

ಇರಾನಿನ ಪರಮೋಚ್ಛ ಮತಗುರು ಖಮೇನಿ ಹತ್ಯೆಯಾದ ನಂತರವೂ ಇರಾನಿನ ಸೇನೆ ಹೋರಾಡುತ್ತಲೇ ಇದೆ. ತಾನು ಗೆಲ್ಲಲಾಗದೇ ಹೋದರೂ ಉಳಿದವರ ಹಾನಿಯನ್ನಂತೂ ಹೆಚ್ಚಿಸುತ್ತೇನೆ ಎಂಬಂತೆ ಇರಾನ್ ಶಸ್ತ್ರಪ್ರಯೋಗಗಳನ್ನು ಮಾಡುತ್ತಿರುವ ರೀತಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬೇರೆಯದೇ ಬಗೆಯ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಗಳು ಇರಾನಿನಿಂದ ಇಂಥ ಪ್ರತಿರೋಧ ನಿರೀಕ್ಷಿಸಿರಲಿಲ್ಲ ಎಂಬುದು ಈಗ ವ್ಯಕ್ತವಾಗುತ್ತಿರುವ ಪ್ರಮುಖ ಅಭಿಮತ. ಡೊನಾಲ್ಡ್ ಟ್ರಂಪ್ ಈಗ ಗೊಂದಲಕ್ಕೆ ಬಿದ್ದಿದ್ದಾರೆ, ಯುದ್ಧ ಮುಂದುವರಿದುಕೊಂಡಿರುವುದರಿಂದ ಅಮೆರಿಕಕ್ಕೆ ಆರ್ಥಿಕ ಬಿಸಿಯೂ ಹೆಚ್ಚಾಗುತ್ತಿದೆ ಎಂಬೆಲ್ಲ ವಿಶ್ಲೇಷಣೆಗಳು ಸರಿಯೆನಿಸುವಂತೆಯೇ ಇವೆ. ಆದರೆ, ಇಲ್ಲೊಂದು ವಿಚಿತ್ರ ಎನಿಸಬಹುದಾದ ಸಂಗತಿಯನ್ನು ಗಮನಿಸಬೇಕು. ಇಸ್ರೇಲ್ ಮತ್ತು ಅಮೆರಿಕಗಳು ಜಂಟಿಯಾಗಿಯೇ ಇರಾನಿನ ಮೇಲೆ ಯುದ್ಧಕ್ಕೆ ನಿಂತಿರುವುದು ಹೌದಾದರೂ ಅಮೆರಿಕಕ್ಕಾಗುತ್ತಿರುವ ಹಿನ್ನಡೆಗಳೆಲ್ಲ ಇಸ್ರೇಲಿನದ್ದೂ ಎಂದು ಸರಳವಾಗಿ ವ್ಯಾಖ್ಯಾನಿಸಲಾಗುವುದಿಲ್ಲ! ಅದೇಕೆ ಎಂಬುದಕ್ಕೆ ಕೆಲವು ಹಿನ್ನೆಲೆಗಳನ್ನು ಗಮನಿಸುವುದು ಅಗತ್ಯ.
ಅಮೆರಿಕವು ಈ ಹಿಂದಿನ ಅನೇಕ ಸಮರಗಳಲ್ಲಿ ತನ್ನ ಪಾಲಿಗೆ ಗೆಲವು ಘೋಷಿಸಿಕೊಂಡು ಮಿಲಿಟರಿ ಶಕ್ತಿಯಾಗಿ ಜಗತ್ತಿನೆದರು ಬೀಗಿದ್ದಿರಬಹುದಾದರೂ ಅವು ನಿಜ ಗೆಲುವುಗಳಲ್ಲ ಎಂದು ಹೇಳುವುದಕ್ಕೆ ಕಾರಣಗಳು ಸಿಗುತ್ತವೆ. ಉದಾಹರಣೆಗೆ, ಇರಾಕಿನಲ್ಲಿ ಸಮೂಹನಾಶಕ ಶಸ್ತ್ರಗಳಿವೆ ಎಂದು ದಾಳಿ ಮಾಡಲಾಯಿತು. ನಂತರದಲ್ಲಿ ಅಂಥವೇನೂ ಸಿಗಲಿಲ್ಲ ಎಂಬುದು ಒಂದೆಡೆ ಆದರೆ, ಅಲ್ಲಿ ಸದ್ಧಾಂ ಹುಸೇನನನ್ನು ಮುಗಿಸಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅದೇ ನೆಲದಲ್ಲಿ ಐಎಸ್ಐಎಸ್ ಹುಟ್ಟಿಕೊಂಡು ಜಗತ್ತನ್ನೇ ಕಾಡಿತು. ಅಫಘಾನಿಸ್ಥಾನದಲ್ಲಿ ಸಹ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಅದರ ಪಾಲಿಗಾಗಲೀ, ಜಗತ್ತಿನ ಪಾಲಿಗಾಗಲೀ ಪರಿಸ್ಥಿತಿಯನ್ನು ಬದಲಾಯಿಸಲಿಲ್ಲ. ಅವಳಿ ಕಟ್ಟಡಗಳು ಉರುಳಿದ ಒಂದೆರಡು ವರ್ಷಗಳ ಒಳಗೆ ಒಸಾಮಾ ಬಿನ್ ಲಾಡೆನ್ ನನ್ನು ಹುಡುಕಿ ಕೊಂದಿದ್ದರೆ ಅದಕ್ಕೊಂದು ಘನತೆ ಇರುತ್ತಿತ್ತು. ಇನ್ನೇನು ಮುದುಕನಾಗಿ ಹೇಗೆಂದರೂ ಸಾಯುತ್ತಾನೆ ಎಂಬ ಹಂತದಲ್ಲಿದ್ದ ಉಗ್ರನನ್ನು ಹೊಡೆದು ಹಾಕಿದ್ದರಲ್ಲಿ ಸಹ ಬಹಳ ಹೀರೋಗಿರಿಯೇನೂ ಇಲ್ಲ. ಆದರೆ ಅಮೆರಿಕ ಮತ್ತು ಹಾಲಿವುಡ್ ಕಥಾನಕಗಳು ನಮ್ಮಲ್ಲೆಲ್ಲ ಅವರೇನೋ ಭಾರೀ ಸೇಡು ತೀರಿಸಿಕೊಂಡುಬಿಟ್ಟಿದ್ದಾರೆ ಎಂಬ ಕಲ್ಪನೆಯನ್ನು ಬಿತ್ತಿದವು.
ಇದನ್ನು ಇಸ್ರೇಲಿನ ಆಕ್ರಮಣ ನಡೆಯೊಂದಿಗೆ ಹೋಲಿಸಿದರೆ ಅಲ್ಲಿ ಕೆಲವು ಸ್ಪಷ್ಟ ವ್ಯತ್ಯಾಸಗಳಿವೆ. ಇರಾನ್ ಅಣ್ವಸ್ತ್ರ ದೇಶವಾಗುವುದು ತನ್ನ ಅಸ್ತಿತ್ವಕ್ಕೇ ಕುತ್ತು ಎಂಬುದನ್ನು ಇಸ್ರೇಲ್ ಪ್ರಾರಂಭದಿಂದಲೂ ಪ್ರತಿಪಾದಿಸಿಕೊಂಡುಬಂದಿದ್ದು ಹೌದಾದರೂ ಕದನಕ್ಕಿಳಿಯಲು ಕಾರಣವಾಗಿದ್ದು ಅದೊಂದೇ ಅಂಶ ಅಲ್ಲ. 2023ರ ಅಕ್ಟೋಬರಿನಲ್ಲಿ ಗಾಜಾದಿಂದ ನುಗ್ಗಿಬಂದ ಹಮಾಸಿಗರಿಂದ ಇಸ್ರೇಲಿಗರ ಅಪಹರಣ ಮತ್ತು ಹತ್ಯೆಗಳಾಗಿದ್ದೇ ಪ್ರಾರಂಭ ಬಿಂದು. ಇದಕ್ಕೆ ತನ್ನದೇ ಬೆಂಬಲವಿದ್ದುದಾಗಿ ಇರಾನ್ ಬಹಿರಂಗವಾಗಿಯೇ ಜಂಬ ತೋರಿಸಿತು. ಅದಾಗಿ, ಈ ಮೂರು ವರ್ಷಗಳಲ್ಲಿ ಹಮಾಸಿನ ಬಲವನ್ನೇ ಕುಗ್ಗಿಸಿ, ಇರಾನ್ ಪೋಷಿಸಿಕೊಂಡಿದ್ದ ಇನ್ನೊಂದು ಉಗ್ರಪಡೆ ಹಿಜ್ಬುಲ್ಲಾದ ಪ್ರಮುಖರೆಲ್ಲ ಪ್ಯಾಂಟಿನೊಳಗೇ ಪೇಜರ್ ಸ್ಫೋಟ ಮಾಡಿಕೊಂಡು ಸಾಯುವಂತೆ ಮಾಡಿ, ಇರಾನಿನ ಮಿಲಿಟರಿ ಪ್ರಮುಖರನ್ನು ಅವರವರ ಬೆಡ್ರೂಮಿನಲ್ಲೇ ಗುರಿ ನಿರ್ದೇಶಿತ ದಾಳಿಗಳ ಮೂಲಕ ಮುಗಿಸಿ, ಕೊನೆಯಲ್ಲಿ ಖೊಮೇನಿಯನ್ನು ಮುಗಿಸಿದೆ. ಇಸ್ರೇಲಿನ ಈ ಪ್ರತಿಕ್ರಿಯಾತ್ಮಕ ಸರಣಿಯನ್ನು ಗಮನಿಸಿದಾಗ, ತನ್ನ ಮೇಲೆ ದಾಳಿ ಮಾಡಿದವರ ಮೇಲೆ ದಂಡೆತ್ತಿ ಹೋಗಿದ್ದರ ನ್ಯಾಯವೊಂದು ಸ್ಪಷ್ಟವಾಗುತ್ತದೆ. ಹಾಗೆಂದೇ ಈ ಸಮರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಗಳು ಮಿತ್ರಪಡೆಯೇ ಆಗಿದ್ದರೂ ಅವರಿಬ್ಬರನ್ನು ಒಂದೇ ಬಗೆಯಲ್ಲಿ ತೂಗುವುದಕ್ಕೆ ಆಗುವುದಿಲ್ಲ.
ಕೆಲವು ದಶಕಗಳ ಇತಿಹಾಸವನ್ನಷ್ಟೇ ಕಣ್ಣಮುಂದಿರಿಸಿಕೊಂಡವರಿಗೆ ಅಮೆರಿಕ ಆರ್ಥಿಕ ಪಾರಮ್ಯ ಅಚ್ಚರಿ ಎನಿಸಬಹುದು. ಆದರೆ ಈ ಪಾರಮ್ಯ ಪ್ರಾರಂಭವಾಗಿದ್ದರ ಇತಿಹಾಸ ಎರಡನೇ ವಿಶ್ವಯುದ್ಧದಷ್ಟು ಹಿಂದಕ್ಕೆ ಹೋಗುತ್ತದೆ ಅಷ್ಟೆ. ಕೆಲವೇ ನೂರು ವರ್ಷಗಳ ಹಿಂದಕ್ಕಷ್ಟೇ ಸಾಗುತ್ತದೆ ಅಮೆರಿಕದ ಇತಿಹಾಸ ಮತ್ತದರ ಐಡೆಂಟಿಟಿ. ಆದರೆ, ಇಸ್ರೇಲ್ ಐಡೆಂಟಿಟಿ ಭಿನ್ನವಾದದ್ದು. ಅದರ ಭೂಗೋಳ ಆಗಿಂದಾಗ ಬದಲಾಗಿದ್ದಿರಬಹುದು. ಮೂಲತಃ ಯಹೂದಿ ಎಂಬುದದರ ಐಡೆಂಟಿಟಿ. ಹಾಗೆ ನೋಡಿದಾಗ ಇಸ್ರೇಲಿನ ಐಡೆಂಟಿಟಿ ಸಾಯುವುದೇ ಆಗಿದ್ದರೆ ಅದ್ಯಾವತ್ತೋ ಮಣ್ಣಾಗಿ ಹೋಗುತ್ತಿತ್ತು. ಮೂರು ಸಾವಿರ ವರ್ಷಗಳಿಂದ ಅದು ಏನನ್ನೆಲ್ಲ ಸಹಿಸಿಕೊಂಡು ಆದರೆ ಸಾಯದೇ ಉಳಿದುಕೊಂಡು ಬಂದಿದೆ. ಈ ಪೈಕಿ ಕೆಲವು ಹಿಬ್ರೂ ಬೈಬಲ್ಲಿನ ಸ್ಮೃತಿಗಳಲ್ಲಿ ಅಡಗಿದ್ದರೆ, ಇನ್ನು ಕೆಲವು ದಾಖಲಿತ ಇತಿಹಾಸಗಳೇ ಆಗಿವೆ.
ದೈವವಾಣಿಯನ್ನು ಅನುಸರಿಸಿ ಅವತ್ತಿನ ಮೆಸಪೊಟಮಿಯಾದ ಪ್ರಾಂತ್ಯದಿಂದ “ದೇವರು ವಚನ ಕೊಟ್ಟ ನೆಲ”ವನ್ನು ಅರಸಿ ಇವತ್ತಿಗೆ ಇಸ್ರೇಲ್-ಪ್ಯಾಲಿಸ್ತೀನ್ ಎಂದು ಗುರುತಿಸಲಾಗುವ ಕಡೆಗೆ ಅಬ್ರಹಾಂ ತನ್ನ ಕುಟುಂಬದೊಂದಿಗೆ ಪ್ರಯಾಸದ ಪ್ರಯಾಣ ಬೆಳೆಸುವುದರೊಂದಿಗೇ ಕತೆ ಶುರುವಾಗುತ್ತದೆ. ಇದರ ಕಥಾನಕವನ್ನು ಈ ಹಿಂದಿನ ಅಂಕಣ ಒಂದೆಡೆ ಹುಟ್ಟಿದ ಈ ಮೂರು ಮತಗಳ ತಕರಾರಿನ ಮೂಲವೆಲ್ಲಿದೆ ಎಂಬುದರ ಮರು ಓದಿನಲ್ಲಿ ದಕ್ಕಿಸಿಕೊಳ್ಳಬಹುದು. ನಂತರ ಈಜಿಪ್ತಿನ ಫೆರೊಗಳ ಕ್ರೂರ ಆಡಳಿತದಲ್ಲಿ ವಲಸೆಗಳು ನಡೆಯುವುದು ಹಾಗೂ ಮೋಸಸ್ ಬಂದು ಯಹೂದಿಗಳನ್ನು ರಕ್ಷಿಸಿವುದು ಹಿಬ್ರೂ ಬೈಬಲ್ಲಿನ ಕಥಾನಕ. ಮುಂದೆ ಡೇವಿಡ್ ಹಾಗೂ ಸೊಲೊಮನ್ ನೇತೃತ್ವದಲ್ಲಿ ಉತ್ತುಂಗ ತಲುಪಿದ ಯಹೂದಿಗಳು ಜೆರುಸಲೇಂನಲ್ಲಿ ಮೊದಲ ದೇವಾಲಯ ನಿರ್ಮಿಸಿಕೊಳ್ಳುವುದು, ನಂತರ ಬ್ಯಾಬಿಲೋನಿಯನ್ನರು ಇವರ ಜಾಗ ವಶಪಡಿಸಿಕೊಂಡು ದೇವಾಲಯ ಒಡೆದು ವಲಸೆಗೆ ಕಾರಣವಾಗುವುದು, ರೋಮನ್ನರ ಕಾಲದಲ್ಲಿ ಯಹೂದಿಗಳ ದೇವಾಲಯ ಮತ್ತೆ ಉರುಳುವುದು, ನಂತರದ ಕ್ರೈಸ್ತೀಕರಣಗೊಂಡ ಯುರೋಪಿನಲ್ಲಿ ಯಹೂದಿಗಳು ಅಲ್ಪಸಂಖ್ಯಾತರಾಗಿ ಹರಿದುಹಂಚಿ ಹೋಗುವುದು, ಹತ್ತೊಂಬತ್ತನೇ ಶತಮಾನದಲ್ಲಿ ಮತಜಾಗೃತಿಯಾಗಿ ಯಹೂದಿಗಳೆಲ್ಲ ಒಟ್ಟಾಗುವುದು, ಆಮೇಲೆ ಬಂದ ಹಿಟ್ಲರ್ ಈ ಯಹೂದಿ ಜನಾಂಗದ ಮೇಲೆ ಕಂಡುಕೇಳರಿಯದ ಅತ್ಯಾಚಾರ ನಡೆಸಿ 60 ಲಕ್ಷದಷ್ಟು ಮಂದಿಯನ್ನು ಹತ್ಯೆ ಮಾಡುವುದು, ಎರಡನೇ ವಿಶ್ವಯುದ್ಧದ ಬೆನ್ನಲ್ಲೇ ಯಹೂದಿಗಳ ಸ್ವಂತ ದೇಶದ ಚಳವಳಿ ತೀವ್ರಗೊಂಡು 1948ರಲ್ಲಿ ಇಸ್ರೇಲಿನ ಸ್ಥಾಪನೆ, ಆಗಿನ್ನೂ ಕಣ್ಣುಬಿಡುತ್ತಿದ್ದವರ ಮೇಲೆ ಸುತ್ತಲಿನ ಅಷ್ಟೂ ಅರಬ್ ದೇಶಗಳ ಆಕ್ರಮಣ ಹಾಗೂ ಅದಕ್ಕೆ ಇಸ್ರೇಲಿನ ಧೀರೋದ್ದಾತ್ತ ಮಿಲಿಟರಿ ಗೆಲುವಿನ ಉತ್ತರ…. ಹೀಗೆಲ್ಲ ಪುಟಿದೇಳುವ ಚೇತನವಾಗಿ ಬೆಳೆದುಬಂದಿದೆ ಇಸ್ರೇಲಿಗರ ಇತಿಹಾಸ. ಹೀಗಾಗಿ, ಇವರ ವಿಷಯದಲ್ಲಿ ಯಾವುದನ್ನೂ ಹಿನ್ನಡೆ ಎಂದು ತೀರ್ಮಾನ ಮಾಡಿ ಮುಂದೆ ಹೋಗಲಿಕ್ಕಾಗುವುದೇ ಇಲ್ಲ.
ಈಗ ಇರಾನಿನಲ್ಲಿ ನಡೆಯುತ್ತಿರುವ ಯುದ್ಧದ ಅಂತಿಮ ಪರಿಣಾಮದ ನಿರೀಕ್ಷೆ ಎಂಬುದು ಅಮೆರಿಕಕ್ಕೆ ಹಾಗೂ ಇಸ್ರೇಲಿಗೆ ಬೇರೆಯೇ ಇದ್ದಂತಿದೆ. ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಯಾವೆಲ್ಲ ದೇಶಗಳು ಅಮೆರಿಕದ ಸುರಕ್ಷಾ ಛತ್ರವನ್ನು ನಂಬಿಕೊಂಡಿದ್ದವೋ ಅವೆಲ್ಲ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಯುದ್ಧ ವಿರಾಮವಾಗುತ್ತಿದ್ದಂತೆ ಅವರೆಲ್ಲ ಮುಂದಿನ ದಿನಗಳಲ್ಲಿ ತಮ್ಮ ನೆಲದಿಂದ ಅಮೆರಿಕದ ಮಿಲಿಟರಿ ನೆಲೆಯನ್ನು ಹಿಂದಕ್ಕೆ ಕಳಿಸುವುದಕ್ಕೇ ಹೆಚ್ಚು ಆಸಕ್ತರಾಗುತ್ತಾರೆ. ಏಕೆಂದರೆ ಅಮೆರಿಕದ ನೆಲೆ ತಮ್ಮಲ್ಲಿದ್ದದ್ದರಿಂದ ಅವಕ್ಕೆ ಹಾನಿಯೇ ಹೆಚ್ಚಾಗಿದೆಯೇ ಹೊರತು ರಕ್ಷಣೆಯಂತೂ ಸಿಕ್ಕಿಲ್ಲ.
ಇಸ್ರೇಲಿನ ಪಾಲಿಗೆ ಇದು ಸಮಾಧಾನದ ಸಂಗತಿಯೇ. ಅಮರಿಕ ಜಾಗ ಕಾಲಿ ಮಾಡಿದರೆ ಪಶ್ಚಿಮ ಏಷ್ಯದಲ್ಲಿ ಮತ್ತಷ್ಟು ಬಲವಾಗಿ ನಿಲ್ಲುವುದು ಇಸ್ರೇಲ್ ದೇಶವೇ ಆಗಿದೆ. ಆದರೆ, ಅಮೆರಿಕದ ಜತೆ ಇದ್ದ ಸಹಭಾಗಿತ್ವದ ಜಾಗವನ್ನು ಯಾರು ತುಂಬಬಲ್ಲರು? ಇದಕ್ಕೆ ಉತ್ತರವನ್ನು ಇಸ್ರೇಲ್ ಭಾರತದಲ್ಲಿ ಹುಡುಕುತ್ತಿದೆ! ಅದಾಗಲೇ ಗಲ್ಫ್ ದೇಶಗಳು, ಇಸ್ರೇಲ್ ಮತ್ತು ಯುರೋಪ್ ಒಳಗೊಂಡ ಆರ್ಥಿಕ ಹೆದ್ದಾರಿಯ ನಕ್ಷೆಯನ್ನು ಭಾರತದ ಸಹಭಾಗಿತ್ವವನ್ನೇ ಕೇಂದ್ರವಾಗಿರಿಸಿಕೊಂಡು ಯೋಜಿಸಿಯಾಗಿದೆ.
ಈ ಹಂತದಲ್ಲಿ ಕೆಲವು ವಿಶ್ಲೇಷಕರು ಎಚ್ಚರಿಸುತ್ತಾರೆ. ಕ್ರೈಸ್ತ, ಇಸ್ಲಾಂ ಮತಗಳ ರೀತಿಯಲ್ಲೇ ಅವಕ್ಕಿಂತ ಪೂರ್ವದಲ್ಲಿ ಅರಳಿರುವ ಯಹೂದಿ ಐಡೆಂಟಿಟಿಯು ತಾನು ಪ್ರಾಬಲ್ಯ ಪಡೆದ ನಂತರ ನಿಜರೂಪ ತೋರಿಸೀತು ಎಚ್ಚರ ಎನ್ನುವವರಿದ್ದಾರೆ. ಇವತ್ತಿನ ಜಿಹಾದ್ ಕಲ್ಪನೆಗಳಿಗೆ ಮೂಲವು ಹಿಬ್ರೂ ಬೈಬಲ್ಲಿನಲ್ಲೇ ಇದೆ ಎಂದು ವಾದಿಸುವುದಕ್ಕೂ ಖಂಡಿತ ಅವಕಾಶಗಳಿವೆ. ಆದರೆ, ಇಷ್ಟೆಲ್ಲ ಸಾವಿರ ವರ್ಷಗಳ ಇತಿಹಾಸದಲ್ಲಿ ಯಹೂದಿಗಳು ಉಳಿದ ಇನ್ನೆರಡು ಮತಗಳ ರೀತಿ ಬಲವಂತದಿಂದಲೋ, ಆಮಿಷದಿಂದಲೋ ಮತಾಂತರ ಮಾಡುವ ಮಾದರಿಯನ್ನು ಪ್ರದರ್ಶಿಸಿಲ್ಲ. ಯಹೂದಿ ಮತಕ್ಕೆ ಮತಾಂತರವಾಗಬೇಕೆಂದುಕೊಂಡವರಿಗೂ ಆ ಮಾರ್ಗ ಸುಲಭದ್ದಲ್ಲ. ಆದ್ದರಿಂದ ಯಹೂದಿಗಳು ಸಂಖ್ಯಾ ಪಾರಮ್ಯದಿಂದ ಇನ್ನೊಂದು ದೇಶವನ್ನು ವಸಾಹತನ್ನಾಗಿಸಿಕೊಂಡಾರು ಎಂಬ ಭಯಕ್ಕೆ ಆಧಾರವಿಲ್ಲ. ಹಾಗೆಂದು ಉದ್ಯಮದ ಮೂಲಕ ಯಹೂದಿಗಳು ಜಗತ್ತಿನ ಮೇಲಿಟ್ಟರುವ ಹಿಡಿತ ತಳ್ಳಿಹಾಕಲಾಗದು. ಆದರೆ, ಅದು ಉಳಿದೆಲ್ಲ ಐಡೆಂಟಿಟಿಗಳನ್ನು ನುಂಗಿಬಿಡುತ್ತದೆ ಎಂಬಂತಹ ಆತಂಕ ಹೊಂದುವುದಕ್ಕೆ ಆಸ್ಪದ ನೀಡುವ ವರ್ತನೆಗಳನ್ನು ಯಹೂದಿಗಳಾಗಲೀ, ಇಸ್ರೇಲ್ ದೇಶವಾಗಲೀ ಈವರೆಗೆ ತೋರಿಸಿಲ್ಲ.
- ಚೈತನ್ಯ ಹೆಗಡೆ
cchegde@gmail.com
Advertisement