

ಕರ್ನಾಟಕದ ರಾಜಕಾರಣ ಮಗ್ಗಲು ಬದಲಿಸುತ್ತಿರುವಂತಿದೆ. ಮುಖ್ಯಮಂತ್ರಿ ಗಾದಿಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಏರಿದ ನಂತರ ರಾಜ್ಯ ರಾಜಕಾರಣದ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ. ಶಿವಕುಮಾರ್ ಅವರ ಒಂದು ತಿಂಗಳ ಆಡಳಿತ ಅವರು ಗಟ್ಟಿಯಾಗುತ್ತಿರುವ ಸಂದೇಶಗಳನ್ನು ರವಾನಿಸುತ್ತಿದೆ. ಸಿದ್ದರಾಮಯ್ಯ ನೆರಳಿನಿಂದ ಸರಕಾರವನ್ನು ಆಚೆಗೆ ತರುವ ಪ್ರಯತ್ನಗಳು ಕಂಡು ಬರುತ್ತಿವೆ.
ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ ಮೂರು ವರ್ಷಗಳ ಕಾಲ ಸಡಿಲಗೊಂಡಿದ್ದ ಆಡಳಿತ ಯಂತ್ರದ ನಟ್ಟು ಬೋಲ್ಟು ಟೈಟ್ ಮಾಡುತ್ತಿದ್ದಾರೆ. ಸರಕಾರಕ್ಕೆ ಒಂದು ತಾಜಾತನ ಬಂದಿರುವ ಭಾವನೆಯನ್ನು ಮೂಡಿಸಲು ಹೊರಟಿದ್ದಾರೆ. ಅವರ ಕಾರ್ಯಶೈಲಿಯಲ್ಲಿ ಒಂದು ಲವಲವಿಕೆ ಕಂಡು ಬರುತ್ತಿದೆ. ಸರಕಾರದಲ್ಲಿ ಸಾಮೂಹಿಕ ನಾಯಕತ್ವಕ್ಕಿಂತ ತಮ್ಮದೇ ಏಕವ್ಯಕ್ತಿ ನಾಯಕತ್ವದ ಗಟ್ಟಿ ಛಾಪು ಒತ್ತುವ ತವಕ ಅವರದು.
ಶಿವಕುಮಾರ್ ಅವರ ಕಾರ್ಯವೈಖರಿಯಲ್ಲಿ ಒಂದು ರೀತಿಯ ತುರ್ತು ಇದ್ದಂತಿದೆ. ಸರಕಾರದ ಹೆಜ್ಜೆಗಳಲ್ಲೂ ವೇಗ. ನಿರ್ಧಾರಗಳೂ ಬೇಗ. ಒಂದು ರೀತಿ ಅವರು 2028ರ ವಿಧಾನಸಭಾ ಚುನಾವಣೆ ಎಂಬ ಫೈನಲ್ ಪರೀಕ್ಷೆಗೆ ಈಗ ಪ್ರಿಪರೇಟರಿ ಪರೀಕ್ಷೆ ಬರೆಯುತ್ತಿದ್ದಾರೆ. ಇಲ್ಲಿ ಮುಖ್ಯಮಂತ್ರಿಯಾಗಿ ನಾಯಕತ್ವವನ್ನು ಸಾಬೀತುಪಡಿಸಬೇಕಿದೆ.
ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ತಮಗೆ ಪ್ರಬಲ ಪ್ರತಿಸ್ಫರ್ಧಿಯಾಗಿ ಪಕ್ಷದಲ್ಲೇ ಮತ್ತೊಬ್ಬರು ಹೊರಹೊಮ್ಮದಂತೆ ನೋಡಿಕೊಳ್ಳುವ ಪ್ರಯತ್ನ ಅವರದ್ದಾಗಿದೆ. ಅಹಿಂದ ನಾಯಕ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದ ನಂತರವೂ ಗೆಲ್ಲುವ ಸಾಮರ್ಥ್ಯವನ್ನು ಶಿವಕುಮಾರ್ ಪ್ರದರ್ಶಿಸಬೇಕಿದೆ. ಇದು ಅವರ ಮುಂದಿರುವ ಸವಾಲು. ಈ ಸವಾಲು ಎದುರಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸದ್ಯಕ್ಕೆ ಮೌನವಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಪಡೆದ ರೀತಿಗೆ ಅವರಲ್ಲಿ ಬೇಸರವಿದೆ. ಸಿದ್ದರಾಮಯ್ಯ ಅವರನ್ನು ಪಕ್ಷ ಅಥವಾ ಶಿವಕುಮಾರ್ ರಾಜಕೀಯವಾಗಿ ಒಂದು ವೇಳೆ ನಿರ್ಲಕ್ಷಿಸಿದರೆ ಕಾಂಗ್ರೆಸ್ಸಿಗೆ ಕಷ್ಟ.
ಯಾವುದೇ ಒಂದು ಸರಕಾರದ ದಕ್ಷತೆ, ಕಾರ್ಯ ನಿರ್ವಹಣೆಯನ್ನು ಒಂದು ತಿಂಗಳ ಆಡಳಿತ ನೋಡಿ ಅಳೆಯಲು ಸಾಧ್ಯವಿಲ್ಲ. ಶಿವಕುಮಾರ್ ವಿಚಾರದಲ್ಲಿ ಒಂದು ತಿಂಗಳ ಅವರ ಕಾರ್ಯವೈಖರಿ ಗಮನಿಸಿದರೆ ಸರಕಾರದಲ್ಲಿ ಚಲನಶೀಲತೆಗೆ ಪ್ರಯತ್ನಿಸಿದ್ದಾರೆ. ಸ್ವತಃ ಚುರುಕಾಗಿದ್ದಾರೆ. ಒಂದಂತೂ ಸ್ಪಷ್ಟ. ಶಿವಕುಮಾರ್ 2028ರ ವಿಧಾನಸಭಾ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಆ ಚುನಾವಣೆಯಲ್ಲಿ ನಾಯಕತ್ವ ವಹಿಸಿ ಪಕ್ಷವನ್ನು ಗೆಲುವಿನ ದಡಕ್ಕೆ ತಲುಪಿಸಿ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ಅವರದು. ಅದಕ್ಕಾಗಿಯೇ ಅವರ ಕಸರತ್ತು. ಆ ನಿಟ್ಟಿನಲ್ಲಿಯೇ ಅವರ ಹೆಜ್ಜೆಗಳು, ನೀತಿ, ನಿರ್ಧಾರಗಳು. ಇಲ್ಲಿ ಅವರಿಗೆ ಪ್ರಾರಂಭದಲ್ಲೇ ಎದುರಾಗಿರುವ ಸವಾಲು ಬಿಡದಿ ಟೌನ್ ಶಿಪ್ ನಿರ್ಮಾಣದ ವಿವಾದ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಶಿವಕುಮಾರ್ ಸರಕಾರ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ, ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಪಂಚಾಯಿತಿಗೆ ಒಂದರಂತೆ ಹತ್ತು ಸಾವಿರ ಭಾರತ ಜೋಡೋ ಯುವ ಸಂಘ ಆರಂಭ, ವಿದ್ಯುತ್ ಸಂಪರ್ಕ ಪಡೆಯಲು ಒಂದು ಬಾರಿಯ ಸ್ವಾಧೀನಾನುಭವ ಪ್ರಮಾಣ ಪತ್ರ ವಿನಾಯಿತಿ, ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತೆಗೆ ವರ್ಗಾವಣೆ, ಸಾರ್ವಜನಿಕರ ಕುಂದುಕೊರತೆ ಅಹವಾಲು ಆಲಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ನಿರ್ಧಾರಗಳನ್ನು ಪ್ರಕಟಿಸಿದೆ. ಹೊಸ ಆಲೋಚನೆಗಳು ಮೂಡಿಬಂದಿವೆ. ಗ್ಯಾರಂಟಿಯಿಂದ ಸರಕಾರ ಮೇಲೇಳುವ ಕಸರತ್ತು ನಡೆದಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಜೊತೆ ನಿರಂತರ ಸಂಘರ್ಷಕ್ಕೆ ಇಳಿದಿದ್ದರು. ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ನೀತಿ ಆಯೋಗದ ಸಭೆಗಳಿಗೂ ಅವರು ಭಾಗವಹಿಸುತ್ತಿರಲಿಲ್ಲ. ಆದರೆ, ಶಿವಕುಮಾರ್ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸರಕಾರದ ಜೊತೆ ಸಂಘರ್ಷದ ಮಾತುಗಳನ್ನು ಆಡುತ್ತಿಲ್ಲ. ಹಾಗಂತ ಮೌನವಾಗಿಯೂ ಇಲ್ಲ. ರಾಜ್ಯಕ್ಕೆ ಆಗಬೇಕಿರುವ ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ನೀಡಿ ಹಕ್ಕೊತ್ತಾಯ ಮಂಡಿಸಿದ್ದಾರೆ. ತುಂಗಭದ್ರಾ ಅಣೆಕಟ್ಟೆಯ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆಗೆ ಕೇಂದ್ರ ಜಲಸಂಪನ್ಮೂಲ ಸಚಿವರು ಹಾಗೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ನೆರೆ ರಾಜ್ಯಗಳ ಜೊತೆ ನೀರಾವರಿ ಯೋಜನೆಗಳ ವಿಚಾರದಲ್ಲಿ ಸೌಹಾರ್ದತೆ ಮೆರೆದರು.
ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿ ನೋಂದಣಿಗೆ ಒತ್ತಾಯಿಸುತ್ತಿದ್ದರೆ, ಶಿವಕುಮಾರ್ ಅತ್ತ ಚಿತ್ತವನ್ನೇ ಹರಿಸಿಲ್ಲ. ಶಿವಕುಮಾರ್ ಅವರಿಗೆ ಅವರ ಗುರಿಗಳ ಬಗ್ಗೆ ಸ್ಪಷ್ಟತೆ ಇದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆಚೆಗೆ ಸರಕಾರದ ಯೋಜನೆಗಳ ಜಾರಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ ಮನೆ ಪರಿಶೀಲನೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಆಡಳಿತ ಕಾರ್ಯ ವೈಖರಿಯಲ್ಲಿ ಸಿದ್ದರಾಮಯ್ಯ ಅವರಿಗಿಂತ ಭಿನ್ನ ಹಾದಿ ತುಳಿದಿದ್ದಾರೆ. ಸಚಿವ ಸಂಪುಟ ಇನ್ನೂ ವಿಸ್ತರಣೆಯಾಗಿಲ್ಲ. ಪೂರ್ಣಪ್ರಮಾಣದ ಸಂಪುಟ ರಚನೆಯಾದ ನಂತರ ಸರಕಾರದ ಹಾದಿ ಮತ್ತಷ್ಟು ಸ್ಪಷ್ಟವಾಗಲಿದೆ.
ಶಿವಕುಮಾರ್ ಗಟ್ಟಿಯಾಗಿ ತಮ್ಮ ನಾಯಕತ್ವ ಬೆಳೆಸಿಕೊಂಡರೆ ಮೊದಲು ಹಿನ್ನಡೆಯಾಗುವುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ. ಆ ಮೂಲಕ ಜಾತ್ಯತೀತ ಜನತಾದಳಕ್ಕೆ. ಹೀಗಾಗಿಯೇ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ಗೆ ನೆಲೆ ಇರುವುದು ಇಲ್ಲಿಯೇ. ಕುಮಾರಸ್ವಾಮಿ ಹಾಗೂ ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮಾಜದವರು. ಶಿವಕುಮಾರ್ ನಾಯಕತ್ವ ಒಕ್ಕಲಿಗ ಸಮಾಜದಲ್ಲಿ ತಳಮಟ್ಟದಲ್ಲಿ ವ್ಯಾಪಕವಾಗಿ ಬೇರೂರಿದರೆ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗುವುದು ಖಚಿತ. ಹೀಗಾಗಿಯೇ ಕುಮಾರಸ್ವಾಮಿ ಈಗ ಶಿವಕುಮಾರ್ ಅವರಿಗೆ ಮತ್ತೆ ಮುಖಾಮುಖಿಯಾಗಿ ನಿಂತಿದ್ದಾರೆ. ಬಿಡದಿ ಟೌನ್‌ಶಿಪ್ ನಿರ್ಮಾಣ ವಿವಾದ ಒಂದು ನೆಪವಷ್ಟೇ. ಕಾವೇರಿ ನದಿ ಕಣಿವೆ ಪ್ರದೇಶದಲ್ಲಿ ರಾಜಕೀಯ ಅಧಿಪತ್ಯಕ್ಕಾಗಿ ಶಿವಕುಮಾರ್ ಹಾಗೂ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿ ಮುಂಬರುವ ದಿನಗಳಲ್ಲಿ ಇನ್ನೂ ತೀವ್ರಗೊಳ್ಳುವ ಸಾಧ್ಯತೆಯೇ ಹೆಚ್ಚು.
ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಮಾಜಿ ಮುಖ್ಯಮಂತ್ರಿಗಳನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಅವರ ಸಲಹೆ, ಮಾರ್ಗದರ್ಶನವನ್ನು ಪಡೆದರು. ಕುಮಾರಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಸಮಯ ಕೊಟ್ಟರೆ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡುವೆ ಅಂದರು. ಆದರೆ, ಆ ಭೇಟಿ ಈವರೆಗೂ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಬಿಡದಿ ಟೌನ್ ಶಿಪ್ ಕುರಿತು ಬಹಿರಂಗ ಚರ್ಚೆಗೆ ಪರಸ್ಪರ ಸವಾಲು-ಜವಾಬು ಆರಂಭವಾಯಿತು.
ಇನ್ನು ರಾಜ್ಯ ಬಿಜೆಪಿಯಲ್ಲಿ ಈಗ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ. ಬಿಜೆಪಿ ಗೊಂದಲದ ಗೂಡಾಗಿದೆ. ನಾಯಕರ ನಡುವೆ ಪರಸ್ಪರ ಸಮರ. ಪ್ರಮುಖ ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಿದ್ದ ಬಿಜೆಪಿ ತನ್ನದೇ ಒಳಬೇಗುದಿಯಿಂದ ಕುಸಿಯುತ್ತಿದೆ. ಒಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ರಾಜ್ಯದಲ್ಲಿ ಸಮರ್ಥ ನಾಯಕತ್ವವೇ ಇಲ್ಲದಂತಾಗಿದೆ. ಶಿವಕುಮಾರ್ ಸರಕಾರಕ್ಕೆ ಇದು ವರವಾಗಿದೆ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಹೇಳಿದ ಒಂದು ಮಾತು ಹೀಗಿತ್ತು- “ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಿಂದ ಪ್ರಯತ್ನಿಸುತ್ತೇನೆ. ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ. ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾರೂ ಯಾವ ರೀತಿ ಕಾಯಿ ನಡೆಸುತ್ತೇವೆ ಎಂಬುದನ್ನು ಹೇಳುವುದಿಲ್ಲ’’. ಚದುರಂಗದ ಆಟದಲ್ಲಿ ಈಗ ಕಾಯಿ ನಡೆಸುವ ಸರದಿ ಶಿವಕುಮಾರ್ ಅವರದು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com