ಬದಲಾಗಲಿದೆ ವಿತ್ತ ಜಗತ್ತು, ಸಿದ್ಧವಾಗದಿದ್ದರೆ ಕಾದಿದೆ ಆಪತ್ತು! (ಹಣಕ್ಲಾಸು)

ಷೇರು ಮಾರುಕಟ್ಟೆಯನ್ನು ಗಮನಿಸುತ್ತಿರುವ ಎಲ್ಲರಿಗೂ ಐಟಿ ಕ್ಷೇತ್ರದ ಷೇರುಗಳು ೪೦ ರಿಂದ ೫೦ ಪ್ರತಿಶತ ಕುಸಿತ ಕಂಡಿರುವುದು ಗೊತ್ತಾಗುತ್ತಿದೆ.
ಆಂಥ್ರೋಪಿಕ್
ಆಂಥ್ರೋಪಿಕ್ 0nline desk
Updated on

ಆಂಥ್ರೋಪಿಕ್ ಸಿಇಓ ದಾರಿಯೊ ಅಮೊಡೆನ್ ಅವರ ಪ್ರಕಾರ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಗೆ ಮೊದಲು ಬಲಿಯಾಗುವುದು ಕೋಡಿಂಗ್ ! ಇಷ್ಟು ದಿನ ಸಾಫ್ಟ್ವೇರ್ ಉದ್ಯಮ , ಉದ್ಯೋಗಿಗಳು ಸಮಾಜದಲ್ಲಿ ಪಡೆದುಕೊಂಡಿದ್ದ ಸ್ಥಾನವನ್ನು ಈ AI ಕಸಿದು ಕೊಳ್ಳಲಿದೆ. ಸಾಫ್ಟ್ವೇರ್ ಎಂದರೆ ಮನಷ್ಯನ ಕೆಲಸವನ್ನು ಕಡಿಮೆ ಮಾಡುವ, ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಬೇಕಾಗುವ ಪ್ರೋಗ್ರಾಮ್ಗಳನ್ನು ಸಿದ್ದಪಡಿಸುವುದು. ಉದಾಹರಣೆಗೆ ಬ್ಯಾಂಕಿಂಗ್ ಸಾಫ್ಟ್ವೇರ್ ,ಹಾಸ್ಪಿಟಲ್ ಸಾಫ್ಟ್ವೇರ್ , ಹೋಟೆಲ್ ಮ್ಯಾನೇಜ್ಮೆಂಟ್ ಸಾಫ್ಟ್ವೇರ್ ಗಳು ಇತ್ಯಾದಿ. ಇವುಗಳನ್ನು ಬರೆಯಲು ಲಕ್ಷಾಂತರ ಜನ ಜಗತ್ತಿನಾದ್ಯಂತ ಕುಳಿತು ಕೋಡ್ ಬರೆಯುತ್ತಿದ್ದರು. ಆ ಮೂಲಕ ಒಂದು ಸಶಕ್ತ ಸಾಫ್ಟ್ವೇರ್ ಆಯಾ ವಲಯಕ್ಕೆ , ಆಯಾ ಉದ್ದಿಮೆಗೆ ತಕ್ಕಂತೆ ಮಾಡಿ ಕೊಡುತ್ತಿದ್ದರು. ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಆ ಕೆಲಸವನ್ನು ಮಾಡಿ ಮುಗಿಸುತ್ತದೆ. ಅಂದರೆ ಕೋಡಿಂಗ್ ಮಾಡಲು ಅಂದರೆ ಬರೆಯಲು ಈಗ ಜನರ ಅವಶ್ಯಕತೆಯಿರುವುದಿಲ್ಲ. ತನ್ನಲ್ಲಿರುವ ಮಾಹಿತಿಯನ್ನು ಆಧರಿಸಿ ಅದು ನಾವು ಕೇಳಿದ ಸಾಫ್ಟ್ವೇರ್ ಕ್ಷಣ ಮಾತ್ರದಲ್ಲಿ ಸಿದ್ದಪಡಿಸಿ ನೀಡುತ್ತದೆ. ನಮಗೇನು ಬೇಕು , ಅಂದರೆ ನಮ್ಮ ಸರಿಯಾದ ಅವಶ್ಯಕತೆಯೇನು ಎನ್ನುವುದನ್ನು ಹೇಳುವುದು ನಮಗೆ ಬಂದರೆ ಸಾಕು ! ಉಳಿದದ್ದು ಅದು ಮಾಡಿಕೊಡುತ್ತದೆ. ಈ ಒಂದು ಬದಲಾವಣೆ ಸದ್ದಿಲ್ಲದೇ ಆಗಿ ಹೋಗಿದೆ.

ಷೇರು ಮಾರುಕಟ್ಟೆಯನ್ನು ಗಮನಿಸುತ್ತಿರುವ ಎಲ್ಲರಿಗೂ ಐಟಿ ಕ್ಷೇತ್ರದ ಷೇರುಗಳು 40 ರಿಂದ 50ಪ್ರತಿಶತ ಕುಸಿತ ಕಂಡಿರುವುದು ಗೊತ್ತಾಗುತ್ತಿದೆ. ಇದಕ್ಕೆ ಕಾರಣ ಆಂಥ್ರೋಪಿಕ್ ಸಿಇಓ ದಾರಿಯೂ ಅವರು ಹೇಳುವಂತೆ ಕೋಡಿಂಗ್ ಮಾಡಲು ಇನ್ನು ಮುಂದೆ ಜನ ಬೇಕಿಲ್ಲ ಎನ್ನುವುದಾಗಿದೆ. ಆತ ಮುಂದುವರೆದು ಆತ , ಮನಷ್ಯನ ಮಟ್ಟಕ್ಕೆ ಕೆಲಸ ಮಾಡುವ ಅಂದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ AI ಗೆ ಇದೆ. ಅದು ನಮ್ಮ ಸಮಾಜ ಎಂದುಕೊಂಡಿರುವುದಕ್ಕಿಂತ ಮುಂಚೆ ಅನುಷ್ಠಾನಕ್ಕೆ ಬರಲಿದೆ. ನಮ್ಮ ಸಮಾಜ ಮಾತ್ರ ಇನ್ನು ಇದನ್ನು ಒಪ್ಪಿಕೊಳ್ಳುವ ಹಂತದಲ್ಲಿ ಇಲ್ಲ. ವಿತ್ತ ಜಗತ್ತು , ಜಾಗತಿಕ ರಾಜಕೀಯ , ಮನುಷ್ಯ ಬದುಕುವ ರೀತಿ ಬದಲಾಗಲಿದೆ. ಬದಲಾವಣೆಯ ಸುನಾಮಿ ಬರಲಿದೆ. ಆದರೆ ಕೆಲವರು ಇದನ್ನು ಸುನಾಮಿಯಲ್ಲ ಹೂಡಿಕೆದಾರರ ಟ್ರಿಕ್ ಎನ್ನುತ್ತಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಬಿಲಿಯನ್ ಗಟ್ಟಲೆ ಹಣವನ್ನು ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅವರು ಈ ಕ್ಷೇತ್ರದ ಬಗ್ಗೆ ಇನ್ನಿಲ್ಲದ ಹೈಪ್ ಸೃಷ್ಟಿ ಮಾಡಿದ್ದಾರೆ ಎನ್ನುವ ಮಾತುಗಳನ್ನು ಕೂಡ ಕೇಳಿಬರುತ್ತಿದೆ. ಆದರೆ ಕಠಿಣ ನಿರ್ಧಾರಗಳು ಮತ್ತು ಸಂಬಂಧಗಳ ವಿಷಯ ಬಿಟ್ಟು ಮಿಕ್ಕೆಲ್ಲವನ್ನು ನಾವು ಆಟೋಮೇಟ್ ಮಾಡಬಹುದು ಎನ್ನುತ್ತಾರೆ.

AI ನಿಂದ ಉಂಟಾಗಬಹುದಾದ ಅಪಾಯಗಳನ್ನು ಅನಲೈಸ್ ಮಾಡಲು ಕೂಡ ತಜ್ಞರು ತಯಾರಾಗುತ್ತಿದ್ದಾರೆ. ಅಜೇಯ ಕಾತ್ರ ಎನ್ನುವ ಭಾರತೀಯ ಮೂಲದ ಅಮೆರಿಕನ್ ಮಹಿಳೆ METR ಎನ್ನುವ ಸಂಸ್ಥೆಯಲ್ಲಿ AI ರಿಸ್ಕ್ ಅಸ್ಸೇಸ್ಮೆಂಟ್ ಎಕ್ಸ್ಪರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ AI ಬಳಸಿಕೊಂಡು ಆಟೋಮೇಶಷನ್ ಮಾಡುವುದರಿಂದ ಕಳೆದ ಹತ್ತು ಸಾವಿರ ವರ್ಷದಲ್ಲಿ , ಹೌದು ಸರಿಯಾಗಿ ಓದಿದಿರಿ , ಕಳೆದ ೧೦ ಸಾವಿರ ವರ್ಷದಲ್ಲಿ ತಂತ್ರಜ್ಞಾನದಲ್ಲಿ ಆಗಿರುವ ಅಭಿವೃದ್ಧಿ ಮುಂದಿನ ೨೫ ವರ್ಷದಲ್ಲಿ ಅಂದರೆ ೨೦೫೦ ರ ವೇಳೆಗೆ ಸಾಧಿಸಿರುತ್ತೇವೆ. ಸಾಫ್ಟ್ವೇರ್ ಡೆವಲಪ್ಮೆಂಟ್ ಒಂದೇ ಅಲ್ಲದೆ ಸೈನ್ಸ್ ರಿಸರ್ಚ್ ಇತ್ಯಾದಿ ಎಲ್ಲವನ್ನೂ ಎಐ ಮಾಡಿ ಮುಗಿಸುತ್ತದೆ. ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡುತ್ತಾ ಆಕೆ ಆರ್ಥಿಕ ತಜ್ಞರು ಕೂಡ ಇದರಿಂದ ಆಗಬಹುದಾದ ಬದಲಾವಣೆಯನ್ನು ಪೂರ್ಣವಾಗಿ ಗುರುತಿಸುತ್ತಿಲ್ಲ ಎನ್ನುತ್ತಾರೆ. ಮುಂದಿನ ೨೫ ವರ್ಷದಲ್ಲಿ ಜಗತ್ತು ಪೂರ್ಣವಾಗಿ ಬದಲಾಗಿ ಹೋಗಿರುತ್ತದೆ. ನಾವು ಭೇಟೆಯಾಡಿ ಆಹಾರಕ್ಕಾಗಿ ಜೀವನ ಸವೆಸುತ್ತಿದ್ದೆವು. ಆ ದಿನಗಳನ್ನು ಇಂದಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಥೇಟ್ ಹಾಗೆ ಮುಂದಿನ ೨೫ ವರ್ಷದಲ್ಲಿ ಇವತ್ತು ಹೀಗೆ ಬದುಕುತ್ತಿದ್ದೆವು ಎಂದು ಕಥೆಯ ರೀತಿ ಹೇಳುವಂತೆ ಬದುಕು ಬದಲಾಗುತ್ತದೆ ಎನ್ನುತ್ತಾರೆ. AI ನಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ ಎನ್ನುವಂತಿಲ್ಲ. ಪ್ರತಿ ಬದಲಾವಣೆಯೂ ಒಂದು ಅನುಕೂಲ ಮಾಡಿಕೊಟ್ಟರೆ , ಅದಕ್ಕೆ ತಕ್ಕಂತೆ ಅನಾನುಕೂಲ ಕೂಡ ಜೊತೆಗೆ ಬರುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವವರ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತದೆ. ಕೆಡುಕಿಗೆ ಬಳಸಿಕೊಳ್ಳಬೇಕು ಎಂದು ಬಯಸಿದರೆ ಇದರಿಂದ ಸಾಕಷ್ಟು ಕೆಡುಕನ್ನು ಕ್ಷಣದಲ್ಲಿ ಮಾಡಬಹುದು ಎನ್ನುವ ಎಚ್ಚರಿಕೆಯ ಮಾತನ್ನು ಕೂಡ ಹೇಳಲು ಆಕೆ ಮರೆಯಲಿಲ್ಲ.

ಮನುಷ್ಯನ ಉಗಮದ ದಿನದಿಂದ ಚಕ್ರದ ಅನ್ವೇಷಣೆ ಅಂದರೆ ಇನ್ವೆನ್ಶನ್ ಆಫ್ ವೀಲ್ ತನಕ ಒಂದು ತೆರೆನಾಗಿತ್ತು . ವೀಲ್ ಅಥವಾ ಚಕ್ರ ಕಂಡು ಹಿಡಿದ ನಂತರ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಯ್ತು . ಮನು ಕುಲದ ಮಹತ್ತರ ಅನ್ವೇಷಣೆಯಲ್ಲಿ ಚಕ್ರದ ಅನ್ವೇಷಣೆ , ಪರಿಕಲ್ಪನೆ ಅತ್ಯಂತ ಮಹತ್ವದ್ದು . ಅದಾದ ನಂತರ ಜಗತ್ತು ಬಹಳಷ್ಟು ತಿರುವು ಪಡೆದಿದೆ . ಕಂಪ್ಯೂಟರ್ , ಮೊಬೈಲ್ , ಇಂಟರ್ನೆಟ್ ಅವುಗಳಲ್ಲಿ ಪ್ರಮುಖವಾದವು . ಇದೆಲ್ಲಾ ಇಂದಿಗೆ ಚರಿತ್ರೆ ! ಹಂತ ಹಂತವಾಗಿ ಬದಲಾವಣೆಯಾದರೆ ನೋವು ಗೊತ್ತಾಗುವುದಿಲ್ಲ. ತಕ್ಷಣ, ವೇಗವಾಗಿ ಬದಲಾವಣೆಯಾದರೆ ಅದಕ್ಕೆ ಒಗ್ಗಿಕೊಳ್ಳುವವರು ಮಾತ್ರ ಗೆಲ್ಲುತ್ತಾರೆ. ಇಲ್ಲದವರ ಕಥೆಯೇನು ? ನೀರಿನಲ್ಲಿ ಕಪ್ಪೆಗಳನ್ನು ಹಾಕಿ , ನಿಧಾನವಾಗಿ ನೀರನ್ನು ಬಿಸಿ ಮಾಡಲು ಶುರು ಮಾಡಿದರೆ , ಆಗ ಕಪ್ಪೆಗಳು ಬಿಸಿಗೆ ತಕ್ಕಂತೆ ದೇಹವನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತವೆ. 35/೪೦ ಡಿಗ್ರಿ ಬಿಸಿಗೂ ಒಗ್ಗಿಕೊಳ್ಳುತ್ತವೆ. ಇದರ ಬದಲಿಗೆ 40ಡಿಗ್ರಿ ಬಿಸಿ ನೀರಿಗೆ ಒಮ್ಮೆಲೇ ಕಪ್ಪೆಯನ್ನು ಹಾಕಿದರೆ ಶಾಖಕ್ಕೆ ಅವು ಸತ್ತು ಹೋಗುತ್ತವೆ.

ಆಂಥ್ರೋಪಿಕ್
ಆರೋಗ್ಯ ವಿಮೆ ಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳು (ಹಣಕ್ಲಾಸು)

ಮುಂದೈದು ವರ್ಷದಲ್ಲಿ ಜಗತ್ತು ಮತ್ತೊಂದು ಮಗ್ಗಲು ಬದಲಾಯಿಸಲು ಆಗಲೇ ಸಿದ್ಧವಾಗುತ್ತಿದೆ . ಎಐ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಂದಿಗೆ ಎಲ್ಲಾ ಕ್ಷೇತ್ರದಲ್ಲೂ ನುಗ್ಗುತ್ತಿದೆ . ಸಿಂಗಲ್ ಅಬ್ಜೆಕ್ಟಿವ್ ಪೆರ್ಫಾರ್ಮನ್ಸ್ ಮ್ಯಾಕ್ಸಿಮೈಸ್ ಕೊಡ್ಸ್ ಅನ್ನುವುದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಒಂದು ಭಾಗ .ಇದೊಂತರ ಡೇಂಜರಸ್ , ಡೆಡ್ಲಿ ಎಲ್ಲಕ್ಕೂ ಮುಖ್ಯವಾಗಿ ಗ್ರೀಡಿ (ಆಸೆಬುರುಕ ) ಕೋಡ್ ! . ಉದಾಹರಣೆ ನೋಡಿ ' ಏನೇ ಆಗಲಿ ಐಡೆಂಟಿಫೈಡ್ ಕಾರ್ಯ ಸಾಧಿಸಲೇಬೇಕು ' ಎನ್ನುವ ಕೋಡ್ ಬರೆದು ಅದರಿಂದ ರೋಬಾಟ್ ಸಿದ್ದವಾಯಿತು ಎನ್ನಿ ಸಾವಿರ ಜನರನ್ನ ಕೊಂದಾದರೂ ಸರಿಯೇ ಅದು ತನ್ನ ಕಾರ್ಯ ಸಾಧಿಸುತ್ತೆ . ಇಂತಹ ರೋಬಾಟ್ ಸೃಷ್ಟಿ ಮತ್ತು ಅವುಗಳ -ಮನುಷ್ಯರ ನಡುವಿನ ಕಿತ್ತಾಟವನ್ನ ತೋರಿಸುವ ಹಾಲಿವುಡ್ ಚಿತ್ರಗಳನ್ನ ನೀವು ನೋಡಿರುತ್ತೀರಿ.ನಮ್ಮ ರಜನೀಕಾಂತ್ ಅವರ ರೋಬಾಟ್ ಚಿತ್ರವನ್ನು ನೆನಪಿಸಿಕೊಂಡರೂ ಸಾಕು.

ಭಯ ಬೇಡ ಅಂತಹ ರೋಬಾಟ್ ಯಾರೂ ತಯಾರು ಮಾಡುವುದಿಲ್ಲ ಎನ್ನುವ ಗ್ಯಾರಂಟಿ ಕೊಡುವ ಕಾಲಘಟ್ಟದಲ್ಲಿ ನಾವಿಲ್ಲ! ಇದಕ್ಕೆ ಸಮಯ ತಗಲಬಹುದು.ಆದರೆ ಇಂತಹ ಕೋಡ್ ಗಳು ನಾವು ಬಳಸುವ ಹತ್ತಾರು ಆಪ್ , ವೆಬ್ಸೈಟ್ ಎಲ್ಲಾ ಕಡೆ ಹರಿ ಬಿಡುತ್ತಾರೆ . ಫಲಿತಾಂಶ ನಿಮಗೇನು ಬೇಕು ಎನ್ನುವುದು ನೀವು ಹೇಳದೆ ವೆಬ್ ಸೈಟ್ ಅಥವಾ ಆಪ್ ಮಾಲೀಕರಿಗೆ ತಿಳಿಯುತ್ತೆ . ನೀವು ಬಾರ್ಸಿಲೋನಾಗೆ ಟಿಕೆಟ್ ಹುಡುಕುತ್ತಾ ಇದ್ದರೆ ನಿಮ್ಮ ದಿನಾಂಕ ಎಲ್ಲಾ ಅವು ನೆನಪಿನಲ್ಲಿ ಇಟ್ಟು ಕೊಳ್ಳುತ್ತವೆ . ನೀವೇ ಏನೇ ಮಾಡಿ , ಫ್ಲೈಟ್ ಖಾಲಿ ಹೋದರೂ ಸರಿ ಅವು ಕಡಿಮೆ ದರದಲ್ಲಿ ನಿಮಗೆ ಟಿಕೆಟ್ ಮಾರುವುದಿಲ್ಲ . ವೆಲ್ಕಮ್ ಟು ಸಿಂಗಲ್ ಅಬ್ಜೆಕ್ಟಿವ್ ಪೆರ್ಫಾರ್ಮನ್ಸ್ ಮ್ಯಾಕ್ಸಿಮೈಸ್ ಕೊಡ್ಸ್. ಇನ್ನೊಂದು ವಿಶೇಷವೇನು ಗೊತ್ತೇ ? ನೀವು ಏರ್ಲೈನ್ಸ್ , ವೆಬ್ಸೈಟ್ ಬದಲಾವಣೆ ಮಾಡಿದರೂ ಪ್ರಯೋಜನವಿಲ್ಲ , ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡರೂ ಉಹೂ ಇಲ್ಲ , ಹಾಳಾಗಿ ಹೋಗಲಿ ಬಾರ್ಸಿಲೋನಾ ಬದಲಿಗೆ ಪಕ್ಕದ ಸಿಂಗಪುರಕ್ಕೆ ಹೋಗೋಣ ಎಂದರೂ ಅದು ನಿಮಗೆ ಹೆಚ್ಚಿನ ಬೆಲೆಯಲ್ಲಿ ಏರ್ ಟಿಕೆಟ್ ಮಾರದೆ ಬಿಡುವುದಿಲ್ಲ. ಏಕೆಂದರೆ ಅದಕ್ಕೆ ನಿಮಗೆ ರಜಾ ಇರುವುದು ಮತ್ತು ಎಲ್ಲಿಗಾದರೂ ಸರಿಯೇ ಟ್ರಿಪ್ ಹೋಗುತ್ತೀರಿ ಎನ್ನುವ ಸೂಕ್ಷ್ಮವನ್ನ ಗ್ರಹಿಸಿ ಬಿಟ್ಟಿರುತ್ತವೆ. ಮಜಾ ನೋಡಿ ಇವತ್ತು ನಾವು ಟ್ರಿಪ್ ಹೋಗುತ್ತಿದ್ದೇವೆ ಎಂದು ಹೇಳಿಕೊಳ್ಳಲು ಸರಿಯಾಗಿ ನಾಲ್ಕು ಜನ ಬದುಕಿನಲ್ಲಿರುವುದಿಲ್ಲ ! ಅಷ್ಟು ಚಂದದ ಸಂಬಂಧಗಳ ಸರದಾರರು ನಾವು !! ಬಟ್ ಐರನಿ ನೋಡಿ ಕಣ್ಣಿಗೆ ಕಾಣದವರಿಗೆ ನಮ್ಮೆಲ್ಲಾ ಡೀಟೇಲ್ಸ್ ಗೊತ್ತಿರುತ್ತದೆ.

ಕೊನೆಮಾತು: ಬದಲಾವಣೆ ಎನ್ನುವುದು ನಿಶ್ಚಿತ. ಅವುಗಳನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ನಾವು AI ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕೆತೆಯಿಲ್ಲ. ಬಂದದ್ದನ್ನು ಎದುರಿಸುವ , ಅದಕ್ಕೆ ಒಗ್ಗಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳದೆ ಹೋದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ. ಉಳಿದಂತೆ ಬದುಕಲು ಹೊಸ ಹೊಸ ದಾರಿಗಳು , ಹಣ ಗಳಿಸಲು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಜಾಗತಿಕವಾಗಿ ಇಷ್ಟು ದಿನದ ಆಟದಲ್ಲಿ ಇಂದಿಗೂ ವೈಯಕ್ತಿಕವಾಗಿ ಒಬ್ಬ ಟ್ರಿಲಿಯನೇರ್ ಸೃಷ್ಟಿಯಾಗಿಲ್ಲ. ಮುಂದಿನ ದಿನಗಳಲ್ಲಿ ಹತ್ತಾರು , ನೂರಾರು ಟ್ರಿಲಿಯನೇರ್ಗಳನ್ನು ಹೊಸ ಆಟ ಸೃಷ್ಟಿ ಮಾಡುತ್ತದೆ. ನಾವು ಟ್ರಿಲಿಯನೇರ್ ಆಗುವುದು ಬೇರೆ ಮಾತು , ಸುಂದರ ಬದುಕು ಕಟ್ಟಿಕೊಳ್ಳಲು ಬೇಕಾಗುವ ಕನಿಷ್ಠ ಬದಲಾವಣೆಗಾದರೂ ನಾವು ಸಿದ್ಧವಾಗಬೇಕು. ಈ ಹೊಸ ಆಟದಲ್ಲಿ ಮಾನಸಿಕವಾಗಿ ಸಿದ್ಧವಾದವರಿಗೆ ಗೆಲುವು ನಿಶ್ಚಿತ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com