುವುದನ್ನಲ್ಲ!

ಭ್ರಷ್ಟಾಚಾರದ ಸಿದ್ಧ ಮಾದರಿ

ಸೆರೆ ಸಿಕ್ಕಿದ ಪ್ರಕರಣ ಒಂದು ಸರಳ, ಸಾಮಾನ್ಯ ಪ್ರಕರಣವಲ್ಲ. ಇದೇ ಅವಧಿಯಲ್ಲಿ, ಮಂಗಳೂರು ಪೊಲೀಸರು 2025 ಒಂದರಲ್ಲೇ 132 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, 2 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಿಷ್ಠಾವಂತ ಅಧಿಕಾರಿಗಳು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಅಪರಾಧಿಗಳನ್ನು ಬಂಧಿಸಿದರೆ, ಇತರರು ಅವರಿಂದ ಹಣ ಪಡೆಯುತ್ತಿದ್ದಾರೆ.

ಭಾರತ ಅತಿದೊಡ್ಡ ಮಾದಕದ್ರವ್ಯ ಸಮಸ್ಯೆಯ ಸುಳಿಗೆ ಸಿಲುಕಿದೆ. 2022ರ ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಮಾದಕದ್ರವ್ಯ ಸಾಗಾಣೆಯ ಎನ್‌ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ 1,229 ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲೇ ಅತ್ಯಧಿಕ ಪ್ರಮಾಣದ ಪ್ರಕರಣಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ, ಮಾದಕದ್ರವ್ಯ ಸಾಗಾಣಿಕಾ ಪ್ರಕರಣಗಳು 2020ರಲ್ಲಿ 25,560 ಇದ್ದರೆ, 2022ರಲ್ಲಿ 38,064 ಪ್ರಕರಣಗಳಿಗೆ ಏರಿವೆ. ಇದು ಭಾರತದ ಮುಂದಿರುವ ಸವಾಲುಗಳನ್ನು ಪ್ರದರ್ಶಿಸಿದೆ.

ವ್ಯಸನ ಮುಕ್ತತೆಯ ಬಿಕ್ಕಟ್ಟು

ಮಾದಕ ದ್ರವ್ಯ ವ್ಯಸನವನ್ನು ತಡೆಗಟ್ಟಲು ಪ್ರಾಮಾಣಿಕ ಪೊಲೀಸ್ ಪ್ರಯತ್ನದ ಅಗತ್ಯವಿದೆ. ಇಂತಹ ಸನ್ನಿವೇಶದಲ್ಲಿ ಪೊಲೀಸರೇ ಇಂತಹ ಕೆಲಸದಲ್ಲಿ ಶಾಮೀಲಾಗಿರುವುದು ಇನ್ನಷ್ಟು ನೋವಿನ ವಿಚಾರ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಬೆಂಗಳೂರಿನ ಜನಸಂಖ್ಯೆಯ 13% ಜನರು ಕಳೆದ ವರ್ಷದಲ್ಲಿ ಮದ್ಯ ಸೇವಿಸಿದ್ದಾರೆ. ಇನ್ನು 13ರಿಂದ 30 ವರ್ಷ ವಯೋಮಾನದ ಯುವ ಜನರಲ್ಲಿ ಮಾದಕ ವಸ್ತುಗಳ ಸೇವನೆಯಂತೂ ಅಪಾಯಕಾರಿ 62.9% ತಲುಪಿದೆ.

2021ರಲ್ಲಿ, ಬೆಂಗಳೂರಿನಲ್ಲಿ ಮಾದಕದ್ರವ್ಯ ಮತ್ತು ಮದ್ಯ ವ್ಯಸನದಿಂದಾಗಿ 146 ಆತ್ಮಹತ್ಯೆಗಳು ನಡೆದಿದ್ದವು. ಇದು ಚೆನ್ನೈ ಬಳಿಕ ಭಾರತದಲ್ಲಿ ಎರಡನೇ ಸ್ಥಾನದಲ್ಲಿತ್ತು. ಈ ಬಿಕ್ಕಟ್ಟನ್ನು ಸರಿಪಡಿಸಲು ನೆರವಾಗುವ ಬದಲು ಪೊಲೀಸ್ ಅಧಿಕಾರಿಗಳು ಇನ್ನಷ್ಟು ಹಾಳು ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಹಲವಾರು ವ್ಯಸನ ಮುಕ್ತತೆಯ ಕೇಂದ್ರಗಳು ಮಾದಕ ವ್ಯಸನಿಗಳಿಗೆ ನೆರವಾಗಲು ಸತತ ಪ್ರಯತ್ನ ನಡೆಸುತ್ತಿವೆ. ಬೆಂಗಳೂರು ನಗರದಲ್ಲೇ 34 ಇಂಟಿಗ್ರೇಟೆಡ್ ರಿಹ್ಯಾಬಿಲಿಟೇಷನ್ ಸೆಂಟರ್ಸ್ ಫಾರ್ ಅಡಿಕ್ಟ್ಸ್ (ಐಆರ್‌ಸಿಎ) ಗಳನ್ನು ಸ್ಥಾಪಿಸಲಾಗಿದ್ದು, ಅವಶ್ಯಕ ಚಿಕಿತ್ಸೆ ಒದಗಿಸುತ್ತಿವೆ. ಈ ಕೇಂದ್ರಗಳಿಗೆ ಪೊಲೀಸರ ಬೆಂಬಲ ಬೇಕೇ ಹೊರತು ದ್ರೋಹವಲ್ಲ!

ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳು

  1. ಸಂಪೂರ್ಣ ತನಿಖೆ: ತನಿಖೆ ಕೇವಲ ಈ 11 ಅಧಿಕಾರಿಗಳಿಗೆ ಸೀಮಿತವಾಗಬಾರದು. ಅವರ ಬ್ಯಾಂಕ್ ದಾಖಲೆಗಳು, ಆಸ್ತಿಗಳು, ಮತ್ತು ಎಲ್ಲ ಹಣಕಾಸು ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು. ಯಾವುದೇ ದಾಖಲೆ ರಹಿತ ಆಸ್ತಿ ಇದ್ದರೆ ಅದನ್ನು ವಶಪಡಿಸಿಕೊಳ್ಳಬೇಕು.

  2. ಸಾಂಸ್ಥಿಕ ಸುಧಾರಣೆ: ಪೊಲೀಸ್ ಠಾಣೆಗಳು ತಕ್ಷಣವೇ ಮರು ವ್ಯವಸ್ಥೆಗೆ ಒಳಪಡಬೇಕು. ತಿಂಗಳ ಲೆಕ್ಕ ಪರಿಶೋಧನೆಗಳು, ಅನಿರೀಕ್ಷಿತ ತಪಾಸಣೆಗಳು, ಮತ್ತು ಕಡ್ಡಾಯ ಮಂಪರು ಪರೀಕ್ಷೆಗಳನ್ನು ಮಾದಕ ದ್ರವ್ಯ ಹಾವಳಿ ಇರುವ ಪ್ರದೇಶಗಳಲ್ಲಿ ನಡೆಸಬೇಕು.

  3. ಪೊಲೀಸ್ - ವ್ಯಸನ ಮುಕ್ತತಾ ಕೇಂದ್ರ ಸಹಯೋಗ: ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ವ್ಯಸನ ಮುಕ್ತತಾ ಕೇಂದ್ರಗಳಿಗೆ ವಾರಕ್ಕೊಂದು ಭೇಟಿಯನ್ನು ಕಡ್ಡಾಯಗೊಳಿಸಬೇಕು. ಅಧಿಕಾರಿಗಳು ತಮ್ಮ ಸಂಭಾವ್ಯ ಭ್ರಷ್ಟಾಚಾರಕ್ಕಾಗಿ ಜನ ಸಾಮಾನ್ಯರು ಎಂತಹ ಬೆಲೆ ತೆರುತ್ತಿದ್ದಾರೆ, ಕುಟುಂಬಗಳು ಹೇಗೆ ನಾಶವಾಗುತ್ತಿವೆ, ಯುವ ಜನರು ಹೇಗೆ ಹಾದಿ ತಪ್ಪುತ್ತಿದ್ದಾರೆ, ಕನಸುಗಳು ಹೇಗೆ ಧ್ವಂಸವಾಗುತ್ತಿವೆ ಎನ್ನುವುದನ್ನು ಕಣ್ಣಾರೆ ಕಾಣಬೇಕು.

  4. ಸಮುದಾಯಿಕ ಕಣ್ಗಾವಲು: ನಾಗರಿಕರೂ ಸಬಲೀಕರಣಗೊಂಡು, ಪೊಲೀಸ್ - ಅಪರಾಧಿ ಸಹಭಾಗಿತ್ವದ ವರದಿ ಮಾಡಬೇಕು. ಅನಾಮಧೇಯ ದೂರು ವ್ಯವಸ್ಥೆಗಳು ಇಂತಹ ಹಗರಣಗಳನ್ನು ಬಯಲಿಗೆ ಎಳೆಯುವವರಿಗೆ ರಕ್ಷಣೆ ಒದಗಿಸುವುದು ಮುಖ್ಯವಾಗಿದೆ.

  5. ಫಾಸ್ಟ್ ಟ್ರ್ಯಾಕ್ ನ್ಯಾಯ: ಇಂತಹ ಪ್ರಕರಣಗಳನ್ನು ಕ್ಷಿಪ್ರವಾಗಿ ವಿಚಾರಣೆಗೆ ಒಳಪಡಿಸಿ, ಆರು ತಿಂಗಳ ಒಳಗಾಗಿ ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ಕ್ಷಿಪ್ರ, ಮತ್ತು ತೀವ್ರವಾದ ಶಿಕ್ಷೆ ವಿಧಿಸುವುದರಿಂದ ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸಬಹುದು.

ಸಮಸ್ಯೆಯ ರಾಜಕೀಯ ಬೇರುಗಳು

ಬೆಂಗಳೂರಿನ ಡ್ರಗ್ - ಪೊಲೀಸ್ ಸಂಬಂಧ ಯಾವುದೋ ಒಂದು ಅಪರೂಪದ ಪ್ರಕರಣವಲ್ಲ. ಇದು ಕರ್ನಾಟಕ ಪೊಲೀಸ್ ವ್ಯವಸ್ಥೆಯ ಒಳಗೆ ಆಳವಾಗಿ ಬೇರೂರಿರುವ ಸಮಸ್ಯೆಯ ಕೈಗನ್ನಡಿ. ಪೊಲೀಸ್ ಇಲಾಖೆಯನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ, ವರ್ಗಾವಣೆಗಳಲ್ಲಿ ಅನಗತ್ಯವಾಗಿರುವ ರಾಜಕೀಯ ಹಸ್ತಕ್ಷೇಪ. ಇಲ್ಲಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಯಾವ ಅಧಿಕಾರಿಗಳು ಇರಬೇಕು ಎನ್ನುವುದನ್ನು ನಿರ್ಧರಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ, ಈ ರಾಜಕಾರಣಿಗಳು ಐಪಿಎಸ್ ಅಧಿಕಾರಿಗಳನ್ನೂ ಬಿಟ್ಟಿಲ್ಲ. ಹಲವಾರು ಸಂದರ್ಭಗಳಲ್ಲಿ, ಪೊಲೀಸ್ ಅಧಿಕಾರಿಗಳೂ ಸಹ ಸ್ಥಳೀಯ ಶಾಸಕರು ಮತ್ತು ಇತರ ರಾಜಕೀಯ ಬಾಸ್ ಗಳಿಗೆ ತಿಂಗಳ ಮಾಮೂಲಿ ನೀಡುವ ಅಗತ್ಯ ಎದುರಾಗಿದೆ. ರಾಜಕಾರಣಿಗಳ ಇಂತಹ ಬೇಡಿಕೆಗಳನ್ನು ಪೊಲೀಸ್ ಅಧಿಕಾರಿಗಳು ತಮ್ಮ ಕನಿಷ್ಠ ಸಂಬಳದಿಂದ ಪೂರೈಸಲು ಖಂಡಿತಾ ಸಾಧ್ಯವಿಲ್ಲ. ಅದಕ್ಕಾಗಿ ಅವರು ಭ್ರಷ್ಟಾಚಾರದ ಮಾರ್ಗ ಹಿಡಿಯುವುದು ಅನಿವಾರ್ಯವಾಗುತ್ತದೆ.

ಇಂತಹ ವಿಷಮ ವ್ಯವಸ್ಥೆಯಲ್ಲಿ ಅಧಿಕಾರಿಗಳ ಸಾಮರ್ಥ್ಯ, ದಕ್ಷತೆಯ ಬದಲು, ಹಣ, ಜಾತಿ, ಮತ್ತು ರಾಜಕೀಯ ಸಂಬಂಧಗಳೇ ಅವರ ನಿಯೋಜನೆಯನ್ನು ನಿರ್ಧರಿಸುತ್ತವೆ. ಅಸಮರ್ಥ ಅಧಿಕಾರಿಗಳೂ ಶಾಸಕರಿಗೆ ಭಾರೀ ಮೊತ್ತದ ಲಂಚ ನೀಡುವುದರಿಂದ ಪ್ರಮುಖ ಹುದ್ದೆಗಳು ಲಭಿಸುತ್ತವೆ. ಅಥವಾ, ಅವರಿಗೆ 'ಸರಿಯಾದ' ಜಾತಿಯ ಜಾಲದ ಬೆಂಬಲವಿದ್ದರೂ ಇದು ಸಾಧ್ಯವಾಗುತ್ತದೆ. ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ, ವರ್ಗಾವಣೆ ಮಾಡಲಾಗುತ್ತಿದೆ, ಅಥವಾ ಅವರಿಗೆ ಸರಿಯಾದ ಸ್ಥಾನವನ್ನೇ ನೀಡದೆ ಸುಮ್ಮನೆ ಕಾಯಿಸಲಾಗುತ್ತದೆ. ಇದಕ್ಕೆಲ್ಲ ಅವರು ಭ್ರಷ್ಟಾಚಾರದ ಆಟಗಳಲ್ಲಿ ಶಾಮೀಲಾಗಲು ನಿರಾಕರಿಸುವುದೇ ಕಾರಣವಾಗಿರುವುದುಂಟು.

ಕರ್ನಾಟಕ ಉಚ್ಚ ನ್ಯಾಯಾಲಯವೂ ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, "ಯಾರಾದರೂ ಅಧಿಕಾರಿ ಸರಿಯಾದ ಸ್ಥಾನವನ್ನು ಹೊಂದುವ ಸಲುವಾಗಿ ಅಪಾರ ಪ್ರಮಾಣದ ಹಣ ನೀಡುತ್ತಾನೆ ಎಂದರೆ, ಆತ ತಾನು ನೀಡಿರುವ ಹಣವನ್ನು ಮರಳಿ ಸಂಪಾದಿಸಲು, ಮುಂದೆ ಇಂತಹ ಪರಿಸ್ಥಿತಿ ಎದುರಾದಾಗ ಮತ್ತೆ ಹಣ ನೀಡುವಷ್ಟ ಸಂಪಾದನೆ ಮಾಡಲು ಎಲ್ಲ ರೀತಿಯಿಂದಲೂ ಹಣ ಸಂಪಾದನೆಯ ಹಾದಿ ಹಿಡಿಯುತ್ತಾ‌ನೆ. ಇದು ಭ್ರಷ್ಟಾಚಾರದ ವಿಷಕಾರಿ ವೃತ್ತವನ್ನೇ ನಿರ್ಮಿಸುತ್ತದೆ" ಎಂದಿದೆ. ಇನ್ನು ಜಾತಿ ಲೆಕ್ಕಾಚಾರಗಳಂತೂ ವ್ಯವಸ್ಥೆಯನ್ನು ಇನ್ನಷ್ಟು ಕುಲಗೆಡಿಸಿವೆ. ರಾಜಕೀಯ ಪ್ರಭಾವ ಹೊಂದಿರುವ ಜಾತಿಗಳಿಗೆ ಸೇರಿದ ಅಧಿಕಾರಿಗಳಿಗೆ ಲಾಭದಾಯಕವಾದ ನಗರ ಪ್ರದೇಶಗಳಲ್ಲಿ ಸ್ಥಾನ ಲಭಿಸುತ್ತದೆ. ಆದರೆ, ಅರ್ಹತೆಯ ಆಧಾರದ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತದೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನಿರಂತರವಾಗಿ ಪುನರ್ರಚನೆಗಳು ನಡೆಯುತ್ತಿದ್ದು, ಜುಲೈ 2025 ಒಂದರಲ್ಲೇ 35 ಐಪಿಎಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಸರ್ಕಾರ ಕೆಲ ದಿನಗಳ ಅಂತರದಲ್ಲಿ ವರ್ಗಾವಣೆ ಆದೇಶಗಳನ್ನು ಮಾರ್ಪಾಡುಗೊಳಿಸುತ್ತಿದೆ. ಇದು ಸರ್ಕಾರದ ನಿರ್ಧಾರಗಳನ್ನು ಅಧಿಕಾರಿಗಳನ್ನು ಅವರ ಅರ್ಹತೆಯ ಬದಲಿಗೆ ರಾಜಕೀಯ ಲೆಕ್ಕಾಚಾರದಲ್ಲಿ ನಿಯೋಜಿಸಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಅಧಿಕಾರಿಗಳಿಗೆ ತಮ್ಮ ವೃತ್ತಿಜೀವನ ಜನರಿಗೆ ಸರಿಯಾದ ಸೇವೆ ಸಲ್ಲಿಸುವುದಕ್ಕಿಂತಲೂ ಹೆಚ್ಚಾಗಿ, ಶಾಸಕರನ್ನು ಮೆಚ್ಚಿಸುವುದರಲ್ಲಿದೆ ಎನ್ನುವುದು ಅರಿವಾದಾಗ, ಭ್ರಷ್ಟಾಚಾರಕ್ಕೆ ತಡೆ ಒಡ್ಡುವುದು ಸಾಧ್ಯವೇ ಇಲ್ಲದಂತಾಗುತ್ತದೆ.

ರಾಜಕಾರಣಿಗಳು ಪೊಲೀಸರ ನಿಯೋಜನೆಯನ್ನು ಒಂದು ಮಾರುಕಟ್ಟೆಯನ್ನಾಗಿಸಿದ್ದಾರೆ. ಬೆಂಗಳೂರಿನಂತಹ 'ಲಾಭದಾಯಕ' ಸ್ಥಳಗಳಲ್ಲಿ, ಲಾಭದಾಯಕ ಸ್ಥಾನಗಳನ್ನು ಅತಿಹೆಚ್ಚು ಬೆಲೆ ಬಿಡ್ ಮಾಡುವವರಿಗೆ 'ಮಾರಾಟ' ಮಾಡಲಾಗುತ್ತದೆ. ಇದೇ ವೇಳೆ, ಲಂಚ ನೀಡಲು ಸಿದ್ಧರಿರದ ನಿಷ್ಠಾವಂತ ಅಧಿಕಾರಿಗಳನ್ನು ದೂರದ ಪ್ರದೇಶಗಳಿಗೆ ಸಾಗಹಾಕಲಾಗುತ್ತದೆ. ಈ ವ್ಯವಸ್ಥೆ ಕೇವಲ ಭ್ರಷ್ಟ ಅಧಿಕಾರಿಗಳಿಗೆ ಮಾತ್ರವೇ ಸೂಕ್ತ ಸ್ಥಾನಮಾನ ಲಭಿಸಿ, ಅವರು ಡ್ರಗ್ ಪೆಡ್ಲರ್‌ಗಳೊಡನೆ ವ್ಯವಹಾರ ಕುದುರಿಸಿ, ನಾವು ಈಗಾಗಲೇ ಸಾಕ್ಷಿಯಾಗಿರುವಂತಹ ಹಗರಣಕ್ಕೆ ಸೂಕ್ತ ವಾತಾವರಣ ಕಲ್ಪಿಸುತ್ತಾರೆ.

1994ನೇ ಸಾಲಿನ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಪ್ರಕರಣವನ್ನು ಒಮ್ಮೆ ಗಮನಿಸಿ. ವಾಸ್ತವವಾಗಿ ಅವರಿಗೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಗೆ ಬಡ್ತಿ ನೀಡಬೇಕಾಗಿತ್ತು. ಅವರ ದಕ್ಷತೆ, ಸಾಮರ್ಥ್ಯ, ಮತ್ತು ವೃತ್ತಿ ಹಿರಿತನದ ಹೊರತಾಗಿಯೂ ರಾಜಕೀಯ ಕಾರಣಗಳಿಂದಾಗಿ ಅವರ ಮುಂಬಡ್ತಿಯನ್ನು ತಡೆ ಹಿಡಿಯಲಾಯಿತು. 2019ರ ಟೆಲಿಫೋನ್ ಕದ್ದಾಲಿಕೆಯ ಪ್ರಕರಣದಲ್ಲಿ ಅವರ ವಿರುದ್ಧ ಹೊಸದಾಗಿ ಇಲಾಖಾ ವಿಚಾರಣೆ ನಡೆಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಆದರೆ, ಸರ್ಕಾರದ ಆದೇಶದ ಅನ್ವಯವೇ ನಡೆದ ಹಿಂದಿನ ತನಿಖೆಗಳು ಅವರನ್ನು ನಿರ್ದೋಷಿ ಎಂದೇ ವರದಿ ನೀಡಿದ್ದವು. ಪ್ರಾಮಾಣಿಕ ಅಧಿಕಾರಿಗಳು ರಾಜಕೀಯ ತಂತ್ರಗಳಿಗೆ ಮಣಿಯದೆ ಹೋದಾಗ ಅವರನ್ನು ಹೇಗೆ ಕಡೆಗಣಿಸಲಾಗುತ್ತದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಇನ್ನು ರಾಜಕೀಯ ಲೆಕ್ಕಾಚಾರಕ್ಕೆ ನೆರವಾಗುವ ಅಧಿಕಾರಿಗಳಿಗೆ ಅವರ ಅರ್ಹತೆಯನ್ನೂ ಗಮನಿಸದೆಯೇ ಬಡ್ತಿ ನೀಡಲಾಗುತ್ತದೆ.

ಮುಂದಿದೆ ದೊಡ್ಡ ಸವಾಲು

ಭಾರತ ದೇಶಾದ್ಯಂತ 345 ಇಂಟಿಗ್ರೇಟೆಡ್ ರಿಹ್ಯಾಬಿಲಿಟೇಷನ್ ಸೆಂಟರ್ಸ್ ಫಾರ್ ಅಡಿಕ್ಟ್ಸ್ (ಐಆರ್‌ಸಿಎ) ಗಳನ್ನು ಸ್ಥಾಪಿಸಿದ್ದು, 105 ಅಡಿಕ್ಷನ್ ಟ್ರೀಟ್‌ಮೆಂಟ್ ಫೆಸಿಲಿಟಿಗಳನ್ನು (ಎಟಿಎಫ್) ಸ್ಥಾಪಿಸಲಾಗಿದೆ. ಆದರೆ, ಇವುಗಳಿಗೆ ಪ್ರಾಮಾಣಿಕ ಕಾನೂನು ಜಾರಿ ಅಧಿಕಾರಿಗಳು ಬೇಕೇ ಹೊರತು, ವಿದ್ರೋಹಿಗಳಲ್ಲ.

ಸರ್ಕಾರ ನಶಾ ಮುಕ್ತ ಭಾರತ ಅಭಿಯಾನದಂತಹ ಕ್ರಮಗಳನ್ನು ಜಾರಿಗೆ ತಂದಿದ್ದು, ಇದು 11 ಕೋಟಿಗೂ ಅಧಿಕ ಜನರನ್ನು ತಲುಪಿದೆ. ಇದು 14446 ನಂತಹ ಟೋಲ್ ಫ್ರೀ ಸಹಾಯವಾಣಿಯನ್ನು ತೆರೆದು, ವ್ಯಸನ ಮುಕ್ತತೆಯ ಸಹಾಯವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಪೊಲೀಸ್ ಅಧಿಕಾರಿಗಳೇ ಮಾದಕ ದ್ರವ್ಯ ಮಾರಾಟಗಾರರ ಹಣದ ಚೀಲದಲ್ಲಿ ಸೇರಿಕೊಂಡರೆ ಇಂತಹ ಕ್ರಮಗಳು ವ್ಯರ್ಥವಾಗುತ್ತವೆ. ಇಂತಹ ಪರಿಸ್ಥಿತಿಯನ್ನು ರಾಜಕಾರಣಿಗಳೇ ನಿರ್ಮಿಸಿದ್ದು, ಇಲ್ಲಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಗೆ ಶಿಕ್ಷೆ ನೀಡಿ, ಭ್ರಷ್ಟಾಚಾರಕ್ಕೆ ಬಹುಮಾನ ನೀಡಲಾಗುತ್ತಿದೆ!

ಬಾಧ್ಯತೆ ನಿಭಾಯಿಸುವ ಸಮಯ

ಈ ಹಗರಣ ನಮ್ಮ ವ್ಯವಸ್ಥೆಯಲ್ಲೇ ಬೇರೂರಿರುವ ಸಮಸ್ಯೆಗೆ ಕನ್ನಡಿ ಹಿಡಿದಿದೆ. ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ, ವ್ಯವಸ್ಥೆಯಲ್ಲಿ ಭ್ರಷ್ಟ ಅಧಿಕಾರಿಗಳು ಇಲ್ಲವೇ? ಖಂಡಿತವಾಗಿಯೂ ಇದ್ದಾರೆ. ಆದರೆ, ಇಂತಹ ಸಮಸ್ಯೆಗೆ ನಾವು ಏನು ಪರಿಹಾರ ಕಂಡುಕೊಳ್ಳುತ್ತಿದ್ದೇವೆ?

ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿಗೂ ಈ ಪ್ರಕರಣ ಮುಜುಗರ ಉಂಟುಮಾಡಿದೆ. ಬೆಂಗಳೂರಿನಲ್ಲಿರುವ ಪ್ರತಿಯೊಬ್ಬ ಪೋಷಕರಿಗೂ ತಾವು ಮೋಸ ಹೋದೆವು ಎಂಬ ಭಾವನೆ ಮೂಡಿದೆ. ವ್ಯವಸಕ್ಕೆ ಸಿಲುಕಿ ನಲುಗಿರುವ ಪ್ರತಿಯೊಬ್ಬ ಯುವ ಜನತೆಗೂ ಅವರ ಸಮಸ್ಯೆಯ ಲಾಭ ಪಡೆಯದ, ದಕ್ಷ, ಪ್ರಾಮಾಣಿಕ ಪೊಲೀಸರ ಅಗತ್ಯವಿದೆ.

ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳು ಕಾನೂನಿನ ಕಠಿಣ ಕ್ರಮಗಳನ್ನು ಎದುರಿಸಲೇಬೇಕು. ಆದರೆ, ಅದಕ್ಕಿಂತಲೂ ಮುಖ್ಯವಾಗಿ, ನಾವು ಈ ಬಿಕ್ಕಟ್ಟನ್ನು ಒಂದು ಉತ್ತಮ, ಜವಾಬ್ದಾರಿಯುತ ಪೊಲೀಸ್ ಪಡೆಯನ್ನು ನಿರ್ಮಿಸಲು ಬಳಸಿಕೊಳ್ಳಬೇಕು. ಆ ಪೊಲೀಸ್ ವ್ಯವಸ್ಥೆ ನಮ್ಮ ಯುವಕರನ್ನು ಶೋಷಿಸುವ ಬದಲು ಅವರನ್ನು ರಕ್ಷಿಸಬೇಕು.

ಆಯ್ಕೆ ನಮ್ಮದು: ಒಂದೋ ನಾವು ನಮ್ಮ ಪೊಲೀಸ್ ಪಡೆಯನ್ನು ಈಗಲೇ ಸ್ವಚ್ಛಗೊಳಿಸಬೇಕು. ಅಥವಾ, ಅಪರಾಧಿಗಳನ್ನು ಹಿಡಿಯಬೇಕಾದವರೇ ಅಪರಾಧಿಗಳಾಗಿರುವ ನಗರದಲ್ಲಿ ನಮ್ಮ ವಾಸವನ್ನು ಹೀಗೆಯೇ ಮುಂದುವರಿಸಬೇಕು.

ಈ ಲೇಖಕ ಬೆಂಗಳೂರಿನ ಪೊಲೀಸ್ ಪಡೆಯಲ್ಲಿ ವ್ಯವಸ್ಥಿತವಾದ ಸಾಂಸ್ಥಿಕ ಸುಧಾರಣೆ ಮತ್ತು ಪ್ರಾಮಾಣಿಕವಾದ ಜವಾಬ್ದಾರಿ ಬರಬೇಕು ಎಂದು ಎದುರು ನೋಡುತ್ತಿದ್ದಾರೆ. ಅರೆ ಮನಸ್ಸಿನ ಕ್ರಮಗಳನ್ನು ಕೈಗೊಳ್ಳುವ ಸಮಯ ಈಗಾಗಲೇ ಮೀರಿ ಹೋಗಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com