ಹೋರಾಟದ ಹಾದಿಯಲ್ಲಿ ಅಣ್ಣಾಮಲೈ (ನೇರ ನೋಟ)

ನಲವತ್ತೆರಡು ವರ್ಷದ ಅಣ್ಣಾಮಲೈ ಡೈನಾಮಿಕ್‌ ಲೀಡರ್‌. ಆಕರ್ಷಕ ಮಾತು. ಸ್ಪೀಡ್‌ಗೆ ಹೆಸರು. ರಾಷ್ಟ್ರೀಯವಾದಿ. ವ್ಯಕ್ತಿ ಆಧರಿತ ಕಲ್ಟ್‌ ರಾಜಕಾರಣದ ಕಡುವಿರೋಧಿ. ಅಂದಿಕೊಂಡಿದ್ದನ್ನು ಬೇಗನೇ ಸಾಧಿಸಬೇಕೆಂಬ ಛಲ.
K Annamalai
ಕೆ ಅಣ್ಣಾಮಲೈ
Updated on

ಕುಪ್ಪುಸ್ವಾಮಿ ಅಣ್ಣಾಮಲೈ!

ಬಿಜೆಪಿ ವರಿಷ್ಠರ ಒಂದು ಕಾಲದ ನೀಲಗಣ್ಣಿನ ಹುಡುಗ. ಇವತ್ತು ಆ ಪಕ್ಷದಿಂದ ನಿರ್ಗಮನ. ತಮಿಳುನಾಡಿನಲ್ಲಿ ತಮ್ಮದೇ ರಾಜಕಾರಣದ ಹೊಸ ಹಾದಿಯ ಅನ್ವೇಷಕ. ಯಾವ ದ್ರಾವಿಡ ನೆಲದಲ್ಲಿ ದಾಯಾದಿ ದ್ರಾವಿಡ ಪಕ್ಷಗಳನ್ನು ಸೋಲಿಸಿ ನಟ ಸಿ.ಜೋಸೆಫ್‌ ವಿಜಯ್‌ ಮುಖ್ಯಮಂತ್ರಿ ಗಾದಿ ಏರಿದರೋ, ಯಾವ ನೆಲದಲ್ಲಿ ದ್ರಾವಿಡ ಪಕ್ಷ ಅಣ್ಣಾಡಿಎಂಕೆ ಹೋಳಾಗಿದೆಯೋ ಅದೇ ದ್ರಾವಿಡ ನೆಲದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲವೆಂದು ಆ ಪಕ್ಷದಿಂದ ದೂರ. ತಮ್ಮದೇ ನಾಯಕತ್ವದಲ್ಲಿ ಹೊಸ ಚಳವಳಿಯ ಆರಂಭಕ್ಕೆ ಚಾಲನೆ. ಅದು ‘ವಿ ದ ಲೀಡರ್ಸ್‌’. ಈ ಅಭಿಯಾನಕ್ಕೆ ಆನ್‌ಲೈನ್‌ನಲ್ಲಿ ಮೊದಲ ದಿನವೇ ಹತ್ತು ಲಕ್ಷ ಜನರಿಂದ ಹೆಸರು ನೋಂದಣಿ. ಮೈದಾನದ ರಾಜಕಾರಣದಲ್ಲಿ ಈ ಆಂದೋಲನದ ಗರ್ಭದಿಂದಲೇ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕುವ ಉದ್ದೇಶ. ವ್ಯವಸ್ಥೆ ಸುಧಾರಿಸುವ ಸಂಕಲ್ಪ. ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಏರುವ ಕನಸು.

ನಲವತ್ತೆರಡು ವರ್ಷದ ಅಣ್ಣಾಮಲೈ ಡೈನಾಮಿಕ್‌ ಲೀಡರ್‌. ಆಕರ್ಷಕ ಮಾತು. ಸ್ಪೀಡ್‌ಗೆ ಹೆಸರು. ರಾಷ್ಟ್ರೀಯವಾದಿ. ವ್ಯಕ್ತಿ ಆಧರಿತ ಕಲ್ಟ್‌ ರಾಜಕಾರಣದ ಕಡುವಿರೋಧಿ. ಅಂದುಕೊಂಡಿದ್ದನ್ನು ಬೇಗನೇ ಸಾಧಿಸಬೇಕೆಂಬ ಛಲ. ಆತುರದಿಂದ ಮುನ್ನುಗ್ಗಿದಾಗ ಮುಗ್ಗರಿಸಿ ಬಿದ್ದವರು. ರಾಜಿ ಇಲ್ಲದ ಸ್ವಭಾವ. ಇದು ಅವರ ಶಕ್ತಿಯೂ ಹೌದು. ದೌರ್ಬಲ್ಯವೂ ಹೌದು. ಅಣ್ಣಾಡಿಎಂಕೆ ವಿಚಾರದಲ್ಲಿ ಅವರ ಸ್ಪೀಡಿಗೆ ಅಪಘಾತವಾಗಿದ್ದೂ ಉಂಟು. ಪೆಟ್ಟು ತಿಂದು ಬಿಜೆಪಿಯಲ್ಲಿ ಮೂಲೆಗುಂಪು. ಈಗ ಅವರಿಗೆ ಅವರೇ ಹೈಕಮಾಂಡ್‌. ಗುರಿಯೂ ಸ್ಪಷ್ಟ. ಹಾದಿಯೂ ನಿಚ್ಛಳ. ಈಗ ಅವರದು ಸೆಕೆಂಡ್‌ ಇನ್ನಿಂಗ್ಸ್.

ಅಣ್ಣಾಮಲೈ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದವರು. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಎಸ್‌ಪಿ, ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದವರು. ಪೊಲೀಸ್‌ ಇಲಾಖೆಯಲ್ಲಿ ಸಿಂಗಂ ಇಮೇಜು. ರಾಜಕಾರಣದ ಸೆಳೆತ. ಸರಕಾರಿ ಸೇವೆಗೆ ಗುಡ್‌ ಬೈ. ಬಿಜೆಪಿಗೆ ಸೇರ್ಪಡೆ. ತಮಿಳುನಾಡಿನಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿ ಅಧ್ಯಕ್ಷರಾದವರು. ಕಳೆದ ಆರು ವರ್ಷಗಳಿಂದ ತಮಿಳುನಾಡಿನ ರಾಜಕಾರಣದಲ್ಲಿ ಸೈಕಲ್‌ ತುಳಿಯುತ್ತಿದ್ದರೂ ಚುನಾವಣೆಯಲ್ಲಿ ಸ್ವತಃ ಗೆಲ್ಲಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಅಸ್ಪೃಶ್ಯ ಪಕ್ಷವೇ ಎಂದು ಆಗಸ್ಟ್‌ 2024ರಲ್ಲಿ ಪ್ರಶ್ನಿಸಿದ್ದರು. ಈಗ ಅವರೇ ದೂರ ಸರಿದಿದ್ದಾರೆ.

ಅಣ್ಣಾಮಲೈ ಅವರದು ಕೆಲವೊಮ್ಮೆ ಅತಿರೇಕದ ವರ್ತನೆ. ಚಿಕ್ಕಮಗಳೂರಿನಲ್ಲಿ ಎಸ್‌ಪಿಯಾಗಿದ್ದಾಗಲೂ ಒಮ್ಮೆ ಗುಂಪೊಂದರ ಮುಂದೆ ನಿಂತು ತಾಕತ್ತಿದ್ದರೆ ನನ್ನ ಮೈ ಮುಟ್ಟಿ ಎಂದು ಅರ್ಭಟಿಸಿದವರು. ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದವರು. ಚೆನ್ನೈನ ಕಾಲೇಜೊಂದರ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲಿಲ್ಲವೆಂದು ಡಿಎಂಕೆ ಸರಕಾರವನ್ನು ಖಂಡಿಸಿ ತಮಗೆ ತಾವೇ ಚಾಟಿಯಿಂದ ಮೈಗೆ ಬಾರಿಸಿಕೊಂಡವರು.

ಅಣ್ಣಾಮಲೈ ಕೊಂಗು ವೆಳಾಲರ್‌ ಸಮುದಾಯಕ್ಕೆ ಸೇರಿದವರು. ಕೃಷಿ ಸಮುದಾಯ. ಆರ್ಥಿಕವಾಗಿಯೂ ಸ್ವಲ್ಪ ಬಲಿಷ್ಠ. ತಮಿಳುನಾಡಿನ ಪಶ್ಚಿಮ ಭಾಗವಾದ ಕೊಯಮತ್ತೂರು, ಈರೋಡು, ಸೇಲಂ, ತಿರುಪ್ಪೂರು, ಕರೂರು ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯವಿದು. ದ್ರಾವಿಡ ನೆಲದಲ್ಲಿ ಬಿಜೆಪಿಗೆ ಶಕ್ತಿ ತುಂಬಲು ಅಣ್ಣಾಮಲೈ ಶ್ರಮಿಸಿದವರು. ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆ ಅವರ ಪ್ಲಸ್‌ ಪಾಯಿಂಟು.

ಅಣ್ಣಾಮಲೈ ಜುಲೈ 2023ರಲ್ಲಿ ಕೈಗೊಂಡ ‘ಎನ್‌ ಮಣ್, ಎನ್‌ ಮಕ್ಕಳ್‌’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆ ಜನರನ್ನು ಆಕರ್ಷಿಸಿತ್ತು. ಯುವಜನರು ಬಿಜೆಪಿಗೆ ಸೇರ್ಪಡೆಯಾದರು. ಅಣ್ಣಾಮಲೈ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ವಿರುದ್ಧ ಆರೋಪಗಳನ್ನು ಮಾಡಿದರು. ಅವರನ್ನು ಅನಕ್ಷರಸ್ಥ ಅಂತ ಟೀಕಿಸಿದರು. ಅಣ್ಣಾಡಿಎಂಕೆಯು ಬಿಜೆಪಿ ಜೊತೆ ಮೈತ್ರಿಯನ್ನು ಕಡಿದುಕೊಂಡಿತ್ತು. ಎನ್‌ಡಿಎನಿಂದಲೂ ಹೊರ ಬಂದಿತ್ತು.

ಲೋಕಸಭೆಗೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಅಣ್ಣಾಮಲೈ ಎನ್‌ಡಿಎ ಒಕ್ಕೂಟಕ್ಕೆ ಕೆಲವು ಹೊಸ ಪಕ್ಷಗಳನ್ನು ಕರೆತರುವಲ್ಲಿ ಯಶಸ್ವಿ ಆಗಿದ್ದರು. ಪಟ್ಟಾಳಿ ಮಕ್ಕಳ್‌ ಕಚ್ಚಿ, ತಮಿಳು ಮಾನಿಲ ಕಾಂಗ್ರೆಸ್‌, ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ ಪಕ್ಷಗಳನ್ನು ತಮಿಳುನಾಡಿನ ಎನ್‌ಡಿಎ ಕೂಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಲೋಕಸಭೆಗೆ ಕೊಯಮತ್ತೂರಿನಿಂದ ಕಣಕ್ಕಿಳಿದು ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ಎದುರು ಸೋತರು.

ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷ ಅದರಲ್ಲೂ ಹಿಂದುತ್ವ ಪ್ರತಿಪಾದಿಸುವ ಬಿಜೆಪಿಯನ್ನು ಕಟ್ಟುವ ವಿಶ್ವಾಸ ಕ್ರಮೇಣ ಅಣ್ಣಾಮಲೈ ಅವರಲ್ಲಿ ಕುಸಿಯಿತು. ಹಿಂದುತ್ವ, ನರೇಂದ್ರ ಮೋದಿ ಹಾಗೂ ತಮ್ಮ ಸಿಂಗಂ ಇಮೇಜಿನಿಂದ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಭ್ರಮನಿರಸನವಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಡಿಎಂಕೆಯು ಬಿಜೆಪಿ ಜೊತೆ ಮೈತ್ರಿ ಸಾಧಿಸುವ ಮೊದಲು ಅಣ್ಣಾಮಲೈ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ನಂತರವೇ ಮೈತ್ರಿ ಏರ್ಪಟಿದ್ದು.

ಅಣ್ಣಾಮಲೈ ಬಿಜೆಪಿ ತೊರೆಯುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ತಮ್ಮ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಇಲ್ಲಿ ಒಂದನ್ನು ಗಮನಿಸಬೇಕು. ಅಣ್ಣಾಮಲೈ ಪಕ್ಷ ತೊರೆದ ನಂತರ ಅವರ ವಿರುದ್ಧ ಬಿಜೆಪಿ ನಾಯಕರಾಗಲಿ ಅಥವಾ ಬಿಜೆಪಿ ಹಾಗೂ ಇದರ ನಾಯಕರ ವಿರುದ್ಧ ಅಣ್ಣಾಮಲೈ ಅವರಾಗಲಿ ಮಾತಾಡಿಲ್ಲ. ಒಂದು ರೀತಿಯ ಸೌಹಾರ್ದ ವಾತಾವರಣದಲ್ಲಿ ಬಿಜೆಪಿಯಿಂದ ಹೊರ ಬಂದಿದ್ದಾರೆ. ಇಂತಹ ನಡೆ ಅಪರೂಪ. ಇದು ಚರ್ಚೆಗೂ ಎಡೆಮಾಡಿದೆ.

ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗಳು ಮುಖ್ಯಮಂತ್ರಿ ಸಿ.ಜೋಸೆಫ್‌ ವಿಜಯ್‌ ಹಾಗೂ ಅಣ್ಣಾಮಲೈ ಅವರ ಸುತ್ತಲು ಗಿರಕಿ ಹೊಡೆಯಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಬಹುಶಃ ಸಿನಿಮಾದ ಜನಪ್ರಿಯತೆ ಅಥವಾ ಹಿನ್ನೆಲೆ ಇಲ್ಲದೇ ಚಳವಳಿಯ ಮೂಲಕವೇ ಹೊಸ ಪಕ್ಷ ಕಟ್ಟಿ ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂದು ಹೊರಟ ಮೊದಲಿಗರು ಅಣ್ಣಾಮಲೈ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಣ್ಣಾಮಲೈ ಅವರ ಹೊಸ ಪಕ್ಷ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.

ತಮಿಳುನಾಡಿನ ರಾಜಕಾರಣ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ನಂತರ ಸ್ಥಿತ್ಯಂತರಗೊಂಡಿದೆ. ಉಭಯ ದ್ರಾವಿಡ ಪಕ್ಷಗಳು ಸೋತಿವೆ. ನಟ ದಳಪತಿ ವಿಜಯ್‌ ನೇತೃತ್ವದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಉದಯಿಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ತಮಿಳುನಾಡನ್ನು ಆಳಿದ ಅಣ್ಣಾಡಿಎಂಕೆ ಈಗ ಎರಡು ಹೋಳಾಗಿದೆ. ಆ ಪಕ್ಷದ ನಾಲ್ವರು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಟಿವಿಕೆ ಸೇರಿದ್ದಾರೆ. ಅಣ್ಣಾಡಿಎಂಕೆ ಈಗ ಒಡೆದ ಮನೆ. ಆ ಪಕ್ಷಕ್ಕೆ ಸಂಕಷ್ಟದ ಕಾಲ. ಆ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಪಕ್ಷ ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಅಣ್ಣಾಡಿಎಂಕೆ ಒಂದು ಕಡೆ ಕುಸಿಯುತ್ತಿದ್ದರೆ ಟಿವಿಕೆ ಬಲಿಷ್ಠವಾಗುತ್ತಿದೆ.

ಇನ್ನು ಪ್ರತಿಪಕ್ಷದಲ್ಲಿರುವ ಡಿಎಂಕೆ ಸೋಲಿನ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದೆ. ಆ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಗಟ್ಟಿ ನಾಯಕತ್ವ ಇದೆ. ಡಿಎಂಕೆಯು ಕಾಂಗ್ರೆಸ್ ಹಾಗೂ ಬಿಜೆಪಿಯೇತರ ತೃತೀಯ ರಂಗವನ್ನು ರಾಷ್ಟ್ರಮಟ್ಟದಲ್ಲಿ ರಚಿಸಲು ಮುಂದಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷವು ಟಿವಿಕೆ ಜೊತೆಗೂಡಿ ಸರಕಾರದಲ್ಲಿ ಭಾಗಿಯಾದ ನಂತರ ಇಂಡಿಯಾ ಬ್ಲಾಕ್‌ನಿಂದ ಡಿಎಂಕೆ ಹೊರ ಬಂದಿದೆ. ವಿವಿಧ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ತೃತೀಯರಂಗ ರಚಿಸುವುದು ಈಗ ಡಿಎಂಕೆ ಉದ್ದೇಶ. ಪ್ರಾದೇಶಿಕ ಪಕ್ಷಗಳೇ ಒಡೆಯುತ್ತಿರುವ ಈ ಹೊತ್ತಲ್ಲಿ ಇದು ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತದೆಯೋ ಕಾದು ನೋಡಬೇಕು.

ಬಿಜೆಪಿಗೆ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಗೆಲ್ಲಲು ಸಾಧ್ಯವಾಗಿದ್ದು ಕೇವಲ ಒಂದೇ ಒಂದು ಸ್ಥಾನ ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಅಣ್ಣಾಮಲೈ ಆ ಪಕ್ಷದಿಂದ ಹೊರ ಬಂದು ತಮ್ಮದೇ ದಾರಿಯಲ್ಲಿ ಸಾಗಿರುವುದು ಆ ಪಕ್ಷಕ್ಕೆ ಬಲವಾದ ಹೊಡೆತ ನೀಡಿದೆ.

ಇನ್ನು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರ ಸರಕಾರಕ್ಕೆ ಒಂದು ತಿಂಗಳು ಉರುಳಿದೆ. ಚುನಾವಣಾ ಭರವಸೆಗಳನ್ನು ಈಡೇರಿಸುವ ಸವಾಲು ಸರಕಾರದ ಮುಂದಿದೆ. ಐದು ಎಕರೆಗಿಂತ ಕಡಿಮೆ ಇರುವ ರೈತರ ಬೆಳೆ ಸಾಲವನ್ನು ಪೂರ್ಣ ಮನ್ನಾ ಮಾಡುತ್ತೇವೆ. ದೊಡ್ಡ ಹಿಡುವಳಿದಾರರ ಬೆಳೆ ಸಾಲವನ್ನು ಶೇ.50ರಷ್ಟು ಮನ್ನಾ ಮಾಡುವುದಾಗಿ ಟಿವಿಕೆ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿತ್ತು. ಆದರೆ, ಈಗ ಅಧಿಕಾರಕ್ಕೆ ಬಂದ ನಂತರ ಇದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದೆ. ಇದನ್ನು ರೈತ ಸಂಘಟನೆಗಳು ವಿರೋಧಿಸಿವೆ. ಸರಕಾರಕ್ಕೆ ತನ್ನ ಆರ್ಥಿಕ ಪರಿಸ್ಥಿತಿಯದೇ ಚಿಂತೆ.

ತಮಿಳುನಾಡಿನ ರಾಜಕಾರಣ ಚುನಾವಣಾ ಫಲಿತಾಂಶದ ನಂತರವೂ ಹೆಚ್ಚು ಸಪ್ಪಳ ಮಾಡುತ್ತಲೇ ಇದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com