ಆಗಸದಲ್ಲೊಂದು ಸ್ಪರ್ಧೆ: ಆ್ಯಂಟೊನೊವ್ ಎಎನ್-32 ವಿಮಾನಕ್ಕೆ ಪರ್ಯಾಯ ಯಾವುದು?

ಆಗಸದಲ್ಲೊಂದು ಸ್ಪರ್ಧೆ: ಆ್ಯಂಟೊನೊವ್ ಎಎನ್-32 ವಿಮಾನಕ್ಕೆ ಪರ್ಯಾಯ ಯಾವುದು?
Updated on

ಭಾರತ ಸರ್ಕಾರ ದೇಶದ ಇತಿಹಾಸದಲ್ಲೇ ಅತಿದೊಡ್ಡ ರಕ್ಷಣಾ ಖರೀದಿ ನಡೆಸಲು ಮುಂದಾಗಿದೆ. 60 ಬಹುಪಾತ್ರಗಳ ವಿಮಾನಗಳ ಖರೀದಿಗೆ ಈಗಾಗಲೇ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಮುಕ್ತಗೊಳಿಸಲಾಗಿದೆ. ಈ ವಿಮಾನಗಳು ಭಾರತೀಯ ವಾಯು ಸೇನೆಯ ಸಾಗಾಣಿಕಾ ವಿಮಾನ ಬಳಗವನ್ನು ಆಧುನೀಕರಿಸಲಿವೆ. ಈ ಗುತ್ತಿಗೆಯನ್ನು ವಿಶೇಷವಾಗಿಸುವ ವಿಚಾರವೆಂದರೆ, ಈ ಗುತ್ತಿಗೆ ಕೇವಲ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್ಎಎಲ್) ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಖಾಸಗಿ ಭಾರತೀಯ ಕಂಪನಿಗಳಿಗೂ ಇದು ಮುಕ್ತವಾಗಿದೆ. ಈ ಮೂಲಕ ಭಾರತ ಇಂತಹ ವಿಮಾನಗಳನ್ನು ದೇಶದೊಳಗೇ ನಿರ್ಮಿಸಿ, ನಮ್ಮ ಯುದ್ಧತಂತ್ರ ಮತ್ತು ಕಾರ್ಯತಂತ್ರದ ಏರ್‌ಲಿಫ್ಟ್ ಸಾಮರ್ಥ್ಯವನ್ನು ಮುಂದಿನ ಹಲವಾರು ದಶಕಗಳ ಕಾಲ ಬಲಪಡಿಸಲು ಸಾಧ್ಯವಾಗುತ್ತದೆ.

ಈ ವಿಮಾನದ ಅವಶ್ಯಕತೆ ಏನೆಂದು ಅರ್ಥ ಮಾಡಿಕೊಳ್ಳಲು ನಾವು ಆ್ಯಂಟೊನೊವ್ ಎಎನ್-32 ವಿಮಾನದತ್ತ ಗಮನ ಹರಿಸಬೇಕು. ಬಹುತೇಕ 40 ವರ್ಷಗಳ ಕಾಲ ಈ ರಷ್ಯನ್ ಮೂಲದ ವಿಮಾನ ಭಾರತೀಯ ವಾಯುಸೇನೆಯ ಮಧ್ಯಮ ಗಾತ್ರದ ಸಾಗಾಣಿಕಾ ಕೆಲಸಗಳ ಬೆನ್ನೆಲುಬಾಗಿತ್ತು. 1984ರ ಬಳಿಕ, ಅಂದಾಜು 125ಕ್ಕೂ ಹೆಚ್ಚು ಇಂತಹ ವಿಮಾನಗಳು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿದ್ದು, ಪ್ರತಿಯೊಂದು ವಿಮಾನವೂ ತಲಾ ಆರರಿಂದ ಏಳು ಟನ್‌ಗಳಷ್ಟು ತೂಕವನ್ನು ಹೊತ್ತು ಸಾಗಬಲ್ಲದು. ಈ ವಿಮಾನಗಳು ತಮಗೆ ನೀಡಿದ ಬಹುತೇಕ ಎಲ್ಲ ಕೆಲಸಗಳನ್ನೂ ಮಾಡುತ್ತಾ ಬಂದಿವೆ: ಯೋಧರನ್ನು ಸಾಗಿಸುವುದು, ಪ್ಯಾರಾಶೂಟ್ ಮೂಲಕ ಸರಕುಗಳನ್ನು ಪೂರೈಸುವುದು, ಗಾಯಗೊಂಡವರನ್ನು ಸ್ಥಳಾಂತರಿಸುವುದು, ಪ್ರವಾಹ ಮತ್ತು ಭೂಕಂಪಗಳ ಸಂದರ್ಭದಲ್ಲಿ ನೆರವಾಗುವುದು, ದೈನಂದಿನ ಪೂರೈಕೆಗಳನ್ನು ಒದಗಿಸುವುದು, ಮತ್ತು ವಿಶೇಷ ಯೋಜನೆಗಳಿಗೆ ನೆರವು ನೀಡುವುದು, ಎಲ್ಲವನ್ನೂ ನಿರ್ವಹಿಸಿವೆ. ಲಡಾಖಿನ ಮುಂಚೂಣಿ ಪೋಸ್ಟ್‌ಗಳಿರುವ ಅತ್ಯಂತ ಎತ್ತರದಲ್ಲೂ ಇವು ಪೂರೈಕೆ ನಡೆಸಿವೆ. ಸಿಯಾಚಿನ್ ಪ್ರದೇಶದಲ್ಲಿ ಈ ವಿಮಾನಗಳು ಜೀವ ಉಳಿಸುವಂತಹ ಏರ್‌ ಡ್ರಾಪ್ ನಡೆಸಿವೆ. ಇನ್ನು ಈಶಾನ್ಯ ಭಾರತದಲ್ಲಿ ಸರಿಯಾದ ರಸ್ತೆ ವ್ಯವಸ್ಥೆಗಳು ಲಭ್ಯವಿಲ್ಲದ 1980, 1990 ಮತ್ತು 2000ನೇ ದಶಕದ ಆರಂಭದ ಕಾಲಘಟ್ಟದಲ್ಲಿ ಈ ವಿಮಾನಗಳು ದುರ್ಗಮ ಡ್ರಾಪ್ ಪ್ರದೇಶಗಳು ಮತ್ತು ಸಣ್ಣದಾದ ಲ್ಯಾಂಡಿಂಗ್ ಪ್ರದೇಶಗಳನ್ನು ಬಳಸಿ ಕಾರ್ಯಾಚರಿಸುತ್ತಿದ್ದವು. ಈ ವಿಮಾನಗಳು ಅತ್ಯುತ್ತಮ ಸೇವೆ ಸಲ್ಲಿಸಿದ್ದವು. ಆದರೆ, ವಯಸ್ಸು ಯಾರನ್ನೂ ಬಿಡುವುದಿಲ್ಲವಲ್ಲ? ಈ ವಿಮಾನದ ಒಳಗಿನ ಉಪಕರಣಗಳು ಈಗ ಹಳೆಯ ಕಾಲದವಾಗಿದ್ದು, ಇದರ ಭಾರ ಎತ್ತುವ ಸಾಮರ್ಥ್ಯ ಕುಂಠಿತಗೊಂಡಿದೆ. ಇವುಗಳ ನಿರ್ವಹಣೆ ನಡೆಸುವುದು ಈಗ ದೈನಂದಿನ ತಲೆನೋವಾಗಿದೆ.

ಭಾರತ ಈ ವಿಮಾನಗಳ ಆಯುಷ್ಯವನ್ನು ಹೆಚ್ಚಿಸಲು ಒಂದಷ್ಟು ಪ್ರಯತ್ನಗಳನ್ನು ನಡೆಸಿದೆ. 2009ರಲ್ಲಿ ಎಎನ್-32 ವಿಮಾನಗಳ ಮೂಲ ಉತ್ಪಾದಕನಾದ ಉಕ್ರೇನ್ ಜೊತೆ 105 ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು. ಕೆಲವು ವಿಮಾನಗಳು ಉದ್ದೇಶಿತ ಸುಧಾರಣೆಗಳನ್ನು ಪಡೆದುಕೊಂಡವು. ಆದರೆ, 2014ರಲ್ಲಿ, ಕ್ರಿಮಿಯಾಗೆ ಸಂಬಂಧಿಸಿದಂತೆ ರಷ್ಯಾ - ಉಕ್ರೇನ್ ಬಿಕ್ಕಟ್ಟು ಆರಂಭಗೊಂಡ ಬಳಿಕ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಇಂದು ವಿಮಾನ ಬಳಗದ ಕೆಲ ಭಾಗವಷ್ಟೇ ಆಧುನೀಕರಣಗೊಂಡಿದ್ದು, ಅವು ಹಳೆಯದಾಗುತ್ತಲೇ ಸಾಗುತ್ತಿವೆ. ಈಗ ಕೇವಲ ಕಾಗದ ಪತ್ರಗಳು ಮಾತ್ರವೇ ನಮ್ಮ ನೆರವಿಗೆ ಬರುವುದಿಲ್ಲ ಎನ್ನುವ ನಿರ್ಧಾರಕ್ಕೆ ಭಾರತೀಯ ವಾಯುಪಡೆ ಬಂದಿದೆ. ಈ ವಿಮಾನಗಳಿಗೆ ಸಂಪೂರ್ಣವಾಗಿ ಪರ್ಯಾಯ ಆಯ್ಕೆಗಳನ್ನು ಹೊಂದುವುದೇ ಸರಿಯಾದ ಉತ್ತರ ಎನ್ನುವುದು ವಾಯುಪಡೆಯ ಯೋಜನೆಯಾಗಿದೆ.

ಆಗಸದಲ್ಲೊಂದು ಸ್ಪರ್ಧೆ: ಆ್ಯಂಟೊನೊವ್ ಎಎನ್-32 ವಿಮಾನಕ್ಕೆ ಪರ್ಯಾಯ ಯಾವುದು?
ಭಾರತದ ಮುಂದಿನ ದೊಡ್ಡ ರಕ್ಷಣಾ ರಫ್ತು: ಕಾಲ್ ಡ್ರೋನ್

ಬೇರೆ ವಿಭಾಗಗಳನ್ನು ಗಮನಿಸಿದರೆ, ಹೊಸ ವಿಮಾನಗಳು ಈಗಾಗಲೇ ಬರಲಾರಂಭಿಸಿವೆ. 56 ಏರ್‌ಬಸ್ ಸಿ-295 ವಿಮಾನಗಳು ಹಳೆಯದಾದ ಆವ್ರೊ ಎಚ್ಎಸ್-748 ವಿಮಾನಗಳಿಗೆ ಬದಲಿ ಆಯ್ಕೆಯಾಗಿವೆ. 16 ವಿಮಾನಗಳು ಈಗಾಗಲೇ ಸಿದ್ಧ ರೂಪದಲ್ಲಿ ವಿದೇಶದಿಂದ ಆಗಮಿಸಿವೆ. ಇನ್ನುಳಿದ 40 ವಿಮಾನಗಳನ್ನು ವಡೋದರಾದ ನೂತನ ಕಾರ್ಖಾನೆಯಲ್ಲಿ ನಿರ್ಮಿಸಲಾಗುತ್ತದೆ. ಮೊದಲ ಸಂಪೂರ್ಣ ಭಾರತೀಯ ನಿರ್ಮಾಣದ ಸಿ-295 ತನ್ನ ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದ್ದು, ಸೇವೆಗೆ ಸೇರ್ಪಡೆಗೊಂಡಿದೆ. ಆರಂಭದಲ್ಲಿ ವಿಮಾನ ಬಹುತೇಕ 35% ಭಾರತೀಯ ಬಿಡಿಭಾಗಗಳನ್ನು ಹೊಂದಿತ್ತು. ಆದರೆ, ಈಗ ಭಾರತೀಯ ಉತ್ಪನ್ನಗಳ ಪ್ರಮಾಣ 40ರಿಂದ 45% ತಲುಪಿದ್ದು, ಇದು 70% ತಲುಪುವ ನಿರೀಕ್ಷೆಗಳಿವೆ. ವಾಯುಪಡೆ 2011ರಲ್ಲಿ ಖರೀದಿಸಿದ 12 ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳನ್ನೂ ಬಳಸುತ್ತಿದ್ದು, ಇವು ತಲಾ 19 ಟನ್ ತೂಕವನ್ನು ಹೊತ್ತು ಹಾರಬಲ್ಲವು. ಇನ್ನೂ ಹೆಚ್ಚು ತೂಕವನ್ನು ಸಾಗಿಸಲು ಸಿ-17 ಗ್ಲೋಬ್‌ಮಾಸ್ಟರ್ ವಿಮಾನವಿದ್ದು, ಇದು 70ರಿಂದ 80 ಟನ್ ತೂಕವನ್ನು ಸಾಗಿಸಬಲ್ಲದು. ಹಳೆಯದಾದ, 1980ರ ದಶಕದ ಮಧ್ಯಭಾಗದ ಐಎಲ್-76 ವಿಮಾನಗಳು ಅಂದಾಜು 40 ಟನ್ ತೂಕವನ್ನು ಒಯ್ಯಬಲ್ಲವು.

ಪ್ರಸ್ತುತ ಯೋಜನೆ 2022ರಲ್ಲಿ ಆರಂಭಗೊಂಡಿದ್ದು, ವಾಯು ಸೇನೆ 80 ಬಹು ಪಾತ್ರಗಳ ಸಾಗಾಣಿಕಾ ವಿಮಾನದ ಅವಶ್ಯಕತೆ ಹೊಂದಿದ್ದು, ಇದರ ಮಾಹಿತಿಗಾಗಿ ಮನವಿ ಸಲ್ಲಿಸಿತ್ತು. ಬಳಿಕ, ಈ ಅವಶ್ಯಕತೆಯನ್ನು 18ರಿಂದ 30 ಟನ್ ತೂಕದ ವಿಭಾಗಕ್ಕೆ ಸ್ಥಿರಗೊಳಿಸಲಾಯಿತು. ಈ ಅವಶ್ಯಕತೆಯನ್ನು ಪೂರೈಸಲು ಈಗ ಮೂರು ವಿಮಾನಗಳು ಸ್ಪರ್ಧೆಯಲ್ಲಿವೆ. ಅವೆಂದರೆ: ಲಾಕ್‌ಹೀಡ್‌ ಮಾರ್ಟಿನ್ ಸಿ-130, ಎಂಬ್ರಾಯರ್ ಸಿ-390 ಮಿಲೇನಿಯಂ, ಹಾಗೂ ಏರ್‌ಬಸ್ ಎ400ಎಂ. ಭಾರತೀಯ ಸಂಸ್ಥೆಗಳು ಈಗಾಗಲೇ ತಮ್ಮ ಪಾಲುದಾರರನ್ನು ಆರಿಸಿಕೊಂಡಿವೆ. ಲಾಕ್‌ಹೀಡ್‌ ಮಾರ್ಟಿನ್ ಜೊತೆ ಕೈ ಜೋಡಿಸಿರುವ ಟಾಟಾ ಭಾರತದಲ್ಲಿ ಸಿ-130 ನಿರ್ಮಿಸಲು ಬಯಸುತ್ತಿದೆ. ಮಹಿಂದ್ರಾ ಸಂಸ್ಥೆ ಎಂಬ್ರಾಯರ್ ಜೊತೆಗೂಡಿ ಸಿ-390 ಉತ್ಪಾದಿಸಲು ಉದ್ದೇಶಿಸಿದೆ. ಈಗಾಗಲೇ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜೊತೆ ಸಿ-295 ನಿರ್ಮಿಸುತ್ತಿರುವ ಏರ್‌ಬಸ್ ತಾನು ಎ400ಎಂ ವಿಮಾನವನ್ನು ಭಾರತದಲ್ಲೇ ನಿರ್ಮಿಸಲು ಸಿದ್ಧವಿರುವುದಾಗಿ ಹೇಳಿದೆ.

ಏರ್ ಮಾರ್ಷಲ್ ಸಂಜೀವ್ ಕಪೂರ್ ಅವರು ಹೇಳಿದಂತೆ, ಭಾರತ ಆಯ್ಕೆ ಮಾಡಿಕೊಳ್ಳುವ ವಿಮಾನ ಎಲ್ಲ ಭಾರತೀಯ ಪರಿಸ್ಥಿತಿಗಳಲ್ಲಿ, ಅಂದರೆ ಕಿರಿದಾದ, ಹೆಚ್ಚು ಎತ್ತರದಲ್ಲಿರುವ ಏರ್ ಸ್ಟ್ರಿಪ್‌ಗಳಲ್ಲಿ, ಬಿಸಿಯಾದ ಕರಾವಳಿ ಪ್ರದೇಶಗಳಲ್ಲಿ, ತೇವಾಂಶ ಹೊಂದಿರುವ ಉಷ್ಣವಲಯದ ಗಾಳಿಯಲ್ಲಿ, ಕೇವಲ ಏರ್ ಫೀಲ್ಡ್‌ಗಳು ಮತ್ತು ಅರ್ಧ ಸಿದ್ಧವಾದ ರನ್‌ವೇಗಳಲ್ಲಿ ಕಾರ್ಯಾಚರಿಸಬೇಕು. ಇದೇ ವೇಳೆ, ಈ ವಿಮಾನಗಳು ಕೈಗೆಟುಕುವ ದರದಲ್ಲಿದ್ದು, ದೀರ್ಘಕಾಲ ಕಾರ್ಯಾಚರಿಸಬೇಕು.

ಪ್ರತಿಯೊಂದು ಸ್ಪರ್ಧಿ ವಿಮಾನವೂ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಸಿ-130 ವಿಮಾನ ಈಗಾಗಲೇ ಭಾರತೀಯ ಸಿಬ್ಬಂದಿಗಳಿಗೆ ಪರಿಚಿತವಾಗಿದ್ದು, ನೈಜ ಕಾರ್ಯಾಚರಣೆಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅದು ಅಫ್ಘಾನಿಸ್ತಾನ ಮತ್ತು ಯೆಮೆನ್‌ಗಳಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗಳಲ್ಲಿ ಬಳಕೆಯಾಗಿದ್ದು, ಹೊಂದಿಕೊಳ್ಳಲು ಸುಲಭವಾದ ಆಯ್ಕೆಯಾಗಿದೆ. ಸಿ-390 ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು, ಅಂದಾಜು 26 ಟನ್ ತೂಕವನ್ನು ಹೊರಬಲ್ಲದು. ಮೂರು ವಿಮಾನಗಳ ಪೈಕಿ ಎ400ಎಂ ಅತ್ಯಂತ ಶಕ್ತಿಶಾಲಿಯಾಗಿದ್ದು, 30ರಿಂದ 35 ಟನ್ ತೂಕವನ್ನು ಹೊರಬಲ್ಲದು. ಇದು ಐಎಲ್-76 ಬಳಗದ ಮೇಲಿನ ಹೊರೆಯನ್ನು ಕಡಿಮೆಗೊಳಿಸಬಹುದು. ಆದರೆ, ಇದು ಅತ್ಯಂತ ದುಬಾರಿ ಆಯ್ಕೆಯಾಗಿದೆ.

ಆಗಸದಲ್ಲೊಂದು ಸ್ಪರ್ಧೆ: ಆ್ಯಂಟೊನೊವ್ ಎಎನ್-32 ವಿಮಾನಕ್ಕೆ ಪರ್ಯಾಯ ಯಾವುದು?
ರೀಪರ್ Vs ಟಿಬಿ2: ವಾಯು ಸಾಮರ್ಥ್ಯದಲ್ಲಿ ಬಹುಚರ್ಚಿತ ಸ್ಪರ್ಧೆ (ಜಾಗತಿಕ ಜಗಲಿ)

ಗುತ್ತಿಗೆಗೆ ಭಾರತ ವಿಧಿಸಿರುವ ಷರತ್ತುಗಳು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಯೋಜನೆಗಳನ್ನು ಪ್ರತಿನಿಧಿಸುತ್ತವೆ. ಕೇವಲ 12 ವಿಮಾನಗಳು ಮಾತ್ರವೇ ಹಾರಾಟ ಸನ್ನದ್ಧ ಸ್ಥಿತಿಯಲ್ಲಿ ಆಗಮಿಸಲಿವೆ. ಇನ್ನುಳಿದ 48 ವಿಮಾನಗಳನ್ನು ಭಾರತದಲ್ಲೇ ನಿರ್ಮಿಸಲಾಗುತ್ತದೆ. ವಿಮಾನಗಳ ಸಂಪೂರ್ಣ ನಿರ್ವಹಣೆ, ದುರಸ್ತಿ, ಮತ್ತು ಕೂಲಂಕಷ ಪರಿಶೀಲನಾ ಘಟಕಗಳನ್ನು ಭಾರತದಲ್ಲೇ ಹೊಂದಲಾಗುತ್ತದೆ. 60%ದಷ್ಟು ಭಾರತೀಯ ಬಿಡಿಭಾಗಗಳನ್ನು ಬಳಸಬೇಕೆಂದು ನಿರ್ಧರಿಸಲಾಗಿದ್ದು, ಆರಂಭದಿಂದಲೂ ಭಾರತೀಯ ಕಂಪನಿಗಳನ್ನು ಪೂರೈಕೆ ಸರಪಳಿಯಲ್ಲಿ ಜೋಡಿಸಿಕೊಳ್ಳಲಾಗಿದೆ. ಇನ್ನು ಪರವಾನಗಿ ಮತ್ತು ರಫ್ತು ಹಕ್ಕುಗಳನ್ನೂ ಆರಂಭದಲ್ಲೇ ನಿರ್ಧರಿಸಲಾಗುತ್ತದೆ. ಇದರ ಪರಿಣಾಮವಾಗಿ, ಮುಂದೊಂದು ದಿನ ಭಾರತ ಇಂತಹ ವಿಮಾನಗಳನ್ನು ಇತರ ದೇಶಗಳಿಗೆ ಮಾರಾಟ ನಡೆಸಬಹುದು.

ಪ್ಯಾರಾಡ್ರಾಪ್, ಗಾಯಗೊಂಡವರ ಸ್ಥಳಾಂತರ, ಸೈನಿಕರ ಸಾಗಾಟಗಳ ಹೊರತಾಗಿ, ನೂತನ ವಿಮಾನ ಬಿಎಂಪಿ-2 ಸಾರಥ್ ಮತ್ತು ಆರ್ಟಿಲರಿ ಗನ್‌ಗಳಂತಹ ಹಗುರವಾದ ಸಶಸ್ತ್ರ ವಾಹನಗಳನ್ನು ಮುಂಚೂಣಿ ಪೋಸ್ಟ್‌ಗಳಿಗೆ ಸಾಗಿಸಿ ಭಾರತೀಯ ಸೇನೆಗೆ ನೆರವಾಗಬೇಕು. ಈ ಯೋಜನೆ ಕೇವಲ ವಿಮಾನಗಳ ಖರೀದಿಗೆ ಸೀಮಿತವಾಗಿಲ್ಲ. ಬದಲಿಗೆ, ಮುಂದಿನ 40 ವರ್ಷಗಳಿಗೆ ಅವಶ್ಯಕವಾದ ಸ್ವಾವಲಂಬಿ ವಿಮಾನ ಬಳಗವನ್ನು ನಿರ್ಮಿಸಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com