

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರಬಹುದು. ಆದರೆ, ತನ್ನ ಈ ನಡೆಯನ್ನು ಜೀರ್ಣಿಸಿಕೊಳ್ಳಲು ಆ ಪಕ್ಷಕ್ಕೆ ಸುದೀರ್ಘ ಕಾಲ ಬೇಕಾಗಬಹುದು. ಸಿದ್ದರಾಮಯ್ಯ ಅವರ ರಾಜೀನಾಮೆ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಅಹಿಂದ ವರ್ಗ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಇದನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಅದರಲ್ಲೂ ಸಿದ್ದರಾಮಯ್ಯ ಅವರ ಹಿಂದುಳಿದ ಕುರುಬ ಸಮಾಜದ ಮುಂದಿನ ರಾಜಕೀಯ ಒಲವು, ನಿಲುವು ಕುತೂಹಲಕಾರಿ. ಕಾಂಗ್ರೆಸ್ ವೋಟು ಬ್ಯಾಂಕು ಹಾಗೂ ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕು ಬಹುತೇಕ ಒಂದೇ ಆಗಿರುವುದು ಗಮನಾರ್ಹ.
ದೇಶದಲ್ಲಿ ಕಾಂಗ್ರೆಸ್ ಆಳ್ವಿಕೆ ಇರುವ ನಾಲ್ಕು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಮುಖ್ಯಮಂತ್ರಿ ಇದ್ದಿದ್ದು ಸಿದ್ದರಾಮಯ್ಯ ಒಬ್ಬರೇ. ಕಾಂಗ್ರೆಸ್ ಹೈಕಮಾಂಡ್ ಈಗ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದಿದೆ. ರಾಹುಲ್ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗದವರ ಏಳಿಗೆಯ ಬಗ್ಗೆ ಸಾಕಷ್ಟು ಮಾತಾಡುತ್ತಿದ್ದಾರೆ. ಈಗ ಹಿಂದುಳಿದ ವರ್ಗಗಳ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು ರಾಷ್ಟ್ರಮಟ್ಟದಲ್ಲಿ ಈ ಕುರಿತ ಪ್ರಶ್ನೆಯನ್ನು ಅವರು ಎದುರಿಸುವುದು ಸ್ವಲ್ಪ ಕಷ್ಟವಾಗುತ್ತದೆ.
ಅವತ್ತು ಡಿ. ದೇವರಾಜ ಅರಸು, ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ. ಇವತ್ತು ಸಿದ್ದರಾಮಯ್ಯ. ಕಳೆದ 45 ವರ್ಷಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹೀಗೆ ಕರ್ನಾಟಕದ ನಾಲ್ವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದೆ. ಇವರಲ್ಲಿ ದೇವರಾಜ ಅರಸು, ಬಂಗಾರಪ್ಪ, ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾಗಿದ್ದರೆ, ವೀರೇಂದ್ರ ಪಾಟೀಲರು ಮೇಲ್ಜಾತಿ ವೀರಶೈವ-ಲಿಂಗಾಯತ ಸಮಾಜದವರು. ವೀರೇಂದ್ರ ಪಾಟೀಲರನ್ನು ಕೆಳಗಿಳಿಸುವಾಗ ಅವರಿಗೆ ಅನಾರೋಗ್ಯ ಕಾರಣವನ್ನಾದರೂ ನೀಡಲಾಗಿತ್ತು. ಆದರೆ, ಉಳಿದ ಮೂವರು ನಾಯಕರನ್ನು ಅಧಿಕಾರದಿಂದ ಕೆಳಗಿಳಿಸಲು ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೂ ಹೈಕಮಾಂಡ್ ನಿರ್ಧರಿಸಿತು. ಅರಸರು ಹಾಗೂ ಬಂಗಾರಪ್ಪ ಬಂಡಾಯವೆದ್ದು ಪ್ರಾದೇಶಿಕ ಪಕ್ಷ ರಚಿಸಿದರು. ಆದರೆ, ಸಿದ್ದರಾಮಯ್ಯ ಆ ಹಾದಿ ತುಳಿಯುವ ಸಾಧ್ಯತೆ ಕಂಡು ಬರುತ್ತಿಲ್ಲ. ಆ ಪರಿಶ್ರಮಕ್ಕೆ ಅವರೆಂದೂ ತಯಾರು ಇರಲಿಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಮಿತಿಯೂ ಚೆನ್ನಾಗಿ ಗೊತ್ತಿದೆ.
ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಯಾದಾಗ 2006ರಲ್ಲಿ ಕಾಂಗ್ರೆಸ್ ಸೇರಿದರು. ಆ ಪಕ್ಷ ಅವರನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಎದುರಾಳಿಗಳನ್ನು ಎದುರಿಸಿತು. ಸಿದ್ದರಾಮಯ್ಯ ತಮ್ಮ ಶಕ್ತಿಯನ್ನು ಕಾಂಗ್ರೆಸ್ಸಿಗೆ ಸಂಪೂರ್ಣವಾಗಿ ಧಾರೆ ಎರೆಯುತ್ತಾ ಇದಕ್ಕೆ ಪ್ರತಿಫಲವನ್ನೂ ಪಡೆದರು. ತಮ್ಮ ಪಾರುಪತ್ಯವನ್ನೂ ಸ್ಥಾಪಿಸಿದರು. ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾದರು. ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದ ಹಾಗೂ ಬಜೆಟ್ ಮಂಡಿಸಿದ ದಾಖಲೆ ಬರೆದರು. ಸತತ 17 ವರ್ಷಗಳ ಕಾಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಪುತ್ರ ಡಾ.ಯತೀಂದ್ರ ಶಾಸಕರು. ಸಿದ್ದರಾಮಯ್ಯ ರಾಜಕೀಯವಾಗಿ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಅವರ ಕೈಹಿಡಿದಿತ್ತು. ಆಗ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಸಂಕಷ್ಟದಲ್ಲಿತ್ತು. ಅದೊಂದು ಕಾಲಘಟ್ಟ. ಇರಲಿ.
ಸಿದ್ದರಾಮಯ್ಯ ಅವರು ಕೆಲವು ತಿಂಗಳ ಹಿಂದೆ ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ನಿಂತು ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ. ಅಧಿಕಾರ ಹಂಚಿಕೆಯ ಒಪ್ಪಂದವೇ ಆಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. 2028ರ ಅಸೆಂಬ್ಲಿ ಚುನಾವಣೆಗೂ ತಮ್ಮದೇ ನಾಯಕತ್ವ ಎಂದು ರಾಜಾರೋಷವಾಗಿ ಸಾರಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಅಧಿಕಾರ ಹಂಚಿಕೆ ವಿವಾದ ತಾರಕ್ಕೇರಿದಾಗ ಸಿದ್ದರಾಮಯ್ಯ ಇಂತಹ ಮಾತು ಆಡಿದ್ದರು. ಹೈಕಮಾಂಡ್ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ. ಆಗ ಸಿದ್ದರಾಮಯ್ಯ ಅವರಲ್ಲಿ ಜನತಾ ಪರಿವಾರದ ಬಂಡಾಯ ಮನೋಧರ್ಮವನ್ನು ಗುರುತಿಸಿದವರು ಅನೇಕರು. ಆದರೆ, ಅವರ ಮನೋಧರ್ಮ ಹೆಚ್ಚು ದಿನ ಉಳಿಯಲಿಲ್ಲ. “ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಇದರಲ್ಲಿ ತಪ್ಪೇನು?’’ ಎಂದು ಶಿವಕುಮಾರ್ ಪ್ರಶ್ನಿಸಿದರು. ಸಿದ್ದರಾಮಯ್ಯ ಮೆತ್ತಗಾದರು. ಮಾತಿನ ವರಸೆ ಬದಲಿಸಿದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತೇನೆ ಅಂತ ತಲೆಬಾಗಿದ್ದರು.
ಸಿದ್ದರಾಮಯ್ಯ ಅವರಲ್ಲಿ ಮೊದಲ ಅವಧಿಯಲ್ಲಿದ್ದ ಆಡಳಿತ ನಡೆಸುವ ಹುಮ್ಮಸ್ಸು ಮೂರು ವರ್ಷಗಳ ಎರಡನೇ ಅವಧಿಯಲ್ಲಿ ಕಾಣಲಿಲ್ಲ. ಸುದೀರ್ಘ ಕಾಲದ ರಾಜಕಾರಣದಿಂದಾಗಿ ಹೊಸ ವಿಚಾರಗಳು ಅವರಲ್ಲಿ ಮೂಡಲಿಲ್ಲ. ಆಡಳಿತದಲ್ಲಿ ನಾವಿನ್ಯತೆ ಕಂಡು ಬರಲಿಲ್ಲ. ಅವರ ನಾಯಕತ್ವಕ್ಕೆ ಒಂದು ರೀತಿಯ ಜಡತ್ವ ಆವರಿಸಿತ್ತು. ವಯೋಸಹಜ ಗುಣವೂ ಇರಬಹುದು. ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಸರಕಾರ ಮೇಲೇಳಲಿಲ್ಲ. ಅವರಲ್ಲಿ ನಿರೀಕ್ಷೆ ಇಟ್ಟುಕೊಂಡಿರುವ ಪ್ರಗತಿಪರರು ಬೇಸರಪಟ್ಟರು. ಸಿದ್ದರಾಮಯ್ಯ ಅವರದು ಬಹುಮತದ ಸರಕಾರ. ಆದರೆ, ಸಮ್ಮಿಶ್ರ ಸರಕಾರದ ಗುಣವಿತ್ತು. ಮುಡಾ ಹಗರಣ ಒಬ್ಬ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಒಳಪಡುವಂತೆ ಮಾಡಿತು. ಇದು ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತಂದಿತು. ಅಧಿಕಾರ ಹಂಚಿಕೆ ಗೊಂದಲಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರೆ ಬಿತ್ತು.
ಹೈಕಮಾಂಡ್ ಮಂಗಳವಾರ ರಾಜೀನಾಮೆಗೆ ಸೂಚಿಸಿದ ನಂತರ ಸಿದ್ದರಾಮಯ್ಯ ಅವರದು ಘನತೆಯ ನಿರ್ಗಮನ. ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದರು. ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಒಮ್ಮೆ ರಾಜೀನಾಮೆ ನೀಡಲು ರಾಜಭವನಕ್ಕೆ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿದ್ದರು. ಆದರೆ, ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಸಡ್ಡು ಹೊಡೆಯಲಿಲ್ಲ. ಗದ್ದಲ, ಗೊಂದಲಕ್ಕೆ ಅವಕಾಶ ನೀಡಲಿಲ್ಲ. ಇಡೀ ಒಂದು ದಿನ ಆ ಬಗ್ಗೆ ಪ್ರತಿಕ್ರಿಯಿಸಲೇ ಇಲ್ಲ. ಮೌನವೇ ಅವರ ಉತ್ತರವಾಯಿತು. ಪದತ್ಯಾಗದಲ್ಲಿ ಗಾಂಭೀರ್ಯ ಮೆರೆದರು. ನಡೆ, ನುಡಿಯಲ್ಲಿ ಘನತೆಯನ್ನು ಎತ್ತಿ ಹಿಡಿದರು. ರಾಜೀನಾಮೆ ನೀಡಿದ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಅವರಿಗೆ ಧನ್ಯವಾದ ಅರ್ಪಿಸಿದರು. ಸಿದ್ದರಾಮಯ್ಯ ಅವರ ಘನತೆಯ ನಿರ್ಗಮನವನ್ನು ಅವರ ರಾಜಕೀಯ ಕಟು ಟೀಕಾಕಾರರು ಮೆಚ್ಚಿದರು.
ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚಿನ ದಶಕಗಳಲ್ಲಿ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಮಾಸ್ ಲೀಡರ್‌ಗಳು. ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನು ಮೊದಲು ಗುರುತಿಸಿದ್ದು ದೇವೇಗೌಡರು. “ಸಿದ್ದರಾಮಯ್ಯ ವ್ಯಕ್ತಿಯಲ್ಲ ಶಕ್ತಿ’’ ಎಂದು 1994ರ ವಿಧಾನಸಭಾ ಚುನಾವಣೆಗೂ ಕೆಲವು ದಿನಗಳ ಮುನ್ನ ಮೈಸೂರಿನಲ್ಲಿ ನಡೆದ ಜನತಾದಳ ಸಮಾವೇಶದಲ್ಲಿ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲರ ಸಮ್ಮುಖದಲ್ಲೇ ದೇವೇಗೌಡರು ಘಂಟಾಘೋಷವಾಗಿ ಸಾರಿದ್ದರು. ಆ ಚುನಾವಣೆಯಲ್ಲಿ ಜನತಾದಳ ಗೆದ್ದಿತ್ತು. ನಂತರ ಅಧಿಕಾರಕ್ಕಾಗಿ ಕಿತ್ತಾಡಿ 1999ರ ಚುನಾವಣೆಯಲ್ಲಿ ಜನತಾ ಪರಿವಾರ ನೆಲಕಚ್ಚಿತ್ತು. ಮುಂದೆ 2005ರಲ್ಲಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಭಿನ್ನ ಹಾದಿ ತುಳಿದಿದ್ದು ಈಗ ಇತಿಹಾಸ.
ಸಮಾಜವಾದ ಹಿನ್ನೆಲೆಯ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಸುದೀರ್ಘ ಕಾಲ ಹೋರಾಟ ನಡೆಸಿದವರಲ್ಲ. ಆದರೆ ಸುದೀರ್ಘ ಕಾಲ ಅಧಿಕಾರದಲ್ಲಿದ್ದವರು. ದೇವೇಗೌಡರು ಹಾಗೂ ಯಡಿಯೂರಪ್ಪ ಇದಕ್ಕೆ ಅಪವಾದ. ಅವರು ಅಧಿಕಾರಕ್ಕಾಗಿ ಸುದೀರ್ಘ ಕಾಲ ಹೋರಾಡಿದವರು. ಆದರೆ, ಅಧಿಕಾರದ ಕುರ್ಚಿಯಲ್ಲಿ ಹೆಚ್ಚು ವರ್ಷ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ದೇವೇಗೌಡರು ಹಾಗೂ ಯಡಿಯೂರಪ್ಪ ಅವರಿಗಿಂತ ಸಿದ್ದರಾಮಯ್ಯ ಸುದೀರ್ಘ ಕಾಲ ರಾಜ್ಯ ರಾಜಕಾರಣವನ್ನು ಪ್ರಭಾವಿಸಿದವರು. ಆ ಪ್ರಭಾವ ದೀರ್ಘ ಕಾಲ ಇರುವಂಥದ್ದು ಕೂಡ. ಸಿದ್ದರಾಮಯ್ಯ ಆಡಳಿತದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದವರು. ಅಹಿಂದ ವರ್ಗಗಳಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟವರು. ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅವಧಿಯಲ್ಲಿ ತಮ್ಮ ಸರಕಾರ ಅಹಿಂದ ಸರಕಾರ ಎಂದು ಘಂಟಾಘೋಷವಾಗಿ ಸಾರಿದವರು. ಆಗ ಕಾಂಗ್ರೆಸ್‌ನಲ್ಲೇ ಇದಕ್ಕೆ ಅಪಸ್ವರವೂ ಎದ್ದಿತ್ತು.
ಸಿದ್ದರಾಮಯ್ಯ ಅವರು ಸುದೀರ್ಘ ಕಾಲದಿಂದ ರಾಜಕಾರಣದಲ್ಲಿದ್ದರೂ ಎರಡನೇ ಹಂತದ ನಾಯಕರನ್ನು ಬೆಳಸಲಿಲ್ಲ. ಆದರೆ, ಅರಸು, ಹೆಗಡೆ, ದೇವೇಗೌಡ, ಯಡಿಯೂರಪ್ಪ ಎರಡನೇ ಹಂತದ ನಾಯಕರನ್ನು ಬೆಳೆಸಿದವರು. ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಬಳ್ಳಾರಿ ಪಾದಯಾತ್ರೆಯಂತಹ ಹೋರಾಟ ಬಿಟ್ಟರೆ ಅವರ ನಾಯಕತ್ವದಲ್ಲಿ ಮತ್ತೊಂದು ಅಂತಹ ಪ್ರಬಲ ಹೋರಾಟದ ನಿದರ್ಶನವಿಲ್ಲ.
ಸಿದ್ದರಾಮಯ್ಯ ರಾಜಕಾರಣ ಪ್ರವೇಶಿಸಿದ್ದು ಆಕಸ್ಮಿಕ. ರೈತ ಚಳವಳಿ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶ. ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ರಾಜಕೀಯ ಗುರು. ಮೈಸೂರು ತಾಲೂಕು ಬೋರ್ಡ್ ಸದಸ್ಯರಾಗಿ 1978ರಲ್ಲಿ ಆಯ್ಕೆ. ವಿಧಾನಸಭೆಗೆ 1983ರಲ್ಲಿ ನಡೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲೋಕದಳ ಬೆಂಬಲಿತ ಅಭ್ಯರ್ಥಿ. ತಕ್ಕಡಿ ಗುರುತು. ಗೆಲುವು. ಸಮಾಜವಾದ ಚಳವಳಿಯ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಈಗ ಐವತ್ತು ವರ್ಷದ ಸನಿಹ.
ಸಿದ್ದರಾಮಯ್ಯ ಅವರು ಇದೇ ವರ್ಷ ಸಾಮಾಜಿಕ ನ್ಯಾಯದ ದಿನ ಫೆಬ್ರುವರಿ 20 ರಂದು ಪತ್ರಿಕೆಯೊಂದರಲ್ಲಿ ಬರೆದ ಲೇಖನದ ಸಾಲುಗಳನ್ನು ಅವರ ಬೆಂಬಲಿಗರು ಈಗ ಮೆಲುಕು ಹಾಕುತ್ತಿದ್ದಾರೆ. ಅದು - ‘’ಸಾಮಾಜಿಕ ಬದಲಾವಣೆಗೆ ಕೈಹಾಕಿದವರನ್ನು ಇತಿಹಾಸದಲ್ಲಿ ವ್ಯವಸ್ಥಿತವಾಗಿ ದಮನಿಸಲಾಗಿದೆ. ಈಗ ಅದೇ ಇತಿಹಾಸ ಪುನರಾವರ್ತನೆ ಆಗುತ್ತಿದೆ. ರಾಜಕೀಯ ಷಡ್ಯಂತ್ರಗಳಿಗೆ ಮಣಿಯದೇ ಶೋಷಿತರ ಪರವಾಗಿ ಹೋರಾಡುವೆ. ನೀವು ನನ್ನನ್ನು ಎಷ್ಟು ತುಳಿಯಲು ಪ್ರಯತ್ನಿಸುತ್ತೀರೋ ನಾನು ಅಷ್ಟೇ ಬಲವಾಗಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎದ್ದು ಬರುತ್ತೇನೆ’’.
ಕಾಂಗ್ರೆಸ್‌ನಲ್ಲಿಯೇ ಸಿದ್ದರಾಮಯ್ಯ ಅವರ ಮುಂದಿನ ಹಾದಿ ಕುತೂಹಲಕಾರಿ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
Advertisement