

ಯಾರು ಅವರ ಎದುರು ನಿಂತು ಮಾತಾಡಲು ಅಂಜುತ್ತಿದ್ದರೋ, ಯಾರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರೋ ಅಂಥವರೇ ಇವತ್ತು ಪಕ್ಷದ ಆ ಸುಪ್ರೀಂ ಲೀಡರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಕ್ಷ ಮೂರು ಹೋಳಾಗಲು ಕಾರಣರಾಗಿದ್ದಾರೆ. ಆ ಪಕ್ಷ ಅಖಿಲ ಭಾರತ ತೃಣಮೂಲ ಕಾಂಗ್ರೆಸ್. ಸುಪ್ರೀಂ ಲೀಡರ್ ಮಮತಾ ಬ್ಯಾನರ್ಜಿ. ಬಂಡೆದ್ದವರು ವಿಧಾನಸಭಾ ಹಾಗೂ ಲೋಕಸಭಾ ಸದಸ್ಯರು.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾರತೀಯ ರಾಜಕಾರಣ ಕಂಡ ವಿಶಿಷ್ಟ ನಾಯಕಿ. ಫೈಯರ್ ಬ್ರ್ಯಾಂಡ್ . ಸ್ಟ್ರೀಟ್ ಫೈಟರ್. ಟೈಮ್ ಮ್ಯಾಗಜೀನ್‌ನ ಜಗತ್ತಿನ ನೂರು ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮಮತಾ ಕೂಡ ಇದ್ದವರು. ತನ್ನ ಹಠಮಾರಿತನ, ಅತಿರೇಕದ ವರ್ತನೆಗಳು, ಆಡಳಿತದ ವೈಫಲ್ಯಗಳು, ಬಾಂಗ್ಲಾದೇಶದಿಂದ ನುಸುಳಿ ಬಂದ ಅಕ್ರಮ ವಲಸಿಗರ ಪರ ಧೋರಣೆ, ಅಲ್ಪಸಂಖ್ಯಾತ ಮುಸ್ಲಿಮರ ಓಲೈಕೆ, ಸೋದರಳಿಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯ ದರ್ಪ, ಪಕ್ಷದ ಗೂಂಡಾ ನಾಯಕರ ದಬ್ಬಾಳಿಕೆ, ಎದುರಾಳಿ ಬಿಜೆಪಿಯ ಹೋರಾಟ, ತಂತ್ರಗಾರಿಕೆ ಇವೆಲ್ಲದರಿಂದ ಮಮತಾಗೆ ಇವತ್ತು ಹಿನ್ನಡೆ. ನಂಬಿದವರೇ ಕೈಕೊಟ್ಟಿರುವ ದುಸ್ಥಿತಿ.
ಮಮತಾ ದೀದಿ ಪಶ್ಚಿಮ ಬಂಗಾಳದಲ್ಲಿ ತಾವೇ 28 ವರ್ಷಗಳ ಹಿಂದೆ 01 ಜನವರಿ 1998 ರಂದು ಹುಟ್ಟು ಹಾಕಿದ ತೃಣಮೂಲ ಕಾಂಗ್ರೆಸ್ ಇವತ್ತು ಛಿದ್ರವಾಗುತ್ತಿರುವುದನ್ನು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ವಿಧಾನಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯ ಸೋಲು ಅವರನ್ನು ಕಂಗೆಡಿಸಿದೆ. ರಾಜಕಾರಣದಲ್ಲಿ ಅವರ ಇಂದಿನ ಈ ದುಸ್ಥಿತಿಗೆ ಅವರ ಸ್ವಯಂಕೃತ ಅಪರಾಧಗಳೂ ಅಷ್ಟೇ ಕಾರಣ. ಮಮತಾ ಈಗ ಶಾಸಕರೂ ಅಲ್ಲ.
ಮಮತಾ ಬ್ಯಾನರ್ಜಿ 34 ವರ್ಷಗಳ ಕಮ್ಯುನಿಸ್ಟ್ ಆಳ್ವಿಕೆಯನ್ನು ಅಂತ್ಯಗೊಳಿಸಿ 2011ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದವರು. ಸತತ ಮೂರು ಚುನಾವಣೆಗಳಲ್ಲಿ ಅವರ ಪಕ್ಷಕ್ಕೇ ವಿಜಯ. ಹದಿನೈದು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿ. ಪಕ್ಷ ಹಾಗೂ ಸರಕಾರದಲ್ಲಿ ಅವರದ್ದೇ ಆಕ್ಟೋಪಸ್ ಹಿಡಿತ. ಒಂದು ಚುನಾವಣೆಯ ಸೋಲು ಅವರ ವಿರುದ್ಧ ಪಕ್ಷದಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನು ಹೊರಹಾಕಿದೆ. ಬಂಡಾಯ ಆಸ್ಫೋಟಿಸಿದೆ.
ಮಮತಾ ಬ್ಯಾನರ್ಜಿ ಅವರಿಗೆ ಇವತ್ತು ಎರಡು ರೀತಿಯ ಸಂಕಷ್ಟ. ಒಂದು ಪಕ್ಷದಲ್ಲಿ ಹಿನ್ನಡೆ. ಮತ್ತೊಂದು ತನಿಖಾ ಸಂಸ್ಥೆಗಳ ವಿಚಾರಣೆಗಳು. ಚುನಾವಣೆಯಲ್ಲಿ ಸೋತ ಒಂದೇ ತಿಂಗಳಲ್ಲಿ ಪಕ್ಷ ಮೂರು ಹೋಳು. ಎಂಬತ್ತು ಶಾಸಕರಲ್ಲಿ 60 ಶಾಸಕರು ಬಂಡೆದ್ದು ತಮ್ಮದೇ ನಿಜವಾದ ತೃಣಮೂಲ ಕಾಂಗ್ರೆಸ್ ಎಂಬ ಘೋಷಣೆ. ವಿಧಾನಸಭೆಯಲ್ಲಿ ಈ ಬಣಕ್ಕೆ ಪ್ರತಿಪಕ್ಷದ ಮಾನ್ಯತೆ. ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕ ರಿತುಬ್ರತಾ ಬ್ಯಾನರ್ಜಿ ಈ ಬಣದ ನೇತಾರ. ಪ್ರತಿಪಕ್ಷದ ನಾಯಕ. ಮಮತಾ ದೀದಿ ಕಕ್ಕಾಬಿಕ್ಕಿ.
ತೃಣಮೂಲ ಕಾಂಗ್ರೆಸ್ ಮೊದಲು ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರನ್ನು ತನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಎಂಬತ್ತೆರಡು ವರ್ಷದ ಶೋಭನ್‌ದೇವ್ ಹತ್ತು ಬಾರಿ ಶಾಸಕರಾದವರು. ಶೋಭನ್‌ದೇವ್ ಅವರನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪೀಕರ್ ಅವರಿಗೆ ಪಕ್ಷ ನೀಡಿದ ಪತ್ರದಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಶಾಸಕರಾದ ರಿತುಬ್ರತಾ ಬ್ಯಾನರ್ಜಿ ಹಾಗೂ ಸಂದೀಪನ್ ಸಹಾ ಅವರ ಆರೋಪ. ಈ ಬೆನ್ನಲ್ಲೇ ಈ ಇಬ್ಬರು ಶಾಸಕರು ಪಕ್ಷದಿಂದ ಉಚ್ಛಾಟನೆ. ಆಗಲೇ 58 ಶಾಸಕರು ಬಂಡೆದ್ದು ತನ್ನ ನಾಯಕನನ್ನಾಗಿ ರಿತುಬ್ರತಾ ಬ್ಯಾನರ್ಜಿ ಅವರನ್ನು ಆಯ್ಕೆ ಮಾಡಿಕೊಂಡರು. ಮಮತಾ ವಿರುದ್ಧ ತಿರುಗಿ ಬಿದ್ದರು.
ಶಾಸಕರು ಹೀಗೆ ಬಂಡೆದ್ದ ಬೆನ್ನಲ್ಲೇ ಲೋಕಸಭಾ ಸದಸ್ಯರಿಂದಲೂ ಪ್ರತ್ಯೇಕ ಬಣ ರಚನೆ. ದಶಕಗಳ ಒಡನಾಡಿಗಳಿಂದಲೇ ಮಮತಾ ವಿರುದ್ಧ ಬಹಿರಂಗ ಸಮರ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಮೂರನೇ ಅತಿದೊಡ್ಡ ಪಕ್ಷ. ಪ್ರತಿಪಕ್ಷದ ಸಾಲಿನಲ್ಲಿ ಕಾಂಗ್ರೆಸ್ ನಂತರ ಎರಡನೇ ಅತಿದೊಡ್ಡ ಪಾರ್ಟಿ. ಪಕ್ಷದ 28 ಲೋಕಸಭಾ ಸದಸ್ಯರಲ್ಲಿ 20 ಮಂದಿಯಿಂದ ಬರಾಸತ್ ಲೋಕಸಭಾ ಸದಸ್ಯೆ ಡಾ.ಕಾಕೋಳಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಪ್ರತ್ಯೇಕ ಬಣ ರಚನೆ. ಹೆಸರೇ ಕೇಳದ ನ್ಯಾಷನಲ್ ಸಿಟಿಜೆನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಎಂಬ ನೋಂದಾಯಿತ ಆದರೆ ಮಾನ್ಯತೆ ಇಲ್ಲದ ಪಕ್ಷದಲ್ಲಿ ವಿಲೀನ. ದಸ್ತಿದಾರ್ ಈಗ ಎನ್‌ಸಿಪಿಐ ರಾಷ್ಟ್ರೀಯ ಅಧ್ಯಕ್ಷರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದಾಗುವುದನ್ನು ತಪ್ಪಿಸಿಕೊಳ್ಳುವ ಉಪಾಯ ಇದು. ಆದರೂ, ಈ ಕುರಿತು ವಾದ-ಪ್ರತಿವಾದಗಳಿವೆ. ಕಾನೂನಿನ ಸಮರವನ್ನು ಅವರು ಎದುರಿಸಬೇಕಾಗಬಹುದು.
ಎನ್‌ಸಿಪಿಐ ತ್ರಿಪುರಾದಲ್ಲಿ ಎನ್‌ಡಿಎ ಅಂಗಪಕ್ಷ. ತ್ರಿಪುರಾದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ನೋಟಾಗಿಂತಲೂ ಕಡಿಮೆ ಮತ ಪಡೆದ ಪಕ್ಷವಿದು. ಇದೀಗ ಏಕಾಏಕಿ ಈ ಪಕ್ಷದಲ್ಲಿ 20 ಲೋಕಸಭಾ ಸದಸ್ಯರು. ಲೋಕಸಭೆಯಲ್ಲಿ ಮೂರನೇ ಅತಿ ದೊಡ್ಡ ಪಕ್ಷ. ಎಂತಹ ಭಾಗ್ಯ ಈ ಪಕ್ಷದ್ದು! ದಸ್ತಿದಾರ್ ನೇತೃತ್ವದ ಬಣ ಲೋಕಸಭೆಯಲ್ಲಿ ಎನ್‌ಡಿಎ ಬೆಂಬಲಿಸಿದೆ. ತೃಣಮೂಲ ಕಾಂಗ್ರೆಸ್ಸಿನ ಮತ್ತೊಂದು ಬಣ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಬಿಜೆಪಿ ಸರಕಾರಕ್ಕೆ ಪ್ರತಿಪಕ್ಷವಾಗಿದೆ. ಈ ಎರಡು ಬಣಗಳ ಅಭಿಪ್ರಾಯ ವಿಭಿನ್ನವಾಗಿದೆ.
ಮಮತಾ ಬ್ಯಾನರ್ಜಿ ಅವರಿಗೆ ಇನ್ನು ವಿಚಾರಣೆಗಳ ಸಂಕಷ್ಟ. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಂಡ ಲಕ್ಷ್ಮೀರ್ ಭಂಡಾರ್ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ನಡೆದಿದೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಕೆಲವು ಶಾಸಕರ ಸಹಿಯನ್ನು ನಕಲಿ ಮಾಡಲಾಗಿದೆ ಎಂಬ ದೂರು, ಶಾಲಾ ಶಿಕ್ಷಕರ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಐಡಿ ಹಾಗೂ ಇಡಿ ವಿಚಾರಣೆ ಆರಂಭವಾಗಿದೆ. ಒಂದು ಕಡೆ ಪಕ್ಷ ವಿಭಜನೆ, ಮತ್ತೊಂದೆಡೆ ತನಿಖಾ ಸಂಸ್ಥೆಗಳ ವಿಚಾರಣೆ. ಮಮತಾ ಬ್ಯಾನರ್ಜಿ ಅವರಿಗೆ ದಿಕ್ಕೆಟ್ಟ ಪರಿಸ್ಥಿತಿ. ಬಂಗಾಳದ ಅಗ್ನಿಕನ್ಯೆಗೆ ಅಗ್ನಿ ಪರೀಕ್ಷೆ. ಮಮತಾ ಈಗ ಏಕಾಂಗಿ. ಅವರ ಮುಂದಿನ ಹಾದಿ ಕಠಿಣ. ಮಮತಾಗೆ ನೀಡಿದ ಭದ್ರತಾ ಸಿಬ್ಬಂದಿಯನ್ನು ಬಿಜೆಪಿಯ ಸುವೆಂದು ಅಧಿಕಾರಿ ಸರಕಾರ ಹಿಂಪಡೆದು ಸೇಡಿನ ರಾಜಕೀಯ ಮೆರೆದಿದೆ. ಭದ್ರತೆಯ ವಿಚಾರದಲ್ಲಿ ರಾಜಕೀಯ ಸಲ್ಲದು.
ಚುನಾವಣೆಯಲ್ಲಿ ಸೋತ ನಂತರ ಮಮತಾ ಅವರ ಪಕ್ಷದ ಸ್ಥಳೀಯ ಕೆಲವು ಮುಖಂಡರು, ಪಾಲಿಕೆ ಸದಸ್ಯರನ್ನು ಜನರು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆಯೇ ಹಲ್ಲೆ ನಡೆದಿದೆ. ಕೆಲವು ಮೇಯರ್‌ಗಳು ಹುದ್ದೆ ತೊರೆದಿದ್ದಾರೆ. ಪಾಲಿಕೆ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ವಸೂಲಿ ಆರೋಪದ ಸಂಬಂಧ ಅನೇಕ ಟಿಎಂಸಿ ಕಾರ್ಪೋರೇಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಮತಾ ಬ್ಯಾನರ್ಜಿ ಪಕ್ಷದ ಸಂಘಟನೆಯನ್ನು ಬಲಪಡಿಸಿದ್ದಕ್ಕಿಂತ ಸ್ಥಳೀಯವಾಗಿ ನಾಯಕರನ್ನು ಬೆಳೆಸಿದ್ದೇ ಹೆಚ್ಚು. ಅಂಥವರಲ್ಲಿ ಅನೇಕರು ದರ್ಪದಿಂದ ಮೆರೆದವರು.
ಪಶ್ಚಿಮ ಬಂಗಾಳದ ರಾಜಕೀಯ ಲ್ಯಾಂಡ್‌ಸ್ಕೇಪ್ ಬದಲಾಗಿದೆ. ಹಾಗೇ ನೋಡಿದರೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಮಧ್ಯೆ ಮತಗಳಲ್ಲಿ ಅಂತಹ ಭಾರಿ ಅಂತರವೇನಿಲ್ಲ. ಈ ಎರಡು ಪಕ್ಷಗಳ ಮಧ್ಯೆ ಮತಗಳ ವ್ಯತ್ಯಾಸ 32 ಲಕ್ಷ. ಶೇಕಡಾವಾರು ವ್ಯತ್ಯಾಸ 5.4. ಆದರೆ, ಸೀಟುಗಳ ವ್ಯತ್ಯಾಸ 127. ಬಿಜೆಪಿಗೆ 2.92 ಕೋಟಿ, ತೃಣಮೂಲ ಪಕ್ಷಕ್ಕೆ 2.6 ಕೋಟಿ ಮತಗಳು ಬಂದಿವೆ. ಇದೇನೇ ಇದ್ದರೂ ಜನತಂತ್ರದಲ್ಲಿ ಅಂತಿಮವಾಗಿ ನಂಬರ್ ಗೇಮ್ ಮುಖ್ಯ.
ತೃಣಮೂಲ ಕಾಂಗ್ರೆಸ್ಸಿನ ನಂತರ ಈಗ ಮಹಾರಾಷ್ಟ್ರದ ಶಿವಸೇನೆಯ ಉದ್ಧವ ಠಾಕ್ರೆ ಪಕ್ಷದ ಸರದಿ. ಉದ್ಧವ ಠಾಕ್ರೆ ಪಕ್ಷದ ಒಂಬತ್ತರಲ್ಲಿ ಆರು ಲೋಕಸಭಾ ಸದಸ್ಯರು ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಸೇರಲು ಮುಂದಾಗಿರುವುದು ಹೊಸ ವಿದ್ಯಮಾನ. ಲೋಕಸಭೆಯಲ್ಲಿ ಎನ್‌ಡಿಎ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮೂರನೇ ಎರಡರಷ್ಟು ಬಹುಮತ ಅಗತ್ಯವಿರುವ ಕೆಲವು ಮಹತ್ವದ ವಿಧೇಯಕಗಳಿಗೆ ಒಪ್ಪಿಗೆ ಪಡೆಯುವ ಲೆಕ್ಕಾಚಾರ ಬಿಜೆಪಿಯದು.
ಲೋಕಸಭೆಯಲ್ಲಿ ಕೆಲವು ವಿಧೇಯಕಗಳ ಅಂಗೀಕಾರಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕಿದೆ. ಈಗ ಟಿಎಂಸಿಯ ಒಂದು ಬಣದ 20 ಸದಸ್ಯರ ಬೆಂಬಲ ಎನ್‌ಡಿಎ ಸರಕಾರಕ್ಕೆ ದಕ್ಕಿದೆ. ಶಿವಸೇನೆಯ ಏಕನಾಥ ಶಿಂಧೆ ಬಣ ಈಗಾಗಲೇ ಎನ್‌ಡಿಎನಲ್ಲಿದೆ. ಈ ಬಣಕ್ಕೆ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಯ ಆರು ಲೋಕಸಭಾ ಸದಸ್ಯರು ಸೇರ್ಪಡೆಯಾಗಲು ಮುಂದಾಗಿರುವುದು ಲೋಕಸಭೆಯಲ್ಲಿ ಎನ್‌ಡಿಎ ಸರಕಾರ ಮೂರನೇ ಎರಡರಷ್ಟು ಬಹುಮತ ಪಡೆಯುವ ಕಸರತ್ತಿನ ಒಂದು ಭಾಗವೇ ಆಗಿದೆ.
ಲೋಕಸಭಾ ಸದಸ್ಯರ ಸಾಮೂಹಿಕ ವಲಸೆಯು ಈಗ ಬಹುಚರ್ಚಿತ ವಿಷಯ. ವಿಧಾನಸಭೆ ಅಥವಾ ಲೋಕಸಭಾ ಸದಸ್ಯರ ಮೂರನೇ ಎರಡರಷ್ಟು ಸದಸ್ಯರಿರುವ ಬಂಡಾಯ ಬಣ ಮತ್ತೊಂದು ಪಕ್ಷದಲ್ಲಿ ವಿಲೀನವಾದಾಗ ಮಾತ್ರ ಸದಸ್ಯತ್ವ ರದ್ದಾಗುವುದರಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿಯೇ ಟಿಎಂಸಿ ಲೋಕಸಭಾ ಸದಸ್ಯರ ಬಣ ಮತ್ತೊಂದು ಪಕ್ಷದಲ್ಲಿ ವಿಲೀನಗೊಂಡಿದೆ ಎಂಬುದು ಒಂದು ವಾದ.
ಆದರೆ, ವಿಲೀನ ಎಂಬುದು ಎರಡು ಪಕ್ಷಗಳ ಮಧ್ಯೆ ಆಗಬೇಕು. ಲೋಕಸಭಾ ಅಥವಾ ವಿಧಾನಸಭಾ ಸದಸ್ಯರೇ ಪಕ್ಷವಲ್ಲ. ಅವರು ಪಕ್ಷದ ಒಂದು ಭಾಗವಷ್ಟೇ. ಅವರಿಗಿಂತ ಪಕ್ಷ ದೊಡ್ಡದು. ಪಕ್ಷವೆಂದರೆ ಸಂಘಟನೆ. ಇಡೀ ಪಕ್ಷವೇ ಮತ್ತೊಂದು ಪಕ್ಷದಲ್ಲಿ ವಿಲೀವಾದಾಗ ಮಾತ್ರ ಸದಸ್ಯರ ಸದಸ್ಯತ್ವ ಉಳಿಯುತ್ತದೆ. ಇಲ್ಲದಿದ್ದರೆ ರದ್ದಾಗುತ್ತದೆ. ಸಂವಿಧಾನದ ಹತ್ತನೇ ಷೆಡ್ಯೂಲ್‌ನ 4ನೇ ಪ್ಯಾರಾದಲ್ಲಿ ರಾಜಕೀಯ ಪಕ್ಷ ಮಾತ್ರ ಮತ್ತೊಂದು ಪಕ್ಷದಲ್ಲಿ ವಿಲೀನವಾಗಬಹುದು. ಆ ಪಕ್ಷದ ವಿಧಾನಸಭಾ ಅಥವಾ ಲೋಕಸಭಾ ಸದಸ್ಯರು ಮತ್ತೊಂದು ಪಕ್ಷದಲ್ಲಿ ವಿಲೀನಗೊಳ್ಳುವುದನ್ನು ನಿರ್ಧರಿಸಿದರೆ ಸಾಲದು. ಪಕ್ಷವೂ ಇದಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಕಾನೂನು ತಜ್ಞರ ಅಭಿಪ್ರಾಯವೂ ಇದೆ.
ಶಾಸಕಾಂಗ ಪಕ್ಷ ಹೋಳಾಗುವ ಮುನ್ನವೇ ಸಂಘಟನೆಯಲ್ಲಿಯೂ ವಿಭಜನೆಯಾಗಿರುತ್ತದೆ. ಹೀಗಾಗಿ, ಇಡೀ ಪಕ್ಷವೇ ಮತ್ತೊಂದು ಪಕ್ಷದಲ್ಲಿ ವಿಲೀನ ಆಗಬೇಕೆಂದೇನೂ ಇಲ್ಲ ಎಂಬ ವಾದವೂ ಇದೆ. ಅಂತಿಮವಾಗಿ ಇದು ನ್ಯಾಯಾಲಯದ ಅಂಗಳದಲ್ಲೇ ತೀರ್ಮಾನವಾಗಬೇಕು.
ಪಕ್ಷಗಳ ವಿಲೀನ, ಪಕ್ಷಾಂತರಗಳು, ಅಡ್ಡಮತದಾನ ಈಗ ಚರ್ಚೆಯ ಮುನ್ನೆಲೆಗೆ ಬಂದಿವೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement