

ಮಾನವರು ಬಣ್ಣಗಳನ್ನು ಹೇಗೆ ಗ್ರಹಿಸುತ್ತಾರೆ? ಕೆಂಪು, ನೀಲಿ ಮತ್ತು ಹಸಿರು ಎಂಬ ಬಣ್ಣಗಳ ನಡುವಿನ ವ್ಯತ್ಯಾಸವನ್ನು ನಮ್ಮ ಕಣ್ಣು ಮತ್ತು ಮೆದುಳು ಹೇಗೆ ಅರ್ಥಮಾಡಿಕೊಳ್ಳುತ್ತವೆ? ಬಣ್ಣಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ನಾವು ಹೇಗೆ ಗುರುತಿಸುತ್ತೇವೆ? ಈ ಪ್ರಶ್ನೆಗಳು ವಿಜ್ಞಾನಿಗಳನ್ನು ಬಹುಕಾಲದಿಂದಲೇ ಆಕರ್ಷಿಸುತ್ತಿವೆ.
ಸುಮಾರು ನೂರು ವರ್ಷಗಳ ಹಿಂದೆ, ಭೌತಶಾಸ್ತ್ರಜ್ಞ ಎರ್ವಿನ್ ಶ್ರೋಡಿಂಗರ್ ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂದು ವಿಶಿಷ್ಟ ಗಣಿತೀಯ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದರು (On The Relationship of Four-Color Theory to Three-Color Theory, Erwin Schrodinger, Vol.134, pp. 471-490, 1925). ಈಗ, ಶತಮಾನ ಕಳೆದ ಬಳಿಕ, ವಿಜ್ಞಾನಿಗಳು ಆ ಸಿದ್ಧಾಂತದಲ್ಲಿದ್ದ ಒಂದು ಪ್ರಮುಖ ಕೊರತೆಯನ್ನು ನೀಗಿಸಿ ಅದಕ್ಕೆ ಹೊಸ ಪೂರ್ಣತೆ ನೀಡಿದ್ದಾರೆ.
ಒಂದು ಸಂಗೀತ ಕಛೇರಿಯನ್ನು ಕಲ್ಪಿಸಿಕೊಳ್ಳಿ. ವಾದ್ಯಗಾರನು ಸ, ರಿ, ಗ, ಮ ಎಂಬ ಸ್ವರಗಳನ್ನು ವಾದಿಸುತ್ತಾನೆ. ಕೆಲವು ಸ್ವರಗಳು ಪರಸ್ಪರ ಚೆನ್ನಾಗಿ ಹೊಂದಿಕೊಂಡು ಮಧುರ ಸಂಗೀತವನ್ನು ರಚಿಸುತ್ತವೆ; ಕೆಲವು ಸ್ವರಗಳು ಬೇರೆ ರೀತಿಯ ಭಾವವನ್ನು ಹುಟ್ಟಿಸುತ್ತವೆ. ಸಂಗೀತವನ್ನು ಕೇಳುವಾಗ ನಾವು ಆ ವ್ಯತ್ಯಾಸವನ್ನು ಸುಲಭವಾಗಿ ಅನುಭವಿಸುತ್ತೇವೆ. ಆದರೆ ಸ್ವರಗಳ ನಡುವಿನ ಅಂತರ, ಅವುಗಳ ಪರಸ್ಪರ ಸಂಬಂಧ ಮತ್ತು ಅವು ಹೇಗೆ ಒಂದರಿಂದ ಮತ್ತೊಂದಕ್ಕೆ ಬದಲಾಗುತ್ತವೆ ಎಂಬುದನ್ನು ಗಣಿತ ಮತ್ತು ಸಂಗೀತಶಾಸ್ತ್ರ ವಿವರಿಸುತ್ತದೆ.
ಬಣ್ಣಗಳ ಜಗತ್ತೂ ಇದೇ ರೀತಿಯದ್ದಾಗಿದೆ. ನಾವು ಕೆಂಪು, ಹಸಿರು, ನೀಲಿ ಮುಂತಾದ ಬಣ್ಣಗಳನ್ನು ನೋಡುತ್ತೇವೆ ಮತ್ತು ಅವುಗಳ ನಡುವಿನ ವ್ಯತ್ಯಾಸವನ್ನು ಅನುಭವಿಸುತ್ತೇವೆ. ಆದರೆ ಆ ವ್ಯತ್ಯಾಸದ ಹಿಂದೆ ಇರುವ ಗಣಿತೀಯ ರಚನೆಯನ್ನು ಅರ್ಥಮಾಡಿಕೊಳ್ಳಲು ಸುಮಾರು ಶತಮಾನ ಹಿಂದೆ Erwin Schrödinger ಒಂದು ವಿಶಿಷ್ಟ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದರು. ಈಗ ವಿಜ್ಞಾನಿಗಳು ಆ ಕಲ್ಪನೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿ ಬಣ್ಣಗಳ ಜಗತ್ತಿನ “ಗಣಿತೀಯ ಸಂಗೀತ”ವನ್ನು ವಿವರಿಸಿದ್ದಾರೆ.
ಅಮೆರಿಕದ ಲಾಸ್ ಅಲಾಮೋಸ್ ರಾಷ್ಟ್ರೀಯ ಪ್ರಯೋಗಾಲಯದ ವಿಜ್ಞಾನಿಗಳ ತಂಡ, ಗಣಿತೀಯ ಜ್ಯಾಮಿತಿ ಮತ್ತು ದೃಶ್ಯ ವಿಜ್ಞಾನವನ್ನು ಬಳಸಿ ಮಾನವರು ಬಣ್ಣಗಳನ್ನು ಹೇಗೆ ಅನುಭವಿಸುತ್ತಾರೆ ಎಂಬುದನ್ನು ಹೊಸ ರೀತಿಯಲ್ಲಿ ವಿವರಿಸಿದೆ. ಈ ಅಧ್ಯಯನದ ನೇತೃತ್ವವನ್ನು ವಿಜ್ಞಾನಿ ರೊಕ್ಸಾನಾ ಬುಜಾಕ್ ವಹಿಸಿದ್ದು, ಅವರ ತಂಡದ ಸಂಶೋಧನೆ ಶ್ರೋಡಿಂಗರ್ ಶತಮಾನ ಹಿಂದೆ ಮಂಡಿಸಿದ್ದ ಬಣ್ಣ ಸಿದ್ಧಾಂತಕ್ಕೆ ಗಣಿತೀಯ ದೃಢತೆ ನೀಡಿದೆ. ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ನಿರ್ಣಯವೆಂದರೆ, ಬಣ್ಣಗಳ ಮೂಲಭೂತ ಗುಣಗಳಾದ ಹ್ಯೂ, ಸ್ಯಾಚುರೇಷನ್ ಮತ್ತು ಲೈಟ್ನೆಸ್ ಇವುಗಳು ಸಂಸ್ಕೃತಿ, ಭಾಷೆ ಅಥವಾ ಕಲಿತ ಅನುಭವಗಳಿಂದ ನಿರ್ಮಾಣವಾಗುವುದಿಲ್ಲ. ಅವು ಮಾನವ ದೃಷ್ಟಿ ವ್ಯವಸ್ಥೆಯೊಳಗಿನ ಗಣಿತೀಯ ರಚನೆಯಿಂದಲೇ ಉದ್ಭವಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಸೂಚಿಸಿದ್ದಾರೆ.
ಮಾನವನ ಕಣ್ಣುಗಳಲ್ಲಿ ಮೂರು ವಿಧದ ಶಂಕು ಆಕಾರದ ದೃಷ್ಟಿ ಕೋಶಗಳು (cone cells) ಇವೆ. ಇವು ಕ್ರಮವಾಗಿ ಕೆಂಪು, ಹಸಿರು ಮತ್ತು ನೀಲಿ ತರಂಗದೈರ್ಘ್ಯದ ಬೆಳಕಿಗೆ (wavelength of light) ಸಂವೇದನಾಶೀಲವಾಗಿವೆ. ಈ ಮೂರು ವಿಧದ ಸಂವೇದನೆಗಳ ಸಂಯೋಜನೆಯೇ ನಮಗೆ ಲಕ್ಷಾಂತರ ಬಣ್ಣಗಳನ್ನು ಕಾಣುವ ಅನುಭವವನ್ನು ನೀಡುತ್ತದೆ. ಈ ಕಾರಣದಿಂದ ವಿಜ್ಞಾನಿಗಳು ಬಣ್ಣಗಳನ್ನು ತ್ರೈಮಿತಿ ಬಣ್ಣ ಪರಿಧಿ (three dimensional color space) ಎಂಬ ಗಣಿತೀಯ ವ್ಯಾಪ್ತಿ ಮೂಲಕ ವಿವರಿಸುತ್ತಾರೆ.
19ನೇ ಶತಮಾನದಲ್ಲಿ ಗಣಿತಜ್ಞ ಬೆರ್ನಾರ್ಡ್ ರೀಮಾನ್ ಒಂದು ಮಹತ್ವದ ಕಲ್ಪನೆಯನ್ನು ಮುಂದಿಟ್ಟಿದ್ದರು: ಗ್ರಹಣ ಸಂಬಂಧಿತ ಸ್ಥಳಗಳು ಸಮತಟ್ಟಾಗಿರಬೇಕೆಂಬ ಅವಶ್ಯಕತೆ ಇಲ್ಲ; ಅವು ವಕ್ರ ಜ್ಯಾಮಿತಿಯ ರೂಪದಲ್ಲಿಯೂ ಇರಬಹುದು. ನಂತರ 1920ರ ದಶಕದಲ್ಲಿ ಶ್ರೋಡಿಂಗರ್ ಈ ಕಲ್ಪನೆಯನ್ನು ಬಳಸಿಕೊಂಡು ಬಣ್ಣಗಳನ್ನು ವಿವರಿಸುವ ಗಣಿತೀಯ ಮಾದರಿಯನ್ನು ರೂಪಿಸಿದರು. ಅವರ ಪ್ರಕಾರ ಬಣ್ಣಗಳ ಗುಣಗಳು ಕೇವಲ ಪದಗಳಲ್ಲ; ಅವು ಬಣ್ಣ ಸ್ಥಳದ ಜ್ಯಾಮಿತೀಯ ರಚನೆಯಿಂದಲೇ ಉದ್ಭವಿಸುವ ಗುಣಲಕ್ಷಣಗಳು. ಆ ಕಾಲದ ವೈಜ್ಞಾನಿಕ ಹಿನ್ನೆಲೆಯನ್ನು ಗಮನಿಸಿದರೆ, ಈ ಪರಿಕಲ್ಪನೆ ಅತ್ಯಂತ ಸಾಹಸಮಯ, ಪ್ರಜ್ಞಾಶೀಲ ಹಾಗೂ ಮುನ್ನೋಟದಾಯಕವಾಗಿತ್ತು.
ಶ್ರೋಡಿಂಗರ್ ಸಿದ್ಧಾಂತದಲ್ಲಿನ ಒಂದು ಪ್ರಮುಖ ಅಂಶವೇ ನಿರಪಕ್ಷ ಅಕ್ಷ. ಇದು ಕಪ್ಪಿನಿಂದ ಬಿಳಿವರೆಗೆ ಇರುವ ಬೂದು ಛಾಯೆಗಳ ಸರಣಿಯನ್ನು ಸೂಚಿಸುತ್ತದೆ. ಯಾವುದೇ ಬಣ್ಣವನ್ನು ಈ ಅಕ್ಷಕ್ಕೆ ಸಂಬಂಧಿಸಿದಂತೆ ಅದರ ತೀವ್ರತೆ ಮತ್ತು ಸ್ವಭಾವವನ್ನು ನಿರ್ಧರಿಸಲಾಗುತ್ತದೆ. ಆದರೆ ಇಲ್ಲಿ ಒಂದು ದೊಡ್ಡ ಸಮಸ್ಯೆ ಇತ್ತು. ಶ್ರೋಡಿಂಗರ್ ತಮ್ಮ ಸಿದ್ಧಾಂತವನ್ನು ಈ ಅಕ್ಷದ ಮೇಲೆ ನಿರ್ಮಿಸಿದ್ದರೂ, ಆ ಅಕ್ಷವನ್ನು ಗಣಿತದಲ್ಲಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸಿರಲಿಲ್ಲ. ಇದರ ಪರಿಣಾಮವಾಗಿ ಸಿದ್ಧಾಂತವು ತಾತ್ವಿಕವಾಗಿ ಬಲವಾಗಿದ್ದರೂ, ಗಣಿತೀಯವಾಗಿ ಅಪೂರ್ಣವಾಗಿತ್ತು. ಲಾಸ್ ಅಲಾಮೋಸ್ ವಿಜ್ಞಾನಿಗಳ ಹೊಸ ಅಧ್ಯಯನ ಈ ಕೊರತೆಯನ್ನು ಸರಿಪಡಿಸಿದೆ. ಅವರು ಬಣ್ಣ ವ್ಯತ್ಯಾಸ ಮಾಪಕ (color metric) ಎಂಬ ಗಣಿತೀಯ ವಿಧಾನವನ್ನು ಬಳಸಿ, ಬಣ್ಣಗಳ ನಡುವಿನ ಅವಲೋಕಿತ ದೂರ (observable distance) ಅಳೆಯುವ ಮೂಲಕ ನಿರಪಕ್ಷ ಅಕ್ಷವನ್ನು ನೇರವಾಗಿ ಜ್ಯಾಮಿತಿಯಿಂದಲೇ ಕಂಡುಹಿಡಿದರು. ಈ ಸಾಧನೆಯಿಂದ ಶ್ರೋಡಿಂಗರ್ ಸಿದ್ಧಾಂತವು ಮೊದಲ ಬಾರಿಗೆ ಸ್ವತಂತ್ರ ಮತ್ತು ಸಮಗ್ರ ಗಣಿತೀಯ ಆಧಾರವನ್ನು ಪಡೆದಿದೆ.
ಈ ಅಧ್ಯಯನ ಮತ್ತೊಂದು ಮಹತ್ವದ ವಿಚಾರವನ್ನೂ ತೋರಿಸಿದೆ. ಹಲವಾರು ವರ್ಷಗಳಿಂದ ವಿಜ್ಞಾನಿಗಳು ಬಣ್ಣ ಗ್ರಹಣವನ್ನು ರೀಮಾನಿಯನ್ ಜ್ಯಾಮಿತಿಯ ಮೂಲಕ ವಿವರಿಸುತ್ತಿದ್ದರು. ಆದರೆ ಹೊಸ ಸಂಶೋಧನೆಯ ಪ್ರಕಾರ ಮಾನವ ದೃಷ್ಟಿಯಲ್ಲಿ ಬಣ್ಣಗಳ ವ್ಯತ್ಯಾಸವನ್ನು ಗ್ರಹಿಸುವ ವಿಧಾನವು ಆ ಮಾದರಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ. ಉದಾಹರಣೆಗೆ, ಎರಡು ಬಣ್ಣಗಳ ನಡುವೆ ದೊಡ್ಡ ವ್ಯತ್ಯಾಸ ಇದ್ದರೂ ಅದು ನಮ್ಮ ಕಣ್ಣಿಗೆ ಅದೇ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಾಗಿ ಕಾಣುವುದಿಲ್ಲ. ಈ ಪರಿಣಾಮವನ್ನು ಕ್ರಮೇಣ ಕುಗ್ಗುವ ಫಲಪ್ರದತೆ (diminishing returns) ಎಂದು ಕರೆಯುತ್ತಾರೆ. ಈ ಪರಿಣಾಮವನ್ನು ಸರಿಯಾಗಿ ವಿವರಿಸಲು ವಿಜ್ಞಾನಿಗಳು ನಾನ್-ರೀಮಾನಿಯನ್ ಜ್ಯಾಮಿತಿಯ ಮಾದರಿಯನ್ನು ಬಳಸಬೇಕಾಯಿತು.
ಈ ಅಧ್ಯಯನವು ಇನ್ನೊಂದು ವಿಚಿತ್ರ ದೃಷ್ಟಿ ಪರಿಣಾಮವನ್ನೂ ವಿವರಿಸುತ್ತದೆ. ಅದೇ ಬೆಜೋಲ್ಡ್–ಬ್ರೂಕೆ ಪ್ರಭಾವ (Bezold–Brücke effect). ಕೆಲವೊಮ್ಮೆ ಬೆಳಕಿನ ತೀವ್ರತೆ ಹೆಚ್ಚಾದಾಗ ಅದೇ ಬಣ್ಣ ನಮಗೆ ಸ್ವಲ್ಪ ಬೇರೆ ಛಾಯೆಯಂತೆ ಕಾಣಬಹುದು. ಹಿಂದಿನ ಮಾದರಿಗಳಲ್ಲಿ ಬಣ್ಣಗಳು ಸರಳ ರೇಖೆಗಳ ಮೂಲಕ ಬದಲಾಗುತ್ತವೆ ಎಂದು ಊಹಿಸಲಾಗುತ್ತಿತ್ತು. ಆದರೆ ಹೊಸ ಸಂಶೋಧನೆ, ಬಣ್ಣಗಳು ಜ್ಯಾಮಿತೀಯ ಸ್ಥಳದಲ್ಲಿನ ಕಡಿಮೆ ದೂರದ ಮಾರ್ಗ (geodesic path) ಮೂಲಕ ಬದಲಾಗುತ್ತವೆ ಎಂದು ತೋರಿಸುತ್ತಿದೆ.
ಈ ಸಂಶೋಧನೆಯ ಫಲಿತಾಂಶಗಳನ್ನು 2025ರಲ್ಲಿ Computer Graphics Forum ಜರ್ನಲ್‌ನಲ್ಲಿ ಪ್ರಕಟವಾದ The Geometry of Color in the Light of a Non-Riemannian Space ಎಂಬ ಲೇಖನದಲ್ಲಿ ವಿವರಿಸಲಾಗಿದೆ. ಈ ಅಧ್ಯಯನವನ್ನು Eurographics Conference on Visualization(EuroVis 2025) ನಲ್ಲಿ ಮಂಡಿಸಲಾಗಿದೆ. ಇದು ಬಣ್ಣ ಗ್ರಹಣದ ಕುರಿತು ನಡೆದ ದೀರ್ಘಕಾಲದ ಸಂಶೋಧನೆಯ ಭಾಗವಾಗಿದೆ. ಇದೇ ತಂಡದ ಮತ್ತೊಂದು ಮಹತ್ವದ ಅಧ್ಯಯನ 2022ರಲ್ಲಿ Proceedings of the National Academy of Sciences (PNAS) ನಲ್ಲಿ ಪ್ರಕಟವಾಗಿತ್ತು. ಇಂದಿನ ಜಗತ್ತಿನಲ್ಲಿ ಬಣ್ಣಗಳ ನಿಖರ ಮಾದರಿಗಳು ಅತ್ಯಂತ ಪ್ರಮುಖವಾಗಿವೆ. ಫೋಟೋಗ್ರಫಿ, ವಿಡಿಯೋ ತಂತ್ರಜ್ಞಾನ, ಡಿಜಿಟಲ್ ವಿನ್ಯಾಸ, ವೈಜ್ಞಾನಿಕ ಮಾಹಿತಿ ದೃಶ್ಯೀಕರಣ, ಹವಾಮಾನ ಮಾದರಿಗಳು, ವೈದ್ಯಕೀಯ ಚಿತ್ರಣಗಳು ಮತ್ತು ರಾಷ್ಟ್ರೀಯ ಭದ್ರತಾ ಸಂಶೋಧನೆಗಳಲ್ಲಿ ಬಣ್ಣಗಳ ಸರಿಯಾದ ಚಿತ್ರಣ ಅತ್ಯಂತ ಅಗತ್ಯ. ಈ ನವೀನ ಗಣಿತೀಯ ಆಧಾರದಿಂದ ವಿಜ್ಞಾನಿಗಳು ಹೆಚ್ಚು ನಿಖರವಾದ ಮಾಹಿತಿ ದೃಶ್ಯೀಕರಣ, ಸಂಗಣಕ ಅನುಕರಣಗಳು ಮತ್ತು ಚಿತ್ರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.
ಶ್ರೋಡಿಂಗರ್ ಎಂಬ ಹೆಸರು ಕೇಳುತ್ತಿದ್ದಂತೆಯೇ ಬಹುತೇಕ ಜನರಿಗೆ “ಶ್ರೋಡಿಂಗರ್‌ರ ಬೆಕ್ಕು” ಎಂಬ ಪ್ರಸಿದ್ಧ ಕ್ವಾಂಟಮ್ ಪರಿಕಲ್ಪನೆ ನೆನಪಾಗುತ್ತದೆ. ಆದರೆ ಈಗ ವಿಜ್ಞಾನಿಗಳು ಹೇಳುತ್ತಿರುವುದೇನೆಂದರೆ, ಬಣ್ಣಗಳ ಕುರಿತು ಅವರ ಶತಮಾನ ಹಳೆಯ ಪರಿಕಲ್ಪನೆಯೂ ವಿಜ್ಞಾನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯಲಿದೆ. ನಾವು ಪ್ರತಿದಿನ ನೋಡುತ್ತಿರುವ ಬಣ್ಣಗಳು ಕೇವಲ ಕಣ್ಣಿನ ಅನುಭವ ಮಾತ್ರವಲ್ಲ. ಅವು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ ಮತ್ತು ಮಾನವ ಗ್ರಹಣಶಕ್ತಿಯ ಸಂಗಮ. ಶತಮಾನ ಹಿಂದೆ ಹುಟ್ಟಿದ ಒಂದು ವೈಜ್ಞಾನಿಕ ಪರಿಕಲ್ಪನೆ ಈಗ ನವೀನ ಗಣಿತದ ನೆರವಿನಿಂದ ಪೂರ್ಣತೆ ಪಡೆದಿರುವುದು, ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಶ್ನೆಗಳು ದೀರ್ಘಕಾಲ ಉಳಿದರೂ ಉತ್ತರಗಳು ಕೊನೆಗೂ ಬೆಳಕಿಗೆ ಬರುತ್ತವೆ ಎಂಬುದಕ್ಕೆ ಮತ್ತೊಂದು ಸುಂದರ ಉದಾಹರಣೆಯಾಗಿದೆ.
ಒಟ್ಟಿನಲ್ಲಿ, ವಿಜ್ಞಾನಾತ್ಮಕವಾಗಿ ನೋಡಿದರೆ ಬಣ್ಣಗಳ ಅನುಭವವು ನಮ್ಮ ಕಣ್ಣುಗಳಲ್ಲಿರುವ ಜೈವಿಕ ವ್ಯವಸ್ಥೆ ಮತ್ತು ಗಣಿತೀಯ ರಚನೆಯ ನಡುವಿನ ಸೂಕ್ಷ್ಮ ಪರಸ್ಪರ ಕ್ರಿಯೆಯ ಫಲವಾಗಿದೆ. ತತ್ವಚಿಂತನೆಯ ದೃಷ್ಟಿಯಿಂದ ಇದು ಮಾನವ ಗ್ರಹಣಶಕ್ತಿ ವಾಸ್ತವಿಕತೆಯನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ ಎಂಬುದರ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತದೆ: ನಾವು ನೋಡುವ ಬಣ್ಣಗಳು ಪ್ರಕೃತಿಯ ನಿಜಸ್ವರೂಪವೇ, ಅಥವಾ ಅವು ನಮ್ಮ ಮನಸ್ಸಿನ ಗ್ರಹಣ ವಿಧಾನದಿಂದ ರೂಪುಗೊಂಡ ಅನುಭವವೇ? ಅತಿಭೌತಿಕ (ಮೆಟಾಫಿಜಿಕಲ್) ದೃಷ್ಟಿಯಲ್ಲಿ ಈ ವಿಚಾರ ಇನ್ನೊಂದು ಆಳವಾದ ಸೂಚನೆಯನ್ನು ನೀಡುತ್ತದೆ. ವಿಶ್ವದ ಆಂತರಿಕ ರಚನೆ ಮತ್ತು ಮಾನವ ಚೇತನದ ನಡುವೆ ಯಾವುದೋ ಸೂಕ್ಷ್ಮ ಸಂಬಂಧ ಅಡಗಿರಬಹುದು ಎಂಬುದನ್ನು. ಶತಮಾನ ಹಿಂದೆ ಶ್ರೋಡಿಂಗರ್ ಮಂಡಿಸಿದ್ದ ಪರಿಕಲ್ಪನೆ ಇಂದು ಗಣಿತ ಮತ್ತು ವೈಜ್ಞಾನಿಕ ಸಂಶೋಧನೆಯ ಬೆಳಕಿನಲ್ಲಿ ಹೊಸ ಸ್ಪಷ್ಟತೆಯನ್ನು ಪಡೆಯುತ್ತಿರುವುದು, ಮಾನವನ ಜ್ಞಾನಯಾತ್ರೆಯಲ್ಲಿ ವಿಜ್ಞಾನ, ತತ್ವಚಿಂತನೆ ಮತ್ತು ಅಸ್ತಿತ್ವದ ಅನ್ವೇಷಣೆಗಳು ಪರಸ್ಪರ ದೂರದಲ್ಲಿರುವ ಪ್ರತ್ಯೇಕ ದಾರಿಗಳಲ್ಲ; ಅವು ಕೊನೆಗೆ ಒಂದೇ ಆಳವಾದ ಅರ್ಥದ ಸಂಗಮಬಿಂದುವಿನತ್ತ ಸಾಗುತ್ತಿರುವ ಸಾಧ್ಯತೆಯನ್ನು ಸೂಚಿಸುತ್ತಿವೆ.
ಪ್ರೊ. ಸತೀಶ್. ಎಲ್.ಎ
ಭೌತಶಾಸ್ತ್ರ ಪ್ರಾಧ್ಯಾಪಕರು
lasgayit@gmail.com
Advertisement