ಶತಮಾನದ ಒಪ್ಪಂದ: 3.25 ಲಕ್ಷ ಕೋಟಿ ರೂಪಾಯಿಯ ರಫೇಲ್ ಖರೀದಿಯ ಕಥೆ

ಈಗ ಭಾರತೀಯ ವಾಯು ಸೇನೆಯ ಬಳಿ 36 ರಫೇಲ್ ಯುದ್ಧ ವಿಮಾನಗಳಿದ್ದು, ಭಾರತೀಯ ನೌಕಾ ಸೇನೆ 26 ನೌಕಾಪಡೆಯ ರಫೇಲ್ ಆವೃತ್ತಿಯ ಖರೀದಿಗೆ ಆದೇಶ ಸಲ್ಲಿಸಿದೆ.
File photo
ಸಾಂಕೇತಿಕ ಚಿತ್ರonline desk
Updated on

ನಮ್ಮ ಆಗಸಗಳನ್ನು ಜಗತ್ತಿನ ಅತ್ಯುತ್ತಮ, ಅತ್ಯಾಧುನಿಕ ಯುದ್ಧ ವಿಮಾನಗಳು ರಕ್ಷಿಸುವುದನ್ನು ಊಹಿಸಿಕೊಳ್ಳಿ. ಪ್ರಸ್ತುತ ಈಗ ಆ ದಿಕ್ಕಿನಲ್ಲೇ ಭಾರತ ಸಾಗುತ್ತಿದೆ! ಜನವರಿ 16, ಶುಕ್ರವಾರದಂದು ಭಾರತ ತನ್ನ ರಕ್ಷಣೆಯಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟಿದ್ದು, ನಮ್ಮ ರಕ್ಷಣಾ ಖರೀದಿ ಮಂಡಳಿ ಅಂದಾಜು 3.25 ಲಕ್ಷ ಕೋಟಿ ರೂಪಾಯಿ (ಬಹುತೇಕ 39 ಬಿಲಿಯನ್ ಡಾಲರ್) ವೆಚ್ಚದಲ್ಲಿ ಫ್ರಾನ್ಸಿನಿಂದ 114 ನೂತನ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಹಸಿರು ನಿಶಾನೆ ನೀಡಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಕ್ಷಣಾ ಖರೀದಿ ಎನಿಸಲಿದೆ. ಇದು ಕೇವಲ ಯುದ್ಧ ವಿಮಾನಗಳ ಖರೀದಿ ಮಾತ್ರವಲ್ಲ. ಬದಲಿಗೆ, ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತಾ, ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸಲಿದೆ.

ಈಗ ಭಾರತೀಯ ವಾಯು ಸೇನೆಯ ಬಳಿ 36 ರಫೇಲ್ ಯುದ್ಧ ವಿಮಾನಗಳಿದ್ದು, ಭಾರತೀಯ ನೌಕಾ ಸೇನೆ 26 ನೌಕಾಪಡೆಯ ರಫೇಲ್ ಆವೃತ್ತಿಯ ಖರೀದಿಗೆ ಆದೇಶ ಸಲ್ಲಿಸಿದೆ. ಈ ನೂತನ ಖರೀದಿಯೊಡನೆ, ಭಾರತ 176 ರಫೇಲ್ ಯುದ್ಧ ವಿಮಾನಗಳ ಪ್ರಬಲ ಬಳಗವನ್ನು ಹೊಂದಲಿದೆ. ಇದು ಒಂದು ಉತ್ತಮ ಕ್ರಿಕೆಟ್ ತಂಡದ ಬದಲಿಗೆ, ಏಕ ಕಾಲದಲ್ಲಿ ಮೂರು ವಿಶ್ವಕಪ್ ಗೆಲ್ಲಬಲ್ಲ ತಂಡಗಳನ್ನು ಹೊಂದಿದಂತಾಗಲಿದೆ!

ಭಾರತಕ್ಕೆ ಇಷ್ಟೊಂದು ರಫೇಲ್ ಯುದ್ಧ ವಿಮಾನಗಳ ಅಗತ್ಯವೇನು?

ನಮ್ಮ ವಾಯು ಸೇನೆಯನ್ನು ಒಂದು ದೊಡ್ಡ ಕಟ್ಟಡವನ್ನು ಎಲ್ಲಾ ಕಡೆಗಳಿಂದಲೂ ರಕ್ಷಿಸುವ ಭದ್ರತಾ ಸಿಬ್ಬಂದಿಗಳಿಗೆ ಹೋಲಿಸಿ. ಈಗಿನ ಪರಿಸ್ಥಿತಿಯಲ್ಲಿ, ನಮ್ಮ ದೇಶದ ಎಲ್ಲ ಗಡಿಗಳನ್ನೂ ಸಮರ್ಥವಾಗಿ ಕಾಯಲು ಭಾರತೀಯ ವಾಯು ಸೇನೆಯ ಬಳಿ 42.5 ಸ್ಕ್ವಾಡ್ರನ್ ಯುದ್ಧ ವಿಮಾನಗಳು ಇರಬೇಕಿತ್ತು. ಒಂದು ಸ್ಕ್ವಾಡ್ರನ್ ಎಂದರೆ 16ರಿಂದ 18 ಯುದ್ಧ ವಿಮಾನಗಳ ಗುಂಪು. ಈಗ ಏಕಕಾಲದಲ್ಲಿ ಪಾಕಿಸ್ತಾನ ಮತ್ತು ಚೀನಾದ ಕಡೆಗಳಿಂದ ಭಾರತಕ್ಕೆ ಭದ್ರತಾ ಅಪಾಯಗಳು ಇರುವಾಗ, ಇಷ್ಟು ಪ್ರಮಾಣದ ಸ್ಕ್ವಾಡ್ರನ್‌ಗಳು ಅತ್ಯವಶ್ಯಕ. ಆದರೆ, ಇಂದು ನಮ್ಮ ಬಳಿ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರವೇ ಲಭ್ಯವಿವೆ. ಇದು ನಿಜಕ್ಕೂ ಬಲುದೊಡ್ಡ ಪ್ರಮಾಣದ ಕೊರತೆ! ಭಾರತ ಹೊಸ ಯುದ್ಧ ವಿಮಾನಗಳನ್ನು ತರುವುದಕ್ಕಿಂತಲೂ ಹೆಚ್ಚು ವೇಗವಾಗಿ ಹಲವು ದಶಕಗಳ ಕಾಲ ಸಮರ್ಥವಾಗಿ ಸೇವೆ ಸಲ್ಲಿಸಿರುವ ಮಿಗ್-21ರಂತಹ ಹಳೆಯ ಯುದ್ಧ ವಿಮಾನಗಳು ನಿವೃತ್ತವಾಗುತ್ತಿವೆ. ಇದು ಒಂದು ರೀತಿಯಲ್ಲಿ ಅನುಭವಿ ಭದ್ರತಾ ಸಿಬ್ಬಂದಿಗಳು ನಿವೃತ್ತಿ ಹೊಂದುತ್ತಿದ್ದು, ಅವರ ಜಾಗದಲ್ಲಿ ಯುವ ಸಿಬ್ಬಂದಿಗಳ ನೇಮಕಾತಿ ನಿರೀಕ್ಷಿತ ವೇಗದಲ್ಲಿ ನಡೆಯದಿರುವ ಪರಿಸ್ಥಿತಿಗೆ ಹೋಲಿಸಬಹುದು. ಇದು ನಮ್ಮ ವಾಯು ರಕ್ಷಣೆಯಲ್ಲಿ ಅಪಾಯಕಾರಿ ಅಂತರವನ್ನು ಸೃಷ್ಟಿಸುತ್ತಿದೆ. ಆದರೆ, ನೂತನ ರಫೇಲ್ ಯುದ್ಧ ವಿಮಾನಗಳ ಖರೀದಿಯಿಂದ ಈ ಅಂತರವನ್ನು ಕ್ಷಿಪ್ರವಾಗಿ ತುಂಬಿ, ನಮ್ಮ ಗಡಿಗಳನ್ನು ಇನ್ನಷ್ಟು ಸುರಕ್ಷಿತವಾಗಿಸಲು ಸಾಧ್ಯವಾಗುತ್ತದೆ.

ರಫೇಲ್ ಯುದ್ಧ ವಿಮಾನಗಳೇಕೆ ಸೂಪರ್ ಫೈಟರ್‌ಗಳಾಗಿವೆ?

ರಫೇಲ್ ಒಂದು ಸಾಮಾನ್ಯವಾದ ಯುದ್ಧ ವಿಮಾನವಲ್ಲ. ಇತರ ಯುದ್ಧ ವಿಮಾನಗಳು ಸಾಮಾನ್ಯ ಫೋನ್ನಗಳಂತಿದ್ದರೆ, ರಫೇಲ್ ಒಂದು ಸ್ಮಾರ್ಟ್ ಫೋನ್ ಇದ್ದಂತೆ. ಈ ಫ್ರೆಂಚ್ ನಿರ್ಮಾಣದ ಯುದ್ಧ ವಿಮಾನ ವಾಯು ಯುದ್ಧ (ಶತ್ರು ಯುದ್ಧ ವಿಮಾನಗಳ ವಿರುದ್ಧ ಸೆಣಸಾಟ), ಭೂ ದಾಳಿ (ನೆಲದ ಮೇಲಿರುವ ಗುರಿಗಳ ಮೇಲೆ ಆಕ್ರಮಣ), ಮತ್ತು ಕಣ್ಗಾವಲು (ಗುಪ್ತಚರ ಮಾಹಿತಿ ಸಂಗ್ರಹಣೆ) ಮುಂತಾದ ಕಾರ್ಯಗಳನ್ನು ನಡೆಸಬಲ್ಲದು. ಇದನ್ನು ನಿಜಕ್ಕೂ ವಿಶೇಷವಾಗಿಸುವುದು ಇದು ಹೊಂದಿರುವ ತಂತ್ರಜ್ಞಾನ. ರಫೇಲ್ ಸ್ಪೆಕ್ಟ್ರಾ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಅನ್ನು ಹೊಂದಿದ್ದು, ಇದು ಶತ್ರುಗಳ ರೇಡಾರ್‌ಗಳು ಮತ್ತು ಕ್ಷಿಪಣಿಗಳನ್ನು ಗೊಂದಲಗೊಳಿಸುವ ಅಗೋಚರ ಕವಚ ಇದ್ದಂತಿದೆ. ಇದರಿಂದಾಗಿ ಶತ್ರುಗಳಿಗೆ ಯುದ್ಧ ವಿಮಾನವನ್ನು ಗುರುತಿಸುವುದು ಅಥವಾ ಅದರ ಮೇಲೆ ದಾಳಿ ನಡೆಸುವುದು ಅತ್ಯಂತ ಕಷ್ಟಕರವಾಗುತ್ತದೆ. ಈ ಯುದ್ಧ ವಿಮಾನ ಅತ್ಯಂತ ನಂಬಿಕಾರ್ಹವಾಗಿದ್ದು, 90%ದಷ್ಟು ಉಳಿಯುವ ಸಾಮರ್ಥ್ಯ ಹೊಂದಿದೆ. ಅಂದರೆ, 10ರಲ್ಲಿ 9 ಬಾರಿ ಇದು ಹಾರಲು ಸಿದ್ಧವಾಗಿದ್ದು, ಇದೊಂದು ಅಸಾಧಾರಣ ಅಂಕಿ ಅಂಶವಾಗಿದೆ. ಆದ್ದರಿಂದ ಭಾರತೀಯ ಪೈಲಟ್‌ಗಳು ರಫೇಲ್ ಯುದ್ಧ ವಿಮಾನವನ್ನು ಚಲಾಯಿಸಲು ಹೆಚ್ಚು ಇಷ್ಟಪಡುತ್ತಾರೆ.

File photo
ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ‌ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)

ಭಾರತದ ಭವಿಷ್ಯ ನಿರ್ಮಾಣ - ಮೇಕ್ ಇನ್ ಇಂಡಿಯಾ ಆಯಾಮ

ನಮ್ಮ ದೇಶಕ್ಕೆ ನಿಜಕ್ಕೂ ರೋಮಾಂಚಕವಾಗಿಸುವ ವಿಚಾರ ಇಲ್ಲಿದೆ. ಮೊದಲ 12ರಿಂದ 18 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಹಾರಾಟ ಸಜ್ಜಿತವಾಗಿಯೇ ಬರಲಿದ್ದು, ನಮ್ಮ ತುರ್ತು ಅವಶ್ಯಕತೆಗಳನ್ನು ಪೂರೈಸಲಿವೆ. ಆದರೆ, ಇನ್ನುಳಿದ ಯುದ್ಧ ವಿಮಾನಗಳನ್ನು 'ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ ಭಾರತದಲ್ಲೇ ತಯಾರಿಸಲಾಗುತ್ತದೆ. ಮೊದಲಿಗೆ, 30%ದಷ್ಟು ಬಿಡಿಭಾಗಗಳನ್ನು ಸ್ಥಳೀಯವಾಗಿ ನಿರ್ಮಿಸಲಾಗುತ್ತದೆ. ನಾವು ಇನ್ನಷ್ಟು ಸ್ಥಳೀಯವಾಗಿ ಅಭಿವೃದ್ಧಿ ಸಾಧಿಸಿದಂತೆ, ಅಂದರೆ ಹೈದರಾಬಾದಿನಲ್ಲಿ ಇಂಜಿನ್ ಉತ್ಪಾದನಾ ಘಟಕ, ಜೆವಾರ್‌ನಲ್ಲಿ ನಿರ್ವಹಣಾ ಘಟಕಗಳು ಸಿದ್ಧವಾದಂತೆ, ದೇಶೀಯ ನಿರ್ಮಾಣದ ಪ್ರಮಾಣ 60%ಗೆ ಹೆಚ್ಚಲಿದೆ. ಇನ್ನು ಟಾಟಾದಂತಹ ಸಂಸ್ಥೆಗಳು ಬಿಡಿಭಾಗಗಳನ್ನು ನಿರ್ಮಿಸಲಿದ್ದು, ಇದರಿಂದ ಸಾವಿರಾರು ಉದ್ಯೋಗಗಳು ನಿರ್ಮಾಣಗೊಳ್ಳಲಿವೆ. ಆ ಮೂಲಕ ನಮ್ಮ ರಕ್ಷಣಾ ಉದ್ಯಮ ಬಲವಾಗಿ ಬೆಳೆಯಲಿದೆ. ಇದರೊಡನೆ, ಭಾರತ ಈ ಯುದ್ಧ ವಿಮಾನಗಳಿಗೆ ದೇಶೀಯ ನಿರ್ಮಾಣದ ಆಯುಧಗಳು ಮತ್ತು ವ್ಯವಸ್ಥೆಗಳನ್ನು ಅಳವಡಿಸುವ ಗುರಿ ಹೊಂದಿದೆ. ಇದು ನಮಗೆ ಸಂಪೂರ್ಣ ಕಾರ್ಯಾಚರಣಾ ಸ್ವಾತಂತ್ರ್ಯ ಕಲ್ಪಿಸಲಿದೆ. ಆದರೆ, ವಿಮಾನದ ಮುಖ್ಯ ಸಾಫ್ಟ್‌ವೇರ್ ಕೋಡ್‌ಗಳು ಫ್ರಾನ್ಸ್ ಬಳಿಯೇ ಇರಲಿದ್ದು, ಇದು ಸೂಕ್ಷ್ಮ ತಂತ್ರಜ್ಞಾನವನ್ನು ರಕ್ಷಿಸುವ ಸಲುವಾಗಿ ಜಗತ್ತಿನಾದ್ಯಂತ ಅನುಸರಿಸುವ ಸಾಮಾನ್ಯ ವಿಧಾನವಾಗಿದೆ.

ನಮ್ಮ ಆಗಸಗಳನ್ನು ಆಕ್ರಮಣ ಮುಕ್ತವಾಗಿಸುವ ಪ್ರಯತ್ನ

ಇಂತಹ ಭಾರೀ ಪ್ರಮಾಣದ ಯುದ್ಧ ವಿಮಾನಗಳ ಖರೀದಿ ಭಾರತೀಯ ವಾಯು ಸೇನೆಯನ್ನು ಸಂಪೂರ್ಣವಾಗಿ ಪರಿವರ್ತಿಸಲಿದೆ. ನಾವು ಬೇಗನೆ ಆಧುನಿಕ, ಶಕ್ತಿಶಾಲಿ ಯುದ್ಧ ವಿಮಾನಗಳನ್ನು ಹೊಂದಲಿದ್ದು, ಯಾವುದೇ ಸವಾಲನ್ನು ಬೇಕಾದರೂ ನಿರ್ವಹಿಸಲು ಸಾಧ್ಯವಾಗಲಿದೆ. ಈಗ ಭಾರತ ಎದುರಿಸುತ್ತಿರುವ ಯುದ್ಧ ವಿಮಾನಗಳ ಸ್ಕ್ವಾಡ್ರನ್‌ಗಳ ಕೊರತೆ ತಕ್ಷಣವೇ ಕಡಿಮೆಯಾಗಲಿದೆ. ಆ ಮೂಲಕ ನಮ್ಮ ವಾಯುಶಕ್ತಿ ನಮ್ಮ ಸಾಮರ್ಥ್ಯವಾಗಲಿದ್ದು, ಯಾವುದೇ ಸಂಭಾವ್ಯ ಶತ್ರು ನಮ್ಮ ಮೇಲೆ ದಾಳಿ ನಡೆಸುವ ಮುನ್ನ ಹಲವು ಬಾರಿ ಆಲೋಚಿಸಬೇಕಾಗುತ್ತದೆ. ಈ ಯುದ್ಧ ವಿಮಾನಗಳನ್ನು ದೇಶೀಯವಾಗಿ ನಿರ್ಮಿಸುವುದರಿಂದ, ದೀರ್ಘಾವಧಿಯಲ್ಲಿ ಸಾಕಷ್ಟು ಉಳಿತಾಯ ಮಾಡಿದಂತಾಗುತ್ತದೆ, ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ದೇಶವನ್ನು ರಕ್ಷಿಸುವಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತದೆ. ಆದರೆ, ಈ ಪ್ರಸ್ತಾವನೆಗೆ ರಕ್ಷಣಾ ಖರೀದಿ ಸಮಿತಿ ಮತ್ತು ಭದ್ರತಾ ಸಂಸದೀಯ ಸಮಿತಿಯ ಅನುಮೋದನೆ ಲಭಿಸಬೇಕಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಮುಂದಿನ ತಿಂಗಳ ವೇಳೆಗಾಗಲೇ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.

File photo
2025: ಭಾರತದ ರಕ್ಷಣಾ ರಫ್ತು ಮತ್ತು ಬಜೆಟ್‌ ಪ್ರಮಾಣ ಏರಿಕೆ; 2047 ಟಾರ್ಗೆಟ್!

ಇದು ಕೇವಲ ಯುದ್ಧ ವಿಮಾನಗಳ ಖರೀದಿಗೆ ಸೀಮಿತವಾಗಿಲ್ಲ. ಇದು ಶಕ್ತಿಶಾಲಿಯಾದ, ಸ್ವಾವಲಂಬಿ ಭಾರತದ ನಿರ್ಮಾಣದತ್ತ ಇಡುವ ದೃಢ ಹೆಜ್ಜೆ. ನಮ್ಮ ದಿಟ್ಟ ಪೈಲಟ್‌ಗಳು ಶೀಘ್ರವಾಗಿ ಅತ್ಯಂತ ಉತ್ತಮವಾದ ವಿಮಾನಗಳನ್ನು ಚಲಾಯಿಸಲಿದ್ದು, ನಮ್ಮ ಆಗಸವನ್ನು ರಕ್ಷಿಸಿ, ಪ್ರತಿಯೊಬ್ಬ ಭಾರತೀಯನನ್ನೂ ಸುರಕ್ಷಿತವಾಗಿಡಲಿದ್ದಾರೆ. ಭಾರತೀಯ ಭದ್ರತಾ ಪಡೆಗಳ ಭವಿಷ್ಯ ಹಿಂದೆಂದಿಗಿಂತಲೂ ಹೆಚ್ಚು ಉಜ್ವಲವಾಗಿ ಕಾಣುತ್ತಿದೆ. ಜೈ ಹಿಂದ್!

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com