ಐಪಿಎಲ್ ನಂತರ ವೇತನ ವಿವಾದ ಕುರಿತು ಆಟಗಾರರ ಜೊತೆ ಚರ್ಚೆ
ಸೇಂಟ್ ಜಾನ್ಸ್: ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಪ್ರಶಸ್ತಿ ಗೆದ್ದರೂ ನಮ್ಮ ದೇಶದ ಕ್ರಿಕೆಟ್ ಮಂಡಳಿ ನಮಗೆ ಅಭಿನಂದಿಸುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ ಎಂಬ ನಾಯಕ ಡರೇನ್ ಸಾಮಿ ಹೇಳಿಕೆ ಇದೀಗ ವೆಸ್ಟ್ ಇಂಡೀಸ್ ವಿವಾದ ಹುಟ್ಟುಹಾಕಿದ್ದು, ಮಾಧ್ಯಮಗಳ ಮುಜುಗುರ ತಪ್ಪಿಸಿಕೊಳ್ಳಲು ಇದೀಗ್ ವಿಂಡೀಸ್ ಕ್ರಿಕೆಟ್ ಸಂಸ್ಥೆ ಸಂಧಾನಕ್ಕೆ ಮುಂದಾಗಿದೆ.
ಕೋಲ್ಕತಾದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಅಮೋಘ ಜಯ ದಾಖಲಿಸಿದ ಬಳಿಕ ಮಾತನಾಡಿದ್ದ ಸಾಮಿ, ವಿಂಡೀಸ್ ಕ್ರಿಕೆಟ್ ಸಂಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಸಮಸ್ಯೆಗಳನ್ನು ಮಂಡಳಿ ಪರಿಷ್ಕರಿಸುತ್ತಿಲ್ಲ ಎಂದು ಹೇಳಿದ್ದರು. ಸಾಮಿ ಹೇಳಿಕೆಗೆ ವ್ಯಾಪಕ ಪ್ರತಿಕ್ರಿಯೆಗಳ ವ್ಯಕ್ತವಾದ ಕೆಲ ಗಂಟೆಗಳಲ್ಲಿಯೇ ಡಬ್ಲ್ಯುಐಸಿಬಿ ಪ್ರತಿಕ್ರಿಯೆ ಕೊಟ್ಟಿದ್ದು, ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಡೇವ್ ಕ್ಯಾಮರೂನ್ ‘ವಿಶ್ವ ಟೂರ್ನಿಯಲ್ಲಿ ಚಾಂಪಿಯನ್ ಆದ ನಮ್ಮ ದೇಶದ ತಂಡಗಳ ಸಾಧನೆಯಿಂದ ಅತೀವ ಸಂತೋಷವಾಗಿದೆ. ಎರಡೂ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ನಾಯಕ ಸಾಮಿ ಹೇಳಿಕೆ ಕುರಿತು ಮಾತನಾಡಿದ ಅವರು, ಅದೇನೇ ಸಮಸ್ಯೆ ಇದ್ದರೂ ದೇಶಕ್ಕೆ ಹಿಂತಿರುಗಿದ ಬಳಿಕ ಪರಿಹರಿಸಿಕೊಳ್ಳಬಹುದಿತ್ತು. ವಿಜಯೋತ್ಸವ ಆಚರಿಸುವ ಸಮಯದಲ್ಲಿ ಸಾಮಿ ಈ ವಿಷಯವನ್ನು ಕೆದಕಿದ್ದು ಸರಿಯಲ್ಲ. ಇದರ ಹಿಂದಿರುವ ಕಾರಣ ಕಂಡು ಹಿಡಿಯಲು ತನಿಖೆ ನಡೆಸಲಾಗುವುದು ಎಂದು ಕ್ಯಾಮರೂನ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕಟ್ ಮಂಡಳಿಯಲ್ಲಿದ್ದ ಹಳೆಯ ಗುತ್ತಿಗೆ ನಿಯಮವನ್ನೇ ಒಪ್ಪಿಕೊಳ್ಳುವಂತೆ ಮಂಡಳಿ ಆಟಗಾರರ ಮೇಲೆ ಒತ್ತಡ ಹೇರುತ್ತಿದ್ದು, ಇದು ಆಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಆಟಗಾರರ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದ ವಿಂಡೀಸ್ ಮಂಡಳಿ ಗುತ್ತಿಗೆ ಒಪ್ಪಂದವನ್ನು ತಿರಸ್ಕರಿಸುವ ಆಟಗಾರರನ್ನು ವಿವಿಧ ಸರಣಿಗಳಿಂದಲೇ ಕೈ ಬಿಡುವ ಮೂಲಕ ಆಟಗಾರರನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಿತ್ತು. ಇದೇ ಕಾರಣದಿಂದ ಭಾರತ ಪ್ರವಾಸ ಸೇರಿದಂತೆ ಪ್ರಮುಖ ಟೂರ್ನಿಗಳಿಂದ ಕ್ರಿಸ್ ಗೇಯ್ಲ್, ಆಂಡ್ರೆ ರಸೆಲ್, ಡರೇನ್ ಸಾಮಿ ಮತ್ತು ಬ್ರಾವೋ ರಂತಹ ಹಿರಿಯ ಆಟಗಾರರನ್ನು ಕೈ ಬಿಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ