

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಸುಮಾರು ಹನ್ನೊಂದು ವರ್ಷಗಳ ಹಿಂದೆಯೇ ಆ ಮಾತು ಹೇಳಿದ್ದರು. “ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಸರ್ವಾಧಿಕಾರಿ ಧೋರಣೆಯವರು. ಇದರಿಂದಾಗಿಯೇ ಪಕ್ಷದಲ್ಲಿ ಒಡಕು’’. ಈ ಮಾತು ಮೇಲಿಂದ ಮೇಲೆ ನಿಜವಾಗುತ್ತಲೇ ಬಂದಿದೆ. ಆಪ್‌ನಿಂದ ಕಾಲಕಾಲಕ್ಕೆ ನಿರ್ಗಮಿಸಿದವರು ಅದೆಷ್ಟೋ ನಾಯಕರು. ಪಕ್ಷದಿಂದ ಉಚ್ಛಾಟನೆಯಾದವರು ಕೆಲವು ಚಿಂತಕರು. ಹುಟ್ಟಿದಾರಭ್ಯದಿಂದಲೂ ಆಪ್‌ನಲ್ಲಿ ಬಿಕ್ಕಟ್ಟಿನ ಪರ್ವವೇ. ಪಕ್ಷದಲ್ಲಿ ನೇತಾರರಾಗಿ ಹೊರಹೊಮ್ಮಿದವರಿಗಿಂತ ಹೊರ ನಡೆದ ನಾಯಕರೇ ಅಧಿಕ. ಅವರೆಲ್ಲರೂ ಪ್ರಮುಖವಾಗಿ ಗುರಿ ಮಾಡಿರುವುದು ಒಬ್ಬರನ್ನೇ. ಅವರು ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.
“ಅರವಿಂದ ಕೇಜ್ರಿವಾಲ್ ಅವರಿಗೆ ಸರ್ವಾಧಿಕಾರಿ ಮನಸ್ಥಿತಿ ಇದೆ. ಅವರ ಮುಂದೆ ಬೇರೊಬ್ಬರು ನಿಲ್ಲಬಾರದು. ಅಣ್ಣಾ ಹಜಾರೆ ಆಂದೋಲನದಲ್ಲೇ ಇದನ್ನು ಗಮನಿಸಿದ್ದೆ ಅಂದಿದ್ದರು’’ ಸ್ವಾಮಿ ಅಗ್ನಿವೇಶ್. ಪಕ್ಷದಿಂದ ಕಾಲಕಾಲಕ್ಕೆ ಹೊರ ನಡೆದವರು ಇವತ್ತಿನವರೆಗೂ ಹೇಳುತ್ತಿರುವ ಮಾತು ಅದೇ. ಅರವಿಂದ ಕೇಜ್ರಿವಾಲರಿಗೆ ಅವರ ಆಣತಿಯೇ ಕೊನೆ. ಏಕಚಕ್ರಾಧಿಪತ್ಯದ ಮನಸ್ಥಿತಿ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕ್ರಾಂತಿ ಆಗಬೇಕೆಂದರೆ ತ್ಯಾಗ ಇರಲೇಬೇಕು ಅಂದಿದ್ದವರು ಅರವಿಂದ ಕೇಜ್ರಿವಾಲ್. ಆದರೆ, ಪಕ್ಷದಲ್ಲಿ ಸಾಮೂಹಿಕ ನಾಯಕತ್ವದ ವಿಚಾರದಲ್ಲಿ ಅವರಲ್ಲಿಯೇ ಆ ತ್ಯಾಗ ಇರಲಿಲ್ಲ. ಅದುವೇ ವಿಪರ್ಯಾಸ. ಪಕ್ಷದ ಅವನತಿಗೂ ಹಾದಿ.
ಆಪ್ ಈಗ ಮತ್ತೆ ಸುದ್ದಿಯಲ್ಲಿದೆ. ರಾಜ್ಯಸಭೆಯಲ್ಲಿ ಆಪ್ ಉಪ ನಾಯಕ ರಾಘವ ಛಡ್ಡಾ ಸೇರಿದಂತೆ ಏಳು ಸದಸ್ಯರ ಬಿಜೆಪಿ ಸೇರ್ಪಡೆ ಆ ಪಕ್ಷಕ್ಕೆ ಭಾರಿ ಹೊಡೆತ. ಈ ಸದಸ್ಯರು ಅರವಿಂದ ಕೇಜ್ರಿವಾಲ್ ನಡೆಯಿಂದ ಬೇಸತ್ತಿದ್ದವರು. ಇದು ಆಪ್ ದೃಷ್ಟಿಯಲ್ಲಿ ಆಪರೇಷನ್ ಕಮಲ ಇರಬಹುದು. ಆದರೆ, ಪಕ್ಷದಲ್ಲಿ ಅರವಿಂದ ಕೇಜ್ರಿವಾಲ್ ಅವರ ಯಜಮಾನಿಕೆಯ ಧೋರಣೆಯ ಪರಿಣಾಮವೂ ಹೌದು. ರಾಘವ ಛಡ್ಡಾ ಹಾಗೂ ಇತರ ಆರು ಸದಸ್ಯರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರೆ ಅದು ನೈತಿಕ ನಡೆ ಆಗಿರುತ್ತಿತ್ತು.
ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾದ ರಾಘವ ಛಡ್ಡಾ ಆಪ್ ಆರಂಭದ ದಿನಗಳಿಂದಲೂ ಪಕ್ಷ ಕಟ್ಟಿದವರು. ಕೇಜ್ರಿವಾಲ್ ಅವರಿಗೆ ನಿಕಟವರ್ತಿ ಆಗಿದ್ದವರು. ಆಪ್ ತೊರೆದ ಮತ್ತೊಬ್ಬ ಸಂಸದ ಸಂದೀಪ್ ಪಾಠಕ್. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದವರು. ಪಂಜಾಬ್ ನಲ್ಲಿ 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಘವ ಛಡ್ಡಾ ಹಾಗೂ ಸಂದೀಪ್ ಪಾಠಕ್ ಕಾರ್ಯತಂತ್ರ ರೂಪಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದವರು. ನಂತರ ಈ ಇಬ್ಬರನ್ನೂ ಆಪ್ ರಾಜ್ಯಸಭಾ ಸದಸ್ಯರನ್ನಾಗಿಸಿತ್ತು.
ಪಂಜಾಬ್‌ನಲ್ಲಿ ಮುಂದಿನ ವರ್ಷ ಅಸೆಂಬ್ಲಿ ಎಲೆಕ್ಷನ್. ರಾಘವ ಛಡ್ಡಾ ಹಾಗೂ ಸಂದೀಪ್ ಪಾಠಕ್ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಗೆಲುವಿಗೆ ಈಗಲೇ ರಣತಂತ್ರ ಹೂಡುತ್ತಿದೆ. ಈ ಬೆಳವಣಿಗೆ ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ವಲಸೆ ಆರಂಭವಾಗಲಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದೆ. ಆಪ್ ಶಾಸಕಾಂಗ ಪಕ್ಷ ಒಡಕಿನತ್ತ ಸಾಗುವ ಆತಂಕ ಆ ಪಕ್ಷದ ನಾಯಕರನ್ನು ಕಾಡಿದೆ. ಲೋಕಸಭೆಯಲ್ಲಿ ಆಪ್‌ನ ಮೂವರು ಸದಸ್ಯರಿದ್ದಾರೆ. ಈ ಮೂವರು ಪಂಜಾಬಿನವರು ಎಂಬುದು ಗಮನಾರ್ಹ. ಪಂಜಾಬ್ ವಿಧಾನಸಭೆಯಲ್ಲಿ ಬಿಜೆಪಿ ಕಳೆದ ಬಾರಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳನ್ನು ಮಾತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯದು ಇಲ್ಲಿ ಶೂನ್ಯ ಸಂಪಾದನೆ.
ಭಾರತದ ರಾಜಕಾರಣದಲ್ಲಿ ಆಮ್ ಆದ್ಮಿಯದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಏಳುಬೀಳುವಿನ ಇತಿಹಾಸ. ಆ ಪಕ್ಷದ ನಾಯಕರು ಹುಟ್ಟಿಸಿದ ಭರವಸೆ, ವಿಶ್ವಾಸ ಅಷ್ಟೇ ಬೇಗ ಹುಸಿಗೊಳಿಸಿದ್ದೂ ವಾಸ್ತವ. ಆಮ್ ಆದ್ಮಿ ಪಕ್ಷದ ಚಿಹ್ನೆ ಪೊರಕೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದ ಪಕ್ಷದ ನಾಯಕರ ಕೊರಳಿಗೇ ಭ್ರಷ್ಟಾಚಾರದ ಆರೋಪಗಳು ಸುತ್ತಿಕೊಂಡು ಜೈಲಿಗೆ ಹೋಗಿದ್ದು ವಿಪರ್ಯಾಸ.
ಕೇಂದ್ರದಲ್ಲಿ ಅಂದು ಡಾ.ಮನಮೋಹನಸಿಂಗ್ ನೇತೃತ್ವದ ಸರಕಾರ. 2011-12ನೇ ಇಸವಿ. ಜನಲೋಕಪಾಲ್ ಕಾಯ್ದೆ ಜಾರಿಗೆ ಆಗ್ರಹಿಸಿ ನಡೆದ ಚಳವಳಿಯೇ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನ. ಆಮ್ ಆದ್ಮಿ ಈ ಆಂದೋಲನದ ಮೂಸೆಯಿಂದ ಉದಯಿಸಿದ ಪಕ್ಷ. ಅದು 26 ನವೆಂಬರ್ 2012 ರಂದು. ಅಣ್ಣಾ ಹಜಾರೆ ರಾಜಕೀಯ ಪಕ್ಷ ಹುಟ್ಟು ಹಾಕುವುದನ್ನೇ ಬಲವಾಗಿ ವಿರೋಧಿಸಿದ್ದರು. ಆದರೆ, ಅವರ ಮಾತಿಗೆ ಅರವಿಂದ ಕೇಜ್ರಿವಾಲ್ ಹಾಗೂ ಸಂಗಡಿಗರು ಕಿಮ್ಮತ್ತು ಕೊಡಲಿಲ್ಲ. ಅಣ್ಣಾ ದೂರ ಉಳಿದರು. ಇಂಡಿಯಾ ಎಗೆನೆಸ್ಟ್ ಕರೆಪ್ಶನ್ ಚಳವಳಿಯ ವಿಶ್ವಾಸಾರ್ಹತೆ ಆಪ್‌ಗೆ ದಕ್ಕಿತು.
ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಆಪ್ 2013, 2015, 2020ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಬೀಗಿತು. ಪಂಜಾಬ್ ವಿಧಾನಸಭೆಗೆ 2022ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಸಾಧಿಸಿ ಅಧಿಕಾರಕ್ಕೆ ಏರಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತಿಗೂ ಪ್ರವೇಶಿಸಿ 2022ರ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದುಕೊಂಡಿತು. ಗೋವಾದಲ್ಲೂ ಹೆಜ್ಜೆ ಗುರುತುಗಳನ್ನು ಮೂಡಿಸಿತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಶಕ್ತಿ ಎಂಬ ಚರ್ಚೆಗಳು ಆರಂಭವಾದವು. ಆಗ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ತಮ್ಮನ್ನು ಕಟ್ಟರ್ ಇಮಾನ್‌ದಾರ್ (ಅತ್ಯಂತ ಪ್ರಾಮಾಣಿಕ) ಅಂತ ಕರೆದುಕೊಂಡರು. ಅರವಿಂದ ಕೇಜ್ರಿವಾಲ್ ಐಐಟಿ ಖರಗಪುರ ಪದವೀಧರರು. ಇಂಡಿಯನ್ ರೆವಿನ್ಯೂ ಸರ್ವಿಸ್‌ನಲ್ಲಿ ಅಧಿಕಾರಿಯಾಗಿದ್ದವರು.
ಕ್ರಾಂತಿ, ಪರ್ಯಾಯ ರಾಜಕಾರಣ, ಪೊಲಿಟಿಕಲ್ ಸ್ಟಾರ್ಟ್‌ಅಪ್ - ಹೀಗೆ ಆಮ್ ಆದ್ಮಿ ವಿಚಾರದಲ್ಲಿ ಕರೆದಿದ್ದು ತರಹೇವಾರಿ. ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಹತ್ತು ವರ್ಷಗಳ ಹಿಂದೆ ಈ ಮಾತುಗಳ ಪ್ರತಿಧ್ವನಿ. ದೇಶದ ರಾಜಕಾರಣ ಒಂದಲ್ಲ ಒಂದು ದಿನ ಬದಲಾಗಬಹುದೆಂದು ಕನಸು ಕಂಡರು ಆಪ್ ಬೆಂಬಲಿಗರು. ವಿವಿಧ ವೃತ್ತಿಪರರು ರಾಜಕೀಯ ಪ್ರವೇಶಿಸಿ ಅಧಿಕಾರಕ್ಕೆ ಏರಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು ಎಂದು ಭರವಸೆ ಹೊತ್ತರು. ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಶೈಲಿಯನ್ನು ನೋಡಿ ಬೇಸತ್ತಿದ್ದರು. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಪ್‌ಗೆ ಅಧಿಕಾರ ಕೊಟ್ಟರು.
ಆಮ್ ಆದ್ಮಿ ಪ್ರಾರಂಭದ ದಿನಗಳಲ್ಲಿ ಅರವಿಂದ ಕೇಜ್ರಿವಾಲ್, ಯೋಗೇಂದ್ರ ಯಾದವ್, ಪ್ರಶಾಂತ ಭೂಷಣ್, ಕುಮಾರ ವಿಶ್ವಾಸ್ ಅವರಂಥವರ ಸಾಮೂಹಿಕ ನಾಯಕತ್ವದಲ್ಲೇ ಸಾಗಿತು. ಕೇಜ್ರಿವಾಲ್ ಜನನಾಯಕರಾಗಿ ರೂಪುಗೊಂಡರು. ನಿಧಾನವಾಗಿ ಇತರ ನಾಯಕರನ್ನು ಬದಿಗೆ ಸರಿಸಿದರು. ಆಪ್ ಸರಕಾರ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇವೆಗಳಲ್ಲಿ ಫ್ರೀ ಬಿ ಗಳನ್ನು ನೀಡಿ ಜನಪ್ರಿಯತೆ ಗಳಿಸಿತು. ಸರ್ಕಾರಿ ಶಾಲೆಗಳ ಸುಧಾರಣೆ, ಮೊಹಲ್ಲಾ ಕ್ಲಿನಿಕ್, ಉಚಿತ ವಿದ್ಯುತ್ ಯೋಜನೆ ಆಮ್ ಆದ್ಮಿ ಸರಕಾರದ ಟ್ರಂಪ್ ಕಾರ್ಡ್ ಆಯಿತು. ಪಕ್ಷದಲ್ಲಿ ಸರ್ವೋಚ್ಛ ನಾಯಕರಾಗಬೇಕೆಂದು ಕೇಜ್ರಿವಾಲ್ ಹೊರಟರು. ಪಕ್ಷದ ನೆಲೆ ವಿಸ್ತರಿಸಿದರು. ರಾಷ್ಟ್ರ ರಾಜಕಾರಣಕ್ಕೂ ಧುಮುಕಿದರು. ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡರು.
ಕೇಂದ್ರದ ಎನ್‌ಡಿಎ ಸರಕಾರದ ಜೊತೆ ಸಂಘರ್ಷ
ಆಪ್ ಸಚಿವರು ಪ್ರಾರಂಭದಲ್ಲಿ ವಿಐಪಿ ಸಂಸ್ಕೃತಿ ವಿರೋಧಿಸಿದರು. ಆಗ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಪ್ ಸಚಿವರು ಸರಳತೆಗೆ ಹೆಸರಾದರು. ದೆಹಲಿಯಲ್ಲಿ ಬಹಳ ಬೇಗ ಮಧ್ಯಮ, ಕೆಳ ಮಧ್ಯಮ ವರ್ಗದವರ ವಿಶ್ವಾಸ ಗಿಟ್ಟಿಸಿದರು. ಆದರೆ, ನಂತರದ ತಮ್ಮ ಧೋರಣೆ, ನಿಲುವು, ವಿವಾದ, ಹಗರಣಗಳಿಂದಾಗಿ ಈ ವಿಶ್ವಾಸ ಕಾಪಾಡಿಕೊಳ್ಳಲು ವಿಫಲರಾದರು.
ದೆಹಲಿಯ ಶೀಶ್ ಮಹಲ್ ಬಂಗ್ಲೆಯನ್ನು ತಮ್ಮ ವಾಸಕ್ಕೆ ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸುವ ವಿಚಾರದಲ್ಲಿ ಕೇಜ್ರಿವಾಲ್ ವಿಐಪಿ ಸಂಸ್ಕೃತಿಗೆ ಮಾರು ಹೋದರು. ಇದು ವ್ಯಾಪಕ ಟೀಕೆಗೆ ಗುರಿಯಾಯಿತು. ತಮ್ಮ ಐಷಾರಾಮಿ ಜೀವನಕ್ಕಾಗಿ ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡುತ್ತಿದ್ದಾರೆಂಬ ಆರೋಪಕ್ಕೆ ಕೇಜ್ರಿವಾಲ್ ಕಿವುಡಾದರು. ಸರಕಾರದ ಮದ್ಯನೀತಿ ಹಗರಣವಾಯಿತು. ಕೇಜ್ರಿವಾಲ್ ಅವರೇ ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಲುಕಿ ಜೈಲಿಗೆ ಹೋದರು. ಮುಖ್ಯಮಂತ್ರಿಯಾಗಿ ಜೈಲಿನಿಂದಲೇ ಅಧಿಕಾರ ನಡೆಸಿ ಕಟುಟೀಕೆ ಎದುರಿಸಿದರು. ಮದ್ಯನೀತಿ ಹಗರಣದಲ್ಲಿ ನ್ಯಾಯಾಲಯ ಅರವಿಂದ ಕೇಜ್ರಿವಾಲ್ ಹಾಗೂ ಇತರರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಶೀಶ್ ಮಹಲ್ ಬಂಗ್ಲೆ ನವೀಕರಣ ಹಾಗೂ ಮದ್ಯನೀತಿ ಹಗರಣ ಕೇಜ್ರಿವಾಲ್ ಅವರ ವರ್ಚಸ್ಸಿಗೆ ಭಾರಿ ಪೆಟ್ಟು ನೀಡಿತು. ದೆಹಲಿ ವಿಧಾನಸಭೆಗೆ 2025ರಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲು ಕಂಡಿತು. ಸ್ವತಃ ಅರವಿಂದ ಕೇಜ್ರಿವಾಲ್ ಪರಾಭವಗೊಂಡರು. ಬಿಜೆಪಿ 26 ವರ್ಷಗಳ ನಂತರ ದೆಹಲಿ ಕೋಟೆಯನ್ನು ಗೆದ್ದುಕೊಂಡಿತ್ತು.
ದೆಹಲಿಯ 2025ರ ಅಸೆಂಬ್ಲಿ ಚುನಾವಣೆಯಲ್ಲಿ ಆಪ್ ಸೋತ ನಂತರ ಆಪ್ ಸಂಸ್ಥಾಪಕರಲ್ಲಿ ಒಬ್ಬರಾದ ಪ್ರಶಾಂತ ಭೂಷಣ್ ಅವರು ಹೇಳಿದ್ದು- “ಆಪ್ ಅಂತ್ಯ ಆರಂಭವಾಗಿದೆ’’. ನಿಜ. ಆಮ್ ಆದ್ಮಿಗೆ ಈಗ ಬಿಕ್ಕಟ್ಟಿನ ದಿನಗಳು. ಅರವಿಂದ ಕೇಜ್ರಿವಾಲ್ ಕೇಂದ್ರೀತವಾಗಿಯೇ ಪಕ್ಷ ನಡೆದಿದ್ದರಿಂದ ಇವತ್ತು ಅದಕ್ಕೆ ಬೆಲೆ ತೆತ್ತಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement