

ಮಧ್ಯ ಪೂರ್ವದಲ್ಲಿ ರಾಕೆಟ್‌ಗಳು ಉಡಾವಣೆಗೊಂಡಿರುವುದು, ಹಡಗುಗಳಿಗೆ ಆತಂಕ ಎದುರಾಗಿರುವುದು, ಮತ್ತು ತೈಲ ಬೆಲೆಗಳು ಗಗನಕ್ಕೆ ಏರುತ್ತಿರುವ ಸುದ್ದಿಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ, ಅಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು ಮತ್ತು ಯಾಕೆ ಎನ್ನುವುದು ನಿಮಗೆ ತಿಳಿದಿದೆಯೇ? ನಾವು ಅಲ್ಲಿನ ಬೆಳವಣಿಗೆಗಳನ್ನು ಹಂತಹಂತವಾಗಿ ಗಮನಿಸುತ್ತಾ ಹೋಗೋಣ.
ಯೆಮೆನ್ ಎನ್ನುವುದು ಅತ್ಯಂತ ತೊಂದರೆಗೆ ಸಿಲುಕಿರುವ, ಯುದ್ಧ ಪೀಡಿತ ದೇಶ. ಅದು ಹಲವಾರು ವರ್ಷಗಳಿಂದ ಆಂತರಿಕ ಯುದ್ಧದಲ್ಲಿ ಸಿಲುಕಿ ನಲುಗಿದೆ. ಒಂದು ಬದಿಯಲ್ಲಿ, ರಾಜಧಾನಿ ಸನಾ ಸೇರಿದಂತೆ ಯೆಮೆನ್ ದೇಶದ ಉತ್ತರ ಭಾಗಗಳನ್ನು ನಿಯಂತ್ರಿಸುತ್ತಿರುವ ಹೌತಿ ಎನ್ನುವ ಸಶಸ್ತ್ರ ಬಂಡುಕೋರ ಗುಂಪಿದೆ. ಹೌತಿಗಳು ಶಿಯಾ ಮುಸ್ಲಿಮರಾಗಿದ್ದು, ಅವರಿಗೆ ಇರಾನ್ ಹಣ, ಆಯುಧ ಮತ್ತು ತರಬೇತಿ ಒದಗಿಸಿ ಬೆಂಬಲಿಸುತ್ತಾ ಬಂದಿದೆ. ಇರಾನ್ ಹೌತಿಗಳ ಪಾಲಿಗೆ ಹಣ ನೀಡುತ್ತಾ, ಹಿಂದಿನಿಂದ ಬೆಂಬಲ ನೀಡುತ್ತಾ ಬಂದಿರುವ ಹಿರಿಯ ಅಣ್ಣ ಎಂದುಕೊಳ್ಳಿ.
ಆದರೆ, ಈಗ ಒಂದಷ್ಟು ಸಮಯದಿಂದ ಹೌತಿಗಳು ಈ ಪ್ರದೇಶದಲ್ಲಿ ಇರಾನಿನ ಬಹುದೊಡ್ಡ ಎದುರಾಳಿಯಾದ ಸೌದಿ ಅರೇಬಿಯಾದ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ದೀರ್ಘಾವಧಿಯ ಭೀಕರ ಯುದ್ಧದಲ್ಲಿ, ಸೌದಿ ಅರೇಬಿಯಾ ಯೆಮೆನ್ ಮೇಲೆ ಬಾಂಬ್‌ಗಳ ಸುರಿಮಳೆ ನಡೆಸಿತ್ತು. ಆದರೆ, ನಿಧಾನವಾಗಿ ಪರಿಸ್ಥಿತಿ ಬದಲಾಗಲು ಆರಂಭಿಸಿತ್ತು. ಹೌತಿಗಳು ಮಾತುಕತೆಗೆ ಬಂದಿದ್ದು, ಒಪ್ಪಂದಗಳ ಕುರಿತು ಚರ್ಚೆ ನಡೆಸುತ್ತಿದ್ದರು. ನಮಗೆ ಹಣ ಒದಗಿಸಿ, ನಮ್ಮ ಸರ್ಕಾರಕ್ಕೆ ಮಾನ್ಯತೆ ನೀಡಿ, ನಮ್ಮ ಕಾರ್ಮಿಕರಿಗೆ ಹಣ ಪಾವತಿಸಿ ಎನ್ನುತ್ತಿದ್ದರು. ಸೌದಿ ಅರೇಬಿಯಾ ಸಹ ಯೆಮೆನ್‌ಗೆ ಹಣ ಪಾವತಿಸಲು ಆರಂಭಿಸಿ, ಇತ್ತೀಚಿನ ಪಾವತಿಯಲ್ಲಿ ಒಂದು ಬಿಲಿಯನ್ ಡಾಲರ್ ಹಣವನ್ನು ಒದಗಿಸಿತ್ತು. ಉಭಯ ಪಕ್ಷಗಳ ಮಧ್ಯೆ ಮೌನವಾಗಿಯೇ ಒಂದು ಹೊಂದಾಣಿಕೆ ಬಂದಿದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ಈಗ ಆ ಮೌನ ಹೊಂದಾಣಿಕೆಯಲ್ಲಿ ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಅದಕ್ಕೆ ಕಾರಣಗಳೂ ಇವೆ.
ಹಣದ ಹರಿವು ನಿಂತು ಹೋಗಿದ್ದು, ಜನರು ಈಗ ಹಸಿವಿಗೆ ಸಿಲುಕಿದ್ದಾರೆ.
ಯೆಮೆನ್ 18 ಮಿಲಿಯನ್ ಜನಸಂಖ್ಯೆ ಹೊಂದಿದ್ದು, ಅವರಲ್ಲಿ ಬಹುತೇಕರು ಹೌತಿ ನಿಯಂತ್ರಣದಲ್ಲಿದ್ದಾರೆ. ಅವರೆಲ್ಲರೂ ತೀವ್ರ ಬಡತನದ ಕಾರಣದಿಂದ ಹಸಿವಿನಿಂದ ಕಂಗಾಲಾಗಿದ್ದಾರೆ. ಸರ್ಕಾರಿ ನೌಕರರಿಗೆ ಅದೆಷ್ಟೋ ತಿಂಗಳಿಂದ ಸಂಬಳವೇ ಪಾವತಿಯಾಗಿಲ್ಲ. ಸೌದಿ ಅರೇಬಿಯಾದಿಂದ ಬರುತ್ತಿದ್ದ ಹಣ ತೀಕ್ಷ್ಣವಾಗಿ ಇಳಿಮುಖಗೊಂಡಿದೆ. ಹೌತಿಗಳು ಕೆಂಪು ಸಮುದ್ರದ ಮೂಲಕ ಹಾದುಹೋಗುತ್ತಿದ್ದ ಹಡಗುಗಳಿಂದ ಹಣ ಪಡೆಯುವ ಮೂಲಕ ಆದಾಯ ಹೊಂದುತ್ತಿದ್ದರು. ಆದರೆ, ಗಾಜಾ ಕದನ ವಿರಾಮದ ಬಳಿಕ ಈ ಆದಾಯವೂ ಸ್ಥಗಿತಗೊಂಡಿದೆ. ಸರಳವಾಗಿ ಹೇಳುವುದಾದರೆ, ಹೌತಿ ನಾಯಕತ್ವಕ್ಕೆ ಈಗ ತೀವ್ರ ಹಣದ ಕೊರತೆ ಉಂಟಾಗಿದ್ದು, ದೇಶದೊಳಗೆ ಆಕ್ರೋಶಭರಿತ, ಹಸಿದ ಜನರನ್ನು ಎದುರಿಸುವಂತಾಗಿದೆ. ಯಾವಾಗ ಮನೆಯೊಳಗೇ ಪರಿಸ್ಥಿತಿ ಬೆಂಕಿ ಬಿದ್ದಂತಾಗುತ್ತದೋ, ಆಗ ಬೇರೆಡೆ ಮುಖ ಮಾಡುವುದು ಅನಿವಾರ್ಯವಾಗುತ್ತದೆ. ಅದು ಹೊರಗೆ ಇನ್ನೆಲ್ಲೋ ಯುದ್ಧ ಮಾಡುವುದಾದರೂ ಸರಿ ಎನ್ನುವಂತಾಗುತ್ತದೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಆರಂಭಿಕ ವಾರಗಳಲ್ಲಿ, ಹೌತಿಗಳು ಆಶ್ಚರ್ಯಕರವಾಗಿ ಮೌನ ತಳೆದಿದ್ದರು. ಇರಾನ್ ಅವರನ್ನು ಕದನಕ್ಕೆ ಇಳಿಯುವಂತೆ ಕರೆಯುತ್ತಲೇ ಇತ್ತು. ಆದರೆ, ಹೌತಿಗಳು ಮಾತ್ರ ಒಂದು ಅನಧಿಕೃತ ಕದನ ವಿರಾಮವನ್ನು ಪಾಲಿಸುತ್ತಿದ್ದರು. ಅವರು ಎಲ್ಲವನ್ನೂ ಗಮನಿಸುತ್ತಾ, ಕಾಯುತ್ತಾ, ಲೆಕ್ಕಾಚಾರ ಹಾಕುತ್ತಿದ್ದರು.
ಆದರೆ, ಮೂರು ದೊಡ್ಡ ಕಾರಣಗಳು ಈಗ ಹೌತಿಗಳು ಕ್ರಮ ಕೈಗೊಳ್ಳುವುದು ಅನಿವಾರ್ಯ ಎನಿಸುವಂತೆ ಮಾಡಿವೆ.
ಮೊದಲನೆಯದಾಗಿ, ಸೌದಿ ಅರೇಬಿಯಾ ಮತ್ತು ಯುಎಇಗಳಂತಹ ಗಲ್ಫ್ ರಾಷ್ಟ್ರಗಳು ಅಮೆರಿಕದ ಪಕ್ಷ ವಹಿಸಿವೆ. ಯುಎಇ ಅಂತೂ ಹೊರ್ಮುಸ್ ಜಲಸಂಧಿಯಲ್ಲಿ ಹಡಗುಗಳನ್ನು ರಕ್ಷಿಸಲು ಜಂಟಿ ನೌಕಾಪಡೆಯನ್ನೇ ಘೋಷಿಸಿದೆ. ಈ ದೇಶಗಳು ಈಗ ಯುದ್ಧದ ಬಳಿ ಬಂದಿರುವುದರಿಂದ, ಹೌತಿಗಳಿಗೆ ಶತ್ರುಗಳು ತಮ್ಮನ್ನು ಸುತ್ತುವರಿಯುತ್ತಿದ್ದಾರೆ ಎನ್ನುವ ಭಾವನೆ ಮೂಡಿದೆ. ಇನ್ನು ಸೌದಿ ಅರೇಬಿಯಾ ಜೊತೆಗಿನ ಒಪ್ಪಂದ? ಅದು ನಿಧಾನವಾಗಿ ಕೊನೆಯಾಗುತ್ತಿದೆ. ಹಣದ ಆಸೆ ಮತ್ತು ಅಧಿಕೃತತೆಯ ನಿರೀಕ್ಷೆ? ಅವೂ ನಿರಾಶೆ ಕಾಣುತ್ತಿವೆ. ಆದ್ದರಿಂದ ಸಹಜವಾಗಿಯೇ ಹೌತಿಗಳು ತಮ್ಮ ಮೂಲ ಬೆಂಬಲಿಗರಾದ ಇರಾನಿನತ್ತ ಮರಳಿ ಮುಖ ಮಾಡಿದ್ದಾರೆ.
ಎರಡನೆಯದಾಗಿ, ಇರಾನಿನ ಮಿಲಿಟರಿ ಅಧಿಕಾರಿಗಳು, ಅದರಲ್ಲೂ ವಿಶೇಷ ಪಡೆಯಾದ ಐಆರ್‌ಜಿಸಿ ಅಧಿಕಾರಿಗಳು ದಾಳಿಯ ಯೋಜನೆ ರೂಪಿಸುವ ಸಲುವಾಗಿ ಯೆಮೆನ್ ರಾಜಧಾನಿ ಸನಾಗೆ ಬಂದಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಈಗ ತಮ್ಮ ನೆಲದ ಮೂಲೆಯಲ್ಲಿ ಏಕಾಂಗಿಗಳಾಗಿ ಉಳಿದಿಲ್ಲ.
ಮೂರನೆಯದಾಗಿ, ಸ್ವತಃ ಅಮೆರಿಕ ಯೆಮೆನ್ ಸುತ್ತಲೂ ಮಿಲಿಟರಿ ಒತ್ತಡ ಸೃಷ್ಟಿಸುತ್ತಿದೆ. ಒಂದು ಬೃಹತ್ ವಿಮಾನ ವಾಹಕ ನೌಕೆ ಈಗ ಯೆಮೆನ್ ಗಡಿಯ ಬಳಿಯಲ್ಲಿ, ಒಮಾನ್ ಬಳಿ ಕುಳಿತಿದೆ. ಅಮೆರಿಕನ್ ಪಡೆಗಳು ಕೆಂಪು ಸಮುದ್ರದ ಬಳಿಯ ಜಿಬೌತಿಯಲ್ಲಿ ಹೆಚ್ಚಾಗುತ್ತಿವೆ. ಹೌತಿಗಳು ಈ ಹೆಚ್ಚಳವನ್ನು ಗಮನಿಸುತ್ತಿದ್ದು, ತಮ್ಮ ಮೇಲೆ ಒಂದು ನೇರ ದಾಳಿ ಸಜ್ಜಾಗುತ್ತಿದೆ ಎನ್ನುವ ಆತಂಕ ಹೊಂದಿದ್ದಾರೆ. ಆದ್ದರಿಂದ, ಹೌತಿಗಳು ತಮ್ಮ ಮೇಲೆ ದಾಳಿ ಆಗುವುದಕ್ಕೆ ಕಾದು ಕುಳಿತಿರುವ ಬದಲು, ತಾವೇ ಮೊದಲಾಗಿ ದಾಳಿ ಮಾಡೋಣ ಎನ್ನುವ ಮನಸ್ಥಿತಿ ಹೊಂದಿದ್ದಾರೆ.
ಅಮೆರಿಕ ಕಳೆದ ವರ್ಷ ಹೌತಿಗಳ ಆಯುಧಗಳ ಮೇಲೆ ದಾಳಿ ನಡೆಸಿದ್ದರೂ, ಇಸ್ರೇಲ್ ಬಹಳಷ್ಟು ಹೌತಿ ಮುಖಂಡರ ಹತ್ಯೆ ನಡೆಸಿದ್ದರೂ, ಹೌತಿಗಳ ಕಥೆ ಇನ್ನೂ ಮುಗಿದಿಲ್ಲ. ಅವರ ಬಳಿ ಇನ್ನೂ ಹಡಗುಗಳ ಮೇಲೆ ದಾಳಿ ಮಾಡಬಲ್ಲ ಕ್ಷಿಪಣಿಗಳಿವೆ. ಅವರು ಸ್ಫೋಟಕಗಳನ್ನು ತುಂಬಿರುವ ಬೋಟುಗಳು, ಸಮುದ್ರ ಮೈನ್‌ಗಳು, ಮತ್ತು ಕೆಂಪು ಸಮುದ್ರದ ತೀರದಲ್ಲಿ ಸಿದ್ಧವಾಗಿರುವ ದಾಳಿ ಡ್ರೋನ್‌ಗಳನ್ನೂ ಹೊಂದಿದ್ದಾರೆ.
ಮಾರ್ಚ್ 28ರಂದು ಹೌತಿಗಳು ದಕ್ಷಿಣ ಇಸ್ರೇಲಿನತ್ತ ಒಂದು ಕ್ಷಿಪಣಿಯನ್ನು ಉಡಾವಣೆಗೊಳಿಸಿದರು. ಇದು ಇರಾನ್ ಯುದ್ಧ ಆರಂಭಗೊಂಡ ನಂತರ ಹೌತಿಗಳು ನಡೆಸಿದ ಮೊದಲ ಆಕ್ರಮಣವಾಗಿತ್ತು. ಇದು ಒಂದು ಸಾಂಕೇತಿಕ ದಾಳಿಯಾಗಿದ್ದು, ಹೌತಿಗಳು ಜಗತ್ತಿಗೆ ನಾವು ಮರಳಿ ಬಂದಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಒಂದು ವೇಳೆ ಅವರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸಲು ಆರಂಭಿಸಿದರೆ, ಅವರು ಹೆಚ್ಚೇನೂ ದಾಳಿ ನಡೆಸುವ ಅಗತ್ಯವಿಲ್ಲ. ಎರಡು ಅಥವಾ ಮೂರು ದಾಳಿಗಳ ಪರಿಣಾಮವಾಗಿ, ವಿಮಾ ಮೊತ್ತ ಅತ್ಯಂತ ದುಬಾರಿಯಾಗಲಿದ್ದು, ಸಾಗಾಣಿಕಾ ಸಂಸ್ಥೆಗಳು ಈ ಮಾರ್ಗವನ್ನು ಬಳಸಲು ನಿರಾಕರಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಸಾಗಾಣಿಕೆಗೆ ಹೆಚ್ಚಿನ ಸಮಯ ಬೇಕಾಗಿ, ಸುದೀರ್ಘವಾದ, ವೆಚ್ಚದಾಯಕ ಮಾರ್ಗಗಳಲ್ಲಿ ಸಾಗಬೇಕಾಗುತ್ತದೆ. ಇದು ಜಾಗತಿಕ ವ್ಯಾಪಾರವನ್ನು ನಿಧಾನಗೊಳಿಸಲಿದೆ.
ಇನ್ನು ಇಲ್ಲೊಂದು ಅತ್ಯಂತ ಭೀತಿದಾಯಕ ಅಂಶವಿದೆ. ಹೊರ್ಮುಸ್ ಜಲಸಂಧಿ ಮುಚ್ಚಿರುವ ಪರಿಣಾಮವಾಗಿ, ಸೌದಿ ಅರೇಬಿಯಾ ಪ್ರತಿದಿನವೂ ಯಾನ್ಬು ಎನ್ನುವ ಕೆಂಪು ಸಮುದ್ರದ ಬಂದರಿನ ಮೂಲಕ 1.8 ಮಿಲಿಯನ್ ಬ್ಯಾರಲ್ ತೈಲಗಳನ್ನು ರಫ್ತು ಮಾಡುತ್ತಿದೆ. ಒಂದು ವೇಳೆ ಹೌತಿಗಳು ಈ ಮಾರ್ಗದ ಮೇಲೂ ದಾಳಿ ನಡೆಸಿದರೆ, ಈಗ ಪ್ರತಿ ಬ್ಯಾರಲ್‌ಗೆ 113 ಡಾಲರ್ ಆಸುಪಾಸಿನಲ್ಲಿರುವ ತೈಲ ಬೆಲೆ ಬಹುತೇಕ 200 ಡಾಲರ್ ತಲುಪಬಹುದು. ಅಂದರೆ, ಇಂಧನ ಬೆಲೆಗಳು ಹೆಚ್ಚಾಗಿ, ಆಹಾರ ದರವೂ ಹೆಚ್ಚಾಗಬಹುದು. ಭಾರತವೂ ಸೇರಿದಂತೆ, ಜಗತ್ತಿನಾದ್ಯಂತ ಎಲ್ಲ ದೇಶಗಳ ಸಾಧಾರಣ ಕುಟುಂಬಗಳು ಆರ್ಥಿಕ ಹೊಡೆತಕ್ಕೆ ತುತ್ತಾಗಬಹುದು.
ಹೌತಿಗಳು ಈಗ ಹಿಂದಿಗಿಂತ ಸಣ್ಣ ಮತ್ತು ದುರ್ಬಲ ಸಂಘಟನೆಯಾಗಿರಬಹುದು. ಆದರೆ, ಗಾಯಗೊಂಡಿರುವ, ಹತಾಶವಾಗಿರುವ, ಇನ್ನು ಕಳೆದುಕೊಳ್ಳಲು ಏನೂ ಉಳಿದಿರದ, ಶಸ್ತ್ರ ಸಜ್ಜಿತ ಗುಂಪನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಡ್ಡಿಯನ್ನಂತೂ ಈಗ ಗೀರಿಯಾಗಿದೆ. ಆದರೆ, ಇಲ್ಲಿ ಹಚ್ಚುವ ಬೆಂಕಿ ಎಷ್ಟರಮಟ್ಟಿಗೆ ಹಬ್ಬಬಹುದು ಎನ್ನುವುದನ್ನು ಕಾದು ನೋಡಬೇಕು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com
Advertisement