ಮುಸ್ಲಿಮರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್‌ ಬೆಲೆ ತೆರಬೇಕಾದೀತು (ನೇರ ನೋಟ)

ಅಜೀಜ್‌ ಸೇಠ್‌ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದರು. ಬಾಬರಿ ಮಸೀದಿ ಉರುಳಿದ ನಂತರ ತಮ್ಮ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ಸಿಗೆ ವಿರುದ್ಧವಾಗಿದ್ದಾರೆ ಎಂಬ ಅರಿವು ಅವರಿಗಿತ್ತು.
Siddaramaiah with muslim leaders (file photo)
ಮುಸ್ಲಿಂ ಮುಖಂಡರೊಂದಿಗೆ ಸಿದ್ದರಾಮಯ್ಯ (ಸಂಗ್ರಹ ಚಿತ್ರ)online desk
Updated on

ಅದು 1994ರ ವಿಧಾನಸಭಾ ಚುನಾವಣೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಉರುಳಿದ ನಂತರ ಕರ್ನಾಟಕದ ಮೊದಲ ಅಸೆಂಬ್ಲಿ ಎಲೆಕ್ಷನ್‌. ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದ ಮಾಜಿ ಸಚಿವ ಅಜೀಜ್‌ ಸೇಠ್‌ ನಿಗದಿತ ಸಮಯ ಮೀರಿದ ನಂತರ ಬಿ ಫಾರಂ ಅನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದರು. ಆಗ ಅವರನ್ನು ಪಕ್ಷೇತರರೆಂದು ಪರಿಗಣಿಸಲಾಯಿತು.

ಅಜೀಜ್‌ ಸೇಠ್‌ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದರು. ಬಾಬರಿ ಮಸೀದಿ ಉರುಳಿದ ನಂತರ ತಮ್ಮ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ಸಿಗೆ ವಿರುದ್ಧವಾಗಿದ್ದಾರೆ ಎಂಬ ಅರಿವು ಅವರಿಗಿತ್ತು. ಅದಕ್ಕಾಗಿಯೇ ಅವರಿಗೆ ಕಾಂಗ್ರೆಸ್ಸಿನ ಹಸ್ತ ಚಿಹ್ನೆ ಬೇಕಿರಲಿಲ್ಲ. ಆ ಚುನಾವಣೆಯಲ್ಲಿ ಅಜೀಜ್‌ ಸೇಠ್‌ ಸೋತರೆಂಬ ಮಾತು ಬೇರೆ. ಆಗ ಬಿಜೆಪಿಯ ಇ.ಮಾರುತಿರಾವ್‌ ಪವಾರ್‌ ಗೆದ್ದಿದ್ದು ಆ ಕ್ಷೇತ್ರದ ಇತಿಹಾಸ. ಧರ್ಮಗಳ ಆಧಾರದ ಮೇಲೆ ಮತಗಳ ಧ್ರುವೀಕರಣ ಆಗಿತ್ತು. ಜೊತೆಯಲ್ಲಿ ಆಗ ಮಾರುತಿರಾವ್‌ ಪವಾರ್ ಅವರ ವರ್ಚಸ್ಸು ನೆರವಾಗಿತ್ತು.

ಅಜೀಜ್‌ ಸೇಠ್ ಆ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಮುಸ್ಲಿಮರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಕರ್ನಾಟಕದಲ್ಲಿ ಈಗ ರಾಜಕೀಯವಾಗಿ ಮುಸ್ಲಿಂ ಸಮುದಾಯದಲ್ಲಿ ನಿಧಾನವಾಗಿ ಕಾಂಗ್ರೆಸ್‌ ವಿರೋಧಿ ಮನೋಭಾವ ಬೆಳೆಯುತ್ತಿದೆ. ಕಾಂಗ್ರೆಸ್ಸಿನ ಮುಸ್ಲಿಂ ನಾಯಕರಲ್ಲಿ ಇದು ಆತಂಕ ಸೃಷ್ಟಿಸಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಈ ಬೆಳವಣಿಗೆಯ ಕೇಂದ್ರ ಬಿಂದು. ದಾವಣಗೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಹಂತದಿಂದಲೇ ಆಂತರಿಕ ಬೇಗುದಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ವಸತಿ ಸಚಿವ ಬಿ.ಝೆಡ್‌.ಜಮೀರ್‌ ಅಹಮದ್‌ ಖಾನ್‌ ಈ ಬಾರಿ ಮುಸ್ಲಿಮರಿಗೆ ಟಿಕೆಟ್‌ ನೀಡಬೇಕೆಂದು ಯಾವಾಗ ಹೇಳಿದರೋ ಆಗಲೇ ಪಕ್ಷದಲ್ಲಿ ಬಹಿರಂಗ ಸಂಘರ್ಷ ಶುರು. ದಾವಣಗೆರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮಧ್ಯೆಪ್ರವೇಶಿಸಲು ಜಮೀರ್ ಯಾರು ಎಂದು ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್‌ ಗುಡುಗಿದ್ದು ಸಮರದ ತೀವ್ರತೆಗೆ ಸಾಕ್ಷಿ.

ಸಚಿವ ಮಲ್ಲಿಕಾರ್ಜುನ ಅವರಿಗಂತೂ ದಾವಣಗೆರೆ ತಮ್ಮ ಜಹಗೀರು ಎಂಬ ಧೋರಣೆ. ಮುಸ್ಲಿಮರಿಗೆ ಟಿಕೆಟ್‌ ನೀಡಬೇಕೆಂಬ ಕೂಗಿಗೆ ಹೈಕಮಾಂಡ್‌ ಕಿಮ್ಮತ್ತು ಕೊಡಲಿಲ್ಲ. ಕಾಂಗ್ರೆಸ್‌ ಇಲ್ಲಿ ಮುಸ್ಲಿಮರಿಗೆ ಟಿಕೆಟ್‌ ಕೊಟ್ಟಿದ್ದರೆ ಒಂದು ವೇಳೆ ಸೋತಿದ್ದರೂ ಇದರ ಲಾಭ ಇತ್ತು. ಆ ಅವಕಾಶ ಕಾಂಗ್ರೆಸ್ ಕಳೆದುಕೊಂಡಿತು. ಸಿದ್ದರಾಮೋತ್ಸವ ನಡೆದ ದಾವಣಗೆರೆಯೇ ಕಾಂಗ್ರೆಸ್ಸಿನ ಬಣ ರಾಜಕಾರಣದ ಮತ್ತೊಂದು ಸುತ್ತಿನ ಕದನಕ್ಕೆ ಎಪಿ ಸೆಂಟರ್‌ ಆಯಿತು.

ದಾವಣಗೆರೆ ಉಪ ಚುನಾವಣೆಗೆ ಏಪ್ರಿಲ್‌ 9 ರಂದು ಮತದಾನ ಮುಗಿದ ಬೆನ್ನಲ್ಲೇ ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಸ್ಪೆಂಡ್‌ ಮಾಡಲಾಯಿತು. ಇದಕ್ಕೂ ಮುನ್ನ ಅವರಿಂದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು. ಅಬ್ದುಲ್‌ ಜಬ್ಬಾರ್ ನಂತರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಅವರ ಸರದಿ. ಅವರ ಪದಚ್ಯುತ. ಪಕ್ಷ ಯಾವುದೇ ನೋಟಿಸ್‌ ನೀಡದೇ, ವಿವರಣೆ ಪಡೆಯದೇ ತ್ವರಿತಗತಿಯಲ್ಲಿ ಈ ಇಬ್ಬರು ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಮತ್ತೆ ಪ್ರಮಾದ ಎಸಗಿತು. ಇದು ಪಕ್ಷದಲ್ಲಿ ಸಿದ್ದರಾಮಯ್ಯ ಬಣದಲ್ಲಿ ಅಸಮಾಧಾನ ಮೂಡಿಸಿತು.

ಕಾಂಗ್ರೆಸ್‌ ಶಿಸ್ತು ಕ್ರಮದ ವಿಚಾರದಲ್ಲೂ ತಾರತಮ್ಯ ನೀತಿ ಅನುಸರಿಸಿದೆ. ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಹೇಳಿದ್ದರು. ಆಗ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಆಗಲಿಲ್ಲ. ಈಗ ಅವರ ಮೊಮ್ಮಗ ಸಮರ್ಥ್‌ ಶಾಮನೂರು ಪಕ್ಷದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸುವ ಮುನ್ನವೇ ನಾಮಪತ್ರ ಸಲ್ಲಿಸಿದರು. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲವೇ? ಈ ಎರಡು ಪ್ರಕರಣಗಳಲ್ಲಿ ಏಕೆ ಶಿಸ್ತು ಕ್ರಮ ಕೈಗೊಳ್ಳಲಿಲ್ಲ?

ಅಬ್ದುಲ್‌ ಜಬ್ಬಾರ್‌ ಹಾಗೂ ನಸೀರ್‌ ಅಹಮದ್ ವಿರುದ್ಧದ ಶಿಸ್ತು ಕ್ರಮವನ್ನು ಸಿದ್ದರಾಮಯ್ಯ ಬಣ ನೇರವಾಗಿಯೇ ವಿರೋಧಿಸಿದೆ. ಸಿದ್ದರಾಮಯ್ಯ ಅವರ ಆಪ್ತ, ಸಚಿವ ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಶಿಸ್ತು ಕ್ರಮವನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಕೆಲವು ಮುಸ್ಲಿಂ ಮುಖಂಡರ ಮೇಲಿನ ಶಿಸ್ತು ಕ್ರಮ ಅಲ್ಪಸಂಖ್ಯಾತರ ಮತಗಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಅವರ ಎಚ್ಚರಿಕೆ. ಸಚಿವ ಜಮೀರ್ ಅಹಮದ್‌ ಖಾನ್‌ ಅವರ ನಿಲುವು ಇದೇ. ಸತೀಶ್‌ ಜಾರಕಿಹೊಳಿ ಹಾಗೂ ಜಮೀರ್‌ ಅವರ ನಡುವಿನ ಚರ್ಚೆಯೂ ಕುತೂಹಲಕಾರಿ. ಈ ವಿದ್ಯಮಾನ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪಾಳಯಗಳ ನಡುವೆ ಮತ್ತೊಂದು ಸುತ್ತಿನ ಕದನಕ್ಕೆ ವೇದಿಕೆ ಸಿದ್ದಪಡಿಸಿದೆ.

Siddaramaiah with muslim leaders (file photo)
ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ವರ್ಸಸ್‌ ಮಮತಾ ಬ್ಯಾನರ್ಜಿ (ನೇರ ನೋಟ)

ಸಿದ್ದರಾಮಯ್ಯ ಮುಸ್ಲಿಂ ನಾಯಕರ ವಿರುದ್ಧದ ಶಿಸ್ತು ಕ್ರಮದ ಬಗ್ಗೆ ಮೌನ ತಾಳಿದ್ದಾರೆ. ಸಿದ್ದರಾಮಯ್ಯ ಅವರದು ಕಾದು ನೋಡುವ ತಂತ್ರ. ಸಿದ್ದರಾಮಯ್ಯ ಮೌನರಾಗಿದ್ದಾರೆ ಎಂದರೆ ಮುಂದಿನ ಕಾರ್ಯತಂತ್ರಕ್ಕೆ ಸಿದ್ದರಾಗುತ್ತಿದ್ದಾರೆ ಎಂದೇ ಅರ್ಥ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ ರಾಜಕಾರಣ ಕದನ ಕುತೂಹಲ ಮೂಡಿಸುವ ಸಾಧ್ಯತೆಯೇ ಹೆಚ್ಚು.

ಕಾಂಗ್ರೆಸ್‌ ಕೆಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ಆ ಸಮುದಾಯದ ನಾಯಕರು, ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು, ಕೋಲಾರ, ಹುಬ್ಬಳ್ಳಿ ಹೀಗೆ ವಿವಿಧೆಡೆ ಮುಸ್ಲಿಮರು ಸಭೆ ಸೇರಿ ಕಾಂಗ್ರೆಸ್‌ ಪಕ್ಷದ ಧೋರಣೆಯನ್ನು ಖಂಡಿಸಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇದು ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆ.

ವಿಧಾನಸಭೆಗೆ 2013 ಹಾಗೂ 2018ರಲ್ಲಿ ನಡೆದ ಚುನಾವಣೆಗೆ ಹೋಲಿಸಿದರೆ 2023ರಲ್ಲಿ ಮುಸ್ಲಿಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದರು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಧರ್ಮದ ಆಧಾರದ ಮೇಲೆ ಮತಗಳ ಧ್ರುವೀಕರಣಕ್ಕೆ ಮುಂದಾದಾಗ ಮುಸ್ಲಿಮರು ಪ್ರತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕೈ ಹಿಡಿದರು. ಆ ಚುನಾವಣೆಯಲ್ಲಿ ಶೇ.80-85 ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್‌ ಬೆಂಬಲಿಸಿದರೆಂಬ ಅಂದಾಜಿದೆ. ಕಾಂಗ್ರೆಸ್‌ 135 ಸೀಟುಗಳನ್ನು ಗೆಲ್ಲಲು ಇದು ಪ್ರಮುಖ ಕಾರಣವಾಯಿತು. ಕಾಂಗ್ರೆಸ್ಸಿನ ಶೇಕಡವಾರು ಮತಗಳು 43.2ಕ್ಕೆ ಜಿಗಿಯಿತು.

ಕರ್ನಾಟಕದಲ್ಲಿ 2023ರಲ್ಲಿ 9 ಮಂದಿ ಮುಸ್ಲಿಮರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಎಲ್ಲ ಒಂಬತ್ತು ಮಂದಿಯೂ ಕಾಂಗ್ರೆಸ್ಸಿಗರು. ಕಾಂಗ್ರೆಸ್ 15 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್‌ 21 ಮುಸ್ಲಿಮರಿಗೆ ಟಕೆಟ್‌ ಕೊಟ್ಟಿದ್ದರೂ ಒಬ್ಬರೂ ಗೆಲ್ಲಲಿಲ್ಲ.

Siddaramaiah with muslim leaders (file photo)
ಉಪ ಚುನಾವಣೆ ನಂತರ ಮತ್ತೆ ಮುನ್ನೆಲೆಗೆ ನಾಯಕತ್ವ ಬದಲಾವಣೆ (ನೇರ ನೋಟ)

ಕರ್ನಾಟಕದಲ್ಲಿ ಶೇ.13 ರಿಂದ 15ರಷ್ಟು ಮುಸ್ಲಿಂ ಮತದಾರರು ಇದ್ದಾರೆ ಎಂಬುದು ಅಂದಾಜು. ರಾಜ್ಯದ ಸುಮಾರು 35 ರಿಂದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವರು. ಮುಸ್ಲಿಂ ಸಮುದಾಯದ ಮತಗಳು ವಿಭಜನೆಯಾದಾಗ ಕಾಂಗ್ರೆಸ್‌ ಪರಾಭವಗೊಂಡಿದೆ ಇಲ್ಲವೇ ಅತಂತ್ರ ವಿಧಾನಸಭೆ ರಚನೆಯಾಗಿದೆ.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ 1985, 1994ರ ವಿಧಾನಸಭಾ ಚುನಾವಣೆಗಳಲ್ಲಿ ಜನತಾಪಕ್ಷ, ಜನತಾದಳವನ್ನು ಬೆಂಬಲಿಸಿತ್ತು. ಹೀಗಾಗಿಯೇ ಜನತಾ ಪರಿವಾರ ಅಧಿಕಾರಕ್ಕೇರಲು ‘ಸಾಧ್ಯವಾಗಿತ್ತು. ವಿಧಾನಸಭೆಗೆ 2004 ಹಾಗೂ 2018ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಮುಸ್ಲಿಂ ಮತದಾರರು ವಿಭಜನೆಯಾಗಿದ್ದರು. ಅತಂತ್ರ ವಿಧಾನಸಭೆ ರಚನೆಯಾಯಿತು.

ಮುಸ್ಲಿಂ ಸಮುದಾಯದ ಮುಖಂಡ, ಚುನಾವಣಾ ವಿಶ್ಲೇಷಕ ಅಬ್ದುಲ್‌ ರಜಾಕ್‌ ಖಾನ್‌ ಅವರು, ‘’ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೂ ತಮ್ಮ ಸಮುದಾಯದ ಅಶೋತ್ತರಗಳಿಗೆ ಆ ಪಕ್ಷ ಸ್ಪಂದಿಸುತ್ತಿಲ್ಲ ಎಂಬ ಭಾವನೆ ಮುಸ್ಲಿಮರಲ್ಲಿದೆ. ಮುಸ್ಲಿಮರು ಸದಾ ಕಾಲ ತಮ್ಮನ್ನು ಬೆಂಬಲಿಸುತ್ತಾರೆಂಬ ಧೋರಣೆಯನ್ನು ಕಾಂಗ್ರೆಸ್‌ ಬಿಡಬೇಕು. ಕಾಂಗ್ರೆಸ್‌ ಇದೇ ಧೋರಣೆಯಲ್ಲಿ ಸಾಗಿದರೆ ಮುಂಬರುವ ಚುನಾವಣೆಯಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಪಾಠ ಕಲಿಸಿದರೂ ಆಶ್ಚರ್ಯವಿಲ್ಲ’’ ಎನ್ನುತ್ತಾರೆ. ಚೆಂಡು ಈಗ ಕಾಂಗ್ರೆಸ್‌ ಅಂಗಳದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com