

ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್1ಎನ್1 ಅಥವಾ ಸ್ವೈನ್ ಫ್ಲೂ ಇನ್ಫ್ಲುಯೆಂಜಾ (ಹಂದಿ ಜ್ವರ) ಸೋಂಕು ವೇಗವಾಗಿ ಹರಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ವರ್ಷ ರಾಜ್ಯದಲ್ಲಿ 4,212ಕ್ಕೂ ಹೆಚ್ಚು ಎಚ್1ಎನ್1 ಪ್ರಕರಣಗಳು ದೃಢಪಟ್ಟಿವೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಬದಲಾಗುತ್ತಿರುವ ಋತುಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಈ ಉಸಿರಾಟದ ವೈರಸ್‌ನ ಪ್ರಭಾವವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸೋಂಕಿನ ಕುರಿತು ಪ್ರತಿಯೊಬ್ಬರೂ ಮಾಹಿತಿಯನ್ನು ತಿಳಿದುಕೊಳ್ಳುವುದು ಮತ್ತು ಸೂಕ್ತ ಎಚ್ಚರಿಕೆಗಳನ್ನು ಅನುಸರಿಸುವುದು ಅತ್ಯಂತ ಅವಶ್ಯಕವಾಗಿದೆ.
ಹೆಚ್1ಎನ್1 ಎನ್ನುವುದು ಇನ್ಫ್ಲುಯೆಂಜಾ ಎ ವೈರಸ್‌ನ ಒಂದು ಉಪಜಾತಿಯಾಗಿದೆ. ಇದು ನೇರವಾಗಿ ಮಾನವನ ಉಸಿರಾಟದ ವ್ಯವಸ್ಥೆಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತದೆ. ಈ ಸೋಂಕು ಅತಿ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಗಾಳಿಯಲ್ಲಿ ಬಿಡುಗಡೆಯಾಗುವ ಸೂಕ್ಷ್ಮ ಹನಿಗಳ ಮೂಲಕ ಆರೋಗ್ಯವಂತ ಜನರ ದೇಹವನ್ನು ಇದು ಸುಲಭವಾಗಿ ಪ್ರವೇಶಿಸುತ್ತದೆ.
ಈ ಸೋಂಕು ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಎಲ್ಲರಿಗೂ ಬರಬಹುದಾದರೂ ಕೆಲವು ನಿರ್ದಿಷ್ಟ ಜನರಿಗೆ ಇದರ ಅಪಾಯವು ಅತ್ಯಂತ ಹೆಚ್ಚಾಗಿರುತ್ತದೆ. ಗರ್ಭಿಣಿಯರು, ವೃದ್ಧರು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುಟ್ಟ ಮಕ್ಕಳು ಮತ್ತು ಈಗಾಗಲೇ ಅಸ್ತಮಾ, ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ದೀರ್ಘಕಾಲಿಕ ರೋಗಿಗಳು ಈ ವೈರಸ್‌ಗೆ ಬೇಗನೆ ತುತ್ತಾಗುತ್ತಾರೆ. ಇವರಲ್ಲಿ ರೋಗನಿರೋಧಕ ಶಕ್ತಿ ಸಾಮಾನ್ಯವಾಗಿ ಕಡಿಮೆ ಇರುವುದರಿಂದ ಸೋಂಕು ತೀವ್ರ ಗಂಭೀರ ಸ್ವರೂಪ ತಾಳುವ ಸಾಧ್ಯತೆ ಇರುತ್ತದೆ.
ಹೆಚ್1ಎನ್1ನ ಲಕ್ಷಣಗಳು ಸಾಮಾನ್ಯ ನೆಗಡಿ ಅಥವಾ ಸಾಧಾರಣ ಶೀತಕ್ಕಿಂತ ಇದರ ಲಕ್ಷಣಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಮತ್ತು ಬಹಳ ತೀವ್ರವಾಗಿ ಕಾಡುತ್ತವೆ. ತೀವ್ರವಾದ ಜ್ವರ, ಗಂಟಲು ನೋವು, ನಿರಂತರ ಕೆಮ್ಮು, ತೀವ್ರ ತಲೆನೋವು, ಮೈಕೈ ನೋವು ಮತ್ತು ವಿಪರೀತ ಸುಸ್ತು ಇದರ ಪ್ರಮುಖ ಲಕ್ಷಣಗಳಾಗಿವೆ. ಕೆಲವರಲ್ಲಿ ವಾಕರಿಕೆ, ವಾಂತಿ ಅಥವಾ ಭೇದಿಯಂತಹ ಜಠರಗರುಳಿನ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಬಹುದು. ಸೋಂಕಿತರಲ್ಲಿ ಒಂದುವೇಳೆ ಉಸಿರಾಟದಲ್ಲಿ ತೊಂದರೆ ಅಥವಾ ಎದೆ ನೋವು ಕಂಡುಬAದ ಕೂಡಲೇ ಯಾವುದೇ ವಿಳಂಬವಿಲ್ಲದೆ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.
ಒಂದು ವೇಳೆ ಹೆಚ್1ಎನ್1 ಸೋಂಕು ದೃಢಪಟ್ಟರೆ ಆತಂಕಗೊಳ್ಳುವ ಅಗತ್ಯವಿಲ್ಲ. ವೈದ್ಯರ ಸರಿಯಾದ ಸಲಹೆಯ ಮೇರೆಗೆ ಆಂಟಿವೈರಲ್ ಔಷಧಿಗಳನ್ನು ಆರಂಭಿಕ ಹಂತದಲ್ಲಿಯೇ ಪಡೆಯುವುದರಿಂದ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸಿ ಗುಣಮುಖರಾಗಬಹುದು. ಇದರೊಂದಿಗೆ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿ ವಿಶ್ರಾಂತಿ ಪಡೆಯಬೇಕು, ಸಾಕಷ್ಟು ಬಿಸಿನೀರು ಕುಡಿಯಬೇಕು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.
ಈ ಸೋಂಕು ಹರಡುವುದನ್ನು ತಡೆಯಲು ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಕೈಗಳನ್ನು ಆಗಾಗ್ಗೆ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಸ್ಯಾನಿಟೈಸರ್ ಬಳಸಬೇಕು. ಯಾರ ಕೈಯ್ಯನ್ನು ಕುಲುಕಬೇಡಿ. ಬಸ್, ರೈಲು ನಿಲ್ದಾಣ ಮತ್ತು ಮಾರುಕಟ್ಟೆಯಂತಹ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಹೆಚ್ಚು ಸಂಚರಿಸಬಾರದು. ಒಮ್ಮೆ ಹೋಗಲೇಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೆಮ್ಮುವಾಗ ಬಾಯಿಯ ಮುಂದೆ ಕರವಸ್ತ್ರ ಹಿಡಿದು ಬಳಸಬೇಕು.
ಈ ಸೋಂಕು ಹೆಚ್ಚಾಗುತ್ತಿರುವ ಆರೋಗ್ಯ ಇಲಾಖೆಯು ಎಲ್ಲರಿಗೂ ಕಾಲಕಾಲಕ್ಕೆ ಸರಿಯಾಗಿ ಲಸಿಕೆಗಳನ್ನು ಪಡೆದುಕೊಳ್ಳುವಂತೆ ಹಾಗೂ ಯಾವುದೇ ಜ್ವರದ ಲಕ್ಷಣಗಳು ಕಂಡುಬಂದ ಕೂಡಲೇ ಸ್ವಯಂ-ವೈದ್ಯಕೀಯ ಚಿಕಿತ್ಸೆಗೆ ಮುಂದಾಗದೇ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದೆ.
ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ವಾತಾವರಣದಲ್ಲಿ ಉಂಟಾಗುವ ತೇವಾಂಶದ ವ್ಯತ್ಯಾಸದಿಂದ ವೈರಸ್‌ಗಳು ವೇಗವಾಗಿ ಹರಡುವುದರಿಂದ, ಸಾರ್ವಜನಿಕರು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಜರೂರಾಗಿದೆ ಎಂದು ತಿಳಿಸಿದೆ.
ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಾತಾವರಣದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಗಾಳಿಯ ಸಂಚಾರ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಕೂಡ ಸೋಂಕು ಹರಡುವುದನ್ನು ತಡೆಯಲು ಬಹಳ ಮುಖ್ಯವಾಗಿದೆ.
ಆಯುರ್ವೇದ ಪದ್ಧತಿಯ ಪ್ರಕಾರ ಇಂತಹ ಸಾಂಕ್ರಾಮಿಕ ರೋಗಗಳನ್ನು ವಾತಾವರಣದ ದೋಷವೆಂದು ಪರಿಗಣಿಸಲಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಅಥವಾ ಓಜಸ್ಸು ಕಡಿಮೆಯಾದಾಗ ಇಂತಹ ವೈರಸ್‌ಗಳು ಸುಲಭವಾಗಿ ದಾಳಿ ಮಾಡುತ್ತವೆ. ಇದನ್ನು ತಡೆಯಲು ಆಯುರ್ವೇದದಲ್ಲಿ ಗಿಡಮೂಲಿಕೆಗಳ ಕಷಾಯ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ತುಳಸಿ, ಕರಿಮೆಣಸು, ಶುಂಠಿ, ಅರಿಶಿನ ಅಥವಾ ಅಮೃತಬಳ್ಳಿ ಬಳಸಿ ತಯಾರಿಸುವ ಕಷಾಯವನ್ನು ದಿನನಿತ್ಯ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಗಣನೀಯವಾಗಿ ಹೆಚ್ಚಾಗುತ್ತದೆ.
ಪ್ರತಿದಿನ ಮುಂಜಾನೆ ಬಿಸಿನೀರು ಕುಡಿಯುವುದು, ನಸ್ಯ ಕರ್ಮ ಅಂದರೆ ಮೂಗಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಸವರಿಕೊಳ್ಳುವುದು ಮತ್ತು ದಿನಚರಿಯಲ್ಲಿ ಯೋಗ ಹಾಗೂ ಪ್ರಾಣಾಯಾಮವನ್ನು ರೂಢಿಸಿಕೊಳ್ಳುವುದರಿಂದ ಉಸಿರಾಟದ ಅಂಗಾಂಗಗಳನ್ನು ಬಲಪಡಿಸಿ ಇಂತಹ ಸೋಂಕುಗಳಿAದ ಮುಕ್ತಿ ಪಡೆಯಬಹುದು.