ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್‌ ದೃಷ್ಟಿ (ಜಾಗತಿಕ ಜಗಲಿ)

2012ರ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ, ಅಮೆರಿಕ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿ, ಕೊಲಂಬಿಯಾದ ವ್ಯಾಪಾರದಲ್ಲಿ 34% ಪಾಲು ಹೊಂದಿತ್ತು.
ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್‌ ದೃಷ್ಟಿ (ಜಾಗತಿಕ ಜಗಲಿ)
Updated on
Summary

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲ್ಯಾಟಿನ್‌ ಅಮೆರಿಕದ ಕೊಲಂಬಿಯಾ, ಮೆಕ್ಸಿಕೋ ಮತ್ತು ಕ್ಯೂಬಾಗಳಿಗೆ ಎಚ್ಚರಿಕೆ ನೀಡಿದ್ದು, ಈ ಪ್ರದೇಶದಲ್ಲಿ ಆಘಾತದ ಅಲೆ ಉಂಟಾಗಿದೆ. ಟ್ರಂಪ್‌ ಮಾದಕ ದ್ರವ್ಯಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಬೆಳವಣಿಗೆಗಳು ಪ್ರಾದೇಶಿಕ ಶಾಂತಿಯನ್ನು ಹದಗೆಡಿಸಬಹುದು.

ಡೊನಾಲ್ಡ್‌ ಟ್ರಂಪ್‌ ಎರಡನೇ ಅವಧಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಶ್ವೇತ ಭವನಕ್ಕೆ ಮರಳಿದ್ದು, ಇದರ ಬಿಸಿ ನೇರವಾಗಿ ಲ್ಯಾಟಿನ್‌ ಅಮೆರಿಕದ ದೇಶಗಳಿಗೆ ತಟ್ಟಿದೆ. ಇತ್ತೀಚೆಗೆ ಟ್ರಂಪ್‌ ಕೊಲಂಬಿಯಾ, ಮೆಕ್ಸಿಕೋ ಮತ್ತು ಕ್ಯೂಬಾಗಳಿಗೆ ಎಚ್ಚರಿಕೆ ನೀಡಿರುವುದು ಈ ಪ್ರದೇಶದಲ್ಲಿ ಹೊಸ ಆಘಾತದ ಅಲೆಯನ್ನೇ ರವಾನಿಸಿದೆ. ಆದರೆ ವಾಸ್ತವವಾಗಿ ಲ್ಯಾಟಿನ್‌ ಅಮೆರಿಕದಲ್ಲಿ ನಡೆಯುತ್ತಿರುವುದೇನು? ಇದನ್ನು ನಾವು ಸರಳವಾಗಿ ಈ ಲೇಖನದಲ್ಲಿ ತಿಳಿಯಲು ಪ್ರಯತ್ನಿಸೋಣ.

ದೊಡ್ಡ ಚಿತ್ರಣ

ವೆನೆಜುವೆಲಾ ಅಧ್ಯಕ್ಷ ನಿಕೊಲಾಸ್‌ ಮಡುರೊ ಬಂಧನದ ಬಳಿಕ, ಡೊನಾಲ್ಡ್‌ ಟ್ರಂಪ್‌ ಹೆಚ್ಚೇನೂ ಸಮಯ ವ್ಯರ್ಥ ಮಾಡಿಲ್ಲ. ಅವರು ಕೊಲಂಬಿಯ ಮತ್ತು ಮೆಕ್ಸಿಕೊಗಳು ಅಕ್ರಮ ಮಾದಕ ದ್ರವ್ಯಗಳು ಯುಎಸ್‌ಎ ತಲುಪದಂತೆ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ತೀಕ್ಷ್ಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ. ಇದರೊಡನೆ, ವೆನೆಜುವೆಲಾದ ಆತ್ಮೀಯ ಸ್ನೇಹಿತನಾದ ಕ್ಯೂಬಾ ಸಹ ಸದ್ಯದಲ್ಲೇ ಪತನಗೊಳ್ಳಲಿದೆ ಎಂದು ಟ್ರಂಪ್‌ ಭವಿಷ್ಯ ನುಡಿದಿದ್ದಾರೆ. ಸ್ಪೇನ್‌, ಬ್ರೆಜಿಲ್‌, ಚಿಲಿ, ಕೊಲಂಬಿಯಾ, ಮೆಕ್ಸಿಕೋ ಮತ್ತು ಉರುಗ್ವೇ ಸೇರಿದಂತೆ ಆರು ದೇಶಗಳು ಈ ಬೆಳವಣಿಗೆಯನ್ನು ಅಪಾಯಕಾರಿ ಎಂದು ಕರೆದಿದ್ದು, ಇಂತಹ ಕ್ರಮಗಳು ಜನ ಸಾಮಾನ್ಯರಿಗೆ ತೊಂದರೆ ಉಂಟುಮಾಡಿ, ಪ್ರಾದೇಶಿಕ ಶಾಂತಿಯನ್ನು ಹದಗೆಡಿಸಲಿದೆ ಎಂದು ಎಚ್ಚರಿಸಿವೆ.

ಇದು ಕೇವಲ ಪಶ್ಚಿಮ ಗೋಳಾರ್ಧದ ಮೇಲೆ ಅಮೆರಿಕ ನಿಯಂತ್ರಣ ಹೇರಿದ್ದ 1823ರ, ಹಳೆಯ ಮೊನ್ರೊ ಸಿದ್ಧಾಂತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಉದ್ವಿಗ್ನತೆಗಳು ಮಾದಕ ದ್ರವ್ಯ ಕಳ್ಳ ಸಾಗಣೆ, ವಲಸೆ ಸಮಸ್ಯೆಗಳು, ರಾಜಕೀಯ ಭಿನ್ನಾಭಿಪ್ರಾಯಗಳು, ಮತ್ತು ಲ್ಯಾಟಿನ್‌ ಅಮೆರಿಕದ ದೇಶಗಳಲ್ಲಿ ತನ್ನ ಪರವಾದ ಸರ್ಕಾರಗಳು ಇರಬೇಕೆನ್ನುವ ಅಮೆರಿಕದ ಹಂಬಲಹಳ ಪರಿಣಾಮವಾಗಿದೆ.

ಕೊಲಂಬಿಯಾ: ಮಿತ್ರನಿಂದ ಶತ್ರುವಾಗುವತ್ತ?

ಬಹುತೇಕ 25 ವರ್ಷಗಳ ಕಾಲ, ದಕ್ಷಿಣ ಅಮೆರಿಕದಲ್ಲಿ ಕೊಲಂಬಿಯಾ ಅಮೆರಿಕದ ಅತ್ಯಂತ ಪ್ರಬಲ ಸಹಯೋಗಿಯಾಗಿತ್ತು. 2012ರ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ, ಅಮೆರಿಕ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿ, ಕೊಲಂಬಿಯಾದ ವ್ಯಾಪಾರದಲ್ಲಿ 34% ಪಾಲು ಹೊಂದಿತ್ತು. ಕೊಲಂಬಿಯಾ ಪ್ರತಿವರ್ಷವೂ ಅಮೆರಿಕಕ್ಕೆ ಬಿಲಿಯನ್‌ಗಟ್ಟಲೆ ರೂಪಾಯಿ ಬೆಲೆಬಾಳುವ ಕಾಫಿ, ಗುಲಾಬಿ ಹೂಗಳು ಮತ್ತು ಕಚ್ಚಾ ತೈಲಗಳನ್ನು ರಫ್ತು ಮಾಡುತ್ತದೆ.

ಆದರೆ, ಇಲ್ಲೊಂದು ಗಮನಾರ್ಹ ಅಂಶವಿದೆ. ಕೊಲಂಬಿಯಾ ಜಗತ್ತಿನ ಮೂರನೇ ಎರಡರಷ್ಟು ಪ್ರಮಾಣದ ಕೊಕೇನ್‌ ಮತ್ತು ಕೋಕಾ ಎಲೆಗಳನ್ನು ಬೆಳೆಯುತ್ತದೆ. ಅಮೆರಿಕ ದಶಕಗಳ ಕಾಲ ಕೊಲಂಬಿಯಾದಲ್ಲಿ ಮಾದಕ ದ್ರವ್ಯ ವಿರುದ್ಧ ಸೆಣಸಲು ಹಣ ಹೂಡಿದ್ದರೂ, ವಾಸ್ತವವಾಗಿ 2013ರ ಬಳಿಕ ಕೊಲಂಬಿಯಾದಲ್ಲಿ ಮಾದಕ ದ್ರವ್ಯಗಳ ಉತ್ಪಾದನೆ ಹೆಚ್ಚಾಗಿದೆ. ಯುಎಸ್‌ಎಯಲ್ಲಿ ಅಂದಾಜು 16 ಲಕ್ಷ ಕೊಲಂಬಿಯನ್ನರು ವಾಸಿಸುತ್ತಿದ್ದು, ದಕ್ಷಿಣ ಅಮೆರಿಕದ ವಲಸಿಗರ ಪೈಕಿ 25% ಕೊಲಂಬಿಯನ್ನರೇ ಆಗಿದ್ದಾರೆ.

ಗುಸ್ತಾವೋ ಪೆಟ್ರೊ ಕೊಲಂಬಿಯಾದ ಮೊದಲ ಎಡಪಂಥೀಯ ಅಧ್ಯಕ್ಷರಾಗಿ ಆಯ್ಕೆಯಾದಾಗ ಉಭಯ ದೇಶಗಳ ನಡುವಿನ ಪರಿಸ್ಥಿತಿ ಹದಗೆಡತೊಡಗಿತು. ಪೆಟ್ರೊ ಅಮೆರಿಕದ ಮಾದಕ ದ್ರವ್ಯ ನೀತಿಗಳನ್ನು ಪಾಲಿಸಲು ನಿರಾಕರಿಸಿ, ಬ್ರಿಕ್ಸ್+‌ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ಆಸಕ್ತಿ ತೋರಿಸಿದರು. ಇದರೊಡನೆ, ಇಸ್ರೇಲ್‌ ಜೊತೆಗಿನ ಸಂಬಂಧ ಕಡಿತಗೊಳಿಸಿದರು. ಜನವರಿ 2025ರಲ್ಲಿ, ಅಮೆರಿಕದಿಂದ ಗಡೀಪಾರಾಗಿ ಬಂದಿದ್ದ ಕೊಲಂಬಿಯನ್‌ ವಲಸಿಗರನ್ನು ಹೊಂದಿದ್ದ ವಿಮಾನಗಳನ್ನು ಒಳ ಬಿಡಲು ಕೊಲಂಬಿಯಾ ಆರಂಭದಲ್ಲಿ ನಿರಾಕರಿಸಿತ್ತು. ಆದರೆ, ಟ್ರಂಪ್‌ ಇದರ ಪರಿಣಾಮ ತೀವ್ರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಕೊಲಂಬಿಯಾಗೆ ನೀಡುತ್ತಿದ್ದ ವಿದೇಶೀ ಸಹಾಯಧನ ಕಡಿತ, ಹೊಸದಾದ ಸುಂಕಗಳ ಹೇರಿಕೆ ಅಧ್ಯಕ್ಷ ಪೆಟ್ರೋಗೆ ಅತಿಯಾಗಿ ಕೋಪ ಬರಿಸಿದ್ದು, ಅವರು ಅಮೆರಿಕದ ಕ್ರಮಗಳು ಲ್ಯಾಟಿನ್‌ ಅಮೆರಿಕದ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಕರೆದಿದ್ದರು.

ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್‌ ದೃಷ್ಟಿ (ಜಾಗತಿಕ ಜಗಲಿ)
ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ‌ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)

ಮೆಕ್ಸಿಕೊ: ಗಡಿ ಕುರಿತ ಚಕಮಕಿ

ಮೆಕ್ಸಿಕೋ ಮತ್ತು ಅಮೆರಿಕಗಳ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾಗಿದೆ. ಹಿಂದಿನ ತೊಂದರೆಗಳ ಹೊರತಾಗಿಯೂ, ಉಭಯ ದೇಶಗಳು ಈಗ ಪ್ರಮುಖ ವ್ಯಾಪಾರ ಸಹಯೋಗಿಗಳಾಗಿವೆ. 2023ರಲ್ಲಿ, ಮೆಕ್ಸಿಕೊ ಅಮೆರಿಕದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ, ಬಹುತೇಕ 72 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಡೆಸಿತ್ತು. ಉಭಯ ದೇಶಗಳ ನಡುವಿನ 3,145 ಕಿಲೋಮೀಟರ್‌ ಉದ್ದನೆಯ ಗಡಿ ನಿರಂತರವಾದ ಸವಾಲುಗಳನ್ನು ಒಡ್ಡುತ್ತಲೇ ಬಂದಿದೆ. ಈ ಸವಾಲುಗಳಲ್ಲಿ ಅಕ್ರಮ ವಲಸೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಅತ್ಯಂತ ಪ್ರಮುಖವಾಗಿವೆ.

ಮೆಕ್ಸಿಕೋ ಜಗತ್ತಿನ ಅತಿದೊಡ್ಡ ಫೆಂಟಾನಿಲ್‌ ಉತ್ಪಾದಕನಾಗಿದೆ. ಈ ಫೆಂಟಾನಿಲ್‌ ಒಂದು ಸಿಂಥೆಟಿಕ್‌ ಮಾದಕ ದ್ರವ್ಯವಾಗಿದ್ದು, ಅಮೆರಿಕದಲ್ಲಿ ಇದರ ಅತಿಯಾದ ಬಳಕೆಯಿಂದ ಸಾವಿರಾರು ಸಾವುಗಳು ಸಂಭವಿಸಿವೆ. ಟ್ರಂಪ್‌ ತನ್ನ ಮೊದಲ ಅವಧಿಯಲ್ಲಿ ಮೆಕ್ಸಿಕೋ ಗಡಿಯಲ್ಲಿ ಬೃಹತ್‌ ಗೋಡೆ ನಿರ್ಮಿಸಿ, ಅದರ ವೆಚ್ಚವನ್ನು ಮೆಕ್ಸಿಕೊ ಪಾವತಿ ಮಾಡುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಟ್ರಂಪ್‌ ಮಾತ್ರ ಇನ್ನೂ ಆ ಗುರಿಯನ್ನು ಕೈ ಬಿಟ್ಟಿಲ್ಲ.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ, ಟ್ರಂಪ್‌ ಗಡಿಯ ಗೋಡೆಯ ಯೋಜನೆಯನ್ನು ಪುನರಾರಂಭಿಸಿ, ಮೆಕ್ಸಿಕೋ ಮೇಲೆ ಭಾರೀ ಸುಂಕಗಳನ್ನು ಘೋಷಿಸಿದರು. ಮೆಕ್ಸಿಕೊ ಫೆಂಟಾನಿಲ್‌ ಕಳ್ಳ ಸಾಗಣೆಯನ್ನು ನಿಲ್ಲಿಸದಿರುವುದಕ್ಕೆ ಈ ಶಿಕ್ಷೆ ಎಂದು ಟ್ರಂಪ್‌ ಹೇಳಿದ್ದರು. ಅವರು ಲ್ಯಾಟಿನ್‌ ಅಮೆರಿಕದ ಎಂಟು ಅಪರಾಧಿ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳು ಎಂದು ಘೋಷಿಸಿ, ಮಾದಕ ದ್ರವ್ಯ ಕಳ್ಳ ಸಾಗಣೆಯನ್ನು ತಡೆಯುವ ಸಲುವಾಗಿ ಮೆಕ್ಸಿಕೋದ ಒಳಗೆ ಸಂಭಾವ್ಯ ಡ್ರೋನ್‌ ದಾಳಿಯ ಸುಳಿವನ್ನೂ ನೀಡಿದ್ದಾರೆ. ಇದೊಂದು ಅತ್ಯಂತ ಆಕ್ರಮಣಕಾರಿ ನಿಲುವಾಗಿದ್ದು, ಹಿಂದೆಂದೂ ಇಂತಹ ಘಟನೆ ನಡೆದಿರಲಿಲ್ಲ.

ಕ್ಯೂಬಾ: ಸುದೀರ್ಘ ಶೀತಲ ಸಮರ

ಅಮೆರಿಕ ಮತ್ತು ಕ್ಯೂಬಾಗಳ ಕಥೆ ಬಹಳ ಭಿನ್ನವಾದದ್ದು. ಹಲವು ದಶಕಗಳ ಕಾಲ ಅವುಗಳು ಶತ್ರುಗಳೇ ಆಗಿದ್ದವು. 1950ರ ದಶಕದಲ್ಲಿ ಫಿಡೆಲ್‌ ಕ್ಯಾಸ್ಟ್ರೋರ ಕ್ರಾಂತಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಉರುಳಿಸಿದ ಬಳಿಕ, ಕ್ಯೂಬಾ ಸೋವಿಯತ್‌ ಒಕ್ಕೂಟಕ್ಕೆ ಹೆಚ್ಚು ಆತ್ಮೀಯವಾಗುತ್ತಾ ಸಾಗಿತು. ಅಮೆರಿಕ ಇದಕ್ಕೆ ವ್ಯಾಪಾರ ನಿಷೇಧ ಮತ್ತು ಆರ್ಥಿಕ ನಿರ್ಬಂಧಗಳ ಮೂಲಕ ಪ್ರತಿಕ್ರಿಯಿಸಿದ್ದು, ಇದೇ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ.

ಈಗ ಕ್ಯೂಬಾ ತೈಲಕ್ಕಾಗಿ ವೆನೆಜುವೆಲಾ ಮೇಲೆ ಅವಲಂಬಿತವಾಗಿದ್ದು, ಚೀನಾ ಮತ್ತು ರಷ್ಯಾಗಳಿಂದ ಭಾರೀ ಹೂಡಿಕೆ ಪಡೆಯುತ್ತಿದೆ. ಈಗ ವೆನೆಜುವೆಲಾದ ಭವಿಷ್ಯ ಅನಿಶ್ಚಿತವಾಗಿದ್ದು, ಕ್ಯೂಬಾ ರಷ್ಯಾ ಕಡೆಗೆ ಹೆಚ್ಚು ವಾಲುವ ಸಾಧ್ಯತೆಗಳಿವೆ. ಇದಕ್ಕೆ ಅವೆರಡರ ನಡುವೆ ಇತ್ತೀಚೆಗೆ ನಡೆದ ಮಿಲಿಟರಿ ಮತ್ತು ಆರ್ಥಿಕ ಸಹಕಾರ ಕಾರಣವಾಗಬಹುದು.

ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ, 2008ರಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ, ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿ, 2014ರಲ್ಲಿ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸಿದರು. ಆದರೆ, ಟ್ರಂಪ್‌ ತನ್ನ ಮೊದಲ ಅವಧಿಯಲ್ಲೇ ಎಲ್ಲವನ್ನೂ ಮತ್ತೆ ಹಿಂಪಡೆದರು. ಅವರು ವ್ಯಾಪಾರ ನಿರ್ಬಂಧಗಳನ್ನು ಇನ್ನಷ್ಟು ಕಠಿಣವಾಗಿಸಿ, ಕ್ಯೂಬಾಗೆ ವೆನೆಜುವೆಲಾದ ತೈಲ ಪೂರೈಕೆಯನ್ನು ತಡೆದರು. ಇದು ಸಾಲದೆಂಬಂತೆ, ಟ್ರಂಪ್‌ ಕ್ಯೂಬಾವನ್ನು ಮತ್ತೆ ಭಯೋತ್ಪಾದನೆಯ ಪ್ರಾಯೋಜಕ ಎಂದು ಕರೆದರು.

ತನ್ನ ಎರಡನೇ ಅವಧಿಯಲ್ಲಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಸಹಜಗೊಳಿಸಲು ಬೈಡನ್‌ ಕೈಗೊಂಡಿದ್ದ ಕ್ರಮಗಳನ್ನು ರದ್ದುಗೊಳಿಸಿ, ಕ್ಯೂಬಾದ ಪ್ರವಾಸೋದ್ಯಮ ವಲಯದ ಮೇಲೆ ನಿರ್ಬಂಧಗಳನ್ನು ಹೇರಿದರು. ಕೋವಿಡ್‌ಗೆ ಮುನ್ನ ಪ್ರವಾಸೋದ್ಯಮ ಕ್ಯೂಬಾದ ಆರ್ಥಿಕತೆಗೆ 10% ಕೊಡುಗೆ ನೀಡುತ್ತಿತ್ತು. ಕ್ಯೂಬಾದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದ್ದು, ಜಿಡಿಪಿ ದರ 1.1% ಪತನ ಕಂಡಿದೆ. 2024ರಲ್ಲಿ ಹಣದುಬ್ಬರ 24% ತಲುಪಿದೆ. ಟ್ರಂಪ್‌ ಇತ್ತೀಚೆಗೆ ಕ್ಯೂಬಾ ಕುಸಿಯುತ್ತಿದೆ ಎಂದಿದ್ದು, ವೆನೆಜುವೆಲಾದ ತೈಲವಿಲ್ಲದೆ ಅದರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದಿದ್ದರು.

ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್‌ ದೃಷ್ಟಿ (ಜಾಗತಿಕ ಜಗಲಿ)
ರಕ್ಷಣಾ ಪೂರೈಕೆಗೆ ಯುರೋಪ್‌ ಬದಲು ಭಾರತದತ್ತ ಮುಖ ಮಾಡಿದ ಇಸ್ರೇಲ್ (ಜಾಗತಿಕ ಜಗಲಿ)

ನೈಜ ಪರಿಣಾಮ

ಇಂತಹ ಆಕ್ರಮಣಕಾರಿ ನೀತಿಗಳು ಲಕ್ಷಾಂತರ ಸಾಮಾನ್ಯ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಕೊಲಂಬಿಯನ್ನರು ಈಗಾಗಲೇ ತಮ್ಮ ಹೊಟ್ಟೆಪಾಡಿನ ಕುರಿತು ಆತಂಕಕ್ಕೆ ಒಳಗಾಗಿದ್ದು, ಗಡೀಪಾರಿನ ಭೀತಿಯನ್ನೂ ಎದುರಿಸುತ್ತಿದ್ದಾರೆ. ಮೆಕ್ಸಿಕನ್ನರು ಟ್ರಂಪ್‌ ಟ್ಯಾರಿಫ್‌ ಪರಿಣಾಮವಾಗಿ ಆರ್ಥಿಕ ಹಾನಿಯ ಚಿಂತೆಗೊಳಗಾಗಿದ್ದು, ತಮ್ಮ ನೆಲದ ಮೇಲೆ ಸಂಭಾವ್ಯ ಡ್ರೋನ್‌ ದಾಳಿ ಅವರನ್ನು ಆತಂಕಕ್ಕೆ ತಳ್ಳಿದೆ. ಕ್ಯೂಬನ್ನರು ಈಗಾಗಲೇ ಬಡತನದ ಸುಳಿಗೆ ಸಿಲುಕಿ ನರಳುತ್ತಿದ್ದು, ಅವರ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ.

ಈಗ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ, ಅಮೆರಿಕದ ಬೆದರಿಕೆಗಳು ಮತ್ತು ನಿರ್ಬಂಧಗಳು ಮಾದಕ ದ್ರವ್ಯ ಕಳ್ಳ ಸಾಗಣೆ, ಅಕ್ರಮ ವಲಸೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ? ಅಥವಾ ಅವು ಈಗಾಗಲೇ ಹತಾಶೆಗೊಳಗಾಗಿರುವ ಜನರನ್ನು ಇನ್ನಷ್ಟು ಅಪಾಯದ ಅಂಚಿಗೆ ತಳ್ಳಬಹುದೇ? ತೀವ್ರ ಆಕ್ರಮಣಕಾರಿ ಕಾರ್ಯ ವಿಧಾನಗಳು ದೀರ್ಘಾವಧಿಯ ಪರಿಹಾರಗಳನ್ನು ನೀಡುವುದಿಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.

ಟ್ರಂಪ್‌ ಅವರ ಲ್ಯಾಟಿನ್‌ ಅಮೆರಿಕ ಕಾರ್ಯತಂತ್ರ ಸಹಯೋಗ ಸಾಧನೆಗಿಂತಲೂ ಹೆಚ್ಚಾಗಿ ಶಕ್ತಿ ಪ್ರದರ್ಶನಕ್ಕೇ ಆದ್ಯತೆ ನೀಡಿರುವಂತೆ ಕಾಣುತ್ತಿದೆ. ಒಂದು ವೇಳೆ ಈ ವಿಧಾನ ಯಶಸ್ವಿಯಾಗುತ್ತದೋ, ಅಥವಾ ತಿರುಗೇಟು ನೀಡುತ್ತದೋ ಎನ್ನುವುದು ಮುಂದಿನ ತಿಂಗಳುಗಳಲ್ಲಿ ಸ್ಪಷ್ಟವಾಗಲಿದೆ. ಈ ದೇಶಗಳಲ್ಲಿರುವ ಮಿಲಿಯಾಂತರ ಸಾಮಾನ್ಯ ಜನರು ವಾಷಿಂಗ್ಟನ್‌ ಕೈಗೊಳ್ಳುವ ತೀರ್ಮಾನದ ಪರಿಣಾಮಗಳನ್ನು ಎದುರಿಸುವುದಂತೂ ಖಚಿತ. ಆದರೆ, ಅದರ ಪರಿಣಾಮ ಒಳಿತಾಗುತ್ತದೋ, ಅಥವಾ ಇನ್ನೂ ಕೆಟ್ಟದಾಗುತ್ತದೋ ಕಾಲವೇ ನಿರ್ಧರಿಸಬೇಕು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com