ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ವರ್ಸಸ್‌ ಮಮತಾ ಬ್ಯಾನರ್ಜಿ (ನೇರ ನೋಟ)

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಗ್ಗೆ ಈ ಬಾರಿ ದೇಶದಲ್ಲಿ ಕುತೂಹಲ ಹೆಚ್ಚು. ಇದಕ್ಕೆ ಕಾರಣ ಹತ್ತು ಹಲವು.
mamata banerjee- Narendra Modi
ಮಮತಾ ಬ್ಯಾನರ್ಜಿ- ನರೇಂದ್ರ ಮೋದಿonline desk
Updated on

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಜಿದ್ದಾಜಿದ್ದಿ ಹೋರಾಟ ಇದು. ಕೇಂದ್ರ ಸರಕಾರ ಹಾಗೂ ಪಶ್ಚಿಮ ಬಂಗಾಳ ಸರಕಾರದ ನಡುವಿನ ಸಂಘರ್ಷ. ಬಂಗಾಳವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಜಿದ್ದು ಬಿಜೆಪಿಯದು. ಅದಕ್ಕಾಗಿ ನಾನಾ ಸರ್ಕಸ್ಸು. ಪ್ರಾಣ ಹೋದರೂ ಸರಿಯೇ ಬಂಗಾಳ ಬಿಡೆನು ಎಂಬುದು ಮಮತಾ ಬ್ಯಾನರ್ಜಿ ಸವಾಲು. ಬೀದಿಗಿಳಿದು ಹೋರಾಟ. ಈ ನೇರ ಕಾಳಗದಲ್ಲಿ ಉಳಿದವರಿಗೆ ಜಾಗವೇ ಇಲ್ಲ. ಅದುವೇ ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣಾ ಕಣ.

ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಗ್ಗೆ ಈ ಬಾರಿ ದೇಶದಲ್ಲಿ ಕುತೂಹಲ ಹೆಚ್ಚು. ಇದಕ್ಕೆ ಕಾರಣ ಹತ್ತು ಹಲವು. ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಆಗಿರಬಹುದು, ಮಮತಾ ಬ್ಯಾನರ್ಜಿ ಹೋರಾಟ ಆಗಿರಬಹುದು, ಬಾಂಗ್ಲಾ ನುಸುಳುಕೋರರ ಹಾವಳಿ ಇರಬಹುದು ಹೀಗೆ ಕಾರಣ ಅನೇಕ. ಚುನಾವಣಾ ಕಣ ಅಗ್ನಿಕುಂಡ. ಕದನ ಕುತೂಹಲ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳು. ಏಪ್ರಿಲ್‌ 23 ಹಾಗೂ 29 ರಂದು ಎರಡು ಹಂತಗಳಲ್ಲಿ ಮತದಾನ. ಮತಗಳ ಎಣಿಕೆ ಮೇ 4.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ 294ರಲ್ಲಿ 291 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇನ್ನು ಮೂರು ಕ್ಷೇತ್ರಗಳನ್ನು ಡಾರ್ಜಿಲಿಂಗ್‌ನಲ್ಲಿರುವ ಅನಿತ್‌ ತಾಪ ನೇತೃತ್ವದ ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ ಮೋರ್ಚಾಗೆ ಬಿಟ್ಟುಕೊಟ್ಟಿದೆ. ಬಿಜೆಪಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದೆ. ಕಾಂಗ್ರೆಸ್‌ - ಕಮ್ಯುನಿಸ್ಟ್‌ ಪಕ್ಷಗಳ ಮೈತ್ರಿ ಮುರಿದಿದೆ. ಇಬ್ಬರೂ ಏಕಾಂಗಿ ಸ್ಪರ್ಧಿಗಳು.

ಹೈದರಾಬಾದಿನ ಲೋಕಸಭಾ ಸದಸ್ಯ ಅಸ್ಸಾದುದ್ದೀನ್‌ ಒವೈಸಿ ಅವರ ನೇತೃತ್ವದ ಎಐಎಂಐಎಂ ಪಕ್ಷವು ಅಮ್‌ ಜನತಾ ಉನ್ನಾಯನ್‌ ಪಕ್ಷದ ಜೊತೆ ಸ್ಥಾನ ಹೊಂದಾಣಿಕೆಗೆ ಒಪ್ಪಿತ್ತು. ಆದರೆ, ಅಮ್‌ ಜನತಾ ಉನ್ನಾಯನ್ ಪಕ್ಷದ ಮುಖ್ಯಸ್ಥ, ಭರತ್‌ಪುರ ಕ್ಷೇತ್ರದ ಶಾಸಕ ಹುಮಾಯೂನ್‌ ಕಬೀರ್‌ ಬಿಜೆಪಿಗೆ ಬೆಂಬಲಿಸಲು ವ್ಯಕ್ತಿಯೊಬ್ಬರಿಂದ ಹಣದ ಬೇಡಿಕೆ ಇಟ್ಟಿದ್ದಾರೆನ್ನಲಾದ ಆರೋಪದ ವಿಡಿಯೋ ವೈರಲ್‌ ಆಯಿತು. ಒವೈಸಿ ಅವರು ಕಬೀರ್‌ ಪಕ್ಷದೊಂದಿಗೆ ಮೈತ್ರಿಯಿಂದ ದೂರ ಸರಿದರು. ಇಬ್ಬರೂ ಈಗ ಪ್ರತ್ಯೇಕವಾಗಿ ಸ್ಪರ್ಧಿಗಳು. ಈ ಮೈತ್ರಿ ಸಾಧ್ಯವಾಗಿದ್ದರೆ ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಆಗುತ್ತಿತ್ತು.

ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಒಂದೇ ಕ್ಷೇತ್ರದಲ್ಲಿ ನೇರ ಹಣಾಹಣಿಗೆ ಇಳಿದಿರುವ ಚುನಾವಣೆ ಇದು. ದಕ್ಷಿಣ ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಪಕ್ಷ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಪರಸ್ಪರ ಎದುರಾಳಿಗಳು. ಭವಾನಿಪುರ ಮಮತಾ ಅವರ ತವರು ಕ್ಷೇತ್ರ. ಅಂದ ಹಾಗೇ, ಸುವೇಂದು ಅಧಿಕಾರಿ ತಮ್ಮ ಸ್ವಕ್ಷೇತ್ರ ನಂದಿಗ್ರಾಮದಲ್ಲೂ ಹುರಿಯಾಳು. ಭವಾನಿಪುರದಲ್ಲಿ 2011, 2016, 2021ರಲ್ಲಿ ಮಮತಾ ಹ್ಯಾಟ್ರಿಕ್‌ ಗೆಲುವು.

ಪಶ್ಚಿಮ ಬಂಗಾಳ ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ಸಾಮ್ರಾಜ್ಯ. ರಾಜ್ಯದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆಗೆ ಅಂತ್ಯ ಹಾಡಿ 2011ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದವರು ಮಮತಾ. ನಂತರ 2016 ಹಾಗೂ 2021ರಲ್ಲೂ ಅವರಿಗೇ ಗೆಲುವು. ಆದರೆ, 2021ರ ಚುನಾವಣೆಯಲ್ಲಿ ಅವರ ಪಕ್ಷ ಬಹುಮತ ಪಡೆದರೂ ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಸೋಲು ಕಂಡರು. ನಂತರ ಭವಾನಿಪುರ ಉಪ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರು. ಈಗ ಭವಾನಿಪುರಕ್ಕೂ ಬಂದಿದ್ದಾರೆ ಸುವೇಂದು ಅಧಿಕಾರಿ.

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್‌) ಇಡೀ ದೇಶದಲ್ಲೇ ಸದ್ದು ಮಾಡಿದೆ. ಸುಪ್ರೀಂಕೋರ್ಟ್‌ ಕದ ತಟ್ಟಿದೆ. ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರಕಾರ ಹಾಗೂ ಪಶ್ಚಿಮ ಬಂಗಾಳ ಸರಕಾರದ ನಡುವೆ ಸಂಘರ್ಷಕ್ಕೆ ಎಡೆಮಾಡಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದೆ.

ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಅಂದರೆ ಸುಮಾರು ಶೇ.12ರಷ್ಟು ಮತದಾರರು ಕಡಿಮೆ ಆಗಿದ್ದಾರೆ. ಅಕ್ಟೋಬರ್‌ 2025 ರಲ್ಲಿ 7.66 ಕೋಟಿ ಮತದಾರರಿದ್ದರು. ಈಗ ಈ ಸಂಖ್ಯೆ 6.75 ಕೋಟಿ. ಪಶ್ಚಿಮ ಬಂಗಾಳದಲ್ಲಿ 2021ರ ಅಸೆಂಬ್ಲಿ ಚುನಾವಣೆಯಲ್ಲಿ 7.34 ಕೋಟಿ ಮತದಾರರಿದ್ದರು. ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.27ರಷ್ಟು ಮುಸ್ಲಿಮರಿದ್ದಾರೆ.

ಮತದಾರರ ಪಟ್ಟಿಯಿಂದ ಕೈಬಿಡಲಾದ 90 ಲಕ್ಷ ಜನರ ಪೈಕಿ 57.47 ಲಕ್ಷ (ಶೇ.63) ಹಿಂದೂಗಳು, 31.1 ಲಕ್ಷ ಮುಸ್ಲಿಮರು (ಶೇ.34). ಇದು 2021ರ ವಿಧಾನಸಭಾ ಚುನಾವಣೆಯಲ್ಲಿ 15 ಜಿಲ್ಲೆಗಳಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್‌ ಗೆದ್ದ ಮತಗಳ ಅಂತರಕ್ಕಿಂತಲೂ ಅಧಿಕವಾಗಿದೆ. ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಹಿಂದೂಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಾತೂಸ್‌ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಮೂಲತಃ ಬಾಂಗ್ಲಾದೇಶದಿಂದ ವಲಸೆ ಬಂದವರು. ಸಿಎಎ ಅಡಿಯಲ್ಲಿ ಇವರಿಗೆ ಭಾರತೀಯ ಪೌರತ್ವ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಬಿಜೆಪಿಗೆ ಲಾಭವಾಗುವ ನಿರೀಕ್ಷೆ ಇದೆ.

ತೃಣಮೂಲ ಕಾಂಗ್ರೆಸ್‌ ತನ್ನ ವೋಟು ಬ್ಯಾಂಕ್‌ ರಾಜಕಾರಣಕ್ಕಾಗಿ ಬಾಂಗ್ಲಾ ನುಸುಳುಕೋರರನ್ನು ಬಳಸಿಕೊಂಡು ದೇಶದ ಡೆಮಾಗ್ರಫಿಯನ್ನೇ ಬದಲಿಸಲು ಹೊರಟಿದೆ ಎಂಬುದು ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪ. ನುಸುಳುಕೋರರ ಹಾವಳಿ ಮುಂದುವರಿದರೆ ಬಂಗಾಳದಲ್ಲಿ ಬಂಗಾಳಿಗಳು ತಮ್ಮ ಐಡೆಂಟಿಟಿಯನ್ನೇ ಕಳೆದುಕೊಳ್ಳುತ್ತಾರೆ ಎಂಬುದು ಅವರ ಎಚ್ಚರಿಕೆ.

ಪಶ್ಚಿಮ ಬಂಗಾಳ ಇಡೀ ದೇಶದಲ್ಲೇ ನುಸುಳುಕೋರರಿಗೆ ಕಾರಿಡಾರ್ ಆಗಿದೆ. ನಾವು ಅಧಿಕಾರಕ್ಕೆ ಬಂದ 45 ದಿನಗಳಲ್ಲಿ ಬಾಂಗ್ಲಾದೇಶದ ಗಡಿ ಉದ್ದಕ್ಕೂ ಬೇಲಿ ನಿರ್ಮಿಸಲು ಕೇಂದ್ರ ಸರಕಾರಕ್ಕೆ ಜಾಗ ಕೊಡುತ್ತೇವೆ. ನುಸುಳುಕೋರರನ್ನು ಹೊರ ದಬ್ಬುತ್ತೇವೆ. ಮಮತಾ ಬ್ಯಾನರ್ಜಿ ಅವರಿಗೆ ಇದು ಸಾಧ್ಯವೇ ಎಂಬುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಶ್ನೆ. ಚುನಾವಣಾ ಪ್ರಚಾರದಲ್ಲಿ ಬಾಂಗ್ಲಾ ನುಸುಳುಕೋರರ ಹಾವಳಿಯೇ ಪ್ರಮುಖ ಸಂಗತಿ.

mamata banerjee- Narendra Modi
ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ನೇರ ಸೆಣಸಾಟ ಮುಂದುವರಿಯಲಿದೆಯೇ? ತೃತೀಯ ಶಕ್ತಿ ಉದಯಿಸುತ್ತದೆಯೇ? (ನೇರ ನೋಟ)

ಮಮತಾ ಬ್ಯಾನರ್ಜಿ ಅವರಿಗೆ ಅವರ ಸರಕಾರದ ಕಲ್ಯಾಣ ಕಾರ್ಯಕ್ರಮಗಳೇ ಶಕ್ತಿ. ಕನ್ಯಾಶ್ರೀ (ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು), ಸಬೂಜ್‌ ಸಾಥಿ (ವಿದ್ಯಾರ್ಥಿಗಳಿಗೆ ಸೈಕಲ್), ಲಕ್ಷ್ಮೀ ಭಂಡಾರ್‌ ( ಸ್ತ್ರೀಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು), ಸ್ವಸ್ಥ್ಯ ಸಾಥಿ, ಯುವ ಸಾಥಿ ಇವು ತೃಣಮೂಲ ಕಾಂಗ್ರೆಸ್‌ ಸರಕಾರದ ಜನಪ್ರಿಯ ಕಾರ್ಯಕ್ರಮಗಳು.

ಮಮತಾ ಬ್ಯಾನರ್ಜಿ ಮಾಸ್‌ ಲೀಡರ್‌. ಬೇರುಮಟ್ಟದ ನಾಯಕಿ. ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ಬೀದಿಯಲ್ಲಿ ನಿಂತು ಸಮರ ಸಾರುವ ಸ್ಟ್ರೀಟ್‌ ಫೈಟರ್‌. ಪಶ್ಚಿಮ ಬಂಗಾಳದ ಅಗ್ನಿಕನ್ಯೆ. ರಾಜ್ಯಪಾಲರು, ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳನ್ನು ಎದುರಿಸಿ ನಿಂತಿದ್ದಾರೆ. ಬೂತ್‌ ಮಟ್ಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಘಟನೆ ಅವರಿಗೆ ಅನುಕೂಲಕರ.

ಮಮತಾ ಅವರ ಸರಕಾರದ ಬಗ್ಗೆ ಋಣಾತ್ಮಕ ಅಂಶಗಳೂ ಇವೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲ, ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿನ್ನಡೆ ಮಮತಾ ಸರಕಾರವನ್ನು ಕಾಡಿದೆ.

ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರು ಹಾಗೂ ನಿರುದ್ಯೋಗಿ ಯುವಕರಿಗೆ ತೃಣಮೂಲ ಕಾಂಗ್ರೆಸ್‌ ಸರಕಾರ ನೀಡುವುದಕ್ಕಿಂತಲೂ ದುಪ್ಪಟ್ಟು ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯ ಮಾತು ಕೊಟ್ಟಿದೆ. ಆದರೆ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿಲ್ಲ. ಮಮತಾ ಬ್ಯಾನರ್ಜಿ ಅವರಿಗೆ ಸರಿಸಮಾನವಾಗಿ ವರ್ಚಸ್ಸಿರುವ ನಾಯಕ ಬಿಜೆಪಿಯಲ್ಲಿ ಇಲ್ಲ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ 294 ಕ್ಷೇತ್ರಗಳಲ್ಲೂ ತಾವೇ ಸ್ಪರ್ಧಿಸಿರುವುದಾಗಿ ಭಾವಿಸಿ ಮತ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತ ಮಮತಾ ಬ್ಯಾನರ್ಜಿ ಅವರೂ ಎಲ್ಲ ಕ್ಷೇತ್ರಗಳಲ್ಲೂ ತಾವೇ ಅಭ್ಯರ್ಥಿ ಎಂದು ತಿಳಿದು ಮತ ಕೊಡುವಂತೆ ಕೋರಿದ್ದಾರೆ. ಇಡೀ ಚುನಾವಣಾ ಕಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ಮುಖಾಮುಖಿ ಕದನ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ಕುರಿತು ‘ದೀದಿ ಓ ದೀದಿ’ ಎಂದು ಲೇವಡಿ ಮಾಡಿದ್ದರು. ಇದು ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿತ್ತು. ಈ ಬಾರಿ ಬಿಜೆಪಿ ನಾಯಕರು ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸುತ್ತಿಲ್ಲ. ಎಚ್ಚರಿಕೆ ಹೆಜ್ಜೆ ಇರಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ ಈ ಹಿಂದಿನ ಚುನಾವಣೆಯನ್ನು ಹೊರಗಿನವರು ಮತ್ತು ಸ್ಥಳೀಯರ ನಡುವಿನ ಹೋರಾಟವೆಂದು ಬಿಂಬಿಸಿತ್ತು. ಈ ಬಾರಿ ಬಿಜೆಪಿ ಸ್ಥಳೀಯ ನಾಯಕರು ಮುಂಚೂಣಿಯಲ್ಲಿ ಇರುವಂತೆ ನೋಡಿಕೊಂಡಿದೆ.

ಮಮತಾ ಬ್ಯಾನರ್ಜಿ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಅವರ ಸ್ಲೋಗನ್‌ ಮಾ (ತಾಯಿ), ಮಾಟಿ (ತಾಯಿನಾಡು), ಮಾನುಷ್‌ (ಜನರು). ಬಂಗಾಳಿ ಅಸ್ಮಿತೆ ತೃಣಮೂಲ ಕಾಂಗ್ರೆಸ್ಸಿನ ಟ್ರಂಪ್‌ ಕಾರ್ಡ್‌. ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಎಚ್ಚೆತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್‌’ ಎನ್ನುತ್ತಿದ್ದರು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ ಮಾ ಕಾಳಿ’, ‘ಜೈ ಮಾ ದುರ್ಗ’ ಎಂದು ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಇದು ಬಿಜೆಪಿ ಬಂಗಾಳದ ಸಂಸ್ಕೃತಿಯೊಂದಿಗೆ ಬೆರೆತಿದೆ ಎಂಬುದನ್ನು ಬಿಂಬಿಸುವ ಪ್ರಯತ್ನ.

ಪಶ್ಚಿಮ ಬಂಗಾಳದಲ್ಲಿ 2016ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 211 (ಶೇ.45.6 ಮತಗಳಿಕೆ ಪ್ರಮಾಣ), ಕಾಂಗ್ರೆಸ್‌ 44 (ಶೇ.12.4), ಸಿಪಿಐ (ಎಂ) 26 (ಶೇ.20.1), ಬಿಜೆಪಿ 3 (10.3) ಸ್ಥಾನಗಳನ್ನು ಪಡೆದಿತ್ತು. ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 213 (ಶೇ.48.5 ಮತಗಳು), ಬಿಜೆಪಿ 77 (ಶೇ.38.5 ಮತಗಳು) ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಬಿಜೆಪಿ ಅಂಗ (ಅಸ್ಸಾಂ), ಕಳಿಂಗ (ಒಡಿಸ್ಸಾ) ಗೆದ್ದಾಯಿತು. ಈಗ ಬಂಗ (ಪಶ್ಚಿಮ ಬಂಗಾಳ) ಗೆಲ್ಲಲು ಹೊರಟಿದೆ. ಆದರೆ, ಇದು ಅಷ್ಟು ಸುಲಭವಲ್ಲ. ಪಶ್ಚಿಮ ಬಂಗಾಳದಲ್ಲಿ ಮೇ 4 ರಂದು ಯಾವ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದಷ್ಟೇ ಗೊತ್ತಾಗುವುದಿಲ್ಲ. ಬಂಗಾಳದ ರಾಜಕಾರಣದ ದಿಕ್ಕು ಎತ್ತ ಸಾಗುತ್ತದೆ ಎಂಬುದೂ ನಿರ್ಧಾರ ಆಗುತ್ತದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com