ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?

ಕೇವಲ ನಾಲ್ಕು ಉಪಗ್ರಹಗಳಿಂದಲೇ ಓರ್ವ ವ್ಯಕ್ತಿಯ ಸ್ಥಾನವನ್ನು ಗುರುತಿಸಲು ಸಾಧ್ಯವಿದ್ದರೆ, ಜಿಪಿಎಸ್ ಏಕೆ ಅಷ್ಟೊಂದು ಉಪಗ್ರಹಗಳನ್ನು ಬಳಸುತ್ತಿದೆ?
ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?
Updated on: 

ಅಕ್ಟೋಬರ್ 31, 2026ರ ಬೆಳಗ್ಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಂಜಿನಿಯರ್‌ಗಳು ಒಂದು ದಿನ ಮುಂಚಿತವಾಗಿಯೇ ಎನ್‌ವಿಎಸ್-03 ಉಪಗ್ರಹ ಜಿಎಸ್ಎಲ್‌ವಿ-ಎಫ್18 ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ ಎಂದು ಖಚಿತಪಡಿಸಿದ್ದು, ತನ್ನ ಮೊದಲನೆಯ ಕಕ್ಷೆ ಎತ್ತರಿಸುವ ಚಲನೆಯನ್ನೂ (ಆರ್ಬಿಟ್ ರೈಸಿಂಗ್ ಮನೂವರ್) ಪೂರ್ಣಗೊಳಿಸಿದೆ ಎಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಉಪಗ್ರಹದ ಇಂಜಿನ್ ಮೃದುವಾಗಿ ಉಪಗ್ರಹವನ್ನು ಅದರ ಸರಿಯಾದ ಕಕ್ಷೆಯತ್ತ ಮೇಲಕ್ಕೆ ಎತ್ತುತ್ತದೆ. ಇಂತಹ ಇನ್ನಷ್ಟು ಒತ್ತುವಿಕೆಗಳು ಮತ್ತು ಹಲವು ವಾರಗಳ ಪರೀಕ್ಷೆಗಳ ಬಳಿಕ, ಉಪಗ್ರಹ ಭಾರತಕ್ಕೆ ಸೇವೆ ಸಲ್ಲಿಸಲು ಆರಂಭಿಸಲಿದೆ. ಯೋಜನೆ ತನ್ನ ಆರಂಭಿಕ ಹಂತದಲ್ಲೂ, ರಾಷ್ಟ್ರೀಯ ಹೆಮ್ಮೆ ಮತ್ತು ಅಂಕಗಣಿತದ ಲೆಕ್ಕಾಚಾರಗಳು ಎರಡನ್ನೂ ಬಳಸಬೇಕಾದ ಪ್ರಶ್ನೆಯೊಂದನ್ನು ಮೂಡಿಸಿದೆ. ಅದೇನೆಂದರೆ, ಭಾರತದ ಸ್ವಂತ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಯಾದ ನಾವಿಕ್ ಎಂದಿಗಾದರೂ ಅಮೆರಿಕದ ಜಿಪಿಎಸ್, ಚೀನಾದ ಬೈದು, ಮತ್ತು ರಷ್ಯಾದ ಗ್ಲೊನಾಸ್ ವ್ಯವಸ್ಥೆಗಳಿಗೆ ಸರಿಸಮನಾಗಿ ನಿಲ್ಲಬಲ್ಲದೇ?

ಮೊದಲಿಗೆ ಇತರ ದೇಶಗಳ ಇಂತಹ ವ್ಯವಸ್ಥೆಗಳು ಯಾವ ಮಟ್ಟದಲ್ಲಿವೆ ಎನ್ನುವುದನ್ನು ಗಮನಿಸೋಣ. ಅಮೆರಿಕದ ಜಿಪಿಎಸ್ ಕನಿಷ್ಠ 24 ಉಪಗ್ರಹಗಳನ್ನು ಬಳಸಿಕೊಳ್ಳುವ ವ್ಯವಸ್ಥೆಯಾಗಿದ್ದು, ಅದು ಸದಾ 30 ಅಥವಾ ಅದಕ್ಕಿಂತಲೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಹೊಂದಿದೆ. ರಷ್ಯಾದ ಗ್ಲೊನಾಸ್ 24 ಉಪಗ್ರಹಗಳ ಮೇಲೆ ಅವಲಂಬನೆ ಹೊಂದಿದೆ. ಯುರೋಪಿನ ಗೆಲಿಲಿಯೋ 24 ಅಥವಾ ಅದಕ್ಕಿಂತ ಹೆಚ್ಚು ಉಪಗ್ರಹಗಳನ್ನು ಬಳಸುತ್ತದೆ. ಚೀನಾದ ಬೈದು ತನ್ನ ಜಾಗತಿಕ ವ್ಯವಸ್ಥೆಯಲ್ಲಿ 35 ಉಪಗ್ರಹಗಳನ್ನು ಬಳಸಿಕೊಳ್ಳುತ್ತಿದ್ದು, ಅದರ ಉಪಗ್ರಹಗಳು ಬಾಹ್ಯಾಕಾಶದಲ್ಲಿ ವಿವಿಧ ವಿಭಿನ್ನ ಕಕ್ಷೆಗಳಲ್ಲಿ ಅಳವಡಿತವಾಗಿವೆ. ಭಾರತದ ನಾವಿಕ್ ವ್ಯವಸ್ಥೆ ಕೇವಲ ಏಳು ಉಪಗ್ರಹಗಳಿಗಾಗಿ ವಿನ್ಯಾಸಗೊಂಡಿದ್ದು, ಎನ್‌ವಿಎಸ್-03 ಉಡಾವಣೆಗೊಳ್ಳುವ ತನಕ ಕೇವಲ ಮೂರು ಉಪಗ್ರಹಗಳು ಮಾತ್ರವೇ ವಾಸ್ತವವಾಗಿ ಕಾರ್ಯಾಚರಿಸುತ್ತಿದ್ದವು. ಈ ಅಂಕಿಅಂಶಗಳೇ ಪ್ರತಿಯೊಂದು ನ್ಯಾವಿಗೇಶನ್ ವ್ಯವಸ್ಥೆಯೂ ಹೇಗೆ ಯೋಜಿತಗೊಂಡಿವೆ ಎನ್ನುವುದನ್ನು ವಿವರಿಸುತ್ತಿದ್ದು, ಭಾರತ ಮತ್ತು ವಿದೇಶೀ ವ್ಯವಸ್ಥೆಗಳ ನಡುವೆ ಅಗಾಧ ಅಂತರವಿದೆ.

ಕೇವಲ ನಾಲ್ಕು ಉಪಗ್ರಹಗಳಿಂದಲೇ ಓರ್ವ ವ್ಯಕ್ತಿಯ ಸ್ಥಾನವನ್ನು ಗುರುತಿಸಲು ಸಾಧ್ಯವಿದ್ದರೆ, ಜಿಪಿಎಸ್ ಏಕೆ ಅಷ್ಟೊಂದು ಉಪಗ್ರಹಗಳನ್ನು ಬಳಸುತ್ತಿದೆ? ಏಕೆಂದರೆ, ಭೂಮಿ ಒಂದು ಗೋಳಾಕಾರದ ಗ್ರಹವಾಗಿದ್ದು, ಉಪಗ್ರಹಗಳು ಒಂದೆಡೆ ಸ್ಥಿರವಾಗಿ ನಿಂತಿರುವುದಿಲ್ಲ. ಚೆನ್ನೈ ಮೇಲಿನ ಆಗಸದಲ್ಲಿರುವ ಉಪಗ್ರಹ ಚಿಕಾಗೋಗೆ ಕಾಣಿಸುವುದಿಲ್ಲ. ಆದ್ದರಿಂದ, ಎಲ್ಲಾ ಪ್ರದೇಶಗಳಲ್ಲಿರುವ ಪ್ರತಿಯೊಬ್ಬರಿಗೂ ಏಕಕಾಲದಲ್ಲಿ ಕನಿಷ್ಠ ನಾಲ್ಕು ಉಪಗ್ರಹಗಳು ಲಭ್ಯವಾಗುವ ಉದ್ದೇಶದಿಂದ ಜಿಪಿಎಸ್ ತನ್ನ ಉಪಗ್ರಹಗಳನ್ನು ಆರು ವಿಭಿನ್ನ ಕಕ್ಷೀಯ ಪಥಗಳಲ್ಲಿ, ಅಂದಾಜು 20,200 ಕಿಲೋಮೀಟರ್ ಎತ್ತರದಲ್ಲಿ ಅಳವಡಿಸಿದೆ. ಇದನ್ನು ಭೂಮಿಯ ಮೇಲೆ ಎತ್ತರದ ಸ್ತಂಭಗಳ ಮೇಲೆ ಅಳವಡಿಸಿದ ದೀಪಗಳು ಎಂದುಕೊಳ್ಳಿ. ಇದರಿಂದ ಜಗತ್ತಿನ ಯಾವ ಪ್ರದೇಶವೂ ನೆರಳಿನ ಪ್ರದೇಶ ಆಗಿರುವುದಿಲ್ಲ. ಇದರಿಂದ ಲಭಿಸುವ ಮುಖ್ಯ ಪಾಠವೆಂದರೆ, ಜಾಗತಿಕ ವ್ಯಾಪ್ತಿ ಉಪಗ್ರಹ ಎಲ್ಲಿರುತ್ತದೆ ಎನ್ನುವುದನ್ನು ಅವಲಂಬಿಸಿದೆಯೇ ಹೊರತು, ಎಷ್ಟು ಉಪಗ್ರಹಗಳಿವೆ ಎನ್ನುವುದನ್ನಲ್ಲ. ನಾವಿಕ್ ಬಳಿ ಈಗಿರುವ ಏಳು ಕಕ್ಷೆಗಳನ್ನು ಹೆಚ್ಚಿಸಿ, 24 ಆಗಿಸಿದರೆ ಅದುವೇ ಇಡೀ ಜಗತ್ತಿಗೆ ಸಾಕಾಗುತ್ತದೆಯೇ? ಇಲ್ಲ.

ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?
ಹೊಸ ಅವತಾರದಲ್ಲಿ ಗರ್ಜಿಸಲು ಸಜ್ಜಾದ ಬ್ರಹ್ಮೋಸ್ ಕ್ಷಿಪಣಿ

ಈ ನಾಲ್ಕು ಉಪಗ್ರಹಗಳ ನಿಯಮವನ್ನು ಒಮ್ಮೆ ಗಮನಿಸೋಣ. ನಿಮ್ಮ ಫೋನಿನ ಮ್ಯಾಪ್ ಒಂದು ನೀಲಿ ಚುಕ್ಕಿಯನ್ನು ತೋರಿಸುವಾಗ, ಅದು ಉಪಗ್ರಹಗಳು ಪ್ರಸಾರ ಮಾಡುತ್ತಿರುವ ಎರಡು ವಿಚಾರಗಳನ್ನು ಆಲಿಸುತ್ತಿರುತ್ತದೆ. ಅದೇನೆಂದರೆ, ಈ ನಿಖರವಾದ ಸಮಯದಲ್ಲಿ ಅವು ಎಲ್ಲಿವೆ? ಪ್ರತಿಯೊಂದು ಸಂಕೇತವೂ ಆಗಮಿಸಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಕರಾರುವಾಕ್ಕಾಗಿ ಲೆಕ್ಕ ಹಾಕುವುದರಿಂದ, ಫೋನ್ ತನ್ನ ಸ್ಥಾನವನ್ನು ಸಮರ್ಪಕವಾಗಿ ಕಂಡುಹಿಡಿಯುತ್ತದೆ. ಮೂರು ಉಪಗ್ರಹಗಳು ಭೂಮಿಯಲ್ಲಿನ ನಿಮ್ಮ ಸ್ಥಾನವನ್ನು ಸರಿಯಾಗಿ ಗುರುತಿಸುತ್ತವೆ. ನಾಲ್ಕನೇ ಉಪಗ್ರಹ ನಿಮ್ಮ ಫೋನ್ ಒಳಗಿರುವ ಸಣ್ಣ ಕ್ಲಾಕ್ ಅನ್ನು ಸರಿಪಡಿಸುತ್ತದೆ. ಏಕೆಂದರೆ, ಆ ಕ್ಲಾಕ್ ತಾನಾಗಿಯೇ ಸಂಪೂರ್ಣ ನಿಖರತೆ ಹೊಂದಿರುವುದಿಲ್ಲ. ಎತ್ತರ ಮತ್ತು ಸಮಯ ಈ ಲೆಕ್ಕಾಚಾರದ ಭಾಗವಾಗಿ ಬರುತ್ತವೆ.

ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟಲೇಶನ್ ಎನ್ನುವುದರ ಹೃಸ್ವರೂಪವಾದ ನಾವಿಕ್ ಎಂದೂ ಜಾಗತಿಕ ವ್ಯಾಪ್ತಿಯ ಉದ್ದೇಶ ಹೊಂದಿರಲಿಲ್ಲ. ಇದರ ಉದ್ದೇಶ ಭಾರತವನ್ನು ತನ್ನ ಭೂ ಪ್ರದೇಶದಲ್ಲಿ ವಿದೇಶೀ ವ್ಯವಸ್ಥೆಗಳ ಮೇಲಿನ ಅವಲಂಬನೆಯಿಂದ ಮುಕ್ತಗೊಳಿಸಿ, ಭಾರತ ಮತ್ತು ಗಡಿಯಾಚೆಗಿನ 1,500 ಕಿಲೋಮೀಟರ್ ಪ್ರದೇಶವನ್ನು ತನ್ನ ವ್ಯಾಪ್ತಿಯಲ್ಲಿ ತರುವುದಾಗಿತ್ತು. ಮೂಲ ವಿನ್ಯಾಸದ ಪ್ರಕಾರ, ಮೊದಲ ಮೂರು ಉಪಗ್ರಹಗಳನ್ನು ಸಮಭಾಜಕ ವೃತ್ತದ ಮೇಲಿನ ನಿರ್ದಿಷ್ಟ ಬಿಂದುಗಳಲ್ಲಿ ಅಳವಡಿಸಿದ್ದು, ಇನ್ನೂ ನಾಲ್ಕು ಉಪಗ್ರಹಗಳು ಅವುಗಳಿಂದ ಕೊಂಚ ದೂರದಲ್ಲಿ, ಬಾಗಿದ ಕಕ್ಷೆಗಳಲ್ಲಿ ಭೂಮಿಯ ಪರಿಭ್ರಮಣೆ ನಡೆಸಬೇಕಿತ್ತು. ನೀವು ಒಂದೇ ಸ್ಥಳದಲ್ಲಿ ನಿಂತು, ಪ್ರತಿದಿನವೂ ಒಂದೇ ಸಮಯದಲ್ಲಿ ಆ ಉಪಗ್ರಹಗಳತ್ತ ನೋಡಿದರೆ, ಅವು ಆಗಸದಾದ್ಯಂತ ನಿಧಾನವಾಗಿ ಸಂಖ್ಯೆ 8ರ ಆಕಾರದಲ್ಲಿ ಚಲಿಸುವಂತೆ ಕಾಣುತ್ತವೆ. ಪೆಂಡುಲಂ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ರೀತಿಯಲ್ಲಿ ಇವು ಸಾಗುತ್ತಿರುತ್ತವೆ. ಇಂತಹ ನಿರಂತರ ಚಲನೆ ಉಪಗ್ರಹಗಳಿಗೆ ಭಾರತದ ಉತ್ತರದ ತುದಿ ಮತ್ತು ದಕ್ಷಿಣ ತುದಿಗಳಿಗೆ ಸಮಾನವಾಗಿ ಸಂಕೇತಗಳನ್ನು ರವಾನಿಸಲು ಅವಕಾಶ ಮಾಡಿಕೊಡುತ್ತದೆ.

ಇಷ್ಟಾದ ಬಳಿಕ, ಉಪಗ್ರಹಗಳು ಹಳೆಯದಾಗತೊಡಗಿದವು. ಯಾವುದೇ ನ್ಯಾವಿಗೇಶನ್ ಉಪಗ್ರಹದ ಹೃದಯ ಬಡಿತದಂತಿರುವ ಅಟಾಮಿಕ್ ಕ್ಲಾಕ್‌ಗಳು ವಿಫಲಗೊಂಡವು. ಜುಲೈ 2026ರ ವೇಳೆಗೆ, ಕೇವಲ ಮೂರು ಉಪಗ್ರಹಗಳು ಮಾತ್ರವೇ ಸ್ಥಾನ, ನ್ಯಾವಿಗೇಶನ್ ಮತ್ತು ಟೈಮಿಂಗ್ ಸೇವೆಗಳನ್ನು ಒದಗಿಸುತ್ತಿವೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿತು. ಎನ್‌ವಿಎಸ್-03 ತನ್ನ ಕಕ್ಷೆಯಲ್ಲಿ ಸೇರಿಕೊಂಡು, ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಕಾರ್ಯಾಚರಿಸುವ ಉಪಗ್ರಹಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ. ಇದು ನಿಜಕ್ಕೂ ಚೇತರಿಕೆಯೇ ಆಗಿದ್ದರೂ, ಬಹಳ ಸೂಕ್ಷ್ಮ ಮತ್ತು ದುರ್ಬಲ ಸನ್ನಿವೇಶವೂ ಹೌದು. ಕೇವಲ ನಾಲ್ಕು ಉಪಗ್ರಹಗಳು ಲಭ್ಯವಿರುವಾಗ, ಒಂದು ಉಪಗ್ರಹ ವಿಫಲವಾದರೂ ಸಂಪೂರ್ಣ ವ್ಯವಸ್ಥೆಯೇ ಮರಳಿ ಸಮಸ್ಯೆಗೆ ಸಿಲುಕಲಿದೆ.

ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?
ಸೌದಿಯ ಶಸ್ತ್ರಬಲಕ್ಕೆ ಸವಾಲಾದ ಹೌತಿ ತಂತ್ರಬಲ (ಜಾಗತಿಕ ಜಗಲಿ)

ಇಲ್ಲಿ ನಿಜಕ್ಕೂ ಗೌರವಿಸಬೇಕಿರುವುದು ಅಟಾಮಿಕ್ ಕ್ಲಾಕ್‌ಗಳನ್ನು. ಅವುಗಳು ಸಮಯವನ್ನು ಎಷ್ಟು ಕರಾರುವಾಕ್ಕಾಗಿ ಲೆಕ್ಕಾಚಾರ ಹಾಕುತ್ತವೆಂದರೆ, ಸೆಕೆಂಡಿನ ಬಿಲಿಯನ್ನಿನ ಒಂದು ಭಾಗವೂ ಇಲ್ಲಿ ಮುಖ್ಯವಾಗುತ್ತದೆ. ಸಂಕೇತಗಳು ಬೆಳಕಿನ ವೇಗದಲ್ಲಿ ಸಾಗುವುದರಿಂದ, ಅಷ್ಟು ಸಣ್ಣ ದೋಷವೂ ಭೂಮಿಯಲ್ಲಿ ಬಹುದೊಡ್ಡ ಸಮಸ್ಯೆ ಆಗುತ್ತದೆ. ಎನ್‌ವಿಎಸ್-03 ಒಂದು ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್ ಹೊಂದಿದ್ದು, ಇದು ಸ್ವಾವಲಂಬನೆಯ ನಿಟ್ಟಿನಲ್ಲಿ ಬಹುದೊಡ್ಡ ಗೆಲುವಾಗಿದೆ. ಉಪಗ್ರಹ ಈಗ ಎಲ್1 ಫ್ರೀಕ್ವೆನ್ಸಿಯನ್ನು ಬೆಂಬಲಿಸುತ್ತಿದ್ದು, ಸಾಮಾನ್ಯ ಫೋನ್‌ಗಳು ಈಗಾಗಲೇ ಜಿಪಿಎಸ್ ಸಂಕೇತಗಳಿಗಾಗಿ ಈ ರೇಡಿಯೋ ಬ್ಯಾಂಡ್ ಬಳಸುತ್ತಿವೆ. ಇದರಿಂದ ದೈನಂದಿನ ಬಳಕೆಯ ರಿಸೀವರ್‌ಗಳು ನಾವಿಕ್ ಸಂಕೇತಗಳನ್ನು ಸುಲಭವಾಗಿ ಗ್ರಹಿಸಬಲ್ಲವು.

ಈಗ ಭಾರತ ಮಾಡಬೇಕಾಗಿರುವುದೇನು? ಭಾರತದ ಮುಂದೆ ಎರಡು ಗುರಿಗಳಿವೆ. ಮೊದಲನೆಯದಾಗಿ, ಎಲ್ಲ ಬಿಂದುಗಳಿಗೆ ಬೇಕಾದ ಏಳು ಉಪಗ್ರಹಗಳನ್ನು ಸರಿಪಡಿಸುವುದು, ಮತ್ತು ಹೆಚ್ಚುವರಿ ಉಪಗ್ರಹಗಳನ್ನು ಸಿದ್ಧವಾಗಿಡುವುದು. ಈ ಉದ್ದೇಶಕ್ಕಾಗಿ ಎನ್‌ವಿಎಸ್-04 ಮತ್ತು ಎನ್‌ವಿಎಸ್-05 ಈಗಾಗಲೇ ನಿರ್ಮಾಣಗೊಳ್ಳುತ್ತಿವೆ. ಇನ್ನು ದೊಡ್ಡ ಗುರಿಯೆಂದರೆ ಜಾಗತಿಕ ವ್ಯಾಪ್ತಿ. ಇದಕ್ಕಾಗಿ ಸಂಪೂರ್ಣ ಹೊಸದಾದ ಕಕ್ಷೀಯ ವಿನ್ಯಾಸ ಮತ್ತು ಕನಿಷ್ಠ 24 ಉಪಗ್ರಹಗಳು ಬೇಕಾಗುತ್ತವೆ. ವಾಸ್ತವಿಕವಾಗಿ ನೋಡಿದರೆ, 24ರಿಂದ 30, ಅಥವಾ ಇನ್ನೂ ಹೆಚ್ಚಿನ ಹೆಚ್ಚುವರಿ ಉಪಗ್ರಹಗಳ ಅಗತ್ಯವಿರುತ್ತದೆ. ಈ ಅಂಕಿ ಸಂಖ್ಯೆಗಳು ಇಂಜಿನಿಯರಿಂಗ್ ಅಂದಾಜೇ ಹೊರತು ಅನುಮೋದಿಸಲಾದ ರಾಷ್ಟ್ರೀಯ ಯೋಜನೆಯಲ್ಲ.

ಭಾರತದ 'NavIC' ಜಾಗತಿಕ ಶಕ್ತಿಯಾಗಬಲ್ಲದೇ?
ಉಪಗ್ರಹ ಜಾಲದ ಚದುರಂಗ: ಮಸ್ಕ್ ತಂತ್ರಕ್ಕೆ ಜಿಯೋ ಪ್ರತಿತಂತ್ರ! (ಜಾಗತಿಕ ಜಗಲಿ)

ಹಾರ್ಡ್‌ವೇರ್‌ಗಳಾಚೆಗೆ, ಇಸ್ರೋ ತನ್ನ ಭೂ ವ್ಯವಸ್ಥೆಗಳನ್ನು ಸುಧಾರಿಸಬೇಕಿದ್ದು, ಹಳೆಯ ಉಪಗ್ರಹಗಳು ವಿಫಲವಾಗುವ ಮುನ್ನವೇ ಬದಲಿ ಉಪಗ್ರಹಗಳನ್ನು ಉಡಾವಣೆಗೊಳಿಸಬೇಕು. ಉತ್ಪಾದಕರು ನಾವಿಕ್ ವ್ಯವಸ್ಥೆಯನ್ನು ಹೆಚ್ಚಿನ ಫೋನ್‌ಗಳು ಮತ್ತು ವಾಹನಗಳಲ್ಲಿ ಅಳವಡಿಸುವಂತೆ ಮನ ಒಲಿಸಬೇಕು. ಇನ್ನು ಸಶಸ್ತ್ರ ಪಡೆಗಳ ವಿಚಾರದಲ್ಲಿ, ಒಂದು ನಂಬಿಕಾರ್ಹ ಭಾರತೀಯ ಸಂಕೇತ ಮಾರ್ಗದರ್ಶಕ ವಿಮಾನ, ಹಡಗುಗಳು, ಮತ್ತು ವಿದೇಶೀ ಮಾರ್ಗದರ್ಶನದ ಮೇಲೆ ಅವಲಂಬನೆ ಹೊಂದಿರದ ಕ್ಷಿಪಣಿಗಳನ್ನು ಪಡೆಯುವುದು ಭಾರತದ ಸಾರ್ವಭೌಮತ್ವದ ಪ್ರಶ್ನೆಯಾಗಿದೆ.

ಭಾರತ ತಾನು ಸ್ವಂತವಾಗಿ ತನ್ನ ನ್ಯಾವಿಗೇಶನ್ ವ್ಯವಸ್ಥೆಯನ್ನು ನಿರ್ಮಿಸಬಲ್ಲೆ ಎಂದು ಈಗಾಗಲೇ ಸಾಬೀತುಪಡಿಸಿದೆ. ಆದರೆ, ಹೆಚ್ಚು ಕಷ್ಟಕರವಾದ ಕೆಲಸವೆಂದರೆ, ಅದು ಸಂಪೂರ್ಣ ಜಗತ್ತನ್ನು ವ್ಯಾಪಿಸುವ ಮುನ್ನ, ನಮ್ಮ ಮನೆಯಲ್ಲಿ ಪ್ರತಿದಿನವೂ ನಿರಂತರವಾಗಿ ಕಾರ್ಯಾಚರಿಸುವಂತೆ ನೋಡಿಕೊಳ್ಳುವುದು!

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X