ಅಪರೂಪದ ಆನುವಂಶಿಕ ಕಾಯಿಲೆ ಸೈಟೋಸ್ಟೆರೋಲೀಮಿಯಾ (ಕುಶಲವೇ ಕ್ಷೇಮವೇ)

ಸಸ್ಯ ಸ್ಟೆರಾಲ್‌ಗಳನ್ನು ಅತಿಯಾಗಿ ಹೀರಿಕೊಳ್ಳುವ ದೇಹದ ದೋಷದಿಂದ ಉಂಟಾಗುವ ಅಪರೂಪದ ಆನುವಂಶಿಕ ಕಾಯಿಲೆ, ಬೇಗ ಪತ್ತೆ ಮತ್ತು ಚಿಕಿತ್ಸೆ ಅತ್ಯಗತ್ಯ
Cholesterol goes from a liquid to a solid, or crystal state
ಕೊಲೆಸ್ಟ್ರಾಲ್ ದ್ರವ ಸ್ಥಿತಿಯಿಂದ ಘನ ಅಥವಾ ಸ್ಫಟಿಕ ಸ್ಥಿತಿಗೆ ಹೋಗುತ್ತದೆ.Image: YouTube
Updated on: 

ಮಾನವ ದೇಹ ನಿಸರ್ಗದ ಒಂದು ಅದ್ಭುತ ವ್ಯವಸ್ಥೆ. ನಾವು ಸೇವಿಸುವ ಆಹಾರದಿಂದ ಕೆಲವು ನಿರ್ದಿಷ್ಟ ಪೋಷಕಾಂಶಗಳನ್ನು ಅಥವಾ ಕೊಬ್ಬಿನಾಂಶಗಳನ್ನು ಆಯ್ದು ರಕ್ತಕ್ಕೆ ಸೇರಿಸಿಕೊಳ್ಳುವ ಅತ್ಯದ್ಭುತ ವ್ಯವಸ್ಥೆ ಮಾನವ ದೇಹದಲ್ಲಿದೆ. ಈ ವ್ಯವಸ್ಥೆಯಲ್ಲಿ ಒಂದು ಸಣ್ಣ ದೋಷ ಅಥವಾ ವಂಶವಾಹಿಯಲ್ಲಿ ಬದಲಾವಣೆ ಸಂಭವಿಸಿದರೆ ಏನಾಗುತ್ತದೆ? ನಾವು ಸೇವಿಸುವ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿರುವ ‘ಫೈಟೊಸ್ಟೆರಾಲ್’ ಎಂಬ ಸಸ್ಯಜನ್ಯ ಕೊಬ್ಬು ನಮ್ಮ ದೇಹದಲ್ಲಿ ಹಾನಿಕಾರಕವಾಗಿ ಬದಲಾಗಬಹುದು! ಇದು ಕೇಳಲು ವಿಚಿತ್ರ. ಆದರೂ ಆರೋಗ್ಯಕರವೆಂದು ನಂಬಲಾದ ಸಸ್ಯಾಹಾರವೇ ಕೆಲವರಲ್ಲಿ ಗಂಡಾಂತರವಾಗಿ ಬದಲಾಗಿ ʼಸೈಟೋಸ್ಟೆರೋಲೀಮಿಯಾʼ ಎಂಬ ಕಾಯಿಲೆಗೆ ಕಾರಣವಾಗುತ್ತದೆ.

ಸೈಟೋಸ್ಟೆರೋಲೀಮಿಯಾ ಎಂದರೇನು?

ಸೈಟೊಸ್ಟೆರೋಲೀಮಿಯಾ ಬಹಳ ಅಪರೂಪದ ಆನುವಂಶಿಕ ಕಾಯಿಲೆ. ಈ ರೋಗ ಇರುವವರಲ್ಲಿ ಆಹಾರದಲ್ಲಿರುವ ಸೈಟೊಸ್ಟೆರಾಲ್, ಕ್ಯಾಂಪೆಸ್ಟೆರಾಲ್ ಮುಂತಾದ ಸಸ್ಯಜನ್ಯ ಕೊಬ್ಬುಗಳು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತವೆ ಮತ್ತು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಸಾಮಾನ್ಯವಾಗಿ ದೇಹದಿಂದ ಹೆಚ್ಚುವರಿ ಸಸ್ಯಜನ್ಯ ಕೊಬ್ಬನ್ನು ಹೊರಹಾಕುವಲ್ಲಿ ಕೆಲವು ವಂಶವಾಹಿಗಳು (ಜೀನ್) ಪ್ರಮುಖ ಪಾತ್ರ ವಹಿಸುತ್ತವೆ. ಈ ಜೀನ್‌ಗಳಲ್ಲಿ ಬದಲಾವಣೆ ಉಂಟಾದಾಗ ಕರುಳು ಸಸ್ಯಜನ್ಯ ಕೊಬ್ಬನ್ನು ಹೆಚ್ಚು ಹೆಚ್ಚಾಗಿ ಹೀರಿಕೊಳ್ಳುತ್ತದೆ. ಯಕೃತ್ತು ಅವುಗಳನ್ನು ದೇಹದಿಂದ ಸರಿಯಾಗಿ ಹೊರಹಾಕಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ರಕ್ತದಲ್ಲಿ ಮತ್ತು ದೇಹದ ವಿವಿಧ ಅಂಗಾಂಶಗಳಲ್ಲಿ ಅವುಗಳ ಪ್ರಮಾಣ ಹೆಚ್ಚಾಗುತ್ತದೆ.

ಇದು ಆನುವಂಶಿಕವಾಗಿ ಬರುವ ಕಾಯಿಲೆ. ತಂದೆ ಮತ್ತು ತಾಯಿ ಇಬ್ಬರಿಂದಲೂ ಜೀನ್‌ಗಳು ಮಗುವಿಗೆ ಬಂದಾಗ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಆದರೆ ತಂದೆ-ತಾಯಿ ಸ್ವತಃ ಈ ರೋಗದ ಯಾವುದೇ ಲಕ್ಷಣಗಳಿಲ್ಲದೇ ಕೇವಲ ವಾಹಕರಾಗಿರಬಹುದು. ಸೈಟೊಸ್ಟೆರೋಲೇಮಿಯಾ ಗಂಡಸರು ಮತ್ತು ಹೆಂಗಸರು ಯಾರಿಗಾದರೂ ಬರಬಹುದು. ಕೆಲವರಲ್ಲಿ ಬಾಲ್ಯದಲ್ಲೇ ಲಕ್ಷಣಗಳು ಕಾಣಿಸಿಕೊಳ್ಳಬಹುದು; ಇನ್ನು ಕೆಲವರಲ್ಲಿ ಹಲವು ವರ್ಷಗಳ ನಂತರ ಕಾಯಿಲೆ ಪತ್ತೆಯಾಗಬಹುದು.

ಸೈಟೋಸ್ಟೆರೋಲೀಮಿಯಾ ಕಾಯಿಲೆಯ ಪ್ರಮುಖ ಲಕ್ಷಣಗಳು

ಈ ಕಾಯಿಲೆಯ ಪ್ರಮುಖ ಲಕ್ಷಣಗಳಲ್ಲಿ ಚರ್ಮದ ಕೆಳಗೆ ಅಥವಾ ಸ್ನಾಯುರಜ್ಜುಗಳಲ್ಲಿ (ಟೆಂಡನ್) ಕೊಬ್ಬಿನಂತಹ ಪದಾರ್ಥ ಸಂಗ್ರಹವಾಗಿ ಉಂಟಾಗುವ ಕ್ಸಾಂಥೋಮಾ ಸೇರಿದೆ. ವಿಶೇಷವಾಗಿ ಹಿಮ್ಮಡಿಯ ಅಕಿಲೀಸ್ ಟೆಂಡನ್, ಮೊಣಕೈ ಮತ್ತು ಮೊಣಕಾಲಿನ ಬಳಿ ಇವು ಕಂಡುಬರಬಹುದು. ಕೆಲವರಲ್ಲಿ ಕೀಲು ನೋವು ಅಥವಾ ಸಂಧಿವಾತದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

ಸೈಟೊಸ್ಟೆರೋಲೀಮಿಯಾ ರಕ್ತದ ಮೇಲೂ ಪರಿಣಾಮ ಬೀರಬಹುದು. ಕೆಂಪು ರಕ್ತಕಣಗಳು ಬೇಗ ನಾಶವಾಗುವುದರಿಂದ ರಕ್ತಹೀನತೆ ಉಂಟಾಗಬಹುದು. ಪ್ಲೇಟ್‌ಲೆಟ್‌ಗಳಲ್ಲಿಯೂ ಬದಲಾವಣೆ ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ ರಕ್ತನಾಳಗಳಲ್ಲಿ ಕೊಬ್ಬಿನ ಪದರ ಸಂಗ್ರಹವಾಗಿ ಹೃದಯ ಸಂಬಂಧಿ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಉಂಟಾಗುವ ಸಾಧ್ಯತೆಯಿದೆ.

ಈ ಕಾಯಿಲೆಯನ್ನು ಸಾಮಾನ್ಯ ಕೊಲೆಸ್ಟ್ರಾಲ್ ಪರೀಕ್ಷೆಯಿಂದ ಮಾತ್ರ ಪತ್ತೆಹಚ್ಚಲು ಸಾಧ್ಯವಿಲ್ಲ. ರಕ್ತದಲ್ಲಿರುವ ಸೈಟೊಸ್ಟೆರಾಲ್ ಮತ್ತು ಇತರ ಸಸ್ಯ ಸ್ಟೆರಾಲ್‌ಗಳ ಪ್ರಮಾಣವನ್ನು ವಿಶೇಷ ರಕ್ತ ಪರೀಕ್ಷೆಯ ಮೂಲಕ ಪರೀಕ್ಷಿಸಬೇಕು. ಅಗತ್ಯವಿದ್ದರೆ ಕೆಲವು ನಿರ್ದಿಷ್ಟ ಜೀನುಗಳಿಗೆ ಸಂಬಂಧಿಸಿದ ಜೆನೆಟಿಕ್ ಪರೀಕ್ಷೆಯನ್ನೂ ಮಾಡಬಹುದು. ಹರೆಯದಲ್ಲಿಯೇ ಹೃದಯದ ಸಮಸ್ಯೆ ಕಾಣಿಸಿಕೊಳ್ಳುವುದು, ಟೆಂಡನ್‌ಗಳಲ್ಲಿ ಕ್ಸಾಂಥೋಮಾ ಇರುವುದು ಅಥವಾ ಸಾಮಾನ್ಯ ಕೊಲೆಸ್ಟ್ರಾಲ್ ಚಿಕಿತ್ಸೆಗೆ ನಿರೀಕ್ಷಿಸಿದ ರೀತಿಯಲ್ಲಿ ಪ್ರತಿಕ್ರಿಯೆ ದೊರೆಯದಿರುವುದು ಕಂಡುಬಂದರೆ ವೈದ್ಯರು ಈ ಕಾಯಿಲೆಯ ಸಾಧ್ಯತೆಯನ್ನು ಪರಿಶೀಲಿಸಬಹುದು.

Cholesterol goes from a liquid to a solid, or crystal state
 ಪಿಸಿಓಎಸ್ ಸಮಸ್ಯೆ (ಕುಶಲವೇ ಕ್ಷೇಮವೇ)

ಕಾಯಿಲೆಯ ಕಾಯಿಲೆಗೆ ಚಿಕಿತ್ಸೆ

ಚಿಕಿತ್ಸೆಯಲ್ಲಿ ಆಹಾರ ಪದ್ಧತಿ ಮತ್ತು ಔಷಧ ಎರಡಕ್ಕೂ ಮಹತ್ವವಿದೆ. ಎಜೆಟಿಮೈಬ್ ಎಂಬ ಔಷಧಿಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಕರುಳಿನಿಂದ ಸ್ಟೆರಾಲ್‌ಗಳು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇತರ ಔಷಧಿಗಳನ್ನೂ ವೈದ್ಯರು ಸೂಚಿಸಬಹುದು.

ಆಹಾರದಲ್ಲಿಯೂ ಕೆಲವು ಬದಲಾವಣೆ ಅಗತ್ಯವಾಗಬಹುದು. ಸಸ್ಯಜನ್ಯ ಕೊಬ್ಬು ಹೆಚ್ಚು ಇರುವ ಕೆಲವು ಎಣ್ಣೆಗಳು, ಕಾಯಿಗಳು, ಬೀಜಗಳು, ಅವಕಾಡೊಗಳನ್ನು ಹೆಚ್ಚುವರಿಯಾಗಿ ಸೇರಿಸಿರುವ ಆಹಾರಗಳನ್ನು ವೈದ್ಯರು ಅಥವಾ ಆಹಾರ ತಜ್ಞರ ಸಲಹೆಯಂತೆ ನಿಯಂತ್ರಿಸಬೇಕಾಗಬಹುದು. ಆದರೆ ಸೈಟೊಸ್ಟೆರೋಲೇಮಿಯಾ ಇರುವವರು ಸಾಮಾನ್ಯವಾಗಿ ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂಬ ಅರ್ಥವಲ್ಲ. ಆಹಾರದಲ್ಲಿ ಯಾವ ಬದಲಾವಣೆ ಅಗತ್ಯ ಎಂಬುದನ್ನು ತಜ್ಞರ ಸಲಹೆಯಂತೆ ನಿರ್ಧರಿಸುವುದು ಮುಖ್ಯ.

ಇದು ಆನುವಂಶಿಕ ಕಾಯಿಲೆಯಾಗಿರುವುದರಿಂದ ಸಾಮಾನ್ಯ ಜೀವನಶೈಲಿಯಿಂದ ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಈ ಕಾಯಿಲೆಯನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸುವುದರಿಂದ ಹೃದಯ ಮತ್ತು ರಕ್ತನಾಳಗಳಿಗೆ ಉಂಟಾಗಬಹುದಾದ ತೊಂದರೆಗಳನ್ನು ಕಡಿಮೆ ಮಾಡಬಹುದು. ಕುಟುಂಬದಲ್ಲಿ ಯಾರಿಗಾದರೂ ಸೈಟೊಸ್ಟೆರೋಲೇಮಿಯಾ ಪತ್ತೆಯಾದರೆ ಇತರ ಆಪ್ತ ಕುಟುಂಬ ಸದಸ್ಯರಿಗೂ ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಬಹುದು.

Cholesterol goes from a liquid to a solid, or crystal state
ಮೆನಿಸ್ಕಸ್ ಟೇರ್ (ಕುಶಲವೇ ಕ್ಷೇಮವೇ)

ಕೊನೆಮಾತು: ಸರಳವಾಗಿ ಹೇಳುವುದಾದರೆ ಸೈಟೊಸ್ಟೆರೋಲೀಮಿಯಾ ಎಂದರೆ ದೇಹವು ಆಹಾರದಲ್ಲಿರುವ ಸಸ್ಯ ಸ್ಟೆರಾಲ್‌ಗಳನ್ನು ಅತಿಯಾಗಿ ಹೀರಿಕೊಂಡು ದೇಹದಲ್ಲಿ ಸಂಗ್ರಹಿಸಿಕೊಳ್ಳುವ ಅಪರೂಪದ ಆನುವಂಶಿಕ ಕಾಯಿಲೆ. ಈ ಕಾಯಿಲೆ ಅಪರೂಪವಾದರೂ, ಸರಿಯಾದ ರೋಗ ಪರೀಕ್ಷೆ, ಆಹಾರ ನಿಯಂತ್ರಣ ಮತ್ತು ಚಿಕಿತ್ಸೆಯ ಮೂಲಕ ಇದರ ಪರಿಣಾಮಗಳನ್ನು ನಿಯಂತ್ರಿಸಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com