ಬಿಜೆಪಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಹಾದಿ ಕಠಿಣ (ನೇರ ನೋಟ)

ಕರ್ನಾಟಕದ ಬಿಜೆಪಿ ತನ್ನ ಒಳಬೇಗುದಿಯಿಂದ ಇವತ್ತು ತತ್ತರಿಸಿ ಹೋಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದೆ ಸಾಗುವ ಒಬ್ಬ ಪ್ರಬಲ ನಾಯಕ ಆ ಪಕ್ಷದಲ್ಲಿ ಇಲ್ಲ.
Vijayendra and R Ashok
ಅಶೋಕ್ ಮತ್ತು ವಿಜಯೇಂದ್ರ
Updated on

ಅದು 1980ರ ದಶಕದ ಕೊನೆಯ ವರ್ಷಗಳು. ಮೈಸೂರಿನ ಅಗ್ರಹಾರದ ಸಭಾಂಗಣವೊಂದರಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ. ಆಗ ಪಕ್ಷದ ಹಿರಿಯ ನಾಯಕರಾಗಿದ್ದ ಬಿ.ಬಿ.ಶಿವಪ್ಪ ಸಭೆಯನ್ನು ಉದ್ದೇಶಿಸಿ ಮಾತಾಡಲು ಸಭಾಂಗಣ ಪ್ರವೇಶಿಸಿದರು. ಅಲ್ಲೇ ಬಾಗಿಲಲ್ಲೇ ವರದಿಗಾರರ ಜೊತೆ ಮಾತಿಗೆ ನಿಂತರು. ಹಿರಿಯ ವರದಿಗಾರರೊಬ್ಬರು ಶಿವಪ್ಪ ಅವರನ್ನು ಕೇಳಿದ ಪ್ರಶ್ನೆ- ನಿಮ್ಮ ಪಕ್ಷಕ್ಕೆ ಇತ್ತೀಚೆಗೆ ಬೇರೆ ಪಕ್ಷಗಳಿಂದಲೂ ಕಾರ್ಯಕರ್ತರು, ಮುಖಂಡರು ಬರುತ್ತಿದ್ದಾರೆ. ಸಭೆಯಲ್ಲಿ ನೀವು ಇದನ್ನು ಹೇಗೆ ಗುರುತಿಸುತ್ತೀರಿ?

ಪ್ರಶ್ನೆ ಕೇಳಿದವರನ್ನು ಶಿವಪ್ಪ ಒಂದು ಕ್ಷಣ ದಿಟ್ಟಿಸಿ ನೋಡಿದರು. ಅವರ ತಣ್ಣನೆಯ ಪ್ರತಿಕ್ರಿಯೆ ಹೀಗಿತ್ತು- “ಸಭಾಂಗಣ ಪ್ರವೇಶಿಸುವ ಮುನ್ನ ಪಾದರಕ್ಷೆಗಳನ್ನು ಬಿಟ್ಟಿರುವ ಕಡೆ ಒಮ್ಮೆ ನೋಡ್ತೀನಿ. ಪಾದರಕ್ಷೆಗಳನ್ನು ಜೋಡಿಸಿ ಸಾಲಾಗಿ ಬಿಟ್ಟಿದ್ದರೆ ಇಲ್ಲಿ ಸಂಘ ಪರಿವಾರದ ಹಿನ್ನೆಲೆಯ ಕಾರ್ಯಕರ್ತರಿದ್ದಾರೆಂದು ತಿಳಿತ್ತೀನಿ. ಪಾದರಕ್ಷೆಗಳನ್ನು ಬೇಕಾಬಿಟ್ಟಿ ಬಿಟ್ಟಿದ್ದರೆ ಬೇರೆ ಪಕ್ಷದಿಂದ ವಲಸೆ ಬಂದವರೂ ಸಭೆಯಲ್ಲಿದ್ದಾರೆಂದು ಗೊತ್ತಾಗುತ್ತೆ’’.

ಇದಾಗಿ ಸುಮಾರು 40 ವರ್ಷಗಳಾಗುತ್ತಾ ಬಂತು. ಬಿಜೆಪಿಯಲ್ಲಿ ಇವತ್ತು ಅನ್ಯ ಪಕ್ಷಗಳಿಂದ ಬಂದ ವಲಸಿಗರು ಅಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಬೇರೆ ಪಕ್ಷಗಳಿಂದ ಮುಖಂಡರು ಬಂದಿದ್ದರಿಂದಲೇ ಬಿಜೆಪಿಯೂ ಅಧಿಕಾರಕ್ಕೆ ಏರಿತು. ವಲಸಿಗರೂ ಅಧಿಕಾರದ ಕುರ್ಚಿಯಲ್ಲಿ ಕುಳಿತರು. ಜೊತೆಗೆ ಬಿಜೆಪಿಯೂ ಬದಲಾಯಿತು. ಬದಲಾಗುತ್ತಲೇ ಬಲಿಷ್ಟವೂ ಆಯಿತು. ಆಪರೇಷನ್‌ ಕಮಲದ ಮೂಲಕ ಬಿಜೆಪಿಯ ನೈತಿಕತೆಯೂ ಕುಸಿಯಿತು. ‘ಎ ಪಾರ್ಟಿ ವಿತ್‌ ಎ ಡಿಫರೆನ್ಸ್‌’ ಎಂಬುದು ನಗೆಪಾಟಲಿಗೆ ಗುರಿಯಾಯಿತು. ಕರ್ನಾಟಕದ ಮಟ್ಟಿಗಂತೂ ‘ ಎ ಪಾರ್ಟಿ ವಿತ್‌ ಡಿಫರೆನ್ಸಸ್‌’ ಆಯಿತು.

ಕರ್ನಾಟಕದ ಬಿಜೆಪಿ ತನ್ನ ಒಳಬೇಗುದಿಯಿಂದ ಇವತ್ತು ತತ್ತರಿಸಿ ಹೋಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದೆ ಸಾಗುವ ಒಬ್ಬ ಪ್ರಬಲ ನಾಯಕ ಆ ಪಕ್ಷದಲ್ಲಿ ಇಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಹುತೇಕ ನೇಪಥ್ಯಕ್ಕೆ ಸರಿದಿದ್ದಾರೆ. ಅವರ ನಂತರ ಎರಡನೇ ಸಾಲಿನಲ್ಲಿ ಪಕ್ಷವನ್ನು ಮುನ್ನಡೆಸುವ ಛಾತಿಯ ಮತ್ತೊಬ್ಬ ನೇತಾರನಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಬಲಯುತವಾಗಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪನವರು ಎಂದು ಮೆಚ್ಚಿಕೊಳ್ಳುವ ಹಿರಿಯ ನಾಯಕರೇ ಅವರ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ತಮ್ಮ ಧುರೀಣರೆಂದು ಒಪ್ಪಿಕೊಳ್ಳಲು ಸುತರಾಂ ಸಿದ್ದರಿಲ್ಲ. ಅನೇಕ ಹಿರಿಯ ನಾಯಕರನ್ನು ಬದಿಗೊತ್ತಿ ವಿಜಯೇಂದ್ರ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿ ಹೈಕಮಾಂಡ್‌ ಮುಗ್ಗರಿಸಿತು. ಕುಟುಂಬ ರಾಜಕಾರಣ ವಿರೋಧಿಸುತ್ತಲೇ ಪರಿವಾರವಾದಕ್ಕೆ ಮಣೆ ಹಾಕಿತು. ಇದೇ ಸಮಸ್ಯೆಗೆ ಮೂಲ. ವಿಜಯೇಂದ್ರ ಅವರೂ ಅಷ್ಟೇ, ಪಕ್ಷದಲ್ಲಿ ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ಪಡೆದು ಮುಂದೆ ಸಾಗಿದ್ದರೆ ಪರಿಸ್ಥಿತಿ ತಿಳಿಯಾಗಿರುತ್ತಿತ್ತು. ಆದರೆ, ಅದಾಗಲಿಲ್ಲ.

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಮೊನ್ನೆ ನಡೆದ ಚುನಾವಣೆಯ ನಂತರದ ಬೆಳವಣಿಗೆಯನ್ನೇ ನೋಡಿ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಅಡ್ಡಮತದಾನ ನಡೆಯುವ ಕುರಿತು ಸಭೆ ಸೇರಿರುವ ಸುದ್ದಿ ತಲುಪಿತ್ತು. ಈ ಕುರಿತು ಹೇಳಲು ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್‌ ಹಾಗೂ ವಿಜಯೇಂದ್ರ ಅವರ ಸಂಪರ್ಕಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಲಿಲ್ಲ. ಪಕ್ಷದ ಆಂತರಿಕ ಸ್ಥಿತಿ ಇದು.

ಇನ್ನು ವಿಜಯೇಂದ್ರ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿಯೇ ಅಣೆ ಪ್ರಮಾಣ ನಡೆಯಲಿ ಎಂದಿದ್ದು ಬಿಜೆಪಿಯಲ್ಲೇ ವ್ಯಾಪಕ ವಿರೋಧಕ್ಕೆ ಕಾರಣವಾಯಿತು. ಬಿಜೆಪಿಯ ಹಿರಿಯ ಶಾಸಕ ಎಸ್‌.ಸುರೇಶ್‌ಕುಮಾರ್ ಅವರು ವಿಜಯೇಂದ್ರ ಅವರ ಈ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಪೋಸ್ಟ್‌ ಮಾಡಿದರು. ಬಿಜೆಪಿಯ ಅನೇಕ ಹಿರಿಯ ನಾಯಕರು ಇದೇ ನಿಲುವು ತಳೆದರು. ಬಿಜೆಪಿಯ ಒಳರಾಜಕಾರಣದ ಸಂಘರ್ಷದ ತೀವ್ರತೆಯನ್ನು ಇದು ಬಿಂಬಿಸಿತು.

Vijayendra and R Ashok
"ಡಿ.ಕೆ. ಶಿವಕುಮಾರ್‌ ಎಂಬುವನಾದ ನಾನು..." (ನೇರ ನೋಟ)

ಬಿಜೆಪಿ ಹೈಕಮಾಂಡ್‌ ಅಡ್ಡಮತದಾನವನ್ನು ಗಂಭೀರವಾಗಿ ಪರಿಗಣಿಸಿದೆ. ವಿಜಯೇಂದ್ರ ಹಾಗೂ ಅಶೋಕ್‌ ಅವರಿಗೆ ಈ ವಿಚಾರದಲ್ಲಿ ಎಚ್ಚರಿಕೆಯನ್ನೂ ನೀಡಿದೆ. ಪರಿಷತ್‌ ಚುನಾವಣೆಯನ್ನು ಗಂಭೀರವಾಗಿ ಏಕೆ ಸ್ವೀಕರಿಸಿರಲಿಲ್ಲ ಎಂದು ಪ್ರಶ್ನಿಸಿದೆ. ಮತದಾನ ಹಿಂದಿನ ದಿನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಇದರಲ್ಲೇ ಗೊತ್ತಾಗುತ್ತದೆ ಈ ಚುನಾವಣೆಯನ್ನು ಬಿಜೆಪಿ ನಾಯಕರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದು. ತಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಹಂಚಿ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಮೀಸಲಿರಿಸಿ ಬಿಜೆಪಿ ನಾಯಕರು ಸುಮ್ಮನಾದರು. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಹೊಣೆ ಜೆಡಿಎಸ್‌ನದು ಎಂಬ ಧೋರಣೆ ಅದು. ಮೈತ್ರಿಧರ್ಮ ಪಾಲಿಸಲಿಲ್ಲ. ತನ್ನ ಅಭ್ಯರ್ಥಿಗಳಿಗೆ ಬರಬೇಕಾದ ಮತಗಳನ್ನು ಆಚೀಚೆ ಹೋಗದಂತೆ ತಡೆಯಲು ಬಿಜೆಪಿ ನಾಯಕರಿಗೆ ಸಾಧ್ಯವಾಗಲಿಲ್ಲ. ಅಂತಹ ಮುಖಭಂಗದ ಸ್ಥಿತಿ.

ಇನ್ನು ಜೆಡಿಎಸ್‌ ಕೂಡ ತಾನು ಗೆಲ್ಲಲು ಅಗತ್ಯವಿರುವಷ್ಟು ಬೆಂಬಲವಿಲ್ಲ ಎಂದು ಗೊತ್ತಿದ್ದರೂ ಕಣದಲ್ಲಿ ಅಭ್ಯರ್ಥಿಯನ್ನು ಹೂಡಿತು. ತನ್ನ ಪಕ್ಷ ಹಾಗೂ ಬಿಜೆಪಿ ಶಾಸಕರ ಪಕ್ಷ ನಿಷ್ಠೆ ಪರೀಕ್ಷಿಸಲು ಜೆಡಿಎಸ್‌ ತನ್ನ ಉಮೇದುವಾರನನ್ನು ಕಣಕ್ಕೆ ಇಳಿಸಿತ್ತು. ಈ ಚುನಾವಣೆ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷಗಳಲ್ಲಿರುವ ಬಿರುಕು ಬಹಿರಂಗಗೊಂಡಿತು. ಆ ಪಕ್ಷಗಳಲ್ಲಿರುವ ಹುಳುಕನ್ನು ಎತ್ತಿ ತೋರಿಸಿತು. ಬಿಜೆಪಿ-ಜೆಡಿಎಸ್‌ ನಡುವಿನ ಸಮನ್ವಯದ ಕೊರತೆಯನ್ನೂ ಪ್ರದರ್ಶಿಸಿತು.

ಭಾರತೀಯ ಜನತಾಪಕ್ಷವು ಅಂಗ (ಅಸ್ಸಾಂ), ಕಳಿಂಗ (ಒಡಿಶಾ), ಬಂಗ (ಪಶ್ಚಿಮ ಬಂಗಾಳ) ಗೆದ್ದ ಸಂಭ್ರಮದಲ್ಲಿರಬಹುದು. ಆದರೆ, ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿರಲಿ, ಸೋತು ಪ್ರತಿಪಕ್ಷದಲ್ಲಿದ್ದರೂ ಎದ್ದು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಪಕ್ಷದಲ್ಲಿ ಶಿಸ್ತು, ಒಗ್ಗಟ್ಟು, ಸಂಘಟನೆ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ನಾಯಕರ ಮಧ್ಯೆ ಪರಸ್ಪರ ಅನುಮಾನ, ಅಪನಂಬಿಕೆಗಳು ತೀವ್ರವಾಗುತ್ತಿವೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಅಡ್ಡಮತದಾನ ಬಿಜೆಪಿ ಹೈಕಮಾಂಡ್‌ಗೂ ಮುಜುಗರ ತಂದಿದೆ.

Vijayendra and R Ashok
ಪಶ್ಚಿಮ ಬಂಗಾಳದಲ್ಲಿ ತೃಣಮೂಲಕ್ಕೆ ಕುಸಿದ ಮಮತಾ (ನೇರ ನೋಟ)

ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಡೆಯುತ್ತಿವೆ. ಆ ಪಕ್ಷಗಳ ಲೋಕಸಭಾ ಸದಸ್ಯರನ್ನು ತನ್ನ ಒಡಲಲ್ಲಿ ಹಾಕಿಕೊಂಡು ಬಿಜೆಪಿ ಬೀಗುತ್ತಿದೆ. ಆದರೆ, ಕರ್ನಾಟಕದಲ್ಲಿ ತನ್ನದೇ ಶಾಸಕಾಂಗ ಪಕ್ಷ ಒಡೆದ ಮನೆಯಾಗಿರುವುದು ಗೊತ್ತಿದ್ದರೂ ತಣ್ಣಗೆ ಕುಳಿತಿದೆ. ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಅಶೋಕ್‌ ಅವರಿಗೆ ಕ್ರಮವಾಗಿ ಪಕ್ಷ ಹಾಗೂ ಶಾಸಕಾಂಗ ಪಕ್ಷದ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಯಾವುದೇ ವಿಷಯವನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಅವರಿಂದ ಸಾಧ್ಯವೇ ಆಗುತ್ತಿಲ್ಲ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿಪಕ್ಷವಾಗಿ ಬಿಜೆಪಿ ಅನುಸರಿಸಿದ ಕಾರ್ಯತಂತ್ರಗಳನ್ನು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿರುವಾಗ ಮುಂದುವರಿಸಿದರೆ ಕೈಹಿಡಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಕಾಂಗ್ರೆಸ್ಸಿಗರೇ ಆಗಿದ್ದರೂ ಆಡಳಿತ ಶೈಲಿ ಭಿನ್ನ. ವ್ಯಕ್ತಿತ್ವವೂ ವಿಭಿನ್ನ. ಕಾರ್ಯತಂತ್ರಗಳೂ ಬೇರೆ. ಕೆಲವು ವಿಚಾರಗಳಲ್ಲಿ ಬಿಜೆಪಿಗೆ ಸಿದ್ದರಾಮಯ್ಯ ಅವರನ್ನು ಎದುರಿಸುವುದು ಸುಲಭವಾಗಿತ್ತು. ಆದರೆ, ಶಿವಕುಮಾರ್ ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ.

ಕರ್ನಾಟಕದಲ್ಲಿ ಬಿಜೆಪಿ ಈ ಹಿಂದೆ ಅಧಿಕಾರಕ್ಕೇರಿದಾಗ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ತೆರೆಯಿತು ಎಂದೇ ವಿಶ್ಲೇಷಿಸಲಾಗಿತ್ತು. ಕರ್ನಾಟಕದ ನಂತರ ತಮಿಳುನಾಡು, ಕೇರಳ ಬಿಜೆಪಿ ಗುರಿಯಾಗಿತ್ತು. ಅಲ್ಲಿ ಮೇಲೇಳಲಿಲ್ಲ. ತಮಿಳುನಾಡಿನಲ್ಲಿ ಪಕ್ಷವನ್ನು ಸಂಘಟಿಸಲು ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಣ್ಣಾಮಲೈ ಹತಾಷರಾಗಿ ಪಕ್ಷ ತ್ಯಜಿಸಿ ತಮ್ಮ ದಾರಿ ನೋಡಿಕೊಂಡಿದ್ದಾರೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 22 ತಿಂಗಳುಗಳಿವೆ. ಪ್ರತಿಪಕ್ಷವಾಗಿ ಸಂಘಟಿತ ಪ್ರಯತ್ನದಿಂದ ಚುನಾವಣೆ ಎದುರಿಸಬೇಕಾದ ಬಿಜೆಪಿ ಆಂತರಿಕ ಕಲಹ, ನಾಯಕತ್ವದ ಮೇಲಾಟದಿಂದಾಗಿ ನಲುಗಿ ಹೋಗಿದೆ.

ಕಾಂಗ್ರೆಸ್‌ ಈಗ ಸಂಭ್ರಮದ ಮೂಡ್‌ನಲ್ಲಿದ್ದರೆ, ಬಿಜೆಪಿ ಮನೆಯಲ್ಲಿ ಕಳಾಹೀನ ಸ್ಥಿತಿ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಹಾದಿ ಕಠಿಣ. ಶಿವಕುಮಾರ್‌ ಮುಖ್ಯಮಂತ್ರಿಯಾದ ನಂತರ ಜೆಡಿಎಸ್‌ ಗೆ ಹೋರಾಟದ ಉಮೇದು. ಹಳೆಯ ಮೈಸೂರು ಪ್ರಾಂತ್ಯದಲ್ಲಿ ತನ್ನ ನೆಲೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ. ಆಡಳಿತಾರೂಢ ಕಾಂಗ್ರೆಸ್‌ ಅನ್ನು ಎದುರಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮೈಕೊಡವಿ ಏಳಬೇಕಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com