ಐಪಿಎಲ್ : ಕಾಮೆಂಟೇಟರ್ ಹರ್ಷ ಭೋಗ್ಲೆ ಕೈಬಿಟ್ಟ ಬಿಸಿಸಿಐ

ನಾವು ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡುವಾಗ ಎಲ್ಲರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೆವು. ಸಾಮಾಜಿಕ ತಾಣದಲ್ಲಿ ಬಂದ ಪ್ರತಿಕ್ರಿಯೆಗಳನ್ನು ಮತ್ತು...
ಹರ್ಷ ಭೋಗ್ಲೆ
ಹರ್ಷ ಭೋಗ್ಲೆ
ನವದೆಹಲಿ:  2016 ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಇಂಡಿಯನ್ ಕಾಮೆಂಟೇಟರ್ ಹರ್ಷ ಭೋಗ್ಲೆಯವರನ್ನು ಕೈಬಿಡಲಾಗಿದೆ.
ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಐಪಿಎಲ್ ಕರಾರು ಮುಕ್ತಾಯಗೊಳಿಸಿರುವ ಬಗ್ಗೆ ಒಂದು ವಾರಗಳ ಹಿಂದೆಯಷ್ಟೇ ಹರ್ಷ ಅವರಿಗೆ ತಿಳಿಸಲಾಗಿತ್ತು.
ಐಪಿಎಲ್ 9ನೇ ಆವೃತ್ತಿ ಡಮ್ಮಿ ಹರಾಜು ಪ್ರಕ್ರಿಯೆಯಲ್ಲಿಯೂ ಹರ್ಷ ನಿರೂಪಕರಾಗಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಪ್ರೊಮೋಷನಲ್ ವೀಡಿಯೋಗಳಲ್ಲಿಯೂ ಹರ್ಷ ಅವರನ್ನು ತೋರಿಸಲಾಗಿತ್ತು. ಆದರೆ ಐಪಿಎಲ್ ಆರಂಭವಾಗುವ ಹೊತ್ತಲ್ಲಿ ಹರ್ಷ ಅವರನ್ನು ಬಿಸಿಸಿಐ ಕೈ ಬಿಟ್ಟಿದೆ.
ನಾವು ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡುವಾಗ ಎಲ್ಲರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೆವು. ಸಾಮಾಜಿಕ ತಾಣದಲ್ಲಿ ಬಂದ ಪ್ರತಿಕ್ರಿಯೆಗಳನ್ನು ಮತ್ತು ಆಟಗಾರರಿಂದಲೂ ಅಭಿಪ್ರಾಯ ಸಂಗ್ರಹ ಮಾಡಿದ್ದೆವು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಪಂದ್ಯದ ವೇಳೆ ಭಾರತದ ಕಾಮೆಂಟೇಟರ್‌ಗಳೇ ಭಾರತದ ಆಟಗಾರರನ್ನು ತೆಗಳುವುದು ಸರಿಯಲ್ಲ ಎಂದು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಟ್ವೀಟಿಸಿದ್ದರು. ಅವರ ಈ ಟ್ವೀಟ್‌ನ್ನು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಬೆಂಬಲಿಸಿದ್ದರು.
ಬಿಗ್ ಬಿ ತಮ್ಮ ಟ್ವೀಟ್ ನಲ್ಲಿ ಆ ಕಾಮೆಂಟರ್ ಯಾರು ಎಂಬುದನ್ನು ಹೇಳಿಲ್ಲವಾದರೂ,  ಸುನಿಲ್ ಗವಾಸ್ಕರ್ ಅಥವಾ ಸಂಜಯ್ ಮಂಜ್ರೇಕರ್ ಅಲ್ಲ ಎಂದು ಸ್ಪಷ್ಟ ಪಡಿಸಿದ್ದರು. 
ಆದರೆ ಬಿಗ್ ಬಿ ತನ್ನನ್ನೇ ಗುರಿಯಾಗಿರಿಸಿ ಟ್ವೀಟ್ ಮಾಡಿದ್ದು ಎಂದು ಭಾವಿಸಿ ಹರ್ಷ ಫೇಸ್‌ಬುಕ್‌ನಲ್ಲಿ ಆ ಟ್ವೀಟ್‌ಗೆ ಉತ್ತರಿಸಿದ್ದರು.
ಏತನ್ಮಧ್ಯೆ, ಹರ್ಷ ಅವರನ್ನು ಕೈಬಿಡಲು ಇದೊಂದೇ ಕಾರಣವಲ್ಲ ಎಂದು ಬಿಸಿಸಿಐ ಸದಸ್ಯರೊಬ್ಬರು ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ನಾಗ್ಪುರದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯದ ವೇಳೆ ಹರ್ಷ ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳೊಂದಿಗೆ ಜಗಳ ಮಾಡಿದ್ದರು ಎನ್ನಲಾಗುತ್ತಿದೆ. 
ಐಪಿಎಲ್ ನಿಂದ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಹರ್ಷ, ಯಾರೊಬ್ಬರೂ ನನ್ನಲ್ಲಿ ಏನೂ ಹೇಳಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ತಿಳಿಸಿಲ್ಲ. ಇದು ಬಿಸಿಸಿಐಯ ನಿರ್ಧಾರವಾಗಿತ್ತು ಎಂದಷ್ಟೇ ನನ್ನಲ್ಲಿ ಹೇಳಿರುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com