ಡಿ-ಕೋಡ್: ನ್ಯಾಯಾಂಗ ವ್ಯವಸ್ಥೆಯ ‘ಭ್ರಷ್ಟಾಚಾರ’ ಚರ್ಚೆಯ ವಿಷಯವಲ್ಲ; ಏಕೆಂದರೆ...

ಯಾವುದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಪ್ಪುಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬುದು ಪ್ರಶಾಂತ್ ಭೂಷಣ್ ಅವರಂತಹವರ ವಾದ.
judiciary (file photo)
ನ್ಯಾಯಾಂಗ (ಸಂಗ್ರಹ ಚಿತ್ರ)online desk
Updated on

ಇತ್ತೀಚೆಗೆ ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ಸವಾಲುಗಳಲ್ಲಿ ಭ್ರಷ್ಟಾಚಾರವೂ ಒಂದು ಎಂದು ಉಲ್ಲೇಖಿಸಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ಕೆಲವು ಹಿರಿಯ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಪಠ್ಯಪುಸ್ತಕದ ಉಲ್ಲೇಖವನ್ನು ಬೆಂಬಲಿಸಿ, ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಚರ್ಚೆಯನ್ನು ಹತ್ತಿಕ್ಕುವುದು ಜನರ ಅನುಮಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮುಕ್ತ ಚರ್ಚೆ ಅಗತ್ಯ’ ಎಂದು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವದಲ್ಲಿ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಸರಿಯೇ ಎಂಬ ಪ್ರಶ್ನೆ ಎದುರಾಗಿದೆ.

ಮುಕ್ತ ಚರ್ಚೆಯ ಪರ-ವಿರೋಧ ವಾದಗಳು

ಯಾವುದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಪ್ಪುಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬುದು ಪ್ರಶಾಂತ್ ಭೂಷಣ್ ಅವರಂತಹವರ ವಾದ. ನ್ಯಾಯಾಂಗ ವ್ಯವಸ್ಥೆಯು ಸಂವಿಧಾನದ ಆಧಾರದಲ್ಲಿ ನಡೆಯುತ್ತದೆ ಎನ್ನುವುದು ಸರಿಯಾದರೂ ಅದು ನೀಡುವ ತೀರ್ಪುಗಳನ್ನು ಸ್ವೀಕರಿಸುವ ಅಥವಾ ಸ್ವೀಕರಿಸದಿರುವ ಸನ್ನಿವೇಶ ಎದುರಾಗುವುದು ಜನರ ನಂಬಿಕೆ ಮತ್ತು ಗೌರವದ ಆಧಾರದ ಮೇಲೆ. ನ್ಯಾಯದಾನ ಎನ್ನುವುದು ಕೇವಲ ಸರ್ಕಾರಿ ಕಡತಗಳ ಕೆಲಸವಲ್ಲ. ನ್ಯಾಯ ನೀಡಿದರೆ ಸಾಲದು, ಅದನ್ನು ಸರಿಯಾದ ಸಮತೋಲನದಲ್ಲಿ ನೀಡಲಾಗಿದೆ ಎಂದು ಎರಡೂ ಪಕ್ಷಗಳಿಗೆ ಭಾಸವಾಗುವಂತೆ ಅರ್ಥ ಮಾಡಿಸಬೇಕು ಎನ್ನುವುದು ನ್ಯಾಯದಾನದ ಅಡಿಪಾಯ. ಅಲ್ಲಿಗೆ, ನ್ಯಾಯಾಂಗವು ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಅದು ಜನಸಾಮಾನ್ಯರ ಎದೆಯಲ್ಲಿರುವ ವಿಶ್ವಾಸದ ಅರಮನೆ. ವಿಶ್ವಾಸದ ಅಡಿಪಾಯವೇ ಅಲುಗಾಡಿದರೆ, ನ್ಯಾಯದ ಕಟ್ಟಡ ನಿಲ್ಲುವುದು ಅಸಾಧ್ಯ. ಹಾಗಾಗಿ ಆಧಾರರಹಿತ ಆರೋಪಗಳು ಅಥವಾ ನಿರಂತರ ಟೀಕೆಗಳಿಂದ ನ್ಯಾಯಾಲಯದ ಘನತೆ ಕಡಿಮೆಯಾದರೆ, ನ್ಯಾಯಾಂಗದ ಮೇಲಿನ ನಿಯಂತ್ರಣವೇ ತಪ್ಪಿಹೋಗುತ್ತದೆ. ಇದಕ್ಕಾಗಿಯೇ ‘ನ್ಯಾಯಾಂಗ ನಿಂದನೆ' (Contempt of Court) ಕಾಯ್ದೆಯನ್ನು ಜಾರಿಯಲ್ಲಿಡಲಾಗಿದೆ.

ಚರ್ಚೆಗಳಿಂದ ಭ್ರಷ್ಟಾಚಾರ ಕಡಿಮೆಯಾಗಿದೆಯೇ?

ಈಗ ಇರುವ ಪ್ರಶ್ನೆ ಮುಕ್ತ ಚರ್ಚೆಗೆ ಅವಕಾಶ ಬೇಡವೇ ಬೇಕೆ ಎನ್ನುವುದು. ನ್ಯಾಯಾಂಗವನ್ನು ಬದಿಗಿಟ್ಟು ಇತರ ಕ್ಷೇತ್ರಗಳನ್ನು ನೋಡೋಣ. ನಮ್ಮ ದೇಶದಲ್ಲಿ ‘ಮುಕ್ತ ಚರ್ಚೆ' ಮಾಡುವುದರಿಂದ ಯಾವುದೇ ಭ್ರಷ್ಟಾಚಾರ ನಿರ್ಮೂಲನೆ ಆಗಿದೆಯೇ? ಉದಾಹರಣೆಗೆ, ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಭ್ರಷ್ಟಾಚಾರಗಳು ಕಡಿಮೆ ಆಗಿವೆ. ಆದರೆ ಅದು ಕಡಿಮೆ ಆಗಿದ್ದು ಪ್ರಮುಖವಾಗಿ ತಂತ್ರಜ್ಞಾನದ ಅಳವಡಿಕೆ, ನೇರ ನಗದು ವರ್ಗಾವಣೆ (DBT) ಮತ್ತು ಡಿಜಿಟಲೀಕರಣದ ಕಾರಣಕ್ಕೇ ಹೊರತು ಬರಿಯ ಚರ್ಚೆಯಲ್ಲ. ಏಕೆಂದರೆ ಉನ್ನತ ಮಟ್ಟದ ಭ್ರಷ್ಟಾಚಾರ ಹಾಗೆಯೇ ಇದೆ. ಚರ್ಚೆಯಿಂದಲೇ ಎಲ್ಲ ಭ್ರಷ್ಟಾಚಾರ ಕಡಿಮೆ ಆಗುತ್ತದೆ ಎಂದಾಗಿದ್ದರೆ ಉನ್ನತ ಮಟ್ಟದ ಭ್ರಷ್ಟಾಚಾರವೂ ಕಡಿಮೆ ಆಗಬೇಕಿತ್ತು ಅಲ್ಲವೇ.

ಇನ್ನು ಚುನಾವಣೆ, ರಾಜಕೀಯ ಪಕ್ಷಗಳ ನಿಧಿ (Electoral Bonds), ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಂತಹ ವಿಚಾರಗಳಲ್ಲಿ ದಶಕಗಳಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ, ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿಹಾಕುವ ‘ಕುದುರೆ ವ್ಯಾಪಾರ' ಮತ್ತು ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದು ಇಂದಿಗೂ ನಮ್ಮ ಕಣ್ಣೆದುರೇ ರಾಜಾರೋಷವಾಗಿ ನಡೆಯುತ್ತಿದೆ. ಶಾಸಕರು ಅಥವಾ ಸಂಸದರು ಹಣದ, ಅಧಿಕಾರದ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುತ್ತಾರೆ ಎನ್ನುವುದನ್ನು ಅನೇಕ ವರ್ಷ ‘ಮುಕ್ತವಾಗಿ’ ಚರ್ಚಿಸಲಾಯಿತು. ಇದಕ್ಕಾಗಿಯೇ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಇಂದಿಗೂ ಪಕ್ಷಾಂತರವೇನಾದರೂ ನಿಂತಿದೆಯೇ? ಕರ್ನಾಟಕದಲ್ಲಿ ಜೆಡಿಎಸ್‌ ಹೋಳಾಗಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ ಹೋಳಾಗಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದು ಈ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದಾಗಲೇ ಅಲ್ಲವೇ? ಹಾಗೆ ನೋಡಿದರೆ, ಒಂದಿಬ್ಬರು ಶಾಸಕರನ್ನು ಖರೀದಿಸಲು ಬಳಕೆಯಾಗುತ್ತಿದ್ದ ಕಡಿಮೆ ಮೊತ್ತದಿಂದ ಇದೀಗ ಇಡೀ ಗುಂಪನ್ನು ಖರೀದಿಸಲು ಹೆಚ್ಚು ಹಣ ಬಳಕೆ ಆಗುತ್ತಿದೆ. ಅಲ್ಲಿಗೆ ಈ ವಿಚಾರದಲ್ಲೂ ಮುಕ್ತ ಚರ್ಚೆಯಿಂದ ಏನೂ ಉಪಯೋಗವಾಗಿಲ್ಲ.

ಆರ್‌ಟಿಐ ವಾಸ್ತವ

ಮಾಹಿತಿ ಹಕ್ಕು ಕಾಯ್ದೆ (RTI) ಜಾರಿಗೆ ಬಂದ ನಂತರ 2ಜಿ (2G) ಮತ್ತು ಆದರ್ಶದಂತಹ ಬೃಹತ್ ಹಗರಣಗಳು ಬಯಲಿಗೆ ಬಂದವು. ಈ ಹಗರಣಗಳು ಅಂದಿನ ಸರ್ಕಾರಗಳನ್ನೇ ಉರುಳಿಸಿದವು. ಆದರೆ, ಈ ಹಗರಣಗಳ ರೂವಾರಿಗಳಿಗೆ ಕಠಿಣ ಶಿಕ್ಷೆಯಾಯಿತೇ? ಇಲ್ಲ. ನ್ಯಾಯಾಲಯದಲ್ಲಿ ಈ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲಿಲ್ಲ. ಕೆಲವರು ಖುಲಾಸೆಗೊಂಡರೆ, ಇನ್ನು ಕೆಲವರು ರಾಜಕೀಯ ಪಕ್ಷಗಳನ್ನು ಬದಲಾಯಿಸಿ ಆರಾಮಾಗಿದ್ದಾರೆ. ಆರ್‌ಟಿಐ ಕಾಯ್ದೆಯು ತಳಮಟ್ಟದಲ್ಲಿ ಸಾಮಾನ್ಯ ಜನರಿಗೆ ರಸ್ತೆ ಗುಂಡಿ, ಪಡಿತರ ಅಥವಾ ಪಿಂಚಣಿ ಪಡೆಯಲು ಒಂದು ಅಸ್ತ್ರವಾಗಿ ಕೆಲಸ ಮಾಡಿದೆ. ಆದರೆ, ಪ್ರಭಾವಿಗಳ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುವಲ್ಲಿ ನಮ್ಮ ವ್ಯವಸ್ಥೆ ಇನ್ನೂ ವಿಫಲವಾಗಿದೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ವಿಚಾರವಾಗಿ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತನನ್ನೇ ಇನ್ನಾವುದೋ ಪ್ರಕರಣಕ್ಕೆ ತಳುಕು ಹಾಕಿ ಬಂಧಿಸಲಾಗಿದೆ (ಇದೊಂದು ಇತ್ತೀಚಿನ ನಿದರ್ಶನವಷ್ಟೆ. ಇಂತಹ ಅನೇಕ ಪ್ರಕರಣಗಳು ಎಲ್ಲ ರಾಜಕಾರಣಿಗಳ, ಪಕ್ಷಗಳ ವಿಚಾರದಲ್ಲೂ ಇದ್ದೇ ಇದೆ). ಅಲ್ಲಿಗೆ, ಪಾರದರ್ಶಕತೆಯನ್ನು ತರುವುದರಿಂದಲೂ ಭ್ರಷ್ಟಾಚಾರವನ್ನು ಹತ್ತಿಕ್ಕಲು ಆಗಿಲ್ಲ. ಬೆಳಕು ಕತ್ತಲೆಯನ್ನು ಓಡಿಸಿ, ನೆಲದ ಮೇಲಿರುವ ಕೊಳಕನ್ನು ತೋರಿಸುತ್ತದೆಯೇ ಹೊರತು, ಕಸವನ್ನು ಗುಡಿಸುವುದಿಲ್ಲ. ಸತ್ಯವನ್ನು ಅರಿಯುವುದು ಬೇರೆ, ಸತ್ಯವನ್ನು ಸ್ಥಾಪಿಸುವುದು ಬೇರೆ ಎಂಬುದಕ್ಕೆ ಈ ವಾಸ್ತವಗಳೇ ಸಾಕ್ಷಿ.

judiciary (file photo)
ಡಿ-ಕೋಡ್: ಕಂಬಳಿ ಹುಳದಿಂದ ಚಿಟ್ಟೆಯಾಗುವ ಕಡೆಗೆ 'ಬಿಜೆಪಿ' ರೂಪಾಂತರ

ನ್ಯಾಯಾಂಗದ ಮೇಲಿನ ನಂಬಿಕೆ ಉಳಿಯಬೇಕಿದೆ

ಈ ಮೇಲಿನ ಎಲ್ಲಾ ಅಂಶಗಳನ್ನು ವಿಶ್ಲೇಷಿಸಿದಾಗ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ತಾತ್ತ್ವಿಕವಾಗಿ (Concept level) ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಮುಕ್ತ ಚರ್ಚೆ ಮಾಡುವುದು ಒಳ್ಳೆಯ ವಿಚಾರವೇ. ಆದರೆ, ನಮ್ಮ ದೇಶದ ವಾಸ್ತವದಲ್ಲಿ ಯಾವುದೇ ವಿಚಾರದ ಬಗ್ಗೆ ಮುಕ್ತವಾಗಿ ಚರ್ಚಿಸಿದ ಮಾತ್ರಕ್ಕೆ ಭ್ರಷ್ಟಾಚಾರ ನಿರ್ಮೂಲನೆಯಾಗಿಲ್ಲ. ಆತಂಕಕಾರಿ ವಿಚಾರವೇನೆಂದರೆ, ಇಂತಹ ನಿರಂತರ ಚರ್ಚೆಗಳು ಆಯಾ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿ, ದೇಶದಲ್ಲಿ ಭ್ರಷ್ಟಾಚಾರ ಎಂಬುದು ಒಂದು ‘ಸಾಮಾನ್ಯ ವಿಚಾರ' (Normalized) ಎಂಬ ಸ್ಥಿತಿಗೆ ತಂದು ನಿಲ್ಲಿಸಿವೆ. ನ್ಯಾಯಮೂರ್ತಿ ಎನ್‌. ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ಅನೇಕ ಸರ್ಕಾರಿ ಅಧಿಕಾರಿಗಳನ್ನು ಬಂಧಿಸುತ್ತಿದ್ದ ಸುದ್ದಿ ಬಹಳ ಚರ್ಚೆಗೆ ಈಡಾಗುತ್ತಿತ್ತು. ಕೆಲವು ಸಮಯದವರೆಗೆ ಸಮಾಜದಲ್ಲಿ ಆಶಾಭಾವನೆ ಮೂಡಿತ್ತು. ದಾಳಿಗೊಳಗಾದ ಅಧಿಕಾರಿಗಳು, ಇದೊಂದು ಅವಮಾನಕರ ವಿಚಾರ ಎಂದೇ ಭಾವಿಸುತ್ತಿದ್ದರು. ಆದರೆ ನಂತರದಲ್ಲಿ ಅವರಲ್ಲಿ ಬಹಳಷ್ಟು ಜನರಿಗೆ ಶಿಕ್ಷೆಗಳೇ ಆಗದೆ ಖುಲಾಸೆಯಾದರು, ಯಾವ ಜಾಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರೋ, ತಮ್ಮ ಎಲ್ಲ ಪ್ರಭಾವವನ್ನೂ ಬಳಸಿ ಅದೇ ಸ್ಥಳಕ್ಕೆ ನಿಯುಕ್ತಿ ಮಾಡಿಸಿಕೊಂಡು ಲೋಕಾಯುಕ್ತರನ್ನೇ ಅಣಕಿಸಿದರು. ಈಗಂತೂ ಲೋಕಾಯುಕ್ತ ದಾಳಿಯಾಗಲಿ, ಇಡಿ, ಸಿಬಿಐ ದಾಳಿಯಾಗಲಿ, ‘ಇದು ತಮ್ಮ ವಿರೋಧಿಗಳು ತೇಜೋವಧೆಗೆ ನಡೆಸಿರುವ ಷಡ್ಯಂತ್ರ’ ಎಂಬ ಮಾತನ್ನು ಹೇಳಿ ತಣ್ಣಗೆ ಕೂರುತ್ತಾರೆ. ಜನಸಾಮಾನ್ಯರೂ ಒಂದು ದಿನದ ಸುದ್ದಿಯಂತೆ ಇದನ್ನು ನೋಡಿ ಸುಮ್ಮನಾಗುತ್ತಾರೆ. ತಮ್ಮ ನಾಯಕನೇನಾದರೂ ಬಂಧಿತನಾದರೆ, ‘ಇದು ಎದುರಾಳಿಗಳ ಷಡ್ಯಂತ್ರ’ ಎಂದು ತಾವೇ ಸಮರ್ಥನೆ ಕೊಟ್ಟುಕೊಳ್ಳುತ್ತಾರೆ. ಅಂದರೆ ಯಾವುದೇ ಫಲಿತಾಂಶಾಧಾರಿತ ಸುಧಾರಣೆಯ ವ್ಯವಸ್ಥೆಗಳು ಇಲ್ಲದೆಯೇ ಕೇವಲ ಮುಕ್ತ ಚರ್ಚೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಮಾತ್ರವಲ್ಲ, ಆ ಸಂಸ್ಥೆಯ ಮೇಲೆ ಈಗಿರುವ ವಿಶ್ವಾಸಾರ್ಹತೆಯೂ ಹೋಗುತ್ತದೆ.

ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ಮುಕ್ತವಾಗಿ ಚರ್ಚಿಸಲಾಯಿತು ಎಂದೇ ಇಟ್ಟುಕೊಳ್ಳೋಣ. ಅದನ್ನು ಸರಿಪಡಿಸುವ ಹೊಣೆ ಯಾರದ್ದು? ‘ರಾಜಕಾರಣದಲ್ಲಿ ಸಂಪೂರ್ಣ ಭ್ರಷ್ಟಾಚಾರ ಆವರಿಸಿದೆ’ ಎಂದು ಅಧಿವೇಶನದಲ್ಲೇ ಆನ್‌ರೆಕಾರ್ಡ್‌ ಹೇಳುವ ಮಟ್ಟಕ್ಕೆ ಕುಸಿದಿರುವ ರಾಜಕೀಯ ವ್ಯವಸ್ಥೆಯು ನ್ಯಾಯಾಂಗವನ್ನು ಸುಧಾರಣೆ ಮಾಡುತ್ತದೆಯೇ? ಸರ್ಕಾರಿ ನೌಕರಿಯಲ್ಲಿ ಸಂಬಳ ಕಡಿಮೆ ಇದ್ದರೂ ಪರವಾಗಿಲ್ಲ, ಮೇಲಿನ ಆದಾಯ ಬರುವುದರಿಂದ ಮ್ಯಾನೇಜ್‌ ಮಾಡಬಹುದು ಎಂದು ಕೋಟ್ಯಂತರ ರೂ. ಲಂಚ ನೀಡಿ ನೇಮಕ ಆಗಬಹುದು ಎನ್ನುವಂತಾಗಿರುವ ಕಾರ್ಯಾಂಗವು ನ್ಯಾಯಾಂಗವನ್ನು ಸುಧಾರಿಸುತ್ತದೆಯೇ?

ನ್ಯಾಯಾಂಗದಲ್ಲಿ ಭ್ರಷ್ಟಾಚಾರವಿದ್ದರೆ ಅದನ್ನು ಸರಿಪಡಿಸಬಾರದು ಎನ್ನುವುದು ಮಾತಿನ ಅರ್ಥವಲ್ಲ. ಆದರೆ ಅದಕ್ಕೆ ಈಗ ಪ್ರಶಾಂತ್‌ ಭೂಷಣ್‌ ಮುಂತಾದವರು ಹೇಳುತ್ತಿರುವ ‘ಮುಕ್ತ ಚರ್ಚೆ’ಯು ಮಾರ್ಗವಲ್ಲ ಎನ್ನುವುದು ಉದ್ದೇಶ. ಹೀಗಾಗಿ, ರಾಜಕೀಯ ವರ್ಗವು ಮೊದಲು ತಮ್ಮ ವ್ಯಾಪ್ತಿಯಲ್ಲಿನ (ಶಾಸಕಾಂಗ ಮತ್ತು ಕಾರ್ಯಾಂಗ) ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿ. ಆನಂತರ ನ್ಯಾಯಾಂಗದ ಬಗ್ಗೆ ಚರ್ಚಿಸುವುದು ಸೂಕ್ತ. ಅಲ್ಲಿವರೆಗೆ ನ್ಯಾಯಾಂಗವು ತನ್ನ ದೋಷಗಳನ್ನು ತಾನೇ ಸರಿಪಡಿಸಿಕೊಳ್ಳಲು ಬಿಡುವುದು ಅಥವಾ ಸೂಕ್ತ ಸಾಂವಿಧಾನಿಕ ಪ್ರಕ್ರಿಯೆಗಳ ಮೂಲಕ ಅದರ ಗಮನವನ್ನು ಸೆಳೆಯುವುದು ಸರಿಯಾದ ಮಾರ್ಗ.

judiciary (file photo)
ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ 'ಗರಗಸ'; DDT ಆಗುವತ್ತ ಕರ್ನಾಟಕ ಸರ್ಕಾರ

ಪ್ರಜಾಪ್ರಭುತ್ವದ ಇತರ ಎರಡು ಸ್ತಂಭಗಳಿಗೆ ಹೋಲಿಸಿದರೆ, ಇಂದಿಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲೆಯೇ ಅತಿ ಹೆಚ್ಚು ನಂಬಿಕೆ ಮತ್ತು ವಿಶ್ವಾಸವಿದೆ. ನ್ಯಾಯದಾನ ವ್ಯವಸ್ಥೆ ದುಬಾರಿಯಾಗಿದೆ, ಪ್ರಕರಣಗಳನ್ನು ಮುನ್ನಡೆಸುವುದು ಆರ್ಥಿಕವಾಗಿ ಕಷ್ಟ ಎನ್ನುವ ಮಾತು ಜನಸಾಮಾನ್ಯರಲ್ಲಿ ಇದೆಯಾದರೂ ನ್ಯಾಯಾಲಯದ ತೀರ್ಪಿನ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವ ಪ್ರಮಾಣ, ಕಾರ್ಯಾಂಗ ಹಾಗೂ ಶಾಸಕಾಂಗಕ್ಕೆ ಹೋಲಿಸಿದರೆ ಹಲವು ಪಟ್ಟು ಕಡಿಮೆಯಿದೆ. ಹಾಗಾಗಿ, ದೋಷಗಳನ್ನು ಸರಿಪಡಿಸುವ ನಂಬಿಕರ್ಹ ವ್ಯವಸ್ಥೆಗಳು ಇಲ್ಲದೇ ಇರುವಾಗ, ಉತ್ತರದಾಯಿತ್ವವಿಲ್ಲದ, ಅತಿಯಾದ ಚರ್ಚೆಗಳಿಂದ ನಂಬಿಕೆಯನ್ನು ಹಾಳುಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ದೇಶದ ಹಿತದೃಷ್ಟಿಯಿಂದ ಒಳಿತಲ್ಲ. ಮನೆಯ ಸೂರು ಸೋರುತ್ತಿದೆ ಎಂದು ಇಡೀ ಮನೆಯನ್ನೇ ಕೆಡವಬಾರದು. ಬಿರುಗಾಳಿಗೆ ಸಿಲುಕಿರುವ ಪ್ರಜಾಪ್ರಭುತ್ವದಲ್ಲಿ, ಉಳಿದಿರುವ ಏಕೈಕ ದೀಪವನ್ನು ಗಾಳಿಗೆ ಒಡ್ಡುವ ಬದಲು, ಕೈಯೊಡ್ಡಿ ಕಾಯುವುದು ಒಳ್ಳೆಯದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com