ವಿಂಡೀಸ್ ಕ್ರಿಕೆಟ್ ಮಂಡಳಿಗೆ ವೃತ್ತಿಪರತೆಯೇ ಇಲ್ಲ: ಬ್ರಾವೊ

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿಶ್ವದ ಅತ್ಯಂತ ವೃತ್ತಿಪರತೆಯೇ ಇಲ್ಲದ ಕ್ರಿಕೆಟ್ ಮಂಡಳಿ ಎಂದು ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೊ ಹೇಳಿದ್ದಾರೆ.
ವಿಂಡೀಸ್ ಆಟಗಾರ ಡ್ವೇಯ್ನ್ ಬ್ರಾವೋ (ಸಂಗ್ರಹ ಚಿತ್ರ)
ವಿಂಡೀಸ್ ಆಟಗಾರ ಡ್ವೇಯ್ನ್ ಬ್ರಾವೋ (ಸಂಗ್ರಹ ಚಿತ್ರ)

ಬ್ರಿಡ್ಜ್‌ ಟೌನ್: ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿಶ್ವದ ಅತ್ಯಂತ ವೃತ್ತಿಪರತೆಯೇ ಇಲ್ಲದ ಕ್ರಿಕೆಟ್ ಮಂಡಳಿ ಎಂದು ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೊ ಹೇಳಿದ್ದಾರೆ.

ವಿಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ವಾಗ್ದಾಳಿ ಸರಣಿ ಮುಂದುವರೆದಿದ್ದು, ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಹಿರಿಯ ಆಟಗಾರ ಡ್ವೇಯ್ನ್ ಬ್ರಾವೊ ತಮ್ಮ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ವೆಸ್ಟ್ ಇಂಡೀಸ್‌ ಕ್ರಿಕೆಟ್‌ ಮಂಡಳಿ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳದ ವಿಶ್ವದ ಅತ್ಯಂತ ಕೆಟ್ಟ ಕ್ರಿಕೆಟ್ ಮಂಡಳಿಯಾಗಿದೆ’ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

"ಕ್ರಿಕೆಟ್‌ ಅಭಿವೃದ್ಧಿಗಾಗಿ ಏನಾದರೂ ಮಾಡಬೇಕು. ನಮ್ಮ ತಂಡವನ್ನು ಶ್ರೇಷ್ಠ ತಂಡವನ್ನಾಗಿ ರೂಪಿಸಬೇಕು ಎಂದು ಸಾಕಷ್ಟು ಆಟಗಾರರು ಶ್ರಮ ಪಟ್ಟಿದ್ದಾರೆ ಮತ್ತು ಪಡುತ್ತಿದ್ದಾರೆ. ಅದಕ್ಕಾಗಿ  ಹಲವಾರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಈ ನಮ್ಮ ಬದ್ಧತೆಯನ್ನು ಮಂಡಳಿ ಅರ್ಥವೇ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಮಂಡಳಿ ನಮ್ಮ ಬದ್ಧತೆಯನ್ನೇ ಪ್ರಶ್ನಿಸುತ್ತದೆ" ಎಂದು ಬ್ರಾವೊ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದೆ ಮುಕ್ತಾಯವಾದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ ನ ಅಂಡರ್ 19 ತಂಡ, ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್‌ ಆಗಿದ್ದವು. ಇಷ್ಟೆಲ್ಲಾ ಸಾಧನೆ  ಮಾಡಿದರೂ ಆಟಗಾರರಿಗೆ ಮಂಡಳಿ ಅಭಿನಂದನೆ ಹೇಳುವ ಸೌಜನ್ಯವನ್ನೂ ತೋರಿಲ್ಲ ಎಂದು ಈ ಹಿಂದೆ ಆಟಗಾರರು ಬೇಸರ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಇಂಗ್ಲೆಂಡ್ ವಿರುದ್ಧ ಫೈನಲ್  ಕದನದ ಬಳಿಕ ವಿಂಡೀಸ್ ಪುರುಷರ ತಂಡದ ನಾಯಕ ಡರೇನ್ ಸಾಮಿ ನೀಡಿದ್ದ ಹೇಳಿಕೆಗಳು ಇಡೀ ವಿಶ್ವವೇ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದ್ದವು.

ಈ ಎಲ್ಲ ವಿಚಾರಗಳು ವಿವಾದದ ಸ್ವರೂಪ ತಳೆಯುತ್ತಿದ್ದಂತೆಯೇ ಎಚ್ಚಿತ್ತಿದ್ದ ವಿಂಡೀಸ್ ಕ್ರಿಕೆಟ್ ಮಂಡಳಿ "ಐಪಿಎಲ್ ಟೂರ್ನಿಯ ಬಳಿಕ ಆಟಗಾರರ ಜೊತೆ ವೇತನ ಸಮಸ್ಯೆ ವಿಚಾರದ ಕುರಿತು  ಚರ್ಚೆ ನಡೆಸಲಾಗುವುದು ಎಂದು ಹೇಳಿತ್ತು. ಅಂತೆಯೇ ಆಟಗಾರರು ‘ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಮಂಡಳಿ ವಿರುದ್ಧ ಹೇಳಿಕೆ ನೀಡಬಾರದಿತ್ತು’ ಎಂದು ವಿಂಡೀಸ್ ಮಂಡಳಿಯ ಅಧ್ಯಕ್ಷ  ಕ್ಯಾಮರೂನ್ ಹೇಳಿದ್ದರು.

ವಿಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಈ ಹೇಳಿಕೆ ವಿರುದ್ಧವೂ ಬ್ರಾವೊ ಆಕ್ರೋಶ ವ್ಯಕ್ತಪಡಿಸಿದ್ದು, "ನಾವು ವಿಶ್ವ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ ಕ್ಯಾಮರೂನ್ ನೀಡಿದ ಹೇಳಿಕೆಯಿಂದ ನನಗೆ  ಅಚ್ಚರಿಯಾಗಿಲ್ಲ. ಇದೆಲ್ಲವೂ ನಿರೀಕ್ಷಿತವೇ ಆಗಿತ್ತು. ಎರಡು ವರ್ಷಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದಾಗ ಏನು ಸಮಸ್ಯೆಯಾಗಿತ್ತು ಎಂಬುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಆ  ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಎಂಬುದೇ ನಮ್ಮ ಮಂಡಳಿಗೆ ಗೊತ್ತಿರಲಿಲ್ಲ. ಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದ ಸಾಮಿ ಹೇಳಿದ ಮಾತುಗಳಲ್ಲಿ ಸತ್ಯವಿದೆ. ಅವರ ಮನಸ್ಸಿನಲ್ಲಿ ಹುದುಗಿದ್ದ  ನೋವು ಅಂದು ಹೊರಬಂದಿತ್ತು" ಎಂದು ಬ್ರಾವೊ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com