ಸುನೀಲ್ ನರೇನ್ ಗೆ ಕ್ಲೀನ್ಚಿಟ್
ನವದೆಹಲಿ: ಸಂಶಯಾಸ್ಪದ ಬೌಲಿಂಗ್ ಶೈಲಿ ವಿವಾದಕ್ಕೆ ತುತ್ತಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವುಳಿದಿದ್ದ ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೇನ್ ಗೆ ಐಸಿಸಿ ಕ್ಲೀನ್ ಚಿಟ್ ನೀಡಿದ್ದು, ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಗ್ರೀನ್ ಸಿಗ್ನಲ್ ನೀಡಿದೆ.
ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ಕ್ರಿಸ್ ಗೇಯ್ಲ್, ಬ್ರಾವೋ, ಕೀರನ್ ಪೊಲಾರ್ಡ್, ಬ್ರಾಥ್ ವೇಟ್ ರಂತಹ ಆಟಗಾರರು ಇದೀಗ ಐಪಿಎಲ್ ನತ್ತ ತಮ್ಮ ಚಿತ್ತ ಹರಿಸುತ್ತಿದ್ದು, ಇದೀಗ ಈ ಪಟ್ಟಿಗೆ ಸುನಿಲ್ ನರೇನ್ ಕೂಡ ಸೇರಿದ್ದಾರೆ. ಸಂಶಯಾಸ್ಪದ ಬೌಲಿಂಗ್ ನಿಂದಾಗಿ 2015 ಏಪ್ರಿಲ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸುನಿಲ್ ನರೇನ್ ರನ್ನು ನಿಷೇಧಿಸಲಾಗಿತ್ತು. ಇದೀಗ ಅವರ ಬೌಲಿಂಗ್ ಗೆ ಐಸಿಸಿ ಕ್ಲೀನ್ ಚಿಟ್ ನೀಡಿದ್ದು, ಕ್ರಿಕೆಟ್ ನಿಂದ ದೂರವುಳಿದಿದ್ದ ನರೇನ್ ಇದೀಗ ಮತ್ತೆ ಕ್ರಿಕೆಟ್ ಗೆ ಮರಳಲು ಸಜ್ಜಾಗಿ ನಿಂತಿದ್ದಾರೆ.
ಐಪಿಎಲ್ ನಲ್ಲಿ ಕೋಲ್ಕತಾ ನೈಟರೈಡರ್ಸ್ ಪರ ಆಡುತ್ತಿರುವ ನರೇನ್ ಮತ್ತೆ ತಂಡ ಸೇರ್ಪಡಗೆ ತುದಿಗಾಲಲ್ಲಿ ನಿಂತಿದ್ದು, ನಾಳೆಯಿಂದ ಆರಂಭವಾಗಲಿರುವ ಐಪಿಎಲ್ ಸೀಸನ್ 9 ಟೂರ್ನಿಗೆ ನರೇನ್ ಲಭ್ಯರಾಗಲಿದ್ದಾರೆ. ಕಳೆದ ಐಪಿಎಲ್ನಲ್ಲಿ 20 ವಿಕೆಟ್ ಪಡೆದು ಗಮನ ಸೆಳೆದಿದ್ದ ನರೇನ್ ಸೇರ್ಪಡೆಯಿಂದಾಗಿ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಸುನಿಲ್ ನರೇನ್ ಬೌಲಿಂಗ್ ಶೈಲಿ ಕಾನೂನು ಬಾಹಿರವಾಗಿದೆ ಎಂದು ಕಳೆದ ನವೆಂಬರ್ನಲ್ಲಿ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಐಸಿಸಿ ನಿಷೇಧ ಹೇರಿತ್ತು. ಅಷ್ಟೇ ಅಲ್ಲ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ಕೂಡ ನರೇನ್ ಕಳೆದುಕೊಂಡಿದ್ದರು. ಆಡಿರುವ ಆರು ಟೆಸ್ಟ್ ಪಂದ್ಯದಲ್ಲಿ 21 ವಿಕೆಟ್ ಹಾಗೂ 55 ಏಕದಿನ ಪಂದ್ಯದಲ್ಲಿ 77 ವಿಕೆಟ್ಗಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ