

ಆರೋಗ್ಯಕರ ಜೀವನಕ್ಕೆ ಆಹಾರ, ವ್ಯಾಯಾಮ ಮತ್ತು ವಿಶ್ರಾಂತಿಯಷ್ಟೇ ದೇಹದ ಆರೈಕೆಯೂ ಮುಖ್ಯವಾಗಿದೆ. ಭಾರತೀಯ ಪರಂಪರೆಯಲ್ಲಿ ದೇಹದ ಆರೈಕೆಗೆ ಹಲವು ವಿಧಾನಗಳಿವೆ. ಅವುಗಳಲ್ಲಿ ಅಭ್ಯಂಗಕ್ಕೆ ವಿಶೇಷ ಸ್ಥಾನವಿದೆ. ಆಯುರ್ವೇದದಲ್ಲಿ ಉಲ್ಲೇಖಿಸಿರುವ ಅಭ್ಯಂಗ ಪದ್ಧತಿಯು ದೇಹಕ್ಕೆ ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡುವ ವಿಧಾನವಾಗಿದೆ. ದೈನಂದಿನ ಜೀವನದ ಒತ್ತಡ, ದೈಹಿಕ ಆಯಾಸ ಮತ್ತು ಚರ್ಮದ ಶುಷ್ಕತೆಯಿಂದ ಪರಿಹಾರ ಪಡೆಯಲು ಅಭ್ಯಂಗವನ್ನು ಒಂದು ಆರೈಕೆಯ ಕ್ರಮವಾಗಿ ಬಹಳ ಹಿಂದಿನಿಂದಲೂ ಅನುಸರಿಸಲಾಗುತ್ತದೆ.
ಸರಳವಾಗಿ ಹೇಳುವುದಾದರೆ ಅಭ್ಯಂಗ ಎಂದರೆ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು. ಸಾಮಾನ್ಯವಾಗಿ ಎಳ್ಳೆಣ್ಣೆ, ತೆಂಗಿನೆಣ್ಣೆ, ಹರಳೆಣ್ಣೆ ಸಾಸಿವೆ ಎಣ್ಣೆ ಅಥವಾ ಆಯುರ್ವೇದದಲ್ಲಿ ಸೂಚಿ ಸಿರುವ ಔಷಧೀಯ ಎಣ್ಣೆಗಳನ್ನು ಅಭ್ಯಂಗಕ್ಕೆ ಬಳಸಲಾಗುತ್ತದೆ. ಜನರ ದೇಹ ಪ್ರಕೃತಿ, ವಯಸ್ಸು, ಋತು ಮತ್ತು ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯುರ್ವೇದದಲ್ಲಿ ಅಭ್ಯಂಗವನ್ನು ದೇಹದ ಆರೈಕೆಯ ಪ್ರಮುಖ ವಿಧಾನವೆಂದು ಪರಿಗಣಿಸಲಾಗಿದೆ.
ಅಭ್ಯಂಗವನ್ನು ಸಾಮಾನ್ಯವಾಗಿ ಸ್ನಾನಕ್ಕೂ ಮೊದಲು ಮಾಡಲಾಗುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ಒಲೆಯ ಮೇಲೆ ಇಟ್ಟು ಅದರೊಳಗೆ ಒಂದು ಬಟ್ಟಲನ್ನಿಟ್ಟು ಅದರಲ್ಲಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಬೇಕು.. ನೇರವಾಗಿ ಎಣ್ಣೆಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಬಾರದು. ಹಿತವಾಗಿ ಬಿಸಿ ಮಾಡಿದ ಎಣ್ಣೆಯನ್ನು ಕೈ, ಕಾಲು, ಭುಜ, ಬೆನ್ನು ಮತ್ತು ಇತರ ಭಾಗಗಳಿಗೆ ಮೃದುವಾಗಿ ಮಸಾಜ್ ಮಾಡಬೇಕು. ಇದರ ಜೊತೆಗೆ ತಲೆಗೆ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಹಚ್ಚಿಕೊಳ್ಳುವುದು ಹಲವಾರು ಜನರ ಅಭ್ಯಾಸವಾಗಿದೆ. ಇದರಿಂದ ಕೂದಲ ಬೆಳವಣಿಗೆಯಾಗುತ್ತದೆ ಮತ್ತು ದೇಹವೂ ತಂಪಾಗಿರುತ್ತದೆ.
ಅಭ್ಯಂಗದಿಂದ ಚರ್ಮಕ್ಕೆ ತೇವಾಂಶ ದೊರೆಯುತ್ತದೆ. ವಿಶೇಷವಾಗಿ ಒಣ ಚರ್ಮ ಹೊಂದಿರುವವರಿಗೆ ಎಣ್ಣೆ ಹಚ್ಚುವುದು ಚರ್ಮದ ಮೃದುತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಸಾಜ್ ಮಾಡುವುದರಿಂದ ದೇಹದ ಸ್ನಾಯುಗಳಲ್ಲಿ ಆರಾಮದಾಯಕ ಅನುಭವ ಉಂಟಾಗುತ್ತದೆ. ಬಲವೂ ದೊರಕುತ್ತದೆ, ದೈಹಿಕ ಆಯಾಸವೂ ಕಡಿಮೆಯಾಗುತ್ತದೆ. ಮಕ್ಕಳಿಗೆ ಹುಟ್ಟಿದಂದಿನಿಂದ ಒಂದು ವರ್ಷದ ತನಕ ದಿನವೂ ಹಿತಕರವಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿಸಬೇಕು.
ಇಂದಿನ ಜೀವನಶೈಲಿಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದು, ನಿರಂತರ ಪ್ರಯಾಣ ಮತ್ತು ಮಾನಸಿಕ ಒತ್ತಡ ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಅಭ್ಯಂಗವು ವಿಶ್ರಾಂತಿ ಪಡೆಯಲು ಸಹಾಯಕವಾದ ಆರೈಕೆಯ ಕ್ರಮವಾಗಬಹುದು. ಮೃದುವಾದ ಮಸಾಜ್ ಮತ್ತು ಆರಾಮದಾಯಕ ವಾತಾವರಣವು ಮನಸ್ಸಿಗೆ ನೆಮ್ಮದಿಯ ಅನುಭವ ನೀಡುತ್ತದೆ.
ಆಯುರ್ವೇದದಲ್ಲಿ ಅಭ್ಯಂಗವು ವಾತದೋಷದ ಸಮತೋಲನಕ್ಕೆ ಸಹಾಯಕ. ಉತ್ತಮ ನಿದ್ರೆ, ದೇಹದ ಚೈತನ್ಯ ಮತ್ತು ಒಟ್ಟಾರೆ ಸೌಖ್ಯಕ್ಕೆ ಇದು ನೆರವಾಗುತ್ತದೆ. ಆಹಾರದ ಜೀರ್ಣಕ್ರಿಯೆಯೂ ಸುಗಮವಾಗಿ ನಡೆಯುತ್ತದೆ.
ಅಭ್ಯಂಗಕ್ಕೆ ಅನುಕೂಲಕರವಾದ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಬೆಳಿಗ್ಗೆ ಸ್ನಾನಕ್ಕೂ ಮೊದಲು ಮಾಡುವುದು ಒಳ್ಳೆಯದು. ಸ್ವಲ್ಪ ಬೆಚ್ಚಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿ, ಅತಿಯಾದ ಒತ್ತಡವಿಲ್ಲದೆ ಮೃದುವಾಗಿ ಮಸಾಜ್ ಮಾಡಬೇಕು. ನಂತರ ಒಂದು ಗಂಟೆ ಬಳಿಕ ಸ್ನಾನ ಅಕ್ಕಿ ಹಿಟ್ಟನ್ನು ಮೈಗೆ ಹಚ್ದಿಕೊಳ್ಳಬೇಕು. ಅಕ್ಕಿ ಹಿಟ್ಟು ಎಣ್ಣೆಯನ್ನು ಹೀರಿಕೊಂಡ ನಂತರ ಸ್ನಾನ ಮಾಡಬೇಕು. ಹಾಗೆಯೇ ಎಣ್ಣೆ ಜಾರುವ ಸಾಧ್ಯತೆ ಇರುವುದರಿಂದ ಸ್ನಾನ ಮಾಡುವಾಗ ಎಚ್ಚರಿಕೆ ವಹಿಸಬೇಕು.
ಚರ್ಮದಲ್ಲಿ ಗಾಯ, ಸೋಂಕು, ಉರಿಯೂತ, ಜ್ವರ, ನೆಗಡಿ, ಕೆಮ್ಮು ಅಥವಾ ಯಾವುದೇ ಅಲರ್ಜಿ ಇದ್ದರೆ ಎಣ್ಣೆ ಹಚ್ಚಿಕೊಳ್ಳಬಾರದು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವವರು ಅಥವಾ ಔಷಧೀಯ ಎಣ್ಣೆ ಬಳಸುವವರು ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಅಭ್ಯಂಗವು ಕೇವಲ ಸೌಂದರ್ಯದ ಕ್ರಮವಲ್ಲ; ದೇಹದ ಆರೈಕೆ ಮತ್ತು ವಿಶ್ರಾಂತಿಗೆ ಸಂಬಂಧಿಸಿದ ವಿಧಾನವಾಗಿದೆ. ವಾರಕ್ಕೊಮ್ಮೆಯಾದರೂ ಅಥವಾ ಹದಿನೈದು ದಿನಕ್ಕೊಮ್ಮೆ ದೇಹದ ಆರೈಕೆಗೆ ಮೀಸಲಿಡುವುದು ಆರೋಗ್ಯಕರ ಜೀವನಶೈಲಿಯ ಭಾಗವಾಗಬೇಕು. ಸೂಕ್ತ ವಿಧಾನದಲ್ಲಿ ವೈಯಕ್ತಿಕ ಆರೋಗ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಂಗವನ್ನು ಅನುಸರಿಸಿದರೆ ದೇಹಕ್ಕೆ ಆರಾಮ ಮತ್ತು ಮನಸ್ಸಿಗೆ ನೆಮ್ಮದಿಯ ಅನುಭವ ದೊರೆಯಬಹುದು.
ಇಂದಿನ ವೇಗದ ಆಧುನಿಕ ಜೀವನಶೈಲಿಯಲ್ಲಿ ದೇಹದ ಆರೈಕೆಗೆ ಸಮಯ ಮೀಸಲಿಡುವುದು ಅನೇಕರಿಗೆ ಸವಾಲಾಗಿದೆ. ಕಚೇರಿ ಕೆಲಸ, ದೀರ್ಘಕಾಲದ ಪ್ರಯಾಣ, ಮೊಬೈಲ್ ಬಳಕೆ ಮತ್ತು ನಿರಂತರ ಒತ್ತಡದ ನಡುವೆ ದೇಹದ ಆರೋಗ್ಯದ ಕಡೆಗೆ ಗಮನ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಭ್ಯಂಗದಂತಹ ಸಾಂಪ್ರದಾಯಿಕ ಆರೈಕೆಯ ವಿಧಾನಗಳು ಮತ್ತೆ ಮಹತ್ವ ಪಡೆದುಕೊಳ್ಳುತ್ತಿವೆ.
ದಿನನಿತ್ಯ ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆ ಅಥವಾ ಅನುಕೂಲಕರ ಸಮಯದಲ್ಲಿ ಎಣ್ಣೆ ಮಸಾಜ್ ಮಾಡಿಕೊಳ್ಳುವುದು ದೇಹಕ್ಕೆ ಆರಾಮ ನೀಡಬಹುದು. ಚರ್ಮದ ಶುಷ್ಕತೆ ಕಡಿಮೆ ಮಾಡಲು ಮತ್ತು ದೈಹಿಕ ಆಯಾಸದಿಂದ ವಿಶ್ರಾಂತಿ ಪಡೆಯಲು ಇದು ಸಹಾಯಕವಾಗಬಹುದು.
ಭಾರತೀಯ ಸಂಸ್ಕೃತಿಯಲ್ಲಿ ಅಭ್ಯಂಗಕ್ಕೆ ಹಬ್ಬಗಳ ಸಂದರ್ಭದಲ್ಲಿಯೂ ವಿಶೇಷ ಮಹತ್ವವಿದೆ. ವಿಶೇಷವಾಗಿ ವರ್ಷದ ಮೊದಲ ಹಬ್ಬ ಯುಗಾದಿ ಮತ್ತು ನಂತರ ದೀಪಾವಳಿಯ ಸಂದರ್ಭದಲ್ಲಿ ನರಕ ಚತುರ್ದಶಿಯಂದು ಮುಂಜಾನೆ ಎಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡುವ ಸಂಪ್ರದಾಯವಿದೆ. ಕುಟುಂಬದ ಸದಸ್ಯರೆಲ್ಲರೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸ್ವಾಗತಿಸುವುದು ಈ ಆಚರಣೆಯ ವಿಶೇಷತೆ. ಇದು ಕೇವಲ ದೇಹದ ಶುಚಿತ್ವಕ್ಕೆ ಸಂಬಂಧಿಸಿದ ಆಚರಣೆಯಲ್ಲ; ಆರೋಗ್ಯ, ಸಂಪ್ರದಾಯ ಮತ್ತು ಕುಟುಂಬದ ಒಗ್ಗಟ್ಟಿನ ಸಂಕೇತವೂ ಹೌದು.
ಇಂದಿನ ಪೀಳಿಗೆಯೂ ಇಂತಹ ಆಚರಣೆಗಳನ್ನು ಅರ್ಥಪೂರ್ಣವಾಗಿ ಮುಂದುವರಿಸುವ ಮೂಲಕ ನಮ್ಮ ಪರಂಪರೆಯೊಂದಿಗೆ ನಂಟು ಉಳಿಸಿಕೊಳ್ಳಬಹುದು. ಆಧುನಿಕ ಜೀವನದ ವೇಗದ ನಡುವೆಯೂ ಅಭ್ಯಂಗವು ದೇಹದ ಆರೈಕೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಸೆಯುವ ಸುಂದರ ಕೊಂಡಿಯಾಗಿದೆ.